ಐತಿಹಾಸಿಕ ಕಥಾನಕ ‘ಮಹಾಭಾರತ’ ಆಧರಿಸಿ ಹತ್ತಾರು ಸಿನಿಮಾಗಳು ತಯಾರಾಗಿವೆ. ಈ ಕೃತಿಯಲ್ಲಿನ ಮಹತ್ವದ ವ್ಯಕ್ತಿ – ವ್ಯಕ್ತಿತ್ವ ಕರ್ಣ. ಈ ಪಾತ್ರದ ದೃಷ್ಟಿಕೋನದಿಂದ ತೆರೆ ಮೇಲೆ ಕತೆ ಹೇಳಿರುವುದು ಕಡಿಮೆ. ಆ ಕೊರತೆಯನ್ನು ನೀಗಿಸಲಿದೆ ‘ಸೂರ್ಯಪುತ್ರ ಮಹಾವೀರ್ ಕರ್ಣ್’ ಚಿತ್ರ. ಆರ್.ಎಸ್.ವಿಮಲ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಬಹುದೊಡ್ಡ ಯೋಜನೆಯಿದು. ವಿಶು ಭಗ್ನಾನಿ, ಜಾಕಿ ಭಗ್ನಾನಿ ಮತ್ತು ದೀಪ್ಶಿಕಾ ದೇಶ್‌ಮುಖ್ ನಿರ್ಮಿಸುತ್ತಿರುವ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಜನಪ್ರಿಯ ತಮಿಳು ನಟ ವಿಕ್ರಂ ನಟಿಸುತ್ತಿದ್ದಾರೆ.
ಹಾಗೆ ನೋಡಿದರೆ ಈ ಸಿನಿಮಾಗೆ 2018ರಲ್ಲೇ ಚಾಲನೆ ಸಿಗಬೇಕಿತ್ತು. ಕಾರಣಾಂತರಗಳಿಂದ ಯೋಜನೆ ಮುಂದಕ್ಕೆ ಹೋಯ್ತು. ಕೋವಿಡ್‌ನಿಂದಾಗಿ ಕಳೆದ ವರ್ಷವಿಡೀ ಚಿತ್ರ ಸುದ್ದಿಯಲ್ಲಿರಲಿಲ್ಲ. ಇದೀಗ ಆಕರ್ಷಕ ಟೀಸರ್‌ನೊಂದಿಗೆ ಬಂದಿದೆ ಚಿತ್ರತಂಡ. ನಿರ್ಮಾಪಕರು ಸುಮಾರು 300 ಕೋಟಿ ದುಬಾರಿ ಬಜೆಟ್‌ನಲ್ಲಿ ಸಿನಿಮಾ ತಯಾರಿಸಲಿದ್ದಾರೆ. ಹಿಂದಿ, ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದ್ದು, ಮ್ಯೂಸಿಕಲ್ ಸೆನ್ಷೇಷನ್ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸುತ್ತಿರುವುದು ವಿಶೇಷ.
ಮಲಯಾಳಂ ನಟ ಸುರೇಶ್ ಗೋಪಿ ಅವರು ಧುರ್ಯೋಧನನ ಪಾತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಇನ್ನುಳಿದ ತಾರಾಬಳಗದ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ‘ಗೇಮ್ ಆಫ್ ಥ್ರೋನ್ಸ್’ ಹಾಲಿವುಡ್ ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು ‘ಮಹಾವೀರ್ ಕರ್ಣ’ನಿಗೆ ಕೆಲಸ ಮಾಡಲಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ಥಿಯೇಟರ್‌ಗೆ ಬರಲಿದೆ. ಖ್ಯಾತ ಕವಿ ಡಾ.ಕುಮಾರ್ ವಿಶ್ವಾಸ್ ಅವರ ಚಿತ್ರಕಥೆ ವಿಭಾಗದಲ್ಲಿ ತೊಡಗಿಸಿಕೊಂಡಿದ್ದು, ಸಂಭಾಷಣೆ ರಚನೆಯ ಜವಾಬ್ದಾರಿ ಹೊತ್ತಿದ್ದಾರೆ.