ತಾರಾ ಈಗ ದಂಡಿ ಸತ್ಯಾಗ್ರಹ ಶುರುಮಾಡಿದ್ದಾರೆ! ಅರೇ, ಹೀಗಂದಾಕ್ಷಣ, ಇನ್ನೇನೋ ಅರ್ಥ ಮಾಡಿಕೊಳ್ಳಬೇಕಿಲ್ಲ. ಇದು ಸಿನಿಮಾ ವಿಷಯ. ಅವರೀಗ “ದಂಡಿ” ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಈಗಾಗಲೇ ಚಾಲನೆಯೂ ಸಿಕ್ಕಿದೆ. ಅವರೊಂದಿಗೆ ಪ್ರಮುಖವಾಗಿ ನಟ ಸುಚೀಂದ್ರ ಪ್ರಸಾದ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು, ವಿಶಾಲ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು “ಸಾವಿತ್ರಿ ಬಾಯಿಪುಲೆ” ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲೂ ತಾರಾ ಹೈಲೈಟ್ ಆಗಿದ್ದರು. ಈಗ ಅದೇ ಕಾಂಬಿನೇಷನ್‌ನಲ್ಲಿ “ದಂಡಿ” ಶುರುವಾಗಿದೆ. ಇದು ಸ್ವತಂತ್ರ ಪೂರ್ವದಲ್ಲಿ ನಡೆದ ದಂಡಿ (ಉಪ್ಪಿನ) ಸತ್ಯಾಗ್ರಹದ ಬಗ್ಗೆ ಶುರುವಾಗುತ್ತಿರುವ ಚಿತ್ರ. ಡಾ.ರಾಜಶೇಖರ್ ಮಠಪತಿ ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರದ ಮುಹೂರ್ತ ಇತ್ತೀಚೆಗೆ ಹೊನ್ನಾವರದ ಮೂಡಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.
ಪದ್ಮಶ್ರೀ ಸುಕ್ರಿಗೌಡ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಹೊನ್ನಾವರ, ಸಿದ್ದಾಪುರ, ಅಂಕೋಲ ಸುತ್ತಮುತ್ತ ಮೂವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಕಲ್ಯಾಣಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಉಷಾರಾಣಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ವಿಶಾಲ್ ರಾಜ್ ಅವರೆ ಚಿತ್ರಕಥೆ ಬರೆದಿದ್ದಾರೆ.
ಚಿತ್ರಕ್ಕೆ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಸಾಹಿತ್ಯ ಹಾಗೂ ಸಂಭಾಷಣೆಯನ್ನು ರಾಗಂ ಅವರು ಬರೆದಿದ್ದು, ರಾಮ್ ಕ್ರಿಶ್ ಸಂಗೀತ ನೀಡುತ್ತಿದ್ದಾರೆ. ತಾರಾ ಹಾಗೂ ಸುಚೀಂದ್ರ ಪ್ರಸಾದ್ ಅವರೊಂದಿಗೆ ಯುವಾನ್ ದೇವ್, ಶಾಲಿನಿ ಭಟ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಾಮೋದರ್ ನಾಯ್ಡು ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಚಿತ್ರ ಸಮರ್ಪಣೆಯಾಗಲಿದೆ ಎಂಬುದು ಚಿತ್ರತಂಡದ ಮಾತು. ಸ್ವತಂತ್ರ ಬಂದು 75 ವರ್ಷಗಳಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಈ ಚಿತ್ರವನ್ನು ತೆರೆಗೆ ತರಲು ನಿರ್ದೇಶಕರು ಸಜ್ಜಾಗಿದ್ದಾರೆ.