ಬರೀ ತೆಲುಗು ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್‌ಆರ್‌ಆರ್. ರಾಜಮೌಳಿ ನಿರ್ದೇಶನ ಅನ್ನೋದಷ್ಟೇ ಅಲ್ಲ ಜೂನಿಯರ್ ಎನ್‌ಟಿಅರ್, ರಾಮ್ ಚರಣ್ ತೇಜ್, ಅಜಯ್ ದೇವಗನ್, ಆಲಿಯಾ ಭಟ್, ಶ್ರೇಯಾ ಶರಣ್ ಒಳಗೊಂಡಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಅದೇ ಕಾರಣಕ್ಕೆ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿರುವ ಈ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ತೆರೆ ಬರಲಿದೆ. ಚಿತ್ರ ತಂಡವೇ ಹಾಗಂತ ಅಧಿಕೃತ ಮಾಹಿತಿ ರಿವೀಲ್ ಮಾಡಿದೆ.
ಸದ್ಯಕ್ಕೆ ಅದರ ಪ್ರಮೋಷನ್ ಚಟುವಟಿಕೆ ಶುರು ಮಾಡಿರುವ ಚಿತ್ರ ತಂಡ ಶುಕ್ರವಾರ ಚಿತ್ರದ ಥೀಮ್ ಸಾಂಗ್ ಜನನಿ ಹಾಡನ್ನು ರಿಲೀಸ್ ಮಾಡಿದೆ. ಸದ್ಯಕ್ಕೆ ಕನ್ನಡದ ವರ್ಷನ್ ನಲ್ಲಿ ಲಾಂಚ್ ಆಗಿರುವ ಈ ಹಾಡಿನ ಲಿರಿಕಲ್ ವಿಡಿಯೋ ನೋಡುಗ ಹಾಗೂ ಕೇಳುವ ಗುಂಡಿಗೆ ಒಂದು ಕ್ಷಣ ಎದೆ ಝೆಲ್ ಎನ್ನುವಂತೆ ಮಾಡುವುದು ಗ್ಯಾರಂಟಿ. ಸಾಂಗ್ ಲಾಂಚ್ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ನಡೆಯಿತು.
ಕೆವಿಎನ್ ಪ್ರೊಡಕ್ಷನ್ಸ್ ಹೌಸ್ ಆಯೋಜಿಸಿದ್ದ ಈವೆಂಟ್ ಗೆ ನಿರ್ದೇಶಕ ರಾಜಮೌಳಿ ಬಿಡುವು ಮಾಡಿಕೊಂಡು ದೂರದ ಹೈದ್ರಾಬಾದ್ ನಿಂದ ಬಂದಿದ್ದರು. ಬಹು ದಿನಗಳ ನಂತರ ಆಯೋಜಿಸಿದ್ದಲಾಗಿದ್ದ ಮೊದಲ ಕಾರ್ಯಕ್ರಮ ಆಗಿದ್ದರಿಂದ ನಿರ್ದೇಶಕ ರಾಜಮೌಳಿ ಅವರು ಸಾಂಗ್ ರಿಲೀಸ್ ನೆಪದಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ಳಬಹುದೆನ್ನುವ ನಿರೀಕ್ಷೆ ಮಾಧ್ಯಮದವರಲ್ಲಿತ್ತು. ಅದೇ ಕಾರಣಕ್ಕೆ ಸಾಟ್ ಲೈಟ್ ವಾಹಿನಿಯವರು, ಯುಟ್ಯೂಬರ್ಸ್ ಸೇರಿದಂತೆ ಅಲ್ಲಿಗೆ ಬಂದವರೆಲ್ಲ ತಮ್ಮ ಮೊಬೈಲ್ ತೆಗೆದು ಲೈವ್ ಮಾಡಲು ಸಿದ್ದರಾಗಿದ್ದರು.
ಆದರೆ ಅವರಿಗೆ ನಿರ್ದೇಶಕ ರಾಜಮೌಳಿ ದೊಡ್ಡ ಶಾಕ್ ಕೊಟ್ಟರು. ಇದು ಚಿತ್ರದ ಥೀಮ್ ಸಾಂಗ್ ಲಾಂಚ್. ಅದೇ ಮಾತನಾಡಬೇಕಿದೆ, ನಾನು ಈಗ ಮಾತನಾಡೋದಿಲ್ಲ. ಮುಂದೆ ಅಂದ್ರೆ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ದೊಡ್ಡ ಈವೆಂಟ್ ಮಾಡುವ ಪ್ಲಾನ್ ಇದೆ, ಅವತ್ತು ಜೂನಿಯರ್ ಎನ್ ಟಿಆರ್, ರಾಮ್ ಚರಣ್ ತೇಜ್ , ಆಲಿಯಾ ಭಟ್, ಶ್ರೇಯಾ ಶರಣ್ ಸೇರಿದಂತೆ ಇಡೀ ತಂಡವೇ ಇಲ್ಲಿರಲಿದೆ. ಅವತ್ತು ಮಾಧ್ಯಮದವರು ಕೇಳುವ ಪ್ರತಿ ಪ್ರಶ್ನೆಗೆ ಮುಖಾಮುಖಿಯಾಗಿ ಮಾತನಾಡಲಾಗುವುದು ಅಂದವರೇ ಮೈಕ್ ಇಟ್ಟು ಕುಳಿತು ಕೊಂಡರು. ಆನಂತರ ಚಿತ್ರದ ಥೀಮ್ ಸಾಂಗ್ ಜನನಿ ಲಿರಿಕಲ್ ವಿಡಿಯೋ ಪ್ರದರ್ಶಿಸಲಾಯಿತು.
ಅಂದ ಹಾಗೆ, ಬಹು ನಿರೀಕ್ಷಿತ ಆರ್ ಆರ್ ಆರ್ ಚಿತ್ರ ಹೊಸ ವರ್ಷ ಜನವರಿಗೆ ವಿಶ್ವದಾದ್ಯಂತ ಗ್ರಾಂಡ್ ರಿಲೀಸ್ ಆಗಲಿದೆ. ಇದು ಕನ್ನಡದ್ಲೂ ಡಬ್ ಆಗಿ ಬರುತ್ತಿದೆ. ಕರ್ನಾಟಕಕ್ಕೆ ಈ ಚಿತ್ರದ ವಿತರಣೆಯ ಹಕ್ಕನ್ನು ಕೆವಿಎನ್ ಸಂಸ್ಥೆ ಪಡೆದಿದೆ. ಸರಿ ಸುಮಾರು ೨೦ ಕೋಟಿ ಗೆ ಈ ಹಕ್ಕು ಪಡೆದುಕೊಂಡಿದೆ ಎನ್ನುತ್ತಿವೆ ಮೂಲಗಳು. ಒಟ್ಟಾರೆ ಆರ್ ಆರ್ ಆರ್ ಚಿತ್ರ ೩೦೦ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಡಿವಿವಿ ಸಂಸ್ಥೆ ಇದಕ್ಕೆ ಬಂಡವಾಳ ಹಾಕಿದೆ.