ಬಹು ನಿರೀಕ್ಷಿತ ಸಿನಿಮಾ ‘ಭಜರಂಗಿ 2 ‘ ರಿಲೀಸ್ ಕ್ಯಾನ್ಸಲ್ ಆಗಿದ್ದೇಕ್ಕೆ ? ಹ್ಯಾಟ್ರಿಕ್ ಹೀರೋ ಶಿವಣ್ಣ ಫ್ಯಾನ್ಸ್ ಮಾತ್ರವಲ್ಲ ಇಡೀ ಕರುನಾಡಿನ ಸಿನಿ ಪ್ರೇಕ್ಷಕರೇ ಬೇಸರ ಮಾಡಿಕೊಂಡು ಕುಳಿತಿದ್ದಾರೆ. ಅನೌನ್ಸ್ ಆಗಿದ್ದ ಸಿನಿಮಾದ ರಿಲೀಸ್ ಡೇಟ್ ಯಾಕೆ ಮುಂದಕ್ಕೆ ಹೋಯ್ತು ? ಭಜರಂಗಿ ಅರ್ಭಟಕ್ಕೆ ಯಾರು ತಡೆ ಹಾಕಿದ್ದು? ಅಭಿಮಾನಿಗಳಲ್ಲಿರುವ ಪ್ರಶ್ನೆ ಇದು. ಸೆಪ್ಟೆಂಬರ್ 10ಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಚಿತ್ರ ತಂಡ ಈಗ ಉಲ್ಟಾ ಹೊಡೆದಿದ್ದು ಯಾಕೆ ? ಈ ಪ್ರಶ್ನೆಗಳಿಗೆಲ್ಲ ಇಲ್ಲಿ ಉತ್ತರವಾಗಿದ್ದಾರೆ ನಿರ್ದೇಶಕ ಎ. ಹರ್ಷ.
Exclusive …..
1 ನೀವೇ ಅನೌನ್ಸ್ ಮಾಡಿದ್ದ ರಿಲೀಸ್ ಡೇಟ್ ಯಾಕೆ ಈಗ ಕ್ಯಾನ್ಸಲ್ ಆಯ್ತು?
ಕಾರಣ ಏನು ಅಂತ ಹೇಳಿದ್ದು ಈಗಾಗ್ಲೇ ನಿಮ್ಗೂ ಗೊತ್ತಿರಬಹುದು, ಕೊರೋನಾ ಪರಿಸ್ಥಿತಿ ಮುಂದೆ ಕೂಡ ಯಾಕೋ ತಿಳಿಯಾಗೋ ಹಾಗೆ ಕಾಣುತ್ತಿಲ್ಲ. ಜತೆಗೆ ಸರ್ಕಾರ ಈಗಾಗ್ಲೇ ಗಡಿ ಜಿಲ್ಲೆಗಳಲ್ಲಿ ವಿಧಿಸಿರುವ ವೀಕೆಂಡ್ ಕರ್ಪ್ಯೂ ಮುಗಿಯೋ ಹಾಗೆಯೂ ಇಲ್ಲ. ನೈಟ್ ಕರ್ಪ್ಯೂ ಕೂಡ ಜಾರಿಯಲ್ಲಿದೆ. ಹಂಡ್ರೆಡ್ ಪರ್ಸೆಂಟ್ ಆಕ್ಯೂಪೆನ್ಸಿ ಸಿಗೋದು ಕೂಡ ಡೌಟು. ಅದೇ ಕಾರಣಕ್ಕೆ ಸದ್ಯಕ್ಕೆ ಈಗ ಬೇಡ ಅನ್ಕೊಂಡಿದ್ದೇವೆ.
2 ಇದೊಂದು ರೀತಿ ಫ್ಯಾನ್ಸ್ ಗೆ ಆಸೆ ಹುಟ್ಟಿಸಿ, ಓಡಿ ಹೋದಂತೆ ಅಲ್ವಾ?
ಹೌದು, ಬರ್ತೀವಿ ಅಂತ ಹೇಳಿದ್ದು ನಿಜವೇ, ಆದ್ರೆ ಪರಿಸ್ಥಿತಿ ಈಗ ಸರಿಯಿಲ್ಲ ಅಲ್ವಾ? ಅದಕ್ಕೆ ಟೀಮ್ ಕಡೆಯಿಂದ ಆದ ಡಿಸೈಡ್ ಇದು. ಅಂದುಕೊಡಂತೆ ಸಿನಿಮಾ ರಿಲೀಸ್ ಆಗ್ಲಿಲ್ಲ ಅಂತ ನಂಗೂ ಬೇಜಾರಿದೆ. ಯಾಕಂದ್ರೆ ರಿಲೀಸ್ ಆಗ್ತಿದೆ ಅಂತ ನಂಗೂ ಸಾಕಷ್ಟು ಖುಷಿ ಇತ್ತು. ಏನ್ಮಾಡ್ಲಿಕ್ಕೆ ಆಗುತ್ತೆ ಹೇಳಿ, ಸಿನಿಮಾಕ್ಕೆ ದುಡ್ಡು ಹಾಕಿದವರು ನಿರ್ಮಾಪಕರು. ಅವ್ರ ತೀರ್ಮಾನವೂ ಇಲ್ಲಿ ಮುಖ್ಯವಾಗುತ್ತೆ. ಯಾಕಂದ್ರೆ ಅವರು ಕಷ್ಟ ಪಟ್ಟು ದುಡ್ಡು ಹಾಕಿ ಸಿನಿಮಾ ಮಾಡಿದಾಗ, ಅವ್ರೀಗೂ ವಾಪಾಸ್ ಹಣ ಬರ್ಬೇಕು ಅಲ್ವಾ?
3 ಅದು ಸರಿ, ಮುಂದೆ ರಿಲೀಸ್ ಯಾವಾಗ?
ಸದ್ಯಕ್ಕೆ ಪ್ಲಾನ್ ಆಗಿಲ್ಲ. ಬಹುಶ: ಗಣೇಶ್ ಹಬ್ಬ ಮುಗಿದ್ಮೇಲೆ ಒಂದು ತೀರ್ಮಾನಕ್ಕೆ ಬರ್ತೀವಿ. ಆದ್ರೂ ಮೂರನೇ ಅಲೆ ಅಂತಾರೆ, ಲಾಕ್ ಡೌನ್ ಆಗುತ್ತೆ ಅಂತಾರೆ, ಕೊರೋನಾ ಹೆಚ್ಚಾಗುತ್ತಲೇ ಇದೆ ಅಂತಲೂ ಹೇಳ್ತಿದ್ದಾರೆ. ಪರಿಸ್ಥಿತಿ ಹಿಂಗೆಲ್ಲ ಇದ್ರೆ ಚಿತ್ರಮಂದಿರಕ್ಕೆ ಯಾರ್ ಸಿನ್ಮಾ ನೋಡ್ಲಿಕ್ಕೆ ಬರ್ತಾರೆ ಸರ್? ನಮ್ ಸಿನ್ಮಾಕ್ಕೆ ಚಿತ್ರಮಂದಿರಗಳಿಗೆ ಜನ ಬರ್ಬೇಕು, ಅವ್ರು ಸಿನ್ಮಾ ನೋಡಿ ಮೆಚ್ಚಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಶಿವಣ್ಣ ಫ್ಯಾನ್ಸಿಗೆ ಸಿನ್ಮಾ ಮಜಾ ಕೊಡ್ಬೇಕು. ಆಮೂಲಕವೇ ನಿರ್ಮಾಪಕರಿಗೆ ಹಾಕಿದ ಹಣ ವಾಪಾಸ್ ಬರ್ಬೇಕು ಅನ್ನೋದು ನಮ್ ಲೆಕ್ಕಚಾರ.
4 ‘ಭಜರಂಗಿ 2 ʼ ಈಗ ದೊಡ್ಡ ಕ್ಯಾನ್ವಾಸ್ ಮೇಲೆ ಬರ್ತಿದೆ, ವಿಶೇಷ ಅಂತ ಏನ್ ಹೇಳ್ಬಹುದು ?
ನಮ್ಗೆ ಎಲ್ಲವೂ ಇಲ್ಲಿ ಸ್ಪೆಷಲ್. ಯಾಕಂದ್ರೆ , ಪ್ರತಿ ಸಿನ್ಮಾ ಕೂಡ ಹಾಗೆ ಅಲ್ವಾ? ನನ್ನ ದೃಷ್ಟಿಯಲ್ಲಿ ಅದು ಸೀಕ್ವೆಲ್ ಆದ್ರೂ ಕೂಡ ಕಥೆ, ಚಿತ್ರಕಥೆ, ಸಂಭಾಷಣೆ, ಮೇಕಿಂಗ್ ಜತೆಗೆ ಪಾತ್ರವರ್ಗದ ವಿಚಾರದಲ್ಲೂ ಎಲ್ಲವೂ ಇಲ್ಲಿ ತಾಜಾ. ನನ್ನದೇ ಕಲ್ಪನೆಯಲ್ಲಿ ಒಂದೊಳ್ಳೆಯ ಕಥೆ ಹೆಣೆದು. ಅದಕ್ಕೆ ತಕ್ಕಂತೆ ಕ್ಯಾರೆಕ್ಟರ್ ಗಳನ್ನು ಸೃಷ್ಟಿಸಿ, ಅದಕ್ಕೆ ತಕ್ಕಂತೆ ಕಲಾವಿದರನ್ನು ಹಾಕ್ಕೊಂಡು, ಸಿನ್ಮಾ ಮಾಡಿದ್ದು ಪ್ರೇಕ್ಷಕರಿಗೆ ಹೊಸದೊಂದು ಸಿನ್ಮಾ ತೋರಿಸಬೇಕು ಅಂತಲೇ. ಅಂತಹದೊಂದು ಹೊಸ ಭಜರಂಗಿ ಇಲ್ಲಿದ್ದಾನೆ. ಕಥೆಯ ಜತೆಗೆ ಮೇಕಿಂಗ್ ನಲ್ಲೂ ಎಲ್ಲವೂ ಇಲ್ಲಿ ಅದ್ದೂರಿಯೇ.