ಮಂಜೇಶ್ವರ ಗೋವಿಂದ ಪೈ ಜನ್ಮದಿನಕ್ಕೆ ಶುರುವಾಯ್ತು ಮಹಾಕವಿ ಚಿತ್ರದ ಸ್ಕ್ರಿಪ್ಟ್‌ ಪೂಜೆ ಗಣೇಶ್‌ ಕಾಸರಗೋಡು ಕಥೆಗೆ ಸಿನಿಮಾ ಸ್ಪರ್ಶ

ಈ ಸಿನಿಮಾ ರಂಗವೇ ಹಾಗೆ. ಅದರಲ್ಲೂ ಇಲ್ಲಿ ಬಹುತೇಕ ಉತ್ಸಾಹಿ ಯುವಕರು ಸಾಕಷ್ಟು ಕನಸು ಹೊತ್ತು ಬರುವ ಜಾಗವಿದು. ನೂರಾರು ಆಸೆ-ಆಕಾಂಕ್ಷೆ ಹೊತ್ತು ಬರುವ ಯುವ ಉತ್ಸಾಹಿಗಳಿಗೆ ಇಲ್ಲಿ ಬರವಿಲ್ಲ. ಅಂತಹ ಉತ್ಸಾಹಿಗಳ ಸಾಲಿಗೆ ಈಗ ರಘುಭಟ್‌ಸಜ್ಜಾಗಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಅವರು ಮಹಾಕವಿ ಗೋವಿಂದ ಪೈ ಅವರ ಬದುಕಿನ ಚಿತ್ರಣ ಕಟ್ಟಿಕೊಡಲು ಮುಂದಾಗಿದ್ದಾರೆ.

ಬಹಳಷ್ಟು ಮಂದಿಗೆ ಗೋವಿಂದ ಪೈ ಅವರು ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಅನ್ನೋದು ಗೊತ್ತಿಲ್ಲ. ಬಹುಭಾಷಾ ಪಂಡಿತರು ಎನಿಸಿಕೊಂಡಿದ್ದ ಗೋವಿಂದ ಪೈ ಅವರ ಬದುಕಿನ ಘಟನೆಗಳನ್ನು ಪೋಣಿಸಿರುವ ಕಥೆಯನ್ನು ಇದೀಗ ಸಿನಿಮಾ ಮಾಡಲು ಅಣಿಯಾಗಿದ್ದಾರೆ ರಘುಭಟ್.‌
ಅವರ ಕನಸಿನ ಚಿತ್ರಕ್ಕೆ “ಮಹಾಕವಿ” ಎಂದು ನಾಮಕರಣ ಮಾಡಲಾಗಿದೆ. ವಿಶೇಷವೆಂದರೆ, ಮಾರ್ಚ್‌೨೩ರಂದು ಗೋವಿಂದ ಪೈ ಅವರ ಜನ್ಮದಿನ. ಹಾಗಾಗಿ ಅಂದೇ “ಮಹಾಕವಿ” ಚಿತ್ರದ ಸ್ಕ್ರಿಪ್ಟ್‌ಪೂಜೆಗೂ ಚಾಲನೆ ಸಿಕ್ಕಿದೆ. ಮಂಜೇಶ್ವರದ “ಗಿಳಿವಿಂಡು ಬಳಿ ಇರುವ ಗೋವಿಂದ ಪೈ ನಿವಾಸದಲ್ಲಿ ಸಿನಿಮಾ ಹಬ್ಬವನ್ನು ಜೋರಾಗಿಯೇ ನಡೆಸಿದ್ದಾರೆ ರಘುಭಟ್‌ ಮತ್ತು ತಂಡ.

ರಘುಭಟ್‌ ತುಂಬಾ ಕನಸು ಕಟ್ಟಿಕೊಂಡೇ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹಾಗೆ ನೋಡಿದರೆ, ಈ ಹಿಂದೆಯೇ “ಮಹಾಕವಿ” ಚಿತ್ರಕ್ಕೆ ಚಾಲನೆ ಸಿಗಬೇಕಿತ್ತು. ಕೊರೊನಾ ಹಾವಳಿ ಇದ್ದುದರಿಂದ ಅದು ಮುಂದಕ್ಕೆ ಹೋಗಿ, ಈಗ “ಮಹಾಕವಿ” ಚಿತ್ರದ ಸ್ಕ್ರಿಪ್ಟ್‌ಗೆ ಪೂಜೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಎಡನೀರು ಮಠದ ಮಹಾಸ್ವಾಮಿ ಶ್ರೀ ಸಚ್ಚಿದಾನಂದ ಭಾರತಿ ಅವರು ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದಾರೆ.

ಅಂದಹಾಗೆ, ಈ ‘ಮಹಾಕವಿ’ ಮಂಜೇಶ್ವರ ಗೋವಿಂದ ಪೈಗಳ ಪಾತ್ರಕ್ಕೆ ಕನ್ನಡದ ಜನಪ್ರಿಯ ನಾಯಕನಟರೊಬ್ಬರು ಆಯ್ಕೆಯಾಗಿದ್ದಾರೆ! ಇಷ್ಟರಲ್ಲೇ ಆ ನಟ ಯಾರೆಂಬುದನ್ನು ಚಿತ್ರತಂಡ ಹೇಳಲಿದೆ. ಇನ್ನು, ಲಕ್ಷ್ಮೀ ‌ಗಣೇಶ್ ಪ್ರೊಡಕ್ಷನ್‌ನಡೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಗೋಂವಿಂದ ಪೈ ಅವರ ಬದುಕಿನ ಕೆಲ ಘಟನೆಗಳನ್ನೆಲ್ಲಾ ಪೋಣಿಸಿ, ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶ ಅವರಿಗಿದೆ.

ಅವರೇ ಹೇಳುವಂತೆ, “ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬದುಕಿನ ಘಟನೆ ಪೋಣಿಸಿ ನೇಯ್ದ ಚಿತ್ರ ಮಾಲೆಯೇ “ಮಹಾಕವಿ”. ಇದು ಗೋವಿಂದ ಪೈಗಳ ಬದುಕಿನ ಡಾಕ್ಯುಮೆಂಟರಿ ಅಲ್ಲ, ಕಲಾತ್ಮಕ ಸಿನಿಮಾನೂ ಅಲ್ಲ. ಮನೆ ಮಂದಿ ಜತೆಯಾಗಿ ಕುಳಿತು ನೋಡಬಹುದಾದ ಮತ್ತು ಒಂದು ಅದ್ಬುತ ಅನುಭವ ಕಟ್ಟಿ ಕೊಡಬಹುದಾದ ಹೈದಯಂಗಮ ಸೆಲ್ಯೂಲಾಯಿಡ್‌ಕಾವ್ಯ” ಎನ್ನುತ್ತಾರೆ ಅವರು . ಇನ್ನು ಈ ಚಿತ್ರಕ್ಕೆ ಸುಗುಣ ರಘುಭಟ್ ಚಿತ್ರದ ನಿರ್ಮಾಪಕಿ. ನಿರ್ದೇಶಕರು, ಸೇರಿದಂತೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Related Posts

error: Content is protected !!