Categories
ಸಿನಿ ಸುದ್ದಿ

ಭಾರತದ ಮೊದಲ ಮಡ್-ರೇಸ್ ಚಿತ್ರ – ‘ಮಡ್ಡಿ’; ಕನ್ನಡಿಗ ರವಿ ಬಸ್ರೂರು ಸಂಗೀತ ಸಂಯೋಜನೆ

ಭಾರತದ ಮೊದಲ ಮಡ್‌-ರೇಸ್ ಸಿನಿಮಾ ‘ಮಡ್ಡಿ’ ತೆರೆಗೆ ಸಿದ್ಧವಾಗಿದೆ. ಡಾ.ಪ್ರಗಭಾಲ್‌ ನಿರ್ದೇಶನದಲ್ಲಿ ತಯಾರಾಗಿರುವ ಇದು ಆಕ್ಷನ್‌-ಸ್ಪೋರ್ಟ್ಸ್‌-ಡ್ರಾಮಾ. ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿರುವ ಈ ಚಿತ್ರದಲ್ಲಿ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ ಹೈಲೈಟ್‌.

‘ಕೆಜಿಎಫ್‌’ ಖ್ಯಾತಿಯ ರವಿ ಬಸ್ರೂರು ಚಿತ್ರದ ಹಿನ್ನೆಲೆ ಸಂಗೀತ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎನ್ನವುದು ವಿಶೇ‍ಷ. ಖ್ಯಾತ ನಟ ವಿಜಯ್ ಸೇತುಪತಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

“ಇದು ಭಾರತದ, ಬಹುಶಃ ವಿಶ್ವದಲ್ಲೇ ಮೊದಲ ಮಡ್‌-ರೇಸ್ ಸಿನಿಮಾ. ಚಿತ್ರೀಕರಣಕ್ಕೆ ಮುನ್ನ ನಟರಿಗೆ ಸೂಕ್ತ ತರಬೇತಿ ನೀಡಿದ್ದೇವೆ. ಡ್ಯೂಪ್ ಬಳಕೆ ಮಾಡಿಲ್ಲ. ಸಾಹಸಪ್ರವೃತ್ತಿಯ ಯುವಕರನ್ನು ಆಯ್ಕೆ ಮಾಡಿದ್ದು, ಅವರು ಚಿತ್ರಕ್ಕಾಗಿ ಸಾಕಷ್ಟು ಸಮಯ ವ್ಯಯಿಸಿದ್ದಾರೆ.

ಚಿತ್ರದ ಮೂಲಕ ಪ್ರೇಕ್ಷಕರಿಗೆ ರೋಚಕ ಮಡ್‌-ರೇಸ್‌ ಪರಿಚಯಿಸಲಿದ್ದೇವೆ. ಸಾಕಷ್ಟು ಡ್ರಾಮಾ, ಥ್ರಿಲ್‌, ಪಂಚ್‌ ಜೊತೆ ಯಾವ ಹಂತದಲ್ಲಿಯೂ ಬೇಸರವಾಗದಂತೆ ನಿರೂಪಿಸಲು ಶ್ರಮಿಸಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಪ್ರಗಭಾಲ್‌. ಯುವನ್‌, ರಿಧಾನ್ ಕೃಷ್ಣ, ಅನುಷಾ ಸುರೇಶ್‌, ಅಮಿತ್ ಶಿವದಾಸ್‌ ನಾಯರ್‌, ಹರೀಶ್ ಪೆರಾಡಿ, ವಿಜಯನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ವಿಕ್ರಮ್ ‘ಮಹಾವೀರ್ ಕರ್ಣ್’ ಟೀಸರ್ ಔಟ್; 300 ಕೋಟಿ ಬಜೆಟ್‌ನ ಅದ್ಧೂರಿ ಸಿನಿಮಾ!

ಐತಿಹಾಸಿಕ ಕಥಾನಕ ‘ಮಹಾಭಾರತ’ ಆಧರಿಸಿ ಹತ್ತಾರು ಸಿನಿಮಾಗಳು ತಯಾರಾಗಿವೆ. ಈ ಕೃತಿಯಲ್ಲಿನ ಮಹತ್ವದ ವ್ಯಕ್ತಿ – ವ್ಯಕ್ತಿತ್ವ ಕರ್ಣ. ಈ ಪಾತ್ರದ ದೃಷ್ಟಿಕೋನದಿಂದ ತೆರೆ ಮೇಲೆ ಕತೆ ಹೇಳಿರುವುದು ಕಡಿಮೆ. ಆ ಕೊರತೆಯನ್ನು ನೀಗಿಸಲಿದೆ ‘ಸೂರ್ಯಪುತ್ರ ಮಹಾವೀರ್ ಕರ್ಣ್‌’ ಚಿತ್ರ. ಆರ್‌.ಎಸ್‌.ವಿಮಲ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಬಹುದೊಡ್ಡ ಯೋಜನೆಯಿದು. ವಿಶು ಭಗ್ನಾನಿ, ಜಾಕಿ ಭಗ್ನಾನಿ ಮತ್ತು ದೀಪ್ಶಿಕಾ ದೇಶ್‌ಮುಖ್‌ ನಿರ್ಮಿಸುತ್ತಿರುವ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಜನಪ್ರಿಯ ತಮಿಳು ನಟ ವಿಕ್ರಂ ನಟಿಸುತ್ತಿದ್ದಾರೆ.

ಹಾಗೆ ನೋಡಿದರೆ ಈ ಸಿನಿಮಾಗೆ 2018ರಲ್ಲೇ ಚಾಲನೆ ಸಿಗಬೇಕಿತ್ತು. ಕಾರಣಾಂತರಗಳಿಂದ ಯೋಜನೆ ಮುಂದಕ್ಕೆ ಹೋಯ್ತು. ಕೋವಿಡ್‌ನಿಂದಾಗಿ ಕಳೆದ ವರ್ಷವಿಡೀ ಚಿತ್ರ ಸುದ್ದಿಯಲ್ಲಿರಲಿಲ್ಲ. ಇದೀಗ ಆಕರ್ಷಕ ಟೀಸರ್‌ನೊಂದಿಗೆ ಬಂದಿದೆ ಚಿತ್ರತಂಡ. ನಿರ್ಮಾಪಕರು ಸುಮಾರು 300 ಕೋಟಿ ದುಬಾರಿ ಬಜೆಟ್‌ನಲ್ಲಿ ಸಿನಿಮಾ ತಯಾರಿಸಲಿದ್ದಾರೆ. ಹಿಂದಿ, ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದ್ದು, ಮ್ಯೂಸಿಕಲ್ ಸೆನ್ಷೇಷನ್‌ ಎ.ಆರ್.ರೆಹಮಾನ್‌ ಸಂಗೀತ ಸಂಯೋಜಿಸುತ್ತಿರುವುದು ವಿಶೇ‍ಷ.

ಮಲಯಾಳಂ ನಟ ಸುರೇಶ್ ಗೋಪಿ ಅವರು ಧುರ್ಯೋಧನನ ಪಾತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಇನ್ನುಳಿದ ತಾರಾಬಳಗದ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ‘ಗೇಮ್‌ ಆಫ್‌ ಥ್ರೋನ್ಸ್’ ಹಾಲಿವುಡ್‌ ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು ‘ಮಹಾವೀರ್‌ ಕರ್ಣ’ನಿಗೆ ಕೆಲಸ ಮಾಡಲಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ಥಿಯೇಟರ್‌ಗೆ ಬರಲಿದೆ. ಖ್ಯಾತ ಕವಿ ಡಾ.ಕುಮಾರ್ ವಿಶ್ವಾಸ್ ಅವರ ಚಿತ್ರಕಥೆ ವಿಭಾಗದಲ್ಲಿ ತೊಡಗಿಸಿಕೊಂಡಿದ್ದು, ಸಂಭಾಷಣೆ ರಚನೆಯ ಜವಾಬ್ದಾರಿ ಹೊತ್ತಿದ್ದಾರೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಹೇಳುವ ಧೈರ್ಯ ಯಾವ ಸ್ಟಾರ್ ಗೂ ಇಲ್ವಾ?

ಚಿತ್ರರಂಗ ಹಾಳಾಗುತ್ತಿದೆ ಅಂತ ಹಿರಿಯ ನಟ ಜಗ್ಗೇಶ್ ಇನ್ನಾವುದೋ ಘಟನೆಯಲ್ಲಿ ಮಂಗಳವಾರ ಆಕ್ರೋಶ ಹೊರ ಹಾಕಿದ ಬೆನ್ನಲೇ ಒಂದು ಸಮುದಾಯದ ಆಕ್ರೋಶಕ್ಕೆ ‘ ಪೊಗರು’ ಸಿನಿಮಾ ತಂಡ ಮಂಡೆ ಉರಿ ಬಿದ್ದಿದೆ. ವಿಚಿತ್ರ ಅಂದ್ರೆ ತೆರೆ ಮೇಲೆ ‘ ಪೊಗರು ‘ ತೋರಿಸಿದವರೇ ನಿಜ ಜೀವನದಲ್ಲಿ ಒಂದು ಸಮುದಾಯದ ಕೂಗಿಗೆ ವಿಲ ವಿಲ ಒದ್ದಾಡಿದ್ದಾರೆ. ಇವರದ್ದೆಲ್ಲ ಅರಚಾಟ ತೆರೆ ಮೇಲೆ ಮಾತ್ರವೇ ಅಂತ ಜನ ಮಾತನಾಡುತ್ತಿದ್ದಾರೆ. ಒಂಥರ ವಿಚಿತ್ರವಾಗಿದೆ ಈ ವಿದ್ಯಮಾನ.

ಆ ಕತೆ ಇರಲಿ, ಈಗ ಪೊಗರು ವಿವಾದದಲ್ಲಿ ರಾಜಿ ಪಂಚಾಯಿತಿಗಳು ನಡೆದರೂ, ವಿರೋಧದ ಕೂಗು ಜಾಸ್ತಿ ಆಗಿದೆ. ಪರಿಣಾಮ ವಿವಾದಕ್ಕೆ ಕಾರಣವಾದ ದೃಶ್ಯಕ್ಕೆ ಕತ್ತರಿ ಬೀಳುವುದು ಗ್ಯಾರಂಟಿ ಆಗಿದೆ. ಹಾಗಂತ ಚಿತ್ರ ತಂಡ ಒಪ್ಪಿಕೊಂಡಿದೆ ಎನ್ನುವ ಮಾಹಿತಿ ಇದೆ.ಅಲ್ಲಿಗೆ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯ ನೆಗೆದು ಬಿದ್ದಿದೆ. ಸಂಭಾವನೆ ವಿಚಾರದಲ್ಲಿ ನಿರ್ದೇಶಕರನ್ನೇ ಮಣ್ಣು‌ ಮುಕ್ಕಿಸುವ ಸ್ಟಾರ್ ಗಳು ಕೂಡ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಮುಂದೆ ಇನ್ನಾವ ಸಿನಿಮಾವೂ ಇಂತಹದೇ ವಿವಾದಕ್ಕೆ ಸಿಲುಕಿ ಕತ್ತರಿ ಪ್ರಯೋಗಕ್ಕೆ ಸಿಲುಕುತ್ತೋ ಗೊತ್ತಿಲ್ಲ.

ಯಾಕಂದ್ರೆ ಸಿನಿಮಾ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಆಗುತ್ತಿರುವುದು ಇದೇ ಮೊದಲಲ್ಲ. ಸಾಹಿತಿಗಳು, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನೇ ದಮನ ಮಾಡಿದ ಹಾಗೆ ಸಿನಿಮಾ ನಿರ್ದೇಶಕನ ಅಭಿವ್ಯಕ್ತಿ ಸ್ವತಂತ್ರ ಆಗಾಗ ಹರಣ ಆಗುತ್ತಲೇ ಬಂದಿದೆ. ಇಷ್ಟಾಗಿಯೂ ಚಿತ್ರರಂಗವಾಗಲಿ, ಸ್ಟಾರ್ ಗಳಾಗಲಿ ಒಂದಾಗಿ ಧ್ವನಿ ಎತ್ತಿದ್ದು ತೀರಾ ಅಪರೂಪ. ಅದರ ಪರಿಣಾಮವೀಗ ‘ಪೊಗರು’ ಮೇಲೂ ಬಿದ್ದಿದೆ.

ಹೋಮ ನೆಡೆಸಲು ಕುಳಿತ ವ್ಯಕ್ತಿಯ ಹೆಗಲ ಮೇಲೆ ಚಿತ್ರದ ನಾಯಕ ಕಾಲಿಟ್ಟಿದ್ದ ಎನ್ನುವುದೇ ‘ ಪೊಗರು’ ಸುತ್ತ ವಿವಾದ ಹುಟ್ಟಲು ಕಾರಣ. ಅಲ್ಲಿ ಹೋಮಕ್ಕೆ ಕುಳಿತವನು ಇಂತಹದೇ ಸಮುದಾಯಕ್ಕೆ ಸೇರಿದವನು ಅಂತ ಎಲ್ಲೂ ಹೇಳಿಲ್ಲ. ಹಾಗೆಯೇ ಒಂದು ಜಾತಿ ಸೂಚಕವಾಗಿಯೂ ಅದನ್ನು ತೋರಿಸಿಲ್ಲ. ಅಷ್ಟಾಗಿಯೂ ಆತ ತಮ್ಮವನೇ, ಹಾಗಾಗಿ ತಮ್ಮೀಡಿ ಸಮುದಾಯಕ್ಕೆ ಅವಮಾನ ಆಗಿದೆ ಅಂತ ಒಂದು ಸಮುದಾಯ ಧ್ವನಿ ಎತ್ತಿದೆ.ಮಂಗಳವಾರ ದಿನವೀಡಿ ರಾಜಿ ಸರ್ಕಸ್ ನಡೆದರೂ, ಅವರದೇ ಕೂಗು ಹೆಚ್ಚಾಗಿ, ಅನಿವಾರ್ಯ ವಾಗಿ ಚಿತ್ರದೊಳಗಿನ ದೃಶ್ಯಕ್ಕೆ ಕತ್ತರಿ ಬೀಳುತ್ತಿದೆ.

ಪ್ರಶ್ನೆ ಇರುವುದು ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಚಿತ್ರೋದ್ಯಮ ಯಾಕೆ ಅವರಿಗೆ ಹೇಳಿಲ್ಲ ಅಂತ. ಸದ್ಯಕ್ಕೀಗ ‘ಪೊಗರು’ . ಮುಂದ್ಯಾವುದು ಚಿತ್ರವೋ ಗೊತ್ತಿಲ್ಲ. ಅದರಲಿ, ಸಮಾಜ ಒಂದು ಸಿನಿಮಾದ ದೃಶ್ಯವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾ ಅಂತ. ಹಾಗೊಂದು ವೇಳೆ ಅದು ಹೌದು ಎನ್ನುವುದಾ ಗಿದ್ದರೆ ಒಂದು ಸಮುದಾಯ ತಲೆಮಾರು ಗಳಿಂದ ಶೋಷಿಸುತ್ತಲೇ ಬಂದ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಎಷ್ಟೇಲ್ಲ ಚಿತ್ರ ಬಂದರೂ, ಅದನ್ಯಾಕೆ ಅವರು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ? ಅಸ್ಫಶ್ಯತೆ ಆಚರಣೆ ತಪ್ಪು ಅಂತ ತೋರಿಸಿದರು, ಅದನ್ನಾಕೆ ನಿಲ್ಲಿಸಿಲ್ಲ? ತಾವು ಬಲಿಷ್ಟರು, ತಾವು ಮಾಡಿದ್ದೇ ಸರಿ ಎನ್ನುವ ಅಹಂ ನಿಂದಲೇ ತಾನೇ ಒಂದು ಸಮುದಾಯ ಪೊಗರು ಮೇಲೆ ಎಗರಿ ಬಿದ್ದಿದ್ದು? ಮುಂದೆ ಇದೇ ಸಮುದಾಯ ತಾವು ಹೇಳುವುದನ್ನೆ ಸಿನಿಮಾ ಮಾಡಿ ಅಂತ ಚಿತ್ರರಂಗಕ್ಕೆ ಸೂಚನೆ ಕೊಟ್ಟರು ಅಚ್ಚರಿ ಇಲ್ಲ. ಹಾಗೆಯೇ ಅದು ಜಾರಿಗೆ ಬಂದರೂ ಅಚ್ವರಿ ಪಡಬೇಕಿಲ್ಲ. ಕಾರಣ, ಅವರೇ ಅಲ್ಲವೇ ಚಿತ್ರೋದ್ಯಮವನ್ನು ನಿಯಂತ್ರಿಸುವವರು?

Categories
ಸಿನಿ ಸುದ್ದಿ

ಚಂದನವನದಲ್ಲಿ ಲೆಹಂಗಾ ತೊಟ್ಟು ಮಿಂಚಿದ ತಾರಾ ಅನುರಾಧ!

ಜನಪ್ರಿಯ ನಟಿ ತಾರಾ ಅನುರಾಧ ತಮ್ಮ ಇದುವರೆಗಿನ ತಮ್ಮ ಸಿನಿಜರ್ನಿಯಲ್ಲಿ ಪಡೆದ ಪ್ರಶಸ್ತಿಗಳೆಷ್ಟು ? ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಸೇರಿದಂತೆ ಅವಕ್ಕೇನು ಲೆಕ್ಕವೇ ಇಲ್ಲ. ಅಷ್ಟೊಂದು ಅನುಭವಿ ಮತ್ತು ಜನಪ್ರಿಯ ನಟಿ ತಾರಾ. ಇಷ್ಟಾಗಿಯೂ ಅವರಿಗೆ ಇದೊಂದು ತುಂಬಾ ತುಂಬಾ ಸ್ಪೆಷಲ್‌ ಅವಾರ್ಡ್.‌ ಅದುವೇ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್.‌ ಯಾಕಂದ್ರೆ, ಚಿತ್ರರಂಗ ಮತ್ತು ಸಿನಿಮಾ ಪತ್ರಿಕೋದ್ಯಮ ಅನ್ನೋದೇ ಒಂದು ಮನೆಯಿದ್ದಂತೆ. ಆ ಮನೆಯವರೇ ಕೊಟ್ಟ ಈ ಪ್ರಶಸ್ತಿ ಮಿಕ್ಕೆಲ್ಲ ಪ್ರಶಸ್ತಿಗಿಂತ ತುಂಬಾ ಸ್ಪೆಷಲ್‌ ಅನ್ನೋದು ತಾರಾ ಅಭಿಪ್ರಾಯ.

ʼಶಿವಾರ್ಜುನʼ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರವಾದರು. ಉಳಿದಂತೆ ಪ್ರಶಸ್ತಿ ಸಮಾರಂಭ, ಪ್ರಶಸ್ತಿ ಸ್ವೀಕಾರ ಅನ್ನೋದು ತಾರಾ ಅವರಿಗೇನು ಹೊಸದಲ್ಲ. ಅಂತಹ ಅದೆಷ್ಟು ಸಮಾರಂಭಕ್ಕೆ ಹೋಗಿ ಬಂದಿದ್ದಾರೋ ಅವರಿಗೇ ಗೊತ್ತು. ಅದಾಗ್ಯೂ, ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಸ್ವೀಕಾರಕ್ಕೆ ಅವರು ಬಂದಿದ್ದೇ ತುಂಬಾ ಸ್ಪೆಷಲ್.‌ ಸಭೆ-ಸಮಾರಂಭಗಳೇ ಇರಲಿ, ಸಿನಿಮಾ ಕಾರ್ಯಕ್ರಮಗಳೇ ಇರಲಿ, ಅಲ್ಲೆಲ್ಲ ನಟಿ ತಾರಾ ಅವರು ಪಕ್ಕಾ ಸಂಪ್ರಾದಾಯಸ್ಥ ನಾರಿಯಂತೆ ಮೈ ತುಂಬಾ ಸೀರೆ ಉಟ್ಟುಕೊಂಡೇ ಕಾಣಿಸಿಕೊಳ್ಳುವುದು ನಿಮಗೂ ಗೊತ್ತು. ಫಾರ್‌ ಎ ಚೇಂಜ್‌, ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಸ್ವೀಕಾರಕ್ಕೆ ತಾರಾ ಬಂದಿದ್ದೇ ಡಿಫೆರೆಂಟ್.


ಕನಕಾಂಬರ ಬಣ್ಣದ ಲೆಹಂಗಾ ಧರಿಸಿ ವೇದಿಕೆಯಲ್ಲಿ ಕಾಣಸಿಕೊಂಡರು ನಟಿ ತಾರಾ. ಅದೇನೋ ಗೊತ್ತಿಲ್ಲ, ಎಲ್ಲರೂ ಅವರ ಡ್ರಸ್‌ ಬಗ್ಗೆಯೇ ಗುಸು ಗುಸು ಶುರು ಮಾಡಿದರು. ಅದೇಗೋ ಅವರಿಗೆ ಗೊತ್ತಾಯಿತು. ಮೈಕ್‌ ಹಿಡಿದು ಮಾತಿಗೆ ನಿಂತರು ತಾರಾ. ” ಈ ತರಹದ ಬಟ್ಟೆ ಹಾಕಿಕೊಂಡ್‌ ಬಾಳಾ ದಿನ ಆಯ್ತು. ನಂಗೆ ಪರಿಚಯ ಇರೋ ಒಬ್ರು ಡ್ರೆಸ್‌ ಡಿಸೈನರ್‌ ಇದ್ದಾರೆ. ನಾನೊಂದ್‌ ಅವಾರ್ಡ್‌ ಪಂಕ್ಷನ್‌ ಹೋಗ್ತಿದ್ದೀನಿ ಅಂದಾಗ ಅವ್ರು ಹೇಳಿದ್ದು ಈ ಡ್ರೆಸ್‌ ಬಗ್ಗೆ. ಮೇಡಂ, ತುಂಬಾ ದಿನಗಳಿಂದ ಈ ಬಟ್ಟೆ ಹೊಲಿಸಿಕೊಂಡ್‌ ಹಾಗೆ ಇಟ್ಟಿದ್ದೀರಿ, ಇದ್ನೆ ಹಾಕ್ಕೊಂಡ್‌ ಹೋಗಿ. ಚೆನ್ನಾಗಿರುತ್ತೆ ಅಂತಂದ್ರು. ಅವ್ರಿಗೆ ಬೇಡ ಅನ್ನಲಾಗ್ದೆ ಇದ್ನೆ ಹಾಕ್ಕೊಂಡ್‌ ಬಂದೆ ʼʼ ಅಂತ ಲೆಹಂಗಾ ತೊಟ್ಟು ಬಂದಿದ್ದರ ಸ್ಪೆಷಲ್‌ ವಿವರಿಸಿದ್ರು ನಟಿ ತಾರಾ.


ಆನಂತರ ಚಂದನವನ ಪ್ರಶಸ್ತಿಗೆ ಪ್ರತಿಕ್ರಿಯಿಸಿದರು. ” ಪ್ರಶಸ್ತಿ ಉತ್ಸಾಹ, ಖುಷಿ ಎಲ್ಲವೂ ನಿಜ. ಪ್ರತಿಸಲ ಬಂದಾಗಲೂ ನನಗೆ ಭಯವಾಗುತ್ತದೆ, ವಿನಃ ಸಂತೋಷಕ್ಕಿಂತ ಹೆಚ್ಚು ಭಯವೇ ಆಗುತ್ತದೆ. ಶ್ಯಾಮ್‌ ಪ್ರಸಾದ್‌ ಹಾಗೂ ಶರಣು ಹುಲ್ಲೂರು ನನ್ನ ಕರೆದಾಗ ಯಾರಿಗಾದರೂ ಪ್ರಶಸ್ತಿ ಕೊಡಲು ಕರೆದಿರುತ್ತಾರೆ ಅಂತ ಅಂದುಕೊಂಡಿದ್ದೆ. ಅವಾರ್ಡ್‌ ಕೊಟ್ಟೇ ರೂಢಿಯಾದ ನನಗೆ ಅವಾರ್ಡ್‌ ಸ್ವೀಕರಿಸೋ ಸಮಯ ಬಂದಿರಲೇ ಇಲ್ಲ. ನನ್ನ ಜೊತೆ ಕಾಂಪೀಟ್‌ ಮಾಡಿದ ಎಲ್ಲರಿಗೂ ಈ ಅವಾರ್ಡ್‌ ಸಲ್ಲುತ್ತದೆ. ಶಿವಾರ್ಜುನ ಸಿನಿಮಾದಲ್ಲಿ ಅವಕಾಶ ನೀಡಿದ ನಿರ್ಮಾಪಕ, ನಿರ್ದೇಶಕರಿಗೆ ಕೂಡ ಅವಾರ್ಡ್‌ ಸಲ್ಲುತ್ತದೆ. ಮಾತೃಸಂಸ್ಥೆ ಅಂತ ಕರೆಯಲ್ಪಡುವ ಫಿಲಂ ಚೇಂಬರ್‌ ಅಧ್ಯಕ್ಷರಿಂದ ಪ್ರಶಸ್ತಿ ಪಡೆದುಕೊಳ್ಳುವುದು ಖುಷಿ ತಂದಿದೆ ಎಂದರು ನಟಿ ತಾರಾ.

Categories
ಸಿನಿ ಸುದ್ದಿ

ಆನ್‌ ಸ್ಕ್ರೀನ್‌ ಮೇಲೆ ರಾಗಿಣಿ ಬಯೋಪಿಕ್ !

ತುಪ್ಪದ ಬೆಡಗಿ ರಾಗಿಣಿ ಈಗ ಒಂದಷ್ಟು ನಿರಾಳತೆಯಲ್ಲಿದ್ದಾರೆ. ಜಾಮೀನು ಮೇಲೆ ಜೈಲಿನಿಂದ ಹೊರ ನಂತರ ಫ್ಯಾಮಿಲಿ ಜತೆಗೆ ಟೆಂಪಲ್‌ ರನ್‌ ನಡೆಸಿದ್ರು. ಅದರ ಜತೆಗೀಗ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಅಗಿದ್ದಾರೆ. ಸದ್ಯಕ್ಕೆ ಅವರ ಹೊಸ ಸಿನಿಮಾ ಯಾವುದು ಎನ್ನುವುದು ಇನ್ನು ಖಚಿತ ಆಗಿಲ್ಲ. ಈ ನಡುವೆಯೇ ಆನ್‌ ಸ್ಕ್ರೀನ್‌ ಮೇಲೆ ರಾಗಿಣಿ ಬಯೋಪಿಕ್‌ ಬರಲಿದೆ ಎನ್ನುವ ಸುದ್ದಿ ಇದೆ.

ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ಗೊತ್ತಿಲ್ಲ. ಹಾಗೊಂದು ಸುದ್ದಿ ಮಾತ್ರ ಅವರ ಆಪ್ತ ವಲಯದಿಂದ ಕೇಳಿ ಬಂದಿದ್ದು ಹೌದು. ಹಾಗಾದ್ರೆ , ಸಿನಿಮಾ ಮಾಡುವಷ್ಟು ರಾಗಿಣಿ ಸಾಧನೆ ಮಾಡಿದ್ದೇನು ? ಗೊತ್ತಿಲ್ಲ. ಆದರೆ ಇತ್ತೀಚೆಗೆ ಅವರು ಡ್ರಗ್ಸ್‌ ಪ್ರಕರಣದಲ್ಲಿ ಭಾರೀ ಸುದ್ದಿ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇದರಲ್ಲಿ ರಾಗಿಣಿ ಅವರ ಪಾತ್ರ ಏನು? ಅವರ ಸುತ್ತ ಏನೆಲ್ಲ ಆಯಿತು? ಇತ್ಯಾದಿ ಕುರಿತೇ ಸಿನಿಮಾ ಮಾಡಲು ಹೊರಟಿದೆಯಂತೆ ಒಂದು ಚಿತ್ರ ತಂಡ.

Categories
ಸಿನಿ ಸುದ್ದಿ

ಬರ್ತ್‌ ಡೇ ಸಂಭ್ರಮದಲ್ಲಿ ನಟರಾಜ್‌, ನಿರ್ದೇಶನದ ಹೊಸ ಹುರುಪಿನಲ್ಲಿ ಸತ್ಯ ಪ್ರಕಾಶ್‌

ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಟ ನಟರಾಜ್‌ ಇಂದು (ಫೆ.21) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ʼಕಳ್ಳಬೆಟ್ಟದ ದರೋಡೆಕೋರರುʼ ಚಿತ್ರ ಬಂದು ನಂತರದ ಒಂದಷ್ಟು ಗ್ಯಾಪ್‌ ಬಳಿಕ ಈಗವರು ಸುದೀರ್‌ ಶಾನ್‌ ಬೋಗ್‌ ನಿರ್ದೇಶನದʼ ಮಾರೀಚʼ ಚಿತ್ರದಲ್ಲಿ ಸಿಸಿಬಿ ಪೊಲೀಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರೆಡು ಚಿತ್ರಗಳ ಮಾತುಕತೆಯಲ್ಲಿ ಬ್ಯುಸಿಯಾಗಿರುವ ನಟರಾಜ್‌, ಈ ನಡುವೆಯೇ ಮಂಗಳವಾರ ತುಂಬಾ ಸರಳವಾಗಿಯೇ ಹುಟ್ಟು ಆಚರಿಸಿಕೊಂಡರು.

ಮತ್ತೊಂದೆಡೆ ನಟನೆಯ ಆಚೆ ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್‌ ಜತೆಗೂಡಿ “ಸತ್ಯ ಪಿಕ್ಚರ್ಸ್‌ʼ ಸಂಸ್ಥೆ ಹುಟ್ಟು ಹಾಕಿರುವ ನಟರಾಜ್‌, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಲು ರೆಡಿಯಾಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ʼಸತ್ಯ ಪಿಕ್ಚರ್ಸ್‌ʼ ಕಚೇರಿಯಲ್ಲಿ ಮೊನ್ನೆಯಷ್ಟೇ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಚಿತ್ರರಂಗ ಸಾಕಷ್ಟು ಗಣ್ಯರು ಆದಿನ ಅಲ್ಲಿಗೆ ಬಂದು ಸತ್ಯ ಪ್ರಕಾಶ್‌ ಅಂಡ್‌ ಟೀಮ್‌ ಗೆ ಶುಭಾಶಯ ಕೋರಿದರು. ಕಚೇರಿ ನವೀಕರಣದ ಹಿನ್ನೆಲೆಯಲ್ಲಿ ಸತ್ಯ ಪ್ರಕಾಶ್‌ ತಮ್ಮ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನಕ್ಕಿಳಿಯುವುದರ ಭಾಗವಾಗಿಯೇ ಈ ಪೂಜೆ ನೆರವೇರಿದ್ದು ಸುಳ್ಳಲ್ಲ.

ಕಚೇರಿ ಪೂಜೆ ವೇಳೆ ಔಪಾಚಾರಿಕವಾಗಿ ಮಾತಿಗಿಳಿದ ನಿರ್ದೇಶಕ ಸತ್ಯ ಪ್ರಕಾಶ್‌, ಎಲ್ಲವೂ ಅಂದುಕೊಂಡಂತಾಗಿದ್ದರೆ ಈಗ ಹೊಸ ಪ್ರಾಜೆಕ್ಟ್‌ ಶುರುವಾಗಬೇಕಿತ್ತು. ಕೊರೋನಾ ಹಿನ್ನೆಲೆಯಲ್ಲಿ ಎಲ್ಲವೂ ಏರುಪೇರಾಯಿತು. ಈಗ ಒಂದಷ್ಟು ಸಿದ್ಧತೆ ನಡೆದಿದೆ. ಅವಕ್ಕೀಗ ಚಾಲನೆ ನೀಡಬೇಕಿದೆ. ಈ ನಿಟ್ಟಿನಲ್ಲಿಯೇ ಕಚೇರಿ ನವೀಕರಣ ಕೆಲಸ ನಡೆದಿದೆ. ಅದರ ಭಾಗವಾಗಿಯೇ ಪೂಜೆ ನಡೆದಿದೆ. ಇನ್ನೇನು ಹದಿನೈದಿಪ್ಪತ್ತು ದಿನಗಳಲ್ಲಿ ಹೊಸ ಪ್ರಾಜೆಕ್ಟ್‌ ಅನೌನ್ಸ್‌ ಆಗಲಿದೆ. ಸದ್ಯಕ್ಕೆ ನಾವೆಲ್ಲ ಅದೇ ಕೆಲಸದಲ್ಲೇ ಬ್ಯುಸಿ ಆಗಿದ್ದೇವೆ ಎಂದರು.

ರಾಮಾ ರಾಮಾ ರೇ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹಾಸ್ಯ ನಟ ಧರ್ಮಣ್ಣ ಕೂಡ ಸತ್ಯ ಟೀಮ್‌ ನಲ್ಲಿದ್ದಾರೆ. ಇದೀಗ ಯುವ ನಿರ್ದೇಶಕ ದೀಪಕ್‌ ಮಧುವನಹಳ್ಳಿ ಕೂಡ ಸಾಥ್‌ ನೀಡಿದ್ದಾರೆ. ಒಟ್ಟಾರೆ ಸಿನಿಮಾಸಕ್ತ ಯುವ ಉತ್ಸಾಹಿಗಳ ಒಂದು ತಂಡವೇ ಈಗ ನಿರ್ಮಾಣ ಮತ್ತು ನಿರ್ದೇಶನದತ್ತ ಸಕಲ ಸಿದ್ಧತೆಯೊಂದಿಗೆ ರೆಡಿಯಾಗುತ್ತಿರುವುದು ಒಳ್ಳೆಯ ವಿಚಾರವೆ ಹೌದು. ಆಲ್‌ ದಿ ಬೆಸ್ಟ್‌ ಸತ್ಯ ಅಂಡ್‌ ಟೀಮ್.

Categories
ಸಿನಿ ಸುದ್ದಿ

ಆನ್‌ಸ್ಕ್ರೀನ್‌ -ಆಫ್‌ಸ್ಕ್ರೀನ್‌ ಬೆಸ್ಟ್‌ ಫೇರ್‌, “ಲವ್‌ ಮಾಕ್ಟೆಲ್‌ʼ ಜೋಡಿಗೆ ಸಿಕ್ಕಿತು ಬೆಸ್ಟ್‌ ಅವಾರ್ಡ್‌ !

ಸ್ಯಾಂಡಲವುಡ್‌ನಲ್ಲಿ ಸದ್ಯಕ್ಕೆ ಹೆಚ್ಚು ಸುದ್ದಿಯಲ್ಲಿರುವ ತಾರಾ ಜೋಡಿ ಅಂದ್ರೆ ಕ್ರಿಸ್ಮಿ. ಅಂದ್ರೆ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್. ʼಲವ್‌ ಮಾಕ್ಟೆಲ್‌ʼ ಚಿತ್ರದ ಮೂಲಕ ಆನ್‌ ಸ್ಕ್ರೀನ್‌ ಮೇಲೆ ಪ್ರೇಕ್ಷಕರನ್ನು ಭರ್ಜರಿ ಮೋಡಿ ಮಾಡಿದ್ದ ಈ ಜೋಡಿ ಆಫ್‌ ಸ್ಕ್ರೀನ್‌ ನಲ್ಲೂ ಬೆಸ್ಟ್‌ ಫೇರ್‌ ಅಂತ ಗೊತ್ತಾಗಿದ್ದೇ ಲವ್‌ ಮಾಕ್ಟೆಲ್‌ ನ ಭರ್ಜರಿ ಸಕ್ಸಸ್‌ ಕಂಡ ನಂತರವೇ. ಆ ಗೆಲುವಿನಲ್ಲೇ ಈ ಫೇರ್‌ ತಮ್ಮ ಲವ್‌ ನ್ಯೂಸ್‌ ರಿವೀಲ್‌ ಮಾಡಿತು. ಅಲ್ಲಿಂದ ಫೆ.೧೪ ಲವರ್ಸ್‌ ಡೇ ದಿನವೇ ವಿವಾಹವಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಒಂದೆಡೆ ಆನ್‌ಸ್ಕ್ರೀನ್‌ , ಮತ್ತೊಂದೆಡೆ ಆಫ್‌ ಸ್ಕ್ರೀನ್‌ ಎರಡು ಕಡೆಗಳಲ್ಲೂ ಅದ್ಭುತ ಜೋಡಿ ಅಂತಲೇ ಸುದ್ದಿಯಲ್ಲಿದ್ದ ಈ ಜೋಡಿಗೆ ಈಗ ಅಧಿಕೃತವಾಗಿಯೇ ಎರಡು ಕಡೆಗಳಲ್ಲೂ ಬೆಸ್ಟ್‌ ಫೇರ್‌ ಅವಾರ್ಡ್‌ ಸಿಕ್ಕಿದೆ. ಆ ಅವಾರ್ಡ್‌ ಕೊಟ್ಟಿದ್ದು ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ.

ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಮೊಟ್ಟ ಮೊದಲ ಪ್ರಶಸ್ತಿ. ಕನ್ನಡ ಚಿತ್ರರಂಗದಲ್ಲಿ ಯಶ್-ರಾಧಿಕಾ, ದಿಗಂತ್‌ -ಐಂದ್ರಿತಾ ಅವರದ್ದು ಕೂಡ ಲವ್‌ ಮ್ಯಾರೇಜ್‌ ಆಗಿದ್ದರೂ ಇಂತಹದೊಂದು ಪ್ರಶಸ್ತಿ ಈ ಜೋಡಿಗೆ ಇದುವರೆಗೂ ಸಿಕ್ಕಿಲ್ಲ. ಹಾಗಂತ ಈ ಜೋಡಿಗೆ ಜನಪ್ರಿಯತೆ ಇಲ್ಲ ಅಂತಲ್ಲ. ಅವರಿಗೂ ದೊಡ್ಡ ಜನಪ್ರಿಯತೆ ಇದ್ದರೂ ಒಂದು ಸಿನಿಮಾ ಮೂಲಕ ದೊಡ್ಡ ಸಕ್ಸಸ್‌ ಕಂಡು ಆ ಮೂಲಕವೇ ಆಫ್‌ ಸ್ಕ್ರೀನ್‌ ನಲ್ಲೂ ಜನಪ್ರಿಯತೆಯೊಂದಿಗೆ ಮದುವೆ ಆಗಿದ್ದು ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್.‌ ಹಾಗಾಗಿಯೇ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಈ ಬಾರಿ ಈ ಜೋಡಿಗೆ ಭಾನುವಾರ ( ಫೆ. 21) ದಂದು ಸಂಜೆ ಬೆಸ್ಟ್‌ ಫೇರ್‌ ಅವಾರ್ಡ್‌ ನೀಡಿತು.ಮದುವೆ ಮುಗಿಸಿಕೊಂಡು ಹನಿಮೂನ್‌ ಗೆ ಅಂತ ಮಾಲ್ಡೀವ್ಸ್‌ ಗೆ ಹಾರಿದ್ದ ಈ ಜೋಡಿ ಅಲ್ಲಿಂದ ವಾಪಸ್‌ ಬಂದು ಅಟೆಂಡ್‌ ಮಾಡಿದ ಮೊದಲ ಕಾರ್ಯಕ್ರಮ ಇದು. ನವದಂಪತಿಗಳಿಬ್ಬರು ಬ್ಯೂಟಿಫುಲ್‌ ಆಗಿ ರೆಡಿಯಾಗಿ ಬಂದಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದ ಆರಂಭದಿಂದ ಮುಕ್ತಾಯರದವರೆಗೂ ಮುಂಭಾಗದಲ್ಲೇ ಕುಳಿತು ಲವಲವಿಕೆಯಿಂದ ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ನಂದಲ್ಲಪ್ಪಾ ವಾಯ್ಸು ಅಂದ್ರು ಜಗ್ಗೇಶ್-‌ ಹಾಗಾದ್ರೆ ಜಗ್ಗೇಶ್‌ ಇನ್ನೊಬ್ಬ ಇದ್ದಾನಾ ಅಂತ ಪ್ರಶ್ನಿಸಿದ್ರು ದಚ್ಚು ಫ್ಯಾನ್ಸ್‌

ದರ್ಶನ್‌ ಕುರಿತು ಜಗ್ಗೇಶ್‌ ಮಾತನಾಡಿದ್ದರೆನ್ನಲಾದ ಆಡಿಯೋ ಸೋರಿಕೆ ಭಾರೀ ವಿವಾದ ಸೃಷ್ಟಿಸಿದೆ. ಸೋಮವಾರ ಮೈಸೂರಿನಲ್ಲಿ “ತೋತಾಪುರಿʼ ಚಿತ್ರೀಕರಣದಲ್ಲಿದ್ದಾಗ ದರ್ಶನ್‌ ಅಭಿಮಾನಿಗಳು ನಟ ಜಗ್ಗೇಶ್‌ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗದುಕೊಂಡ ಘಟನೆ ನಡೆದಿದೆ.ಜಗ್ಗೇಶ್‌ ಅವರಿಗೆ ಮುತ್ತಿಗೆ ಹಾಕಿದ್ದ ದರ್ಶನ್‌ ಅಭಿಮಾನಿಗಳು, ದರ್ಶನ್‌ ಅವರ ಬಗ್ಗೆ ಅದ್ಹೆಂಗೆ ಮಾತನಾಡಿದ್ದೀರಿ ನೀವು, ಈಗಲೇ ನೀವು ಕ್ಷಮೆ ಕೇಳಬೇಕು ಅಂತ ಒತ್ತಾಯಿಸಿದ್ದಲ್ಲದೆ, ಜಗ್ಗೇಶ್‌ ಅವರಿಗೆ ಧಿಕ್ಕಾರ ಕೂಗಿದರು. ಜಗ್ಗೇಶ್‌ ಅವರನ್ನು ಸುತ್ತುವರೆದುಕೊಂಡಿದ್ದ ದರ್ಶನ್‌ ಅಭಿಮಾನಿಗಳ ಮಾತುಗಳ ಅಬ್ಬರಕ್ಕೆ ಜಗ್ಗೇಶ್‌ ಕಕ್ಕಬಿಕ್ಕಿಯಾಗಿದ್ದರು. ಅದು ಹಾಗಲ್ಲ, ಹೀಗೆ ಅಂತ ಸ್ಪಷ್ಟನೆ ನೀಡಲು ಯತ್ನಿಸಿದರೂ, ನೀವು ಏನು ಹೇಳೋ ಹಾಗಿಲ್ಲ, ಕ್ಷಮೆ ಕೋರಲೇಬೇಕು ಅಂತ ಪಟ್ಟು ಹಿಡಿದರು.

ಒಂದ್ರೀತಿ ತೀರಾ ಇಕ್ಕಟ್ಟಿಗೆ ಸಿಲುಕಿದ ಜಗ್ಗೇಶ್‌ ಅವರಿಗೆ ಕ್ಞಮೆ ಕೇಳದೆ ಬೇರೆ ದಾರಿಯೇ ಸಿಗಲಿಲ್ಲ. ಅದು ನಂದಲ್ಲಪ್ಪಾ ವಾಯ್ಸು… ಇದಕ್ಕೂ ನಂಗೂ ಸಂಬಂಧ ಇಲ್ಲ. ಯಾರೋ ವಿಡಿಯೋ ಎಡಿಟರ್‌ ಹಾಗೆ ಮಾಡಿದ್ದಾನೆ. ಇಂಡಸ್ಟ್ರಿ ಹಾಳಾಗಿ ಹೋಯ್ತು. ಇಬ್ಬರ ನಡುವೆ ತಂದಿಕ್ಕಿ ಬಿಡುವ ಅಂತ ಇದೆಲ್ಲ ನಡೆದಿದೆ. ಇದರಲ್ಲಿ ರಾಜಕಾರಣ ನಡೆದಿದೆʼ ಅಂತ ಸ್ಪಷ್ಟನೆ ನೀಡಲು ಯತ್ನಿಸಿದಾಗ ದರ್ಶನ್‌ ಅಭಿಮಾನಿಗಳು ಕೂಗುತ್ತಲೇ ಇದ್ದರು.ದರ್ಶನ್‌ ಅಭಿಮಾನಿಗಳನ್ನೆಲಾದ ಆ ವ್ಯಕ್ತಿಗಳು ಮಾತ್ರ ಸಮಾಧಾನ ಆಗಲಿಲ್ಲ. ಇಲ್ಲ, ಅದು ನಿಮ್ದೆ ವಾಯ್ಸು…. ಹೆಂಗೇ ಹೇಳದ್ರಿ ಆ ರೀತಿ… ಅಮ್ಮನ್‌ ಅಂತೀರಾ..ಅಂತ ರೇಗಿದರು. ಆಯ್ತು ಬಿಡಪ್ಪಾ… ಅದು ನಂದೇ ವಾಯ್ಸು… ತಪ್ಪಾಯ್ತು ಅಂತ ಹೇಳಿದರು. ಆಗ ದರ್ಶನ್‌ ಅಭಿಮಾನಿಗಳೆನ್ನೆಲಾದ ಆ ಸುಮ್ಮನಾದರು. ಹೇಗೋ ತಪ್ಪಿಸಿಕೊಂಡ್ರೆ ಸಾಕು ಎನ್ನುವ ಹಾಗೆ ಜಗ್ಗೇಶ್‌ ಅಲ್ಲಿಂದ ಕಾಲ್ಕಿತ್ತರು.

Categories
ಸಿನಿ ಸುದ್ದಿ

ರಾಘಣ್ಣನ ಮನೆಗೆ ಜಗ್ಗೇಶ್‌; ವರನಟನ ನೆನಪು!

ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಚೇತರಿಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಟ ಜಗ್ಗೇಶ್ ಅವರು ರಾಘಣ್ಣನ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಆ ಕುರಿತು ಟ್ವಿಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಾಕಿ, “ರಾಘಣ್ಣನಿಗೆ ಆಯುರಾರೋಗ್ಯ ವೃದ್ಧಿಸಲಿ ಎಂದು ರಾಯರಲ್ಲಿ ನಾನು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ. ಅವರ ಈ ಫೋಟೋ, ಹಾರೈಕೆಗಳಿಗೆ ಅಭಿಮಾನಿಗಳು ಸ್ಪಂದಿಸುತ್ತಿದ್ದಾರೆ.

ನಟ ಜಗ್ಗೇಶ್ ಅವರು ವರನಟ ಡಾ.ರಾಜಕುಮಾರ್ ಅವರ ಪರಮ ಅಭಿಮಾನಿ. ಸಿನಿಮಾ ಸಮಾರಂಭಗಳು, ಟೀವಿ ರಿಯಾಲಿಟಿ ಶೋಗಳಲ್ಲಿ ಅವರು ಸಂದರ್ಭೋಚಿತವಾಗಿ ರಾಜಕುಮಾರ್‌ ಅವರ ಪ್ರಸ್ತಾಪ ಮಾಡದೇ ಇರುವುದಿಲ್ಲ. ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ವಿಚಾರಿಸಲೆಂದು ಮನೆಗೆ ಹೋಗಿದ್ದಾಗ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ರಾಜಕುಮಾರ್‌ ಜೊತೆಗೆ ತಾವು ಕಳೆದ ಸಂದರ್ಭಗಳನ್ನು ರಾಘಣ್ಣನವರೊಂದಿಗೆ ನೆನಪು ಮಾಡಿಕೊಂಡಿದ್ದಾಗಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಮನೆಯಲ್ಲಿ ರಾಘಣ್ಣನವರ ಪತ್ನಿ ಮಂಗಳಾ ಮತ್ತು ಪುತ್ರ ವಿನಯ್ ಸೇರಿದಂತೆ ಇತರೆ ಮನೆಮಂದಿಯೊಂದಿಗೆ ತೆಗೆದ ಫೋಟೋಗಳನ್ನು ಜಗ್ಗೇಶ್‌ ಶೇರ್ ಮಾಡಿದ್ದಾರೆ.

Categories
ಸಿನಿ ಸುದ್ದಿ

ಸಂಗೀತ ನಿರ್ದೇಶಕರಾಗಿ ರಘು ದೀಕ್ಷಿತ್‌ ಪಡೆದ ಮೊದಲ ಪ್ರಶಸ್ತಿ ಇದು ?

ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅಂದ್ರೆ ಸಾಕು ತಕ್ಷಣ ನೆನಪಾಗೋದು ʼಸೈಕೋʼ ಚಿತ್ರದ ಮಾದೇಶ್ವರ ಹಾಡು. ಅದರ ಜತೆಗೆ ಗುಡು ಗುಡಿಯ ಸೇದಿ ನೋಡು….ಎನ್ನುವ ಜನಪ್ರಿಯ ಗೀತೆ. ಕನ್ನಡಿಗರಿಗೆ ಇಂತಹ ಜನಪ್ರಿಯ  ಹಾಡುಗಳ ಮಹಾಪೂರವನ್ನೇ ಉಣಬಡಿಸಿದ ಗಾಯಕ ರಘು  ದೀಕ್ಷಿತ್. ಹಾಗಂತ ಬರೀ ಹಾಡಿದ್ದು ಮಾತ್ರವಲ್ಲ, ಲೆಕ್ಕವಿಲ್ಲದಷ್ಟು  ಚಿತ್ರಗಳಿಗೆ, ಹಾಡುಗಳಿಗೆ  ಸಂಗೀತ ನೀಡಿದ ಖ್ಯಾತಿಯೂ  ಅವರದು. ಇಷ್ಟಾಗಿಯೂ ಅವರಿಗೆ  ಸಂಗೀತ ನಿರ್ದೇಶನದಲ್ಲಿ  ಇದುವರೆಗೂ ಒಂದೇ ಒಂದು ಪ್ರಶಸ್ತಿ ಸಿಕ್ಕಿಲ್ಲ. ಫಾರ್‌ ದಿ ಫಸ್ಟ್‌ ಟೈಮ್‌ ಅವರೀಗ ಸಂಗೀತ ನಿರ್ದೇಶಕರಾಗಿ ಒಂದು ಪ್ರಶಸ್ತಿ ಪಡೆದಿದ್ದಾರೆ. ಆ ಪ್ರಶಸ್ತಿ ಬೇರಾವುದು ಅಲ್ಲ, ಒನ್‌ ಅಂಡ್‌ ಒನ್ಲಿ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್.‌

‌ ಹೌದು, ಭಾನುವಾರ ನಡೆದ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ ಅವರು ಲವ್‌ ಮಾಕ್ಟೆಲ್‌ ಚಿತ್ರದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಪಾತ್ರವಾದರು.  ಪ್ರಶಸ್ತಿ ಸ್ವೀಕರಿಸಿ ಮಾತಿಗೆ ನಿಂತಾಗಲೇ ಗೊತ್ತಾಗಿದ್ದು ಸಂಗೀತ ನಿರ್ದೇಶನದಲ್ಲಿ ರಘು ದೀಕ್ಷಿತ್‌ ಇದುವರೆಗೂ ಯಾವುದೇ ಪ್ರಶಸ್ತಿ ಪಡೆದಿಲ್ಲ ಅಂತ. ಆ ವಿಚಾರವನ್ನು ಅವರೇ ಅಲ್ಲಿ ಬಹಿರಂಗ ಪಡಿಸಿದರು.

ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ”  ಕಣ್ಣ ಹನಿಯೊಂದು..ಕಣ್ಣಲ್ಲೆ ತೂಗಿʼ ಅಂತ ಹೇಳುತ್ತಾ ಕ್ರಿಟಿಕ್ ಅವಾರ್ಡ್ ವೇದಿಕೆ ಹತ್ತಿದವರು ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್‌.  ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ” ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡ ನನಗೆ ಕನ್ನಡದಲ್ಲಿ ಅವಾರ್ಡ್‌ ಗಳನ್ನು ಪಡೆದುಕೊಳ್ಳಲು ಅವಕಾಶ ಬಂದಿರೋದು ಖುಷಿ ತಂದಿದೆ. ನನ್ನ ಸಂಗೀತ ಪಯಣವನ್ನು ಗುರುತಿಸಿ, ಸಂಗೀತ ನಿರ್ದೇಶನಕ್ಕೆ ನೀಡಿರುವ ಗೌರವಕ್ಕೆ ಸದಾ ಋಣಿಯಾಗಿರುತ್ತೇನೆ. ನನ್ನ ಪ್ರತಿಭೆಯನ್ನು ಕನ್ನಡದವರೇ ಗುರುತಿಸಿದ ಹೆಮ್ಮೆ ನನಗಿದೆ. ಪತ್ರಕರ್ತರು ಅತ್ಯುತ್ತಮ ಸಂಗೀತ ನಿರ್ದೇಶಕ ಎನ್ನುವ ಅವಾರ್ಡ್‌ ನೀಡುವ ಮೂಲಕ ಗುರುತಿಸಿರುವುದು ಸಂತಸದ ವಿಚಾರ ಎನ್ನುತ್ತಾರೆ ರಘು ದೀಕ್ಷಿತ್.‌

error: Content is protected !!