ಜಡ್ಜ್ ಮೆಂಟ್ ಟ್ರೇಲರ್ ಗೆ ಎಲ್ಲೆಡೆ ಮೆಚ್ಚುಗೆ: ಮೇ 24ಕ್ಕೆ ಕ್ರೇಜಿಸ್ಟಾರ್ ಗೆ ಜನರ ತೀರ್ಪು

ಜಿ9 ಕಮ್ಯುನಿಕೇಷನ್ ಮೀಟಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದ ಜಡ್ಜ್ ಮೆಂಟ್” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. MMB legacy ಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಿರ್ಮಾಪಕ ಉದಯ್ ಕೆ ಮಹ್ತಾ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ನಿರ್ದೇಶಕ ಗುರುರಾಜ ಕುಲಕರ್ಣಿ ಮಾತನಾಡಿ, ಇದು ರವಿಚಂದ್ರನ್ ಅವರಿಗಾಗಿಯೇ ಮಾಡಿರುವ ಕಥೆ. ಲೀಗಲ್ ಥ್ರಿಲ್ಲರ್ ಜಾನರ್ ನ ಚಿತ್ರ. “ಯದ್ದಕಾಂಡ” ಚಿತ್ರದಲ್ಲಿ ವಕೀಲರಾಗಿ ರವಿಚಂದ್ರನ್ ಅವರ ಅಭಿನಯ ಇಂದಿಗೂ ಜನಪ್ರಿಯ. ಬಹಳ ವರ್ಷಗಳ ನಂತರ ಈ‌ ಚಿತ್ರದಲ್ಲಿ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ, ಮೇಘನಾ ಗಾಂವ್ಕರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ಅವರನ್ನು ಒಳಗೊಂಡ ಬಹು ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಮೇ 24 ಚಿತ್ರರಂದು ಕರ್ನಾಟಕ ಮಾತ್ರವಲ್ಲದೆ, ಡೆಲ್ಲಿ, ಮುಂಬೈ, ಲಕ್ನೋ, ಗೋವಾ, ಆಂದ್ರಪ್ರದೇಶ ಸೇರಿದಂತೆ ದೇಶದ ವಿವಿಧ ಕಡೆ ಪ್ರತಿಷ್ಠಿತ ರಿಲಯನ್ಸ್ ಎಂಟರ್ ಟೈನ್ಮೆಂಟ್ ಸಂಸ್ಥೆ ಮೂಲಕ ಬಿಡುಗಡೆಯಾಗಲಿದೆ ಎಂದರು.

ನಿರ್ದೇಶಕರು ಬಂದು ಕಥೆ ಹೇಳಿದಾಗ ಇಷ್ಟವಾಯಿತು. ಅಭಿನಯಿಸಲು ಒಪ್ಪಿಕೊಂಡೆ. ಈ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ‌. ಸಾಮಾನ್ಯವಾಗಿ ನನ್ನ ಸಿನಿಮಾ‌ ಹಾಡುಗಳ ಮೂಲಕ ಜನಪ್ರಿಯ.‌ ಆದರೆ ನನಗೆ ಈ ಚಿತ್ರದಲ್ಲಿ ಒಂದು ಹಾಡೂ ಇಲ್ಲ. ಈ ಚಿತ್ರದ ಹೆಸರು “ಜಡ್ಜ್ ಮೆಂಟ್”. ಆದರೆ ನಮ್ಮ ಸಿನಮಾ ನೋಡಿ ಪ್ರೇಕ್ಷಕ ನೀಡುವ ” ಜಡ್ಜ್ ಮೆಂಟ್ ” ಅಂತಿಮ ಎನ್ನುತ್ತಾರೆ ನಟ ರವಿಚಂದ್ರನ್.

ಚಿತ್ರದಲ್ಲಿ ಅಭಿನಯಿಸಿರುವ ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ರವಿಶಂಕರ್ ಗೌಡ, ರಾಜೇಂದ್ರ ಕಾರಂತ್, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಗಿ, ನವಿಲ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಸಂಕಲನಕಾರ ಕೆಂಪರಾಜ್, ಚಿತ್ರಕಥೆ ಬರೆದಿರುವ ವಾಸುದೇವ ಮೂರ್ತಿ ಸೇರಿದಂತೆ ಅನೇಕ ತಂತ್ರಜ್ಞರು “ದ ಜಡ್ಜ್ ಮೆಂಟ್” ಚಿತ್ರದ ಕುರಿತು ಮಾತನಾಡಿದರು.

ನಿರ್ಮಾಪಕರಾದ ಗುರುರಾಜ್ ಕುಲಕರ್ಣಿ(ನಾಡಗೌಡ), ಶರದ್ ನಾಡಗೌಡ, ವಿಶ್ವನಾಥ್ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ್, ಪ್ರತಿಮಾ ಬಿರಾದಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಹಾಡನ್ನು ಹಾಗೂ ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ.

Related Posts

error: Content is protected !!