ದೊಡ್ಮನೆ ದೊರೆ, ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…ನಿರ್ದೇಶಕ ಬಹದ್ದೂರ್‌ ಚೇತನ್‌ ಸಲ್ಲಿಸಿದ ಭಾವುಕ ನುಡಿ ನಮನ !

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ನಿಧನ ಚಿತ್ರರಂಗದಲ್ಲಿ ಆಗಾದವಾದ ಶೂನ್ಯ ಆವರಿಸಿಕೊಳ್ಳುವಂತೆ ಮಾಡಿದೆ. ಇಡೀ ಕರುನಾಡೇ ಕಣ್ಣೀರಾಗಿದೆ. ಅದರಲ್ಲೂ ಅವರೊಂದಿಗೆ ನಿರ್ದೇಶಕರಾಗಿ, ನಟರಾಗಿ, ಹೀಗೆ ಸಿನಿಮಾ ಇನ್ನಾವುದೋ ವಿಭಾಗದಲ್ಲಿ ಕೆಲಸ ಮಾಡಿದವರಂತೂ ಅಕ್ಷರಶ: ಅವರ ಅಗಲಿಕೆಯಿಂದ ನೊಂದು ಹೋಗಿದ್ದಾರೆ. ಅಂತಹದೇ ದು:ಖ ತುಂಬಿಕೊಂಡು ಕುಳಿತಿರುವ ಜೇಮ್ಸ್‌ ಚಿತ್ರದ ನಿರ್ದೇಶಕ ಬಹದ್ದೂರ್‌ ಚೇತನ್‌ ಸೋಮವಾರ ಪುನೀತ್‌ ರಾಜ ಕುಮಾರ್‌ ಅವರ ವ್ಯಕ್ತಿತ್ವದ ಕುರಿತು ಭಾವುಕವಾದ ನುಡಿನಮನವೊಂದನ್ನು ಹಂಚಿಕೊಂಡಿದ್ದಾರೆ. ಆ ಪತ್ರದ ಸಾಲುಗಳು ಇಂತಿವೆ.

ದೊಡ್ಮನೆಯ ದೊರೆ,
ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…
ಸದಾ ಹಸನ್ಮುಖಿತನ ,
ತಾಳ್ಮೆಯ ಪ್ರತಿರೂಪ ,
ಎಲ್ಲರೂ ನಮ್ಮವರೆಂದು ಭಾವಿಸುವ ವಿಶೇಷಗುಣ…ಎಲ್ಲರನ್ನು ಸಮಾನರಾಗಿ ಕಾಣುವ ಮಗು ಮನಸ್ಸು… ಚಿತ್ರರಂಗವೇ ಕುಟುಂಬವೆಂದು ಭಾವಿಸುವ ಸಂಸ್ಕಾರ…
ಮಹಾಸಂತನ ಸೌಮ್ಯತೆ …
ಭೂಮಿ ತೂಕದ ಘನತೆ…
ಕಷ್ಟಕ್ಕೆ ಮಿಡಿಯುವ ಹೃದಯ, ಕೈಲಾದಷ್ಟು ಸಹಾಯ ಮಾಡುವ ಉದಾರತೆ, ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬ ನೀತಿ….
ತಂದೆಯ ಹಿರಿಮೆ,ಮನೆತನದ ಗೌರವ ಎರಡಕ್ಕೂ ಗರಿಮೆಯಾಗಿ ಬದುಕಿದ ರೀತಿ ಅಮೋಘ …

ದೊಡ್ಮನೆಯ ದೊರೆ
ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ…
ಕನ್ನಡ ಪ್ರೇಮ ನೆಲ ಜಲದ ಮೇಲೆ ಇದ್ದ ಅಪಾರ ಗೌರವ …
ಯುವಪೀಳಿಗೆಗೆ ಸದಾ ಮಾದರಿಯಾಗಿದ್ದ ಹುರುಪು…
ಅಭಿಮಾನಿಗಳನ್ನ ಅಭಿಮಾನದಿಂದ ಅಭಿಮಾನಿಯಂತೆಯೇ ಪ್ರೀತಿಸಿದ
ಅಜಾತಶತ್ರು…
ದಿನನಿತ್ಯ ಶಿಸ್ತಿನ ವ್ಯಾಯಾಮ, ಆರೋಗ್ಯದ ಮೇಲೆ ಕಾಳಜಿ,
ಆಹಾರವನ್ನು ಪ್ರೀತಿಸುವ ಗುಣ,
ಸದಾ ಹೊಸತನವನ್ನು ಹಿಂಬಾಲಿಸುವ,ಅನ್ವೇಷಿಸುವ, ವಿಶ್ಲೇಷಿಸುವ ಮನೋಭಾವ..
ಸಮಯಪ್ರಜ್ಞೆ ಹಾಗೂ ಸಮಯದ ಮೇಲಿಟ್ಟಿದ್ದ ಗೌರವ… ಸದಾ ಒಂದಲ್ಲ ಒ೦ದು ಕೆಲಸದಲ್ಲಿ ಮಗ್ನರಾಗುತ್ತಿದ್ದ ರೀತಿ…
ಎಲ್ಲ ಕ್ಷೇತ್ರಗಳ ಬಗ್ಗೆಯೂ ಮಾಹಿತಿ ತಿಳಿಯುವ ಹಂಬಲ ಹಾಗೂ ಕುತೂಹಲ..
ಅಪಾರವಾದ ವ್ಯವಹಾರಜ್ಞಾನದ ಪಾಂಡಿತ್ಯ…
ಕುಟುಂಬಕ್ಕೆ ಮೊದಲ ಆದ್ಯತೆ, ಸ್ನೇಹಕ್ಕೆ ನೀಡುತ್ತಿದ್ದ ಮನ್ನಣೆ… ಸಂಬಂಧಗಳಿಗೆ ತೋರುತ್ತಿದ್ದ ಪ್ರೀತಿ…
ಕಲೆಯನ್ನು ಪ್ರೋತ್ಸಾಹಿಸಿ, ಕಲಾವಿದರನ್ನು ಗೌರವಿಸುತ್ತಿದ್ದ ಸದ್ಗುಣ, ಬರಹಗಾರರನ್ನು ಶಾರದೆ ಮಕ್ಕಳೆಂದು ಭಾವಿಸುತ್ತಿದ್ದ ಶ್ರೇಷ್ಠತೆ …
ನಿರ್ದೇಶಕರ ಕನಸಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿ ಕೊಳ್ಳುವ ಕರ್ತವ್ಯನಿಷ್ಠೆ..
ವಿನಯ,ವಿಧೇಯತೆ ಸಹಕಾರಮೂರ್ತಿ…

ಸದಾ ಹಾಡು ಗುನುಗುವ ಸಂಗೀತ ಪ್ರೇಮಿ.. ಸಿನಿಮಾ ತಂತ್ರಜ್ಞಾನದ ವಿಚಾರದಲ್ಲಿ ಸದಾ 1ಹೆಜ್ಜೆ ಮುಂದೆ…
ಎಲ್ಲವನ್ನೂ ದಕ್ಕಿಸಿಕೊಳ್ಳುವ ಧೈರ್ಯ ಹಾಗೂ ಛಲ…
ಎಲ್ಲರಲ್ಲಿಯೂ ಒಂದೊಂದು ವಿಶೇಷತೆಯನ್ನು ಗುರುತಿಸಿ ಶ್ಲಾಘಿಸುವ ಜಾಣ್ಮೆ,
ಸರಳತೆಯ ಸಾಹುಕಾರ
ನಿಮಗೆ ಸದಾ ಚಿರರುಣಿ ನಿಮ್ಮವನಾಗಿ ಸ್ವೀಕರಿಸಿದ್ದಕ್ಕೆ …
ನಿಮ್ಮ ಒಡನಾಟ ನೀಡಿದ್ದಕ್ಕೆ …
ಸದಾ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕೆ…
ನಿಮ್ಮ ಜೀವನದ ಪುಟಗಳಲ್ಲಿ ಒಂದೆರಡು ಸಾಲುಗಳನ್ನು ನೀಡಿದಕ್ಕೆ…
ನಿಮ್ಮೊಡನೆ ಕಳೆದ ಪ್ರತಿ ಕ್ಷಣವೂ ದೇವರು ಕೊಟ್ಟ ವರವೆಂದೇ ಭಾವಿಸುತ್ತೇನೆ …
ನಿಮ್ಮಂತಹ ಮಹಾನ್ ಚೇತನಗಳಿಗೆ ಆ ದೇವರು ಎಂದೆಂದೊ ದೀರ್ಘ ಆಯುಷ್ಯ ನೀಡುವಂತಾಗಲಿ ..
ನಿಮ್ಮ ಅಭಿಮಾನಿಗಳಿಗೆ , ಇಡೀ ಚಿತ್ರರಂಗಕ್ಕೆ ಹಾಗೂ ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆಯ ನೋವನ್ನು ಭರಿಸುವ೦ತಹ ಶಕ್ತಿ ನೀಡಲಿ …
ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್
ನಿಮಗೆ ನನ್ನ “ನುಡಿ ನಮನ”

  • ಚೇತನ್ ಕುಮಾರ್

Related Posts

error: Content is protected !!