ಬಿಗ್‌ಬಾಸ್‌ನಲ್ಲಿ ಗೆಲುವಿನ “ನಿಧಿ” ಹುಡುಕಲು ಹೊರಟ ಚಂದ್ರಚೂಡ್‌; ಆ ಮನೇಲಿ ಇವರಿಗೆ ಸ್ವಾಗತಕ್ಕಿಂತ ವಿರೋಧವೇ ಹೆಚ್ಚಿತ್ತು… !

ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರ ಬಂಡವಾಳ ಬಯಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಕಿರುತೆರೆ ವೀಕ್ಷಕರ ಪಾಲಿಗೆ ಚಂದ್ರಚೂಡ್ ಪ್ರಮುಖ ಆಕರ್ಷಣೆ ಆಗಿದ್ದಾರೆ. ಅವರ ಆಟದಿಂದಲೇ ಬಿಗ್ ಬಾಸ್ ಈಗ ಇಂಟರೆಸ್ಟಿಂಗ್ ಆಗಿದೆ. ಕಳೆದ ಎರಡು ದಿನಗಳಿಂದ ಬದಲಾದ ಅವರ ಹೊಸ ವರಸೆ ಕಂಡು ವೀಕ್ಷಕರೇ ಗಾಬರಿ ಆಗಿದ್ದಾರೆ. ಚಂದ್ರ ಚೂಡ್‌ ಅಂದ್ರೆ ಹೀಗೂ ಇದ್ದಾರೆಯೇ? ಹಾಗೊಂದು ಪ್ರಶ್ನೆ ಕಿರಿತೆರೆ ವೀಕ್ಷಕರ ತಲೆಯಲ್ಲಿ ಗಿರಕಿ ಹಾಕುತ್ತಿದೆ. ಅಷ್ಟೇ ಯಾಕೆ, ಬಿಗ್‌ ಬಾಸ್‌ ಕ್ಯಾಮೆರಾಗಳ ಫೋಕಸ್‌ ಕೂಡ ಈಗ ಚಂದ್ರಚೂಡ್‌ ಮೇಲೆಯೇ ಇದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಅದೊಂಥರ ಥ್ರಿಲ್‌, ಇನ್ನೊಂದೆಡೆ ಅನುಮಾನ !

ಹೌದು ಮತ್ತೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಕೇಳಿಬಂದ ಮಾತುಗಳೇ ಬೇರೆ. ಓಹೋ, ಪ್ರಶಾಂತ್‌ ಸಂಬರಗಿ ಅವರಿಗೆ ಇದೇನು ಕೌಂಟರ್‌ ಇರಬಹುದಾ ಅಂತ ಒಂದಷ್ಟು ಮಂದಿ ಸೋಷಲ್‌ ಮೀಡಿಯಾದಲ್ಲಿ ಕೊಂಕು ಕಾಮೆಂಟ್‌ ಹಾಕಿದ್ದರು. ಇನ್ನು ಕೆಲವರು ಕಲರ್ಸ್‌ ಕನ್ನಡದವರಿಗೆ ಬೇರಾರು ಸಿಗಲಿಲ್ಲವೇ ಅಂತ ಹೊಟ್ಟೆ ಉರಿ ತೋಡಿಕೊಂಡಿದ್ದರು. ಹಾಗೆಯೇ ಒಂದಷ್ಟು ಮಂದಿ, ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ಅಂತ ಭವಿಷ್ಯ ನುಡಿದಿದ್ದರು. ಅದೇನೋ ಗೊತ್ತಿಲ್ಲ. ಚಂದ್ರ ಚೂಡ್‌ ಈಗ ತಮ್ಮ ವಿರೋಧಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ನೋಡಿ ಅಂದವರಿಗೆ ಖುಷಿ ಕೊಟ್ಟಿದ್ದಾರೆನ್ನುವುದು ಸದ್ಯದ ಸುದ್ದಿ.

ರಿಯಲ್‌ ಲೈಫ್‌ ನಲ್ಲಿ ಚಂದ್ರಚೂಡ್‌ ಅಂದ್ರೆ ಒಂದು ವಿಶಿಷ್ಟ ವ್ಯಕ್ತಿತ್ವದ ಮನುಷ್ಯಾಕೃತಿಅನ್ನೋದು ಎಲ್ಲರಿಗೂ ಗೊತ್ತು . ವೃತ್ತಿಯಲ್ಲಿ ಪತ್ರಕರ್ತ ಅಂತ ಗುರುತಿಸಿಕೊಂಡರೂ, ಅವರು ಮಾಡದ ಕೆಲಸ ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಅವರೀಗ ಸಿನಿಮಾ ನಿರ್ದೇಶಕ, ಲೇಖಕ, ಬರಹಗಾರರೂ ಹೌದು. ಆದರಾಚೆ ಅವರೊಬ್ಬ ಹೋರಾಟಗಾರ. ನೊಂದ ಜೀವಗಳ ಪರ ಮಿಡಿಯುವ ಮನುಷ್ಯ. ಇದೇ ಕಾರಣಕ್ಕೆ ಅವರು ವಿರೋಧಿಗಳನ್ನು ಸಂಪಾದಿಸಿಕೊಂಡಷ್ಟೇ ಸ್ನೇಹಿತರ ಬಳಗವನ್ನು ಹೊಂದಿದ್ದಾರೆನ್ನುವುದು ವಿಶೇಷ. ಇಷ್ಟಾಗಿಯೂ ಮೇಲ್ನೋಟಕ್ಕೆ ಚಂದ್ರಚೂಡ್‌ ಕೆಲವು ವಿವಾದಗಳಿಂದ ದೊಡ್ಡ ಸುದ್ದಿ ಆಗಿದ್ದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಚಂದ್ರಚೂಡ್‌ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಅವರನ್ನು ಸ್ವಾಗತಿಸಿದವರಿಗಿಂತ ವಿರೋಧಿಸಿದವರ ಸಂಖ್ಯೆಯೇ ಹೆಚ್ಚಿತ್ತು.

ಪ್ರಶಾಂತ್‌ ಸಂಬರಗಿ ಅವರಿಗೆ ಕೌಂಟರ್‌ ಆಗಿ ಚಂದ್ರಚೂಡ್‌ ಅವರನ್ನು ಕಳುಹಿಸಲಾಗುತ್ತಿದೆ. ಆದರೆ ಸಂಬರಗಿ ಅವರ ವಿರುದ್ಧ ಚಂದ್ರಚೂಡ್‌ ಆಟ ನಡೆಯೋದಿಲ್ಲ. ಅವರು ಎಂಟ್ರಿ ಅದಷ್ಟೇ ವೇಗದಲ್ಲಿ ವಾಪಾಸ್‌ ಬರುವುದು ಗ್ಯಾರಂಟಿ ಅಂತ ಕೆಲವರು ಸೋಷಲ್‌ ಮೀಡಿಯಾದಲ್ಲಿ ಕಾಮೆಂಟ್‌ ಹಾಕಿದ್ದರು. ಮತ್ತೆ ಕೆಲವರು ಮೊದಲ ವಾರವೇ ಚಂದ್ರಚೂಡ್‌ ಔಟ್‌ ಅಂತಲೂ ಭವಿಷ್ಯ ನುಡಿದ್ದರು. ಇವೆಲ್ಲವನ್ನು ಅವರು ಯಾವ ಲೆಕ್ಕಚಾರದಲ್ಲಿ ಹೇಳಿದ್ದರು ಅಂತ ವಿವರಿಸಬೇಕಿಲ್ಲ. ಇದೆಲ್ಲ ಚಂದ್ರಚೂಡ್‌ ವಿರೋಧಿಸುವವರ ಮನಸ್ಥಿತಿ ಆಗಿತ್ತು. ಅದರಾಚೆ ಬಿಗ್‌ ಬಾಸ್‌ ಲೆಕ್ಕಚಾರಗಳೇ ಬೇರೆ ಇರುತ್ತೆ, ಅದು ನಮ್ಮೆಲ್ಲರ ನಿಯಂತ್ರಣದಲ್ಲಿ ಇರೋದಿಲ್ಲ ಅನ್ನುವ ಸತ್ಯ ಅವರಿಗೆ ಬೇಕಾಗಿರಲಿಲ್ಲ. ಬದಲಿಗೆ ಒಂದಷ್ಟು ವಿರೋಧಿಸಬೇಕಿತ್ತು, ವಿರೋಧಿಸಿದರು ಅಷ್ಟೆ. ಅದರಾಚೆ ಇವತ್ತು ಬಿಗ್‌ ಬಾಸ್‌ ಮನೆಯಲ್ಲಿ ಆಗಿದ್ದೇನು ಗೊತ್ತಾ?

ಪ್ರಶಾಂತ್‌ ಹಾಗೂ ಚಂದ್ರಚೂಡ್‌ ಕಾರಣಕ್ಕೆ ಬಿಗ್‌ ಬಾಸ್‌ ಇಂಟರೆಸ್ಟಿಂಗ್‌ ಆಗಿದೆ. ನೋಡೋದಿಕ್ಕೂ ಒಂದಷ್ಟು ಥ್ರಿಲ್‌ ಇದೆ. ಹಾಗಂತ ಈ ಮಾತುಗಳನ್ನು ನಾವು ಹೇಳ್ತಿಲ್ಲ. ಕಲರ್ಸ್‌ ಕನ್ನಡ ಫೇಜ್‌ ನಲ್ಲಿ ವೀಕ್ಷಕರು ಕಾಮೆಂಟ್‌ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಇಂತಹ ಸಾವಿರಾರು ಕಾಮೆಂಟ್‌ ಇವೆ. ಹಾಗಾದ್ರೆ ಚಂದ್ರಚೂಡ್‌ ವಿರೋಧಿಸಿದವರೆಲ್ಲ ಯಾರು? ಆ ಕತೆ ಬಿಡಿ, ಚಂದ್ರಚೂಡ್‌ ನಿಜಕ್ಕೂ ಗ್ಲಾಮ್‌ ಪ್ಲಾನ್‌ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ ಒಂದೆರೆಡು ದಿನಗಳಲ್ಲಿ ಅವರು ಎಲ್ಲರನ್ನು ಅನುಮಾನಿಸಿಯೇ ನೋಡಿದ್ದರು. ಅಲ್ಲಿದ್ದವರಿಗೂ ಹಾಗೆಯೇ ಇತ್ತೇನೋ, ಅವರು ತಂಟೆಗೆ ಬಹಳಷ್ಟು ಬರಲೇ ಇಲ್ಲ. ಆದರೆ ಈಗ ಫುಲ್‌ ಚೇಂಜ್.‌ ಚಂದ್ರಚೂಡ್‌ ಅವರ ಕಂದ, ಚಿನ್ನ, ರನ್ನ ಎನ್ನುವ ಮಾತುಗಳು ಅಲ್ಲಿ ಸಖತ್‌ ವರ್ಕೌಟ್‌ ಆಗಿವೆ. ಬಹುತೇಕರು ಅವರು ಹೇಳಿದಂತೆ ಕೇಳುತ್ತಿದ್ದಾರೆ. ತಾನೇ ಕಿಂಗ್‌ ಎನ್ನುತ್ತಿದ್ದ ಪಾವಗಡ ಮಂಜು ಕೂಡ ಡರ್‌ ಆಗಿದ್ದಾರೆ. ಪ್ರಶಾಂತ್‌ ಸಂಬರಗಿ ಬಾಲ ಮುದುಡಿಕೊಂಡಿದ್ದಾರೆ. ಅಷ್ಟೊಂದು ಹವಾ ಎಬ್ಬಿಸಿರುವ ಚಂದ್ರಚೂಡ್‌ ಸಾಮಾನ್ಯರೇನಲ್ಲ, ಬಿಗ್‌ ಬಾಸ್‌ ಮನೆಯ ಆಳಕ್ಕೆ ಇಳಿದು ʼನಿಧಿʼ ಹುಡುಕುವ ಕಿರಾತಕ ಅವರು. ಅಂತಹದೊಂದು ಆಟ ಈಗ ಬಿಗ್‌ ಬಾಸ್‌ ನಲ್ಲಿ ಶುರುವಾಗಿದೆ. ನೋಡ್ಬೇಕು ಇದು ಎಷ್ಟು ದಿನ ಅಂತ. ಒಟ್ಟಿನಲ್ಲೀಗ ಚಂದ್ರಚೂಡ್‌ ಬಿಗ್‌ ಬಾಸ್‌ ಮನೆಯ ಪ್ರಮುಖ ಆಕರ್ಷಣೆಯ ಆಟಗಾರ ಅನ್ನೋದೇ ವಿಶೇಷ.

Related Posts

error: Content is protected !!