ಗಾಂಧಿನಗರದಲ್ಲಿ ಟೈಟಲ್‌ ಮರುಬಳಕೆಗೆ ಬೀಳುತ್ತಾ ಬ್ರೇಕ್?‌ ಅಣ್ಣಾವ್ರ ಹಳೇ ಸಿನಿಮಾ ಟೈಟಲ್‌ ಬಳಸದಂತೆ ರಾಜ್‌ ಅಭಿಮಾನಿಗಳ ಆಗ್ರಹ

ಕನ್ನಡ ಚಿತ್ರರಂಗ ಮಾತ್ರವಲ್ಲ, ಪರಭಾಷೆಗಳಲ್ಲೂ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿವೆ. ಈಗಾಗಲೇ ಕನ್ನಡದಲ್ಲಿ ಅದೆಷ್ಟೋ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿರುವುದುಂಟು. ಈಗ ಹಳೆಯ ಸಿನಿಮಾಗಳ ಮರುಬಳಕೆಗೆ ಬ್ರೇಕ್‌ ಹಾಕಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೌದು, ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಹಳೇ ಸಿನಿಮಾಗಳ ಟೈಟಲ್‌ಗಳನ್ನು ಮರುಬಳಕೆ ಮಾಡಬಾರದು ಅನ್ನೋ ಹೋರಾಟ ಶುರುವಾಗಿದೆ. ಈ ಹೋರಾಟಕ್ಕೆ ಮುನ್ನುಡಿ ಬರೆದಿರೋದು ಡಾ.ರಾಜ್‌ಕುಮಾರ್‌ ಅಭಿಮಾನಿಗಳು. ವಿಶ್ವ ಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ, ಡಾ.ರಾಜ್‌ಕುಮಾರ್‌ ಅವರ ಹಳೆಯ ಚಿತ್ರಗಳ ಶೀರ್ಷಿಕೆಗಳನ್ನು ಮರುಬಳಕೆ ಮಾಡಬಾರದು. ಅಂತಹ ಶೀರ್ಷಿಕೆಗಳಿಗೆ ಅನುಮತಿ ಕೊಡಬಾರದು ಮತ್ತು ಅಂತಹ ಶೀರ್ಷಿಕೆ ಇರುವ ಚಿತ್ರಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಡಾ.ರಾಜ್‌ಕುಮಾರ್‌ ಅವರ ಹಳೆಯ ಸಿನಿಮಾಗಳ ಟೈಟಲ್‌ಗಳ ಮರುಬಳಕೆಗೆ ಅವಕಾಶ ಕೊಡಲೇಬಾರದು ಅಂತ ಪಟ್ಟು ಹಿಡಿದು ಹೋರಾಟಕ್ಕಿಳಿದಿರುವ ರಾಜ್ ಕುಮಾರ್ ಅಭಿಮಾನಿ ಸಂಘಗಳು ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಜೋರಾದ ಹೋರಾಟಕ್ಕೆ ಸಿದ್ಧತೆ ನಡೆಸಿವೆ. ಹಾಗೊಂದು ವೇಳೆ ಸದ್ದಿಲ್ಲದೆಯೇ, ಡಾ.ರಾಜಕುಮಾರ್‌ ಅವರ ಕೆಲವು ಹಳೆಯ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಂಡು ಕೆಲಸ ಮಾಡುವ ಚಿತ್ರತಂಡಗಳು ಎಚ್ಚೆತ್ತುಕೊಂಡು, ಕೂಡಲೇ ಆ ಶೀರ್ಷಿಕೆ ತೆಗೆದು ಹಾಕಿ ಬೇರೊಂದು ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಿಸಬೇಕು. ಒಂದು ವೇಳೆ ಡಾ.ರಾಜಕುಮಾರ್‌ ಅವರ ಹೇಳೇ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಇಷ್ಟಕ್ಕೂ ಈ ಹೋರಾಟ ಯಾಕಪ್ಪ ಅಂದರೆ, ಈಗಾಗಲೇ ಡಾ.ರಾಜಕುಮಾರ್‌ ಅವರ ನಟಿಸಿರುವ ಬಹುತೇಕ ಸಿನಿಮಾಗಳು ದಾಖಲೆ ಬರೆದಿವೆ. ಅದರಲ್ಲೂ ಒಳ್ಳೆಯ ಸಂದೇಶ ಹೊತ್ತು ಬಂದ ಸಿನಿಮಾಗಳು. ಅಂಥದ್ದೇ ಶೀರ್ಷಿಕೆಯಡಿ ಸಿನಿಮಾ ಮಾಡ್ತೀನಿ ಅಂದರೆ, ಅಭಿಮಾನಿಗಳು ಒಪ್ಪುವುದಿಲ್ಲ. ಈಗೀಗ ಬರುವ ಕಥೆಗಳಲ್ಲಿ ಮೌಲ್ಯವೇ ಇರುವುದಿಲ್ಲ. ಅಂತಹ ಸಿನಿಮಾಗಳಿಗೆ ಅಣ್ಣಾವ್ರ ಹಳೆಯ ಶೀರ್ಷಿಕೆ ಇಟ್ಟರೆ ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳದ್ದು.

ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹೊಸ ಸಿನಿಮಾಗಳ ಶೀರ್ಷಿಕೆ ಇರುವ ಪೋಸ್ಟರ್‌ಗಳು ಕಾಣಸಿಗುತ್ತಿವೆ. ಇಂತಹ ಸಿನಿಮಾಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.

ರಾಜ್‌ಕುಮಾರ್‌ ಅಭಿಮಾನಿಗಳ ಮನವಿಯನ್ನು ಸ್ವೀಕರಿಸಿರುವ ವಾಣಿಜ್ಯ ಮಂಡಳಿ, ಅಂತಹ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನೇನೋ ಕೊಟ್ಟಿದೆ. ಆದರೆ, ಕೆಲವರು ಶೀರ್ಷಿಕೆ ಮೂಲಕವೇ ಸಿನಿಮಾ ಮಾಡ್ತೀವಿ ಅಂತ ಹೊರಟರೆ? ಅದಕ್ಕೀಗ ಉತ್ತರವಿಲ್ಲ. ಮುಂದೆ ಸಿನಿಮಾಗಳಿಗೆ ತೊಂದರೆ ಆದರೂ ಆಗಬಹುದೇನೋ?

ರಾಜ್‌ ಅಭಿಮಾನಿಗಳಂತೂ ಮುನ್ನೆಚ್ಚರಿಕೆಯ ಕ್ರಮವಾಗಿಯೇ ಶೀರ್ಷಿಕೆ ಮರುಬಳಕೆ ಮಾಡಬೇಡಿ ಎಂಬ ಮನವಿ ಮಾಡಿದೆ. ಅದರಲ್ಲೂ ರಾಜ್‌ ಫ್ಯಾಮಿಲಿ ಕೂಡ ಒಳ್ಳೆಯ ಸಿನಿಮಾಗಳ ಶೀರ್ಷಿಕೆ ಬಳಸದಂತೆ ಈ ಹಿಂದೆಯೇ ಮನವಿ ಮಾಡಿತ್ತು. ಅದರಲ್ಲೂ “ಆಕಸ್ಮಿಕ” “ದಾರಿ ತಪ್ಪಿದ ಮಗ” ಸಿನಿಮಾ ಶೀರ್ಷಿಕೆ ಮರು ಬಳಕೆ ಬೇಡ ಎಂದಿತ್ತು. ಅಷ್ಟೇ ಯಾಕೆ ಈ ಹಿಂದೆ ಸಾನ್ವಿ ಶ್ರೀವಾತ್ಸವ್‌ ಅಭಿನಯದ “ಕಸ್ತೂರಿ ಮಹಲ್”‌ ಸಿನಿಮಾಗೆ “ಕಸ್ತೂರಿ ನಿವಾಸ” ಎಂಬ ಶೀರ್ಷಿಕೆ ಇಡಲಾಗಿತ್ತು.

ಕೊನೆ ಕ್ಷಣದಲ್ಲಿ ನಿರ್ದೇಶಕ ದಿನೇಶ್‌ ಬಾಬು ಅವರು, “ಕಸ್ತೂರಿ ನಿವಾಸ” ಶೀರ್ಷಿಕೆಯನ್ನು “ಕಸ್ತೂರಿ ಮಹಲ್‌” ಎಂದು ಬದಲಿಸಿದ್ದರು. ಅದೇನೆ ಇರಲಿ, ಈಗ ರಾಜ್‌ ಫ್ಯಾನ್ಸ್‌ ಒಕ್ಕೊರಲ ಮನವಿ ಮಾಡಿದ್ದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಹಳೆಯ ಸಿನಿಮಾಗಳ ಟೈಟಲ್ ಮರುಬಳಕೆಗೆ ಬ್ರೇಕ್ ಬೀಳುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಉಪಾದ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷ ಸಾರಾ ಗೋವಿಂದ್ , ಕಾರ್ಯದರ್ಶಿ ಎನ್ ಎಮ್ ಸುರೇಶ್ ಹಾಜರಿದ್ದರು.

ವಿಶ್ವಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಬ.ನಾ.ಮು.ರಾಜು, ವೆಂಕಟೇಶ್‌ರೆಡ್ಡಿ, ಟಿ.ಎಚ್ಮ್.ಎಂ.ಗೌಡ, ಕೃಷ್ಣಮೂರ್ತಿ, ಕೆಂಪಣ್ಣ, ಗುರುರಾಜ್‌, ದೇವರಾಜ್‌ ಹಾಗು ಪತ್ರಕರ್ತ ಪರಮ್‌ ಗುಬ್ಬಿ ಸೇರಿದಂತೆ ಇತರೆ ರಾಜ್‌ ಅಭಿಮಾನಿಗಳ ಸಂಘಟನೆಯ ಪದಾಧಿಕಾರಿಗಳು ಈ ವೇಳೆ ಇದ್ದರು.

Related Posts

error: Content is protected !!