ಭಾರತದ ಮೊದಲ ಮಡ್-ರೇಸ್ ಸಿನಿಮಾ ‘ಮಡ್ಡಿ’ ತೆರೆಗೆ ಸಿದ್ಧವಾಗಿದೆ. ಡಾ.ಪ್ರಗಭಾಲ್ ನಿರ್ದೇಶನದಲ್ಲಿ ತಯಾರಾಗಿರುವ ಇದು ಆಕ್ಷನ್-ಸ್ಪೋರ್ಟ್ಸ್-ಡ್ರಾಮಾ. ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿರುವ ಈ ಚಿತ್ರದಲ್ಲಿ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ ಹೈಲೈಟ್.
‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರದ ಹಿನ್ನೆಲೆ ಸಂಗೀತ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎನ್ನವುದು ವಿಶೇಷ. ಖ್ಯಾತ ನಟ ವಿಜಯ್ ಸೇತುಪತಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
“ಇದು ಭಾರತದ, ಬಹುಶಃ ವಿಶ್ವದಲ್ಲೇ ಮೊದಲ ಮಡ್-ರೇಸ್ ಸಿನಿಮಾ. ಚಿತ್ರೀಕರಣಕ್ಕೆ ಮುನ್ನ ನಟರಿಗೆ ಸೂಕ್ತ ತರಬೇತಿ ನೀಡಿದ್ದೇವೆ. ಡ್ಯೂಪ್ ಬಳಕೆ ಮಾಡಿಲ್ಲ. ಸಾಹಸಪ್ರವೃತ್ತಿಯ ಯುವಕರನ್ನು ಆಯ್ಕೆ ಮಾಡಿದ್ದು, ಅವರು ಚಿತ್ರಕ್ಕಾಗಿ ಸಾಕಷ್ಟು ಸಮಯ ವ್ಯಯಿಸಿದ್ದಾರೆ.
ಚಿತ್ರದ ಮೂಲಕ ಪ್ರೇಕ್ಷಕರಿಗೆ ರೋಚಕ ಮಡ್-ರೇಸ್ ಪರಿಚಯಿಸಲಿದ್ದೇವೆ. ಸಾಕಷ್ಟು ಡ್ರಾಮಾ, ಥ್ರಿಲ್, ಪಂಚ್ ಜೊತೆ ಯಾವ ಹಂತದಲ್ಲಿಯೂ ಬೇಸರವಾಗದಂತೆ ನಿರೂಪಿಸಲು ಶ್ರಮಿಸಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಪ್ರಗಭಾಲ್. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.