ಸಂಗೀತ ನಿರ್ದೇಶಕರಾಗಿ ರಘು ದೀಕ್ಷಿತ್‌ ಪಡೆದ ಮೊದಲ ಪ್ರಶಸ್ತಿ ಇದು ?

ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅಂದ್ರೆ ಸಾಕು ತಕ್ಷಣ ನೆನಪಾಗೋದು ʼಸೈಕೋʼ ಚಿತ್ರದ ಮಾದೇಶ್ವರ ಹಾಡು. ಅದರ ಜತೆಗೆ ಗುಡು ಗುಡಿಯ ಸೇದಿ ನೋಡು….ಎನ್ನುವ ಜನಪ್ರಿಯ ಗೀತೆ. ಕನ್ನಡಿಗರಿಗೆ ಇಂತಹ ಜನಪ್ರಿಯ  ಹಾಡುಗಳ ಮಹಾಪೂರವನ್ನೇ ಉಣಬಡಿಸಿದ ಗಾಯಕ ರಘು  ದೀಕ್ಷಿತ್. ಹಾಗಂತ ಬರೀ ಹಾಡಿದ್ದು ಮಾತ್ರವಲ್ಲ, ಲೆಕ್ಕವಿಲ್ಲದಷ್ಟು  ಚಿತ್ರಗಳಿಗೆ, ಹಾಡುಗಳಿಗೆ  ಸಂಗೀತ ನೀಡಿದ ಖ್ಯಾತಿಯೂ  ಅವರದು. ಇಷ್ಟಾಗಿಯೂ ಅವರಿಗೆ  ಸಂಗೀತ ನಿರ್ದೇಶನದಲ್ಲಿ  ಇದುವರೆಗೂ ಒಂದೇ ಒಂದು ಪ್ರಶಸ್ತಿ ಸಿಕ್ಕಿಲ್ಲ. ಫಾರ್‌ ದಿ ಫಸ್ಟ್‌ ಟೈಮ್‌ ಅವರೀಗ ಸಂಗೀತ ನಿರ್ದೇಶಕರಾಗಿ ಒಂದು ಪ್ರಶಸ್ತಿ ಪಡೆದಿದ್ದಾರೆ. ಆ ಪ್ರಶಸ್ತಿ ಬೇರಾವುದು ಅಲ್ಲ, ಒನ್‌ ಅಂಡ್‌ ಒನ್ಲಿ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್.‌

‌ ಹೌದು, ಭಾನುವಾರ ನಡೆದ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ ಅವರು ಲವ್‌ ಮಾಕ್ಟೆಲ್‌ ಚಿತ್ರದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಪಾತ್ರವಾದರು.  ಪ್ರಶಸ್ತಿ ಸ್ವೀಕರಿಸಿ ಮಾತಿಗೆ ನಿಂತಾಗಲೇ ಗೊತ್ತಾಗಿದ್ದು ಸಂಗೀತ ನಿರ್ದೇಶನದಲ್ಲಿ ರಘು ದೀಕ್ಷಿತ್‌ ಇದುವರೆಗೂ ಯಾವುದೇ ಪ್ರಶಸ್ತಿ ಪಡೆದಿಲ್ಲ ಅಂತ. ಆ ವಿಚಾರವನ್ನು ಅವರೇ ಅಲ್ಲಿ ಬಹಿರಂಗ ಪಡಿಸಿದರು.

ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ”  ಕಣ್ಣ ಹನಿಯೊಂದು..ಕಣ್ಣಲ್ಲೆ ತೂಗಿʼ ಅಂತ ಹೇಳುತ್ತಾ ಕ್ರಿಟಿಕ್ ಅವಾರ್ಡ್ ವೇದಿಕೆ ಹತ್ತಿದವರು ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್‌.  ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ” ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡ ನನಗೆ ಕನ್ನಡದಲ್ಲಿ ಅವಾರ್ಡ್‌ ಗಳನ್ನು ಪಡೆದುಕೊಳ್ಳಲು ಅವಕಾಶ ಬಂದಿರೋದು ಖುಷಿ ತಂದಿದೆ. ನನ್ನ ಸಂಗೀತ ಪಯಣವನ್ನು ಗುರುತಿಸಿ, ಸಂಗೀತ ನಿರ್ದೇಶನಕ್ಕೆ ನೀಡಿರುವ ಗೌರವಕ್ಕೆ ಸದಾ ಋಣಿಯಾಗಿರುತ್ತೇನೆ. ನನ್ನ ಪ್ರತಿಭೆಯನ್ನು ಕನ್ನಡದವರೇ ಗುರುತಿಸಿದ ಹೆಮ್ಮೆ ನನಗಿದೆ. ಪತ್ರಕರ್ತರು ಅತ್ಯುತ್ತಮ ಸಂಗೀತ ನಿರ್ದೇಶಕ ಎನ್ನುವ ಅವಾರ್ಡ್‌ ನೀಡುವ ಮೂಲಕ ಗುರುತಿಸಿರುವುದು ಸಂತಸದ ವಿಚಾರ ಎನ್ನುತ್ತಾರೆ ರಘು ದೀಕ್ಷಿತ್.‌

Related Posts

error: Content is protected !!