ಬಾಹುಬಲಿ ದೃಶ್ಯಕಾವ್ಯದ ಸೃಷ್ಟಿಕರ್ತ.. ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಬೆಂಗಳೂರಿಗೆ ಆಗಮಿಸಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್ ಚಿತ್ರದ ಬಹು ಮುಖ್ಯವಾದ ಜನನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ನಗರದ ಮಾಲ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಹಾಡನ್ನು ಬಿಡುಗಡೆ ಮಾಡಲಾಯಿತು.
ಹಾಡನ್ನು ಬಿಡುಗಡೆ ಮಾಡುವ ಮೊದಲೇ ಜಕ್ಕಣ್ಣಗಾರು, ಕನ್ನಡದಲ್ಲಿಯೇ ಮಾತು ಆರಂಭಿಸಿ, ಎರಡು ವಿಚಾರಗಳಿಗೆ ಕನ್ನಡಿಗರ ಕ್ಷಮೆ ಕೇಳುತ್ತೇನೆ. ನಾನು ಇಲ್ಲಿ ಹಾಡು ಬಿಡುಗಡೆ ಮಾಡಲು ಬಂದಿಲ್ಲ. ಈ ಕಾರ್ಯಕ್ರಮ ಸಿನಿಮಾದ ಪ್ರಚಾರನೂ ಅಲ್ಲ. ಜನನಿ ಹಾಡು ನಮ್ಮ ಆರ್ ಆರ್ ಆರ್ ಸಿನಿಮಾದ ಆತ್ಮ. ಆ ಆತ್ಮದೊಂದಿಗೆ ನಿಮ್ಮನ್ನು ಪರಿಚಯಿಸಲು ಬಂದಿದ್ದೇನೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಕೂಡ ಬರುತ್ತಾರೆ ಎಂದರು.
ಆರ್ ಆರ್ ಆರ್ ಸಿನಿಮಾ ಅನೌನ್ಸ್ ಆದಾಗಿನಿಂದ ನಿರೀಕ್ಷೆಯನ್ನು ದುಪ್ಪಟ್ಟು ಮಾಡುತ್ತಲೇ ಇದೆ. ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶಿಯಾ ಶರಣ್ ಸೇರಿದಂತೆ ದೊಡ್ಡ ತಾರಾಬಳಗ ನಟಿಸಿರುವ ಆರ್ ಆರ್ ಆರ್ ಸಿನಿಮಾದ ಎರಡು ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ದೋಸ್ತಿ ಹಾಗೂ ಹಳ್ಳಿ ನಾಟು ಹಾಡು ಭರ್ಜರಿ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಜನನಿ ಹಾಡು ಸಿನಿಪ್ರೇಕ್ಷಕಕುಲದ ಮುಂದೆ ಅರ್ಪಿಸಿದ್ದಾರೆ.
ಅದ್ಭುತ ದೃಶ್ಯಕಾವ್ಯದ ಜನನಿ ಹಾಡಿನ ಪ್ರತಿ ಫ್ರೇಮ್ ಅತ್ಯದ್ಭುತವಾಗಿ ಮೂಡಿ ಬಂದಿದೆ. ಸಂಗೀತ ನಿರ್ದೇಶಕ ಎಂ,.ಎಂ.ಕೀರವಾಣಿ ಮ್ಯೂಸಿಕ್ ಗುಂಗು..ಪ್ರತಿ ಪದಗಳು ಅಮೋಘವಾಗಿವೆ. ಕ್ರೋಧ, ಭಯದ ನಡುವೆ ಮನಕಲುವ ದೃಶ್ಯಗಳು ನೋಡುಗರ ಕಣಂಚುಗಳು ಒದ್ದೆ ಮಾಡುತ್ತವೆ.
3 ನಿಮಿಷದ 10 ಸೆಕೆಂಡ್ ನ ಜನನಿ ಹಾಡು ಬೇರೆಯದ್ದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಸೆಂಥಿಲ್ ಕುಮಾರ್ ಪ್ರತಿ ದೃಶ್ಯಗಳನ್ನು ಕ್ಯಾಮೆರಾ ಕಣ್ಣುಗಳಲ್ಲಿ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಾಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿರುವ ಜನನಿ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಜನವರಿ 7ಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರ್ತಿದೆ.