ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ತಾಯಿ ಹಿರಿಯ ನಟಿ ಪ್ರತಿಮಾ ದೇವಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ (88) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಸರಸ್ವತಿಪುರಂ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡದ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು, ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿಯಾಗಿರುವ ಪ್ರತಿಮಾ ದೇವಿ ಅವರು, 1947ರಲ್ಲಿ “ಕೃಷ್ಣಲೀಲಾ” ಚಿತ್ರದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಶುರುಮಾಡಿದರು. 1951ರಲ್ಲಿ ತೆರೆಕಂಡ ‘ಜಗನ್ಮೋಹಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಜನಪ್ರಿಯಗೊಂಡರು. ಈ ಚಿತ್ರ ಕನ್ನಡದಲ್ಲಿ ಮೊದಲ ಶತದಿನ ಪೂರೈಸಿದ ಸಿನಿಮಾ ಎಂಬ ದಾಖಲೆ ಪಡೆದಿದೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿ ನಟಿಸಿದ್ದರು.

“ಶ್ರೀ ಶ್ರೀನಿವಾಸ ಕಲ್ಯಾಣ”, “ಚಂಚಲ ಕುಮಾರಿ”, “ಮುಟ್ಟಿದ್ದೆಲ್ಲಾ ಚಿನ್ನ”, “ಶಿವಶರಣೇ ನಂಬಿಯಕ್ಕ”, “ಮಂಗಳ ಸೂತ್ರ”, “ಧರ್ಮಸ್ಥಳ ಮಹಾತ್ಮೆ”, “ಪಾತಳಾ ಮೋಹಿನಿ”, “ನಾಗರಹಾವು”, “ರಾಮ ಶಾಮಾ ಭಾಮಾ” ಸೇರಿದಂತೆ ಸುಮಾರು 60 ಚಿತ್ರಗಳಲ್ಲಿ ಪ್ರತಿಮಾ ದೇವಿ ನಟಿಸಿದ್ದಾರೆ. ಮಹಾತ್ಮೆ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರನ್ನು ವಿವಾಹವಾಗಿದ್ದ ಪ್ರತಿಮಾ ದೇವಿ ಅವರಿಗೆ ಎಸ್.‌ವಿ. ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್‌ ಸಿಂಗ್‌, ಜಯರಾಜ್‌ ಸಿಂಗ್‌, ವಿಜಯಲಕ್ಷ್ಮಿ ಸಿಂಗ್ ಮಕ್ಕಳು.
ಸಂತಾಪ: ಮೃತರ ಸುದ್ದಿ ತಿಳಿದು ನಟಿ, ಸಂಸದೆ, ಸುಮಲತಾ ಅಂಬರೀಶ್‌, ಪುನೀತ್‌ ರಾಜಕುಮಾರ್‌ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್‌ ಅವರು ಕೂಡ “ಕನ್ನಡ ಚಿತ್ರರಂಗಕ್ಕೆ ‌ಕಲಾವಿದೆಯಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದ, ಖ್ಯಾತ ನಟಿ ಪ್ರತಿಮಾದೇವಿ ಅವರ ಪತಿ ಶಂಕರ್ ಸಿಂಗ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ವರ್ಷವಿದು. ಇದೇ ಸಮಯದಲ್ಲಿ ಅವರು ನಿಧನರಾಗಿದ್ದು, ದುಖದ ಸಂಗತಿ.‌ ಕನ್ನಡ ಚಿತ್ರರಂಗಕ್ಕೆ ಇವರ ಕುಟುಂಬ ನೀಡಿರುವ ಕೊಡುಗೆ ಅಪಾರ. ಕನ್ನಡ ‌ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ಕು ಮಕ್ಕಳನ್ನು ಪ್ರತಿಮಾ ದೇವಿ ಅವರು ಅಗಲಿದ್ದಾರೆ. ‌ಅವರ ನಿಧನದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ‌ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳಿದ್ದಾರೆ.

Related Posts

error: Content is protected !!