ಡಿಎನ್‌ಎ ಗೆ ಹಾಡಿದ ಸತೀಶ್‌ ನೀನಾಸಂ : ವೈರಲ್‌ ಆಗುತ್ತಿದೆ ಟೈಟಲ್‌ ಸಾಂಗ್‌ !

ನಾವ್ಯಾರು ಎಲ್ಲಿಂದ ಬಂದಿದೀವಿ… ನಾವ್ಯಾಕೆ ಸ್ವಾಮಿ ಹೀಂಗ್‌ ಇದೀವಿ…ಅರೆ, ಹೀಗಂತ ಹೇಳ್ತಿರೋದು ನಾವಲ್ಲ, ಬದಲಿಗೆ ಹೀಗೆ ಇಲ್ಲಿ ಹೇಳ್ತೀರೋದು ನಟ ಸತೀಶ್ ನೀನಾಸಂ.ಸಿನಿಮಾಗಳಲ್ಲಿ ಸ್ಟಾರ್‌ಗಳು ನಟಿಸೋದು ಮಾಮೂಲು. ನಟನೆಯೇ ಅವರ ವೃತ್ತಿ ಬಿಡಿ. ಅದರ ಜತೆಗೆ ಕನ್ನಡದ ಹಲವು ನಟರು ಹಾಗೂ ನಟಿಯರು ನಟನೆ, ನಿರ್ದೇಶನ ಹಾಗೂ ನಿರ್ಮಾಣದಂತೆಯೇ ಗಾಯಕರಾಗಿಯೂ ಸುದ್ದಿ ಮಾಡುತ್ತಲೇ ಬಂದಿದ್ದಾರೆ. ಸದ್ಯಕ್ಕೆ ಅಂತಹದೊಂದು ಪ್ರಯತ್ನದಲ್ಲೀಗ ʼಡಿಎನ್‌ ಎʼ ಹೆಸರಿನ ಚಿತ್ರದ ಟೈಟಲ್‌ ಸಾಂಗ್‌ ಗೆ ನಟ ಸತೀಶ್‌ ನೀನಾಸಂ ಧ್ವನಿ ನೀಡಿದ್ದು, ಅದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು ವಿಶೇಷ.

ಈ ಸಾಂಗ್‌ ತುಂಬಾ ಸ್ಪೆಷಲ್. ಮನುಷ್ಯನ ಮೂಲಗಳನ್ನು ಹುಡುಕಿ ಹೊರಡುವ ಈ ಹಾಡು ಕೇಳುವುದಕ್ಕೂ ಇಂಪಾಗಿದೆ. ಹಾಗೆಯೇ ವಿಶೇಷವಾದ ಸಾಹಿತ್ಯದ ಮೂಲಕವೂ ಗಮನ ಸೆಳೆಯುತ್ತದೆ. ಯೋಗರಾಜ್‌ ಭಟ್‌ ಸಾಹಿತ್ಯ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಅದಕ್ಕಿಂತ ಮುಖ್ಯವಾಗಿ ಇಲ್ಲಿ ಸತೀಶ್‌ ನೀನಾಸಂಹಾಗೂ ನಿರ್ದೇಶಕ ಯೋಗರಾಜ್‌ ಭಟ್ಟರ ಜುಗಲ್‌ ಬಂಧಿಯೇ ಫುಲ್‌ ಡಿಫೆರೆಂಟ್.‌ ಡಿಎನ್‌ ಎ ಎನ್ನುವ ಚಿತ್ರದ ಶೀರ್ಷಿಕೆಯನ್ನು ಬಗೆ ಬಗೆಯಲ್ಲಿ ವಿವರಿಸುವ ಸಾಲುಗಳು ಇವು. ಡಿಎನ್‌ ಎ ಅನ್ನೋದು ಏನು ಅನ್ನೋದು ಈ ಹಾಡಿನ ತಿರುಳು. ಸಿನಿಮಾದ ಕಥಾ ಹಂದರವೂ ಅದೇ ಆಗಿದೆ.ಕಮರ್ಷಿಯಲ್‌ ಮಾದರಿ ಅಂತ ಚಿತ್ರರಂಗ ಸಂಬಂದವೇ ಇಲ್ಲದ ಸಂಗತಿಗಳನ್ನು ತೆರೆಗೆ ತರಲು ಹೊರಟರೆ, ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರು ಮನುಷ್ಯ ಸಂಬಂಧಗಳ ಎಳೆಗಳನ್ನು ಹಿಡಿದು ಹೊರಟಿರುವುದೇ ಇಲ್ಲಿ ಹೈಲೈಟ್ಸ್.

ಬಂಜ ಅನ್ನೋದು ದೊಡ್ಡದು ಕನಾ… ಅನ್ನೋದು ಸಾಹಿತಿ ದೇವನೂರು ಮಹಾದೇವ ಅವರ ಮಾತು. ಅದನ್ನು ತಿರುಳಾಗಿ ಇಟ್ಟುಕೊಂಡು ನಿರ್ಮಾಣವಾದ ಸಿನಿಮಾ ಇದು. ಈ ಹಾಡು ಕೂಡ ಅದನ್ನೇ ಧ್ವನಿಸುತ್ತಾ ಸಾಗುತ್ತದೆ. ಚೇತನ್‌ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಚಿತ್ರತಂಡವು ನಟ ಸತೀಶ್‌ ನೀನಾಸಂ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ಕೂಡ ಸೊಗಸಾಗಿದೆ. ಪಂಚರಂಗಿ ಆಡಿಯೋ ಯೂಟೂಬ್‌ ಚಾನೆಲ್‌ ಮೂಲಕ ಸೋಮವಾರವಷ್ಟೇ ಈ ಹಾಡು ಅಧಿಕೃತವಾಗಿ ಹೊರ ಬಂದಿದೆ. ಹೆಸರಾಂತ ಸಂಗೀತ ನಿರ್ದೇಶಕ ವಿ. ಮನೋಹರ್‌ ಈ ಹಾಡು ಅನಾವರಣ ಮಾಡಿ ಶುಭ ಹಾರೈಸಿದರು. ಈಗಾಗಲೇ ನಿರ್ದೇಶಕರಾದ ನಾಗಾಭರಣ, ಜಗ್ಗೇಶ್‌, ದುನಿಯಾ ಸೂರಿ, ಶಶಾಂಕ್‌, ಜಯತೀರ್ಥ, ಸಂತೋಷ್‌ ಆನಂದ್‌ ರಾಮ್‌, ನಿರ್ಮಾಪಕ ಹಾಗೂ ನಟ ರಾಘವೇಂದ್ರ ರಾಜ್‌ ಕುಮಾರ್‌, ನಟ ಸೃಜನ್‌ ಲೋಕೇಶ್‌ ಸೇರಿದಂತೆ ದೊಡ್ಡ ತಂಡವೇ ಈ ಹಾಡು ಮೆಚ್ಚಿಕೊಂಡು ಮಾತನಾಡಿದೆ.ಇದೀಗ ಇದು ಸೋಷಲ್‌ ಮೀಡಿಯಾದಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.

ಮನುಷ್ಯ ಸಂಬಂಧಗಳ ಎಳೆಯ ಕಥಾ ಹಂದರ ಹೊಂದಿರುವ ʼಡಿಎನ್‌ ಎʼಚಿತ್ರಕ್ಕೆ ಪ್ರಕಾಶ್‌ ರಾಜ್‌ ಮೇಹು ನಿರ್ದೇಶಕರು. ಇದು ಅವರ ಚೊಚ್ಚಲ ಚಿತ್ರ. ಹಲವಾರು ವರ್ಷಗಳ ಕಾಲದ ಸಿನಿಮಾ ಒಡನಾಟದ ಮೂಲಕ ತಾವೇ ಒಂದೊಳ್ಳೆಯ ಕಥೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾರೆ. ಎಸ್ತರ್‌ ನರೋನ್ಹಾ, ಅಚ್ಯುತ್‌ ಕುಮಾರ್‌, ರೋಜರ್‌ ನಾರಾಯಣ್‌, ನಟಿ ಯಮುನಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ರವಿಕುಮಾರ ಸಾನಾ ಛಾಯಾಗ್ರಹಣ, ಶಿವರಾಜ್‌ ಮೇಹು ಸಂಕಲನ ಚಿತ್ರಕ್ಕಿದೆ. ಯೋಗರಾಜ್‌ ಭಟ್‌ ಹಾಗೂ ಡಾ. ಕೆ. ವೈ. ನಾರಾಯಣ ಸ್ವಾಮಿ ಸಾಹಿತ್ಯ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇದೇ ತಿಂಗಳು 20 ರಂದು ತೆರೆಗೆ ಬರಬೇಕಿತ್ತು. ಕೊರೋನಾ ಕಾರಣಕ್ಕೆ ರಿಲೀಸ್‌ ಡೇಟ್‌ ಮುಂದಕ್ಕೆ ಹೋಗಿದೆ. ಅಲ್ಲಿವರೆಗೂ ಚಿತ್ರದ ಪ್ರಮೋಷನ್‌ ಗೆ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಸದ್ಯಕ್ಕೆ ಪ್ರಮೋಷನ್‌ ಸಾಂಗ್‌ ಮೂಲಕ ಸದ್ದು ಮಾಡಿದೆ.

Related Posts

error: Content is protected !!