ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜಕುಮಾರ್ ಈಗ ನೆನಪು ಮಾತ್ರ. ಆದರೆ ಅವರಿಗೆ ಮರಣೋತ್ತರವಾಗಿ ʼರಾಜರತ್ನʼ ಪ್ರಶಸ್ತಿ ನೀಡಬೇಕೆನ್ನುವ ಕೂಗು ಅವರ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಕಳೆದ ಎರಡು ದಿನಗಳಿಂದ ಸೋಷಲ್ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳು ಹಾಗೊಂದು ಒತ್ತಾಯದ ಕೂಗು ಆರಂಭಿಸಿದ್ದಾರೆ. ಈ ಮಧ್ಯೆ ಸೋಮವಾರ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ವಿಚಾರಕ್ಕೆ ಪ್ರತಿ ಕ್ರಿಯೆ ನೀಡಿದ್ದಾರೆ.
ರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅಪ್ಪು ಅವರಿಗೆ ರಾಜರತ್ನ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಮುಖರ ಜತೆಗೆ ಈ ಸಂಬಂಧ ಚರ್ಚೆ ನಡೆಸಿ, ಅಭಿಪ್ರಾಯ ಪಡೆಯಬೇಕಿದೆ. ಸರ್ಕಾರಕ್ಕೂ ಈ ಬಗ್ಗೆ ಮನಸಿದೆ. ಮುಂದಿನ ದಿನಗಳಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು. ನಟ ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದವರು. ಹಾಗೆಯೇ ಬೇಕಾದಷ್ಟು ರಾಜ್ಯ ಪ್ರಶಸ್ತಿಗಳಿಗೂ ಪಾತ್ರರಾದವರು. ಉಳಿದಂತೆ ಮಾನ-ಸನ್ಮಾನಗಳಿಗೆ ಲೆಕ್ಕವೇ ಇಲ್ಲ. ಆದರೂ, ಅವರಿಗೆ ಮರಣೋತ್ತರವಾಗಿ ರಾಜರತ್ನ ನೀಡಬೇಕೆನ್ನುವುದು ಅಭಿಮಾನಿಗಳ ಕೂಗು. ಸರ್ಕಾರ ಇದಕ್ಕೆ ಸ್ಪಂದಿಸುತ್ತಾ ಎನ್ನುವುದು ಕುತೂಹಲಕರ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ