Categories
ಸಿನಿ ಸುದ್ದಿ

‘ಕಿರುತೆರೆ’ಯತ್ತ ಮತ್ತೆ ಗೋಲ್ಡನ್‌ಸ್ಟಾರ್; ಬಂಗಾರದ ಹುಡ್ಗನ ಹೊಸ ರಿಯಾಲಿಟಿ ಶೋ !

ಗಂಧದಗುಡಿಯ ಬಂಗಾರದ ಗಣಿ ಗೋಲ್ಡನ್‌ಸ್ಟಾರ್ ಗಣೇಶ್ ಅವರು ಮತ್ತೆ ಕಿರುತೆರೆಯತ್ತ ಮುಖಮಾಡಿದ್ದಾರೆ. ಜೀ ಕನ್ನಡದ ಹೊಚ್ಚ ಹೊಸ ರಿಯಾಲಿಟಿ ಶೋದ ನಿರೂಪಣೆಯ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು ಮಳೆ ಹುಡುಗ ಹೋಸ್ಟ್ ಮಾಡಲಿರುವ ಪ್ರೋಗ್ರಾಂ ಕುರಿತು ನಿರೀಕ್ಷೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ಗಣೇಶ್ ಅಭಿನಯದ ಸಖತ್ ಸಿನಿಮಾ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಗಣಿ-ಸುನಿ ಕಾಂಬಿನೇಷನ್ ಚಿತ್ರವಾದ ‘ಸಖತ್’ಗೆ ಭರಪೂರ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೇ ಗಣಿ ಸ್ಮಾಲ್‌ಸ್ಕ್ರೀನ್ ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕಿರುತೆರೆಯಲ್ಲಿ ಮೂರನೇ ಇನ್ನಿಂಗ್ಸ್ ಶುರು ಮಾಡಿರುವ ಮುಂಗಾರುಮಳೆಯ ಪ್ರೀತಂ ಯಾವ್ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆ-ಮನ ತಲುಪೋದಕ್ಕೆ ಹೊರಟಿದ್ದಾರೆ ನೋಡೋಣ ಬನ್ನಿ.

ಗಣಿ ನನ್ನ ಮರೆತುಬಿಟ್ಯಾ? ಸಾಮಾನ್ಯ ಗಣಿ ಆಗಿದ್ದಾಗ ಚಾನ್ಸ್ ಕೊಟ್ಟಿದ್ದು ನಾನು, ಸ್ಟೇಜ್ ಅಂತ ಸಿಕ್ಕಿದ್ದು ನನ್ನಿಂದ, ಕಾರ್ಯಕ್ರಮ ಕೊಟ್ಟಿದ್ದು ನನ್ನ ಅಂಗಳದಲ್ಲಿ, ಮೆರವಣಿಗೆ ಹೊರಟಿದ್ದು ನನ್ನ ಅಖಾಡದಿಂದ, ಇಡೀ ಕರ್ನಾಟಕ ತಲುಪಿದ್ದು ನನ್ನ ಕೃಪೆಯಿಂದ, ಕನ್ನಡಿಗರ ಪ್ರೀತಿ- ಪ್ರೋತ್ಸಾಹ- ಅಭಿಮಾನ ಸಿಕ್ಕಿದ್ದು ನಾನ್ ನಿನಗೆ ಕೊಟ್ಟ ಅವಕಾಶದಿಂದ. ನನ್ನಿಂದ ಇಷ್ಟೆಲ್ಲಾ ಉಪಯೋಗ ಪಡೆದುಕೊಂಡ ಮೇಲೆ ನನ್ನ ಮರೆತರೆ ಹೆಂಗೆ ಗಣಿ? ಬೆಳೆದು ದೊಡ್ಡವನಾದ್ಮೇಲೆ ಬೆಡವಾದ್ನಾ ನಿಂಗೆ? ಇಷ್ಟೆನಾ ನೀನು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸ? ಹೀಗಂತ ಸ್ಮಾಲ್‌ಸ್ಕ್ರೀನ್ ಪ್ರಶ್ನೆ ಮಾಡುವ ಮೊದಲೇ ಸ್ಮಾಲ್‌ಸ್ಕ್ರೀನ್‌ನ ಖುಷಿಪಡಿಸುವ, ಕನ್ನಡಿಗರನ್ನು ಆನಂದ ಕಡಲಲ್ಲಿ ತೇಲಿಸುವ, ಎಲ್ಲದಕ್ಕಿಂತ ಹೆಚ್ಚಾಗಿ ಕಿರುತೆರೆಗೆ ಋಣಿಯಾಗಿರುವ ಕೆಲಸವನ್ನು ಗೋಲ್ಡನ್‌ಸ್ಟಾರ್ ಗಣೇಶ್ ಮಾಡ್ತಿದ್ದಾರೆ.

ಗೋಲ್ಡನ್‌ಸ್ಟಾರ್ ಗಣೇಶ್ ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟವರು ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕಾಮಿಡಿ ಟೈಮ್' ಕಾರ್ಯಕ್ರಮದ ಮೂಲಕ ಟಿವಿಯಲ್ಲಿ ಮೆರವಣಿಗೆ ಹೊರಟರು.ಯೂನಿಕ್ ಕಾನ್ಸೆಪ್ಟ್ ಮೂಲಕ ದಿಬ್ಬಣ ಹೊರಟ ಗಣಿ, ಕಾಮಿಡಿ ಕಿಕ್ ನೋಡುತ್ತಾ,ಬಕ್ರಾ ಮಾಡುತ್ತಾ ಕರುನಾಡ ಮಂದಿಗೆ ಕನೆಕ್ಟ್ ಆದರು.ಶೋ ಕ್ಲಿಕ್ ಆಯ್ತು ಕಾಮಿಡಿ ಟೈಮ್ ಗಣೇಶ್ ಅಂತಲೇ ಇಡೀ ಕರ್ನಾಟಕದಲ್ಲಿ ಮನೆಮಾತಾದರು.ಅಲ್ಲಿಂದ ಮೆಲ್ಲಗೆ ಬಣ್ಣದ ಲೋಕದತ್ತ ಕಣ್ಣಾಯಿಸಿದರು.ಗುಟ್ಟು ಚಿತ್ರಕ್ಕೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಎದುರಿಸಿದರು.ಸಣ್ಣ-ಪುಟ್ಟ ಪಾತ್ರ ಮಾಡುತ್ತಾ ಸಾಗಿಬಂದ ಗಣಿ ‘ಚೆಲ್ಲಾಟ’ ಚಿತ್ರದಲ್ಲಿ ಹೀರೋ ಆದರು. ಅದೇ ವರ್ಷ ಭಟ್ರ ಕೃಪೆಯಿಂದ ಮುಂಗಾರುಮಳೆ ಸುರಿಯಿತು ನೋಡಿ ಮುಂದಾಗಿದ್ದು ಇತಿಹಾಸ.

ಚೆಲ್ಲಾಟ'ಆಡಿಕೊಂಡು ‘ಮುಂಗಾರು ಮಳೆ’ ಸುರಿಸಿದ್ಮೇಲೆ ಗಣಿ ನಸೀಬೇ ಚೇಜ್ ಆಯ್ತು. ಕರುನಾಡಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಹುಟ್ಟಿಕೊಂಡರು. ಹೆಣೈಕ್ಳು ಹೃದಯಾನೇ ಕೊಟ್ಟರು. ಕಾಲ್‌ಶೀಟ್‌ಗೋಸ್ಕರ ಡೈರೆಕ್ಟರ್-ಪ್ರೊಡ್ಯೂಸರ್ ಕ್ಯೂ ನಿಂತರು. ಸ್ಟಾರ್‌ಡಮ್ ಜೊತೆಗೆ ಬೆಲೆಕಟ್ಟಲಾಗದ ಪ್ರೀತಿ-ಅಭಿಮಾನ ಹೊಳೆಯಾಗಿ ಹರಿದುಬಂತು.
ಹಸಿವು-ಅವಮಾನ-ನಿಂದನೆ-ಸೋಲು-ಕಷ್ಟ ಎಲ್ಲದಕ್ಕೂ ಫಲ ಸಿಗ್ತು. ಬಣ್ಣದ ಲೋಕದ ಕನಸೊತ್ತು ಖಾಲಿ ೨೦೦ ರೂಪಾಯಿ ತೆಗೆದುಕೊಂಡು ನೆಲಮಂಗಲದ ಅಡಕಮಾರನ ಹಳ್ಳಿಯಿಂದ ಬೆಂಗ್ಳೂರಿಗೆ ಬಂದಿದ್ದಕ್ಕೂ ಬದುಕು ಸಾರ್ಥಕತವಾಯ್ತು. ಮಾತ್ರವಲ್ಲ ಕಾಮಿಡಿ ಟೈಮ್ ಗಣೇಶ್ ಅಂತ ಇದ್ದ ಹೆಸರು ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಬದಲಾಯ್ತು. ಇಲ್ಲಿಂದ ಹಿಂತಿರುಗಿ ನೋಡಿದ್ದೆ ಇಲ್ಲ. ನಡುನಡುವೆ ಸಣ್ಣಪುಟ್ಟ ಸೋಲು ಕಂಡಿರಬಹುದು ಆದರೆ ಬಂಗಾರದ ಹುಡುಗ ಛಾರ್ಮ್ ಕಳೆದುಕೊಂಡಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಲೇ ಇದ್ದಾರೆ. ಪ್ರೇಕ್ಷಕ ಮಹಾಷಯರನ್ನು ರಂಜಿಸುತ್ತಲೇ ಇದ್ದಾರೆ.

ಸ್ಮಾಲ್‌ಸ್ಕ್ರೀನ್‌ನಿಂದ ಬಿಗ್‌ಸ್ಕ್ರೀನ್‌ನಲ್ಲಿ ಮಿಂಚೋ ಅವಕಾಶ ಗಿಟ್ಟಿಸಿಕೊಂಡಿರುವ ಗಣಿ ಯಾವತ್ತೂ ಕಿರುತೆರೆಯನ್ನ ಬಿಟ್ಟುಕೊಟ್ಟಿಲ್ಲ. ಟಿವಿ ಲೋಕದ ಮಂದಿ ಕಾಲ್‌ಶೀಟ್ ಕೇಳಿದಾಗ ಪ್ರೀತಿಯಿಂದ ಕೊಟ್ಟಿದ್ದಾರೆ. ಸಂಭಾವನೆ ಸಹಿತ ತನಗೆ ಕೊಟ್ಟ ಜವಬ್ದಾರಿಯನ್ನ ಅಷ್ಟೇ ಮುತುವರ್ಜಿಯಿಂದ ಮುಗಿಸಿಕೊಟ್ಟು ಬಂದಿದ್ದಾರೆ. ಹೌದು, ‘ಕಾಮಿಡಿ ಟೈಮ್’ ನಂತ್ರ ಬೆಳ್ಳಿತೆರೆಯಲ್ಲೇ ಬ್ಯುಸಿಯಾಗಿದ್ದ ಗೋಲ್ಡನ್‌ಸ್ಟಾರ್ ಕಳೆದ ಎರಡ್ಮೂರು ವರ್ಷದ ಹಿಂದೆ ‘ಸೂಪರ್ ಮಿನಿಟ್'ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಮತ್ತೊಮ್ಮೆ ಮೆರವಣಿಗೆ ಹೋಗಿಬಂದರು.

ಈಗ ಶುರುವಾಗ್ತಿದೆ ನಿಮ್ಮ ಗೋಲ್ಡನ್ ಮಿನಿಟ್ ಅಂದರೆ ಸೂಪರ್ ಮಿನಿಟ್’ ಎನ್ನುತ್ತಾ ಪ್ರೇಕ್ಷಕರನ್ನು ಒಂಟಿಕಾಲಿನಲ್ಲಿ ನಿಲ್ಲಿಸಿ, ಮಸ್ತ್ ಮನರಂಜನೆ ನೀಡಿದ ಹುಡುಗಾಟದ ಹುಡುಗ ಗಣಿ ಇದೀಗ ‘ಗೋಲ್ಡನ್ ಗ್ಯಾಂಗ್'ಜೊತೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೆಲಸ,ದುಡಿಮೆ,ಸಂಪಾದನೆಯ ನಡುವೆ ಮರೆಯಾದ ಸ್ನೇಹ,ಕಳೆದು ಹೋದ ಸ್ನೇಹಿತರನ್ನು ಹುಡುಕಿಕೊಂಡು ಹೊರಟಿರುವ ‘ಗೋಲ್ಡನ್ ಗ್ಯಾಂಗ್’ ನ ಬಂಗಾರದ ಗಣೇಶ್ ನಿರೂಪಣೆ ಮಾಡ್ತಿದ್ದಾರೆ. ಜೀ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಸದ್ಯಕ್ಕೆ ಪ್ರೋಮೋ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲೇ ಗೋಲ್ಡನ್ ಗ್ಯಾಂಗ್ ಆರಂಭವಾಗಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದಾದಾ ಕಟ್ಟಾಭಿಮಾನಿ ; ಈ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯಾನೇ ಇಲ್ಲ

ಸೂರ್ಯ ಚಂದ್ರರು ಇರೋವರೆಗೂ ಸಾಹಸಸಿಂಹ ವಿಷ್ಣುವರ್ಧನ್ ಜೀವಂತ ಎನ್ನುವ ಮಾತನ್ನು ಸಾರ್ವಕಾಲಿಕ ಸತ್ಯವನ್ನಾಗಿಸುವಲ್ಲಿ ಅಭಿಮಾನಿ ದೇವರುಗಳು ಶ್ರಮಿಸುತ್ತಿದ್ದಾರೆ. ವಿಷ್ಣುದಾದಾರ ನಡೆ-ನುಡಿಯನ್ನು ಅನುಸರಿಸುತ್ತಾ, ಕೋಟಿಗೊಬ್ಬನ ಗುಣಗಳನ್ನು- ಆದರ್ಶಗಳನ್ನು ಪಾಲಿಸುತ್ತಾ, ಅಗಲಿರುವ ಆಪ್ತರಕ್ಷನನ್ನು ಜೀವಂತವಾಗಿಸುತ್ತಿರುವ ಅಭಿಮಾನಿಗಳು, ದೇಹವೆಂಬ ದೇಗುಲದಲ್ಲಿ ಹೃದಯವಂತನನ್ನು ಪ್ರತಿಷ್ಠಾಪಿಸಿಕೊಂಡು ಆರಾಧಿಸುತ್ತಿದ್ದಾರೆ ಪೂಜಿಸುತ್ತಿದ್ದಾರೆ. ಬರೀ ಮನಸ್ಸಲ್ಲಿ ಕರ್ಣನ ಸ್ಮರಿಸಿದರೇ ಸಾಲದು, ಯಜಮಾನರನ್ನು ನಾವೆಷ್ಟು ಪ್ರೀತಿಸ್ತೇವೆ ಎಂಬುದನ್ನು ಅಚ್ಚೆ ಮೂಲಕ ತೋರಿಸೋಣವೆಂದು ಕೆಲವರು ಅಚ್ಚೆ ಹಾಕಿಸಿಕೊಳ್ಳೋದನ್ನು ನೋಡಿದ್ದೇವೆ. ಆದರೆ, ಈ ಅಭಿಮಾನಿಯ ಅಭಿಮಾನವನ್ನು ಪದಗಳಲ್ಲಿ ವರ್ಣಿಸೋಕೆ ಸಾಲಲ್ಲ. ಮೈಸೂರು ಮೂಲದ ಅಭಿಮಾನಿ ಸಾಹಸ ಸಿಂಹ ವಿಷ್ಣುದಾದಾರನ್ನು ಯಾವ ಪರಿ ಪ್ರೀತಿಸ್ತಾರೆ, ಆರಾಧಿಸುತ್ತಾರೆ, ಅಭಿಮಾನಿಸುತ್ತಾರೆ ಎನ್ನುವುದನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.

Categories
ಸಿನಿ ಸುದ್ದಿ

ಸಪ್ತಸಾಗರದಾಚೆ ಬರ್ತ್ ಡೇ ಆಚರಿಸಿಕೊಳ್ತಿರೋ ಮೋಹಕತಾರೆ-39 ಮುಗಿಸಿದ್ದಕ್ಕೆ ಖುಷಿಯಿದೆ ಅಂದ್ರು ಗೌರಮ್ಮ !

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ದಿವ್ಯಸ್ಪಂಧನಾಗೆ ಹುಟ್ಟುಹಬ್ಬದ ಸಂಭ್ರಮ. 39 ವರ್ಷಗಳನ್ನು ಪೂರೈಸಿರುವ ಮೋಹಕತಾರೆ 40ನೇ ವಸಂತಕ್ಕೆ ಕಾಲಿಟ್ಟಿದ್ದು ಸಪ್ತಸಾಗರದಾಚೆ ಬರ್ತ್ ಡೇನಾ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಚಂದನವನದ ಪದ್ಮಾವತಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದ್ದು ಸೋಷಿಯಲ್ ಮೀಡಿಯಾದ ಮೂಲಕ ರಮ್ಯಾ ಧನ್ಯವಾದ ಅರ್ಪಿಸುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡಿರುವ ಫೋಟೋ ಹಾಕಿ ಅಭಿಮಾನಿ ದೇವರುಗಳಿಗೆ ಹಾಗೂ ಆಪ್ತರಿಗೆ ಥ್ಯಾಂಕ್ಸ್ ಹೇಳ್ತಿರೋ ಗೌರಮ್ಮ, ದಯವಿಟ್ಟು ಎಲ್ಲರೂ ಮಾಸ್ಕ್ ಹಾಕಿಕೊಳ್ರಿ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.

ಅಟ್ಲಾಂಟಿಕ್ ಸಾಗರ ದಾಟಿ ಹೋಗಿರುವ ಗೌರಮ್ಮನಿಗೆ ಲೈಟಾಗಿ ಹೆಲ್ತ್ ಅಪ್‌ಸೆಟ್ ಆಗಿದೆ ಅನ್ಸುತ್ತೆ. ಹೀಗಾಗಿಯೇ ಟ್ವೀಟ್ ಮೂಲಕ `ನಂಗ್ಯಾಕೋ ಸುಸ್ತಾಗ್ತಿದೆ, ನಿದ್ದೆ ಕೂಡ ಬರ‍್ತಿದೆ, 39 ವರ್ಷ ಕಳೆದಿರುವುದಕ್ಕೆ ಖುಷಿಯಿದೆ ಅಂತ ಬರೆದುಕೊಂಡಿದ್ದಾರೆ. ಕಳೆದ ಎರಡು ದಿನದ ಹಿಂದೆ ಸ್ವಿಮ್ಮಿಂಗ್ ಮಾಡ್ತಿರುವ ಫೋಟೋಗಳನ್ನು ಇನ್ಸ್ಟಾ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಸಪ್ತಸಾಗರವನ್ನು ದಾಟಿ ಹೋಗಿರುವ ಹಿಂಟ್ ಕೊಟ್ಟಿದ್ದರು. ಕೊನೆಗೆ ಗೌರಮ್ಮನೇ ಟ್ವೀಟ್ ಮೂಲಕ ಅಟ್ಲಾಂಟಿಕ್ ಸಾಗರದಲ್ಲೆಲ್ಲೋ ತಂಗಿರುವುದಾಗಿ ತಿಳಿಸಿದ್ದಾರೆ. 40 ನೇ ವರ್ಷದ ಹುಟ್ಟುಹಬ್ಬವನ್ನು ಅಲ್ಲೆ ಎಲ್ಲೋ ಸೆಲಬ್ರೇಟ್ ಮಾಡಿಕೊಳ್ಳಲಿದ್ದಾರೆ.

ಮೋಹಕತಾರೆಯ ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ನಟಿಯ ಬರ್ತ್ಡೇನಾ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು, ಒಂದು ವರ್ಷವಾದರೂ ಕೂಡ ನಮ್ಮೊಟ್ಟಿಗೆ ನಮ್ಮ ಮೇಡಂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕೆಂದು ಕಾಯ್ತಿದ್ದಾರೆ. ಆದರೆ, ಚಿತ್ರರಂಗದಿಂದ ಕೊಂಚ ದೂರ ಉಳಿದಿರೋ ರಮ್ಯಾ ಮೇಡಂ ದಿಲ್ಲಿಗೆ ಹೋಗಿ ಸೆಟಲ್ ಆದ್ಮೇಲೆ ಫ್ಯಾನ್ಸ್ ಕೈಗೆ ಸಿಗ್ತಿಲ್ಲ. ವರ್ಷಕ್ಕೆ ಒಮ್ಮೆಯಾದರೂ ನೆಚ್ಚಿನ ತಾರೆಯ ದರುಶನ ಫ್ಯಾನ್ಸ್ ಗೆ ಸಿಗುತ್ತಿಲ್ಲ, ಸೆಲ್ಫಿಯಂತೂ ಇಲ್ಲವೇ ಇಲ್ಲ. ಅದ್ಯಾವಾಗ ಸ್ಯಾಂಡಲ್‌ವುಡ್ ಕ್ವೀನ್ ಜನುಮದಿನವನ್ನು ಆಚರಿಸುವ ಚಾನ್ಸ್ ಫ್ಯಾನ್ಸ್ ಗೆ ಸಿಗುತ್ತೋ? ಅದ್ಯಾವಾಗ ಲಕ್ಕಿ ಸುಂದರಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುವ ಅವಕಾಶ ಸಿಗುತ್ತೋ ಅಣ್ಣಮ್ಮ ತಾಯಿಗೆ ಗೊತ್ತು

ಬಣ್ಣದ ಲೋಕದಿಂದ ಅಂತರಕಾಯ್ದುಕೊಂಡಿರುವ ಊರಿಗೊಬ್ಳೆ ಪದ್ಮಾವತಿ `ಎಕ್ಸ್ಕ್ಯೂಸ್ ಮೀ’ ಎನ್ನುತ್ತಾ ಗಂಧದಗುಡಿಗೆ ಮರಳಬೇಕು. ಮತ್ತೆ ಬಣ್ಣ ಹಚ್ಚಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡಬೇಕು ಎನ್ನುವುದು ಅದೆಷ್ಟೋ ಸಿನಿಪ್ರಿಯರ ಕನಸು. ಆ ಆಸೆ ಕನಸು ಅದ್ಯಾವ ಸುಂದರ ಗಳಿಗೆಯಲ್ಲಿ ಸಾಕಾರಗೊಳ್ಳುತ್ತೋ ಗೊತ್ತಿಲ್ಲ. ಆದರೆ, ಗೌರಮ್ಮನ ಅಭಿಮಾನಿಗಳು ಮಾತ್ರ ನಮ್ಮ ಮೇಡಂ ಡೆಲ್ಲಿ ಬಿಟ್ಟು ಬೆಂಗ್ಳೂರಿಗೆ ಬರುತ್ತಾರೆ, ಗಾಂಧಿನಗರದಲ್ಲಿ ಮತ್ತೊಮ್ಮೆ ಎಲ್ಲಾ ಸ್ಟಾರ್‌ಗಳ ಜೊತೆ ಬಿಗ್‌ಸ್ಕ್ರೀನ್ ನಲ್ಲಿ ಮಿಂಚ್ತಾರೆ ಎನ್ನುವ ಮಹದಾಸೆ ಇಟ್ಟುಕೊಂಡಿದ್ದಾರೆ. ಆ ದಿವ್ಯ ಕನಸು ಈಡೇರಲಿ. 40 ಆದರೂ ಕೂಡ ಟಿನೇಜ್ ಹುಡ್ಗಿ ಥರ ಲಕಲಕ ಹೊಳೆಯೋ ಲಕ್ಕಿ ಗರ್ಲ್ ರಮ್ಯಾ ಸಿಲ್ವರ್‌ಸ್ಕ್ರೀನ್ ಮೇಲೆ ಸೆಕೆಂಡ್ ಇನ್ನಿಂಗ್ಸ್ ಶುರುವಿಟ್ಟುಕೊಳ್ಳಲಿ. ದಶಕಗಳು ಉರುಳಿದರೂ ಅಳಿಯದ ಹಳೆಯ ಚಾರ್ಮ್ಗೆ ಲಿಫ್ಟಿಕ್- ಐ ಲೈನರ್ ಹಚ್ಚಿ ಹೊಸ ರಂಗು ತುಂಬಲಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

25 ಕೋಟಿ ರೂ ಕೊಟ್ಟು RRR ಆಡಿಯೋ ಹಕ್ಕು ಖರೀದಿಸಿದವರನ್ನೇ ಸ್ಟೇಜ್ ಮೇಲೆ ಕರಿಲಿಲ್ಲಾ ಅಂದ್ರೆ…… ! ?

ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಶುಕ್ರವಾರ ಗ್ರಾಂಡ್‌ ಆಗಿ ನಡೆದ ʼಆರ್‌ಆರ್‌ಆರ್‌ʼ ಚಿತ್ರದ ಥೀಮ್‌ ಲಾಂಚ್‌ ಕಾರ್ಯಕ್ರಮ ಎರಡು ಕಾರಣಕ್ಕೆ ಸುದ್ದಿ ಆಗುತ್ತಿದೆ. ಅದರಲ್ಲೂ ಈವೆಂಟ್‌ ಆಯೋಜಿಸಿದ್ದ ಕೆವಿಎನ್‌ ಸಂಸ್ಥೆಯ ಪ್ರೋಗ್ರಾಮ್‌ ಚಾಕೌಟ್‌ ಬಗ್ಗೆಯೇ ಗುಸು ಗುಸು ಶುರುವಾಗಿದೆ. ಕೆವಿಎನ್‌ ಸಂಸ್ಥೆಯ ಮಾಲೀಕರು ಹಾಗೇಕೆ ಮಾಡಿದ್ರು ಅನ್ನೋದು ಈ ಚರ್ಚೆಯ ಸುತ್ತಣ ಪ್ರಧಾನ ವಿಷಯ. ಈವೆಂಟ್‌ನಲ್ಲಿ ಭಾಗವಹಿಸಿದ್ದವರ ಪ್ರಕಾರ ಈಗ ಚರ್ಚೆ ಆಗುತ್ತಿರುವ ವಿಷಯದ ಸುತ್ತ ಎರಡು ಕಾರಣಗಳಿವೆ. ಮೊದಲಿಗೆ ಇದ್ದಿದ್ದು ರಾಜಮೌಳಿ ಅವರು ತಾರಾತುರಿಯಲ್ಲಿ ಮಾತನಾಡಿ ಹೋಗಿದ್ದು. ಇದು ಅಲ್ಲಿದ್ದವರ ಪ್ರಶ್ನೆ ಮಾತ್ರವಲ್ಲ, ಮಾಧ್ಯಮವರಿಗೂ ನಿರಾಸೆ ಮೂಡಿಸಿದ ವಿಷಯವೇ ಹೌದು. ಮತ್ತೊಂದು ವಿಷಯ ಆರ್‌ ಆರ್‌ ಆರ್‌ ಚಿತ್ರದ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆಯ ಮಾಲೀಕರನ್ನೇ ವೇದಿಕೆಗೆ ಆಹ್ವಾನಿಸದೆ ಇದ್ದಿದ್ದು. ಇದೆಲ್ಲ ಆ ಕ್ಷಣಕ್ಕೆ ಔಚಿತ್ಯವೋ, ಇಲ್ಲವೋ ಅದು ಬೇರೆ ವಿಚಾರ, ಆದರೆ ಒಂದು ಸಿನಿಮಾ ಈವೆಂಟ್‌ ನಲ್ಲಿ ಹೀಗೆಲ್ಲ ಅಗೌರವಗಳಾದರೆ ದುಬಾರಿ ಬೆಲೆ ನೀಡಿ, ಆಡಿಯೋ ಹಕ್ಕು ಖರೀದಿಸಿದವರಿಗೆ ಏನೆಲ್ಲ ಅನಿಸಬಹುದು ಅನ್ನೋದು ಸಹಜವಾದ ಪ್ರಶ್ನೆ.

ನಿಮಗೆಲ್ಲ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಮೂಡಿಸಿರುವ ʼಆರ್‌ ಆರ್‌ ಆರ್‌ʼ ಚಿತ್ರ ಜನವರಿಗೆ ವಿಶ್ವದಾದ್ಯಂತ ರಿಲೀಸ್‌ ಆಗುತ್ತಿದೆ. ಸದ್ಯಕ್ಕೆ ಅದರ ಪ್ರಮೋಷನ್‌ ಕೆಲಸಗಳಲ್ಲಿಯೇ ಬ್ಯುಸಿ ಆಗಿರುವ ನಿರ್ದೇಶಕ ರಾಜಮೌಳಿ ಬೆಂಗಳೂರಿಗೆ ಬರುತ್ತಿದ್ದಾರೆಂದರೆ ಚಿತ್ರದ ಬಗ್ಗೆ ಸಾಕಷ್ಟು ಮಾತನಾಡುವುದು ಗ್ಯಾರಂಟಿ ಅಂತಲೇ ಶುಕ್ರವಾರ ಒರಾಯನ್‌ ಮಾಲ್‌ ಗೆ ಟವಿ ಮೀಡಿಯಾ ಹಾಗೂ ಆನ್‌ ಮೀಡಿಯಾದ ಕ್ಯಾಮೆರಾಗಳು ಲೆಕ್ಕವಿಲ್ಲದಷ್ಟು ಬಂದಿದ್ದವು. ಅಲ್ಲಿದ್ದು ದೃಶ್ಯ ಸೆರೆ ಹಿಡಿಯುವುದಕ್ಕೆ ಮಾತ್ರವಲ್ಲ, ಲೈವ್‌ ಕೊಡುವುದಕ್ಕೂ ಕ್ಯಾಮೆರಾ ಕಣ್ಣು ರೆಡಿ ಆಗಿದ್ದವು. ಮಾಧ್ಯಮದ ಅದೆಷ್ಟೋ ಜನ ಪತ್ರಕರ್ತರು ರಾಜಮೌಳಿ ಅವರಿಗೆ ಕೇಳುವುದಕ್ಕಾಗಿಯೇ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಬಂದಿದ್ದರು. ಅವರ ಜೇಬಿನಲ್ಲಿದ್ದ ಪ್ರಶ್ನೆಗಳ ಚೀಟಿಯೂ ಕೂಡ ರಾಜಮೌಳಿ ಅವರ ಆಗಮನಕ್ಕಾಗಿ ಕಾಯುತ್ತಿದ್ದವು. ಆದರೇನು, ಅಲ್ಲಿ ಆಗಿದ್ದೇ ಬೇರೆ.

ನಿರೀಕ್ಷೆಯಂತೆ ರಾಜಮೌಳಿ ಬಂದರು. ಮಧ್ಯಾಹ್ನ ೨ ಗಂಟೆಗೆ ಅಂತ ಕಾರ್ಯಕ್ರಮ ಫಿಕ್ಸ್‌ ಆಗಿದ್ದರೂ, ಅವರು ಬಂದಿದ್ದ ೩ ಗಂಟೆಗೆ. ಸಿನಿಮಾ ಕಾರ್ಯಕ್ರಮ ಅಂದ್ರೆ ಇದೆಲ್ಲ ಮಾಮೂಲು. ಅದರಲ್ಲೂ ರಾಜಮೌಳಿ ಚೆನ್ನೈನಿಂದ ಬರುತ್ತಿದ್ದಾರಂತೆ ಎಂಬುದಾಗಿ ಹೇಳಿದ್ದರಿಂದ ಇನ್ನೊಂದು ತಾಸು ಹೆಚ್ಚೇ ಆಗಿದ್ದರೂ, ಅದೆಲ್ಲ ಅಲ್ಲಿ ನಗಣ್ಯವೇ ಅನ್ನಿ. ಇರಲಿ, ಬಿಡಿ ಅಂತೂ ಬಂದರು. ಅವರೊಂದಿಗೆ ಅವರ ಪತ್ನಿ ರಮಾ ರಾಜಮೌಳಿ , ನಿರ್ಮಾಪಕ ಡಿ.ವಿ.ವಿ.ದಾನಯ್ಯ ಕೂಡ ಹಾಜರಿದ್ದರು. ಇನ್ನು ʼಆರ್‌ ಆರ್‌ ಆರ್‌ʼ ಚಿತ್ರದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳನ್ನು ಖರೀದಿಸಿರುವ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಕೂಡ ಬಂದಿದ್ದರು. ರಾಜಮೌಳಿ ಎಂಟ್ರಿ ಆದಾಗಲೇ ಒಂದು ಶಾಕ್‌ ಕೊಟ್ಟರು. ವೇದಿಕೆಯಲ್ಲಿ ಹಾಕಿದ್ದ ಆಸನಗಳನ್ನು ತೆರವು ಗೊಳಿಸಿದರು. ಅಲ್ಲಿದ್ದವರೆಲ್ಲ ಅಂದುಕೊಂಡಿದ್ದು, ಸ್ಕ್ರೀನ್‌ ಮೇಲೆ ಇನ್ನೇನೋ ಬರುತ್ತೆ ಅಂತ. ಆದರೆ, ರಾಜಮೌಳಿ ಅವರ ಲೆಕ್ಕಚಾರವೇ ಬೇರಿತ್ತು.

ಆಸನ ತೆರೆವುಗೊಳಿಸಿದ ವೇದಿಕೆಯಲ್ಲಿ ಮೊದಲು ಮಾತನಾಡಿದ್ದು ಕೆವಿಎನ್‌ ಸಂಸ್ಥೆಯ ಮಾಲೀಕರಾದ ವೆಂಕಟ್.‌ ಅವರು ʼಆರ್‌ಆರ್‌ಆರ್‌ʼ ಚಿತ್ರವನ್ನು ತಾವು ಕರ್ನಾಟಕದ ಹಕ್ಕು ಖರೀದಿಸಿದ್ದು, ಹಾಗೆಯೇ ಅದನ್ನು ಕನ್ನಡಕ್ಕೆ ಡಬ್‌ ಮಾಡಿ ತರುತ್ತಿರುವ ಬಗ್ಗೆ ಹೇಳಿಕೊಂಡರು. ಅವರ ಮಾತು ಮುಗಿಯುತ್ತಿದ್ದಂತೆಯೇ ರಾಜಮೌಳಿ ಮಾತಿಗೆ ಎಂಟ್ರಿಯಾಗಿಬಿಟ್ಟರು. ಅವರು ಮೊದಲು ಹೇಳಿದ್ದು, ಎರಡು ಕಾರಣಕ್ಕೆ ನನ್ನನ್ನು ಕ್ಷಮಿಸಿ ಅಂದವರೇ, ತಾವೀಗ ಸಿನಿಮಾ ಬಗ್ಗೆ ಹೆಚ್ಚು ಮಾತನಾಡೋದಿಲ್ಲ, ಈಗ ರಿಲೀಸ್‌ ಆಗುತ್ತಿರುವ ಥೀಮ್‌ ಸಾಂಗ್‌ ಜನನಿ ಮಾತನಾಡಬೇಕಿದೆ ಎನ್ನುತ್ತಲೇ ಎರಡೇ ನಿಮಿಷಗಳಲ್ಲಿಯೇ ಮಾತು ಮುಗಿಸಿ ಕುಳಿತವರೇ ಥೀಮ್‌ ಸಾಂಗ್‌ ವಿಡಿಯೋ ಪ್ಲೇ ಮಾಡೋದಿಕ್ಕೆ ಆರ್ಡರ್‌ ಮಾಡಿದರು. ಇನ್ನೇನು ಹಾಡುಮುಗಿದು ಲಹರಿ ಸಂಸ್ಥೆಯ ಮಾಲೀಕರು ಮಾತನಾಡಬಹುದು ಅಂತಲೇ ಎಲ್ಲರು ನಿರೀಕ್ಷಿಸಿದ್ದರು. ಆದರೆ ಅದ್ಯಾವುದಕ್ಕೂ ಅಲ್ಲಿ ಅವಕಾಶವೇ ಸಿಗಲಿಲ್ಲ. ಸಿಗಲಿಲ್ಲ ಎನ್ನುವದಕ್ಕಿಂತ ಕೆವಿಎನ್‌ ಸಂಸ್ಥೆಯವರು ಇದನ್ನು ಗಮನಿಸಲಿಲ್ಲ. ಈವೆಂಟ್‌ ಅನ್ನೋದು ಇದೇ ಮೊದಲಾದರೂ ಕೆವಿಎನ್‌ ಸಂಸ್ಥೆಯವರು ಇದನ್ನು ನಿಭಾಯಿಸಬೇಕಾಗಿದತ್ತಾದರೂ, ಲಹರಿ ಸಂಸ್ಥೆಯ ಮಾಲೀಕರು ಅಲ್ಲಿಯೇ ಇದ್ದರೂ ವೇದಿಕೆಗೆ ಆಹ್ವಾನಿಸದೆ ಒಂದ್ರೀತಿ ಮುಜುಗರಕ್ಕೆ ಒಳಪಡಿಸಿದರು ಎನ್ನುವ ಮಾತು ಈವೆಂಟ್‌ ಅಟೆಂಡ್‌ ಮಾಡಿದವರಿಗೂ ಅನಿಸಿದ್ದು ಹೌದು.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

RRR ಆತ್ಮ ಪರಿಚಯಿಸಿದ ರಾಜಮೌಳಿ ! ಜಕ್ಕಣ್ಣನ ಕಲ್ಪನೆಯ ‘ಜನನಿ’ಗೆ ಕನ್ನಡಿಗರು ಉಘೇ ಉಘೇ !

ಬಾಹುಬಲಿ ದೃಶ್ಯಕಾವ್ಯದ ಸೃಷ್ಟಿಕರ್ತ.. ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಬೆಂಗಳೂರಿಗೆ ಆಗಮಿಸಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್ ಚಿತ್ರದ ಬಹು ಮುಖ್ಯವಾದ ಜನನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ನಗರದ ಮಾಲ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಹಾಡನ್ನು ಬಿಡುಗಡೆ ಮಾಡಲಾಯಿತು.

ಹಾಡನ್ನು ಬಿಡುಗಡೆ ಮಾಡುವ ಮೊದಲೇ ಜಕ್ಕಣ್ಣಗಾರು, ಕನ್ನಡದಲ್ಲಿಯೇ ಮಾತು ಆರಂಭಿಸಿ, ಎರಡು ವಿಚಾರಗಳಿಗೆ ಕನ್ನಡಿಗರ ಕ್ಷಮೆ ಕೇಳುತ್ತೇನೆ. ನಾನು ಇಲ್ಲಿ ಹಾಡು ಬಿಡುಗಡೆ ಮಾಡಲು ಬಂದಿಲ್ಲ. ಈ ಕಾರ್ಯಕ್ರಮ ಸಿನಿಮಾದ ಪ್ರಚಾರನೂ ಅಲ್ಲ. ಜನನಿ ಹಾಡು ನಮ್ಮ ಆರ್ ಆರ್ ಆರ್ ಸಿನಿಮಾದ ಆತ್ಮ. ಆ ಆತ್ಮದೊಂದಿಗೆ ನಿಮ್ಮನ್ನು ಪರಿಚಯಿಸಲು ಬಂದಿದ್ದೇನೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಕೂಡ ಬರುತ್ತಾರೆ ಎಂದರು.

ಆರ್ ಆರ್ ಆರ್ ಸಿನಿಮಾ ಅನೌನ್ಸ್ ಆದಾಗಿನಿಂದ ನಿರೀಕ್ಷೆಯನ್ನು ದುಪ್ಪಟ್ಟು ಮಾಡುತ್ತಲೇ ಇದೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶಿಯಾ ಶರಣ್ ಸೇರಿದಂತೆ ದೊಡ್ಡ ತಾರಾಬಳಗ ನಟಿಸಿರುವ ಆರ್ ಆರ್ ಆರ್ ಸಿನಿಮಾದ ಎರಡು ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ದೋಸ್ತಿ ಹಾಗೂ ಹಳ್ಳಿ ನಾಟು ಹಾಡು ಭರ್ಜರಿ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಜನನಿ ಹಾಡು ಸಿನಿಪ್ರೇಕ್ಷಕಕುಲದ ಮುಂದೆ ಅರ್ಪಿಸಿದ್ದಾರೆ.

ಅದ್ಭುತ ದೃಶ್ಯಕಾವ್ಯದ ಜನನಿ ಹಾಡಿನ ಪ್ರತಿ ಫ್ರೇಮ್ ಅತ್ಯದ್ಭುತವಾಗಿ ಮೂಡಿ ಬಂದಿದೆ. ಸಂಗೀತ ನಿರ್ದೇಶಕ ಎಂ,.ಎಂ.ಕೀರವಾಣಿ ಮ್ಯೂಸಿಕ್ ಗುಂಗು..ಪ್ರತಿ ಪದಗಳು ಅಮೋಘವಾಗಿವೆ. ಕ್ರೋಧ, ಭಯದ ನಡುವೆ ಮನಕಲುವ ದೃಶ್ಯಗಳು ನೋಡುಗರ ಕಣಂಚುಗಳು ಒದ್ದೆ ಮಾಡುತ್ತವೆ.

3 ನಿಮಿಷದ 10 ಸೆಕೆಂಡ್ ನ ಜನನಿ ಹಾಡು ಬೇರೆಯದ್ದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಸೆಂಥಿಲ್ ಕುಮಾರ್ ಪ್ರತಿ ದೃಶ್ಯಗಳನ್ನು ಕ್ಯಾಮೆರಾ ಕಣ್ಣುಗಳಲ್ಲಿ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಾಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿರುವ ಜನನಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಜನವರಿ 7ಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರ್ತಿದೆ.

Categories
ಸಿನಿ ಸುದ್ದಿ

ಆರ್ ಆರ್ ಆರ್ ಪ್ರಮೋಷನ್ ಗೆ ಬೆಂಗಳೂರಿಗೆ ಬಂದು ಬಾಹುಬಲಿ ಜಕ್ಕಣ್ಣ ಕೊಟ್ಟಿದ್ದೆಂತಾ ಮಾಂಜ ?

ಬರೀ ತೆಲುಗು ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್‌ಆರ್‌ಆರ್‌. ರಾಜಮೌಳಿ ನಿರ್ದೇಶನ ಅನ್ನೋದಷ್ಟೇ ಅಲ್ಲ ಜೂನಿಯರ್‌ ಎನ್‌ಟಿಅರ್‌, ರಾಮ್‌ ಚರಣ್‌ ತೇಜ್‌, ಅಜಯ್‌ ದೇವಗನ್‌, ಆಲಿಯಾ ಭಟ್‌, ಶ್ರೇಯಾ ಶರಣ್‌ ಒಳಗೊಂಡಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಅದೇ ಕಾರಣಕ್ಕೆ ಬಾಲಿವುಡ್‌ ಸೇರಿದಂತೆ ಭಾರತೀಯ ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿರುವ ಈ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ತೆರೆ ಬರಲಿದೆ. ಚಿತ್ರ ತಂಡವೇ ಹಾಗಂತ ಅಧಿಕೃತ ಮಾಹಿತಿ ರಿವೀಲ್‌ ಮಾಡಿದೆ.

ಸದ್ಯಕ್ಕೆ ಅದರ ಪ್ರಮೋಷನ್‌ ಚಟುವಟಿಕೆ ಶುರು ಮಾಡಿರುವ ಚಿತ್ರ ತಂಡ ಶುಕ್ರವಾರ ಚಿತ್ರದ ಥೀಮ್‌ ಸಾಂಗ್‌ ಜನನಿ ಹಾಡನ್ನು ರಿಲೀಸ್‌ ಮಾಡಿದೆ. ಸದ್ಯಕ್ಕೆ ಕನ್ನಡದ ವರ್ಷನ್‌ ನಲ್ಲಿ ಲಾಂಚ್‌ ಆಗಿರುವ ಈ ಹಾಡಿನ ಲಿರಿಕಲ್‌ ವಿಡಿಯೋ ನೋಡುಗ ಹಾಗೂ ಕೇಳುವ ಗುಂಡಿಗೆ ಒಂದು ಕ್ಷಣ ಎದೆ ಝೆಲ್‌ ಎನ್ನುವಂತೆ ಮಾಡುವುದು ಗ್ಯಾರಂಟಿ. ಸಾಂಗ್‌ ಲಾಂಚ್‌ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ನಡೆಯಿತು.

ಕೆವಿಎನ್‌ ಪ್ರೊಡಕ್ಷನ್ಸ್‌ ಹೌಸ್‌ ಆಯೋಜಿಸಿದ್ದ ಈವೆಂಟ್‌ ಗೆ ನಿರ್ದೇಶಕ ರಾಜಮೌಳಿ ಬಿಡುವು ಮಾಡಿಕೊಂಡು ದೂರದ ಹೈದ್ರಾಬಾದ್‌ ನಿಂದ ಬಂದಿದ್ದರು. ಬಹು ದಿನಗಳ ನಂತರ ಆಯೋಜಿಸಿದ್ದಲಾಗಿದ್ದ ಮೊದಲ ಕಾರ್ಯಕ್ರಮ ಆಗಿದ್ದರಿಂದ ನಿರ್ದೇಶಕ ರಾಜಮೌಳಿ ಅವರು ಸಾಂಗ್‌ ರಿಲೀಸ್‌ ನೆಪದಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ಳಬಹುದೆನ್ನುವ ನಿರೀಕ್ಷೆ ಮಾಧ್ಯಮದವರಲ್ಲಿತ್ತು. ಅದೇ ಕಾರಣಕ್ಕೆ ಸಾಟ್‌ ಲೈಟ್‌ ವಾಹಿನಿಯವರು, ಯುಟ್ಯೂಬರ್ಸ್‌ ಸೇರಿದಂತೆ ಅಲ್ಲಿಗೆ ಬಂದವರೆಲ್ಲ ತಮ್ಮ ಮೊಬೈಲ್‌ ತೆಗೆದು ಲೈವ್‌ ಮಾಡಲು ಸಿದ್ದರಾಗಿದ್ದರು.

ಆದರೆ ಅವರಿಗೆ ನಿರ್ದೇಶಕ ರಾಜಮೌಳಿ ದೊಡ್ಡ ಶಾಕ್‌ ಕೊಟ್ಟರು. ಇದು ಚಿತ್ರದ ಥೀಮ್‌ ಸಾಂಗ್‌ ಲಾಂಚ್.‌ ಅದೇ ಮಾತನಾಡಬೇಕಿದೆ, ನಾನು ಈಗ ಮಾತನಾಡೋದಿಲ್ಲ. ಮುಂದೆ ಅಂದ್ರೆ ಡಿಸೆಂಬರ್‌ ನಲ್ಲಿ ಬೆಂಗಳೂರಿನಲ್ಲಿ ದೊಡ್ಡ ಈವೆಂಟ್‌ ಮಾಡುವ ಪ್ಲಾನ್‌ ಇದೆ, ಅವತ್ತು ಜೂನಿಯರ್‌ ಎನ್‌ ಟಿಆರ್‌, ರಾಮ್‌ ಚರಣ್‌ ತೇಜ್‌ , ಆಲಿಯಾ ಭಟ್‌, ಶ್ರೇಯಾ ಶರಣ್‌ ಸೇರಿದಂತೆ ಇಡೀ ತಂಡವೇ ಇಲ್ಲಿರಲಿದೆ. ಅವತ್ತು ಮಾಧ್ಯಮದವರು ಕೇಳುವ ಪ್ರತಿ ಪ್ರಶ್ನೆಗೆ ಮುಖಾಮುಖಿಯಾಗಿ ಮಾತನಾಡಲಾಗುವುದು ಅಂದವರೇ ಮೈಕ್‌ ಇಟ್ಟು ಕುಳಿತು ಕೊಂಡರು. ಆನಂತರ ಚಿತ್ರದ ಥೀಮ್‌ ಸಾಂಗ್‌ ಜನನಿ ಲಿರಿಕಲ್‌ ವಿಡಿಯೋ ಪ್ರದರ್ಶಿಸಲಾಯಿತು.

ಅಂದ ಹಾಗೆ, ಬಹು ನಿರೀಕ್ಷಿತ ಆರ್‌ ಆರ್‌ ಆರ್‌ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ಗ್ರಾಂಡ್‌ ರಿಲೀಸ್‌ ಆಗಲಿದೆ. ಇದು ಕನ್ನಡದ್ಲೂ ಡಬ್‌ ಆಗಿ ಬರುತ್ತಿದೆ. ಕರ್ನಾಟಕಕ್ಕೆ ಈ ಚಿತ್ರದ ವಿತರಣೆಯ ಹಕ್ಕನ್ನು ಕೆವಿಎನ್‌ ಸಂಸ್ಥೆ ಪಡೆದಿದೆ. ಸರಿ ಸುಮಾರು ೨೦ ಕೋಟಿ ಗೆ ಈ ಹಕ್ಕು ಪಡೆದುಕೊಂಡಿದೆ ಎನ್ನುತ್ತಿವೆ ಮೂಲಗಳು. ಒಟ್ಟಾರೆ ಆರ್‌ ಆರ್ ಆರ್‌ ಚಿತ್ರ ೩೦೦ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಡಿವಿವಿ ಸಂಸ್ಥೆ ಇದಕ್ಕೆ ಬಂಡವಾಳ ಹಾಕಿದೆ.

Categories
ಸಿನಿ ಸುದ್ದಿ

ಕಣ್ಣಿದ್ದು ಕುರುಡರಾಗಿ ಬದುಕೋರು`ಸಖತ್’ ಸಿನ್ಮಾ ಬಾಲು ಥರ ಬದುಕಿ !

ಚಿತ್ರ ವಿಮರ್ಶೆ: ಸಖತ್


ನಿರ್ದೇಶನ-ಸುನಿ
ನಿರ್ಮಾಣ-ನಿಶಾ ವೆಂಕಟ್ ಕೋಣಂಕಿ
ತಾರಾಗಣ- ಗಣೇಶ್-ಸುರಭಿ-ನಿಶ್ವಿಕಾ ನಾಯ್ಡು-ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್- ರವಿಶಂಕರ್, ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ
ಇತರರು

  • ವಿಶಾಲಾಕ್ಷಿ

ಜಗವೇ ಒಂದು ನಾಟಕರಂಗ , ನಾವಿಲ್ಲಿ ಪಾತ್ರಧಾರಿಗಳು ಅಷ್ಟೇ. ಸೂತ್ರಧಾರನ ಅಣತಿಯಂತೆ ಬಣ್ಣ ಬಳಿದುಕೊಳ್ಳದೇ ನಟನೆ ಮಾಡುವವರು ಇದ್ದಾರೆ. ಸಾರಥಿ ಆಜ್ಞೆಯಂತೆ ಬಣ್ಣ ಹಚ್ಚಿಕೊಂಡು ಅಭಿನಯಿಸುವವರು ಇದ್ದಾರೆ. ತರಹೇವಾರಿ ಪಾತ್ರಕ್ಕಾಗಿ ಬಣ್ಣ ಹಚ್ಚಿ ಆಕ್ಟಿಂಗ್ ಮಾಡುವವರನ್ನು ಕಣ್ಮುಂಚಿಕೊಂಡು ನಂಬಬಹುದು. ಆದರೆ ಮುಖವಾಡ ಹಾಕಿಕೊಂಡು ಜಬರ್ದಸ್ತ್ ಪರ್ಫಾಮೆನ್ಸ್ ಕೊಡುವವರನ್ನು ಯಾವುದೇ ಕಾರಣಕ್ಕೂ ನಂಬೋದಕ್ಕೆ ಆಗೋದಿಲ್ಲ. ಅಂದ್ಹಾಗೇ, ಈ ಭೂಮಿ ಮೇಲೆ ದೇವರ ದಯದಿಂದ ಕಣ್ಣನ್ನು ವರವಾಗಿ ಪಡೆದು ಬದುಕುವವರು ಇದ್ದಾರೆ. ದೃಷ್ಟಿ ಕಳೆದುಕೊಂಡು ದೇವರ ಮಕ್ಕಳಾಗಿ ಜೀವಿಸುವವರು ಇದ್ದಾರೆ. ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್'ಸಿನಿಮಾ ಗೋಲ್ಡನ್ ಗಣಿಯ ಬಹುನಿರೀಕ್ಷಿತ ‘ಸಖತ್’ ಚಿತ್ರ ಅದ್ದೂರಿಯಾಗಿ ತೆರೆಕಂಡಿದೆ. ಕಣ್ಣಿದ್ದು ಕುರುಡರಾಗಿ ಬದುಕುವವರು `ಸಖತ್’ ಸಿನಿಮಾದ ಬಾಲು ಥರ ಬದುಕಿದರೆ ಚೆಂದ ಎನ್ನುವ ಮೆಸೇಜ್ ಕೂಡ ಸಿಕ್ಕಿದೆ.

ಶುಭಶುಕ್ರವಾರ ರಾಜ್ಯಾದ್ಯಂತ ಮುಂಗಾರುಮಳೆ ಹುಡುಗನ ಬಹುನಿರೀಕ್ಷೆಯ ಸಖತ್' ಸಿನಿಮಾ ತೆರೆಕಂಡಿದೆ. 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಬಿಡುಗಡೆಯಾಗಿದೆ. ರಿಲೀಸ್ ಆದಂತಹ ಎಲ್ಲಾ ಚಿತ್ರಮಂದಿರಗಳಲ್ಲೂ ‘ಸಖತ್'ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.ಫಸ್ಟ್ ಡೇ ಫಸ್ಟ್ ಶೋ ನೋಡಿ ಥಿಯೇಟರ್‌ನಿಂದ ಹೊರಬಂದ ಚಿತ್ರಪ್ರೇಮಿಗಳು ಮುಗುಳುನಗೆ ಬೀರಿದ್ದಾರೆ.ಎರಡು ವರ್ಷಗಳ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಗೋಲ್ಡನ್‌ಸ್ಟಾರ್ ಗಣೇಶ್ ಸಿನಿಮಾವನ್ನು ಪ್ರೇಕ್ಷಕ ಮಹಾಷಯರು ಅದ್ದೂರಿಯಾಗಿ ವೆಲ್‌ಕಮ್ ಮಾಡಿಕೊಂಡಿದ್ದಾರೆ.ಬಾಸ್ ಈಸ್ ಬ್ಯಾಕ್’ ಎನ್ನುತ್ತಾ ಅವರ ಫ್ಯಾನ್ಸ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹಾಗಂತ, ಗೋಲ್ಡನ್ ಗಣಿಯ `ಸಖತ್’ ಸಿನಿಮಾ ಸಖತ್ತಾಗಿದೆ ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸೋದಕ್ಕೆ ಆಗಲ್ಲ. ಆದರೆ. ಕಾಸು ಕೊಟ್ಟು ಚಿತ್ರಮಂದಿರಕ್ಕೆ ಬಂದಂತಹ ಸಿನಿಮಾ ಪ್ರೇಮಿಗಳಿಗೆ ಮೋಸ ಅಂತೂ ಆಗೋದಿಲ್ಲ.

ಹಾಗಾದ್ರೆ ‘ಸಖತ್'ಸಿನ್ಮಾ ಕಥೆ ಏನು? ಸಖತ್’ ಸಿನ್ಮಾವನ್ನು ಚಿತ್ರಮಂದಿರಕ್ಕೆ ಹೋಗಿ ಯಾಕ್ ನೋಡ್ಬೇಕು? ‘ಸಖತ್'ಸಿನ್ಮಾದ ವಿಶೇಷತೆಗಳೇನು? ಚಿತ್ರದಲ್ಲಿ ಹೊಸದೇನಿದೆ? ಮೆಸೇಜ್ ಏನಿದೆ? ಹೀಗೆ ಒಂದಿಷ್ಟು ಪ್ರಶ್ನೆಗಳು ಅಕೌಂಟ್‌ನಿಂದ 500 ಡ್ರಾ ಮಾಡ್ಕೊಂಡು ಮೂವೀ ನೋಡೋಕೆ ಹೋಗುವಾಗ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು. ಖಜಾನೆಯಿಂದ ನಾಲ್ಕು ಕಾಸು ಖರ್ಚು ಮಾಡುವಾಗ ಇಂತಹ ಪ್ರಶ್ನೆಗಳು ಬರಬೇಕು ನಿಜ ಆದರೆ ಮನರಂಜನೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಅಲ್ಲವೇ? ಹೀಗಾಗಿ, ಮೈಂಡ್ ಫ್ರೀ ಆಗ್ಬೇಕು, ಕಣ್ಣಿಗೆ ಹೊಸ ಪ್ರಪಂಚ ತೋರಿಸ್ಬೇಕು, ಮನಸ್ಸು ಹಗುರಾಗಬೇಕು, ಹೊಟ್ಟೆ ಹುಣ್ಣಾಗದೇ ಇದ್ದರೂ ಪರವಾಗಿಲ್ಲ ನಕ್ಕು ಬಾಯಿ ನೋವು ಬರಬೇಕು ಎನ್ನುವ ಕಾರಣಕ್ಕಾದರೂ ನೀವು ಗೋಲ್ಡನ್ ಗಣಿ ಹಾಗೂ ಸಿಂಪಲ್ ಸುನಿಯ ಕಾಂಬಿನೇಷನ್‌ನಲ್ಲಿ ಬಂದಿರುವ ಎರಡನೇ ಸಿನಿಮಾ ‘ಸಖತ್’ನ ಥಿಯೇಟರ್‌ಗೆ ಹೋಗಿ ನೋಡ್ಲೆಬೇಕು.

ಸಖತ್'ಚಿತ್ರದಲ್ಲಿ ಗಣೇಶ್ ಅವ್ರದ್ದು ಅಂಧನ ಪಾತ್ರ ಅಂತೇಳಿ ಟೀಸರ್-ಟ್ರೇಲರ್ ಬಿಟ್ರೂ ಕೂಡ,ಸಿನಿಮಾ ಪ್ರೇಕ್ಷಕರಿಗೆ ಗಣಿ ಕಣ್ಣಿದ್ದು ಕುರುಡನಂತೆ ಡವ್ ಮಾಡಿರಬಹುದು ಎನ್ನುವ ಡೌಟ್ ಇತ್ತು.ಆ ಡೌಟ್ ನಿಜ ಕೂಡ.ಆದರೆ,ಸಖತ್’ ಸಿನಿಮಾದ ಬಾಲು ಪಾತ್ರಧಾರಿ ಗಣೇಶ್ ಅವರು ಕುರುಡನಂತೆ ವರ್ತಿಸಲಿಕ್ಕೂ ಒಂದು ಕಾರಣವಿದೆ. ಅದೇನು ಅನ್ನೋದನ್ನು ನೀವು ಥಿಯೇಟರ್‌ಗೆ ಹೋಗಿ ಕುಂತ್ಕೊಂಡು ನಿಮ್ಮ ಕಣ್ಣುಗಳನ್ನು ಅರಳಿಸಿಕೊಂಡೇ ನೋಡ್ಬೇಕು. ಅದರಂತೇ, ಜೂನಿಯರ್ ಬಾಲು ಪಾತ್ರದಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡಿರುವ ಗಣಿ ಮಗನನ್ನು ನೀವು ಬಿಗ್‌ಸ್ಕ್ರೀನ್‌ನಲ್ಲೇ ಕಣ್ತುಂಬಿಕೊಳ್ಳಬೇಕು.

ಎಸ್ ಪಿ ಬಾಲು ಆಗ್ಬೇಕು ಎಂಬುದು ಸಖತ್' ಸಿನಿಮಾದ ಬಾಲು ಕನಸು. ಬಾಲ್ಯದಿಂದಲೇ ಇಂತಹದ್ದೊಂದು ಕನಸು ಕಂಡಿದ್ದ ಬಾಲು ನನಗೆ ಕಣ್ಣು ಕಾಣಲ್ಲ ಅಂತ ಸಿಂಪತಿ ಗಿಟ್ಟಿಸಿಕೊಂಡು ‘ಅಂತ್ಯಾಕ್ಷರಿ’ ಸಿಂಗಿಂಗ್ ರಿಯಾಲಿಟಿ ಶೋಗೆ ಎಂಟ್ರಿಕೊಡ್ತಾನೆ. ಅಲ್ಲಿ ಆಂಕರ್ ಮಯೂರಿ (ಸುರಭಿ) ಮೇಲೆ ಬಾಲುಗೆ ಲವ್ವಾಗುತ್ತೆ. ಹೇಗಾದರೂ ಮಾಡಿ ಮಯೂರಿನಾ ಬಲೆಗೆ ಹಾಕಿಕೊಳ್ಳಬೇಕು ಅಂತ ಕುರುಡನಂತೆ ನಟಿಸುತ್ತಾನೆ. ಬಾಲು ಡವ್ ಡ್ರಾಮ ವರ್ಕೌಟ್ ಆಗುತ್ತಾ? ಬಾಲು ಪ್ರೀತಿಯನ್ನ ಮಯೂರಿ ಒಪ್ಪಿಕೊಳ್ತಾಳಾ? ಇವರಿಬ್ಬರ ಮಧ್ಯೆ ಅಂಧೆ (ನಕ್ಷತ್ರ) ನಿಶ್ವಿಕಾ ನಾಯ್ಡು ಎಂಟ್ರಿಯಿಂದ ಕಥೆಗೆ ಯಾವ್ ರೀತಿ ಟ್ವಿಸ್ಟ್ ಸಿಗಲಿದೆ? ಇದೆಲ್ಲದಕ್ಕಿಂತ ಹೆಚ್ಚಾಗಿ ಕಣ್ಣಿದ್ದರೂ ಕೂಡ ಕೆಲವೊಮ್ಮೆ ಕುರುಡನಂತೆ ವರ್ತಿಸೋದ್ರಿಂದ ಏನ್ ಲಾಭ ಇದೆ? ಸೊಸೈಟಿಗೆ ಯಾವ್ ರೀತಿಯ ಕೊಡುಗೆ ಕೊಡಬಹುದು. ಈ ಸೂಕ್ಷ್ಮ ಸಂದೇಶವನ್ನು ಹಾಸ್ಯದ ಜೊತೆಗೆ ನಿರ್ದೇಶಕ ಸಿಂಪಲ್ ಸುನಿ ಕಟ್ಟಿಕೊಟ್ಟಿದ್ದಾರೆ. ಗೋಲ್ಡನ್ ಗಣಿ ಜೀವತುಂಬಿ ಅಭಿನಯಿಸಿದ್ದಾರೆ. ಮಾಳವಿಕಾ ಅವಿನಾಶ್-ರಂಗಾಯಣ ರಘು-ಸಾಧುಕೋಕಿಲ-ಕುರಿಪ್ರತಾಪ್-ಶೋಭರಾಜ್-ರಘುರಾಮ್- ಧರ್ಮಣ್ಣ-ಗಿರಿ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಚಮಕ್' ಕೊಟ್ಟು ಗೆದ್ದಿದ್ದ ಗಣಿ-ಸುನಿಸಖತ್’ ಸಿನಿಮಾದಲ್ಲಿ ಗಿಮಿಕ್ ಮಾಡಿ ಗೆದ್ದಿದ್ದಾರೆ. ಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧೆ-ಕಾಂಪಿಟೇಷನ್-ಟಿಆರ್‌ಪಿ ಅಂತ ಅಣುಕು ಪ್ರದರ್ಶನ ಮಾಡಿದರಾದರೂ ಕೂಡ ಹಾಸ್ಯಕ್ಕೆ ಒತ್ತು ನೀಡಿ ಪ್ರೇಕ್ಷಕ ಮಹಾಷಯರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ‘ಸಖತ್'ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿರೋದ್ರಿಂದ ಕೋರ್ಟ್ ರೂಮ್ ಡ್ರಾಮದ ಕಥೆಗೆ ಸೀರಿಯಸ್ ಟಚ್ ಕೊಟ್ಟಿಲ್ಲ.ಆದರೆ,ಒಂದು ಸೀರಿಯಸ್ ಮ್ಯಾಟರ್‌ನ ತಗೊಂಡು ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ.ಕಣ್ಣಿದ್ದು ಕುರುಡರಾಗಿ ಬದುಕೋರುಸಖತ್’ ಸಿನ್ಮಾ ಬಾಲು ಥರ ಬದುಕಿದರೆ ಚೆಂದ ಅನ್ನೋದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಮೊದಲ ಭಾರಿಗೆ ಅಂದನ ಪಾತ್ರ ಮಾಡಿ ಗಣಿ ಸೈ ಎನಿಸಿಕೊಂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತದ ಪ್ರೀತಿಗೆ ಕಣ್ಣಿಲ್ಲ' ಸಾಂಗು ಎಲ್ಲರ ಮನಸ್ಸಲ್ಲಿ ಉಳಿಯುತ್ತೆ.ಸಂತೋಷ್ ರೈ ಪತಾಜೆ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತೆ.ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ‘ಸಖತ್’ ಪ್ರೇಕ್ಷಕರಿಗೆ ಫುಲ್‌ಮೀಲ್ಸ್ ಕೊಟ್ಟಿದೆ ಅದು ಮಾತ್ರ ಸತ್ಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪೊಲೀಸ್‌ ವಿಚಾರಣೆ ಎದುರಿಸಿ ಬಂದ ಹಂಸಲೇಖ- ಪೊಲೀಸ್‌ ಠಾಣೆ ಮುಂದೆ ಪರ-ವಿರೋಧದ ಪ್ರತಿಭಟನೆಯ ಬಿಸಿ

ನಾದಬ್ರಹ್ಮ ಹಂಸಲೇಖ ಗುರುವಾರ ಪೊಲೀಸ್‌ ವಿಚಾರಣೆ ಎದುರಿಸಿದರು. ಬೆಂಗಳೂರಿನ ಬಸವನಗುಡಿ ಪೊಲೀಸ್‌ ಠಾಣೆಗೆ ಮಧ್ಯಾಹ್ನ ೧೨ ಗಂಟೆಗೆ ಹಾಜರಾಗಿದ್ದರು. ಅವರೊಂದಿಗೆ ವಕೀಲ ಸಿ.ಎಸ್.‌ ದ್ವಾರಕಾನಾಥ್‌ ಹಾಗೂ ಲತಾ ಹಂಸಲೇಖ ಹಾಜರಿದ್ದರು. ಅಲ್ಲಿ ಇನ್ಸ್ ಪೆಕ್ಟರ್ ರಮೇಶ್‌ ನೇತೃತ್ವದ ತಂಡದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿ ಬಂದರು. ಅಂದ ಹಾಗೆ, ಅವರು ಇಷ್ಟಾಗಿಯೂ ಇವತ್ತು ಪೊಲೀಸ್‌ ವಿಚಾರಣೆಗೆ ಹಾಜರಾಗಿದ್ದು ಮೈಸೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮವೊದರಲ್ಲಿ ಅವರು ಆಡಿದ ಮಾತುಗಳ ವಿರುದ್ದ ದೂರು ದಾಖಲಾಗಿದ್ದ ಕಾರಣಕ್ಕೆ .

ಅಧಿಕೃತ ಮಾಹಿತಿ ಪ್ರಕಾರ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದೆ. ಪೊಲೀಸರು ಕೇಳಿದ ೨೫ ರಿಂದ ೩೦ ಪ್ರಶ್ನೆಗಳಿಗೆ ಉತ್ತರಿಸಿ ಬಂದಿದ್ದಾರೆ. ಹಂಸ ಲೇಖ ಪರ ವಕೀಲ ದ್ವಾರಕನಾಥ್‌ ವಿಚಾರಣೆ ವಿವರ ಹಂಚಿಕೊಂಡಿದ್ದು, ಇಂದಿನ ವಿಚಾರಣೆ ಮುಗಿದಿದ್ದು, ಮತ್ತೆ ವಿಚಾರಣೆಗೆ ಬರಬೇಕಾದರೆ ಬರುತ್ತೇವೆ. ಕಾನೂನಿನ ಮೇಲೆ ನಂಬಿಕೆ ಇದೆ. ಹೋರಾಟ ಮುಂದುವರೆಸುತ್ತೇವೆ ಎಂದರು. ಇದೇ ವೇಳೆ ವಿಚಾರಣೆ ಎದುರಿಸಿ ಪೊಲೀಸ್‌ ಠಾಣೆ ಯಿಂದ ಹೊರ ಬಂದ ನಾದ ಬ್ರಹ್ಮ ಹಂಸಲೇಖ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಆದರೆ ಹಂಸಲೇಖ ವಿಚಾರಣೆಗೆ ಬಂದ ವೇಳೆ ಅವರ ಪರ ವಿರೋಧ ನಡೆದ ಪ್ರತಿಭಟನೆ ಕುರಿತು ಡಿಸಿಪಿ ಹರೀಶ್‌ ಪಾಂಡೆ ಪ್ರತಿಕ್ರಿಯೆ ನೀಡಿದರು. ಠಾಣೆ ಮುಂದೆ ಹೈಡ್ರಾಮಾ ನಡೆದಿಲ್ಲ, ಪರ ವಿರೋಧ ಮಾಡುವವರು ಪ್ರತಿಭಟನೆ ಮಾಡಿದ್ದಾರಷ್ಟೇ. ನಾವು ಕೋರ್ಟ್‌ ಗೆ ಎಲ್ಲಾ ರೀತಿಯಲ್ಲೂ ಉತ್ತರ ನೀಡಬೇಕು. ಹೀಗಾಗಿ ಎಲ್ಲಾ ರೀತಿಯಿಂದಲೂ ತನಿಖೆ ಮಾಡುತ್ತೇವೆ ಎಂದರು. ಬೆಳಗ್ಗೆ ಹಂಸಲೇಖ ಅವರು ವಿಚಾರಣೆಗೆ ಅಂತ ವಕೀಲರ ಜತೆಗೆ ಪೊಲೀಸ್‌ ಠಾಣೆಗೆ ಬಂದ ಸಂದರ್ಭದಲ್ಲಿ ಅವರ ಪರವಾಗಿ ಕೆಲವು ಕನ್ನಡ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಬಜರಂಗದಳದ ಕಾರ್ಯಕರ್ತರು ಹಂಸಲೇಖ ವಿರುದ್ದ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಪೊಲೀಸ್‌ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Categories
ಸಿನಿ ಸುದ್ದಿ

ಇರುಮುಡಿ ಹೊತ್ಕೊಂಡು-ಅಪ್ಪು ಫೋಟೋ ಕೈಲಿಡಿದುಕೊಂಡು ಅಯ್ಯಪ್ಪನ ದರ್ಶನ ಪಡೆದ ಪುನೀತ್ ಅಭಿಮಾನಿ !

ಅಯ್ಯಪ್ಪನ ಪರಮಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಬೆಟ್ಟದ ತುದಿಯಲ್ಲಿ ದರುಶನ ನೀಡುವ ಜ್ಯೋತಿಯನ್ನು ಕಣ್ತುಂಬಿಕೊಳ್ಳೋದಕ್ಕೆ ನಾಡಿನಾದ್ಯಂತ ಜನರು ಶಬರಿಮಲೆ ಕಡೆ ಮುಖ ಮಾಡಿದ್ದಾರೆ. ಅದರಲ್ಲಿ ಓರ್ವ ಪವರ್‌ಸ್ಟಾರ್ ಅಭಿಮಾನಿ ಕೊರಳಿಗೆ ಮಾಲೆ ಧರಿಸಿಕೊಂಡು, ತಲೆ ಮೇಲೆ ಇರುಮುಡಿ ಹೊತ್ಕೊಂಡು, ಕೈಲಿ ಅಪ್ಪು ಫೋಟೋ ಹಿಡಿದುಕೊಂಡು ಹದಿನೆಂಟು ಮೆಟ್ಟಿಲುಗಳನ್ನೇರಿ ಅಯ್ಯಪ್ಪನ ಸನ್ನಿಧಿಗೆ ತೆರಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.

ಅಪ್ಪು ಕೂಡ ಅಯ್ಯಪ್ಪನ ಅಪ್ಪಟ ಭಕ್ತರಾಗಿದ್ದರು. ಅಪ್ಪಾಜಿ ಡಾ. ರಾಜ್‌ಕುಮಾರ್ ಅವ್ರಂತೆ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸುತ್ತಿದ್ದರು. ಶ್ರದ್ಧಾ-ಭಕ್ತಿಯಿಂದ ನಮಿಸುತ್ತಿದ್ದರು ಮಾತ್ರವಲ್ಲದೇ ಮಾಲೆ ಹಾಕಿಕೊಂಡು ಕಟ್ಟುನಿಟ್ಟಾಗಿ ವ್ರತ ಮಾಡುತ್ತಿದ್ದ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ತಂದೆಯಂತೆ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದರು.
ದೊಡ್ಮನೆಯಲ್ಲಿ ಅಯ್ಯಪ್ಪನ ಪೂಜೆ-ಪುನಸ್ಕಾರ ನೆರವೇರಿಸಿ ಅನ್ನಸಂತರ್ಪಣೆ ಮಾಡಿಸಿ ಪ್ರತಿವರ್ಷ ಶಬರಿಮಲೆಗೆ ತೆರಳುವುದು ದೊಡ್ಮನೆ ಕುಟುಂಬಸ್ಥರ ವಾಡಿಕೆ.

ಹೌದು, ಅಪ್ಪಾಜಿ ಕಾಲದಿಂದಲೂ ಶಬರಿಮಲೆಗೆ ತೆರಳುವ ಪದ್ದತಿ ದೊಡ್ಮನೆಯಲ್ಲಿದೆ. ಕುಟುಂಬಸ್ಥರು ಹಾಗೂ ಆಪ್ತರೊಟ್ಟಿಗೆ ವರನಟ ಡಾ. ರಾಜ್‌ಕುಮಾರ್ ಅವರು ಅಯ್ಯಪ್ಪನ ದರುಶನಕ್ಕೆ ಹೋಗುತ್ತಿದ್ದರು. ಆಗಲೇ ಅಪ್ಪಾಜಿಯ ಹೆಗಲ ಮೇಲೆ ಕುಳಿತುಕೊಂಡು ಶಬರಿಮಲೆಗೆ ತೆರಳುತ್ತಿದ್ದ ಅಪ್ಪು ಬೆಳೆದು ದೊಡ್ಡವರಾದ್ಮೇಲೆ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಜೊತೆಗೆ ಬೆಟ್ಟ ಏರಿ ಇಳಿಯುತ್ತಿದ್ದರು. ಕೊರೊನಾ ಅಟ್ಟಹಾಸದಿಂದ ಅಯ್ಯಪ್ಪನ ಸನ್ನಿಧಿಗೆ ತೆರಳುವುದಕ್ಕೆ ಆಗಿರಲಿಲ್ಲ. ಬಹುಷಃ ಈ ವರ್ಷ ಶಬರಿಮಲೆಗೆ ಹೋಗುವ ಪ್ಲ್ಯಾನ್ ಇತ್ತೋ ಏನೋ ಗೊತ್ತಿಲ್ಲ. ಅಷ್ಟರಲ್ಲಿ ನಿಜಜೀವನದಲ್ಲಿ ಭಕ್ತ ಪ್ರಹ್ಲಾದನೇ ಆಗಿದ್ದ ದೊಡ್ಮನೆಯ ರಾಜಕುಮಾರನನ್ನು ವಿಧಿ ಆರಿಸಿಕೊಂಡು ಹೋಗಿದ್ದು ಕನ್ನಡಿಗರ ದುರದೃಷ್ಟವೇ ಸರೀ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪ್ರಶಾಂತ್ ಸಂಬರ್ಗಿಗೆ ಮರ್ರಾಮೋಸ !? ಕೋರ್ಟ್ ಮೆಟ್ಟಿಲೇರಿದ ಸಂಬರ್ಗಿಗೆ ಗೆಲುವು ಸಿಕ್ಕಿತಾ ?

ತೆಲುಗು ಚಿತ್ರ ನಿರ್ಮಾಪಕರಿಂದ ಕನ್ನಡದ ನಟ-ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಮೋಸ ಆಗಿರುವ ಸುದ್ದಿ ಹೊರಬಿದ್ದಿದೆ. ತೆಲುಗಿನ ಚಿತ್ರವೊಂದನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಕರಾರಿನಲ್ಲಿ ವಂಚನೆಯಾಗಿದೆ ಎಂದು ಸಂಬರಗಿ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರು.

ಬೆಂಗಳೂರಿನ ವಾಣಿಜ್ಯ ನ್ಯಾಯಲಯವೊಂದು ಈಗ ಸಂಬರಗಿ ಪರವಾಗಿ ಆದೇಶ ಹೊರಡಿಸಿದ್ದು, ತೆಲುಗಿನ ಬಾಲಾಜಿ ಸಿನಿ ಮೀಡಿಯಾ ಕಂಪನಿಯ ಜೆ.ಭಗವಾನ್ ಮತ್ತು ಜೆ.ಫುಲ್ಲ ರಾವ್ ಅವರುಗಳಿಗೆ ಸಂಬರಿಗೆ ಕೊಡಬೇಕಾದ ರೂ 1,28,31,500 ಜೊತೆಗೆ ಬಡ್ಡಿಯನ್ನು ಸೇರಿಸಿ ಹಿಂದಿರುಗಿಸಬೇಕೆಂದು ಆದೇಶ ಮಾಡಿದೆ. ಎರಡು ದಿನಗಳ ಹಿಂದೆ ಇದೇ ನ್ಯಾಯಾಲಯ ಆದೇಶದ ಜಾರಿಗೆ ಎಕ್ಸಿಕ್ಯೂಷನ್ ಪಿಟೀಷನ್ ಅನ್ನು ಹೈದರಾಬಾದಿನ ನ್ಯಾಯಾಲಯಕ್ಕೆ ಕಳುಹಿಸಿದೆ.

ಗೋಪಿಚಂದ್ ಮತ್ತು ಹನ್ಸಿಕ ಮೋಟ್ವಾನಿ ನಟನೆಯ ತೆಲುಗಿನ ಗೌತಮಾನಂದ, ಜುಲೈ 27, 2017 ರಲ್ಲಿ ಬಿಡುಗಡೆಯಾಗಿತ್ತು. ಅದನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು, ಸಂಬರಗಿ ತೆಲುಗು ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ರೂ 90 ಲಕ್ಷ ಅವರ ಖಾತೆಗೆ ಪಾವತಿಸಿದ್ದರು. ತೆಲುಗು ನಿರ್ಮಾಪಕರು ಆ ಚಿತ್ರದ ಹಕ್ಕನ್ನು ಮತ್ತೊಬ್ಬರಿಗೆ ಮಾರಿದ್ದರಿಂದ ಸಂಬರಗಿಗೆ ಡಬ್ಬಿಂಗ್ ಹಕ್ಕನ್ನು ಹಸ್ತಾಂತರ ಮಾಡಿರಲಿಲ್ಲ. ಈ ಕಾರಣಕ್ಕೆ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ಇಪ್ಪತ್ತು ತಿಂಗಳಿಗೂ ಅಧಿಕ ದಿನ ನಡೆದ ಕೇಸ್ ಕೊನೆಗೆ ಆಗಸ್ಟ್ 31, 2021 ರಂದು ಸಂಬರಗಿ ಪರವಾಯಿತು. ರೂ 1,28,31,500 ಮತ್ತು ಬಡ್ಡಿ ಅವರಿಗೆ ತೆಲುಗು ನಿರ್ಮಾಪಕರು ಕೊಡಬೇಕೆಂದು ಬೆಂಗಳೂರಿನ ನ್ಯಾಯಾಲಯ ಆದೇಶ ಮಾಡಿತು. ಈ ನಡುವೆ ಅದೇ ತೆಲುಗು ನಿರ್ಮಾಪಕರ ರಿಪಬ್ಲಿಕ್ ಎನ್ನುವ ಮತ್ತೊಂದು ತೆಲುಗು ಚಿತ್ರ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಬಿಡುಗಡೆಯಾಯಿತು.

ಆಗಸ್ಟ್ 31 ರ ಆದೇಶವನ್ನು ಅನುಷ್ಠಾನ ಮಾಡಲು ಹೈದರಾಬಾದಿನ ನ್ಯಾಯಾಲಯಕ್ಕೆ ಈಗ ಮೊರೆ ಹೋಗಿದ್ದಾರೆ.ಈ ರೀತಿ ಮೋಸ ಹೋಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ನಾಚಿಯಾಗುತ್ತಿದೆ. ಈಗಲೂ ಕೂಡ ಸಿನೆಮಾ ವಿತರಣೆ ಒಂದು ವ್ಯವಸ್ಥಿತ ವ್ಯಾಪಾರವಲ್ಲ. ಅದರಲ್ಲೂ ಡಬ್ಬಿಂಗ್ ವಿಷಯದಲ್ಲಿ ಸಾಕಷ್ಟು ಗೊಂದಲವಿದೆ. ಡಬ್ಬಿಂಗ್ ಸಿನೆಮಾಗಳ ವಿತರಣೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶವಿದೆ,” ಎನ್ನುತ್ತಾರೆ ಸಂಬರಗಿ. ಈ ಹಿನ್ನಡೆ ಹೊರತಾಗಿಯೂ, ಕನ್ನಡಕ್ಕೆ ಒಳ್ಳೆ ಪರಬಾಷ ಸಿನೆಮಾಗಳನ್ನು ಡಬ್ಬಿಂಗ್ ಮಾಡಿಸಿ ಬಿಡುಗಡೆ ಮಾಡುವ ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ.

ಮೂಲತಃ ವ್ಯಾಪಾರಿಯಾದ ಸಂಬರ್ಗಿ, ಸಿನೆಮಾ ವಿತರಣೆ, ಇನ್-ಬ್ರಾಂಡಿಂಗ್ ಮತ್ತು ನಟನೆಯಲ್ಲೂ ಗುರುತಿಸಿಕೊಂಡಿದ್ದು ಕಳೆದ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಕೊನೆಯ ಹಂತದವರೆಗೂ ಪೈಪೋಟಿಯಲ್ಲಿದ್ದರು.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!