ಸೂರಜ್ ಗೌಡ ನಟರಾಗಿ ಗುರುತಿಸಿಕೊಂಡವರು. ಅವರೀಗ ನಿರ್ದೇಶಕರಾಗಿದ್ದು ಗೊತ್ತಿದೆ. ಹೌದು, “ನಿನ್ನ ಸನಿಹಕೆ” ಸಿನಿಮಾ ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ನಿರ್ದೇಶಕರ ಪಟ್ಟ ಅಲಂಕರಿಸಿರುವ ಸೂರಜ್ ಗೌಡ, ತಮ್ಮ ಸಿನಿಮಾವನ್ನು ಈಗ ಪ್ರೇಕ್ಷಕರ ಮುಂದೆ ತರಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ, “ನಿನ್ನ ಸನಿಹಕೆ” ಹಾಡುಗಳ ಮೂಲಕವೇ ಜೋರು ಸುದ್ದಿ ಮಾಡುತ್ತಿದೆ.
ಸಂಗೀತ ನಿರ್ದೇಶಕ ರಘುದೀಕ್ಷಿತ್ ಅವರ ಸಂಯೋಜನೆ ಹಾಡುಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಗುತ್ತಿದೆ. ಎರಡು ರೊಮ್ಯಾಂಟಿಕ್ ಹಾಡುಗಳಿಂದ ಕನ್ನಡ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ರಘುದೀಕ್ಷಿತ್ ಅವರು “ದಿ ಸೌಂಡ್ ಆಫ್ ಕೆಯಾಸ್” ಎಂಬ ಹೊಸ ಸೌಂಡಿಂಗ್ ಸಿಸ್ಟಂ ಮೂಲಕ ಇನ್ನಷ್ಟು ರಂಜಿಸಿದ್ದಾರೆ. ರಘು ದೀಕ್ಷಿತ್ ಸಂಯೋಜಿಸಿ ಹಾಡಿರುವ ರ್ಯಾಪ್ ಸಾಂಗ್ ಅದು. ಹೀರೋ ಲವ್ ಫೇಲ್ ಆಗಿ ಹಾಡುವ ಈ ಹಾಡಿಗೆ, ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ.
“ಯಾರು ಯಾರು ನಾನ್ ಯಾರು… ಈ ನಶೆಯೂ ಹೇಳಿದೆ ಪತ್ತೆಯಾ…” ಅನ್ನೋ ಕ್ಯಾಚಿ ಲಿರಿಕ್ಸ್ ಇರುವ ಈ ಹಾಡು ಕೇಳೋದಕ್ಕೆ ಸಖತ್ ಮಜ ಎನಿಸಿದೆ. ವಿರಹ ಮನಸುಗಳಿಗೆ ನೇರವಾಗಿ ನಾಟುವಂತಿರುವ ಹಾಡಲ್ಲಿ ವಿಶೇಷ ಎನಿಸುವ ಸಂಗೀತದ ಸ್ಪರ್ಶವಿದೆ. ಸದ್ಯಕ್ಕೆ “ನಿನ್ನ ಸನಿಹಕೆ” ಸಿನಿಮಾದ ಹಾಡು ಚಿತ್ರದ ಮೇಲಿನ ಭರವಸೆ ಹೆಚ್ಚಿಸಿದೆ.
ಈಗಾಗಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರುವ ನಿನ್ನ ಸನಿಹಕೆ ಟೀಮ್ ವರ್ಕ್ ನೋಡಿದರೆ, ಎಲ್ಲಾ ಆಂಗಲ್‌ನಿಂದಲೂ ಇದು ಮಾಮೂಲಿ ಸಿನಿಮಾ ಅಲ್ಲ. ಇದರಲ್ಲೇನಾದರೂ ಇದೆ ಅನ್ನೋದನ್ನ ಪ್ರತಿ ಹಂತದಲ್ಲೂ ತೋರಿಸುತ್ತಲೇ ಇರುವುದರಿಂದ ಸಿನಿಮಾ ಬಿಡುಗಡೆಯನ್ನು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸುದ್ದಿ ಮಾಡುತ್ತಿರುವ “ನಿನ್ನ ಸನಿಹಕೆ” ತಂಡ ಇಷ್ಟರಲ್ಲೇ ಟ್ರೇಲರ್ ರಿಲೀಸ್ ಮಾಡುವ ತಯಾರಿಯಲ್ಲಿದೆ. ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರುತ್ತಿರುವ ಸಮಯದಲ್ಲಿ “ಕನ್ನಡದಲ್ಲಿ ಮಾತ್ರ” ಬಿಡುಗಡೆ ಅನ್ನುವ ಟ್ಯಾಗ್‌ಲೈನ್ ಜೊತೆ “ನಿನ್ನ ಸನಿಹಕೆ” ಸಿನಿಮಾ ತಂಡ ಏಪ್ರಿಲ್ 16ಕ್ಕೆ ಪ್ರೇಕ್ಷಕರ ಎದುರಿಗೆ ಬರುತ್ತಿದೆ. ಇನ್ನು, ವಿಶ್ವದಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.