ನೂತನ್‌ ಉಮೇಶ್‌ ಅವರ ವಿನೂತನ ಪ್ರಯತ್ನ! ನಾಲ್ವರು ನಿರ್ದೇಶಕರು, ನಾಲ್ಕು ಕಥೆ, ನಾಲ್ಕು ಭಾಷೆ, ಒಂದೇ ಸಿನಿಮಾ!! ಇದು ಫಸ್ಟ್‌ ನಿರ್ಮಾಣದ ಚಿತ್ರ

ನಿರ್ದೇಶಕ ನೂತನ್‌ ಉಮೇಶ್‌ ಇದೀಗ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ! ಹೌದು,‍ “ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ” ಸಿನಿಮಾ ಮೂಲಕ ಸೌಂಡು ಮಾಡಿದ ನೂತನ್‌ ಉಮೇಶ್‌, ಆ ನಂತರದ ದಿನಗಳಲ್ಲಿ “ಅಸ್ತಿತ್ವ” ಮೂಲಕ ಸುದ್ದಿಯಾದರು. ಆ ಚಿತ್ರ ಹೊರಬಂದ ಬಳಿಕ ವಿನೋದ್‌ ಪ್ರಭಾಕರ್‌ ಅಭಿನಯದ “ಫೈಟರ್‌”ಗೆ ಆಕ್ಷನ್-ಕಟ್‌ ಹೇಳಿದ್ದಾರೆ. ಆ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಷ್ಟೇ. ಈ ಬೆನ್ನಲ್ಲೇ ನೂತನ್‌ ಉಮೇಶ್‌ ಹೊಸದೊಂದು ಪ್ರಯೋಗಕ್ಕಿಳಿದಿರುವುದು ವಿಶೇಷ. ಹಾಗಾದರೆ, ನೂತನ್‌ ಉಮೇಶ್‌ ಅವರ ನೂತನ ಪ್ರಯೋಗವೇನು? ವಿಷಯವಿಷ್ಟೇ. ಇಲ್ಲಿಯವರೆಗೆ ನಿರ್ದೇಶಕರಾಗಿದ್ದ ಅವರು, ಈಗ ನಿರ್ಮಾಪಕರೂ ಆಗಿದ್ದಾರೆ ಅನ್ನೋದೂ ವಿಶೇಷ.‌

“ಮೋಹಕ್‌ ಸಿನಿಮಾಸ್”‌ ಎಂಬ ಬ್ಯಾನರ್‌ ಶುರುಮಾಡಿ, ಆ ಮೂಲಕ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. ಇದಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಅವರು ತಮ್ಮ ಹೊಸ ಬ್ಯಾನರ್‌ ಮೂಲಕ ವಿಶೇಷ, ವಿಭಿನ್ನ ಎನ್ನುವ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಾಲ್ಕು ಜನ ನಿರ್ದೇಶಕರು, ನಾಲ್ಕು ಭಾಷೆ ಸಿನಿಮಾ, ನಾಲ್ಕು ಕಥೆಗಳು ಆದರೆ ಸಿನಿಮಾ ಮಾತ್ರ ಒಂದೇ. ಈಗಾಗಲೇ ಅವರು ಸದ್ದಿಲ್ಲದೆಯೇ, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ತಯಾರಾಗಬೇಕಿದೆ. ಸದ್ಯಕ್ಕೆ ಶೀರ್ಷಿಕೆ ಅನೌನ್ಸ್‌ ಮಾಡದ ನೂತನ್‌ ಉಮೇಶ್‌, ಇಷ್ಟರಲ್ಲೇ ಕನ್ನಡ ಸಿನಿಮಾ ಮುಹೂರ್ತ ನೆರವೇರಿಸಿ, ವಿಭಿನ್ನವಾಗಿಯೇ ಘೋಷಣೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ.
ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಗ್ಗೆ “ಸಿನಿಲಹರಿ” ಜೊತೆ ಹಂಚಿಕೊಂಡ ನೂತನ್ ಉಮೇಶ್‌, “ಇದು ನನ್ನ ಮೊದಲ ಪ್ರಯತ್ನ. ನಿರ್ಮಾಣ ಸಂಸ್ಥೆ ಹುಟ್ಟು ಹಾಕೋದು ಸುಲಭವಲ್ಲ. ತುಂಬಾನೇ ಕಷ್ಟ. ಆ ಕಷ್ಟದಲ್ಲೇ ನಾನೊಂದು ಕನಸು ಕಟ್ಟಿಕೊಂಡು “ಮೋಹಕ್‌ ಸಿನಿಮಾಸ್‌” ಹೆಸರಿನ ಬ್ಯಾನರ್‌ ಮಾಡಿದ್ದೇನೆ. ಈ ಮೂಲಕ ಹೊಸ ಬಗೆಯ ಚಿತ್ರ ಮಾಡಿದ್ದು, ಅದು ನಾಲ್ವರು ನಿರ್ದೇಶಕರು ಸೇರಿ ಮಾಡುತ್ತಿರುವ ಚಿತ್ರ. ಚಿತ್ರ ಕೂಡ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ತಮಿಳು ಭಾಷೆಯಲ್ಲಿ ಸೂರ್ಯ ನಿರ್ದೇಶಿಸಿದರೆ, ಮಲಯಾಲಂ ಭಾಷೆಯ ಸಿನಿಮಾಗೆ ಶಿಬು ಗಂಗಾಧರ್‌ ನಿರ್ದೇಶಕರು. ತೆಲುಗಿನ ಚಿತ್ರಕ್ಕಿನ್ನೂ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ.

ಕನ್ನಡದಲ್ಲಿ ತಯಾರಾಗುವ ಚಿತ್ರಕ್ಕೆ ನಾನೇ ನಿರ್ದೇಶನ ಮಾಡಲಿದ್ದೇನೆ. ನಾಲ್ಕು ಭಾಷೆಯ ಈ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಇದು ಒಂದೇ ಸಿನಿಮಾ ಅನ್ನೋದು ವಿಶೇಷ. ಒಂದೇ ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದರೂ, ಇಂಟರ್‌ ಲಿಂಕ್‌ ಇರಲಿದೆ. ಓಪನಿಂಗ್‌ನಲ್ಲೇ ಇಂಟರ್ಲಿಂಕ್‌ ಕಥೆ ಇರಲಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಸಿನಿಮಾದಲ್ಲಿ ನಾಲ್ಕು ಭಾಷೆಗಳನ್ನೂ ಕೇಳಬಹುದು. ಅವು ಆಗಾಗ ಪ್ಲೇ ಆಗುತ್ತಿರುತ್ತವೆ. ಅದು ಹೇಗೆ ಅನ್ನೋದೇ ವಿಶೇಷ. ಇನ್ನು, ಲಾಕ್‌ಡೌನ್‌ ಸಮಯದಲ್ಲಿ ನಡೆದ ರಿಯಲ್‌ ಇನ್ಸಿಡೆಂಟ್‌ ಇಟ್ಟುಕೊಂಡು ಕಥೆ ಮಾಡಲಾಗಿದೆ.

ಮೊದಲ ಸಲ ಪ್ರೊಡಕ್ಷನ್ಸ್‌ ಶುರುಮಾಡುತ್ತಿರುವುದರಿಂದ ಹೊಸದನ್ನು ಮಾಡಬೇಕು ಎಂಬ ಉದ್ದೇಶದಿಂದ ಈ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ತಿಂಗಳಲ್ಲಿ ಕನ್ನಡ ಭಾಷೆಯ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಕನ್ನಡದಲ್ಲಿ ತಯಾರಾಗುವ ಸಿನಿಮಾಗಿನ್ನೂ ನಾಯಕ,ನಾಯಕಿಯ ಆಯ್ಕೆಯಾಗಬೇಕಿದೆ. ಸದ್ಯ ಹುಡುಕಾಟ ನಡೆದಿದೆ” ಎನ್ನುತ್ತಾರೆ ಉಮೇಶ್.
ಈಗಾಗಲೇ ಆಯಾ ಭಾಷೆಯ ಸಿನಿಮಾಗಳಲ್ಲಿ ನಾಲ್ಕೈದು ನಿರ್ದೇಶಕರು ಸೇರಿ ಒಂದು ಸಿನಿಮಾ ಮಾಡಿರುವ ಉದಾಹರಣೆ ಸಾಕಷ್ಟಿದೆ. ಆದರೆ, ಒಂದು ಸಿನಿಮಾವನ್ನು ನಾಲ್ಕು ಭಾಷೆಯ ನಿರ್ದೇಶಕರು ಮಾಡುತ್ತಿರುವುದು ಹೊಸ ಪ್ರಯತ್ನ. ಇದೊಂದು ಪ್ರಯೋಗವೂ ಹೌದು. ಇದು ಯುನಿವರ್ಸಲ್‌ ಸ್ಟೋರಿ ಆಗಿರುವುದರಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಉಮೇಶ್.‌

Related Posts

error: Content is protected !!