ನಾದಬ್ರಹ್ಮ ಹಂಸಲೇಖ ಗುರುವಾರ ಪೊಲೀಸ್ ವಿಚಾರಣೆ ಎದುರಿಸಿದರು. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ಮಧ್ಯಾಹ್ನ ೧೨ ಗಂಟೆಗೆ ಹಾಜರಾಗಿದ್ದರು. ಅವರೊಂದಿಗೆ ವಕೀಲ ಸಿ.ಎಸ್. ದ್ವಾರಕಾನಾಥ್ ಹಾಗೂ ಲತಾ ಹಂಸಲೇಖ ಹಾಜರಿದ್ದರು. ಅಲ್ಲಿ ಇನ್ಸ್ ಪೆಕ್ಟರ್ ರಮೇಶ್ ನೇತೃತ್ವದ ತಂಡದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿ ಬಂದರು. ಅಂದ ಹಾಗೆ, ಅವರು ಇಷ್ಟಾಗಿಯೂ ಇವತ್ತು ಪೊಲೀಸ್ ವಿಚಾರಣೆಗೆ ಹಾಜರಾಗಿದ್ದು ಮೈಸೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮವೊದರಲ್ಲಿ ಅವರು ಆಡಿದ ಮಾತುಗಳ ವಿರುದ್ದ ದೂರು ದಾಖಲಾಗಿದ್ದ ಕಾರಣಕ್ಕೆ .
ಅಧಿಕೃತ ಮಾಹಿತಿ ಪ್ರಕಾರ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದೆ. ಪೊಲೀಸರು ಕೇಳಿದ ೨೫ ರಿಂದ ೩೦ ಪ್ರಶ್ನೆಗಳಿಗೆ ಉತ್ತರಿಸಿ ಬಂದಿದ್ದಾರೆ. ಹಂಸ ಲೇಖ ಪರ ವಕೀಲ ದ್ವಾರಕನಾಥ್ ವಿಚಾರಣೆ ವಿವರ ಹಂಚಿಕೊಂಡಿದ್ದು, ಇಂದಿನ ವಿಚಾರಣೆ ಮುಗಿದಿದ್ದು, ಮತ್ತೆ ವಿಚಾರಣೆಗೆ ಬರಬೇಕಾದರೆ ಬರುತ್ತೇವೆ. ಕಾನೂನಿನ ಮೇಲೆ ನಂಬಿಕೆ ಇದೆ. ಹೋರಾಟ ಮುಂದುವರೆಸುತ್ತೇವೆ ಎಂದರು. ಇದೇ ವೇಳೆ ವಿಚಾರಣೆ ಎದುರಿಸಿ ಪೊಲೀಸ್ ಠಾಣೆ ಯಿಂದ ಹೊರ ಬಂದ ನಾದ ಬ್ರಹ್ಮ ಹಂಸಲೇಖ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಆದರೆ ಹಂಸಲೇಖ ವಿಚಾರಣೆಗೆ ಬಂದ ವೇಳೆ ಅವರ ಪರ ವಿರೋಧ ನಡೆದ ಪ್ರತಿಭಟನೆ ಕುರಿತು ಡಿಸಿಪಿ ಹರೀಶ್ ಪಾಂಡೆ ಪ್ರತಿಕ್ರಿಯೆ ನೀಡಿದರು. ಠಾಣೆ ಮುಂದೆ ಹೈಡ್ರಾಮಾ ನಡೆದಿಲ್ಲ, ಪರ ವಿರೋಧ ಮಾಡುವವರು ಪ್ರತಿಭಟನೆ ಮಾಡಿದ್ದಾರಷ್ಟೇ. ನಾವು ಕೋರ್ಟ್ ಗೆ ಎಲ್ಲಾ ರೀತಿಯಲ್ಲೂ ಉತ್ತರ ನೀಡಬೇಕು. ಹೀಗಾಗಿ ಎಲ್ಲಾ ರೀತಿಯಿಂದಲೂ ತನಿಖೆ ಮಾಡುತ್ತೇವೆ ಎಂದರು. ಬೆಳಗ್ಗೆ ಹಂಸಲೇಖ ಅವರು ವಿಚಾರಣೆಗೆ ಅಂತ ವಕೀಲರ ಜತೆಗೆ ಪೊಲೀಸ್ ಠಾಣೆಗೆ ಬಂದ ಸಂದರ್ಭದಲ್ಲಿ ಅವರ ಪರವಾಗಿ ಕೆಲವು ಕನ್ನಡ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಬಜರಂಗದಳದ ಕಾರ್ಯಕರ್ತರು ಹಂಸಲೇಖ ವಿರುದ್ದ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಪೊಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.