Categories
ಸಿನಿ ಸುದ್ದಿ

ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್!!

ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಸುದೀಪ್ ಅವರ ಬಯೋಗ್ರಫಿ ಆಡಿಯೋ ಮತ್ತು ಇ ಬುಕ್ ಆಗಿ ಅವರ ಹುಟ್ಟು ಹಬ್ಬದಂದು ಬಿಡುಗಡೆ ಆಗುತ್ತಿದೆ.
ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ “ಕನ್ನಡ ಮಾಣಿಕ್ಯ ಕಿಚ್ಚ” ಹೆಸರಿನ ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿ ದಾಖಲೆ ರೀತಿಯಲ್ಲಿ ಮಾರಾಟ ಆಗಿತ್ತು. ಈ ಪುಸ್ತಕವೇ ಇಂದು ಮೈ ಲ್ಯಾಂಗ್ ಆಪ್ ಮೂಲಕ ಆಡಿಯೋ ಬಯೋಗ್ರಫಿ ಮತ್ತು ಇ ಬುಕ್ ರೂಪದಲ್ಲಿ ಹೊರ ಬರುತ್ತಿದೆ.


ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಈ ಪುಸ್ತಕಕ್ಕೆ ಧ್ವನಿ ನೀಡಿದ್ದು, ಸುದೀಪ್ ಅವರ ಬದುಕಿನ ಅನೇಕ ಘಟನೆಗಳನ್ನು ಮನಸೆಳೆಯುವಂತೆ ಓದಿದ್ದಾರೆ. ಈ ಬಾರಿಯ ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಈ ಎರಡು ಉಡುಗೊರೆಯನ್ನು ನೀಡುತ್ತಿದೆ ಮೈ ಲ್ಯಾಂಗ್ ಆಪ್.


ಬೆಂಗಳೂರಿನ ಕಾಯಕ ಪ್ರಕಾಶನ ಹೊರತಂದ ಈ ಕೃತಿಯು ಬಿಡುಗಡೆಯಾದ ಎರಡನೇ ದಿನಕ್ಕೆ ಮರು ಮುದ್ರಣಗೊಂಡಿತ್ತು.


ಆಡಿಯೋ ಮತ್ತು ಇ ಪುಸ್ತಕಕ್ಕಾಗಿ www.mylang.in ಇಲ್ಲಿಗೆ ಭೇಟಿ ಕೊಡಿ.

Categories
ಸಿನಿ ಸುದ್ದಿ

ಕುತೂಹಲ ಕೆರಳಿಸಿತು ಸುದೀಪ್- ಸಿಎಂ ಭೇಟಿ ; 100 % ಅನುಮತಿ ಕೇಳಿದ್ರಾ ಕಿಚ್ಚ ?

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ವ ಸುದೀಪ್,ಮಂಗಳವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನ ಭೇಟಿ ಮಾಡಿದ್ದಾರೆ. ವಿಧಾನ ಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿ ಗಳನ್ನು ಸದ್ದಿಲ್ಲದೆ ಭೇಟಿ ಮಾಡಿರುವ ಸುದೀಪ್ ಕುತೂಹಲ ಕೆರಳಿಸಿದ್ದಾರೆ. ಅಷ್ಟಕ್ಕೂ, ಕಿಚ್ಚಸುದೀಪ್, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ವೈಯಕ್ತಿಕ ಕಾರಣಕ್ಕೋ ಅಥವಾ ಚಿತ್ರರಂಗದ ಪರವಾಗಿಯೋ ಗೊತ್ತಿಲ್ಲ. ಆದರೆ, ಸಿನಿಮಾ ಲೋಕದ ಏಳು- ಬೀಳಿನ ಕುರಿತಾಗಿಯೇ ಸಿಎಂ ಜತೆಗೆ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಸಿಎಂ ಭೇಟಿಯ ಕುರಿತು ನಟ ಸುದೀಪ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಿಎಂ ಭೇಟಿ ಮಾಡಿದ್ದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್‌, ಭೇಟಿಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದಾರೆ. ಬೆಸ್ಟ್‌ ವಿಷಸ್‌ ಆಲ್ವೇಸ್‌ ಎಂದು ಕಮೆಂಟ್‌ ಮಾಡಿದ್ದಾರೆ. ಈ ಮಧ್ಯೆ ನಟ ಸುದೀಪ್‌ ತಮ್ಮನ್ನು ಭೇಟಿ ಮಾಡಿದ್ದನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಕೂಡ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಭೇಟಿಯ ವೇಳೆ ಚಿತ್ರ ರಂಗದ ಅನೇಕ ಸಂಗತಿಗಳ ಕುರಿತು ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಲಾಯಿತು ಎಂದಿದ್ದಾರೆ.

ನಿರ್ದಿಷ್ಟವಾಗಿ ಯಾವವಿಚಾರ ಕುರಿತು ಚರ್ಚೆ ನಡೆಯಿತು ಎನ್ನುವುದನ್ನು ಅವರು ಕೂಡ ಹೇಳಿಕೊಂಡಿಲ್ಲ, ಆದರೆ ಕೊರೊನಾ ಮೂರನೇ ಅಲೆಯ ಅವತಾರ ನೋಡಿಕೊಂಡು ಆದಷ್ಟು ಬೇಗ ಚಿತ್ರಮಂದಿರಕ್ಕೆ‌ 100 ಅನುಮತಿ ಕೊಡುವಂತೆ ಕೇಳಿಕೊಂಡಿರ್ತಾರೆ ಅದಂತೂ ಗ್ಯಾರಂಟಿ. ಕಿಚ್ಚನ ಕೋಟಿಗೊಬ್ಬ 2ಹಾಗೂ ವಿಕ್ರಾಂತ್ ರೋಣ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಗೆ ಸಜ್ಜಾಗುತ್ತಿವೆ. ತಮ್ಮ ಹುಟ್ಟುಹಬ್ಬಕ್ಕೂ ಎರಡು ದಿನ ಮುಂಚಿತವಾಗಿ ಸಿಎಂ ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Categories
ಸಿನಿ ಸುದ್ದಿ

ಭಜರಂಗಿಗೆ ಬೆದರಿಕೆ ಹಾಕುವಷ್ಟು ಸೊಕ್ಕು ಇವರಿಗೆ ಬಿಟ್ರೆ ಬೇರಾರಿಗೂ ಇಲ್ಲ ; ಸಿನಿಲಹರಿಗೆ ಹರ್ಷ ಹೇಳಿದ್ದಿಷ್ಟು !

ಬಹು ನಿರೀಕ್ಷಿತ ಸಿನಿಮಾ ‘ಭಜರಂಗಿ 2 ‘ ರಿಲೀಸ್‌ ಕ್ಯಾನ್ಸಲ್‌ ಆಗಿದ್ದೇಕ್ಕೆ ? ಹ್ಯಾಟ್ರಿಕ್‌ ಹೀರೋ ಶಿವಣ್ಣ ಫ್ಯಾನ್ಸ್‌ ಮಾತ್ರವಲ್ಲ ಇಡೀ ಕರುನಾಡಿನ ಸಿನಿ ಪ್ರೇಕ್ಷಕರೇ ಬೇಸರ ಮಾಡಿಕೊಂಡು ಕುಳಿತಿದ್ದಾರೆ. ಅನೌನ್ಸ್‌ ಆಗಿದ್ದ ಸಿನಿಮಾದ ರಿಲೀಸ್‌ ಡೇಟ್‌ ಯಾಕೆ ಮುಂದಕ್ಕೆ ಹೋಯ್ತು ? ಭಜರಂಗಿ ಅರ್ಭಟಕ್ಕೆ ಯಾರು ತಡೆ ಹಾಕಿದ್ದು? ಅಭಿಮಾನಿಗಳಲ್ಲಿರುವ ಪ್ರಶ್ನೆ ಇದು. ಸೆಪ್ಟೆಂಬರ್ 10ಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್‌ ಮಾಡಿದ್ದ ಚಿತ್ರ ತಂಡ ಈಗ ಉಲ್ಟಾ ಹೊಡೆದಿದ್ದು ಯಾಕೆ ? ಈ ಪ್ರಶ್ನೆಗಳಿಗೆಲ್ಲ ಇಲ್ಲಿ ಉತ್ತರವಾಗಿದ್ದಾರೆ ನಿರ್ದೇಶಕ ಎ. ಹರ್ಷ.

Exclusive …..

1 ನೀವೇ ಅನೌನ್ಸ್‌ ಮಾಡಿದ್ದ ರಿಲೀಸ್‌ ಡೇಟ್‌ ಯಾಕೆ ಈಗ ಕ್ಯಾನ್ಸಲ್‌ ಆಯ್ತು?
ಕಾರಣ ಏನು ಅಂತ ಹೇಳಿದ್ದು ಈಗಾಗ್ಲೇ ನಿಮ್ಗೂ ಗೊತ್ತಿರಬಹುದು, ಕೊರೋನಾ ಪರಿಸ್ಥಿತಿ ಮುಂದೆ ಕೂಡ ಯಾಕೋ ತಿಳಿಯಾಗೋ ಹಾಗೆ ಕಾಣುತ್ತಿಲ್ಲ. ಜತೆಗೆ ಸರ್ಕಾರ ಈಗಾಗ್ಲೇ ಗಡಿ ಜಿಲ್ಲೆಗಳಲ್ಲಿ ವಿಧಿಸಿರುವ ವೀಕೆಂಡ್‌ ಕರ್ಪ್ಯೂ ಮುಗಿಯೋ ಹಾಗೆಯೂ ಇಲ್ಲ. ನೈಟ್‌ ಕರ್ಪ್ಯೂ ಕೂಡ ಜಾರಿಯಲ್ಲಿದೆ. ಹಂಡ್ರೆಡ್ ಪರ್ಸೆಂಟ್‌ ಆಕ್ಯೂಪೆನ್ಸಿ ಸಿಗೋದು ಕೂಡ ಡೌಟು. ಅದೇ ಕಾರಣಕ್ಕೆ ಸದ್ಯಕ್ಕೆ ಈಗ ಬೇಡ ಅನ್ಕೊಂಡಿದ್ದೇವೆ.


2 ಇದೊಂದು ರೀತಿ ಫ್ಯಾನ್ಸ್‌ ಗೆ ಆಸೆ ಹುಟ್ಟಿಸಿ, ಓಡಿ ಹೋದಂತೆ ಅಲ್ವಾ?


ಹೌದು, ಬರ್ತೀವಿ ಅಂತ ಹೇಳಿದ್ದು ನಿಜವೇ, ಆದ್ರೆ ಪರಿಸ್ಥಿತಿ ಈಗ ಸರಿಯಿಲ್ಲ ಅಲ್ವಾ? ಅದಕ್ಕೆ ಟೀಮ್‌ ಕಡೆಯಿಂದ ಆದ ಡಿಸೈಡ್‌ ಇದು. ಅಂದುಕೊಡಂತೆ ಸಿನಿಮಾ ರಿಲೀಸ್‌ ಆಗ್ಲಿಲ್ಲ ಅಂತ ನಂಗೂ ಬೇಜಾರಿದೆ. ಯಾಕಂದ್ರೆ ರಿಲೀಸ್‌ ಆಗ್ತಿದೆ ಅಂತ ನಂಗೂ ಸಾಕಷ್ಟು ಖುಷಿ ಇತ್ತು. ಏನ್ಮಾಡ್ಲಿಕ್ಕೆ ಆಗುತ್ತೆ ಹೇಳಿ, ಸಿನಿಮಾಕ್ಕೆ ದುಡ್ಡು ಹಾಕಿದವರು ನಿರ್ಮಾಪಕರು. ಅವ್ರ ತೀರ್ಮಾನವೂ ಇಲ್ಲಿ ಮುಖ್ಯವಾಗುತ್ತೆ. ಯಾಕಂದ್ರೆ ಅವರು ಕಷ್ಟ ಪಟ್ಟು ದುಡ್ಡು ಹಾಕಿ ಸಿನಿಮಾ ಮಾಡಿದಾಗ, ಅವ್ರೀಗೂ ವಾಪಾಸ್‌ ಹಣ ಬರ್ಬೇಕು ಅಲ್ವಾ?


3 ಅದು ಸರಿ, ಮುಂದೆ ರಿಲೀಸ್‌ ಯಾವಾಗ?

ಸದ್ಯಕ್ಕೆ ಪ್ಲಾನ್‌ ಆಗಿಲ್ಲ. ಬಹುಶ: ಗಣೇಶ್‌ ಹಬ್ಬ ಮುಗಿದ್ಮೇಲೆ ಒಂದು ತೀರ್ಮಾನಕ್ಕೆ ಬರ್ತೀವಿ. ಆದ್ರೂ ಮೂರನೇ ಅಲೆ ಅಂತಾರೆ, ಲಾಕ್‌ ಡೌನ್‌ ಆಗುತ್ತೆ ಅಂತಾರೆ, ಕೊರೋನಾ ಹೆಚ್ಚಾಗುತ್ತಲೇ ಇದೆ ಅಂತಲೂ ಹೇಳ್ತಿದ್ದಾರೆ. ಪರಿಸ್ಥಿತಿ ಹಿಂಗೆಲ್ಲ ಇದ್ರೆ ಚಿತ್ರಮಂದಿರಕ್ಕೆ ಯಾರ್‌ ಸಿನ್ಮಾ ನೋಡ್ಲಿಕ್ಕೆ ಬರ್ತಾರೆ ಸರ್?‌ ನಮ್‌ ಸಿನ್ಮಾಕ್ಕೆ ಚಿತ್ರಮಂದಿರಗಳಿಗೆ ಜನ ಬರ್ಬೇಕು, ಅವ್ರು ಸಿನ್ಮಾ ನೋಡಿ ಮೆಚ್ಚಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಶಿವಣ್ಣ ಫ್ಯಾನ್ಸಿಗೆ ಸಿನ್ಮಾ ಮಜಾ ಕೊಡ್ಬೇಕು. ಆಮೂಲಕವೇ ನಿರ್ಮಾಪಕರಿಗೆ ಹಾಕಿದ ಹಣ ವಾಪಾಸ್‌ ಬರ್ಬೇಕು ಅನ್ನೋದು ನಮ್‌ ಲೆಕ್ಕಚಾರ.


4 ‘ಭಜರಂಗಿ 2 ʼ ಈಗ ದೊಡ್ಡ ಕ್ಯಾನ್ವಾಸ್‌ ಮೇಲೆ ಬರ್ತಿದೆ, ವಿಶೇಷ ಅಂತ ಏನ್‌ ಹೇಳ್ಬಹುದು ?

ನಮ್ಗೆ ಎಲ್ಲವೂ ಇಲ್ಲಿ ಸ್ಪೆಷಲ್.‌ ಯಾಕಂದ್ರೆ , ಪ್ರತಿ ಸಿನ್ಮಾ ಕೂಡ ಹಾಗೆ ಅಲ್ವಾ? ನನ್ನ ದೃಷ್ಟಿಯಲ್ಲಿ ಅದು ಸೀಕ್ವೆಲ್‌ ಆದ್ರೂ ಕೂಡ ಕಥೆ, ಚಿತ್ರಕಥೆ, ಸಂಭಾಷಣೆ, ಮೇಕಿಂಗ್‌ ಜತೆಗೆ ಪಾತ್ರವರ್ಗದ ವಿಚಾರದಲ್ಲೂ ಎಲ್ಲವೂ ಇಲ್ಲಿ ತಾಜಾ. ನನ್ನದೇ ಕಲ್ಪನೆಯಲ್ಲಿ ಒಂದೊಳ್ಳೆಯ ಕಥೆ ಹೆಣೆದು. ಅದಕ್ಕೆ ತಕ್ಕಂತೆ ಕ್ಯಾರೆಕ್ಟರ್‌ ಗಳನ್ನು ಸೃಷ್ಟಿಸಿ, ಅದಕ್ಕೆ ತಕ್ಕಂತೆ ಕಲಾವಿದರನ್ನು ಹಾಕ್ಕೊಂಡು, ಸಿನ್ಮಾ ಮಾಡಿದ್ದು ಪ್ರೇಕ್ಷಕರಿಗೆ ಹೊಸದೊಂದು ಸಿನ್ಮಾ ತೋರಿಸಬೇಕು ಅಂತಲೇ. ಅಂತಹದೊಂದು ಹೊಸ ಭಜರಂಗಿ ಇಲ್ಲಿದ್ದಾನೆ. ಕಥೆಯ ಜತೆಗೆ ಮೇಕಿಂಗ್‌ ನಲ್ಲೂ ಎಲ್ಲವೂ ಇಲ್ಲಿ ಅದ್ದೂರಿಯೇ.

Categories
ಸಿನಿ ಸುದ್ದಿ

ಕಿಚ್ಚ ಕಾಲಿಡಲಿರುವ ಕಬ್ಜ ಕೋಟೆ ಹಿಂಗೈತೆ ; ಭಾರ್ಗವ್ ಭಕ್ಷಿ ಅಬ್ಬರಕ್ಕೆ ಅಖಾಡ ಸಜ್ಜು !

ರ್‌. ಚಂದ್ರು ಅವರ ಅದ್ದೂರಿ ಕನಸಿನ ʼಕಬ್ಜʼ ಕೋಟೆಗೆ ನಾವು ಲಗ್ಗೆ ಹಾಕಿದ್ದೇ ಬೇರೆ. ಎಲ್ಲರೂ ಅದರ ದ್ವಾರ ಭಾಗಿಲಿನಲ್ಲಿ ನುಸುಳಿ ಬಂದರು. ಆದರೆ ನಾವಿಲ್ಲಿ ಅದರ ಇನ್ನೊಂದು ದಾರೀಲಿ ನುಸುಳಿ ಬಂದೆವು. ಅಲ್ಲಿ ಹೆಕ್ಕಿ ತಂದ ಫುಲ್‌ ಡಿಟೈಲ್ಸ್‌ ಇಲ್ಲಿದೆ, ಅದೇನು ಅಂತ ನೀವೇ ನೋಡಿ….

`ಕಬ್ಜ’ ಆಲ್‌ಒವರ್ ಇಂಡಿಯಾ ಎದುರು ನೋಡ್ತಿರುವ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನ್ಮಾ. ಕೆಜಿಎಫ್ ನಂತರ ಕಬ್ಜ ಚಿತ್ರಕ್ಕಾಗಿ ಪ್ರೇಕ್ಷಕ ಕುಲ ಕಣ್ಣರಳಿಸಿ ಕಾಯ್ತಿದೆ. ಕಣ್ಣು ಕುಕ್ಕೋ ಮೇಕಿಂಗ್ ಜೊತೆಗೆ ಉಪ್ಪಿ ಹಾಗೂ ಕಿಚ್ಚ ಕಾಂಬೋ ಕಬ್ಜ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದೆ. ಇಬ್ಬರು ಖಡಕ್ ಲುಕ್ ಕೊಟ್ಟಿರೋ ಪೋಸ್ಟರ್ ಅಖಾಡದಲ್ಲಿ ಈಗಾಗಲೇ ಹವಾ ಎಬ್ಬಿಸಿದೆ. ಜಬರ್ದಸ್ತ್ ಪೋಸ್ಟರ್‌ನಿಂದ ಹಂಗಾಮ ಸೃಷ್ಟಿಸಿಕೊಂಡಿರುವ ಮುಕುಂದ ಮುರಾರಿ ಜೋಡಿ, ಥ್ರೋ ಔಟ್ ದಿ ಸಿನಿಮಾ ಮೂಲಕ ಇನ್ಯಾವ ರೀತಿ ಅಖಾಡವನ್ನ ಕಬ್ಜ ಮಾಡ್ಬೋದು ಎನ್ನುವ ಕೂತೂಹಲ ಸಿನಿರಸಿಕರಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಮಂದಿಯ ಮನಸ್ಸಲ್ಲೂ ರುದ್ರತಾಂಡವವಾಡ್ತಿದೆ.

ರಿಯಲ್‌ಸ್ಟಾರ್ ಉಪೇಂದ್ರರ ಕಬ್ಜ' ಚಿತ್ರದಲ್ಲಿ ಕಿಚ್ಚ ಹೆಂಗೆ ಕಾಣಿಸ್ತಾರೆ ಎನ್ನುವ ಕೌತುಕಕ್ಕೆ ಈಗಾಗಲೇ ಸ್ಕೆಚಸ್ ಪೋಸ್ಟರ್ ಬ್ರೇಕ್ ಹಾಕಿದೆ. ಆದರೆ, ಹಾಲಿವುಡ್‌ಗೆ ಸೆಡ್ಡು ಹೊಡೆಯುವ ರೇಂಜ್ ಗೆ ನಿರ್ಮಾಣಗೊಳ್ತಿರುವಕಬ್ಜ’ ಅಂಗಳಕ್ಕೆ ಕಿಚ್ಚ ಯಾವಾಗ ಧುಮ್ಕುತ್ತಾರೆ? ಕಬ್ಜ ಕೋಟೆಯಲ್ಲಿ ಕೋಟಿಗೊಬ್ಬ ಯಾವ್ ರೀತಿ ಧಗಧಗಿಸ್ತಾರೆ ಎನ್ನುವ ನಿರೀಕ್ಷೆ ಮಾತ್ರ ಸುದೀಪಿಯನ್ಸ್ ಕಣ್ಣಲ್ಲಿ ನರ್ತನ ಶುರುವಿಟ್ಟುಕೊಂಡಿದೆ. ಅಟ್ ದಿ ಸೇಮ್ ಟೈಮ್ ಸೂಪರ್‌ರಂಗ ಫ್ಯಾನ್ಸ್ ಕೂಡ ಎಕ್ಸೈಟೆಡ್ ಆಗಿದ್ದಾರೆ. ಮಲ್ಟಿಸ್ಟಾರರ್ ಮಹಾಕಾಂಬೋ ನೋಡೋದಿಕ್ಕೆ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹೀಗಾಗಿಯೇ, ಕಬ್ಜ' ಫಿಲ್ಮ್ ಕ್ಯಾಪ್ಟನ್ ಕೋಟಿ ಕೋಟಿ ಸುರಿದು ಅಖಾಡ ರೆಡಿಮಾಡಿಸುತ್ತಿದ್ದಾರೆ. ನೀಲ್ ಕಲ್ಪನೆಯಂತೆ ʼಕೆಜಿಎಫ್ʼ ಕೆತ್ತಿಕೊಟ್ಟ ಕಲಾನಿರ್ದೇಶಕ ಶಿವಕುಮಾರ್, ಇದೀಗ ಚಂದ್ರು ಕನಸಿನಂತೆಕಬ್ಜ’ ಕೋಟೆಯನ್ನ ನಿರ್ಮಾಣ ಮಾಡಿಕೊಡ್ತಿದ್ದಾರೆ.

ಕೊರೊನಾಗೂ ಮೊದಲು ʼಕಬ್ಜʼ ಕೋಟೆ ತಲೆ ಎತ್ತಿತ್ತು. ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಕೋಟಿ ಕೋಟಿ ಬೆಲೆಬಾಳುವ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ನರಾಚಿ ಲೋಕವನ್ನು ಸೃಷ್ಟಿಮಾಡಿಕೊಟ್ಟ ಶಿವುಕುಮಾರ್ ಅಂಡ್ ಟೀಮ್ `ಕಬ್ಜ’ ಚಿತ್ರಕ್ಕಾಗಿ ಹೆಚ್ಚುಕಮ್ಮಿ ೪೦ ಸೆಟ್‌ಗಳನ್ನ ನಿರ್ಮಿಸಿಕೊಟ್ಟಿದ್ದರು. ಕೋಟಿ ಬೆಲೆಬಾಳುವ ಕಾಸ್ಟ್ಲಿ ಸೆಟ್ಟುಗಳಲ್ಲಿ ʼಕಬ್ಜʼ ಟೀಮ್ ಚಿತ್ರೀಕರಣ ಮಾಡಿಕೊಳ್ಳುತ್ತಿತ್ತು, ಶೇಕಡ ೬೦ರಷ್ಟು ಚಿತ್ರೀಕರಣವು ಮುಗಿದಿತ್ತು. ಈ ಮಧ್ಯೆ ಕೊರೊನಾ ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಅಟ್ಟಹಾಸದಿಂದ ಶೂಟಿಂಗ್‌ಗೆ ಬ್ರೇಕ್ ಬಿತ್ತು. ಮಿನರ್ವ ಮಿಲ್ ಅಂಗಳದಲ್ಲಿ ತಲೆಎತ್ತಿದ್ದ ಕೋಟಿ ಸೆಟ್ಟುಗಳು ಬಿಸಿಲು-ಮಳೆ-ಗಾಳಿಗೆ ಮುರಿದುಬಿದ್ದವು. ಇದ್ರಿಂದ ಕೋಟಿ ಕೋಟಿ ನಷ್ಟಾನೂ ಆಯ್ತು . ಆದರೆ ಇದಕ್ಕೆಲ್ಲ ಲೆಕ್ಕಿಸದ ನಿರ್ಮಾಪಕರು ಹಾಳಾದ ಸೆಟ್ಟುಗಳನ್ನ ರೀ ಕನ್‌ಸ್ಟ್ರಕ್ಷನ್‌ ಮಾಡಿಸಿದ್ದಾರೆ. ಜೊತೆಗೆ ಹೊಸದಾಗಿ ೨೦ ಸೆಟ್ಟುಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಕೋಟಿಸೆಟ್‌ನಲ್ಲಿ ಪೂಜೆ ನೆರವೇರಿಸಿ ಸೆಟ್‌ವರ್ಕ್‌ ಗೆ ಚಾಲನೆ ಕೊಟ್ಟಿದ್ದಾರೆ. ಅದರ ಎಕ್ಸ್ಲೂಸಿವ್ ಫೋಟೋಗಳು ಸಿನಿಲಹರಿಗೆ ಲಭ್ಯವಾಗಿವೆ.

ಮಿನರ್ವ ಮಿಲ್‌ನಲ್ಲಿ ʼಕಬ್ಜʼ ಚಿತ್ರದ ಸೆಟ್‌ವರ್ಕ್ ಕೆಲಸ ಭರದಿಂದ ಸಾಗ್ತಿದೆ. ಇಂಟರ್‌ನ್ಯಾಷನಲ್ ಲೆವಲ್ ಆಫ್ ಕಂಟೆಂಟ್ ಪ್ಲಸ್ ಮೇಕಿಂಗ್‌ವುಳ್ಳ ಚಿತ್ರ ಆಗಿರೋದ್ರಿಂದ ಕಲಾನಿರ್ದೇಶಕ ಶಿವು ಅಂಡ್ ಟೀಮ್ ಕಣ್ಣಲ್ಲಿ ಕಣ್ಣಿಟ್ಟು ಕೆಲಸ ಮಾಡ್ತಿದ್ದಾರೆ. ಸೆಟ್-ಪ್ರಾಪರ್ಟಿ, ಕಾಸ್ಟ್ಯೂಮ್ಸ್‌, ವೆಹಿಕಲ್ಸ್ ಹೀಗೆ ಪಿನ್ ಟು ಪಿನ್ ಹೀಗೆ ಬರಬೇಕು ಅಂತ ನಿರ್ದೇಶಕ ಚಂದ್ರು ಅವರು ಪ್ಲ್ಯಾನ್ ರೂಪಿಸಿದ್ದು, ಕೆಜಿಎಫ್ ಚಿತ್ರದ ತಂತ್ರಜ್ಞರ ಬಳಗ ಪ್ಲ್ಯಾನ್‌ ಎಕ್ಸಿಕ್ಯೂಟ್ ಮಾಡುವಲ್ಲಿ ನಿರತವಾಗಿದೆ. ೧೦ ದಿನದಲ್ಲಿ ಸೆಟ್ ವರ್ಕ್ ಕಂಪ್ಲೀಟ್ ಆಗಲಿದ್ದು, ರಿಯಲ್‌ಸ್ಟಾರ್ ಉಪೇಂದ್ರ ಜೊತೆಗೆ ಕೋಟಿಗೊಬ್ಬ ಕಿಚ್ಚ ಧುಮುಕಲಿದ್ದಾರೆ. ಭಾರ್ಗವ್ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿರುವ ಕಿಚ್ಚ ಸುದೀಪ್, ರಿಯಲ್‌ಸ್ಟಾರ್ ಜೊತೆಗೆ ಗ್ಯಾಂಗ್‌ಸ್ಟರ್ ಆಗ್ತಾರಾ ಅಥವಾ ಗ್ಯಾಂಗ್‌ಸ್ಟರ್ ಉಪ್ಪಿಯೊಟ್ಟಿಗೆ ಕಾದಾಡ್ತಾರಾ ? ಈ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಇವರಿಬ್ಬರು ಒಂದಾಗಿ ಇತಿಹಾಸ ಸೃಷ್ಟಿಸೋದು ಮಾತ್ರ ಪಕ್ಕಾ.

ʼಕಬ್ಜʼ ಔಟ್ ಅಂಟ್ ಔಟ್ ಗ್ಯಾಂಗ್‌ಸ್ಟರ್ ಚಿತ್ರ. ಭೂಗತ ಲೋಕವನ್ನ ರೆಟ್ರೋ ಸ್ಟೈಲ್‌ ನಲ್ಲಿ ಎಕ್ಸ್ಟ್ರಾಡಿನರಿಯಾಗಿ ತೋರಿಸಬೇಕು ಎನ್ನುವುದು ತಾಜ್‌ಮಹಲ್ ಸಾರಥಿ ಚಂದ್ರು ಕನಸು. ಆ ಮಹಾಕನಸಿನ ಸಾಕಾರಕ್ಕೆ ಭೂಗತ ಲೋಕದಲ್ಲಿ ಓಂ' ಕಾರ ಬರೆದ ಉಪೇಂದ್ರ ಹಾಗೂ ಪೈಲ್ವಾನ್ ಕಿಚ್ಚ ಸಾಥ್ ಕೊಟ್ಟಿದ್ದಾರೆ. ೧೯೪೭ರ ಘಟನೆಯನ್ನ ಪ್ರೇರಣೆಯಾಗಿಟ್ಟುಕೊಂಡು ಕಬ್ಜ ಮಾಡಲು ಹೊರಟಿರುವ ನಿರ್ದೇಶಕ ಆರ್ ಚಂದ್ರು, ಇತಿಹಾಸಕ್ಕೆ ಸಾವಿಲ್ಲ ಎಂದು ಮುನ್ನುಗಿದ್ದಾರೆ. ರಿಯಲ್ ಪ್ಯಾನ್ ಇಂಡಿಯಾ ಸ್ಟಾರ್‌ಗಳನ್ನ ಹಾಕಿಕೊಂಡು, ಮೇಕಿಂಗ್ ಹಂತದಲ್ಲೇ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಜಗಪತಿ ಬಾಬು-ಕಬೀರ್ ದುಹಾನ್ ಸಿಂಗ್- ಪ್ರಮೋದ್ ಶೆಟ್ಟಿ-ಅನುಪ್ ರೇವಣ್ಣ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ಕಬ್ಜ’ ಚಿತ್ರದಲ್ಲಿದೆ. ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಹೈದ್ರಬಾದ್ ಅಖಾಡದಲ್ಲಿ ಕ್ಲೈಮ್ಯಾಕ್ಸ್‌ಗೆ ಕುಂಬಳಕಾಯಿ ಒಡೆಯಲಿದ್ದಾರೆ. ಎಂಟಿಬಿ ನಾಗರಾಜ್ ಸಾರಥ್ಯದಲ್ಲಿ ಒಟ್ಟು ಏಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ʼಕಬ್ಜʼ ಸಿನಿಮಾ ಎರಡು ಭಾಗದಲ್ಲಿ ಅದ್ದೂರಿಯಾಗಿ ಮೂಡಿಬರಲಿದೆ. ಅಸಿಸ್ಟೆಂಟ್ ಡೈರೆಕ್ಟೆರ್ ಆಗಿ, ರೈಟರ್ ಆಗಿ ಕೊನೆಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಆರ್ ಚಂದ್ರು ಈಗ ಪ್ಯಾನ್ ಇಂಡಿಯಾ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಆಗಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ ಅಲ್ಲವೇ.?

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಗಾಂಧಿನಗರದಲ್ಲಿ ಟೈಟಲ್‌ ಮರುಬಳಕೆಗೆ ಬೀಳುತ್ತಾ ಬ್ರೇಕ್?‌ ಅಣ್ಣಾವ್ರ ಹಳೇ ಸಿನಿಮಾ ಟೈಟಲ್‌ ಬಳಸದಂತೆ ರಾಜ್‌ ಅಭಿಮಾನಿಗಳ ಆಗ್ರಹ

ಕನ್ನಡ ಚಿತ್ರರಂಗ ಮಾತ್ರವಲ್ಲ, ಪರಭಾಷೆಗಳಲ್ಲೂ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿವೆ. ಈಗಾಗಲೇ ಕನ್ನಡದಲ್ಲಿ ಅದೆಷ್ಟೋ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿರುವುದುಂಟು. ಈಗ ಹಳೆಯ ಸಿನಿಮಾಗಳ ಮರುಬಳಕೆಗೆ ಬ್ರೇಕ್‌ ಹಾಕಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೌದು, ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಹಳೇ ಸಿನಿಮಾಗಳ ಟೈಟಲ್‌ಗಳನ್ನು ಮರುಬಳಕೆ ಮಾಡಬಾರದು ಅನ್ನೋ ಹೋರಾಟ ಶುರುವಾಗಿದೆ. ಈ ಹೋರಾಟಕ್ಕೆ ಮುನ್ನುಡಿ ಬರೆದಿರೋದು ಡಾ.ರಾಜ್‌ಕುಮಾರ್‌ ಅಭಿಮಾನಿಗಳು. ವಿಶ್ವ ಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ, ಡಾ.ರಾಜ್‌ಕುಮಾರ್‌ ಅವರ ಹಳೆಯ ಚಿತ್ರಗಳ ಶೀರ್ಷಿಕೆಗಳನ್ನು ಮರುಬಳಕೆ ಮಾಡಬಾರದು. ಅಂತಹ ಶೀರ್ಷಿಕೆಗಳಿಗೆ ಅನುಮತಿ ಕೊಡಬಾರದು ಮತ್ತು ಅಂತಹ ಶೀರ್ಷಿಕೆ ಇರುವ ಚಿತ್ರಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಡಾ.ರಾಜ್‌ಕುಮಾರ್‌ ಅವರ ಹಳೆಯ ಸಿನಿಮಾಗಳ ಟೈಟಲ್‌ಗಳ ಮರುಬಳಕೆಗೆ ಅವಕಾಶ ಕೊಡಲೇಬಾರದು ಅಂತ ಪಟ್ಟು ಹಿಡಿದು ಹೋರಾಟಕ್ಕಿಳಿದಿರುವ ರಾಜ್ ಕುಮಾರ್ ಅಭಿಮಾನಿ ಸಂಘಗಳು ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಜೋರಾದ ಹೋರಾಟಕ್ಕೆ ಸಿದ್ಧತೆ ನಡೆಸಿವೆ. ಹಾಗೊಂದು ವೇಳೆ ಸದ್ದಿಲ್ಲದೆಯೇ, ಡಾ.ರಾಜಕುಮಾರ್‌ ಅವರ ಕೆಲವು ಹಳೆಯ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಂಡು ಕೆಲಸ ಮಾಡುವ ಚಿತ್ರತಂಡಗಳು ಎಚ್ಚೆತ್ತುಕೊಂಡು, ಕೂಡಲೇ ಆ ಶೀರ್ಷಿಕೆ ತೆಗೆದು ಹಾಕಿ ಬೇರೊಂದು ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಿಸಬೇಕು. ಒಂದು ವೇಳೆ ಡಾ.ರಾಜಕುಮಾರ್‌ ಅವರ ಹೇಳೇ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಇಷ್ಟಕ್ಕೂ ಈ ಹೋರಾಟ ಯಾಕಪ್ಪ ಅಂದರೆ, ಈಗಾಗಲೇ ಡಾ.ರಾಜಕುಮಾರ್‌ ಅವರ ನಟಿಸಿರುವ ಬಹುತೇಕ ಸಿನಿಮಾಗಳು ದಾಖಲೆ ಬರೆದಿವೆ. ಅದರಲ್ಲೂ ಒಳ್ಳೆಯ ಸಂದೇಶ ಹೊತ್ತು ಬಂದ ಸಿನಿಮಾಗಳು. ಅಂಥದ್ದೇ ಶೀರ್ಷಿಕೆಯಡಿ ಸಿನಿಮಾ ಮಾಡ್ತೀನಿ ಅಂದರೆ, ಅಭಿಮಾನಿಗಳು ಒಪ್ಪುವುದಿಲ್ಲ. ಈಗೀಗ ಬರುವ ಕಥೆಗಳಲ್ಲಿ ಮೌಲ್ಯವೇ ಇರುವುದಿಲ್ಲ. ಅಂತಹ ಸಿನಿಮಾಗಳಿಗೆ ಅಣ್ಣಾವ್ರ ಹಳೆಯ ಶೀರ್ಷಿಕೆ ಇಟ್ಟರೆ ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳದ್ದು.

ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹೊಸ ಸಿನಿಮಾಗಳ ಶೀರ್ಷಿಕೆ ಇರುವ ಪೋಸ್ಟರ್‌ಗಳು ಕಾಣಸಿಗುತ್ತಿವೆ. ಇಂತಹ ಸಿನಿಮಾಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.

ರಾಜ್‌ಕುಮಾರ್‌ ಅಭಿಮಾನಿಗಳ ಮನವಿಯನ್ನು ಸ್ವೀಕರಿಸಿರುವ ವಾಣಿಜ್ಯ ಮಂಡಳಿ, ಅಂತಹ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನೇನೋ ಕೊಟ್ಟಿದೆ. ಆದರೆ, ಕೆಲವರು ಶೀರ್ಷಿಕೆ ಮೂಲಕವೇ ಸಿನಿಮಾ ಮಾಡ್ತೀವಿ ಅಂತ ಹೊರಟರೆ? ಅದಕ್ಕೀಗ ಉತ್ತರವಿಲ್ಲ. ಮುಂದೆ ಸಿನಿಮಾಗಳಿಗೆ ತೊಂದರೆ ಆದರೂ ಆಗಬಹುದೇನೋ?

ರಾಜ್‌ ಅಭಿಮಾನಿಗಳಂತೂ ಮುನ್ನೆಚ್ಚರಿಕೆಯ ಕ್ರಮವಾಗಿಯೇ ಶೀರ್ಷಿಕೆ ಮರುಬಳಕೆ ಮಾಡಬೇಡಿ ಎಂಬ ಮನವಿ ಮಾಡಿದೆ. ಅದರಲ್ಲೂ ರಾಜ್‌ ಫ್ಯಾಮಿಲಿ ಕೂಡ ಒಳ್ಳೆಯ ಸಿನಿಮಾಗಳ ಶೀರ್ಷಿಕೆ ಬಳಸದಂತೆ ಈ ಹಿಂದೆಯೇ ಮನವಿ ಮಾಡಿತ್ತು. ಅದರಲ್ಲೂ “ಆಕಸ್ಮಿಕ” “ದಾರಿ ತಪ್ಪಿದ ಮಗ” ಸಿನಿಮಾ ಶೀರ್ಷಿಕೆ ಮರು ಬಳಕೆ ಬೇಡ ಎಂದಿತ್ತು. ಅಷ್ಟೇ ಯಾಕೆ ಈ ಹಿಂದೆ ಸಾನ್ವಿ ಶ್ರೀವಾತ್ಸವ್‌ ಅಭಿನಯದ “ಕಸ್ತೂರಿ ಮಹಲ್”‌ ಸಿನಿಮಾಗೆ “ಕಸ್ತೂರಿ ನಿವಾಸ” ಎಂಬ ಶೀರ್ಷಿಕೆ ಇಡಲಾಗಿತ್ತು.

ಕೊನೆ ಕ್ಷಣದಲ್ಲಿ ನಿರ್ದೇಶಕ ದಿನೇಶ್‌ ಬಾಬು ಅವರು, “ಕಸ್ತೂರಿ ನಿವಾಸ” ಶೀರ್ಷಿಕೆಯನ್ನು “ಕಸ್ತೂರಿ ಮಹಲ್‌” ಎಂದು ಬದಲಿಸಿದ್ದರು. ಅದೇನೆ ಇರಲಿ, ಈಗ ರಾಜ್‌ ಫ್ಯಾನ್ಸ್‌ ಒಕ್ಕೊರಲ ಮನವಿ ಮಾಡಿದ್ದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಹಳೆಯ ಸಿನಿಮಾಗಳ ಟೈಟಲ್ ಮರುಬಳಕೆಗೆ ಬ್ರೇಕ್ ಬೀಳುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಉಪಾದ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷ ಸಾರಾ ಗೋವಿಂದ್ , ಕಾರ್ಯದರ್ಶಿ ಎನ್ ಎಮ್ ಸುರೇಶ್ ಹಾಜರಿದ್ದರು.

ವಿಶ್ವಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಬ.ನಾ.ಮು.ರಾಜು, ವೆಂಕಟೇಶ್‌ರೆಡ್ಡಿ, ಟಿ.ಎಚ್ಮ್.ಎಂ.ಗೌಡ, ಕೃಷ್ಣಮೂರ್ತಿ, ಕೆಂಪಣ್ಣ, ಗುರುರಾಜ್‌, ದೇವರಾಜ್‌ ಹಾಗು ಪತ್ರಕರ್ತ ಪರಮ್‌ ಗುಬ್ಬಿ ಸೇರಿದಂತೆ ಇತರೆ ರಾಜ್‌ ಅಭಿಮಾನಿಗಳ ಸಂಘಟನೆಯ ಪದಾಧಿಕಾರಿಗಳು ಈ ವೇಳೆ ಇದ್ದರು.

Categories
ಸಿನಿ ಸುದ್ದಿ

ಡಾರ್ಲಿಂಗ್‌ ಕೃಷ್ಣ -ಪಿ.ಸಿ.ಶೇಖರ್‌ ಕಾಂಬೋ ಹೊಸ ಸಿನಿಮಾ : ರೋಮ್‌-ಕಾಮ್‌ ಸ್ಟೋರಿ ಸಿನಿಮಾಕ್ಕೆ ಅಕ್ಟೋಬರ್‌ ನಲ್ಲಿ ಚಿತ್ರೀಕರಣ

ನಟ ಡಾರ್ಲಿಂಗ್‌ ಕೃಷ್ಣ ಮತ್ತಷ್ಟು, ಮೊಗೆದಷ್ಟು ಬ್ಯುಸಿ ಆಗುತ್ತಿದ್ದಾರೆ. ʼಲವ್‌ ಮಾಕ್ಟೆಲ್‌‌ʼ ನಂತರ ಅವರ ಸ್ಟಾರ್‌ ಇಮೇಜೇ ಬದಲಾಯಿತು. ಕೆರಿಯರ್‌ ಗ್ರಾಪ್‌ ಒಂದೇ ಸಮನೆ ಮುಗಿಲೆತ್ತರಕ್ಕೆ ಚಿಮ್ಮಿತು. ವೃತ್ತಿ ಬದುಕು, ಮತ್ತೊಂದೆಡೆ ಖಾಸಗಿ ಬದುಕು ಎರಡಲ್ಲೂ ಅವರಿಗೆ ಅದೃಷ್ಟವೇ ಖುಲಾಯಿಸಿತು. ಅವರ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ನಡುವೆಯೇ ಈಗ ರೋಮಿಯೋ ಖ್ಯಾತಿಯ ನಿರ್ದೇಶಕ ಪಿ.ಸಿ. ಶೇಖರ್‌ ನಿರ್ದೇಶನದ ಹೊಸ ಸಿನಿಮಾಕ್ಕೆ ನಟ ಡಾರ್ಲಿಂಗ್‌ ಕೃಷ್ಣ ನಾಯಕರಾಗಿ ಕಮಿಟ್‌ ಆಗಿದ್ದಾರೆ. ನಿರ್ದೇಶಕ ಪಿ.ಸಿ. ಶೇಖರ್‌ ಇದನ್ನು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ನಟ, ನಿರ್ಮಾಪಕ ಕಡ್ಡಿಪುಡಿ ಚಂದ್ರು ಈ ಚಿತ್ರದ ನಿರ್ಮಾಪಕರು.ಚಿತ್ರಕ್ಕೆ ಈಗಷ್ಟೇ ಮಾತುಕತೆ ಫೈನಲ್‌ ಆಗಿದೆ. ಡಾರ್ಲಿಂಗ್‌ ಕೃಷ್ಣ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗಕ್ಕೆ ಬೇಕಾದ ಪಾತ್ರಧಾರಿಗಳ ಆಯ್ಕೆಗೆ ನಿರ್ದೇಶಕರು ಈಗಷ್ಟೇ ತಲೆಕೆಡಿಸಿಕೊಳ್ಳಬೇಕಂತೆ.

ʼಇದು ಇನ್ನು ತುಂಬಾಪ್ರೈಮರಿ ಹಂತ. ಚಿತ್ರಕ್ಕೆ ಡಾರ್ಲಿಂಗ್‌ ಕೃಷ್ಣ ಅವರು ಫಿಕ್ಸ್‌ ಆಗಿ ಈಗಷ್ಟೇ ಎರಡು ದಿನ ಕಳೆದಿವೆ. ಇನ್ನು ಮೇಲೆ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯಬೇಕಿದೆ. ದೊಡ್ಡ ತಾರಾಗಣವೇ ಇರಲಿದೆ. ಕತೆಯ ಪಾತ್ರವರ್ಗಗಳ ಅನುಸಾರ ಯಾರೆಲ್ಲ ಆಗಬಹುದು ಅಂತ ಅಂದಾಜು ಮಾಡಿಕೊಂಡಿದ್ದೇನೆ. ದೊಡ್ಡ ತಾರಾಬಳಗವನ್ನೇ ತರಬೇಕೆನ್ನುವ ಆಸೆಯಂತೂ ಇದೆ. ನಿರ್ಮಾಪಕರ ಬೆಂಬಲವೂ ಇದಕ್ಕಿದೆ. ಅಕ್ಟೋಬರ್‌ ನಲ್ಲಿ ಶುರು ಮಾಡೋಣ ಅಂತಂದುಕೊಂ ಡಿದ್ದೇವೆ. ಅಷ್ಟೊರಳಗೆ ಕಲಾವಿದರು, ತಂತ್ರಜ್ಜರ ಆಯ್ಕೆ ಫೈನಲ್‌ ಮಾಡಿಕೊಂಡು, ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೋಗುವ ಆಲೋಚನೆ ಇದೆʼಎನ್ನುತ್ತಾರೆ ನಿರ್ದೇಶಕ ಪಿ.ಸಿ. ಶೇಖರ್.‌
ನಿರ್ದೇಶಕ ಪಿ.ಸಿ. ಶೇಖರ್‌ ಈಗಾಗಲೇ ಇಂಡಸ್ಟ್ರಿಯಲ್ಲಿ ಹಲವು ಸ್ಟಾರ್‌ ಜತೆಗೆ ಕೆಲಸ ಮಾಡಿದ್ದಾರೆ. ಗಣೇಶ್‌ ಅಭಿನಯದ ʼರೋಮಿಯೋʼ ಚಿತ್ರ ಬಜಾರ್‌ ನಲ್ಲಿ ಸಾಕಷ್ಟು ಸದ್ದು ಮಾಡಿತು. ಮುಂದೆ ಕಾಮಿಡಿ ಸ್ಟಾರ್‌ ಮಿತ್ರ ಹೀರೋ ಆಗಿ ಕಾಣಿಸಿಕೊಂಡ ರಾಗಾ ಸಿನಿಮಾ ಅಪಾರ ಮೆಚ್ಚುಗೆ ಪಡೆದಿದ್ದು ಮಾತ್ರವಲ್ಲ, ಬೆಸ್ಟ್‌ ಡೆಬ್ಯುಟ್‌ ಆಕ್ಟರ್‌ ಆವಾರ್ಡ್‌ಗೂ ಪಾತ್ರವಾಯಿತು. ಅಲ್ಲಿಂದ ಗ್ಲಾಮರಸ್‌ ನಟಿ ರಾಗಿಣಿ ಕಾಂಬಿನೇಷನ್‌ ಮೂಲಕ ದಿ ಟೆರರಿಸ್ಟ್‌ ಎನ್ನುವ ಯೂನಿವರ್ಷಲ್‌ ಸಬ್ಜೆಕ್ಟ್‌ ಮೇಲೊಂದು ಸಿನಿಮಾ ಮಾಡಿದರು. ಅದು ನಿರೀಕ್ಷಿತ ಸಕ್ಸಸ್‌ ಪಡೆದುಕೊಳ್ಳಲಿಲ್ಲ ಎನ್ನುವುದನ್ನು ಬಿಟ್ಟರೆ, ಒಂದೊಳ್ಳೆಯ ಪ್ರಯತ್ನವಾಗಿ ಕಾಣಿಸಿಕೊಂಡಿತು. ಅಲ್ಲಿಂದ ಒಂದಷ್ಟು ಗ್ಯಾಪ್‌ ಬಳಿಕ ಟಗರು ಪುಟ್ಟಿ ಮಾನ್ವಿತಾ ಕಾಮತ್‌ ಕಾಂಬಿನೇಷನ್‌ ಮೂಲಕ ಹಕ್ಕಾ ಹಳ್ಳಿ ಸೊಗಡಿನ ಶೈಲಿಯ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದು, ಆ ಸಿನಿಮಾಕ್ಕೆ ಸೆಪ್ಟೆಂಬರ್‌ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆಯಂತೆ.

ಈ ಚಿತ್ರಕ್ಕೆ ಟೈಟಲ್‌ ಇನ್ನು ಫೈನಲ್‌ ಆಗಿಲ್ಲ.ಲೀಡ್‌ ರೋಲ್‌ ನಲ್ಲಿ ಮಾನ್ವಿತಾ ಇದ್ದಾರೆ ಎನ್ನುವುದನ್ನು ಬಿಟ್ಟರೆ ಬಹುತೇಕ ಹೊಸಬರೇ ಇಲ್ಲಿದ್ದಾರಂತೆ. ಈ ನಡುವೆ ಈಗ ʼಲವ್‌ ಮಾಕ್ಟೆಲ್‌ʼ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಕಾಂಬಿನೇಷನ್‌ ಮೂಲಕ ಮತ್ತೊಂದು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದಾರೆ. ಡಾರ್ಲಿಂಗ್‌ ಕೃಷ್ಣ ಅಂದಾಕ್ಷಣ, ಈ ಸಿನಿಮಾದ ಕಥೆಯ ಬಗ್ಗೆ ದೊಡ್ಡ ಕುತೂಹಲ ಹುಟ್ಟುವುದು ಅಷ್ಟೇ ಸಹಜ. ಆ ಬಗ್ಗೆ ನಿರ್ದೇಶಕ ಪಿ.ಸಿ. ಶೇಖರ್‌ ಹೇಳುವುದೇನು ಗೊತ್ತಾ? ʼ ಇದೊಂದು ರೋಮ್‌ ಕಾಮ್‌ ಕಥೆ ಅನ್ನೋದರಲ್ಲಿ ನೋ ಡೌಟ್.‌ ಒಂದೊಳ್ಳೆಯ ಪ್ರೇಮ ಕಥೆ ಹೆಣೆದಿದ್ದೇನೆ. ಕಾರ್ಪೋರೇಟ್‌ ಜಗತ್ತಿನಲ್ಲಿ ನಡೆಯುವ ಕಥೆ. ಅಟ್‌ ದಿ ಸೇಮ್‌ ಟೈಮ್‌ ಅದಕ್ಕೆ ಹಳ್ಳಿ ಸೊಗಡು ಕೂಡ ಇದೆ. ಅವೆರಡರ ನಡುವೆ ಅಂತಹ ವಿಶೇಷ ಇದೆ ಅನ್ನೋದೆ ಇಲ್ಲಿನ ಕುತೂಹಲ ಅಂತಾರೆ ನಿರ್ದೇಶಕ ಪಿ.ಸಿ. ಶೇಖರ್.‌

  • ಎಂಟರ್‌ ಟೈನ್‌ ಮೆಂಟ್‌ ಬ್ಯರೋ ಸಿನಿಲಹರಿ

Categories
ಸಿನಿ ಸುದ್ದಿ

ಬರ್ತ್‌ ಡೇ ಸಂಭ್ರಮದಲ್ಲಿ ಬೇಬಿ ಡಾಲ್‌ ಆದ್ಯಾ : ಆಕ್ಟಿಂಗ್‌ ಜತೆಗೀಗ ಜಾಹೀರಾತಿನಲ್ಲೂ ಬಾಲ ನಟಿಯ ಮಿಂಚು !

ಸರಿಗಮಪ ಲಿಟ್ಲ್‌ ಚಾಂಪ್ಸ್‌ ಖ್ಯಾತಿಯ ಬೇಬಿ ಡಾಲ್‌ ಆದ್ಯಾ ಬರ್ತ್‌ ಡೇ ಸಂಭ್ರಮದಲ್ಲಿದ್ದಾರೆ. ʼಕೋಟಿಗೋಬ್ಬ -3ʼ ಚಿತ್ರ ತಂಡ ಆದ್ಯಾಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಹಾಗೆಯೇ ಸಿಂಗಿಂಗ್‌, ಆಕ್ಟಿಂಗ್‌ ಜತೆಗೀಗ ಬ್ರಾಂಡ್‌ ಅಂಬಾಸಿಡರ್‌ ಆಗಿಯೂ ಮಿಂಚುತ್ತಿದ್ದಾರೆ. ಅವರ ಜರ್ನಿಯ ಒಂದು ಝಲಕ್‌ ಇಲ್ಲಿದೆ…

ಸರಿಗಮಪ ಲಿಟ್ಲ್‌ ಚಾಂಪ್ಸ್‌ ಖ್ಯಾತಿಯ ಬೇಬಿ ಡಾಲ್‌ ಆದ್ಯಾ, ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಭಾನುವಾರ ಫ್ಯಾಮಿಲಿ ಜತೆಗೆ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ನಡುವೆ ಬೇಬಿ ಡಾಲ್‌ ಆದ್ಯಾಗೆ ʼಕೋಟಿಗೊಬ್ಬ-3ʼ ಚಿತ್ರ ತಂಡ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಬಾಲ ನಟಿ, ಗಾಯಕಿ ಆದ್ಯಾಗೆ ಬರ್ತ್‌ ಡೇ ವಿಶ್‌ ಮಾಡಿ ಸ್ಪೆಷಲ್‌ ಪೋಸ್ಟರ್‌ ಲಾಂಚ್‌ ಮಾಡಿದೆ. ಸೋಷಲ್‌ ಮೀಡಿಯಾದಲ್ಲಿ ಈ ಪೋಸ್ಟರ್‌ ವೈರಲ್‌ ಆಗಿದೆ. ಅಭಿನಯ ಚಕ್ರವರ್ತಿ ಕಿಚ್‌ ಸುದೀಪ್‌ ಜತೆಗೆ ಬೇಬಿ ಡಾಲ್‌ ಆದ್ಯಾ ನಿಂತಿರೋ ಫೋಸ್ಟರ್‌ ಅದು. ಕಿಚ್ಚನ ಅಭಿಮಾನಿಗಳ ಜತೆಗೆ ಬೇಬಿ ಡಾಲ್‌ ಆದ್ಯಾ ಫ್ಯಾನ್ಸ್ ಕೂಡ ಅದನ್ನು ಕರುನಾಡಿನ ತುಂಬಾ ಹಂಚಿದ್ದಾರೆ. ಸಹಜವಾಗಿಯೇ ಇದು ಬಾಲ ನಟಿ ಆದ್ಯಾಗೂ ಖುಷಿ ತಂದಿದೆ.

ಸರಿಗಮಪ ಲಿಡ್ಲ್‌ ಚಾಂಪ್ಸ್‌ ರಿಯಾಲಿಟಿ ಶೋ ಮನೆ ಮಾತಾದ ಪುಟಾಣಿ ಆದ್ಯಾ, ಈಗ ಬಾಲ ನಟಿಯಾಗಿಯೂ ಮಿಂಚುತ್ತಿದ್ದಾರೆ. ಬಹುತೇಕ ಸ್ಟಾರ್‌ ಸಿನಿಮಾಗಳ ಮೂಲಕವೇ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಅದೃಷ್ಟ ಆದ್ಯಾಗೆ ಸಿಕ್ಕಿದೆ. ಉಪೇಂದ್ರ ಅಭಿನಯದ ʼಹೋಮ್‌ ಮಿನಿಸ್ಟರ್‌ʼ ಹಾಗೂ ಕಿಚ್ಚ ಸುದೀಪ್‌ ಅಭಿನಯದ ʼಕೋಟಿಗೊಬ್ಬ-೩ʼ ಚಿತ್ರದಲ್ಲಿ ಆದ್ಯಾ ಬಾಲ ನಟಿಯಾಗಿ ಅಭಿನಯಸಿದ್ದಾರೆ. ಇದಲ್ಲದೆ ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ ʼಭೀಮ ಸೇನ ನಳಮಹಾರಾಜʼ ಚಿತ್ರದಲ್ಲೂ ಆದ್ಯಾ ಅಭಿನಯಸಿದ್ದರು. ಆ ಚಿತ್ರ ಅಮೆಜಾನ್‌ ಪ್ರೈಂ ಮೂಲಕ ಈಗಾಗಲೇ ಪ್ರೇಕ್ಷಕರ ಮುಂದೆ ಬಂದಿದೆ. ಉಳಿದಂತೆ ಹೋಮ್‌ ಮಿನಿಸ್ಟರ್‌ ಹಾಗೂ ʼಕೋಟಿಗೊಬ್ಬ -3ʼ ಚಿತ್ರಗಳು ತೆರೆ ಕಾಣುವುದು ಬಾಕಿಯಿದೆ.

ಒಂದೆಡೆ ಸಿಂಗರ್‌ ಆಗಿ ದೊಡ್ಡ ಮಟ್ಟಕ್ಕೆ ಬೆಳೆಯುವ ಹಂಬಲ ಹೊತ್ತಿರುವ ಬಾಲಕಿ ಆದ್ಯಾ, ಈಗಾಗಲೇ ಎರಡು ಆಲ್ಬಂ ಸಾಂಗ್ಸ್‌ ಹೊರ ತಂದಿದ್ದಾರೆ. ಒಂದು ಆಲ್ಬಂ ಸಾಂಗ್‌ ನಲ್ಲಿ ಧ್ಬನಿ ನೀಡಿದ್ದರೆ, ಇನ್ನೊಂದನ್ನು ತಾವೇ ನಿರ್ಮಾಣ ಮಾಡಿ ಹೊರ ತಂದಿದ್ದಾರೆ. ಇದೇ ಮೊದಲ ಆದ್ಯತೆ ಆಗಿದ್ದರೂ, ಬಾಲ ನಟಿಯಾಗಿಯೂ ಆದ್ಯಾಗೆ ಬೇಡಿಕೆ ಹೆಚ್ಚಿದೆ. ಹೊಸಬರ ಅನೇಕ ಸಿನಿಮಾಗಳಲ್ಲಿ ಆದ್ಯಾ ಅಭಿನಯಿಸುವ ಆಫರ್‌ ಬಂದಿದ್ದರೂ, ಸದ್ಯಕ್ಕೆ ಚ್ಯೂಸಿ ಆಗಿದ್ದ ಸ್ಟಾರ್‌ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆಗೀಗ ಬೇಬಿ ಡಾಲ್‌ ಆದ್ಯಾ ಜಾಹೀರಾತು ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ.

ಬ್ರೈಟ್‌ ಎಕ್ಸ್‌ಫರ್ಟ್‌ ಹೆಸರಿನ ಒಂದು ಹೊಸ ಕಂಪನಿಯ ಡಿಟರ್ಜೆಂಟ್‌ ಪ್ರಾಡಕ್ಟ್ ಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ ಬೇಬಿ ಡಾಲ್‌ ಆದ್ಯಾ. ಅಷ್ಟು ಮಾತ್ರವೇ ಅಲ್ಲ, ʼಅಶ್ವಿನಿ ನಕ್ಷತ್ರʼ ಸೀರಿಯಲ್‌ ಖ್ಯಾತಿಯ ನಟ ಜೆಕೆ ಅಲಿಯಾಸ್‌ ಜಯರಾಂ ಕಾರ್ತಿಕ್‌ ಕೂಡ ಇದರ ಬ್ರಾಂಡ್‌ ಅಂಬಾಸಿಡರ್‌. ಅವರೊಂದಿಗೆ ಆದ್ಯಾ ಕೂಡ ಇಲ್ಲಿ ಬ್ರಾಂಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಪೋಷಕರಿಗೂ ಖುಷಿ ಕೊಟ್ಟಿದೆ.ʼ ನಾವು ಯಾವುದಕ್ಕೂ ಒತ್ತಾಯ ಮಾಡಿಲ್ಲ. ಸಿಂಗಿಂಗ್‌ ಆಕೆಯ ಆಸಕ್ತಿ. ಹಾಗೆಯೇ ನಟನೆಯೂ ಕೂಡ ಅವಳ ಪ್ರತಿಭೆಯಿಂದಲೇ ಸಿಕ್ಕ ಅವಕಾಶ. ಅದರ ಜತೆಗೆ ಈಗ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ. ಎಲ್ಲವೂ ಒಂದ್ರೀತಿ ಅವಾಗಿಯೇ ಬರುತ್ತಿವೆ. ಅದರ ಜತೆಗೆ ಎಜುಕೇಷನ್‌ ಕೂಡ ಇಂಪಾರ್ಟೆಂಟ್‌ ಅಲ್ವಾ? ಹಾಗಾಗಿ ಅವಕಾಶ ಇದೆ ಅಂತ ಯಾವುದಕ್ಕೂ ಒತ್ತಾಯ ಮಾಡೋದಿಲ್ಲʼ ಅಂತಾರೆ ಆದ್ಯಾ ಅವರ ತಾಯಿ ಅಶ್ವಿನಿ. ಸಿನಿಲಹರಿ ಕಡೆಯಿಂದ ಆದ್ಯಾ ಗೆ ಹುಟ್ಟು ಹಬ್ಬದ ಶುಭಾಶಯ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಡಿಯರ್‌ ಆರ್ಯನ್‌ ಕಮಿಂಗ್‌ ಸೂನ್!‌ ಸೆಪ್ಟೆಂಬರ್‌ಗೆ ಡಿಯರ್ ಸತ್ಯ ಬರ್ತಾನೆ ಗುರು!!

ಆರ್ಯನ್‌ ಸಂತೋಷ್‌ ಕನ್ನಡ ಸಿನಿರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಸಿನಿಮಾ ಮೂಲಕ ರಂಗಿನ ದುನಿಯಾಗೆ ಎಂಟ್ರಿಯಾದ ಆರ್ಯನ್‌ ಸಂತೋಷ್‌, ಅ ನಂತರದ ದಿನಗಳಲ್ಲಿ “ನೂರು ಜನ್ಮಕು” ಸಿನಿಮಾ ಮೂಲಕ ಹೀರೋ ಆಗಿ ಕಾಣಿಸಿಕೊಂಡರು. ಅದಾದ ಬಳಿಕ ಒಂದಷ್ಟು ಕಥೆ ಹುಡುಕಾಟದಲ್ಲಿದ್ದ ಅವರು, ಕೊನೆಗೂ ಒಂದೊಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾದರು. ಅದೇ “ಡಿಯರ್‌ ಸತ್ಯ”. ಈ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲು ಹೀರೋ ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ…

ಹೀರೋ ಆರ್ಯನ್‌ ಸಂತೋಷ್‌ ಮೊಗದಲ್ಲಿ ಮಂದಹಾಸ ಬೀರಿದೆ. ಅದಕ್ಕೆ ಕಾರಣ, ಅವರ ಬಹುನಿರೀಕ್ಷೆಯ “ಡಿಯರ್‌ ಸತ್ಯ” ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬದಂದು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಈ ಟ್ರೇಲರ್‌ ಬಿಡುಗಡೆಯ ವಿಶೇಷವೆಂದರೆ, ಡೆಲಿವರಿ ಬಾಯ್ಸ್ ಟ್ರೇಲರ್‌ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಹೌದು, ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ “ಡಿಯರ್ ಸತ್ಯ” ಚಿತ್ರ ಸೆಪ್ಟೆಂಬರ್‌ಗೆ ಬಿಡುಗಡೆಯಾಗಲಿದೆ. ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಚಿತ್ರದ ಟ್ರೇಲರ್‌ ರಿಲೀಸ್‌ ಬಳಿಕ ಮಾತಿಗಿಳಿದ ಹೀರೋ ಆರ್ಯನ್‌ ಸಂತೋಷ್‌, “ನಾನು ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾನು, “ನೂರು ಜನ್ಮಕು” ಚಿತ್ರದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರು ಮುಂದೆ ಬರಲಿಲ್ಲ. ದೇವರ ಹಾಗೆ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಬಂದು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ ಎಂದರು ಆರ್ಯನ್ ಸಂತೋಷ್.

ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ “ಭಿನ್ನ” ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಓಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ “ಡಿಯರ್ ಸತ್ಯ” ನಿರ್ಮಾಣ ಮಾಡಿದ್ದೇವೆ. ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋ ಮೂಲಕ ಚಿತ್ರ ತಯಾರಾಗಿದೆ.‌

ಆರ್ಯನ್ ಸಂತೋಷ್ ನನ್ನ ಸ್ನೇಹಿತ. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ಪ್ಲಾನ್‌ ಇದೆ ಎಂಬುದು ನಿರ್ಮಾಪಕ ಗಣೇಶ್ ಪಾಪಣ್ಣ ಅವರ ಮಾತು. ಮತ್ತೊಬ್ಬ ನಿರ್ಮಾಪಕ ಶ್ರೀನಿವಾಸ ಶ್ರೀಭಕ್ತ ಕೂಡ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದರು.

“ಜಿಗರ್ ಥಂಡ”, “ತ್ರಾಟಕ”, “ಆ ದೃಶ್ಯ” ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದಿದ್ದೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು.‌ ನಂತರ ಈ ಚಿತ್ರ ಆರಂಭವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯ ಇಲ್ಲಿ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ. ಎಲ್ಲಾ‌ ತಂತ್ರಜ್ಞರು ಹಾಗೂ ಕಲಾವಿದರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಶಿವಗಣೇಶ್. ಆಡಿಷನ್ ಮೂಲಕ ಆಯ್ಕೆಯಾದ ನಾಯಕಿ ಅರ್ಚನಾ ಕೊಟ್ಟಿಗೆ, ಕಲಾವಿದರಾದ ಬಾಲು, ಕಾರ್ತಿಕ್ ಸುಬ್ರಹ್ಮಣ್ಯ, ಫ್ಯಾಷನ್ ಡೈರೆಕ್ಟರ್ ಭಾರ್ಗವಿ ವಿಖ್ಯಾತಿ ಹಾಗೂ ಸಾಹಸ ನಿರ್ದೇಶಕ ಕುಂಫು ಚಂದ್ರು ಮಾತನಾಡಿದರು.


ಇನ್ನು, “ಡಿಯರ್‌ ಸತ್ಯ” ಚಿತ್ರದಲ್ಲಿ ನಾಯಕ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನ ಡೆಲಿವರಿ ಬಾಯ್ಸ್ ಕೈಯಿಂದಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಆರ್ಯನ್ ಸಂತೋಷ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಿರ್ಮಾಪಕರಾದ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್ ಹಾಗೂ ಕರಿಸುಬ್ಬು ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Categories
ಸಿನಿ ಸುದ್ದಿ

ಚಿರು- ಪನ್ನಗ ಪುತ್ರರ ಬಾಲಕೃಷ್ಣ ಫೋಟೋಶೂಟ್; ಬ್ರದರ್ ಫ್ರಮ್ ಅನದರ್ ಮದರ್-ಹೀಗಂತಾರೆ !

ನಾಡಿನಾದ್ಯಾಂತ ಶ್ರೀಕೃಷ್ಣಜನ್ಮಾಷ್ಟಮಿಯ ಆಚರಣೆ ಜೋರಾಗಿದೆ. ದೇವಾಲಯಗಳಲ್ಲಿ ಅದ್ಧೂರಿ ಆಚರಣೆಗೆ ಅವಕಾಶ ಸಿಕ್ಕಿಲ್ಲವಾದರೂ ಕೂಡ ಮನೆಮನೆಯಲ್ಲಿ ಗೋಪಾಲನ ಜಪ-ತಪ ಮುಗಿಲು ಮುಟ್ಟಿದೆ. ತಮ್ಮ ತಮ್ಮ ಮನೆಯ ಮುದ್ದುಕಂದಮ್ಮಗಳಿಗೆ ಶ್ರೀಕೃಷ್ಣನ ವೇಷ ಹಾಕಿಸಿ ಸಂತೋಷಪಡುತ್ತಿದ್ದಾರೆ. ಅದರಂತೇ, ಸರ್ಜಾ ಫ್ಯಾಮಿಲಿ ಹಾಗೂ ಪನ್ನಾಗಭರಣ ಫ್ಯಾಮಿಲಿಯಲ್ಲಿ ಬಾಲಕೃಷ್ಣರ ಸಂಭ್ರಮ-ಸಡಗರ ಭರ್ಜರಿಯಾಗಿಯೇ ನಡೆದಿದೆ. ಜೂನಿಯರ್ ಚಿರು ಹಾಗೂ ವೇದ್ ಭರಣ ಇಬ್ಬರು ಕೃಷ್ಣನ ವೇಷ ಧರಿಸಿಕೊಂಡು ಬಾಲಕೃಷ್ಣರಾಗಿ ಮಿಂಚಿರುವ ಫೋಟೋಗಳನ್ನ ನಟಿ ಮೇಘನಾ ರಾಜ್ ತಮ್ಮ ಸೋಷಿಯಲ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. `ನನ್ನ ಬೆಣ್ಣೆ ಮುದ್ದು ಬಂಗಾರ’ ಅಂತ ಟ್ವೀಟ್ ಮಾಡಿ ಖುಷಿಪಟ್ಟಿದ್ದಾರೆ.

ಚಿರು ಹಾಗೂ ಪನ್ನಗ ಇಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದವರು ಈಗ ಜೂನಿಯರ್ ಚಿರು ಹಾಗೂ ಜೂನಿಯರ್ ವೇದ್ ಸ್ನೇಹಿತರಾಗಿದ್ದಾರೆ. ಮರಿ ಚಿರಂಜೀವಿಗೆ ಈಗಿನ್ನೂ ೧೦ ತಿಂಗಳು, ಇತ್ತ ವೇದ್‌ಗೆ ೩ ವರ್ಷ. ಇಬ್ಬರು ಕೂಡ ತಮ್ಮದೇ ಆದ ಪುಟ್ಟಪ್ರಪಂಚದಲ್ಲಿದ್ದಾರೆ. ಸ್ನೇಹ-ಗೆಳೆತನ- ದೋಸ್ತಿ ಇದ್ಯಾವುದರ ಅರಿವಿಲ್ಲ ಆದರೆ ಈ ಇಬ್ಬರ ಪುಟ್ಟಕಂದಮ್ಮಗಳ ಪೇರೆಂಟ್ಸ್ ಗೆ ಜೂನಿಯರ್ ಚಿರು ಹಾಗೂ ಜೂನಿಯರ್ ವೇದ್‌ನ ಬಾಲ್ಯದಿಂದಲೇ ಸ್ನೇಹಿತರನ್ನಾಗಿ ಮಾಡುವ ಕನಸಿದೆ. ಹೀಗಾಗಿ, ಹಬ್ಬ ಹರಿದಿನಗಳಲ್ಲಿ ಮೊದಲಿನಂತೆ ಒಟ್ಟಿಗೆ ಸೇರುತ್ತಾರೆ ಚಿರು ನೆನಪುಗಳನ್ನ ಮೆಲುಕು ಹಾಕುತ್ತಾ ಸಂಭ್ರಮಿಸುತ್ತಾರೆ. ಅದರಂತೇ, ಶ್ರೀಕೃಷ್ಣಜನ್ಮಾಷ್ಠಮಿಯಂದು ಒಂದೆಡೆ ಸೇರಿ ಜೂನಿಯರ್ ಚಿರು ಹಾಗೂ ವೇದ್‌ಗೆ ಬಾಲಕೃಷ್ಣನ ವೇಷಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಮುದ್ದುಕೃಷ್ಣರಂತೆ ಇಬ್ಬರು ರಾರಾಜಿಸಿದ್ದನ್ನ ಕಂಡು ಎರಡು ಫ್ಯಾಮಿಲಿಯವರು ಖುಷಿಪಟ್ಟಿದ್ದಾರೆ.

`ಬ್ರದರ್ ಫ್ರಮ್ ಅನದರ್ ಮದರ್’ ಅಂತಾರೇ. ಅದರಂತೇ, ಮರಿ ಯುವಸಾಮ್ರಾಟನ ಪಾಲಿಗೆ ಮುಂದಿನ ದಿನಗಳಲ್ಲಿ ವೇದ್ ಭರಣ ಅಣ್ಣನ ಸ್ಥಾನ ತುಂಬುವುದರಲ್ಲಿ ಡೌಟೇ ಇಲ್ಲ .ಈಗಾಗಲೇ ತಮ್ಮನನ್ನ ಪ್ರ‍್ರೊಟೆಕ್ಟ್ ಮಾಡುವ ಕೆಲಸವನ್ನ ವೇದ್ ಶುರು ಹಚ್ಚಿಕೊಂಡಿದ್ದಾನಂತೆ. ಫೋಟೋಶೂಟ್ ವೇಳೆ ಜೂನಿಯರ್ ಚಿರುನಾ ವೇದ್ ಸಿಕ್ಕಾಪಟ್ಟೆ ಕೇರ್ ಮಾಡಿದ್ನಂತೆ. ಇಬ್ಬರು ಒಟ್ಟಿಗೆ ಬೆಲೆಕಟ್ಟಲಾಗದ ಸಮಯವನ್ನ ಕಳೆದಿದ್ದಾರಂತೆ, ಆ ಎಲ್ಲಾ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಶೀಘ್ರದಲ್ಲೇ ಆ ಖುಷಿಯ ಕ್ಷಣಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ. ಸೀನಿಯರ್ಸ್ ನಂತರ ಜೂನಿಯರ್ಸ್ ನಡುವೆ ಇರುವ ಪ್ರೀತಿ ಹಾಗೂ ಬಾಂಡೇಜ್‌ನ ನೀವೆಲ್ಲಾ ನೋಡಬಹುದು. ಅಪ್ಪಂದಿರಂತೆ ಇವರಿಬ್ಬರು ಚಡ್ಡಿದೋಸ್ತ್‌ ಗಳಾಗಿ, ಕುಚುಕು ಗೆಳೆಯರಾಗಿ ಮುಂದುವರೆಯುತ್ತಾರೆ ಬಿಡಿ.

ಓ ಗೆಳೆಯ ಜೀವದ್ ಗೆಳೆಯ ನಿಂದು ತಾಯಿ ಪ್ರೀತಿ ಕಣೋ…ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ… ಹೀಗಂತ ಚಿರು ಹಾಗೂ ಪನ್ನಗ ಇಬ್ಬರು ಜೊತೆಯಾಗಿ ಹಾಡ್ತಿದ್ದರು. ಬರೀ ಹಾಡಿಗಷ್ಟೇ ಸೀಮಿತವಾಗದೇ ಹಾಗೆಯೇ ಬಾಳಿಬದುಕಿದರು. ಜೀವದ ಗೆಳೆಯರಾಗಿದ್ದ ಇವರಿಬ್ಬರ ನಡುವೆ ಒಡಹುಟ್ಟಿದ ಅಣ್ತಮ್ಮರಂತಹ ಬಾಂಧವ್ಯ- ಪ್ರೀತಿ ಹಾಗೂ ಒಡನಾಟವಿತ್ತು. ಗೆಳೆತನವನ್ನು ಹಾಗೂ ಸಹೋದರತ್ವವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಚಿರು ಹಾಗೂ ಪನ್ನಗರನ್ನ ನೋಡಿದವರು ಇದ್ದರೇ ಇವರಂತಹ ಸ್ನೇಹಿತರಿರಬೇಕು ಅಂತ ಕೊಂಡಾಡುತ್ತಿದ್ದರು. ಹೀಗಿರುವಾಗಲೇ ವಾಯುಪುತ್ರ ಚಿರು ಏಕಾಏಕಿ ಉಸಿರು ಚೆಲ್ಲಿದರು. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೇಹೋದರು. ಈ ಕ್ಷಣಕ್ಕೂ, ಯುವಸಾಮ್ರಾಟ ಚಿರು ಇಲ್ಲದ ಕ್ಷಣವನ್ನ ಅವರ ಕುಟುಂಬಕ್ಕೆ ಊಹಿಸಿಕೊಳ್ಳೋದಕ್ಕೆ ಸಾಧ್ಯವಾಗಲ್ಲ. ಆದರೆ, ಜೂನಿಯರ್ ಚಿರು ಬಂದ ಘಳಿಗೆಯಿಂದ ಮರಿ ಯುವಸಾಮ್ರಾಟನ ಕಣ್ಣಲ್ಲಿ, ನಗುವಲ್ಲಿ ಚಿರುನಾ ಕಾಣುವುದಕ್ಕೆ ಅವಕಾಶ ಸಿಕ್ಕಿದೆ. ಸರ್ಜಾ ಕುಟುಂಬ ಮಾತ್ರವಲ್ಲ ಇಡೀ ಕರುನಾಡು ಜೂನಿಯರ್ ರಾಜಮಾರ್ತಾಂಡನ ಮೊಗದಲ್ಲಿ ಚಿರಂಜೀವಿ ಸರ್ಜಾರನ್ನ ನೋಡ್ತಿದ್ದಾರೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕೆಜಿಎಫ್- ಆರ್ ಆರ್ ಆರ್- ಮಾರ್ಟಿನ್ ಈಗ ವಿಕ್ರಾಂತ್ ರೋಣ; ಸ್ಟಾರ್ ನಟರ ಚಿತ್ರಕ್ಕೆ ‘ಲಹರಿ’ ಚಿನ್ನದ ಕಿರೀಟ!

ಇಂಡಿಯಾ ಪ್ರೈಡ್ ವಿಕ್ರಾಂತ್ ರೋಣ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಆರ್ ಆರ್ ಆರ್, ಮಾರ್ಟಿನ್ ನಂತರ ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ ಪೆಕ್ಡೆಡ್ ಮಹಾಮೂವೀ ವಿಕ್ರಾಂತ್ ರೋಣದ ಚಿತ್ರದ ಆಡಿಯೋ ಹಕ್ಕುಗಳನ್ನ ಪ್ರತಿಷ್ಠಿತ ಲಹರಿ‌ ಸಂಸ್ಥೆ ಮುಡಿಗೇರಿಸಿಕೊಂಡಿದೆ.

‘ಲಹರಿ’ ಕನ್ನಡದ ಹೆಮ್ಮೆಯ ಸಂಸ್ಥೆ. ಮ್ಯೂಸಿಕ್ ಲೋಕದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿರುವ ಲಹರಿ ಮ್ಯೂಸಿಕ್, ಯೂಟ್ಯೂಬ್ ಕಡೆಯಿಂದ ಡೈಮಂಡ್ ಕಿರೀಟ ಮುಡಿಗೇರಿಸಿಕೊಂಡ ಮೇಲೆ ಬಜಾರ್ ನಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಮತ್ತಷ್ಟು ಹವಾ ಎಬ್ಬಿಸಿದೆ. ಹಿಂದ್ಯಾರು ಬರೆಯದ ಇತಿಹಾಸ ಸೃಷ್ಟಿಸುತ್ತಾ ಮುನ್ನುಗುತ್ತಿರುವ ಪ್ರತಿಷ್ಠಿತ ಲಹರಿ ಮ್ಯೂಸಿಕ್
ಸೌತ್ ದುನಿಯಾದ ಬಹುತೇಕ ಸೂಪರ್ ಸ್ಟಾರ್ ಗಳಿಗೆ ಚಿನ್ನದ ಕಿರೀಟ ತೊಡಿಸುತ್ತಾ ಇಂಡಿಯನ್ ಸಿನಿಮಾ ಇಂಡಸ್ಟ್ರಿ ತಿರುತಿರುಗಿ ನೋಡುವಂತೆ ಮಾಡ್ತಿದೆ.

ಇಡೀ ಸಿನಿಮಾ ಜಗತ್ತು ಎದುರುನೋಡ್ತಿರುವ, ಚಿತ್ರ ಪ್ರೇಮಿಗಳು‌ ಜಾತಕಪಕ್ಷಿಯಂತೆ ಕಾಯ್ತಿರುವ, ಬಹುನಿರೀಕ್ಷಿತ ಸಿನಿಮಾಗಳು ಎನಿಸಿಕೊಂಡಿರುವ, ಸೌತ್ ದುನಿಯಾದ ಬಹುತೇಕ ಎಲ್ಲಾ ಮೂವೀಗಳಿಗೂ ಲಹರಿ ಸಂಸ್ಥೆ ಕೋಟಿ ಕೋಟಿ ಚಿನ್ನದ ಹಾರ ಹಾಕಿದೆ. ಈ ಮೂಲಕ ಮಾಯಲೋಕದಲ್ಲಿ ಆಯಾ ಸಿನಿಮಾಗಳು ಸುನಾಮಿ ಎಬ್ಬಿಸುವಂತೆ ಮಾಡಿದೆ.

ಇವತ್ತು ಅಖಾಡದಲ್ಲಿ ಕೆಜಿಎಫ್ ಚಾಪ್ಟರ್2, ಆರ್ ಆರ್ ಆರ್, ಮಾರ್ಟಿನ್ ಅಬ್ಬರ ಆರ್ಭಟ ಜಾಸ್ತಿ ಐತೆ ಅಂದರೆ ಅದಕ್ಕೆ ಒಂದು ರೀತಿಯಲ್ಲಿ ಲಹರಿ ಮ್ಯೂಸಿಕ್ ಕೂಡ ಕಾರಣ. ತಮ್ಮ ತಮ್ಮ ಸಿನಿಮಾಗೆ ಆಯಾ ಸಿನಿಮಾ ತಂಡ ನಿದ್ದೆಗೆ ಚಟ್ಟಕಟ್ಟಿ ದುಡಿದಿರಬಹುದು, ಬೆವರೊಟ್ಟಿಗೆ ರಕ್ತಬಸಿದಿರಬಹುದು ಆದರೆ
ಅವರವರ ಪರಿಶ್ರಮಕ್ಕೆ ಬೆಂಬಲ ಅಲ್ಲದೇ ಬೇಡಿಕೆಯ ಬೆಲೆಯನ್ನ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿರುವ ಲಹರಿ ಸಂಸ್ಥೆಗೆ ಫಿಲ್ಮ್ ಟೀಮ್ ಮಾತ್ರವಲ್ಲ ಸಿನಿಮಾ ಪ್ರೇಮಿಗಳು ಕೂಡ ಚಪ್ಪಾಳೆ ತಟ್ಟಬೇಕು. ಕನ್ನಡದ ಹೆಮ್ಮೆಯ ಮ್ಯೂಸಿಕ್ ಸಂಸ್ಥೆಯನ್ನ ಆಕಾಶದೆತ್ತರಕ್ಕೆ‌ ಬೆಳೆಸಬೇಕು.

ಜಕ್ಕಣ್ಣ ಅಲಿಯಾಸ್ ರಾಜಮೌಳಿಯ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ಹಕ್ಕಿಗೆ ಲಹರಿ ಸಂಸ್ಥೆ 25 ಕೋಟಿ
ಸುರಿದಿದ್ದು ನಿಮ್ಗೆಲ್ಲಾ ಗೊತ್ತೆಯಿದೆ. ಈ ಮೂಲಕ ಆರ್ ಆರ್ ಆರ್ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ದುಬಾರಿ ಮೊತ್ತಕ್ಕೆ ಆಡಿಯೋ ಸೇಲ್ ಮಾಡಿದ ಮೊದಲ ಚಿತ್ರ ಎನಿಸಿಕೊಳ್ತು. ಈ ದಾಖಲೆಗೆ ಲಹರಿಯೇ ಕಾರಣ. ಅನಂತರ ಒನ್ ಟು ಡಬ್ಬಲ್ ಕೊಟ್ಟು‌ ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್ ನ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪಾರ್ಟ್ 1 ಗೆ 3.6 ಕೋಟಿ ಕೊಟ್ಟಿದ್ದ ಲಹರಿ ಕೆಜಿಎಫ್ ಎರಡನೇ ಭಾಗಕ್ಕೆ‌ 7.2 ಕೋಟಿ ಡೆಪಾಸಿಟ್ ಮಾಡಿ ಚಾಪ್ಟರ್ 2 ಗೆ ಡಿಮ್ಯಾಂಡ್ ಹೆಚ್ಚು ಮಾಡಿಕೊಡ್ತು.‌

ಅಚ್ಚರಿ ಅಂದರೆ ಹಾಡುಗಳನ್ನ ಕೇಳದೆಯೇ ಮಾರ್ಟಿನ್ ಸಿನಿಮಾದ ಆಡಿಯೋ ಹಕ್ಕುಗಳನ್ನು ಬ್ಲಾಕ್ ಮಾಡಿಕೊಂಡಿದ್ದು. ಇದು ಅದ್ಧೂರಿ ಜೋಡಿಯ
ಮೇಲಿರುವಂತಹ ಅಪಾರವಾದ ನಂಬಿಕೆ. ಬ್ಲಾಕ್ ಬಸ್ಟರ್ ಹಿಟ್ ಹಾಡುಗಳನ್ನೇ ಕೊಡ್ತಾರೆನ್ನುವ ಭರವಸೆಯಿಂದ ಸಿನಿಮಾ ಮುಹೂರ್ತಕ್ಕೆ‌ ಮೊದಲೇ ಮಾರ್ಟಿನ್ ಆಡಿಯೋ ರೈಟ್ಸ್ ನ ಲಹರಿ ತನ್ನ ಮುಡಿಗೇರಿಸಿಕೊಂಡಿದೆ. ಸೌತ್ ಸಿನಿಮಾದ ಜನಪ್ರಿಯ ಸಂಗೀತ ನಿರ್ದೇಶಕ ಮಾರ್ಟಿನ್ ಗೆ ಹಾಡುಗಳನ್ನ ಹೊಸೆಯುತ್ತಾರಂತೆ. ಯಾರು ಆ ಮ್ಯೂಸಿಕ್ ಮಾಂತ್ರಿಕ ಎನ್ನುವುದು ರಿವೀಲ್‌ ಆಗಬೇಕಿದೆ.

ಆರ್ ಆರ್ ಆರ್, ಕೆಜಿಎಫ್ ಚಾಪ್ಟರ್೨, ಮಾರ್ಟಿನ್ ಬೆನ್ನಲ್ಲೇ ವಿಕ್ರಾಂತ್ ರೋಣ ಚಿತ್ರದ ಆಡಿಯೋ ಹಕ್ಕುಗಳನ್ನ ದುಬಾರಿ ಮೊತ್ರಕ್ಕೆ ಖರೀದಿ ಮಾಡಿದೆ. ಎಷ್ಟು ‌ಕೋಟಿ‌ ಎನ್ನುವುದು ಬಟಾಬಯಲಾಗಿಲ್ಲವಾದರೂ ವಿಕ್ರಾಂತ್ ರೋಣನಿಗಾಗಿ ಕೋಟಿ ಕೋಟಿ ಸುರಿದಿದ್ದಾರೆ ‌ಎನ್ನುವ ಮಾತುಗಳು ಕೇಳಿಬರ್ತಿದೆ. ಆಡಿಯೋ ತೆಕ್ಕೆಗೆ ತೆಗೆದುಕೊಂಡಿರುವ ವಿಷ್ಯವನ್ನ ಲಹರಿ ತಮ್ಮ ಸೋಷಿಯಲ್ ಪೇಜ್ ನಲ್ಲಿ ಪ್ರಕಟಿಸಿದೆ. ವಿಕ್ರಾಂತ್ ರೋಣ ಮಾಯಲೋಕದ ಮಹಾಮೂವೀ. ಪ್ಯಾನ್ ಇಂಡಿಯಾ‌ ಲೆವೆಲ್ ನಲ್ಲಿ ತಯ್ಯಾರಾಗ್ತಿರುವ ಈ‌ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ. ಅನುಪ್ ಭಂಡಾರಿ ನಿರ್ದೇಶನ ಚಿತ್ರಕ್ಕಿದ್ದು, ನೀರಿನಂತೆ ಹಣವನ್ನು ನಿರ್ಮಾಪಕ ಜಾಕ್ ಮಂಜು ಖರ್ಚು ಮಾಡಿದ್ದಾರೆ. ಕಿಚ್ಚನ ಹುಟ್ಟುಹಬ್ಬಕ್ಕೆ ಫಸ್ಟ್ ಗ್ಲಿಂಪ್ಸ್ ಕೊಡುವುದಕ್ಕೆ ತಯ್ಯಾರಿ ನಡೆದಿದೆ. ಹೀಗಾಗಿ, ಫ್ಯಾನ್ಸ್ ಕೂಡ ಥ್ರಿಲ್ಲಾಗಿದ್ದಾರೆ.

ಒಟ್ನಲ್ಲಿ ಒಂದರ ಹಿಂದೆ ಒಂದರಂತೆ
ಸ್ಟಾರ್ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಖರೀದಿ ಮಾಡುತ್ತಿದೆ. ನೆಕ್ಸ್ಟ್ ಟಾರ್ಗೆಟ್ ಯಾವ ಸಿನಿಮಾ ? ಯಾವ ಚಿತ್ರಕ್ಕೆ ಲಹರಿ ಚಿನ್ನದ ಸರ ಕೊರಳಿಗೆ ಹಾಕಲಿದೆ ಕೂತೂಹಲದಿಂದ ಕಾಯಬೇಕು ಅಷ್ಟೇ.

ಎಂಟರ್ ಟೈನ್ಮೆಂಟ್ ಬ್ಯೂರೋ‌‌ ಸಿನಿಲಹರಿ

error: Content is protected !!