ಡಿಯರ್‌ ಆರ್ಯನ್‌ ಕಮಿಂಗ್‌ ಸೂನ್!‌ ಸೆಪ್ಟೆಂಬರ್‌ಗೆ ಡಿಯರ್ ಸತ್ಯ ಬರ್ತಾನೆ ಗುರು!!

ಆರ್ಯನ್‌ ಸಂತೋಷ್‌ ಕನ್ನಡ ಸಿನಿರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಸಿನಿಮಾ ಮೂಲಕ ರಂಗಿನ ದುನಿಯಾಗೆ ಎಂಟ್ರಿಯಾದ ಆರ್ಯನ್‌ ಸಂತೋಷ್‌, ಅ ನಂತರದ ದಿನಗಳಲ್ಲಿ “ನೂರು ಜನ್ಮಕು” ಸಿನಿಮಾ ಮೂಲಕ ಹೀರೋ ಆಗಿ ಕಾಣಿಸಿಕೊಂಡರು. ಅದಾದ ಬಳಿಕ ಒಂದಷ್ಟು ಕಥೆ ಹುಡುಕಾಟದಲ್ಲಿದ್ದ ಅವರು, ಕೊನೆಗೂ ಒಂದೊಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾದರು. ಅದೇ “ಡಿಯರ್‌ ಸತ್ಯ”. ಈ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲು ಹೀರೋ ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ…

ಹೀರೋ ಆರ್ಯನ್‌ ಸಂತೋಷ್‌ ಮೊಗದಲ್ಲಿ ಮಂದಹಾಸ ಬೀರಿದೆ. ಅದಕ್ಕೆ ಕಾರಣ, ಅವರ ಬಹುನಿರೀಕ್ಷೆಯ “ಡಿಯರ್‌ ಸತ್ಯ” ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬದಂದು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಈ ಟ್ರೇಲರ್‌ ಬಿಡುಗಡೆಯ ವಿಶೇಷವೆಂದರೆ, ಡೆಲಿವರಿ ಬಾಯ್ಸ್ ಟ್ರೇಲರ್‌ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಹೌದು, ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ “ಡಿಯರ್ ಸತ್ಯ” ಚಿತ್ರ ಸೆಪ್ಟೆಂಬರ್‌ಗೆ ಬಿಡುಗಡೆಯಾಗಲಿದೆ. ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಚಿತ್ರದ ಟ್ರೇಲರ್‌ ರಿಲೀಸ್‌ ಬಳಿಕ ಮಾತಿಗಿಳಿದ ಹೀರೋ ಆರ್ಯನ್‌ ಸಂತೋಷ್‌, “ನಾನು ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾನು, “ನೂರು ಜನ್ಮಕು” ಚಿತ್ರದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರು ಮುಂದೆ ಬರಲಿಲ್ಲ. ದೇವರ ಹಾಗೆ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಬಂದು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ ಎಂದರು ಆರ್ಯನ್ ಸಂತೋಷ್.

ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ “ಭಿನ್ನ” ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಓಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ “ಡಿಯರ್ ಸತ್ಯ” ನಿರ್ಮಾಣ ಮಾಡಿದ್ದೇವೆ. ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋ ಮೂಲಕ ಚಿತ್ರ ತಯಾರಾಗಿದೆ.‌

ಆರ್ಯನ್ ಸಂತೋಷ್ ನನ್ನ ಸ್ನೇಹಿತ. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ಪ್ಲಾನ್‌ ಇದೆ ಎಂಬುದು ನಿರ್ಮಾಪಕ ಗಣೇಶ್ ಪಾಪಣ್ಣ ಅವರ ಮಾತು. ಮತ್ತೊಬ್ಬ ನಿರ್ಮಾಪಕ ಶ್ರೀನಿವಾಸ ಶ್ರೀಭಕ್ತ ಕೂಡ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದರು.

“ಜಿಗರ್ ಥಂಡ”, “ತ್ರಾಟಕ”, “ಆ ದೃಶ್ಯ” ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದಿದ್ದೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು.‌ ನಂತರ ಈ ಚಿತ್ರ ಆರಂಭವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯ ಇಲ್ಲಿ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ. ಎಲ್ಲಾ‌ ತಂತ್ರಜ್ಞರು ಹಾಗೂ ಕಲಾವಿದರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಶಿವಗಣೇಶ್. ಆಡಿಷನ್ ಮೂಲಕ ಆಯ್ಕೆಯಾದ ನಾಯಕಿ ಅರ್ಚನಾ ಕೊಟ್ಟಿಗೆ, ಕಲಾವಿದರಾದ ಬಾಲು, ಕಾರ್ತಿಕ್ ಸುಬ್ರಹ್ಮಣ್ಯ, ಫ್ಯಾಷನ್ ಡೈರೆಕ್ಟರ್ ಭಾರ್ಗವಿ ವಿಖ್ಯಾತಿ ಹಾಗೂ ಸಾಹಸ ನಿರ್ದೇಶಕ ಕುಂಫು ಚಂದ್ರು ಮಾತನಾಡಿದರು.


ಇನ್ನು, “ಡಿಯರ್‌ ಸತ್ಯ” ಚಿತ್ರದಲ್ಲಿ ನಾಯಕ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನ ಡೆಲಿವರಿ ಬಾಯ್ಸ್ ಕೈಯಿಂದಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಆರ್ಯನ್ ಸಂತೋಷ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಿರ್ಮಾಪಕರಾದ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್ ಹಾಗೂ ಕರಿಸುಬ್ಬು ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Related Posts

error: Content is protected !!