ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಟ ನಟರಾಜ್ ಇಂದು (ಫೆ.21) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ʼಕಳ್ಳಬೆಟ್ಟದ ದರೋಡೆಕೋರರುʼ ಚಿತ್ರ ಬಂದು ನಂತರದ ಒಂದಷ್ಟು ಗ್ಯಾಪ್ ಬಳಿಕ ಈಗವರು ಸುದೀರ್ ಶಾನ್ ಬೋಗ್ ನಿರ್ದೇಶನದʼ ಮಾರೀಚʼ ಚಿತ್ರದಲ್ಲಿ ಸಿಸಿಬಿ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರೆಡು ಚಿತ್ರಗಳ ಮಾತುಕತೆಯಲ್ಲಿ ಬ್ಯುಸಿಯಾಗಿರುವ ನಟರಾಜ್, ಈ ನಡುವೆಯೇ ಮಂಗಳವಾರ ತುಂಬಾ ಸರಳವಾಗಿಯೇ ಹುಟ್ಟು ಆಚರಿಸಿಕೊಂಡರು.
ಮತ್ತೊಂದೆಡೆ ನಟನೆಯ ಆಚೆ ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಜತೆಗೂಡಿ “ಸತ್ಯ ಪಿಕ್ಚರ್ಸ್ʼ ಸಂಸ್ಥೆ ಹುಟ್ಟು ಹಾಕಿರುವ ನಟರಾಜ್, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಲು ರೆಡಿಯಾಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ʼಸತ್ಯ ಪಿಕ್ಚರ್ಸ್ʼ ಕಚೇರಿಯಲ್ಲಿ ಮೊನ್ನೆಯಷ್ಟೇ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಚಿತ್ರರಂಗ ಸಾಕಷ್ಟು ಗಣ್ಯರು ಆದಿನ ಅಲ್ಲಿಗೆ ಬಂದು ಸತ್ಯ ಪ್ರಕಾಶ್ ಅಂಡ್ ಟೀಮ್ ಗೆ ಶುಭಾಶಯ ಕೋರಿದರು. ಕಚೇರಿ ನವೀಕರಣದ ಹಿನ್ನೆಲೆಯಲ್ಲಿ ಸತ್ಯ ಪ್ರಕಾಶ್ ತಮ್ಮ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನಕ್ಕಿಳಿಯುವುದರ ಭಾಗವಾಗಿಯೇ ಈ ಪೂಜೆ ನೆರವೇರಿದ್ದು ಸುಳ್ಳಲ್ಲ.
ಕಚೇರಿ ಪೂಜೆ ವೇಳೆ ಔಪಾಚಾರಿಕವಾಗಿ ಮಾತಿಗಿಳಿದ ನಿರ್ದೇಶಕ ಸತ್ಯ ಪ್ರಕಾಶ್, ಎಲ್ಲವೂ ಅಂದುಕೊಂಡಂತಾಗಿದ್ದರೆ ಈಗ ಹೊಸ ಪ್ರಾಜೆಕ್ಟ್ ಶುರುವಾಗಬೇಕಿತ್ತು. ಕೊರೋನಾ ಹಿನ್ನೆಲೆಯಲ್ಲಿ ಎಲ್ಲವೂ ಏರುಪೇರಾಯಿತು. ಈಗ ಒಂದಷ್ಟು ಸಿದ್ಧತೆ ನಡೆದಿದೆ. ಅವಕ್ಕೀಗ ಚಾಲನೆ ನೀಡಬೇಕಿದೆ. ಈ ನಿಟ್ಟಿನಲ್ಲಿಯೇ ಕಚೇರಿ ನವೀಕರಣ ಕೆಲಸ ನಡೆದಿದೆ. ಅದರ ಭಾಗವಾಗಿಯೇ ಪೂಜೆ ನಡೆದಿದೆ. ಇನ್ನೇನು ಹದಿನೈದಿಪ್ಪತ್ತು ದಿನಗಳಲ್ಲಿ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ. ಸದ್ಯಕ್ಕೆ ನಾವೆಲ್ಲ ಅದೇ ಕೆಲಸದಲ್ಲೇ ಬ್ಯುಸಿ ಆಗಿದ್ದೇವೆ ಎಂದರು.
ರಾಮಾ ರಾಮಾ ರೇ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹಾಸ್ಯ ನಟ ಧರ್ಮಣ್ಣ ಕೂಡ ಸತ್ಯ ಟೀಮ್ ನಲ್ಲಿದ್ದಾರೆ. ಇದೀಗ ಯುವ ನಿರ್ದೇಶಕ ದೀಪಕ್ ಮಧುವನಹಳ್ಳಿ ಕೂಡ ಸಾಥ್ ನೀಡಿದ್ದಾರೆ. ಒಟ್ಟಾರೆ ಸಿನಿಮಾಸಕ್ತ ಯುವ ಉತ್ಸಾಹಿಗಳ ಒಂದು ತಂಡವೇ ಈಗ ನಿರ್ಮಾಣ ಮತ್ತು ನಿರ್ದೇಶನದತ್ತ ಸಕಲ ಸಿದ್ಧತೆಯೊಂದಿಗೆ ರೆಡಿಯಾಗುತ್ತಿರುವುದು ಒಳ್ಳೆಯ ವಿಚಾರವೆ ಹೌದು. ಆಲ್ ದಿ ಬೆಸ್ಟ್ ಸತ್ಯ ಅಂಡ್ ಟೀಮ್.