ನಾಡಿನಾದ್ಯಾಂತ ಶ್ರೀಕೃಷ್ಣಜನ್ಮಾಷ್ಟಮಿಯ ಆಚರಣೆ ಜೋರಾಗಿದೆ. ದೇವಾಲಯಗಳಲ್ಲಿ ಅದ್ಧೂರಿ ಆಚರಣೆಗೆ ಅವಕಾಶ ಸಿಕ್ಕಿಲ್ಲವಾದರೂ ಕೂಡ ಮನೆಮನೆಯಲ್ಲಿ ಗೋಪಾಲನ ಜಪ-ತಪ ಮುಗಿಲು ಮುಟ್ಟಿದೆ. ತಮ್ಮ ತಮ್ಮ ಮನೆಯ ಮುದ್ದುಕಂದಮ್ಮಗಳಿಗೆ ಶ್ರೀಕೃಷ್ಣನ ವೇಷ ಹಾಕಿಸಿ ಸಂತೋಷಪಡುತ್ತಿದ್ದಾರೆ. ಅದರಂತೇ, ಸರ್ಜಾ ಫ್ಯಾಮಿಲಿ ಹಾಗೂ ಪನ್ನಾಗಭರಣ ಫ್ಯಾಮಿಲಿಯಲ್ಲಿ ಬಾಲಕೃಷ್ಣರ ಸಂಭ್ರಮ-ಸಡಗರ ಭರ್ಜರಿಯಾಗಿಯೇ ನಡೆದಿದೆ. ಜೂನಿಯರ್ ಚಿರು ಹಾಗೂ ವೇದ್ ಭರಣ ಇಬ್ಬರು ಕೃಷ್ಣನ ವೇಷ ಧರಿಸಿಕೊಂಡು ಬಾಲಕೃಷ್ಣರಾಗಿ ಮಿಂಚಿರುವ ಫೋಟೋಗಳನ್ನ ನಟಿ ಮೇಘನಾ ರಾಜ್ ತಮ್ಮ ಸೋಷಿಯಲ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. `ನನ್ನ ಬೆಣ್ಣೆ ಮುದ್ದು ಬಂಗಾರ’ ಅಂತ ಟ್ವೀಟ್ ಮಾಡಿ ಖುಷಿಪಟ್ಟಿದ್ದಾರೆ.
ಚಿರು ಹಾಗೂ ಪನ್ನಗ ಇಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದವರು ಈಗ ಜೂನಿಯರ್ ಚಿರು ಹಾಗೂ ಜೂನಿಯರ್ ವೇದ್ ಸ್ನೇಹಿತರಾಗಿದ್ದಾರೆ. ಮರಿ ಚಿರಂಜೀವಿಗೆ ಈಗಿನ್ನೂ ೧೦ ತಿಂಗಳು, ಇತ್ತ ವೇದ್‌ಗೆ ೩ ವರ್ಷ. ಇಬ್ಬರು ಕೂಡ ತಮ್ಮದೇ ಆದ ಪುಟ್ಟಪ್ರಪಂಚದಲ್ಲಿದ್ದಾರೆ. ಸ್ನೇಹ-ಗೆಳೆತನ- ದೋಸ್ತಿ ಇದ್ಯಾವುದರ ಅರಿವಿಲ್ಲ ಆದರೆ ಈ ಇಬ್ಬರ ಪುಟ್ಟಕಂದಮ್ಮಗಳ ಪೇರೆಂಟ್ಸ್ ಗೆ ಜೂನಿಯರ್ ಚಿರು ಹಾಗೂ ಜೂನಿಯರ್ ವೇದ್‌ನ ಬಾಲ್ಯದಿಂದಲೇ ಸ್ನೇಹಿತರನ್ನಾಗಿ ಮಾಡುವ ಕನಸಿದೆ. ಹೀಗಾಗಿ, ಹಬ್ಬ ಹರಿದಿನಗಳಲ್ಲಿ ಮೊದಲಿನಂತೆ ಒಟ್ಟಿಗೆ ಸೇರುತ್ತಾರೆ ಚಿರು ನೆನಪುಗಳನ್ನ ಮೆಲುಕು ಹಾಕುತ್ತಾ ಸಂಭ್ರಮಿಸುತ್ತಾರೆ. ಅದರಂತೇ, ಶ್ರೀಕೃಷ್ಣಜನ್ಮಾಷ್ಠಮಿಯಂದು ಒಂದೆಡೆ ಸೇರಿ ಜೂನಿಯರ್ ಚಿರು ಹಾಗೂ ವೇದ್‌ಗೆ ಬಾಲಕೃಷ್ಣನ ವೇಷಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಮುದ್ದುಕೃಷ್ಣರಂತೆ ಇಬ್ಬರು ರಾರಾಜಿಸಿದ್ದನ್ನ ಕಂಡು ಎರಡು ಫ್ಯಾಮಿಲಿಯವರು ಖುಷಿಪಟ್ಟಿದ್ದಾರೆ.
`ಬ್ರದರ್ ಫ್ರಮ್ ಅನದರ್ ಮದರ್’ ಅಂತಾರೇ. ಅದರಂತೇ, ಮರಿ ಯುವಸಾಮ್ರಾಟನ ಪಾಲಿಗೆ ಮುಂದಿನ ದಿನಗಳಲ್ಲಿ ವೇದ್ ಭರಣ ಅಣ್ಣನ ಸ್ಥಾನ ತುಂಬುವುದರಲ್ಲಿ ಡೌಟೇ ಇಲ್ಲ .ಈಗಾಗಲೇ ತಮ್ಮನನ್ನ ಪ್ರ‍್ರೊಟೆಕ್ಟ್ ಮಾಡುವ ಕೆಲಸವನ್ನ ವೇದ್ ಶುರು ಹಚ್ಚಿಕೊಂಡಿದ್ದಾನಂತೆ. ಫೋಟೋಶೂಟ್ ವೇಳೆ ಜೂನಿಯರ್ ಚಿರುನಾ ವೇದ್ ಸಿಕ್ಕಾಪಟ್ಟೆ ಕೇರ್ ಮಾಡಿದ್ನಂತೆ. ಇಬ್ಬರು ಒಟ್ಟಿಗೆ ಬೆಲೆಕಟ್ಟಲಾಗದ ಸಮಯವನ್ನ ಕಳೆದಿದ್ದಾರಂತೆ, ಆ ಎಲ್ಲಾ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಶೀಘ್ರದಲ್ಲೇ ಆ ಖುಷಿಯ ಕ್ಷಣಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ. ಸೀನಿಯರ್ಸ್ ನಂತರ ಜೂನಿಯರ್ಸ್ ನಡುವೆ ಇರುವ ಪ್ರೀತಿ ಹಾಗೂ ಬಾಂಡೇಜ್‌ನ ನೀವೆಲ್ಲಾ ನೋಡಬಹುದು. ಅಪ್ಪಂದಿರಂತೆ ಇವರಿಬ್ಬರು ಚಡ್ಡಿದೋಸ್ತ್ ಗಳಾಗಿ, ಕುಚುಕು ಗೆಳೆಯರಾಗಿ ಮುಂದುವರೆಯುತ್ತಾರೆ ಬಿಡಿ.
ಓ ಗೆಳೆಯ ಜೀವದ್ ಗೆಳೆಯ ನಿಂದು ತಾಯಿ ಪ್ರೀತಿ ಕಣೋ…ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ… ಹೀಗಂತ ಚಿರು ಹಾಗೂ ಪನ್ನಗ ಇಬ್ಬರು ಜೊತೆಯಾಗಿ ಹಾಡ್ತಿದ್ದರು. ಬರೀ ಹಾಡಿಗಷ್ಟೇ ಸೀಮಿತವಾಗದೇ ಹಾಗೆಯೇ ಬಾಳಿಬದುಕಿದರು. ಜೀವದ ಗೆಳೆಯರಾಗಿದ್ದ ಇವರಿಬ್ಬರ ನಡುವೆ ಒಡಹುಟ್ಟಿದ ಅಣ್ತಮ್ಮರಂತಹ ಬಾಂಧವ್ಯ- ಪ್ರೀತಿ ಹಾಗೂ ಒಡನಾಟವಿತ್ತು. ಗೆಳೆತನವನ್ನು ಹಾಗೂ ಸಹೋದರತ್ವವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಚಿರು ಹಾಗೂ ಪನ್ನಗರನ್ನ ನೋಡಿದವರು ಇದ್ದರೇ ಇವರಂತಹ ಸ್ನೇಹಿತರಿರಬೇಕು ಅಂತ ಕೊಂಡಾಡುತ್ತಿದ್ದರು. ಹೀಗಿರುವಾಗಲೇ ವಾಯುಪುತ್ರ ಚಿರು ಏಕಾಏಕಿ ಉಸಿರು ಚೆಲ್ಲಿದರು. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೇಹೋದರು. ಈ ಕ್ಷಣಕ್ಕೂ, ಯುವಸಾಮ್ರಾಟ ಚಿರು ಇಲ್ಲದ ಕ್ಷಣವನ್ನ ಅವರ ಕುಟುಂಬಕ್ಕೆ ಊಹಿಸಿಕೊಳ್ಳೋದಕ್ಕೆ ಸಾಧ್ಯವಾಗಲ್ಲ. ಆದರೆ, ಜೂನಿಯರ್ ಚಿರು ಬಂದ ಘಳಿಗೆಯಿಂದ ಮರಿ ಯುವಸಾಮ್ರಾಟನ ಕಣ್ಣಲ್ಲಿ, ನಗುವಲ್ಲಿ ಚಿರುನಾ ಕಾಣುವುದಕ್ಕೆ ಅವಕಾಶ ಸಿಕ್ಕಿದೆ. ಸರ್ಜಾ ಕುಟುಂಬ ಮಾತ್ರವಲ್ಲ ಇಡೀ ಕರುನಾಡು ಜೂನಿಯರ್ ರಾಜಮಾರ್ತಾಂಡನ ಮೊಗದಲ್ಲಿ ಚಿರಂಜೀವಿ ಸರ್ಜಾರನ್ನ ನೋಡ್ತಿದ್ದಾರೆ.
- ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ