Categories
ಸಿನಿ ಸುದ್ದಿ

ಅಪ್ಪುಗೆ ರಾಜರತ್ನ – ಚರ್ಚಿಸಿ ನಿರ್ಧಾರ ಅಂದ್ರು ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡದ ಪ್ರತಿಭಾವಂತ ನಟ ಪುನೀತ್‌ ರಾಜಕುಮಾರ್‌ ಈಗ ನೆನಪು ಮಾತ್ರ. ಆದರೆ ಅವರಿಗೆ ಮರಣೋತ್ತರವಾಗಿ ʼರಾಜರತ್ನʼ ಪ್ರಶಸ್ತಿ ನೀಡಬೇಕೆನ್ನುವ ಕೂಗು ಅವರ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಕಳೆದ ಎರಡು ದಿನಗಳಿಂದ ಸೋಷಲ್‌ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳು ಹಾಗೊಂದು ಒತ್ತಾಯದ ಕೂಗು ಆರಂಭಿಸಿದ್ದಾರೆ. ಈ ಮಧ್ಯೆ ಸೋಮವಾರ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಈ ವಿಚಾರಕ್ಕೆ ಪ್ರತಿ ಕ್ರಿಯೆ ನೀಡಿದ್ದಾರೆ.

ರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಅಪ್ಪು ಅವರಿಗೆ ರಾಜರತ್ನ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಮುಖರ ಜತೆಗೆ ಈ ಸಂಬಂಧ ಚರ್ಚೆ ನಡೆಸಿ, ಅಭಿಪ್ರಾಯ ಪಡೆಯಬೇಕಿದೆ. ಸರ್ಕಾರಕ್ಕೂ ಈ ಬಗ್ಗೆ ಮನಸಿದೆ. ಮುಂದಿನ ದಿನಗಳಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು. ನಟ ಪುನೀತ್‌ ರಾಜಕುಮಾರ್‌ ಅವರು ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದವರು. ಹಾಗೆಯೇ ಬೇಕಾದಷ್ಟು ರಾಜ್ಯ ಪ್ರಶಸ್ತಿಗಳಿಗೂ ಪಾತ್ರರಾದವರು. ಉಳಿದಂತೆ ಮಾನ-ಸನ್ಮಾನಗಳಿಗೆ ಲೆಕ್ಕವೇ ಇಲ್ಲ. ಆದರೂ, ಅವರಿಗೆ ಮರಣೋತ್ತರವಾಗಿ ರಾಜರತ್ನ ನೀಡಬೇಕೆನ್ನುವುದು ಅಭಿಮಾನಿಗಳ ಕೂಗು. ಸರ್ಕಾರ ಇದಕ್ಕೆ ಸ್ಪಂದಿಸುತ್ತಾ ಎನ್ನುವುದು ಕುತೂಹಲಕರ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದೊಡ್ಮನೆ ದೊರೆ, ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…ನಿರ್ದೇಶಕ ಬಹದ್ದೂರ್‌ ಚೇತನ್‌ ಸಲ್ಲಿಸಿದ ಭಾವುಕ ನುಡಿ ನಮನ !

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ನಿಧನ ಚಿತ್ರರಂಗದಲ್ಲಿ ಆಗಾದವಾದ ಶೂನ್ಯ ಆವರಿಸಿಕೊಳ್ಳುವಂತೆ ಮಾಡಿದೆ. ಇಡೀ ಕರುನಾಡೇ ಕಣ್ಣೀರಾಗಿದೆ. ಅದರಲ್ಲೂ ಅವರೊಂದಿಗೆ ನಿರ್ದೇಶಕರಾಗಿ, ನಟರಾಗಿ, ಹೀಗೆ ಸಿನಿಮಾ ಇನ್ನಾವುದೋ ವಿಭಾಗದಲ್ಲಿ ಕೆಲಸ ಮಾಡಿದವರಂತೂ ಅಕ್ಷರಶ: ಅವರ ಅಗಲಿಕೆಯಿಂದ ನೊಂದು ಹೋಗಿದ್ದಾರೆ. ಅಂತಹದೇ ದು:ಖ ತುಂಬಿಕೊಂಡು ಕುಳಿತಿರುವ ಜೇಮ್ಸ್‌ ಚಿತ್ರದ ನಿರ್ದೇಶಕ ಬಹದ್ದೂರ್‌ ಚೇತನ್‌ ಸೋಮವಾರ ಪುನೀತ್‌ ರಾಜ ಕುಮಾರ್‌ ಅವರ ವ್ಯಕ್ತಿತ್ವದ ಕುರಿತು ಭಾವುಕವಾದ ನುಡಿನಮನವೊಂದನ್ನು ಹಂಚಿಕೊಂಡಿದ್ದಾರೆ. ಆ ಪತ್ರದ ಸಾಲುಗಳು ಇಂತಿವೆ.

ದೊಡ್ಮನೆಯ ದೊರೆ,
ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…
ಸದಾ ಹಸನ್ಮುಖಿತನ ,
ತಾಳ್ಮೆಯ ಪ್ರತಿರೂಪ ,
ಎಲ್ಲರೂ ನಮ್ಮವರೆಂದು ಭಾವಿಸುವ ವಿಶೇಷಗುಣ…ಎಲ್ಲರನ್ನು ಸಮಾನರಾಗಿ ಕಾಣುವ ಮಗು ಮನಸ್ಸು… ಚಿತ್ರರಂಗವೇ ಕುಟುಂಬವೆಂದು ಭಾವಿಸುವ ಸಂಸ್ಕಾರ…
ಮಹಾಸಂತನ ಸೌಮ್ಯತೆ …
ಭೂಮಿ ತೂಕದ ಘನತೆ…
ಕಷ್ಟಕ್ಕೆ ಮಿಡಿಯುವ ಹೃದಯ, ಕೈಲಾದಷ್ಟು ಸಹಾಯ ಮಾಡುವ ಉದಾರತೆ, ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬ ನೀತಿ….
ತಂದೆಯ ಹಿರಿಮೆ,ಮನೆತನದ ಗೌರವ ಎರಡಕ್ಕೂ ಗರಿಮೆಯಾಗಿ ಬದುಕಿದ ರೀತಿ ಅಮೋಘ …

ದೊಡ್ಮನೆಯ ದೊರೆ
ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…
ಕನ್ನಡ ಪ್ರೇಮ ನೆಲ ಜಲದ ಮೇಲೆ ಇದ್ದ ಅಪಾರ ಗೌರವ …
ಯುವಪೀಳಿಗೆಗೆ ಸದಾ ಮಾದರಿಯಾಗಿದ್ದ ಹುರುಪು…
ಅಭಿಮಾನಿಗಳನ್ನ ಅಭಿಮಾನದಿಂದ ಅಭಿಮಾನಿಯಂತೆಯೇ ಪ್ರೀತಿಸಿದ
ಅಜಾತಶತ್ರು…
ದಿನನಿತ್ಯ ಶಿಸ್ತಿನ ವ್ಯಾಯಾಮ, ಆರೋಗ್ಯದ ಮೇಲೆ ಕಾಳಜಿ,
ಆಹಾರವನ್ನು ಪ್ರೀತಿಸುವ ಗುಣ,
ಸದಾ ಹೊಸತನವನ್ನು ಹಿಂಬಾಲಿಸುವ,ಅನ್ವೇಷಿಸುವ, ವಿಶ್ಲೇಷಿಸುವ ಮನೋಭಾವ..
ಸಮಯಪ್ರಜ್ಞೆ ಹಾಗೂ ಸಮಯದ ಮೇಲಿಟ್ಟಿದ್ದ ಗೌರವ… ಸದಾ ಒಂದಲ್ಲ ಒ೦ದು ಕೆಲಸದಲ್ಲಿ ಮಗ್ನರಾಗುತ್ತಿದ್ದ ರೀತಿ…
ಎಲ್ಲ ಕ್ಷೇತ್ರಗಳ ಬಗ್ಗೆಯೂ ಮಾಹಿತಿ ತಿಳಿಯುವ ಹಂಬಲ ಹಾಗೂ ಕುತೂಹಲ..
ಅಪಾರವಾದ ವ್ಯವಹಾರಜ್ಞಾನದ ಪಾಂಡಿತ್ಯ…
ಕುಟುಂಬಕ್ಕೆ ಮೊದಲ ಆದ್ಯತೆ, ಸ್ನೇಹಕ್ಕೆ ನೀಡುತ್ತಿದ್ದ ಮನ್ನಣೆ… ಸಂಬಂಧಗಳಿಗೆ ತೋರುತ್ತಿದ್ದ ಪ್ರೀತಿ…
ಕಲೆಯನ್ನು ಪ್ರೋತ್ಸಾಹಿಸಿ, ಕಲಾವಿದರನ್ನು ಗೌರವಿಸುತ್ತಿದ್ದ ಸದ್ಗುಣ, ಬರಹಗಾರರನ್ನು ಶಾರದೆ ಮಕ್ಕಳೆಂದು ಭಾವಿಸುತ್ತಿದ್ದ ಶ್ರೇಷ್ಠತೆ …
ನಿರ್ದೇಶಕರ ಕನಸಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿ ಕೊಳ್ಳುವ ಕರ್ತವ್ಯನಿಷ್ಠೆ..
ವಿನಯ,ವಿಧೇಯತೆ ಸಹಕಾರಮೂರ್ತಿ…

ಸದಾ ಹಾಡು ಗುನುಗುವ ಸಂಗೀತ ಪ್ರೇಮಿ.. ಸಿನಿಮಾ ತಂತ್ರಜ್ಞಾನದ ವಿಚಾರದಲ್ಲಿ ಸದಾ 1ಹೆಜ್ಜೆ ಮುಂದೆ…
ಎಲ್ಲವನ್ನೂ ದಕ್ಕಿಸಿಕೊಳ್ಳುವ ಧೈರ್ಯ ಹಾಗೂ ಛಲ…
ಎಲ್ಲರಲ್ಲಿಯೂ ಒಂದೊಂದು ವಿಶೇಷತೆಯನ್ನು ಗುರುತಿಸಿ ಶ್ಲಾಘಿಸುವ ಜಾಣ್ಮೆ,
ಸರಳತೆಯ ಸಾಹುಕಾರ
ನಿಮಗೆ ಸದಾ ಚಿರರುಣಿ ನಿಮ್ಮವನಾಗಿ ಸ್ವೀಕರಿಸಿದ್ದಕ್ಕೆ …
ನಿಮ್ಮ ಒಡನಾಟ ನೀಡಿದ್ದಕ್ಕೆ …
ಸದಾ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕೆ…
ನಿಮ್ಮ ಜೀವನದ ಪುಟಗಳಲ್ಲಿ ಒಂದೆರಡು ಸಾಲುಗಳನ್ನು ನೀಡಿದಕ್ಕೆ…
ನಿಮ್ಮೊಡನೆ ಕಳೆದ ಪ್ರತಿ ಕ್ಷಣವೂ ದೇವರು ಕೊಟ್ಟ ವರವೆಂದೇ ಭಾವಿಸುತ್ತೇನೆ …
ನಿಮ್ಮಂತಹ ಮಹಾನ್ ಚೇತನಗಳಿಗೆ ಆ ದೇವರು ಎಂದೆಂದೊ ದೀರ್ಘ ಆಯುಷ್ಯ ನೀಡುವಂತಾಗಲಿ ..
ನಿಮ್ಮ ಅಭಿಮಾನಿಗಳಿಗೆ , ಇಡೀ ಚಿತ್ರರಂಗಕ್ಕೆ ಹಾಗೂ ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆಯ ನೋವನ್ನು ಭರಿಸುವ೦ತಹ ಶಕ್ತಿ ನೀಡಲಿ …
ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್
ನಿಮಗೆ ನನ್ನ “ನುಡಿ ನಮನ”

  • ಚೇತನ್ ಕುಮಾರ್
Categories
ಸಿನಿ ಸುದ್ದಿ

ಅಪ್ಪು ಬೀಳ್ಕೊಟ್ಟ ಸಿಎಂ ಕಾರ್ಯ ವೈಖರಿಗೆ ಭಾರೀ ಮೆಚ್ಚುಗೆ – ಅದೊಂದು ಮನಕಲುಕುವ ದೃಶ್ಯದಿಂದ ಜನಮನ ಗೆದ್ದ ಬಸವರಾಜ್ ಬೊಮ್ಮಾಯಿ‌ !

ಸಿಎಂ ಜನ‌ಮನ‌ಗೆದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಭಾವುಕವಾಗಿ ಬಿಳ್ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ದೊಡ್ಮನೆಯ ಪುತ್ರ, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಅಭಿಮಾನಿಗಳ ಪ್ರೀತಿಯ ಅಪ್ಪು ಅವರ ನಿಧನ ಸುದ್ದಿ ಗೊತ್ತಾಗುತ್ತಿದ್ದಂತೆ ಶುಕ್ರವಾರ ವಿಕ್ರಂ ಆಸ್ಪತ್ರೆಗೆ ಸಿಎಂ‌ ಬಸವರಾಜ ಬೊಮ್ಮಾಯಿ ದೌಡಾಯಿಸಿದ ಕ್ಷಣದಿಂದ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ‌‌‌ನಡೆದ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳೆಲ್ಲವೂ ಯಾವುದೇ ಗೊಂದಲಕ್ಕೆ ಸಿಲುಕದಂತೆ‌ ಯಶಸ್ವಿಯಾಗಿ ನಡೆದವು. ಇದಕ್ಕ ಕಾರಣ ಸಿಎಂ ಬಸವರಾಜ್ ಬೊಮ್ಮಾಯಿ.

ರಾಜ್ ಕುಟುಂಬದ‌ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅತೀವ ಗೌರವ.‌ಹಾಗೆಯೇ ನಟ ಪುನೀತ್ ರಾಜಕುಮಾರ್ ಅಂದ್ರೆ ಅತೀವ ಪ್ರೀತಿ. ಕಳೆದ‌ ಕೆಲವು ದಿನಗಳ ಹಿಂದಷ್ಟೇ ಇಬ್ಬರು ಒಟ್ಟಿಗೆ ವೇದಿಕೆ‌ಹಂಚಿಕೊಂಡಿದ್ದಾಗ ಸಿಎಂ‌ ಬಸವರಾಜ ಬೊಮ್ಮಾಯಿ, ನಟ ಪುನೀತ್ ಅವರ ಮೇಲಿನ ಪ್ರೀತಿ‌ ಹಾಗೂ‌ರಾಜ್ ಕುಟುಂಬದ ಮೇಲಿರುವ ಗೌರವ ಭಾವನೆಗಳನ್ನು ಬಹಿರಂಗ ಪಡಿಸಿದ್ದರು.‌ ಅಷ್ಟು‌ಮಾತ್ರವಲ್ಲ‌ಪುನೀತ್ ಅಂದ್ರೆ ಯೂತ್ ಐಕಾನ್ ಅಂತ ಮುಕ್ತ ಕಂಠದಿಂದ‌ ಬಣ್ಣಿಸಿದ್ದರು. ದುರಂತ ಅಂದ್ರೆ ಇದಾದ ಕೆಲವೇ ದಿನಗಳು ಕಳೆಯುತ್ತಿದ್ದಂತೆಯೇ ನಟ ಪುನೀತ್ ರಾಜಕುಮಾರ್, ಹೃದಯಘಾತದಿಂದ‌ ನಿಧನರಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲೂ ಅತೀವ ದುಃಖ‌ ತರಿಸಿತ್ತು.

ಶುಕ್ರವಾರ ಮಧ್ಯಾಹ್ನ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ನಿಧನರಾದ ಸುದ್ದಿ ಅಧಿಕೃತವಾಗುತ್ತಿದ್ದಂತೆ ತಕ್ಷಣವೇ ತಮ್ಮ ಸಂಪುಟದ ಸಹೋದ್ಯೋಗಿಗಳ ಜತೆ ಆಸ್ಪತ್ರೆಗೆ ದೌಡಾಯಿಸಿದವರು, ಉಪ‌ಚುನಾವಣೆ ಸೇರಿದಂತೆ ತಮ್ಮೆಲ್ಲ‌ ಕೆಲಸಗಳನ್ನು‌ ಬದಿಗೊತ್ತಿ ಪುನೀತ್ ರಾಜಕುಮಾರ್ ಅವರ ಕುಟುಂಬದವರ ದುಃಖದಲ್ಲಿ ಭಾಗಿಯಾದರು.ಹಾಗೆಯೇ ಪಾರ್ಥೀವ ಶರೀರದ ಸಾರ್ವಜನಿಕ‌ ದರ್ಶನ ಹಾಗೂ ಅಂತ್ಯ ಸಂಸ್ಕಾರದ ವಿಧಿ‌‌ ವಿಧಾನ ಗಳ‌ಕಡೆ‌ ಗಮನ‌ ಹ‌ರಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಲ್ಲ ಮುಖ್ಯಸ್ಥರಿಗೂ ಸೂಚನೆ ಕೊಟ್ಟರು. ಅಭಿಮಾನಿಗಳ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಕರೆದೊಯ್ಯುವ ಮೊದಲೇ ಅಲ್ಲಿಯೂ ಕೂಡ ಭದ್ರತೆಯನ್ನು ಹೆಚ್ಚಿಸಲಾಯಿತು.

ಪ್ರತಿಕ್ಷಣವೂ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಮುನ್ನ ಡಾ.ರಾಜ್‍ಕುಮಾರ್ ಕುಟುಂಬದವರ ಜತೆ ಚರ್ಚಿಸಿಯೇ ಮುಂದಡಿ ಇಡುತ್ತಾ ಬಂದರು.. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಮುನಿರತ್ನ, ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಮತ್ತಿತರರ ಸಲಹೆಗಳನ್ನು ಪಡೆದರು. ವರನಟ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ವೇಳೆ ಅದಂತಹ ಯಾವುದೇ ಗೊಂದಲ‌ ಹಾಗೂ ಅಹಿತಕರ ಘಟನೆಗಳು‌ ನಡೆಯಬಾ ರದು ಎನ್ನುವುದು ಸಿಎಂ‌ ಕಾಳಜಿ ಆಗಿತ್ತು. ಯಾಕಂದ್ರೆ ರಾಜ್ ಕುಟುಂಬ ಅಂದ್ರೆ ಅಭಿಮಾನಿಗಳ‌ ಸಂಖ್ಯೆ‌ದೊಡ್ಡದು. ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಭಿಮಾನಿಗಳು‌ ಸಿಟ್ಟಾಗುವುದು
ಗ್ಯಾರಂಟಿ‌ಎನ್ನುವುದು ಸಿಎಂ ಆತಂಕ.

ಹಾಗಾಗಿಯೇ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಯಾವ ರೀತಿ ನಡೆಯಬೇಕು, ಹೇಗೆ, ಎಲ್ಲಿ, ಯಾವಾಗ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ರಾಕ್‍ಲೈನ್ ವೆಂಕಟೇಶ್ ಆಪ್ತ ಹಾಗೂ ಸಚಿವ ಮುನಿರತ್ನ ಅವರನ್ನು ಮುಂದೆ ಬಿಟ್ಟರು. ಖುದ್ದು ಬೊಮ್ಮಾಯಿ ಅವರೇ ರಾಜ್‍ಕುಮಾರ್ ಪುತ್ರರಾದ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಹಾಗೂ ಅವರ ಕುಟುಂಬದ ಸದಸ್ಯರ ಜತೆ ಅಂತ್ಯ ಸಂಸ್ಕಾರ ನಡೆಸುವ ಕುರಿತಾಗಿ ಪ್ರತಿಯೊಬ್ಬರ ಅಭಿಪ್ರಾಯ ಪಡೆಯುತ್ತಿದ್ದರು.

ಅಮೆರಿಕದಲ್ಲಿದ್ದ ಪುನೀತ್ ರಾಜ್‍ಕುಮಾರ್ ಪುತ್ರಿ ಧೃತಿಯನ್ನು ಬೆಂಗಳೂರಿಗೆ ಕರೆತರಲು ಬೇಕಾದ ಪಾಸ್‍ ಪೋರ್ಟ್, ವೀಸಾ ಸೇರಿದಂತೆ ಭಾರತದ ವಿದೇಶಾಂಗ ಕಚೇರಿ ವಿಭಾಗದ ಅಕಾರಿಗಳನ್ನು ಸಂಪರ್ಕಿಸಿ ಕೂಡಲೇ ಹಿಂದಿರುಗಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ವ್ಯವಸ್ಥೆ ಮಾಡಿದರು. ದೆಹಲಿಗೆ ಧೃತಿ ಆಗಮಿಸುತ್ತಿದ್ದಂತೆ ಅವರನ್ನು ಬೆಂಗಳೂರಿಗೆ ಕರೆತರಲು ವಿಶೇಷವಾದ ವಿಮಾನವನ್ನು ಸಿಎಂ ಕಲ್ಪಿಸಿಕೊಟ್ಟರು. ವಲಸೆ ವಿಭಾಗದ ಅಕಾರಿಗಳು ವಿಳಂಬ ಮಾಡಬಹುದೆಂಬ ಕಾರಣಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಸಂಪರ್ಕಿಸಿದರು.

ಅಲ್ಲದೆ, ಕರ್ನಾಟಕ ಭವನದಲ್ಲಿರುವ ಅಧಿಕಾರಿಗಳನ್ನು ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಿ ವಲಸೆ ವಿಭಾಗದ ಅಕಾರಿಗಳ ಜತೆ ಸಂಪರ್ಕ ಸಾಸಲು ಸೂಚಿಸಿದರು.  ಶನಿವಾರವೇ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಬೇಕಾಗಿತ್ತು. ಆದರೆ, ಪುತ್ರಿಯೂ ಬಂದು ಅಂತಿಮ ದರ್ಶನ ಪಡೆಯಬೇಕೆಂದು ಕುಟುಂಬದವರು ಕೋರಿಕೊಂಡಿದ್ದರಿಂದ ಭಾನುವಾರಕ್ಕೆ ಮುಂದೂಡಲಾಯಿತು. ಹೀಗೆ ಪ್ರತೀ ಹಂತದಲ್ಲೂ ಪುನೀತ್ ರಾಜ್‍ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಸಣ್ಣದೊಂದು ಅಹಿತಕರ ಘಟನೆ ನಡೆಯದೆ ಅಚ್ಚುಕಟ್ಟಾಗಿ ನೆರವೇರಿಸಲು ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಅದೆಲ್ಲಕ್ಕಿಂತ ಮುಖ್ಯವಾಗಿ ಶುಕ್ರವಾರದಿಂದ‌ ಭಾನುವಾರದ ತನಕ‌ ಸಿಎಂ‌ತಮ್ಮೆಲ್ಲ‌ ಕೆಲಸವನ್ನು ಬದಿಗೊತ್ತಿ, ರಾಜ್ ಕುಟುಂಬದ‌ ನೋವಿನಲ್ಲಿ‌ ಭಾಗಿಯಾದರು. ಇದು ಸರ್ಕಾರದ ಕರ್ತವ್ಯವೇ ಆದರೂ,ಸಿಎಂ‌ಬಸವರಾಜ ಬೊಮ್ಮಾಯಿ ಅವರು‌ ಪುನೀತ್ ಅವರ ಮೇಲಿಟ್ಟ ಪ್ರೀತಿಗೆ ಹಿಡಿದ‌‌ ಕನ್ನಡಿ ಎನ್ನುವುದು ಅಷ್ಟೇ ‌ಸತ್ಯ.ಅದರಲ್ಲೂ ಅಂತ್ಯ‌ಸಂಸ್ಕಾರದ ವೇಳೆ ಪುನೀತ್ ಹಣೆಗೆ ಮುತ್ತಿಟ್ಟು ಸಿಎಂ ನೋವು ತೋಡಿಕೊಂಡ‌ ದೃಶ್ಯ ಎಲ್ಲರ ಮನಕಲುಕುವಂತೆ‌ಮಾಡಿತು.‌ ಈ‌ ಫೋಟೋ‌ವೈರಲ್ ಆಗುತ್ತಿದ್ದಂತೆ ಸಿಎಂ ಅವರ ಕಾರ್ಯಕ್ಕೆ‌ ಸೋಷಲ್‌ ಮೀಡಿಯಾದಲ್ಲಿ‌ಮೆಚ್ಚುಗೆಯ ಮಹಾಪೂರವೇ ಹರಿದು ಬಂತು.

Categories
ಸಿನಿ ಸುದ್ದಿ

ಅಪ್ಪು- ಚಿರು- ವಿಜಯ್ ಹುಟ್ಟು- ಸಾವು- ’17’ ನೋವು; ವಿಧಿ ಲಿಖಿತವೋ- ಕಾಕತಾಳೀಯವೋ ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ – ಯುವಸಾಮ್ರಾಟ್ ಚಿರಂಜೀವಿ ಸರ್ಜಾ- ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಮ್ಮ ಸ್ಯಾಂಡಲ್ ವುಡ್ ಗೆ ದಕ್ಕಿದ ಅಪ್ರತಿಮ ಪ್ರತಿಭೆಗಳು. ಸಿನಿಮಾನೇ ಉಸಿರಾಗಿಸಿಕೊಂಡು ಬದುಕಿದ ಈ‌ ಮೂವರು ಧ್ರುವತಾರೆಗಳು ವಿಧಿಯ ಆಟಕ್ಕೆ ‌ಬಲಿಯಾಗಿಬಿಟ್ಟರು.
ಬಹುಬೇಗ ಎಲ್ಲರನ್ನೂ ತೊರೆದು ಬಾರದ ಲೋಕಕ್ಕೆ ‌ಮರಳಿದರು.ಅಲ್ಪಾವಧಿಯಲ್ಲಿ ಮೂವರು ಅಪ್ರತಿಮ ಕಲಾವಿದರನ್ನು ಕಳೆದುಕೊಂಡು ಗಂಧದಗುಡಿ ಬಡವಾಗಿದೆ. ಕರುನಾಡು ಮಮ್ಮಲ ಮರುಗುತ್ತಿದೆ. ಇದೇ ಹೊತ್ತಲ್ಲಿ‌ ಹದಿನೇಳನೇ ನಂಬರ್ ಬಹಳಷ್ಟು ಚರ್ಚೆಗೆ ಗ್ರಾಸವಾಗ್ತಿದೆ.

ಹೌದು, 17 ಅಪ್ಪು- ಚಿರು- ವಿಜಯ್ ಹುಟ್ಟಿದ ದಿನ. ಭೂಮಿಗೆ ಬಂದ ವರ್ಷ- ತಿಂಗಳು ಬೇರೆಯಾಗಿರಬಹುದು, ಆದರೆ ಹುಟ್ಟಿದ ದಿನಾಂಕ ಒಂದೇ. ಮಾತ್ರವಲ್ಲ ಉಸಿರು ಚೆಲ್ಲಿದ ವರ್ಷ- ತಿಂಗಳು- ದಿನಾಂಕವನ್ನು ಕೂಡಿದರೆ ಮತ್ತದೇ ಹದಿನೇಳನೇ ನಂಬರ್ ಬರುತ್ತೆ. ಈ ನಂಬರ್,
ಈ ಮೂವರು ಸ್ಟಾರ್ ನಟರಿಗೆ ಕಂಟಕವಾ ಗೊತ್ತಿಲ್ಲ ? ಇವರುಗಳ ಅಕಾಲಿಕ ಸಾವು ವಿಧಿಲಿಖಿತವಾ ? ಅಥವಾ ಕಾಕತಾಳಿಯವಾ? ಇದೂ ಕೂಡ ಗೊತ್ತಿಲ್ಲ. ಆದರೆ, ಕಳೆದ ಒಂದೂವರೆ ವರ್ಷಗಳಲ್ಲಿ ಈ ಮೂವರು ನಟರನ್ನು ಕಳೆದುಕೊಂಡಿದ್ದೇವೆ.

ಒಬ್ಬರ ಅಗಲಿಕೆಯನ್ನು ಅರಗಿಸಿಕೊಳ್ಳುವ ಹೊತ್ತಿಗೆ ಮತ್ತೊಬ್ಬರ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ. ಯುವಸಾಮ್ರಾಟ್ ಹಠಾತ್ತನೇ ಅಗಲಿದರು. ಇವರ ನಂತರ ಅಪಘಾತದಲ್ಲಿ ಸಂಚಾರಿ ವಿಜಯ್ ಹೋದರು. ಇದೀಗ, ಅಪ್ಪು ಹೃದಯಾಘಾತಗೊಂಡು ಉಸಿರು ಚೆಲ್ಲಿದ್ದಾರೆ. ಈ ಮೂವರು ಒಂದೇ ದಿನಾಂಕದಂದು ಹುಟ್ಟಿದವರು. ಇಷ್ಟವಿಲ್ಲದಿದ್ದರೂ ವಿಧಿಯಾಟಕ್ಕೆ‌ ಬಲಿಯಾದವರು.

ಹೌದು, ಅಕ್ಟೋಬರ್ 17, 1984ರಲ್ಲಿ ಚಿರಂಜೀವಿ ಸರ್ಜಾ ಜನಿಸಿದ್ದರು. ಸಿನಿಮಾ ಹಿನ್ನಲೆ ಕುಟುಂಬದಿಂದ ಬಂದ ಚಿರು ಯುವಸಾಮ್ರಾಟ್ ಎನಿಸಿಕೊಂಡರು. ಗಂಧದಗುಡಿಗೆ ಕೊಡುಗೆ ನೀಡಲು ಹೊತೊರೆಯತ್ತಿದ್ದರು. ಆದರೆ, 2020 ಜೂನ್ 7 ರಂದು ಹಠಾತ್ ಹೃದಯಘಾತ ಸಂಭವಿಸಿ ಪ್ರಾಣಬಿಟ್ಟರು. ಇನ್ನೂ ಸಂಚಾರಿ ವಿಜಯ್ ಕೂಡ ಕಲೆಗಾಗಿ ಜೀವಕೊಡುತ್ತಿದ್ದವರು.


ಜುಲೈ 17, 1983 ರಲ್ಲಿ ಜನಿಸಿದ್ದ ಇವರು, 2021, ಜೂನ್ 15 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಕೂಡ ಉಳಿಯಲಿಲ್ಲ. ಈಗ ಅಪ್ಪು ಕೂಡ ಆಸ್ಪತ್ರೆಗೆ ಹೋಗಿ ವಾಪಾಸ್ ಬರಲಿಲ್ಲ. ಸುಸ್ತು ಎನ್ನುತ್ತಲೇ ಆಸ್ಪತ್ರೆಗೆ ಹೋದ ಅಪ್ಪು ಕಾರ್ಡಿಯಕ್ ಅರೆಸ್ಟ್ ಆಗಿ ಹೋಗೆಬಿಟ್ಟರು. ಮಾರ್ಚ್​​ 17, 1975ರಲ್ಲಿ ಜನಿಸಿದ ಪುನೀತ್ ಅವರು ಅಕ್ಟೋಬರ್ 29 ರಂದು ಇಹಲೋಕ ತ್ಯಜಿಸಿದರು. ಅರ್ಧವಯಸ್ಸಿಗೆ ಬದುಕು ಮುಗಿಸಿ ಮರಳಿ ಬಾರದೂರಿಗೆ ಹೋಗಿರುವ ಈ ಮೂವರು ತಾರೆಯರಿಗೆ ಹದಿನೇಳನೇ ನಂಬರ್ ಕಂಟಕವಾಯ್ತಾ ? ಭಗವಂತನೇ ಬಲ್ಲ ಗುರು

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‘ಪೃಥ್ವಿ’ಯ ಒಡಲು ಸೇರಿತು ಬೆಟ್ಟದ ಹೂವು; ಅಪ್ಪುಗೆ ಕಣ್ಣೀರ ವಿದಾಯ !

ದೊಡ್ಮನೆಯ‌ ಹುಡುಗ, ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಪೃಥ್ವಿ’ ಮೇಲಿನ ಪಯಣ ಮುಗಿದೇಹೋಯ್ತು.
ವಿಧಿಯ ಆಟಕ್ಕೆ ಹೃದಯಾಘಾತಗೊಂಡು ಉಸಿರು ಚೆಲ್ಲಿದ ಅಪ್ಪು ಅಂತಿಮ ಯಾತ್ರೆ ಮುಗಿಸಿಕೊಂಡು ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೇ ಬಿಟ್ಟರು.


ಮನೆಮಗನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ದೊಡ್ಮನೆ ಕಣ್ಣೀರು ಹಾಕುತ್ತಲೇ ಇದೆ. ಇದಕ್ಕೆ,
ಚಿತ್ರರಂಗದ ಸ್ಟಾರ್ ನಟ ನಟಿಯರು ಕೂಡ ಹೊರತಾಗಿಲ್ಲ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಶ್ರುತಿ- ಸುಧಾರಾಣಿ- ರಚಿತರಾಮ್- ಅನುಪ್ರಭಾಕರ್- ರಶ್ಮಿಕಾ- ಯಶ್- ರವಿಚಂದ್ರನ್- ಸುದೀಪ್- ಉಪ್ಪಿ- ಅಭಿಷೇಕ್- ವಿನೋದ್ ಪ್ರಭಾಕರ್- ರಾಕ್ ಲೈನ್ ವೆಂಕಟೇಶ್ – ಬಹದ್ದೂರ್ ಚೇತನ್- ರಮೇಶ್ ಅರವಿಂದ್- ದುನಿಯಾ ವಿಜಯ್ – ಡಾಲಿ ಧನಂಜಯ್ – ವಸಿಷ್ಟ- ವಿಜಯ್ ಪ್ರಕಾಶ್ – ಶಶಿಕುಮಾರ್ ಸೇರಿದಂತೆ ಭಾಗಿಯಾಗಿದ್ದ ಕನ್ನಡದ ಧ್ರುವತಾರೆಗಳೆಲ್ಲರೂ ಕಂಬನಿ ಮಿಡಿದರು. ಹೃದಯ ಭಾರಮಾಡಿಕೊಂಡು ಪುನೀತ್ ರನ್ನು ಕಳುಹಿಸಿಕೊಟ್ಟರು.

ಶುಕ್ರವಾರ ಮಧ್ಯಾಹ್ನದೊತ್ತಿಗೆ ಇಹಲೋಕ ತ್ಯಜಿಸಿದ ಅಪ್ಪುಗೆ ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕಂಠೀರವ ಸ್ಟೇಡಿಯಂನಿಂದ ಬೆಳಗ್ಗೆ 4.45 ರ ಸುಮಾರಿಗೆ ಹೊರಟ ಪಾರ್ಥೀವ ಶರೀರದ ಮೆರವಣಿಗೆ 5.30 ರೊಳಗೆ ಕಂಠೀರವ ಸ್ಡುಡಿಯೋ ತಲುಪಿತು.


ಈಡಿಗ ಸಂಪ್ರದಾಯದಂತೆ ವಿನಯ್ ರಾಜ್ ಕುಮಾರ್
ಅಂತಿಮಕಾರ್ಯದ ವಿಧಿ ವಿಧಾನಗಳನ್ನು ನೆರವೇರಿಸಿದರು.ರಾಣೆಬೆನ್ನೂರಿನ ಶರಣಬಸವೇಶ್ವರ ಮಠದ ಡಾ. ಪರಮಾನಂದ ಸ್ವಾಮೀಜಿಯಿಂದ ಮಂತ್ರ ಪಠಣೆ ಮಾಡಿದರು. ಕುಶಾಲು ತೋಪು ಸಿಡಿಸಿ, ರಾಷ್ಟ್ರಗೀತೆ ಮೂಲಕ ಸಕಲ ಸರ್ಕಾರಿ ಗೌರವಗಳನ್ನು ನೀಡುವುದರ ಮೂಲಕ ಅಪ್ಪು ಅಂತ್ಯಸಂಸ್ಕಾರಕ್ಕೆ ಸರ್ಕಾರದವರು ಸಹಕರಿಸಿದರು.

ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಸಿ.ಎಂ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮುನಿ ರತ್ನ, ಶಾಸಕ ಕುಮಾರ್ ಬಂಗಾರಪ್ಪ, ಶಾಸಕ ಎಸ್. ಆರ್. ವಿಶ್ವನಾಥ್, ಸಚಿವರಾದ ಆರ್. ಅಶೋಕ್ ಸೇರಿದಂತೆ ಹಲವು ರಾಜಕೀಯ ಧುರೀಣರು ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.‌ ಕಳೆದ ಮೂರು ದಿನಗಳಿಂದಲೂ ದೊಡ್ಮನೆಯ ಜೊತೆಗಿದ್ದು ಕಷ್ಟಕ್ಕೆ ಸ್ಪಂಧಿಸುತ್ತಿರುವ ಗಣ್ಯರು, ತಮ್ಮನನ್ನು ಕಳೆದುಕೊಂಡು ಕಣ್ಣೀರು‌ ಸುರಿಸುತ್ತಲೇ ಇದ್ದ ಶಿವಣ್ಣ ಹಾಗೂ ರಾಘಣ್ಣರಿಗೆ ಎಲ್ಲಾ ಗಣ್ಯರುಗಳು ಕೂಡ ಸಂತೈಸುವ ಕೆಲಸ ಮಾಡ್ತಿದ್ದರು. ಆದರೆ, ಜೀವವೇ ಆಗಿದ್ದ ಸಹೋದರನ ಸಾವು ಶಿವಣ್ಣ ಹಾಗೂ ರಾಘಣ್ಣರನ್ನ ಭಾದಿಸುತ್ತಿದ್ದೆ. ಇಬ್ಬರು ಅಣ್ತಮ್ಮಂದಿರ ಹೃದಯ ನುಚ್ಚುನೂರಾಗಿದೆ.

ಇನ್ನೂ ಪತಿಯನ್ನು ಕಳೆದುಕೊಂಡ ದುಃಖ ಅಶ್ವಿನಿ ಪುನೀತ್ ರನ್ನು ಮೌನ ಕ್ಕೆ ‌ಶರಣಾಗುವಂತೆ ಮಾಡಿದೆ. ಅಪ್ಪನ ಅಗಲಿಕೆ ವಂದಿತಾ ಹಾಗೂ ಧೃತಿಯನ್ನ ಕಂಗಾಲಾಗಿಸಿದೆ. ಅಪ್ಪಾ‌.. ಅಪ್ಪಾ.. ಅಪ್ಪಾ.. ಎನ್ನುತ್ತಲೇ ನೋವುಣ್ಣುತ್ತಿದ್ದಾರೆ. ಇವರೊಟ್ಟಿಗೆ ಕೋಟ್ಯಾಂತರ ಅಭಿಮಾನಿಗಳೂ ಕೂಡ ದುಃಖಿತರಾಗಿದ್ದಾರೆ.
ಆಪ್ತರು ಹಾಗೂ ಕುಟುಂಬ ಸ್ಥರಿಗಷ್ಟೇ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶವಿದ್ದಿದ್ದರಿಂದ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ಸಾರ್ವಜನಿಕ ದರ್ಶನ ಮಾಡಿದರೂ ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗಲಿಲ್ಲವಲ್ಲ ಎನ್ನುವ ಬೇಜಾರ್ ನಲ್ಲಿದ್ದಾರೆ. ಹೀಗಾಗಿ ದೊಡ್ಮನೆ ಕುಟುಂಬಸ್ಥರು ಅಂತಿಮ ನಮನದ ನಂತರ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಗರೋಪಾದಿಯಲ್ಲಿ ಅಭಿಮಾನಿಗಳು ಅಪ್ಪು ಅಂತ್ಯಸಂಸ್ಕಾರಗೊಂಡ ಜಾಗಕ್ಕೆ ಬಂದು ನಮಿಸುತ್ತಿದ್ದಾರೆ.

ಭಾವುಕಗೊಂಡು ವಿದಾಯ ಹೇಳುತ್ತಿದ್ದಾರೆ.‌ ಏನೇ ಹೇಳಿ ಭಗವಂತ ದೊಡ್ಮನೆ ರಾಜಕುಮಾರನನ್ನು ನೋಡಿ ಅಸೂಹೆ ಪಟ್ಟುಬಿಟ್ಟ. ಕೋಟ್ಯಾಂತರ ಭಕ್ತರಿಗೆ ಅಪ್ಪು ಆರಾಧ್ಯದೈವ ವಾಗಿದ್ದನ್ನು ನೋಡಿ‌ ದೇವರಿಗೆ ಸಹಿಸಿಕೊಳ್ಳೋದಕ್ಕೆ ಆಗಲಿಲ್ಲ ಅನ್ಸುತ್ತೆ ಅದಕ್ಕೆ ಬೇಗ ಕಿತ್ಕೊಂಡುಬಿಟ್ಟಿದ್ದಾನೆ. ಇನ್ಮೇಲೆ ಆದರೂ ದೈವಸಮಾನರನ್ನು ಅರ್ಧ ವಯಸ್ಸಿಗೆ ಕಿತ್ತುಕೊಳ್ಳದಿರಲಿ ಎನ್ನುವುದೇ ಸಕಲರ ಬೇಡಿಕೆ

ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಅಪ್ಪು ನೋಡಿ ಭಾವುಕರಾದ ತೆಲುಗು ಸ್ಟಾರ್ಸ್‌ ; ಪುನೀತ್‌ ಸರಳತೆ ಗುಣಗಾನ ಮಾಡಿದ ಟಾಲಿವುಡ್ ಕಲಾವಿದರು

ಪುನೀತ್ ರಾಜ್‌ಕುಮಾರ್‌ ಅವರ ದರ್ಶನಕ್ಕೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಅದರಲ್ಲೂ ಸೌತ್‌ ಇಂಡಿಯ ಫಿಲ್ಮ್‌ ಇಂಡಸ್ಟ್ರಿಯಂತೂ ಅಪ್ಪು ನಿಧನವನ್ನು ಸಹಿಸಿಕೊಳ್ಳುತ್ತಿಲ್ಲ. ಜನಸಾಗರದ ನಡುವೆಯೇ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ಬಾಲಕೃಷ್ಣ, ಅರ್ಜುನ್‌ ಸರ್ಜಾ, ವೆಂಕಟೇಶ್‌, ಜೂನಿಯರ್‌ ಎನ್ ಟಿ ಆರ್, ಶ್ರೀಕಾಂತ್‌, ಅಲಿ, ರಾಣಾ ದಗ್ಗುಬಾಟಿ, ಪ್ರಭುದೇವ ಪುನೀತ್​ ಪಾರ್ಥಿವ ಶರೀರ ನೋಡಿ ಭಾವುಕರಾದರು. ಈ ವೇಳೆ ಎಲ್ಲರೂ ಕೂಡ ಪಕ್ಕದಲ್ಲೇ ನಿಂತಿದ್ದ ಶಿವರಾಜ್‌ಕುಮಾರ್‌ ಅವರನ್ನು ತಬ್ಬಿಕೊಂಡು ಸಂತೈಸಿದರು. ಜ್ಯೂ.ಎನ್​.ಟಿ.ಆರ್.​ ರಾಜ್​​ಕುಮಾರ್ ಅವರ ಕುಟುಂಬದೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಅಲ್ಲದೇ ಪುನೀತ್​ ಅವರ ಚಕ್ರವ್ಯೂಹ ಸಿನಿಮಾದಲ್ಲಿ ನಟ ಎನ್​​ಟಿಆರ್​ ಅವರು ಗೆಳೆಯ ಗೆಳೆಯ ಹಾಡನ್ನು ಹಾಡಿದ್ದರು. ಈ ವೇಳೆ ಎಲ್ಲರೂ ಪುನೀತ್‌ ಅವರ ಸರಳತೆ ಕುರಿತು ಮಾತಾಡಿದರು.

“ಪುನೀತ್​ ಇಲ್ಲ ಅನ್ನೋದು ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಲ್ಲ, ನನಗೆ ವೈಯಕ್ತಿಕ ನಷ್ಟ . ಹುಟ್ಟಿದ ಬಳಿಕ ಎಲ್ಲರೂ ಸಾಯಬೇಕು.. ಆದರೆ ಸಾಯೋ ವೇಳೆಗೆ ಜನರ ಮನಸ್ಸಿನಲ್ಲಿ ಉಳಿದು ಹೋಗುವಂತಹ ಕೆಲಸ ಮಾಡಬೇಕಾಗುತ್ತದೆ. ಯಾರು ತಾವು ಹುಟ್ಟಿದ ದೇಶ, ಊರು, ಕುಟುಂಬಕ್ಕೆ ಪ್ರತಿಷ್ಠೆಯನ್ನು ತಂದು ಕೊಡುತ್ತಾರೋ ಅವರ ಜನುಮ ಸಾರ್ಥಕವಾಗುತ್ತದೆ. ಕನ್ನಡ ಚಲನಚಿತ್ರ ರಂಗದಲ್ಲಿ ಪುನೀತ್ ಅವರ ಸ್ಥಾನವನ್ನು ಯಾರು ತುಂಬಲು ಆಗೋದಿಲ್ಲ. ಒಬ್ಬ ಕಲಾವಿದನಾಗಿ, ಅವರ ಸಾಮಾಜಿಕ ಕಾರ್ಯಗಳೊಂದಿಗೆ ಮೇರು ವ್ಯಕ್ತಿಯಾಗಿ ಅವರ ಮೂರ್ತಿಯನ್ನು ನನ್ನ ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ.

-ಬಾಲಕೃಷ್ಣ, ತೆಲುಗು ನಟ

“ಪುನೀತ್ ಅಗಲಿಕೆ ನಮಗೂ ನೋವು ತಂದಿದೆ. ನಮ್ಮ ಅಪ್ಪು ಹೋದ ದೇವರು ಅನ್ಯಾಯ ಮಾಡಿಬಿಟ್ಟ. ಮಿಸ್ ಯೂ ಅಪ್ಪು. ರಾಜ್​​ಕುಮಾರ್ ಕುಟುಂಬದ ಜೊತೆಗೆ ಸುಮಧುರ ಬಾಂಧವ್ಯವಿದೆ. ಎರಡು ಕುಟುಂಬಗಳಲ್ಲಿ ಯಾವುದೇ ಸಮಾರಂಭ ನಡೆದರು ಪರಸ್ಪರ ಭಾಗಿಯಾಗುತ್ತಿದ್ದೆವು. ನಾನು ಬೆಂಗಳೂರಿಗೆ ಯಾವಾಗ ಬಂದ್ರೂ ರಾಜ್​ಕುಮಾರ್ ಅವರ ಮನೆಗೆ ಹೋಗ್ತಿದ್ದೆ. ಇತ್ತೀಚೆಗೂ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಪುನೀತ್​ ರಾಜ್​ಕುಮಾರ್ ಅವರಿಗೆ ಸ್ವರ್ಗ ಲೋಕದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸುತ್ತೇನೆ


ಚಿರಂಜೀವಿ, ತೆಲುಗು ನಟ

ಪುನೀತ್​ರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ನಮಗೆಲ್ಲ ಅತಿ ದೊಡ್ಡ ನಷ್ಟ. ರಾಜರತ್ನ ಅಪ್ಪುನಾ ಕಳೆದುಕೊಂಡ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ.

ವಿಕ್ಟರಿ ವೆಂಕಟೇಶ್, ತೆಲುಗು ನಟ

“ಅಪ್ಪು ಸಾವಿನಿಂದ ನಮಗೆಲ್ಲ ತುಂಬಾ ನೋವಾಗ್ತಿದೆ. ಜೇಮ್ಸ್ ಚಿತ್ರದಲ್ಲಿ ನಾನು ಸ್ಕ್ರೀನ್ ಶೇರ್ ಮಾಡಿದ್ದೀನಿ. 45 ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರು ಬಂದ್ರೂ ರೆಸ್ಪೆಕ್ಟ್ ಕೊಡ್ತಿದ್ರು. ಎಲ್ಲರಿಗೂ ರೆಸ್ಪೆಕ್ಟ್ ಕೊಟ್ಟು ಮಾತನಾಡಿಸ್ತಾರೆ. ತೆಲುಗಿನಲ್ಲಿ ಎಲ್ಲಾ ಹೀರೋಗಳೂ ಪುನೀತ್ ಅವರನ್ನ ರೆಸ್ಪೆಕ್ಟ್ ಮಾಡ್ತಿದ್ರು.

ಕಳೆದ ವಾರ ಅವರನ್ನು ಫೋನ್ ಮೂಲಕ ಮಾತಾಡಿಸಿದ್ದೆ. ಶಿವಣ್ಣ ನಾವೆಲ್ಲ 25 ವರ್ಷಗಳಿಂದ ಪರಿಚಿತರು. ಅಪ್ಪು ಕಳೆದುಕೊಂಡು ನೋವಲ್ಲಿರೋ ದೊಡ್ಮನೆ ಕುಟುಂಬಕ್ಕೆ ದುಃಖ ಬರಿಸೋ ಶಕ್ತಿ ಕೊಡಲಿ ದೇವರು.
ಶ್ರೀಕಾಂತ್‌, ತೆಲುಗು ನಟ.

Categories
ಸಿನಿ ಸುದ್ದಿ

ದೇವರ ದರ್ಶನಕ್ಕೆ ಕೊನೆಯುಂಟು, ಅಪ್ಪು ದರ್ಶನಕ್ಕೆ ಕೊನೆಯುಂಟೇ? ಪುನೀತ್‌ ದರ್ಶನ ಪಡೆದ ಲಕ್ಷಾಂತರ ಫ್ಯಾನ್ಸ್

ದೇವರ ದರ್ಶನಕ್ಕೆ ನಿಂತ ಭಕ್ತ ಸಮೂಹದ ಸಾಲು ಕೊನೆಯಾಗಬಹುದು ಆದರೆ ಅಪ್ಪು ಅಂತಿಮ ದರ್ಶನಕ್ಕೆ ಹರಿದು ಬಂದಿದ್ದ ಜನಸಾಗರದ ಸಾಲು ಮಾತ್ರ 48 ಗಂಟೆಗಳು ಕಳೆದರೂ ಇನ್ನೂ ಕಮ್ಮಿಯಾಗಿಲ್ಲ…

ಕನ್ನಡದ ಪವರ್‌ಫುಲ್‌ ನಟ ಪುನೀತ್‌ ರಾಜ್‌ಕುಮಾರ್‌ಗೆ ಅಭಿಮಾನಿಗಳೆಂದರೆ ದೇವ್ರು. ಆದರೆ, ಅಭಿಮಾನಿಗಳಿಗೆ ಪುನೀತ್‌ ಅಂದರೆ ದೇವ್ರು. ಆ ದೇವರನ್ನು ನೋಡಲು ನಿನ್ನೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಧಾವಿಸಿ ಬಂದಿದ್ದಾರೆ. ಈಗಲೂ ರಾಜ್ಯ, ಅಂತಾರಾಜ್ಯಗಳಿಂದಲೂ ಅಭಿಮಾನಿಗಳು ಆಗಮಿಸಿ, ಪ್ರೀತಿಯ ಹೀರೋನ ದರ್ಶನ ಪಡೆದು ಕಣ್ಣೀರು ಸುರಿಸುತ್ತಿದ್ದಾರೆ.


ಹೌದು, ಪುನೀತ್‌ರಾಜಕುಮಾರ್‌ ಅವರನ್ನು ಒಂದೊಮ್ಮೆ ನೋಡಬೇಕು, ಅವರ ಮುಂದೆ ನಿಂತು ಕೊನೆಯ ಸಲ ಕೈಮುಗಿಯಬೇಕು ಅಂತ ಸಾಲುಗಟ್ಟಿರುವ ಅಭಿಮಾನಿಗಳ ಸಂಖ್ಯೆಗೇನೂ ಲೆಕ್ಕವಿಲ್ಲ. ನಿನ್ನೆ ಪುನೀತ್‌ ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆಯೇ ಅತ್ತ, ವಿಕ್ರಮ್‌ ಆಸ್ಪತ್ರೆ ಮುಂದೆ ಅಭಿಮಾನಿಗಳು ಜಮಾಯಿಸಿದರು. ನಂತರ ಕಂಠೀರವ ಸ್ಟೇಡಿಯಂಗೆ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದಂತೆಯೇ, ಎಲ್ಲಿಂದ ಹರಿದೋ ಬಂತೋ ಏನೋ, ಎತ್ತ ನೋಡಿದರೂ ಜನ ಜನ ಜನ. ಕಣ್ಣಾಯಿಸಿದ ಕಡೆಯೆಲ್ಲ ಅಭಿಮಾನಿಗಳದ್ದೇ ಗೋಳಾಟ.


ನಿನ್ನೆ ಮಧ್ಯಾಹ್ನದಿಂದ ಹಿಡಿದು, ರಾತ್ರಿ ಇಡೀ ಅಭಿಮಾನಿಗಳು ಸಾಲುಗಟ್ಟಿ ಬಂದು ಪುನೀತ್‌ ಅವರ ದರ್ಶನ ಪಡೆದಿದ್ದು ನಿಜಕ್ಕೂ ದುಃಖ ತರುವಂಥದ್ದು. ಶನಿವಾರವೂ ಸಹ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟೇಡಿಯಂನಲ್ಲಿ ಸೇರಿ ತಮ್ಮ ಪ್ರೀತಿಯ ನಾಯಕರನ್ನು ಕಣ್ತುಂಬಿಕೊಂಡರು. ಸಂಜೆ ಐದು ಆಗಿದ್ದರೂ, ಜನಸಾಗರ ಹರಿದುಬರುತ್ತಲೇ ಇತ್ತು. ನಿನ್ನೆಯಿಂದ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪುನೀತ್‌ ಅವರನ್ನು ನೋಡಿ ಭಾವುಕರಾಗಿದ್ದಾರೆ.

ಡಾ.ರಾಜಕುಮಾರ್‌ ಅವರ ನಿಧನದ ಸಂದರ್ಭದಲ್ಲೂ ಇಷ್ಟೇ ಜನಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈಗ ಪುನೀತ್‌ ಅವರನ್ನು ನೋಡಬೇಕು ಅಂತಾನೇ, ರಾಜ್ಯದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ರಾತ್ರೋ ರಾತ್ರಿ ಬಂದಿದ್ದಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಮ್ಮ ಪ್ರೀತಿಯ ಹೀರೋನನ್ನು ನೋಡಿ ಕಣ್ಣೀರಾಗಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಬಿಟ್ಟು ಹೋದ ಜಾಗವನ್ನು ಯಾರಿದಂಲೂ ತುಂಬಲು ಸಾಧ್ಯವಿಲ್ಲ-ಸುದೀಪ್‌ ಭಾವುಕ ಪತ್ರ

ನಟ ಕಿಚ್ಚ ಸುದೀಪ್‌ ಕನಲಿ ಹೋಗಿದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ಸಾವು ಅವರನ್ನು ತೀವ್ರವಾಗಿ ಘಾಸಿಗೊಳಿಸಿದೆ. ಚಿತ್ರೀಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಗಿದ್ದ ಸುದೀಪ್‌ ವಿಷಯ ಗೊತ್ತಾಗಿ ಶುಕ್ರವಾರವೇ ಬೆಂಗಳೂರಿಗೆ ವಾಪಾಸ್‌ ಆಗಿ ಪುನೀತ್‌ ರಾಜಕುಮಾರ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇದೀಗ ಅಂದ್ರೆ ಶನಿವಾರ ಕಿರಿಯ ಗೆಳೆಯ ಅಪ್ಪು ನೆನಪಿಸಿಕೊಂಡು ಭಾವುಕ ಪತ್ರವೊಂದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲ ಎಂದು ದು:ಖ ವ್ಯಕ್ತಪಡಿಸಿದ್ದಾರೆ. ಅವರು ಹಂಚಿಕೊಂಡ ಪತ್ರದ ವಿವರ ಇಂತಿದೆ….

‘ ಇದು ಬಾಲ್ಯದಿಂದಲೂ ಬಂದ ಪ್ರಯಾಣ. ನಾವು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯದಾಗ ಅವರು ಆಗಲೇ ಸ್ಟಾರ್‌ ಆಗಿದ್ದರು. ಅವರು ಭಾಗ್ಯವಂತ ಚಿತ್ರದ ಯಶಸ್ವಿ ಪ್ರವಾಸದಲ್ಲಿದ್ದರು.ಅದು ದೈತ್ಯಾಕಾರದ ಹಿಟ್‌ ಆಗಿತ್ತು.ನನ್ನ ತಂದೆ ಚಿತ್ರರಂಗದವರಿಗೆ ಚಿರಪರಿಚಿತ ಹೆಸರಾಗಿದ್ದರಿಂದ ಪುನೀತ್‌ ಅವರನ್ನು ಅವರ ಥಿಯೇಟರ್‌ ಭೇಟಿಯ ನಂತರ ಮಧ್ಯಾಹ್ನ ಊಟಕ್ಕೆ ಅವರ ಜನರು ಮನೆಗೆ ಕರೆತಂದರು.ಆಗ ಅವರನ್ನು ನಾನು ಮೊದಲ ಬಾರಿಗೆ ಭೇಟಿಯಾದೆ ಮತ್ತು ಪ್ರಾಯಶ: ವಯಸ್ಸಿನ ಅಂಶವು ನಮ್ಮನ್ನು ತಕ್ಷಣವೇ ಬೆರೆಯುವಂತೆ ಮಾಡಿತು.ಅವರು ಊಟದ ಉಪಚಾರಕ್ಕಿಂತ ನನ್ನ ಆಟಿಕೆಗಳ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದರು.ಅಪ್ಪು ಮತ್ತು ನಾನು ಆಟದಲ್ಲಿ ನಿರತರಾಗಿದ್ದಾಗ ಒಬ್ಬರು ಪುನೀತ್‌ಗೆ ಊಟ ಮಾಡಿಸಲು ಮಹಿಳೆಯೊಬ್ಬರು ಅವರ ಹಿಂದೆಯೇ ಸುತ್ತುತ್ತಿದ್ದು ನನಗಿನ್ನೂ ನೆನಪಿದೆ.

ಅವರು ಖುಷಿಯಾಗಿದ್ದಿದ್ದನ್ನ ಕಂಡು ನಾನೂ ಖುಷಿಯಾಗಿದ್ದೆ. ಪುನೀತ್ ಅವರನ್ನ ನೋಡಲು ನಮ್ಮ ಅಕ್ಕ-ಪಕ್ಕದ ಮನೆಯವರೆಲ್ಲಾ ನಮ್ಮ ಮನೆಯ ಮುಂದೆಯೇ ನೆರೆದಿದ್ದರು. ಯಾಕಂದ್ರೆ, ಪುನೀತ್ ಅದಾಗಲೇ ಸ್ಟಾರ್ ಆಗಿದ್ದವರು. ಹೇಳಿ ಕೇಳಿ ಅವರು ಲೆಜೆಂಡ್ ಡಾ.ರಾಜ್‌ಕುಮಾರ್ ಅವರ ಪುತ್ರ’ ಅಂದಿನಿಂದ ನಾವು ಕೆಲ ಬಾರಿ ಭೇಟಿಯಾಗಿದ್ದೇವೆ ಮತ್ತು ಇದೇ ಬಾತೃತ್ವದ ಸಹದ್ಯೋಗಿಗಳಾಗಿ ಹೋದೆವು. ಬಳಿಕ ನಾವಿಬ್ಬರೂ ಸಿನಿಮಾ ರಂಗಕ್ಕೆ ಸೇರಿದ್ವಿ. ಅವರು ಒಳ್ಳೆಯ ನಟ, ಅತ್ಯುತ್ತಮ ಡ್ಯಾನ್ಸರ್ ಹಾಗೂ ಫೈಟರ್. ಇಂದು ಚಿತ್ರರಂಗ ಅವರಿಲ್ಲದೆ ಅಪೂರ್ಣವಾಗಿದೆ. ಕಾಲ ಬಹಳ ಕ್ರೂರಿ. ನಿನ್ನೆ ನಾನು ಬೆಂಗಳೂರಿಗೆ ಬಂದಿಳಿದು, ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಹೋದಾಗ ನನ್ನ ಉಸಿರು ಭಾರವಾಗ ತೊಡಗಿತು. ಅವರು ಮಲಗಿರುವುದನ್ನ ನೋಡಿ ಅನೇಕ ಪ್ರಶ್ನೆಗಳು ತಲೆಯಲ್ಲಿ ಮೂಡಿದವು. ಯಾಕೆ? ಹೇಗೆ? ಇದೇ ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಅವರನ್ನ ಹೆಚ್ಚು ಹೊತ್ತು ನನ್ನಿಂದ ನೋಡಲು ಸಾಧ್ಯವಾಗಲಿಲ್ಲ. ಆ ನೋಟ ನನಗಿನ್ನೂ ಕಾಡುತ್ತಲೇ ಇದೆ. ಶಿವಣ್ಣ ಅವರ ಪರಿಸ್ಥಿತಿಯನ್ನ ಕಂಡು ನೋವಾಗುತ್ತಿದೆ. ‘’ಪುನೀತ್ ನನಗಿಂತ 13 ವರ್ಷ ಚಿಕ್ಕವನು. ಇದೇ ತೋಳಲ್ಲಿ ಅವನನ್ನ ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಸಾಕಷ್ಟು ನೋಡಿದ್ದೇನೆ. ನಾನು ಇನ್ನೇನು ನೋಡೋಕೆ ಇದೆ’’ ಅಂತ ಶಿವಣ್ಣ ನನಗೆ ಹೇಳಿದರು. ಆ ಮಾತು ಈಗಲೂ ನನ್ನನ್ನ ಕಾಡುತ್ತಿದೆ. ಎಲ್ಲರೂ ಆಘಾತಗೊಂಡಿದ್ದಾರೆ, ಜರ್ಜರಿತಗೊಂಡಿದ್ದಾರೆ. ಈ ವಾಸ್ತವವನ್ನು ಅರಗಿಸಿಕೊಳ್ಳಲು ಬಹಳ ಸಮಯ ಬೇಕು. ಅವರು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆ ಜಾಗ ಯಾವತ್ತಿದ್ದರೂ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಸೇರಿದ್ದು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ’’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
– ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪುನೀತ್ ದರ್ಶನ ಪಡೆದ ರಮ್ಯಾ ; ಜೇಮ್ಸ್ , ದ್ವಿತ್ವ ಚಿತ್ರಕ್ಕೆ ನಾನೇ ನಾಯಕಿಯಾಗಬೇಕಿತ್ತು; ಕಮ್ ಬ್ಯಾಕ್ ಮಾಡಿದ್ದರೆ ಪವರ್ ಜೊತೆ ನಟಿಸೋ ಕನಸು ಕಂಡಿದ್ರು ಪದ್ಮಾವತಿ !

ದೊಡ್ಮನೆಯ ರಾಜಕುಮಾರನ ಅಗಲಿಕೆ‌ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮೂಲಕ ಭಾವುಕತೆಯನ್ನು ಹೊರಹಾಕಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ದುಃಖ ತಾಳಲಾರದೇ ಫ್ಲೈಟ್ ಹತ್ಕೊಂಡು ಬೆಂಗಳೂರಿಗೆ ಬಂದಿಳಿದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದುಕೊಂಡರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ, ಅಪ್ಪು ನನಗೆ
ಕೋಸ್ಟಾರ್ ಮಾತ್ರವಲ್ಲ ಒಳ್ಳೆಯ ಫ್ರೆಂಡ್ ಕೂಡ ಆಗಿದ್ದರು. ಅಭಿ, ಆಕಾಶ್, ಅರಸು ಸೇರಿ ಮೂರು ಚಿತ್ರ ಒಟ್ಟಿಗೆ ಮಾಡಿದ್ದೇನೆ. ಮೂರು ವಾರಗಳ ಹಿಂದಷ್ಟೇ ಅವರೊಟ್ಟಿಗೆ ಮಾತನಾಡಿದ್ದೆ ಈಗ ನೋಡಿದರೆ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೊರಟುಬಿಟ್ಟಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಬಿಗಿಹಿಡಿದ ಗಂಟಲಲ್ಲೇ ಮಾತನಾಡಿದ ಮೋಹಕತಾರೆ ರಮ್ಯಾ,
ದೊಡ್ಮನೆ ಬ್ಯಾನರ್ ಚಿತ್ರ ಬಂದಾಗ ನನಗೆ ಫಸ್ಟ್ ಪ್ರಿಪ್ರೆನ್ಸ್ ಕೊಡ್ತಿದ್ದರು. ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದ್ಮೇಲೂ ಕೂಡ ಅವರೊಟ್ಟಿಗೆ ನಿರಂತರ ಸಂಪರ್ಕದಲ್ಲಿದ್ದೆ. ಕಂಬ್ಯಾಕ್ ಮಾಡುವುದಾದರೆ ದೊಡ್ಮನೆಯ ರಾಜಕುಮಾರ ನೊಟ್ಟಿಗೆ ಮಾಡಬೇಕು ಅಂತ ನಿರ್ಧರಿಸಿದ್ದೆ ಎಂದರು.

ಕಂಬ್ಯಾಕ್ ವಿಚಾರದ ಬಗ್ಗೆ ಎಷ್ಟೋ ಭಾರಿ ಅಪ್ಪು ಜೊತೆ ಡಿಸ್ ಕಷನ್ ಕೂಡ ಮಾಡಿದ್ದೆ. ಅಭಿ, ಆಕಾಶ್, ಅರಸು ಜಾನರ್ ನಂಥ ಕಥೆಗಳು ಅರಸಿಕೊಂಡು ಬಂದರೆ ಇಬ್ಬರು ಒಟ್ಟಾಗಿ ಸಿನಿಮಾ ಮಾಡಬೇಕು ಎನ್ನುವುದು ನಮ್ಮಿಬ್ಬರ ಕನಸಾಗಿತ್ತು. ಅಭಿಮಾನಿಗಳು ಕೂಡ ಇದನ್ನೇ ಬಯಸ್ತಿದ್ದರು. ಪವರ್ ಸ್ಟಾರ್ ಹಾಗೂ ಪದ್ಮಾವತಿ ಜೊತೆಯಾಗಬೇಕು, ಬಿಗ್ ಸ್ಕ್ರೀನ್ ಮೇಲೆ ದಿಬ್ಬಣ ಹೊರಡಬೇಕು ಅಂತ ಆಸೆಪಟ್ಟಿದ್ದರು. ಆದರೆ, ಅದಕ್ಕೂ ಮೊದಲೇ ದೊಡ್ಮನೆಯ ಅರಸು, ಕೋಟ್ಯಾಂತರ ಭಕ್ತರ ನಾಯಕ ಅಪ್ಪು ಬಹುದೂರ ಹೋಗಿಬಿಟ್ಟರು. ಈ ಸುದ್ದಿ ಈ ಕ್ಷಣಕ್ಕೂ ಶಾಕಿಂಗ್ಗೇ. ಭಗವಂತ ಕರುಣಾಮಯಿ ಆಗಿ ಯುವರತ್ನನನ್ನು ಉಳಿಸಿಕೊಡಲಿ ಅಂತಾನೇ ಸಕಲರೂ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ.


ಆದರೆ ವಾಸ್ತವ ಕಟುಸತ್ಯ ಅಲ್ಲವೇ ಅದನ್ನು ಎಲ್ಲರೂ ನಂಬಲೆಬೇಕು. ಅಪ್ಪು ಆತ್ಮಕ್ಕೆ ಶಾಂತಿ ಸಿಗುವ ಹಾಗೇ ಕಳುಹಿಸಿಕೊಡಬೇಕು.ಇದನ್ನೇ ದೊಡ್ಮನೆ ಕುಟುಂಬ ವರ್ಗ ಹೇಳ್ತಿದೆ. ಅದಕ್ಕೆ ಅಭಿಮಾನಿಗಳು ಕೂಡ ಸ್ಪಂಧಿಸುತ್ತಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಟ್ಟಿದ್ದು ಲಕ್ಷಾಂತರ ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ನನ್ನ ನೆಚ್ಚಿನ ಅಪ್ಪು ಇಲ್ಲದೆ ನಾನೇಕೆ ಬದುಕಲಿ ಅಂದ ಅಭಿಮಾನಿಯ ದುರಂತ ಅಂತ್ಯ !

ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ, ನಾನೇಕೆ ಇರಲಿ ಅಂತ ಶನಿವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಯುವಕನ ಹೆಸರು ರಾಹುಲ್‌ ಬಾಬು ಗಾಡಿವಡ್ಡರ್.‌ ಊರು ಅಥಣಿ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಅಕಾಲಿಕ ಸಾವು ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರೆಗಿದ ಬಹುದೊಡ್ಡ ಆಘಾತ. ಅದರಲ್ಲೂ ಅವರ ಅಪ್ಪಟ್ಟ ಅಭಿಮಾನಿಗಳಿಗೆ ಬಹುದೊಡ್ಡ ಮೈಂಡ್‌ ಸ್ಟ್ರೋಕ್‌. ಈಗಾಗಲೇ ಈ ಸುದ್ದಿಯ ಶಾಕ್‌ ನಿಂದ ರಾಜ್ಯದಲ್ಲಿ ಇಬ್ಬರು ಪವರ್‌ ಸ್ಟಾರ್‌ ಅಭಿಮಾನಿಗಳು ಮೃತಪಟ್ಟಿದ್ದಾರೆ. ಇದೀಗ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಆತನ ಹೆಸರೇ ರಾಹುಲ್‌ ಬಾಬು ಗಾಡಿವಡ್ಡರ್.‌ ಈತ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಥಣಿ ಪಟ್ಟಣದ ವಡ್ಡರ ಗಲ್ಲಿ ನಿವಾಸಿ. ಆತನಿಗೀಗ ವಯಸ್ಸು ೨೪. ಕಾಲೇಜು ವಿದ್ಯಾರ್ಥಿ.

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಇತ್ತೀಚೆಗೆ ತೆರೆ ಕಂಡ ಪುನೀತ್‌ ಅಭಿನಯದ ಯಾವುದೇ ಸಿನಿಮಾವನ್ನು ಆತ ನೋಡದೆ ಬಿಟ್ಟಿಲ್ಲ. ಪುನೀತ್‌ ರಾಜಕುಮಾರ್‌ ಅಂದ್ರೆ ಆತನಿಗೆ ಪ್ರಾಣ. ಅವರ ಯಾವುದೇ ಸಿನಿಮಾ ರಿಲೀಸ್‌ ಅಂದ್ರೆ ಸಾಕು, ಅಲ್ಲಿನ ಥಿಯೇಟರ್‌ ನಲ್ಲಿ ತನ್ನದೇ ಸ್ವಂತ ಖರ್ಚಿನಲ್ಲಿ ಪೋಸ್ಟರ್‌, ಕಟೌಟ್‌ ಹಾಕಿಸಿ, ಸ್ಟಾರ್‌ ಮೇಲಿನ ಅಭಿಮಾನ ಮರೆಯುತ್ತಾ ಬಂದಿದ ಹುಡುಗ. ಶುಕ್ರವಾರ ದಿಢೀರ್‌ ಅಂತ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಬ್ರಮೆಗೆ ಒಳಗಾಗಿದ್ದ. ಕೊನೆಗೆ ಸಂಜೆಯೇ ಸ್ನೇಹಿತರನ್ನೆಲ್ಲ ಸೇರಿಸಿ, ತನ್ನ ನೆಚ್ಚಿನ ನಟನ ಸಾವಿಗೆ ಸಂತಾಪ ಸೂಚಿಸಿ ಶದ್ರ್ದಾಂಜಲಿ ಸಲ್ಲಿಸಿದ್ದ.

ಅಲ್ಲಿಂದ ಸಂಜೆ ಸ್ನೇಹಿತರೆಲ್ಲ ಮನೆಗೆ ಹೋದ ಬಳಿಕ, ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ ನಾನೇಕೆ ಇರಲಿ ಅಂತ ಗೆಳೆಯರಿಗೆಲ್ಲ ಮೊಬೈಲ್‌ ಮೂಲಕ ಮೆಸೇಜ್‌ ರವಾನಿಸಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಈ ಕುರಿತು ಆತನ ಸ್ನೇಹಿತ ಅಥಣಿಯ ಜಗದೀಶ್‌ ಗೆಳೆಯನ ಅಗಲಿಕೆಗೆ ಅತೀವ ನೋವು ವ್ಯಕ್ತಪಡಿಸಿದ್ದು, ಯಾರಿಗೂ ಗೊತ್ತಾಗದ್ದಂತೆ ಈ ಅಚಾತುರ್ಯ ನಡೆದುಹೋಗಿದೆ ಎಂದು ಕಣ್ಣೇರಿಟ್ಟಿದ್ದಾರೆ. ʼ ರಾಹುಲ್‌ ತುಂಬಾ ಚುರುಕಿನ ಹುಡುಗ. ನಟ ಪುನೀತ್‌ ಅಂದ್ರೆ ಆತನಿಗೆ ಪಂಚ ಪ್ರಾಣ. ಅವರ ಸಿನಿಮಾ ರಿಲೀಸ್‌ ಆದ್ರೆ ಸಾಕು ಆತನಿಗೆ ಹಬ್ಬವೇ ಇದ್ದಂತೆ ಇರುತ್ತಿದ್ದ. ಆ ಸಿನಿಮಾ ಬೆಳಗಾವಿ, ಹುಬ್ಬಳಿ ಎಲ್ಲಿಯೇ ಸನಿಹ ಇದ್ದರೂ ಸರಿ ಅಲ್ಲಿಗೇ ಹೋಗಿ ನೋಡಿಕೊಂಡು ಬರುತ್ತಿದೆ. ಈಗ ಅವರ ಸಾವಿನ ಸುದ್ದಿ ಕೇಳಇ ಆತನೂ ಸಾವಿಗೆ ಶರಣಾಗಿರುವುದು ನಮಗೆಲ್ಲ ಅತೀವ ದು:ಖ ತಂದಿದೆ ಎಂದು ಜಗದೀಶ್‌ ಹೇಳಿಕೊಂಡಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
error: Content is protected !!