ಇರುಮುಡಿ ಹೊತ್ಕೊಂಡು-ಅಪ್ಪು ಫೋಟೋ ಕೈಲಿಡಿದುಕೊಂಡು ಅಯ್ಯಪ್ಪನ ದರ್ಶನ ಪಡೆದ ಪುನೀತ್ ಅಭಿಮಾನಿ !

ಅಯ್ಯಪ್ಪನ ಪರಮಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಬೆಟ್ಟದ ತುದಿಯಲ್ಲಿ ದರುಶನ ನೀಡುವ ಜ್ಯೋತಿಯನ್ನು ಕಣ್ತುಂಬಿಕೊಳ್ಳೋದಕ್ಕೆ ನಾಡಿನಾದ್ಯಂತ ಜನರು ಶಬರಿಮಲೆ ಕಡೆ ಮುಖ ಮಾಡಿದ್ದಾರೆ. ಅದರಲ್ಲಿ ಓರ್ವ ಪವರ್‌ಸ್ಟಾರ್ ಅಭಿಮಾನಿ ಕೊರಳಿಗೆ ಮಾಲೆ ಧರಿಸಿಕೊಂಡು, ತಲೆ ಮೇಲೆ ಇರುಮುಡಿ ಹೊತ್ಕೊಂಡು, ಕೈಲಿ ಅಪ್ಪು ಫೋಟೋ ಹಿಡಿದುಕೊಂಡು ಹದಿನೆಂಟು ಮೆಟ್ಟಿಲುಗಳನ್ನೇರಿ ಅಯ್ಯಪ್ಪನ ಸನ್ನಿಧಿಗೆ ತೆರಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.

ಅಪ್ಪು ಕೂಡ ಅಯ್ಯಪ್ಪನ ಅಪ್ಪಟ ಭಕ್ತರಾಗಿದ್ದರು. ಅಪ್ಪಾಜಿ ಡಾ. ರಾಜ್‌ಕುಮಾರ್ ಅವ್ರಂತೆ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸುತ್ತಿದ್ದರು. ಶ್ರದ್ಧಾ-ಭಕ್ತಿಯಿಂದ ನಮಿಸುತ್ತಿದ್ದರು ಮಾತ್ರವಲ್ಲದೇ ಮಾಲೆ ಹಾಕಿಕೊಂಡು ಕಟ್ಟುನಿಟ್ಟಾಗಿ ವ್ರತ ಮಾಡುತ್ತಿದ್ದ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ತಂದೆಯಂತೆ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದರು.
ದೊಡ್ಮನೆಯಲ್ಲಿ ಅಯ್ಯಪ್ಪನ ಪೂಜೆ-ಪುನಸ್ಕಾರ ನೆರವೇರಿಸಿ ಅನ್ನಸಂತರ್ಪಣೆ ಮಾಡಿಸಿ ಪ್ರತಿವರ್ಷ ಶಬರಿಮಲೆಗೆ ತೆರಳುವುದು ದೊಡ್ಮನೆ ಕುಟುಂಬಸ್ಥರ ವಾಡಿಕೆ.

ಹೌದು, ಅಪ್ಪಾಜಿ ಕಾಲದಿಂದಲೂ ಶಬರಿಮಲೆಗೆ ತೆರಳುವ ಪದ್ದತಿ ದೊಡ್ಮನೆಯಲ್ಲಿದೆ. ಕುಟುಂಬಸ್ಥರು ಹಾಗೂ ಆಪ್ತರೊಟ್ಟಿಗೆ ವರನಟ ಡಾ. ರಾಜ್‌ಕುಮಾರ್ ಅವರು ಅಯ್ಯಪ್ಪನ ದರುಶನಕ್ಕೆ ಹೋಗುತ್ತಿದ್ದರು. ಆಗಲೇ ಅಪ್ಪಾಜಿಯ ಹೆಗಲ ಮೇಲೆ ಕುಳಿತುಕೊಂಡು ಶಬರಿಮಲೆಗೆ ತೆರಳುತ್ತಿದ್ದ ಅಪ್ಪು ಬೆಳೆದು ದೊಡ್ಡವರಾದ್ಮೇಲೆ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಜೊತೆಗೆ ಬೆಟ್ಟ ಏರಿ ಇಳಿಯುತ್ತಿದ್ದರು. ಕೊರೊನಾ ಅಟ್ಟಹಾಸದಿಂದ ಅಯ್ಯಪ್ಪನ ಸನ್ನಿಧಿಗೆ ತೆರಳುವುದಕ್ಕೆ ಆಗಿರಲಿಲ್ಲ. ಬಹುಷಃ ಈ ವರ್ಷ ಶಬರಿಮಲೆಗೆ ಹೋಗುವ ಪ್ಲ್ಯಾನ್ ಇತ್ತೋ ಏನೋ ಗೊತ್ತಿಲ್ಲ. ಅಷ್ಟರಲ್ಲಿ ನಿಜಜೀವನದಲ್ಲಿ ಭಕ್ತ ಪ್ರಹ್ಲಾದನೇ ಆಗಿದ್ದ ದೊಡ್ಮನೆಯ ರಾಜಕುಮಾರನನ್ನು ವಿಧಿ ಆರಿಸಿಕೊಂಡು ಹೋಗಿದ್ದು ಕನ್ನಡಿಗರ ದುರದೃಷ್ಟವೇ ಸರೀ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!