ಕನ್ನಡ ಚಿತ್ರರಂಗ ಈಗ ಹಬ್ಬದ ವಾತಾವರಣದಿಂದ ಕೂಡಿದೆ. ಹೌದು, ಈ ಮಾತಿಗೆ ಸಾಕ್ಷಿಯೆಂಬಂತೆ, ಚಿತ್ರಮಂದಿರಗಳಲ್ಲಿ ಜನ ಜಂಗುಳಿಯೂ ಇದೆ. “ರಾಬರ್ಟ್” ಅಂಥದ್ದೊಂದು ಮೋಡಿ ಮಾಡುವ ಮೂಲಕ ಜನರನ್ನು ಚಿತ್ರಮಂದಿರದತ್ತ ಕರೆತರುವಲ್ಲಿ ಯಶಸ್ವಿಯೂ ಆಗಿದೆ. ಚಿತ್ರತಂಡ ಈಗ ದೊಡ್ಡ ಯಶಸ್ಸು ಪಡೆದುಕೊಂಡಿದೆ.
ಇದೇ ಖುಷಿಯಲ್ಲಿರುವ ಚಿತ್ರತಂಡ ಇನ್ನು ಒಂದು ಹೆಜ್ಜೆ ಮುಂದೆ ಹೋಗಲು ಸಜ್ಜಾಗಿದೆ. ಇದು ಬೇರೇನೂ ಅಲ್ಲ, “ರಾಬರ್ಟ್” ಚಿತ್ರಕ್ಕೆ ಗೆಲುವು ತಂದುಕೊಂಡ ಕನ್ನಡಿಗರನ್ನು ಪ್ರೀತಿಯಿಂದಲೇ ಕಂಡುಕೊಂಡು, ಧನ್ಯವಾದ ಅರ್ಪಿಸಲು ತಯಾರಾಗಿದೆ. ಅಂದರೆ, ರಾಜ್ಯಾದ್ಯಂತ “ರಾಬರ್ಟ್” ಚಿತ್ರತಂಡ ವಿಜಯಯಾತ್ರೆ ಶುರುಮಾಡುತ್ತಿದೆ. ಕೊರೊನಾ ಹಾವಳಿ ಮಧ್ಯೆಯೇ “ರಾಬರ್ಟ್” ಚಿತ್ರಮಂದಿರಕ್ಕೆ ಬಂದು, ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ.
ಈ ಖುಷಿಯಲ್ಲಿರುವ ಸಿನಿಮಾ ತಂಡ, ಈಗ ನೂರು ಕೋಟಿ ಕ್ಲಬ್ ತಲುಪುವ ಹಾದಿಯಲ್ಲಿದೆ. ಹೀಗಾಗಿ ವಿಜಯಯಾತ್ರೆ ಆಯೋಜಿಸಿದ್ದು, ಮಾರ್ಚ್ 29ರಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಂಭ್ರಮ ಆಚರಿಸಲು ಸಜ್ಜಾಗಿದೆ. ಮಾರ್ಚ್ 30ರಂದು ಹುಬ್ಬಳ್ಳಿ, ಹಾವೇರಿ, ಮಾರ್ಚ್ 31ರಂದು ಶಿವಮೊಬ್ಗ, ಹಾಸನ, ತಿಪಟೂರು, ಏಪ್ರಿಲ್ 1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ, ಮದ್ದೂರಿಗೆ ಚಿತ್ರತಂಡ ತೆರಳಿ ಸಂಭ್ರಮ ಹಂಚಿಕೊಳ್ಳಲಿದೆ.
ಈಗಾಗಲೇ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಸಿನಿಮಾ ಕೂಡ ಗುಲ್ಬರ್ಗ, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಚಿತ್ರದುರ್ಗ ಮೈಸೂರು, ಮಂಡ್ಯ ಕಡೆಗಳಲ್ಲಿ ತನ್ನ ಅದ್ಧೂರಿಯಾದ ಯುವ ಸಂಭ್ರಮವನ್ನು ಆಯೋಜಿಸುವ ಮೂಲಕ ಜೋರು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಈಗ ದರ್ಶನ್ ಅಭಿನಯದ “ರಾಬರ್ಟ್” ದೊಡ್ಡ ಮಟ್ಟದ ಗೆಲುವು ಕಂಡಿದ್ದು, ಆ ಗೆಲುವನ್ನು ಕನ್ನಡಿಗರ ನಡುವೆ ಆಚರಿಸಲು ನಿರ್ಧರಿಸಿದೆ. ನಿರ್ಮಾಪಕ ಉಮಾಪತಿ, ನಿರ್ದೇಶ ತರುಣ್ ಸುಧೀರ್ ಅವರು ತಮ್ಮ ತಂಡದೊಂದಿಗೆ ವಿಜಯಯಾತ್ರೆ ನಡೆಸಲಿದ್ದಾರೆ.