ಸಿನಿಮಾ ಅಂದರೆ ಬೆಳಕಲ್ಲಿ ಚಿತ್ರೀಕರಿಸಿ, ಕತ್ತಲಲ್ಲಿ ತೋರಿಸುವ ಪ್ರಕ್ರಿಯೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇಲ್ಲಿ ನಗುವಿನಷ್ಟೇ ನೋವು ಇದೆ. ಗೆಲುವಿನಷ್ಟೇ ಸೋಲು ಇದೆ. ಇಲ್ಲೀಗ ಹೇಳಹೊರಟಿರುವ ವಿಷಯ, ಹಲವು ನಟರು ಸಿನಿಮಾಗಳಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳಲೇಬೇಕು. ಒಂದಷ್ಟು ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗಷ್ಟೇ, ನಟ ಉಪೇಂದ್ರ ಅವರು “ಕಬ್ಜ” ಚಿತ್ರದ ಸಾಹಸ ಚಿತ್ರೀಕರಣದಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಫೈಟ್ ಸೀನ್ ವೇಳೆ, ಖಳನಾಯಕರ ಜೊತೆ ಹೊಡೆದಾಡುವಾಗ, ಆಕಸ್ಮಿಕವಾಗಿ ತಲೆಗೆ ಪೆಟ್ಟು ಬಿದ್ದಿತ್ತು. ಕ್ಷಣಾರ್ಧದಲ್ಲೇ ಅವರು ಚೇತರಿಸಿಕೊಂಡಿದ್ದರು. ಈಗ ನಟ ಶ್ರೀಮುರಳಿ ಅವರೂ ಕೂಡ ಸ್ಟಂಟ್ ಮಾಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಹೌದು, “ಮದಗಜ” ಚಿತ್ರದ ಚಿತ್ರೀಕರಣ ವೇಳೆ ಈ ಅವಘಡ ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿ “ಮದಗಜ” ಚಿತ್ರದ ಚಿತ್ರೀಕರಣ ಕಳೆದ ಎರಡು ದಿನಗಳಿಂದಲೂ ಜೋರಾಗಿಯೇ ನಡೆಯುತ್ತಿತ್ತು. ನಿರ್ದೇಶಕ ಮಹೇಶ್ ಕುಮಾರ್ ಅವರು, ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಸಾಹಸ ನಿರ್ದೇಶಕ ಅರ್ಜುನ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದರು. ರಾತ್ರಿ ವೇಳೆ ಚಿತ್ರೀಕರಣವಾಗಿದ್ದರಿಂದ ಮೊದಲ ದಿನದ ಚಿತ್ರೀಕರಣವಂತೂ ಜಾತ್ರೆಯೇ ಆಗಿತ್ತು. ಅಷ್ಟೊಂದು ಜೂನಿಯರ್ ಕಲಾವಿದರೊಂದಿಗೆ ಶ್ರೀಮುರಳಿ ಅವರು ಹೊಡೆದಾಡಿದ್ದರು.
ಎರಡನೇ ದಿನದ ಚಿತ್ರೀಕರಣ ಕೂಡ ಬಿರುಸಾಗಿಯೇ ನಡೆದಿತ್ತು. ಈ ವೇಳೆ ಅವರ ಕಾಲಿಗೆ ಪೆಟ್ಟು ಬಿದ್ದಿದೆ. ರಾತ್ರಿಯೇ ಈ ಘಟನೆ ನಡೆದಿದ್ದರಿಂದ ತಕ್ಷಣವೇ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶ್ರೀಮುರಳಿ ಅವರಿಗೆ ವೈದ್ಯರು ಸುಮಾರು ಹದಿನೈದು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಸುಮಾರು 30 ಜನ ಖಳರೊಂದಿಗೆ ಫೈಟ್ ಮಾಡುವಾಗ ಈ ಘಟನೆ ಸಂಭವಿಸಿದೆ. ಫೈಟರ್ ಜಂಪ್ ಹೈಟ್ ಮಾಡಿದ್ದರಿಂದ ಮಂಡಿಯ ಕೆಳಗೆ ಜೋರಾಗಿ ಪೆಟ್ಟು ಬಿದ್ದಿದೆ.
ಈ ಘಟನೆ ನಂತರ ನಿರ್ದೇಶ ಮಹೇಶ್ ಕುಮಾರ್ ಅವರು, ತಕ್ಷಣವೇ ಶೂಟಿಂಗ್ ಪ್ಯಾಕಪ್ ಮಾಡಿದ್ದಾರೆ. ಅದೇನೆ ಇರಲಿ, ಶ್ರೀಮುರಳಿ ಅವರು, ತುಂಬಾನೇ ಶಿಸ್ತಿನ ನಟ, ಅಷ್ಟೇ ಶ್ರದ್ಧೆಯಿಂದಲೇ ಕೆಲಸ ಮಾಡುವವರು. ಆದಷ್ಟು ಬೇಗ ಚೇತರಿಸಿಕೊಂಡು ಪುನಃ “ಮದಗಜ” ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದೇ “ಸಿನಿಲಹರಿ” ಆಶಯ.