ಅಪ್ಪು ಬಿಟ್ಟು ಹೋದ ಜಾಗವನ್ನು ಯಾರಿದಂಲೂ ತುಂಬಲು ಸಾಧ್ಯವಿಲ್ಲ-ಸುದೀಪ್‌ ಭಾವುಕ ಪತ್ರ

ನಟ ಕಿಚ್ಚ ಸುದೀಪ್‌ ಕನಲಿ ಹೋಗಿದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ಸಾವು ಅವರನ್ನು ತೀವ್ರವಾಗಿ ಘಾಸಿಗೊಳಿಸಿದೆ. ಚಿತ್ರೀಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಗಿದ್ದ ಸುದೀಪ್‌ ವಿಷಯ ಗೊತ್ತಾಗಿ ಶುಕ್ರವಾರವೇ ಬೆಂಗಳೂರಿಗೆ ವಾಪಾಸ್‌ ಆಗಿ ಪುನೀತ್‌ ರಾಜಕುಮಾರ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇದೀಗ ಅಂದ್ರೆ ಶನಿವಾರ ಕಿರಿಯ ಗೆಳೆಯ ಅಪ್ಪು ನೆನಪಿಸಿಕೊಂಡು ಭಾವುಕ ಪತ್ರವೊಂದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲ ಎಂದು ದು:ಖ ವ್ಯಕ್ತಪಡಿಸಿದ್ದಾರೆ. ಅವರು ಹಂಚಿಕೊಂಡ ಪತ್ರದ ವಿವರ ಇಂತಿದೆ….

‘ ಇದು ಬಾಲ್ಯದಿಂದಲೂ ಬಂದ ಪ್ರಯಾಣ. ನಾವು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯದಾಗ ಅವರು ಆಗಲೇ ಸ್ಟಾರ್‌ ಆಗಿದ್ದರು. ಅವರು ಭಾಗ್ಯವಂತ ಚಿತ್ರದ ಯಶಸ್ವಿ ಪ್ರವಾಸದಲ್ಲಿದ್ದರು.ಅದು ದೈತ್ಯಾಕಾರದ ಹಿಟ್‌ ಆಗಿತ್ತು.ನನ್ನ ತಂದೆ ಚಿತ್ರರಂಗದವರಿಗೆ ಚಿರಪರಿಚಿತ ಹೆಸರಾಗಿದ್ದರಿಂದ ಪುನೀತ್‌ ಅವರನ್ನು ಅವರ ಥಿಯೇಟರ್‌ ಭೇಟಿಯ ನಂತರ ಮಧ್ಯಾಹ್ನ ಊಟಕ್ಕೆ ಅವರ ಜನರು ಮನೆಗೆ ಕರೆತಂದರು.ಆಗ ಅವರನ್ನು ನಾನು ಮೊದಲ ಬಾರಿಗೆ ಭೇಟಿಯಾದೆ ಮತ್ತು ಪ್ರಾಯಶ: ವಯಸ್ಸಿನ ಅಂಶವು ನಮ್ಮನ್ನು ತಕ್ಷಣವೇ ಬೆರೆಯುವಂತೆ ಮಾಡಿತು.ಅವರು ಊಟದ ಉಪಚಾರಕ್ಕಿಂತ ನನ್ನ ಆಟಿಕೆಗಳ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದರು.ಅಪ್ಪು ಮತ್ತು ನಾನು ಆಟದಲ್ಲಿ ನಿರತರಾಗಿದ್ದಾಗ ಒಬ್ಬರು ಪುನೀತ್‌ಗೆ ಊಟ ಮಾಡಿಸಲು ಮಹಿಳೆಯೊಬ್ಬರು ಅವರ ಹಿಂದೆಯೇ ಸುತ್ತುತ್ತಿದ್ದು ನನಗಿನ್ನೂ ನೆನಪಿದೆ.

ಅವರು ಖುಷಿಯಾಗಿದ್ದಿದ್ದನ್ನ ಕಂಡು ನಾನೂ ಖುಷಿಯಾಗಿದ್ದೆ. ಪುನೀತ್ ಅವರನ್ನ ನೋಡಲು ನಮ್ಮ ಅಕ್ಕ-ಪಕ್ಕದ ಮನೆಯವರೆಲ್ಲಾ ನಮ್ಮ ಮನೆಯ ಮುಂದೆಯೇ ನೆರೆದಿದ್ದರು. ಯಾಕಂದ್ರೆ, ಪುನೀತ್ ಅದಾಗಲೇ ಸ್ಟಾರ್ ಆಗಿದ್ದವರು. ಹೇಳಿ ಕೇಳಿ ಅವರು ಲೆಜೆಂಡ್ ಡಾ.ರಾಜ್‌ಕುಮಾರ್ ಅವರ ಪುತ್ರ’ ಅಂದಿನಿಂದ ನಾವು ಕೆಲ ಬಾರಿ ಭೇಟಿಯಾಗಿದ್ದೇವೆ ಮತ್ತು ಇದೇ ಬಾತೃತ್ವದ ಸಹದ್ಯೋಗಿಗಳಾಗಿ ಹೋದೆವು. ಬಳಿಕ ನಾವಿಬ್ಬರೂ ಸಿನಿಮಾ ರಂಗಕ್ಕೆ ಸೇರಿದ್ವಿ. ಅವರು ಒಳ್ಳೆಯ ನಟ, ಅತ್ಯುತ್ತಮ ಡ್ಯಾನ್ಸರ್ ಹಾಗೂ ಫೈಟರ್. ಇಂದು ಚಿತ್ರರಂಗ ಅವರಿಲ್ಲದೆ ಅಪೂರ್ಣವಾಗಿದೆ. ಕಾಲ ಬಹಳ ಕ್ರೂರಿ. ನಿನ್ನೆ ನಾನು ಬೆಂಗಳೂರಿಗೆ ಬಂದಿಳಿದು, ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಹೋದಾಗ ನನ್ನ ಉಸಿರು ಭಾರವಾಗ ತೊಡಗಿತು. ಅವರು ಮಲಗಿರುವುದನ್ನ ನೋಡಿ ಅನೇಕ ಪ್ರಶ್ನೆಗಳು ತಲೆಯಲ್ಲಿ ಮೂಡಿದವು. ಯಾಕೆ? ಹೇಗೆ? ಇದೇ ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಅವರನ್ನ ಹೆಚ್ಚು ಹೊತ್ತು ನನ್ನಿಂದ ನೋಡಲು ಸಾಧ್ಯವಾಗಲಿಲ್ಲ. ಆ ನೋಟ ನನಗಿನ್ನೂ ಕಾಡುತ್ತಲೇ ಇದೆ. ಶಿವಣ್ಣ ಅವರ ಪರಿಸ್ಥಿತಿಯನ್ನ ಕಂಡು ನೋವಾಗುತ್ತಿದೆ. ‘’ಪುನೀತ್ ನನಗಿಂತ 13 ವರ್ಷ ಚಿಕ್ಕವನು. ಇದೇ ತೋಳಲ್ಲಿ ಅವನನ್ನ ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಸಾಕಷ್ಟು ನೋಡಿದ್ದೇನೆ. ನಾನು ಇನ್ನೇನು ನೋಡೋಕೆ ಇದೆ’’ ಅಂತ ಶಿವಣ್ಣ ನನಗೆ ಹೇಳಿದರು. ಆ ಮಾತು ಈಗಲೂ ನನ್ನನ್ನ ಕಾಡುತ್ತಿದೆ. ಎಲ್ಲರೂ ಆಘಾತಗೊಂಡಿದ್ದಾರೆ, ಜರ್ಜರಿತಗೊಂಡಿದ್ದಾರೆ. ಈ ವಾಸ್ತವವನ್ನು ಅರಗಿಸಿಕೊಳ್ಳಲು ಬಹಳ ಸಮಯ ಬೇಕು. ಅವರು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆ ಜಾಗ ಯಾವತ್ತಿದ್ದರೂ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಸೇರಿದ್ದು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ’’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
– ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!