ದೇವರ ದರ್ಶನಕ್ಕೆ ನಿಂತ ಭಕ್ತ ಸಮೂಹದ ಸಾಲು ಕೊನೆಯಾಗಬಹುದು ಆದರೆ ಅಪ್ಪು ಅಂತಿಮ ದರ್ಶನಕ್ಕೆ ಹರಿದು ಬಂದಿದ್ದ ಜನಸಾಗರದ ಸಾಲು ಮಾತ್ರ 48 ಗಂಟೆಗಳು ಕಳೆದರೂ ಇನ್ನೂ ಕಮ್ಮಿಯಾಗಿಲ್ಲ…
ಕನ್ನಡದ ಪವರ್‌ಫುಲ್ ನಟ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಗಳೆಂದರೆ ದೇವ್ರು. ಆದರೆ, ಅಭಿಮಾನಿಗಳಿಗೆ ಪುನೀತ್ ಅಂದರೆ ದೇವ್ರು. ಆ ದೇವರನ್ನು ನೋಡಲು ನಿನ್ನೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಧಾವಿಸಿ ಬಂದಿದ್ದಾರೆ. ಈಗಲೂ ರಾಜ್ಯ, ಅಂತಾರಾಜ್ಯಗಳಿಂದಲೂ ಅಭಿಮಾನಿಗಳು ಆಗಮಿಸಿ, ಪ್ರೀತಿಯ ಹೀರೋನ ದರ್ಶನ ಪಡೆದು ಕಣ್ಣೀರು ಸುರಿಸುತ್ತಿದ್ದಾರೆ.
ಹೌದು, ಪುನೀತ್‌ರಾಜಕುಮಾರ್ ಅವರನ್ನು ಒಂದೊಮ್ಮೆ ನೋಡಬೇಕು, ಅವರ ಮುಂದೆ ನಿಂತು ಕೊನೆಯ ಸಲ ಕೈಮುಗಿಯಬೇಕು ಅಂತ ಸಾಲುಗಟ್ಟಿರುವ ಅಭಿಮಾನಿಗಳ ಸಂಖ್ಯೆಗೇನೂ ಲೆಕ್ಕವಿಲ್ಲ. ನಿನ್ನೆ ಪುನೀತ್ ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆಯೇ ಅತ್ತ, ವಿಕ್ರಮ್ ಆಸ್ಪತ್ರೆ ಮುಂದೆ ಅಭಿಮಾನಿಗಳು ಜಮಾಯಿಸಿದರು. ನಂತರ ಕಂಠೀರವ ಸ್ಟೇಡಿಯಂಗೆ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದಂತೆಯೇ, ಎಲ್ಲಿಂದ ಹರಿದೋ ಬಂತೋ ಏನೋ, ಎತ್ತ ನೋಡಿದರೂ ಜನ ಜನ ಜನ. ಕಣ್ಣಾಯಿಸಿದ ಕಡೆಯೆಲ್ಲ ಅಭಿಮಾನಿಗಳದ್ದೇ ಗೋಳಾಟ.
ನಿನ್ನೆ ಮಧ್ಯಾಹ್ನದಿಂದ ಹಿಡಿದು, ರಾತ್ರಿ ಇಡೀ ಅಭಿಮಾನಿಗಳು ಸಾಲುಗಟ್ಟಿ ಬಂದು ಪುನೀತ್ ಅವರ ದರ್ಶನ ಪಡೆದಿದ್ದು ನಿಜಕ್ಕೂ ದುಃಖ ತರುವಂಥದ್ದು. ಶನಿವಾರವೂ ಸಹ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟೇಡಿಯಂನಲ್ಲಿ ಸೇರಿ ತಮ್ಮ ಪ್ರೀತಿಯ ನಾಯಕರನ್ನು ಕಣ್ತುಂಬಿಕೊಂಡರು. ಸಂಜೆ ಐದು ಆಗಿದ್ದರೂ, ಜನಸಾಗರ ಹರಿದುಬರುತ್ತಲೇ ಇತ್ತು. ನಿನ್ನೆಯಿಂದ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪುನೀತ್ ಅವರನ್ನು ನೋಡಿ ಭಾವುಕರಾಗಿದ್ದಾರೆ.
ಡಾ.ರಾಜಕುಮಾರ್ ಅವರ ನಿಧನದ ಸಂದರ್ಭದಲ್ಲೂ ಇಷ್ಟೇ ಜನಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈಗ ಪುನೀತ್ ಅವರನ್ನು ನೋಡಬೇಕು ಅಂತಾನೇ, ರಾಜ್ಯದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ರಾತ್ರೋ ರಾತ್ರಿ ಬಂದಿದ್ದಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಮ್ಮ ಪ್ರೀತಿಯ ಹೀರೋನನ್ನು ನೋಡಿ ಕಣ್ಣೀರಾಗಿದ್ದಾರೆ.