ನಟ ಶಶಿಕುಮಾರ್ ಪುತ್ರ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಅವರ ಪುತ್ರ ಅಕ್ಷಿತ್ ಅವರು ಲವ್‌ನಲ್ಲಿ ಬಿದ್ದಿರೋದು ಕೂಡ ಎಲ್ಲರಿಗೂ ಗೊತ್ತಿದೆ! ಅಂದರೆ, ಇದು ಸಿನಿಮಾ ವಿಷಯ. ಅವರು ಲವ್ವಲ್ಲಿ ಬಿದ್ದಿರೋದು ಸಿನಿಮಾದಲ್ಲಿ. ಹೌದು, ನಿರ್ದೇಶಕ ಸ್ಮೈಲ್ ಶ್ರೀನು ಅವರೀಗ “ಓ ಮೈ ಲವ್” ಸಿನಿಮಾದಲ್ಲಿ ಅಕ್ಷಿತ್‌ಗೆ ಲವ್ ಮಾಡುವ ಹುಡುಗನ ಪಾತ್ರ ನೀಡಿದ್ದಾರೆ. ಈ ಸಿನಿಮಾದ ವಿಶೇಷವೆಂದರೆ, ಈಗ ಹೊಸ ವಿಲನ್ ಎಂಟ್ರಿಯಾಗಿದ್ದಾರೆ. ಅದು “ಮಗಧೀರ” ಖ್ಯಾತಿಯ ಖಳನಟ ದೇವ್‌ಗಿಲ್.
ಅಂದಹಾಗೆ, ಇದು ಜಿಸಿಬಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಜಿ.ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ಅದ್ದೂರಿ ವೆಚ್ಚದಲ್ಲಿ ಹಾಕಲಾಗಿದ್ದ ಸೆಟ್‍ನಲ್ಲಿ ಸಾಹಸ ಸನ್ನಿವೇಶಗಳನ್ನು ಸೆರೆಹಿಡಿಯುವುದರೊಂದಿಗೆ ಎರಡನೇ ಹಂತದ ಚಿತ್ರೀಕರಣವನ್ನು ಪೂರೈಸಿದೆ.
ಈ ಹಂತದ ಚಿತ್ರೀಕರಣದಲ್ಲಿ “ಮಗಧೀರ” ಖ್ಯಾತಿಯ ವಿಲನ್ ದೇವ್‍ಗಿಲ್ ಹಾಗೂ ನಾಯಕ ಅಕ್ಷಿತ್ ಶಶಿಕುಮಾರ್ ನಡುವಿನ ಭರ್ಜರಿ ಸಾಹಸ ದೃಷ್ಯಗಳನ್ನು ರಿಯಲ್ ಸತೀಶ್ ಅವರ ಸಾರಥ್ಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ನಾಯಕಿ ಕೀರ್ತಿ ಕಲ್ಕೆರೆ, ಎಸ್.ನಾರಾಯಣ್, ಸಂಗೀತ, ಸುಂದರಶ್ರೀ, ಭಾಗ್ಯಶ್ರೀ, ಪೃಥ್ವಿರಾಜ್ ಕೂಡ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಶೇ.40ರಷ್ಟು ಭಾಗ ಶೂಟಿಂಗ್ ಮುಗಿದಿದೆ.
ಇದೊಂದು ವಿಭಿನ್ನವಾದ ಲವ್, ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಈ ಹಿಂದೆ “ಬಳ್ಳಾರಿ ದರ್ಬಾರ್”, “ತೂಫಾನ್” ಹಾಗೂ “18-25” ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಅವರು ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಆರಂಭದಿಂದಲೂ ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತು ಕೊಡುವುದರೊಂದಿಗೆ ಹೊಸ ಪ್ರತಿಭಗಳ ಜೊತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕ ಸ್ಮೈಲ್ ಶ್ರೀನು, ಈ ಬಾರಿ ಹೊಸಬರ ಜೊತೆ ಚಿತ್ರರಂಗದ ಅನುಭವಿ ಕಲಾವಿದರನ್ನೂ ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ.
ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತವಿದೆ. ರಿಯಲ್ ಸತೀಶ್ ಅವರ ಸಾಹಸ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ವಿ.ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿ.ಮಲ್ಲಿಕ್ ಸಂಕಲನ, ಜನಾರ್ದನ್ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಇತರರು ಇದ್ದಾರೆ.