Categories
ಸಿನಿ ಸುದ್ದಿ

ರಘು ದೀಕ್ಷಿತ್‌ ಹೊಸ ಸೌಂಡು! ನಿನ್ನ‌‌ ಸನಿಹಕೆ‌ ಸಿನಿಮಾಗೆ ದಿ ಸೌಂಡ್ ಆಫ್ ಕೆಯಾಸ್ ಬಳಕೆ-ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ ಸಾಂಗು

ಸೂರಜ್‌ ಗೌಡ ನಟರಾಗಿ ಗುರುತಿಸಿಕೊಂಡವರು. ಅವರೀಗ ನಿರ್ದೇಶಕರಾಗಿದ್ದು ಗೊತ್ತಿದೆ. ಹೌದು, “ನಿನ್ನ ಸನಿಹಕೆ” ಸಿನಿಮಾ ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ನಿರ್ದೇಶಕರ ಪಟ್ಟ ಅಲಂಕರಿಸಿರುವ ಸೂರಜ್‌ ಗೌಡ, ತಮ್ಮ ಸಿನಿಮಾವನ್ನು ಈಗ ಪ್ರೇಕ್ಷಕರ ಮುಂದೆ ತರಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ, “ನಿನ್ನ ಸನಿಹಕೆ” ಹಾಡುಗಳ ಮೂಲಕವೇ ಜೋರು ಸುದ್ದಿ ಮಾಡುತ್ತಿದೆ.

ಸಂಗೀತ ನಿರ್ದೇಶಕ ರಘುದೀಕ್ಷಿತ್‌ ಅವರ ಸಂಯೋಜನೆ ಹಾಡುಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಗುತ್ತಿದೆ. ಎರಡು ರೊಮ್ಯಾಂಟಿಕ್‌ ಹಾಡುಗಳಿಂದ ಕನ್ನಡ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ರಘುದೀಕ್ಷಿತ್‌ ಅವರು “ದಿ ಸೌಂಡ್ ಆಫ್ ಕೆಯಾಸ್” ಎಂಬ ಹೊಸ ಸೌಂಡಿಂಗ್ ಸಿಸ್ಟಂ ಮೂಲಕ ಇನ್ನಷ್ಟು ರಂಜಿಸಿದ್ದಾರೆ. ರಘು ದೀಕ್ಷಿತ್ ಸಂಯೋಜಿಸಿ ಹಾಡಿರುವ ರ್ಯಾಪ್ ಸಾಂಗ್ ಅದು. ಹೀರೋ ಲವ್ ಫೇಲ್ ಆಗಿ ಹಾಡುವ ಈ ಹಾಡಿಗೆ, ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ.

“ಯಾರು ಯಾರು ನಾನ್ ಯಾರು… ಈ ನಶೆಯೂ ಹೇಳಿದೆ ಪತ್ತೆಯಾ…” ಅನ್ನೋ ಕ್ಯಾಚಿ ಲಿರಿಕ್ಸ್ ಇರುವ ಈ ಹಾಡು ಕೇಳೋದಕ್ಕೆ ಸಖತ್ ಮಜ ಎನಿಸಿದೆ. ವಿರಹ ಮನಸುಗಳಿಗೆ ನೇರವಾಗಿ ನಾಟುವಂತಿರುವ ಹಾಡಲ್ಲಿ ವಿಶೇಷ ಎನಿಸುವ ಸಂಗೀತದ ಸ್ಪರ್ಶವಿದೆ. ಸದ್ಯಕ್ಕೆ “ನಿನ್ನ ಸನಿಹಕೆ” ಸಿನಿಮಾದ ಹಾಡು ಚಿತ್ರದ ಮೇಲಿನ ಭರವಸೆ ಹೆಚ್ಚಿಸಿದೆ.
ಈಗಾಗಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರುವ ನಿನ್ನ ಸನಿಹಕೆ‌ ಟೀಮ್ ವರ್ಕ್ ನೋಡಿದರೆ, ಎಲ್ಲಾ ಆಂಗಲ್‌ನಿಂದಲೂ ಇದು ಮಾಮೂಲಿ‌ ಸಿನಿಮಾ ಅಲ್ಲ. ಇದರಲ್ಲೇನಾದರೂ ಇದೆ ಅನ್ನೋದನ್ನ ಪ್ರತಿ‌ ಹಂತದಲ್ಲೂ ತೋರಿಸುತ್ತಲೇ ಇರುವುದರಿಂದ ಸಿನಿಮಾ ಬಿಡುಗಡೆಯನ್ನು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸುದ್ದಿ ಮಾಡುತ್ತಿರುವ “ನಿನ್ನ ಸನಿಹಕೆ”‌ ತಂಡ ಇಷ್ಟರಲ್ಲೇ ಟ್ರೇಲರ್‌ ರಿಲೀಸ್ ಮಾಡುವ ತಯಾರಿಯಲ್ಲಿದೆ. ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರುತ್ತಿರುವ ಸಮಯದಲ್ಲಿ “ಕನ್ನಡದಲ್ಲಿ ಮಾತ್ರ” ಬಿಡುಗಡೆ ಅನ್ನುವ ಟ್ಯಾಗ್‌ಲೈನ್‌ ಜೊತೆ “ನಿನ್ನ‌ ಸನಿಹಕೆ”‌ ಸಿನಿಮಾ ತಂಡ ಏಪ್ರಿಲ್ 16ಕ್ಕೆ ಪ್ರೇಕ್ಷಕರ ಎದುರಿಗೆ ಬರುತ್ತಿದೆ. ಇನ್ನು, ವಿಶ್ವದಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ಅವರ ಲವ್‌ಗೆ ಆ ವಿಲನ್ ಅಡ್ಡಿ! ಶಶಿಕುಮಾರ್‌ ಪುತ್ರನ ಪ್ರೇಮ ಪುರಾಣದಲ್ಲಿ ಹೊಸ ಟ್ವಿಸ್ಟ್

‌ನಟ ಶಶಿಕುಮಾರ್‌ ಪುತ್ರ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಅವರ ಪುತ್ರ ಅಕ್ಷಿತ್‌ ಅವರು ಲವ್‌ನಲ್ಲಿ ಬಿದ್ದಿರೋದು ಕೂಡ ಎಲ್ಲರಿಗೂ ಗೊತ್ತಿದೆ! ಅಂದರೆ, ಇದು ಸಿನಿಮಾ ವಿಷಯ. ಅವರು ಲವ್ವಲ್ಲಿ ಬಿದ್ದಿರೋದು ಸಿನಿಮಾದಲ್ಲಿ. ಹೌದು, ನಿರ್ದೇಶಕ ಸ್ಮೈಲ್‌ ಶ್ರೀನು ಅವರೀಗ “ಓ ಮೈ ಲವ್‌” ಸಿನಿಮಾದಲ್ಲಿ ಅಕ್ಷಿತ್‌ಗೆ ಲವ್‌ ಮಾಡುವ ಹುಡುಗನ ಪಾತ್ರ ನೀಡಿದ್ದಾರೆ. ಈ ಸಿನಿಮಾದ ವಿಶೇಷವೆಂದರೆ, ಈಗ ಹೊಸ ವಿಲನ್‌ ಎಂಟ್ರಿಯಾಗಿದ್ದಾರೆ. ಅದು “ಮಗಧೀರ” ಖ್ಯಾತಿಯ ಖಳನಟ ದೇವ್‌ಗಿಲ್.‌

ಅಂದಹಾಗೆ, ಇದು ಜಿಸಿಬಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಜಿ.ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ಅದ್ದೂರಿ ವೆಚ್ಚದಲ್ಲಿ ಹಾಕಲಾಗಿದ್ದ ಸೆಟ್‍ನಲ್ಲಿ ಸಾಹಸ ಸನ್ನಿವೇಶಗಳನ್ನು ಸೆರೆಹಿಡಿಯುವುದರೊಂದಿಗೆ ಎರಡನೇ ಹಂತದ ಚಿತ್ರೀಕರಣವನ್ನು ಪೂರೈಸಿದೆ.

ಈ ಹಂತದ ಚಿತ್ರೀಕರಣದಲ್ಲಿ “ಮಗಧೀರ” ಖ್ಯಾತಿಯ ವಿಲನ್ ದೇವ್‍ಗಿಲ್ ಹಾಗೂ ನಾಯಕ ಅಕ್ಷಿತ್ ಶಶಿಕುಮಾರ್ ನಡುವಿನ ಭರ್ಜರಿ ಸಾಹಸ ದೃಷ್ಯಗಳನ್ನು ರಿಯಲ್ ಸತೀಶ್ ಅವರ ಸಾರಥ್ಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ನಾಯಕಿ ಕೀರ್ತಿ ಕಲ್ಕೆರೆ, ಎಸ್.ನಾರಾಯಣ್, ಸಂಗೀತ, ಸುಂದರಶ್ರೀ, ಭಾಗ್ಯಶ್ರೀ, ಪೃಥ್ವಿರಾಜ್ ಕೂಡ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಶೇ.40ರಷ್ಟು ಭಾಗ ಶೂಟಿಂಗ್ ಮುಗಿದಿದೆ.

ಇದೊಂದು ವಿಭಿನ್ನವಾದ ಲವ್, ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಈ ಹಿಂದೆ “ಬಳ್ಳಾರಿ ದರ್ಬಾರ್”‌, “ತೂಫಾನ್” ಹಾಗೂ “18-25” ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಅವರು ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಆರಂಭದಿಂದಲೂ ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತು ಕೊಡುವುದರೊಂದಿಗೆ ಹೊಸ ಪ್ರತಿಭಗಳ ಜೊತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕ ಸ್ಮೈಲ್‌ ಶ್ರೀನು, ಈ ಬಾರಿ ಹೊಸಬರ ಜೊತೆ ಚಿತ್ರರಂಗದ ಅನುಭವಿ ಕಲಾವಿದರನ್ನೂ ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ.

ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತವಿದೆ. ರಿಯಲ್ ಸತೀಶ್ ಅವರ ಸಾಹಸ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ವಿ.ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿ.ಮಲ್ಲಿಕ್ ಸಂಕಲನ, ಜನಾರ್ದನ್ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮಹನೀಯರ ಜೀವನ ಸಿನಿಮಾವಾಗಬೇಕು: ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ಸ್ಕ್ರಿಪ್ಟ್ ಪೂಜೆಯಲ್ಲಿ ಶಶಿಕುಮಾರ್ ಮಾತು

ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರುತ್ತಿದೆ. “ಮಹಾಕವಿ” ಎಂಬ ಶೀರ್ಷಿಕೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ. ಗೋವಿಂದ ಪೈ ಅವರ ತವರು ಗಡಿನಾಡು ಮಂಜೇಶ್ವರದವರೇ ಆದ ನಟ, ನಿರ್ಮಾಪಕ ರಘುಭಟ್ ತನ್ನ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ ‌ನಲ್ಲಿ ಮಹಾಕವಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಅವರ ಪತ್ನಿ ಸುಗುಣ ರಘುಭಟ್ ಅವರು ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸಿನಿರಂಗದ ಸೇವೆಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ವಿಶೇಷ.

ಸಿನಿಮಾ ಪತ್ರಕರ್ತರಾಗಿ, ಸಾಹಿತಿಯಾಗಿ ಚಿರಪರಿಚಿತರಾಗಿರುವ ಗಣೇಶ್ ಕಾಸರಗೋಡು ಮಹಾಕವಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಂಜೇಶ್ವರದವರೇ ಆದ ಜಯರಾಂ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ. ಸ್ಟಾರ್ ನಟರೊಬ್ಬರು ಗೋವಿಂದ ಪೈ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅಂದಹಾಗೆ ಗೋವಿಂದ ಪೈ ಅವರ ಜನ್ಮದಿನದಂದು ಅವರ ತವರು ಮಂಜೇಶ್ವರದಲ್ಲಿ ಮಂಗಳವಾರ ಮಹಾಕವಿ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿತು.‌ ಶನೀಶ್ವರ ದೇವಾಲಯದಲ್ಲಿ ಪೂಜೆ ಬಳಿಕ ಗೋವಿಂದ ಪೈ ಅವರ ನಿವಾಸದಲ್ಲಿ ಸಮಾರಂಭ ಜರುಗಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಮಾತನಾಡಿ, “ರೌಡಿಸಂ‌ ಸಿನಿಮಾಗಳಿಗಿಂತ ಇಂತಹ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಬೇಕು. ಸಮಾಜಕ್ಕೆ ಕೊಡುಗೆ ನೀಡಿದವರ ಜೀವನಗಾಥೆ ಎಲ್ಲರಿಗೂ ಆದರ್ಶ. ಗೋವಿಂದ ಪೈ ಅವರ ಬಯೋಪಿಕ್ ನಿರ್ಮಿಸುತ್ತಿರುವ ರಘುಭಟ್ ಹಾಗೂ ಇಡೀ‌ ತಂಡಕ್ಕೆ ಶುಭವಾಗಲಿ” ಎಂದು ಹಾರೈಸಿದರು.

ಎಡೆನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ‌ಮಾತನಾಡಿ, “ಗೋವಿಂದ ಪೈ ಅವರ ಮೇಲೆ ನನಗೆ ವಿಶೇಷ ಅಭಿಮಾನ. ಕಾರ್ಯಕ್ರಮಕ್ಕೆ ಭೇಟಿ ಮಾಡಿ ಆಹ್ವಾನಿಸುತ್ತೇವೆ ಎಂದು ರಘುಭಟ್ ಹೇಳಿದಾಗ, ಅದಕ್ಕಾಗಿ ಬರುವುದು ಬೇಡ. ಇಂತಹ ಕಾರ್ಯಕ್ರಮಕ್ಕೇ ಬಂದೇ ಬರುತ್ತೇನೆಂದು ಬಹಳ ಖುಷಿಯಿಂದ ಆಗಮಿಸಿದ್ದೇನೆ” ಎನ್ನುತ್ತಲೇ ಚಿತ್ರತಂಡವನ್ನು ಆಶೀರ್ವದಿಸಿ, ಯಶಸ್ಸು ಸಿಗಲಿ ಎಂದು ಹಾರೈಸಿದರು.
ಮಂಜೇಶ್ವರದ ವಿನ್ಸೆಂಟ್ ಚರ್ಚ್‌ನ ವಿನೋದ್ ಸಾಲ್ಡಾನ್ಹಾ ಮಾತನಾಡಿ, “ಗೋವಿಂದ ಪೈ ಅವರು 22 ಭಾಷೆಗಳನ್ನು ಬಲ್ಲವರಾಗಿದ್ದರು. ಸರ್ವಧರ್ಮ ಸಹಿಷ್ಣುವಾಗಿದ್ದರು.‌ಅಂತಹ ಮಹಾನ್ ವ್ಯಕ್ತಿ ನಮ್ಮವರು ಎಂಬುದೇ ಹೆಮ್ಮೆ ಎಂದು ಹೇಳಿದರು. ಮಹಾಕವಿ ಕಥೆ , ಚಿತ್ರಕಥೆ ಮತ್ತು ಸಂಭಾಷಣಾಗಾರ ಹಿರಿಯ ಸಿನಿಮಾ ಪತ್ರಕರ್ತರಾದ ಗಣೇಶ್ ಕಾಸರಗೋಡು ಮಾತನಾಡಿ, “ಸಿನಿಮಾಕ್ಕೆ ಬರೆಯುವ ಅವಕಾಶ ಕೊಟ್ಟ ರಘುಭಟ್ ಅವರಿಗೆ ಧನ್ಯವಾದಗಳು.‌ ಇಡೀ ತಂಡವಾಗಿ ಒಂದೊಳ್ಳೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾ ಅದ್ಭುತವಾಗಿ ಮೂಡಿಬರಬೇಕೆಂಬುದು ನನ್ನಾಸೆ. ಆ ನಿಟ್ಟಿನಲ್ಲಿ ನಾನೂ ಶ್ರಮಿಸುತ್ತೇನೆ ಎಂಬುದು ಅವರ ಮಾತು.

ನಟ ವಿಕ್ರಂ ಸೂರಿ ಮಾತನಾಡಿ, “ಕಮರ್ಷಿಯಲ್ ಸಿನಿಮಾ ಜಗತ್ತಿನಲ್ಲಿ ರಘುಭಟ್ ಇಂತಹ ವಿಭಿನ್ನ ಪ್ರಯತ್ನ, ಸಾಹಸದ ಮೂಲಕ ಹೊಸದೇನಾದರು ಮಾಡಬೇಕು ಎಂಬ ಉತ್ಸಾಹದಲ್ಲಿದ್ದಾರೆ. ದುಡ್ಡು ಮಾಡುವ ಇರಾದೆ ಇದ್ದಿದ್ದರೆ ಕಮರ್ಷಿಯಲ್ ಸಿನಿಮಾಗಳಿಗೇ ಬಂಡವಾಳ ಸುರಿಯಬಹುದಿತ್ತು. ಆದರೆ ತನ್ನೂರಿ‌ನ ಕವಿಯ ಬಯೋಪಿಕ್ ಮಾಡಲು ಹೊರಟಿದ್ದಾರೆ. ನಾನು ಸ್ನೇಹಿತನಾಗಿ, ಸಿನಿಮಾರಂಗದವನಾಗಿ ಸದಾ ಜೊತೆಗಿರುತ್ತೇನೆ. ಒಂದೇ‌ ಒಂದು ರೂ. ಸಂಭಾವನೆ ಪಡೆಯದೆ ತಂಡದೊಂದಿಗೆ ಮಹಾಕವಿ ಸಿನಿಮಾಕ್ಕಾಗಿ ಶ್ರಮಿಸುತ್ತೇನೆ ಎಂದರು.
ನಟಿ ನಮಿತಾ ರಾವ್ ಮಾತನಾಡಿ, “ರಘುಭಟ್ ಅವರಿಂದ ನಾವೂ ಮಂಜೇಶ್ವರದ ಮಕ್ಕಳೇ ಆಗಿದ್ದೇವೆ. ನಮ್ಮೂರಿ‌ನ ಕೀರ್ತಿ ಕಳಶ ಗೋವಿಂದ ಪೈ ಅವರ ಬಯೋಪಿಕ್ ತರುತ್ತಿರುವ ರಘುಭಟ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

Categories
ಸಿನಿ ಸುದ್ದಿ

ನಿಮ್ಮೂರಿಗೆ ಬರಲಿದೆ ರಾಬರ್ಟ್‌ ಚಿತ್ರತಂಡ! 100 ಕೋಟಿ ಕ್ಲಬ್‌ ಸೇರುವ ಖುಷಿಗೆ ವಿಜಯಯಾತ್ರೆ

ಕನ್ನಡ ಚಿತ್ರರಂಗ ಈಗ ಹಬ್ಬದ ವಾತಾವರಣದಿಂದ ಕೂಡಿದೆ. ಹೌದು, ಈ ಮಾತಿಗೆ ಸಾಕ್ಷಿಯೆಂಬಂತೆ, ಚಿತ್ರಮಂದಿರಗಳಲ್ಲಿ ಜನ ಜಂಗುಳಿಯೂ ಇದೆ. “ರಾಬರ್ಟ್‌” ಅಂಥದ್ದೊಂದು ಮೋಡಿ ಮಾಡುವ ಮೂಲಕ ಜನರನ್ನು ಚಿತ್ರಮಂದಿರದತ್ತ ಕರೆತರುವಲ್ಲಿ ಯಶಸ್ವಿಯೂ ಆಗಿದೆ. ಚಿತ್ರತಂಡ ಈಗ ದೊಡ್ಡ ಯಶಸ್ಸು ಪಡೆದುಕೊಂಡಿದೆ.

ಇದೇ ಖುಷಿಯಲ್ಲಿರುವ ಚಿತ್ರತಂಡ ಇನ್ನು ಒಂದು ಹೆಜ್ಜೆ ಮುಂದೆ ಹೋಗಲು ಸಜ್ಜಾಗಿದೆ. ಇದು ಬೇರೇನೂ ಅಲ್ಲ, “ರಾಬರ್ಟ್‌” ಚಿತ್ರಕ್ಕೆ ಗೆಲುವು ತಂದುಕೊಂಡ ಕನ್ನಡಿಗರನ್ನು ಪ್ರೀತಿಯಿಂದಲೇ ಕಂಡುಕೊಂಡು, ಧನ್ಯವಾದ ಅರ್ಪಿಸಲು ತಯಾರಾಗಿದೆ. ಅಂದರೆ, ರಾಜ್ಯಾದ್ಯಂತ “ರಾಬರ್ಟ್‌” ಚಿತ್ರತಂಡ ವಿಜಯಯಾತ್ರೆ ಶುರುಮಾಡುತ್ತಿದೆ. ಕೊರೊನಾ ಹಾವಳಿ ಮಧ್ಯೆಯೇ “ರಾಬರ್ಟ್‌” ಚಿತ್ರಮಂದಿರಕ್ಕೆ ಬಂದು, ಬಾಕ್ಸಾಫೀಸ್‌ ಚಿಂದಿ ಉಡಾಯಿಸಿದೆ.

ಈ ಖುಷಿಯಲ್ಲಿರುವ ಸಿನಿಮಾ ತಂಡ, ಈಗ ನೂರು ಕೋಟಿ ಕ್ಲಬ್‌ ತಲುಪುವ ಹಾದಿಯಲ್ಲಿದೆ. ಹೀಗಾಗಿ ವಿಜಯಯಾತ್ರೆ ಆಯೋಜಿಸಿದ್ದು, ಮಾರ್ಚ್‌ 29ರಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಂಭ್ರಮ ಆಚರಿಸಲು ಸಜ್ಜಾಗಿದೆ. ಮಾರ್ಚ್‌ 30ರಂದು ಹುಬ್ಬಳ್ಳಿ, ಹಾವೇರಿ, ಮಾರ್ಚ್‌ 31ರಂದು ಶಿವಮೊಬ್ಗ, ಹಾಸನ, ತಿಪಟೂರು, ಏಪ್ರಿಲ್‌ 1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ, ಮದ್ದೂರಿಗೆ ಚಿತ್ರತಂಡ ತೆರಳಿ ಸಂಭ್ರಮ ಹಂಚಿಕೊಳ್ಳಲಿದೆ.

ಈಗಾಗಲೇ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಸಿನಿಮಾ ಕೂಡ ಗುಲ್ಬರ್ಗ, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಚಿತ್ರದುರ್ಗ ಮೈಸೂರು, ಮಂಡ್ಯ ಕಡೆಗಳಲ್ಲಿ ತನ್ನ ಅದ್ಧೂರಿಯಾದ ಯುವ ಸಂಭ್ರಮವನ್ನು ಆಯೋಜಿಸುವ ಮೂಲಕ ಜೋರು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಈಗ ದರ್ಶನ್‌ ಅಭಿನಯದ “ರಾಬರ್ಟ್‌” ದೊಡ್ಡ ಮಟ್ಟದ ಗೆಲುವು ಕಂಡಿದ್ದು, ಆ ಗೆಲುವನ್ನು ಕನ್ನಡಿಗರ ನಡುವೆ ಆಚರಿಸಲು ನಿರ್ಧರಿಸಿದೆ. ನಿರ್ಮಾಪಕ ಉಮಾಪತಿ, ನಿರ್ದೇಶ ತರುಣ್‌ ಸುಧೀರ್‌ ಅವರು ತಮ್ಮ ತಂಡದೊಂದಿಗೆ ವಿಜಯಯಾತ್ರೆ ನಡೆಸಲಿದ್ದಾರೆ.

Categories
ಸಿನಿ ಸುದ್ದಿ

ಅನಘ ಎಂಬ ಹಾರರ್‌ ಸಸ್ಪೆನ್ಸ್‌ ಥ್ರಿಲ್ಲರ್ – ಈ ವಾರ ಭಯಪಡಿಸಲು ಬರಲಿರುವ ಹೊಸಬರು!

ಕನ್ನಡದಲ್ಲಿ ಈಗ ಸಾಲು ಸಾಲು ಹೊಸಬರ ಸಿನಿಮಾಗಳು ಕಾಣಿಸಿಕೊಳ್ಳುತ್ತಿವೆ. ಆ ಸಾಲಿಗೆ ಈಗ “ಅನಘ” ಕೂಡ ಸೇರಿದೆ. ಹೌದು, ಈ ವಾರ ರಾಜ್ಯಾದ್ಯಂತ “ಅನಘ” ಬಿಡುಗಡೆಯಾಗುತ್ತಿದೆ. ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್‌ನಡಿ ಡಿ.ಪಿ. ಮಂಜುಳ ನಾಯಕ ಅವರು ನಿರ್ಮಾಣ ಮಾಡಿರುವ “ಅನಘ” ಚಿತ್ರವನ್ನು ರಾಜು ಎನ್.‌ ಆರ್.‌ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಮೂಲಕ ಅವರು ನಿರ್ದೇಶನ ಪಟ್ಟ ಅಲಂಕರಿಸಿದ್ದಾರೆ. ಕಥೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ನಿರ್ದೇಶಕರೇ ವಹಿಸಿಕೊಂಡಿದ್ದಾರೆ. “ಅನಘ” ಇದೊಂದು ಹಾರರ್‌ ಸಿನಿಮಾ. ಈವೆಗೆ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ, ಬಂದಿರುವ ಹಾರರ್‌ ಸಿನಿಮಾಗಳಿಗಿಂತಲೂ ಇದೊಂದು ವಿಭಿನ್ನ ಎನಿಸುವ ಸಿನಿಮಾ ಎಂಬುದು ಚಿತ್ರತಂಡದ ಮಾತು.

ಇಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಹಾರರ್‌ ಇದ್ದರೂ, ಇಲ್ಲಿ ಹಾಸ್ಯವೂ ಮೇಳೈಸಿದೆ. ಜೊತೆಯಲ್ಲಿ ಸಸ್ಪೆನ್ಸ್ ಕೂಡ ಇಲ್ಲಿರಲಿದೆ. ವಿಷೇಶವಾಗಿ ಚಿತ್ರದಲ್ಲಿ ನಾಲ್ಕು ಕ್ಲ್ಯೆಮ್ಯಾಕ್ಸ್‌ ಇದೆ. ಅದು ಹೇಗೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇಲ್ಲಿ ಮನರಂಜನೆಗೆ ಜಾಸ್ತಿ ಒತ್ತು ಕೊಟ್ಟು ಚಿತ್ರಕಥೆ ನಿರೂಪಿಸಲಾಗಿದೆ.
ಇನ್ನು, ಈ ಚಿತ್ರಕ್ಕೆ ಬೆಂಗಳೂರು ಹಾಗೂ ದೇವರಾಯನದುರ್ಗದ ಸುತ್ತಮುತ್ತಲ ಲೊಕೇಶನ್‍ಗಳಲ್ಲಿ ಚಿತ್ರಿಕರಣ ನಡೆಸಲಾಗಿದೆ. ಚಿತ್ರದಲ್ಲಿ ಶಂಕರ್ ಅವರ ಕ್ಯಾಮೆರಾ ಕೈಚಳಕವಿದೆ.

ಅವಿನಾಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾರರ್ ಹೆಚ್ಚಾಗಿರುವುದರಿಂದ ಹಿನ್ನೆಲೆ ಸಂಗೀತಕ್ಕೆ ಆದ್ಯತೆ ಇದೆ. ಅವಿನಾಶ್ ಅವರು ಹಿನ್ನೆಲೆ ಸಂಗೀತವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.

ರಂಗಭೂಮಿ ಪ್ರತಿಭೆಗಳಾದ ನಳೀನ್‍ಕುಮಾರ್ ಮತ್ತು ಪವನ್‍ಪುತ್ರ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಕಿರಣ್‍ರಾಜ, ದೀಪಾ ಮೋಹನ್, “ಸಿಲ್ಲಿಲಲ್ಲಿ” ಖ್ಯಾತಿಯ ಶ್ರೀನಿವಾಸ್‍ಗೌಡ್ರು, ಕಿರಣ ತೇಜ, ಕರಣ್ ಆರ್ಯನ್, ರೋಹಿತ್, ಖುಷಿ ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯಪಾತ್ರದಲ್ಲಿ ಮೋಟು ರವಿ, ಅಭಿ ಮತ್ತು ವೀರೇಶ(ಕೆಜಿಎಫ್) ಅವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಮಂಜೇಶ್ವರ ಗೋವಿಂದ ಪೈ ಜನ್ಮದಿನಕ್ಕೆ ಶುರುವಾಯ್ತು ಮಹಾಕವಿ ಚಿತ್ರದ ಸ್ಕ್ರಿಪ್ಟ್‌ ಪೂಜೆ ಗಣೇಶ್‌ ಕಾಸರಗೋಡು ಕಥೆಗೆ ಸಿನಿಮಾ ಸ್ಪರ್ಶ

ಈ ಸಿನಿಮಾ ರಂಗವೇ ಹಾಗೆ. ಅದರಲ್ಲೂ ಇಲ್ಲಿ ಬಹುತೇಕ ಉತ್ಸಾಹಿ ಯುವಕರು ಸಾಕಷ್ಟು ಕನಸು ಹೊತ್ತು ಬರುವ ಜಾಗವಿದು. ನೂರಾರು ಆಸೆ-ಆಕಾಂಕ್ಷೆ ಹೊತ್ತು ಬರುವ ಯುವ ಉತ್ಸಾಹಿಗಳಿಗೆ ಇಲ್ಲಿ ಬರವಿಲ್ಲ. ಅಂತಹ ಉತ್ಸಾಹಿಗಳ ಸಾಲಿಗೆ ಈಗ ರಘುಭಟ್‌ಸಜ್ಜಾಗಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಅವರು ಮಹಾಕವಿ ಗೋವಿಂದ ಪೈ ಅವರ ಬದುಕಿನ ಚಿತ್ರಣ ಕಟ್ಟಿಕೊಡಲು ಮುಂದಾಗಿದ್ದಾರೆ.

ಬಹಳಷ್ಟು ಮಂದಿಗೆ ಗೋವಿಂದ ಪೈ ಅವರು ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಅನ್ನೋದು ಗೊತ್ತಿಲ್ಲ. ಬಹುಭಾಷಾ ಪಂಡಿತರು ಎನಿಸಿಕೊಂಡಿದ್ದ ಗೋವಿಂದ ಪೈ ಅವರ ಬದುಕಿನ ಘಟನೆಗಳನ್ನು ಪೋಣಿಸಿರುವ ಕಥೆಯನ್ನು ಇದೀಗ ಸಿನಿಮಾ ಮಾಡಲು ಅಣಿಯಾಗಿದ್ದಾರೆ ರಘುಭಟ್.‌
ಅವರ ಕನಸಿನ ಚಿತ್ರಕ್ಕೆ “ಮಹಾಕವಿ” ಎಂದು ನಾಮಕರಣ ಮಾಡಲಾಗಿದೆ. ವಿಶೇಷವೆಂದರೆ, ಮಾರ್ಚ್‌೨೩ರಂದು ಗೋವಿಂದ ಪೈ ಅವರ ಜನ್ಮದಿನ. ಹಾಗಾಗಿ ಅಂದೇ “ಮಹಾಕವಿ” ಚಿತ್ರದ ಸ್ಕ್ರಿಪ್ಟ್‌ಪೂಜೆಗೂ ಚಾಲನೆ ಸಿಕ್ಕಿದೆ. ಮಂಜೇಶ್ವರದ “ಗಿಳಿವಿಂಡು ಬಳಿ ಇರುವ ಗೋವಿಂದ ಪೈ ನಿವಾಸದಲ್ಲಿ ಸಿನಿಮಾ ಹಬ್ಬವನ್ನು ಜೋರಾಗಿಯೇ ನಡೆಸಿದ್ದಾರೆ ರಘುಭಟ್‌ ಮತ್ತು ತಂಡ.

ರಘುಭಟ್‌ ತುಂಬಾ ಕನಸು ಕಟ್ಟಿಕೊಂಡೇ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹಾಗೆ ನೋಡಿದರೆ, ಈ ಹಿಂದೆಯೇ “ಮಹಾಕವಿ” ಚಿತ್ರಕ್ಕೆ ಚಾಲನೆ ಸಿಗಬೇಕಿತ್ತು. ಕೊರೊನಾ ಹಾವಳಿ ಇದ್ದುದರಿಂದ ಅದು ಮುಂದಕ್ಕೆ ಹೋಗಿ, ಈಗ “ಮಹಾಕವಿ” ಚಿತ್ರದ ಸ್ಕ್ರಿಪ್ಟ್‌ಗೆ ಪೂಜೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಎಡನೀರು ಮಠದ ಮಹಾಸ್ವಾಮಿ ಶ್ರೀ ಸಚ್ಚಿದಾನಂದ ಭಾರತಿ ಅವರು ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದಾರೆ.

ಅಂದಹಾಗೆ, ಈ ‘ಮಹಾಕವಿ’ ಮಂಜೇಶ್ವರ ಗೋವಿಂದ ಪೈಗಳ ಪಾತ್ರಕ್ಕೆ ಕನ್ನಡದ ಜನಪ್ರಿಯ ನಾಯಕನಟರೊಬ್ಬರು ಆಯ್ಕೆಯಾಗಿದ್ದಾರೆ! ಇಷ್ಟರಲ್ಲೇ ಆ ನಟ ಯಾರೆಂಬುದನ್ನು ಚಿತ್ರತಂಡ ಹೇಳಲಿದೆ. ಇನ್ನು, ಲಕ್ಷ್ಮೀ ‌ಗಣೇಶ್ ಪ್ರೊಡಕ್ಷನ್‌ನಡೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಗೋಂವಿಂದ ಪೈ ಅವರ ಬದುಕಿನ ಕೆಲ ಘಟನೆಗಳನ್ನೆಲ್ಲಾ ಪೋಣಿಸಿ, ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶ ಅವರಿಗಿದೆ.

ಅವರೇ ಹೇಳುವಂತೆ, “ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬದುಕಿನ ಘಟನೆ ಪೋಣಿಸಿ ನೇಯ್ದ ಚಿತ್ರ ಮಾಲೆಯೇ “ಮಹಾಕವಿ”. ಇದು ಗೋವಿಂದ ಪೈಗಳ ಬದುಕಿನ ಡಾಕ್ಯುಮೆಂಟರಿ ಅಲ್ಲ, ಕಲಾತ್ಮಕ ಸಿನಿಮಾನೂ ಅಲ್ಲ. ಮನೆ ಮಂದಿ ಜತೆಯಾಗಿ ಕುಳಿತು ನೋಡಬಹುದಾದ ಮತ್ತು ಒಂದು ಅದ್ಬುತ ಅನುಭವ ಕಟ್ಟಿ ಕೊಡಬಹುದಾದ ಹೈದಯಂಗಮ ಸೆಲ್ಯೂಲಾಯಿಡ್‌ಕಾವ್ಯ” ಎನ್ನುತ್ತಾರೆ ಅವರು . ಇನ್ನು ಈ ಚಿತ್ರಕ್ಕೆ ಸುಗುಣ ರಘುಭಟ್ ಚಿತ್ರದ ನಿರ್ಮಾಪಕಿ. ನಿರ್ದೇಶಕರು, ಸೇರಿದಂತೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Categories
ಸಿನಿ ಸುದ್ದಿ

ಹೊನ್ನಾವರದಲ್ಲಿ‌ ತಾರಾ ದಂಡಿ ಸತ್ಯಾಗ್ರಹ: ವಿಶಾಲ್‌ರಾಜ್‌ ಕಾಂಬಿನೇಷನ್‌ನಲ್ಲಿ ಮತ್ತೆ ಶುರುವಾಯ್ತ ಹೊಸ ಸಿನಿಮಾ

ತಾರಾ ಈಗ ದಂಡಿ ಸತ್ಯಾಗ್ರಹ ಶುರುಮಾಡಿದ್ದಾರೆ! ಅರೇ, ಹೀಗಂದಾಕ್ಷಣ, ಇನ್ನೇನೋ ಅರ್ಥ ಮಾಡಿಕೊಳ್ಳಬೇಕಿಲ್ಲ. ಇದು ಸಿನಿಮಾ ವಿಷಯ. ಅವರೀಗ “ದಂಡಿ” ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಈಗಾಗಲೇ ಚಾಲನೆಯೂ ಸಿಕ್ಕಿದೆ. ಅವರೊಂದಿಗೆ ಪ್ರಮುಖವಾಗಿ ನಟ ಸುಚೀಂದ್ರ ಪ್ರಸಾದ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು, ವಿಶಾಲ್‌ ರಾಜ್‌ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು “ಸಾವಿತ್ರಿ ಬಾಯಿಪುಲೆ” ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲೂ ತಾರಾ ಹೈಲೈಟ್‌ ಆಗಿದ್ದರು. ಈಗ ಅದೇ ಕಾಂಬಿನೇಷನ್‌ನಲ್ಲಿ “ದಂಡಿ” ಶುರುವಾಗಿದೆ. ಇದು ಸ್ವತಂತ್ರ ಪೂರ್ವದಲ್ಲಿ ನಡೆದ‌ ದಂಡಿ (ಉಪ್ಪಿನ) ಸತ್ಯಾಗ್ರಹದ ಬಗ್ಗೆ ಶುರುವಾಗುತ್ತಿರುವ ಚಿತ್ರ. ಡಾ.ರಾಜಶೇಖರ್ ಮಠಪತಿ‌ ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರದ ಮುಹೂರ್ತ ಇತ್ತೀಚೆಗೆ ಹೊನ್ನಾವರದ ಮೂಡಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.

ಪದ್ಮಶ್ರೀ ಸುಕ್ರಿಗೌಡ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಹೊನ್ನಾವರ, ಸಿದ್ದಾಪುರ, ಅಂಕೋಲ ಸುತ್ತಮುತ್ತ ಮೂವತ್ತು ದಿನಗಳ‌‌ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.‌ ಕಲ್ಯಾಣಿ ‌ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಉಷಾರಾಣಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ವಿಶಾಲ್ ರಾಜ್ ಅವರೆ ಚಿತ್ರಕಥೆ ಬರೆದಿದ್ದಾರೆ.

ಚಿತ್ರಕ್ಕೆ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಸಾಹಿತ್ಯ ಹಾಗೂ ಸಂಭಾಷಣೆಯನ್ನು ರಾಗಂ ಅವರು ಬರೆದಿದ್ದು, ರಾಮ್ ಕ್ರಿಶ್ ಸಂಗೀತ ನೀಡುತ್ತಿದ್ದಾರೆ. ತಾರಾ ಹಾಗೂ ಸುಚೀಂದ್ರ ಪ್ರಸಾದ್‌ ಅವರೊಂದಿಗೆ ಯುವಾನ್ ದೇವ್, ಶಾಲಿನಿ ಭಟ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಾಮೋದರ್ ನಾಯ್ಡು ಕೂ‌ಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಉತ್ತರ ಕನ್ನಡ‌ದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಚಿತ್ರ ಸಮರ್ಪಣೆಯಾಗಲಿದೆ ಎಂಬುದು ಚಿತ್ರತಂಡದ ಮಾತು.‌ ಸ್ವತಂತ್ರ ಬಂದು 75 ವರ್ಷ‌ಗಳಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಈ‌ ಚಿತ್ರವನ್ನು ತೆರೆಗೆ ತರಲು‌ ನಿರ್ದೇಶಕರು ಸಜ್ಜಾಗಿದ್ದಾರೆ.

Categories
ಸಿನಿ ಸುದ್ದಿ

ತ್ರಿಕೋನ ಇದು ಮೂರು ತಲೆಮಾರಿನ ಕಥೆ ! ಕನ್ನಡ ತೆಲುಗು, ತಮಿಳಲ್ಲಿಯೂ ಬಿಡುಗಡೆಗೆ ರೆಡಿ

65ರ ಇಳಿವಯಸ್ಸಿನ ಅನುಭವ, 45ರ ಹರೆಯದ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರವೇ ತ್ರಿಕೋನ. ಈ ಹಿಂದೆ 2014ರಲ್ಲಿ “143” ಸಿನಿಮಾ ಮಾಡಿದ್ದ ಚಂದ್ರಕಾಂತ್ ಇದೀಗ “ತ್ರಿಕೋನ” ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ಬಂದಿದ್ದಾರೆ. ಈ ಚಿತ್ರಕ್ಕೆ ರಾಜಶೇಖರ್ ಬಂಡವಾಳ ಹಾಕಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಮನುಷ್ಯ ಜೀವನದಲ್ಲಿ ತಾಳ್ಮೆ ಇದ್ರೆ ಏನೆಲ್ಲ ಸಂಪಾದನೆ ಮಾಡ್ತಾನೆ.. ತಾಳ್ಮೆ ಇಲ್ಲದಿದ್ದರೆ ಏನೆಲ್ಲ ಕಳೆದುಕೊಳ್ಳುತ್ತಾನೆ ಎಂಬುದೇ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಹೊರಟಿದ್ದಾರೆ. ಈಗಿನ ಪೀಳಿಗೆ ತಾಳ್ಮೆ ಇಲ್ಲದೆ ಸಾಕಷ್ಟು ಅನಾಹುತ ಮಾಡಿಕೊಳ್ಳುತ್ತಾರೆ. ಅದನ್ನು ಮನೆಯ ಇತರ ಸದಸ್ಯರಿಗೆ ನೀಡುತ್ತಾರೆ. ಇದಕ್ಕೆ ಸರಿಹೊಂದುವ ಮೂರು ತಲೆಮಾರುಗಳ ಮೂಲಕ ಅದನ್ನು ತೋರಿಸಲಿದ್ದೇವೆ ಎಂಬುದು ನಿರ್ದೇಶಕ ಚಂದ್ರಕಾಂತ್ ಮಾತು.
ಬೆಂಗಳೂರು, ತುಮಕೂರು, ಹಾಸನ, ಸಕಲೇಶಪುರ, ಗುಂಡ್ಯ, ಸುಬ್ರಮಣ್ಯ, ಮಂಗಳೂರು, ಚಾರ್ಮಾಡಿ ಘಾಟ್, ಶಿರಾಡಿಘಾಟ್​ನಲ್ಲಿ ಸಿನಿಮಾ ಚಿತ್ರೀಕರಣವಾಗಿದೆ.

ವಿಶೇಷವೆಂದರೆ ಹೆಬ್ರಿ ಮತ್ತು ಆಗುಂಬೆ ಮಧ್ಯೆ ಕೂಡ್ಲು ತೀರ್ಥ ಫಾಲ್ಸ್​ನಲ್ಲಿ ಶೂಟಿಂಗ್ ಮಾಡಿಕೊಂಡ ಮೊದಲ ಸಿನಿಮಾ ಇದು. ಇದೂ ಸಹ ಈ ಚಿತ್ರದ ವಿಶೇಷತೆಗಳಲ್ಲೊಂದು ಎನ್ನುತ್ತಾರೆ ಚಂದ್ರಕಾಂತ್.
ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ, ಹೀಗೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ರಾಜವೀರ್​ ಮತ್ತು ಮಾರುತೇಶ್ ಅನ್ನೋ ಹೊಸ ಪ್ರತಿಭೆಗಳು ಈ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ.
ಶ್ರೀನಿವಾಸ್ ವಿನ್ನಕೋಟ್ ಛಾಯಾಗ್ರಹಣವಿದೆ. ಸುರೇಂದ್ರನಾಥ್ ಪಿ ಆರ್ ಸಂಗೀತ, ಹಿನ್ನಲೆ ಸಂಗೀತವಿದೆ.

ಜೀವನ್ ಪ್ರಕಾಶ್​ ಎನ್ ಸಂಕಲನ. ಹೈಟ್ ಮಂಜು ಕೋರಿಯೋಗ್ರಾಫಿ, ಚೇತನ್ ಡಿಸೋಜ್ ಮತ್ತು ಜಾನಿ ಮಾಸ್ಟರ್​ ಸಾಹಸ ನಿರ್ದೇಶನ ಮಾಡಿದ್ದಾರೆ.
ಕನ್ನಡದಲ್ಲಿ ತ್ರಿಕೋನ, ತೆಲುಗಿನಲ್ಲಿ ತ್ರಿಕೋನಂ ಮತ್ತು ತಮಿಳಿನಲ್ಲಿ ಗೋಸುಲೋ ಶೀರ್ಷಿಕೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಸೆನ್ಸಾರ್ ಮಂಡಳಿಯಿಂದಲೂ ಯಾವುದೇ ಕಟ್ ಇಲ್ಲದೆ ಯೂ/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪೀಪಲ್ಸ್ ಸಂಸ್ಥೆ ಪಡೆದುಕೊಂಡಿದೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಬ್ರಹ್ಮಗಂಟು ಖ್ಯಾತಿಯ ನಟಿ ಗುಂಡಮ್ಮ

ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಗೀತಾ ಭಾರತಿಭಟ್ ಮೂರನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದಾರೆ. ದಢೂತಿ ದೇಹದ ಗೀತಾ ಭಾರತಿಭಟ್‌ “ಬ್ರಹ್ಮಗಂಟು” ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಯಾಗಿ‌, ನಂತರದ ದಿನಗಳಲ್ಲಿ ಗುಂಡಮ್ಮ ಅಂತಾನೇ ಜನಪ್ರಿಯಗೊಂಡಿದ್ದರು.

ಮೂಲತಃ ಕಾರ್ಕಳದವರಾದ ಗೀತಾ ಭಾರತಿಭಟ್‌,‌ ನಟನೆ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು. ಆ ಕಾರಣಕ್ಕೆ ಅವರು, ಬೆಂಗಳೂರಿನತ್ತ ಮುಖ ಮಾಡಿದ್ದರು. ಸಿಕ್ಕಾಪಟ್ಟೆ ಶ್ರಮಪಟ್ಟಿದ್ದ ಗೀತಾ ಭಾರತಿಭಟ್‌, ತನಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮನೆಮಾತಾದ ಈ ಗುಂಡಮ್ಮ, ಬಿಗ್‌ಬಾಸ್‌ ಮನೆಗೆ ಹೋಗುವ ಅವಕಾಶ ಪಡೆದಾಗ, ಎಲ್ಲರಿಗೂ ಅಚ್ಚರಿಯಾಗಿದ್ದು ನಿಜ. ಬಿಗ್‌ಬಾಸ್‌ ಮನೆ ಒಳ ನಡೆದ ಇವರು, ಬಹುತೇಕ ಅಳುಮೊಗದಲ್ಲಿ ಕಂಡಿದ್ದೇ ಹೆಚ್ಚು. ಬಿಗ್‌ಬಾಸ್‌ ಕೊಟ್ಟ ಟಾಸ್ಕ್ ಗಳನ್ನೆಲ್ಲಾ ಚೆನ್ನಾಗಿ ನಿಭಾಯಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ, ತೀರಾ ಮೃದು ಸ್ವಭಾವದ ಇವರಿಗೆ ಬಿಗ್‌ಬಾಸ್ ಮನೆಯಲ್ಲಿ ಬಹಳಷ್ಟು ದಿನಗಳ ಕಾಲ ಇರಲು ಸಾಧ್ಯವಾಗಲಿಲ್ಲ.

ಕಣ್ಣೀರೇ ಮುಳುವಾಯ್ತ?
ಬಿಗ್‌ಬಾಸ್‌ ಮನೆಯಲ್ಲಿ ಸದಾ ಕಣ್ಣೀರು ಹಾಕುತ್ತಲೇ ಇದ್ದ ಇವರು ಎಲ್ಲರಿಗೂ ಹತ್ತಿರವಾಗಿದ್ದರು. ಒಬ್ಬರ ಬಗ್ಗೆ ಕೇವಲವಾಗಿ ಮಾತನಾಡಿದ ಬಳಿಕ ಸ್ವತಃ ಅವರೇ ನಾ‌ನು ಯಾಕೆ ಹೀಗೆ ಅಂದೆ ಅಂತ ಪಶ್ಚಾತ್ತಾಪಪಡುತ್ತಿದ್ದರು. ಬಿಗ್‌ಬಾಸ್ ಮನೆಮಂದಿ ಇವರನ್ನು ಸಮಾಧಾನ ಮಾಡುವುದರಲ್ಲಿಯೇ ಸುಸ್ತಾಗಿ‌ ಹೋಗುತ್ತಿದ್ದರು. ಹೀಗೆ ಗೀತಾ ಭಾರತಿ‌ ಭಟ್ ದಿನದಿಂದ ದಿನಕ್ಕೆ ಆ ಮನೆಯಲ್ಲಿ ಮಂಕಾಗಿದ್ದರು. ಮೂರನೇ ವಾರಕ್ಕೆ ಅವರು ಬಿಗ್‌ಬಾಸ್ ಮನೆಯಿಂದಲೇ ಹೊರಬಂದಿದ್ದಾರೆ.

Categories
ಸಿನಿ ಸುದ್ದಿ

ನೂತನ್‌ ಉಮೇಶ್‌ ಅವರ ವಿನೂತನ ಪ್ರಯತ್ನ! ನಾಲ್ವರು ನಿರ್ದೇಶಕರು, ನಾಲ್ಕು ಕಥೆ, ನಾಲ್ಕು ಭಾಷೆ, ಒಂದೇ ಸಿನಿಮಾ!! ಇದು ಫಸ್ಟ್‌ ನಿರ್ಮಾಣದ ಚಿತ್ರ

ನಿರ್ದೇಶಕ ನೂತನ್‌ ಉಮೇಶ್‌ ಇದೀಗ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ! ಹೌದು,‍ “ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ” ಸಿನಿಮಾ ಮೂಲಕ ಸೌಂಡು ಮಾಡಿದ ನೂತನ್‌ ಉಮೇಶ್‌, ಆ ನಂತರದ ದಿನಗಳಲ್ಲಿ “ಅಸ್ತಿತ್ವ” ಮೂಲಕ ಸುದ್ದಿಯಾದರು. ಆ ಚಿತ್ರ ಹೊರಬಂದ ಬಳಿಕ ವಿನೋದ್‌ ಪ್ರಭಾಕರ್‌ ಅಭಿನಯದ “ಫೈಟರ್‌”ಗೆ ಆಕ್ಷನ್-ಕಟ್‌ ಹೇಳಿದ್ದಾರೆ. ಆ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಷ್ಟೇ. ಈ ಬೆನ್ನಲ್ಲೇ ನೂತನ್‌ ಉಮೇಶ್‌ ಹೊಸದೊಂದು ಪ್ರಯೋಗಕ್ಕಿಳಿದಿರುವುದು ವಿಶೇಷ. ಹಾಗಾದರೆ, ನೂತನ್‌ ಉಮೇಶ್‌ ಅವರ ನೂತನ ಪ್ರಯೋಗವೇನು? ವಿಷಯವಿಷ್ಟೇ. ಇಲ್ಲಿಯವರೆಗೆ ನಿರ್ದೇಶಕರಾಗಿದ್ದ ಅವರು, ಈಗ ನಿರ್ಮಾಪಕರೂ ಆಗಿದ್ದಾರೆ ಅನ್ನೋದೂ ವಿಶೇಷ.‌

“ಮೋಹಕ್‌ ಸಿನಿಮಾಸ್”‌ ಎಂಬ ಬ್ಯಾನರ್‌ ಶುರುಮಾಡಿ, ಆ ಮೂಲಕ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. ಇದಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಅವರು ತಮ್ಮ ಹೊಸ ಬ್ಯಾನರ್‌ ಮೂಲಕ ವಿಶೇಷ, ವಿಭಿನ್ನ ಎನ್ನುವ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಾಲ್ಕು ಜನ ನಿರ್ದೇಶಕರು, ನಾಲ್ಕು ಭಾಷೆ ಸಿನಿಮಾ, ನಾಲ್ಕು ಕಥೆಗಳು ಆದರೆ ಸಿನಿಮಾ ಮಾತ್ರ ಒಂದೇ. ಈಗಾಗಲೇ ಅವರು ಸದ್ದಿಲ್ಲದೆಯೇ, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ತಯಾರಾಗಬೇಕಿದೆ. ಸದ್ಯಕ್ಕೆ ಶೀರ್ಷಿಕೆ ಅನೌನ್ಸ್‌ ಮಾಡದ ನೂತನ್‌ ಉಮೇಶ್‌, ಇಷ್ಟರಲ್ಲೇ ಕನ್ನಡ ಸಿನಿಮಾ ಮುಹೂರ್ತ ನೆರವೇರಿಸಿ, ವಿಭಿನ್ನವಾಗಿಯೇ ಘೋಷಣೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ.
ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಗ್ಗೆ “ಸಿನಿಲಹರಿ” ಜೊತೆ ಹಂಚಿಕೊಂಡ ನೂತನ್ ಉಮೇಶ್‌, “ಇದು ನನ್ನ ಮೊದಲ ಪ್ರಯತ್ನ. ನಿರ್ಮಾಣ ಸಂಸ್ಥೆ ಹುಟ್ಟು ಹಾಕೋದು ಸುಲಭವಲ್ಲ. ತುಂಬಾನೇ ಕಷ್ಟ. ಆ ಕಷ್ಟದಲ್ಲೇ ನಾನೊಂದು ಕನಸು ಕಟ್ಟಿಕೊಂಡು “ಮೋಹಕ್‌ ಸಿನಿಮಾಸ್‌” ಹೆಸರಿನ ಬ್ಯಾನರ್‌ ಮಾಡಿದ್ದೇನೆ. ಈ ಮೂಲಕ ಹೊಸ ಬಗೆಯ ಚಿತ್ರ ಮಾಡಿದ್ದು, ಅದು ನಾಲ್ವರು ನಿರ್ದೇಶಕರು ಸೇರಿ ಮಾಡುತ್ತಿರುವ ಚಿತ್ರ. ಚಿತ್ರ ಕೂಡ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ತಮಿಳು ಭಾಷೆಯಲ್ಲಿ ಸೂರ್ಯ ನಿರ್ದೇಶಿಸಿದರೆ, ಮಲಯಾಲಂ ಭಾಷೆಯ ಸಿನಿಮಾಗೆ ಶಿಬು ಗಂಗಾಧರ್‌ ನಿರ್ದೇಶಕರು. ತೆಲುಗಿನ ಚಿತ್ರಕ್ಕಿನ್ನೂ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ.

ಕನ್ನಡದಲ್ಲಿ ತಯಾರಾಗುವ ಚಿತ್ರಕ್ಕೆ ನಾನೇ ನಿರ್ದೇಶನ ಮಾಡಲಿದ್ದೇನೆ. ನಾಲ್ಕು ಭಾಷೆಯ ಈ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಇದು ಒಂದೇ ಸಿನಿಮಾ ಅನ್ನೋದು ವಿಶೇಷ. ಒಂದೇ ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದರೂ, ಇಂಟರ್‌ ಲಿಂಕ್‌ ಇರಲಿದೆ. ಓಪನಿಂಗ್‌ನಲ್ಲೇ ಇಂಟರ್ಲಿಂಕ್‌ ಕಥೆ ಇರಲಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಸಿನಿಮಾದಲ್ಲಿ ನಾಲ್ಕು ಭಾಷೆಗಳನ್ನೂ ಕೇಳಬಹುದು. ಅವು ಆಗಾಗ ಪ್ಲೇ ಆಗುತ್ತಿರುತ್ತವೆ. ಅದು ಹೇಗೆ ಅನ್ನೋದೇ ವಿಶೇಷ. ಇನ್ನು, ಲಾಕ್‌ಡೌನ್‌ ಸಮಯದಲ್ಲಿ ನಡೆದ ರಿಯಲ್‌ ಇನ್ಸಿಡೆಂಟ್‌ ಇಟ್ಟುಕೊಂಡು ಕಥೆ ಮಾಡಲಾಗಿದೆ.

ಮೊದಲ ಸಲ ಪ್ರೊಡಕ್ಷನ್ಸ್‌ ಶುರುಮಾಡುತ್ತಿರುವುದರಿಂದ ಹೊಸದನ್ನು ಮಾಡಬೇಕು ಎಂಬ ಉದ್ದೇಶದಿಂದ ಈ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ತಿಂಗಳಲ್ಲಿ ಕನ್ನಡ ಭಾಷೆಯ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಕನ್ನಡದಲ್ಲಿ ತಯಾರಾಗುವ ಸಿನಿಮಾಗಿನ್ನೂ ನಾಯಕ,ನಾಯಕಿಯ ಆಯ್ಕೆಯಾಗಬೇಕಿದೆ. ಸದ್ಯ ಹುಡುಕಾಟ ನಡೆದಿದೆ” ಎನ್ನುತ್ತಾರೆ ಉಮೇಶ್.
ಈಗಾಗಲೇ ಆಯಾ ಭಾಷೆಯ ಸಿನಿಮಾಗಳಲ್ಲಿ ನಾಲ್ಕೈದು ನಿರ್ದೇಶಕರು ಸೇರಿ ಒಂದು ಸಿನಿಮಾ ಮಾಡಿರುವ ಉದಾಹರಣೆ ಸಾಕಷ್ಟಿದೆ. ಆದರೆ, ಒಂದು ಸಿನಿಮಾವನ್ನು ನಾಲ್ಕು ಭಾಷೆಯ ನಿರ್ದೇಶಕರು ಮಾಡುತ್ತಿರುವುದು ಹೊಸ ಪ್ರಯತ್ನ. ಇದೊಂದು ಪ್ರಯೋಗವೂ ಹೌದು. ಇದು ಯುನಿವರ್ಸಲ್‌ ಸ್ಟೋರಿ ಆಗಿರುವುದರಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಉಮೇಶ್.‌

error: Content is protected !!