65ರ ಇಳಿವಯಸ್ಸಿನ ಅನುಭವ, 45ರ ಹರೆಯದ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಸಾಗುವ ಚಿತ್ರವೇ ತ್ರಿಕೋನ. ಈ ಹಿಂದೆ 2014ರಲ್ಲಿ “143” ಸಿನಿಮಾ ಮಾಡಿದ್ದ ಚಂದ್ರಕಾಂತ್ ಇದೀಗ “ತ್ರಿಕೋನ” ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ಬಂದಿದ್ದಾರೆ. ಈ ಚಿತ್ರಕ್ಕೆ ರಾಜಶೇಖರ್ ಬಂಡವಾಳ ಹಾಕಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
ಮನುಷ್ಯ ಜೀವನದಲ್ಲಿ ತಾಳ್ಮೆ ಇದ್ರೆ ಏನೆಲ್ಲ ಸಂಪಾದನೆ ಮಾಡ್ತಾನೆ.. ತಾಳ್ಮೆ ಇಲ್ಲದಿದ್ದರೆ ಏನೆಲ್ಲ ಕಳೆದುಕೊಳ್ಳುತ್ತಾನೆ ಎಂಬುದೇ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಹೊರಟಿದ್ದಾರೆ. ಈಗಿನ ಪೀಳಿಗೆ ತಾಳ್ಮೆ ಇಲ್ಲದೆ ಸಾಕಷ್ಟು ಅನಾಹುತ ಮಾಡಿಕೊಳ್ಳುತ್ತಾರೆ. ಅದನ್ನು ಮನೆಯ ಇತರ ಸದಸ್ಯರಿಗೆ ನೀಡುತ್ತಾರೆ. ಇದಕ್ಕೆ ಸರಿಹೊಂದುವ ಮೂರು ತಲೆಮಾರುಗಳ ಮೂಲಕ ಅದನ್ನು ತೋರಿಸಲಿದ್ದೇವೆ ಎಂಬುದು ನಿರ್ದೇಶಕ ಚಂದ್ರಕಾಂತ್ ಮಾತು.
ಬೆಂಗಳೂರು, ತುಮಕೂರು, ಹಾಸನ, ಸಕಲೇಶಪುರ, ಗುಂಡ್ಯ, ಸುಬ್ರಮಣ್ಯ, ಮಂಗಳೂರು, ಚಾರ್ಮಾಡಿ ಘಾಟ್, ಶಿರಾಡಿಘಾಟ್ನಲ್ಲಿ ಸಿನಿಮಾ ಚಿತ್ರೀಕರಣವಾಗಿದೆ.
ವಿಶೇಷವೆಂದರೆ ಹೆಬ್ರಿ ಮತ್ತು ಆಗುಂಬೆ ಮಧ್ಯೆ ಕೂಡ್ಲು ತೀರ್ಥ ಫಾಲ್ಸ್ನಲ್ಲಿ ಶೂಟಿಂಗ್ ಮಾಡಿಕೊಂಡ ಮೊದಲ ಸಿನಿಮಾ ಇದು. ಇದೂ ಸಹ ಈ ಚಿತ್ರದ ವಿಶೇಷತೆಗಳಲ್ಲೊಂದು ಎನ್ನುತ್ತಾರೆ ಚಂದ್ರಕಾಂತ್.
ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ, ಹೀಗೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ರಾಜವೀರ್ ಮತ್ತು ಮಾರುತೇಶ್ ಅನ್ನೋ ಹೊಸ ಪ್ರತಿಭೆಗಳು ಈ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ.
ಶ್ರೀನಿವಾಸ್ ವಿನ್ನಕೋಟ್ ಛಾಯಾಗ್ರಹಣವಿದೆ. ಸುರೇಂದ್ರನಾಥ್ ಪಿ ಆರ್ ಸಂಗೀತ, ಹಿನ್ನಲೆ ಸಂಗೀತವಿದೆ.
ಜೀವನ್ ಪ್ರಕಾಶ್ ಎನ್ ಸಂಕಲನ. ಹೈಟ್ ಮಂಜು ಕೋರಿಯೋಗ್ರಾಫಿ, ಚೇತನ್ ಡಿಸೋಜ್ ಮತ್ತು ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಮಾಡಿದ್ದಾರೆ.
ಕನ್ನಡದಲ್ಲಿ ತ್ರಿಕೋನ, ತೆಲುಗಿನಲ್ಲಿ ತ್ರಿಕೋನಂ ಮತ್ತು ತಮಿಳಿನಲ್ಲಿ ಗೋಸುಲೋ ಶೀರ್ಷಿಕೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಸೆನ್ಸಾರ್ ಮಂಡಳಿಯಿಂದಲೂ ಯಾವುದೇ ಕಟ್ ಇಲ್ಲದೆ ಯೂ/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪೀಪಲ್ಸ್ ಸಂಸ್ಥೆ ಪಡೆದುಕೊಂಡಿದೆ.