Categories
ಸಿನಿ ಸುದ್ದಿ

ರೈತರ ಪ್ರತಿಭಟನೆ : ಕನ್ನಡದ ಸ್ಟಾರ್ಸ್ ಮೌನವೇಕೆ?

ಸದಾ ನಾಡು -ನುಡಿಯ ಪರವಾಗಿ ನಿಂತ ಸ್ಟಾರ್‌ಗಳು ಈಗಲೂ…

ರೈತರ ಪ್ರತಿಭಟನೆಯ ಬಿಸಿ ಈಗ ಸಿನಿಮಾ ತಾರೆಯರಿಗೂ ತಟ್ಟಿದೆ. ಬಾಲಿವುಡ್‌ನಲ್ಲಿ ಈಗ ನಟ-ನಟಿಯರು ಈಗ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಕಲಾವಿದರು ತಮ್ಮ ನಿಲವು ಸ್ಪಷ್ಟ ಪಡಿಸಬೇಕೆಂದು ಅಲ್ಲಿ ಅಭಿಮಾನಿಗಳ ಕಡೆಯಿಂದಲೇ ಒತ್ತಡ ಹೆಚ್ಚಿದೆ. ಸದ್ಯಕ್ಕೆ ಈ ಪರಿಸ್ಥಿತಿ ಸ್ಯಾಂಡಲ್‌ ವುಡ್‌ನಲ್ಲಿ ಇಲ್ಲ ಎನ್ನುವಂತಿದ್ದರೂ, ಕಲಾವಿದರು ತಮ್ಮ ಬದ್ಧತೆ ತೋರಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ.

ಪರ-ವಿರೋಧ ಎನ್ನುವುದಕ್ಕಿಂತ ರೈತರ ಪ್ರತಿಭಟನೆ ವಿಚಾರದಲ್ಲಿ ಕಲಾವಿದರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಸೋಷಲ್‌ ಮೀಡಿಯಾದಲ್ಲಿ ಕೆಲವರು ಒತ್ತಾಯಿಸಿದ್ದಾರೆ. ಈ ಮಧ್ಯೆಯೇ ಶುಕ್ರವಾರ ಬಹುಭಾಷೆ ನಟಿ ಪ್ರಣೀತಾ, ಟ್ವೀಟ್‌ ಮೂಲಕ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವುದು ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದೆ.

” ಕಾನೂನು ಉಲ್ಲಂಘಿಸಿ ಸಮಾಜದ ಸುವ್ಯವಸ್ಥೆಗೆ ಧಕ್ಕೆ ತರುವ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಈಗಲೂ ಮಾತುಕತೆಗೆ ಸಿದ್ಧವಿದೆ. ಕಾಯ್ದೆಗಳು ಉತ್ತಮವಾಗಿದೆ. ಇತ್ತೀಚೆಗೆ ಮಂಡನೆಯಾದ ಬಜೆಟ್‌ ಭಾರತವು ದಶಕಗಳಲ್ಲಿ ಕಂಡ ಅತ್ಯಂತ ಸುಧಾರಿತ ಬಜೆಟ್‌ ಇದಾಗಿದೆ ʼ ಎಂಬುದು ನಟಿ ಪ್ರಣೀತಾ ಅವರ ಟ್ವೀಟ್‌ ನ ಸಾರಾಂಶ.

ಉಳಿದಂತೆ ಕುತೂಹಲ ಇರೋದು ದರ್ಶನ್‌, ಸುದೀಪ್‌, ಶಿವರಾಜ್‌ ಕುಮಾರ್‌, ಯಶ್‌, ಪುನೀತ್‌ ರಾಜ್‌ ಕುಮಾರ್‌ ಸೇರಿದಂತೆ ಇತರೆ ನಟ-ನಟಯರ ಹೇಳಿಕೆಗಳ ಬಗ್ಗೆ. ಹಾಗಂತ ಇವರೆಲ್ಲ ರೈತರ ಪರವಾಗಿ ಮಾತನಾಡಿಲ್ಲ, ಬೀದಿಗಿಳಿದಿಲ್ಲ ಅಂತಲ್ಲ. ಅವರೇನು ಅಂತ ಕನ್ನಡದ ಪ್ರೇಕ್ಷಕರಿಗೆ ಗೊತ್ತು. ಕನ್ನಡ ಭಾಷೆ ಸೇರಿದಂತೆ ನೆಲ-ಜಲದ ಪ್ರಶ್ನೆ ಬಂದಾಗ ಬರೀ ಹೇಳಿಕೆಗಳು ಮಾತ್ರವಲ್ಲ ಅಷ್ಟು ನಟರೂ ಬೀದಿಗಿಳಿದು ಹೋರಾಟ ದಾಖಲಿಸಿದ್ದಾರೆ. ಅಷ್ಟಾಗಿಯೂ ಈಗ ದೇಶಾದ್ಯಂತ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ಸಂದರ್ಭದಲ್ಲಿ ಅವರ ನಿಲುವೇನು ಅನ್ನೋದು ಜನ ಸಾಮಾನ್ಯರಲ್ಲಿರುವ ಕುತೂಹಲದ ಪ್ರಶ್ನೆ.

Categories
ಸಿನಿ ಸುದ್ದಿ

ಶ್ರೀನಗರ ಕಿಟ್ಟಿ ಈಗ ವಿಲನ್‌ , ಬುದ್ಧಿವಂತನ ಎದುರು ತೊಡೆ ತಟ್ಟಿ ನಿಂತನೆ ಗಾಳಿ ಸೀನ ?

ಇದು ಉಪ್ಪಿ- ಕಿಟ್ಟಿ ಜುಗಲ್ ಬಂದಿ

ನಟ ಶ್ರೀನಗರ ಕಿಟ್ಟಿ ಈಗ ಹೊಸ ಅವತಾರಕ್ಕೆ ರೆಡಿ ಆಗಿದ್ದಾರೆ. ಬೆಳ್ಳಿತೆರೆಯಲ್ಲಿ ಅವರು ಹೀರೋ ಆಗಿ ಮಿಂಚಿದವರು. ಆದರೆ ಈಗ ಆ ಬಾರ್ಡರ್‌ ದಾಟಿಯೂ ವಿಲನ್‌ ಆಗಿ ಅಬ್ಬರಿಸಲು ಮುಂದಾಗಿದ್ದಾರೆ. ಹಾಗಂತ ಇವರಿಗೂ ಅವರೇನು ಹೀರೋ ಲೈನ್‌ ಕ್ರಾಸ್‌ ಮಾಡಿಲ್ಲ ಅಂತಲ್ಲ. ಈಗಾಗಲೇ ʼಬಾಲ್‌ಪೆನ್‌ʼ,ʼ ಸಿಂಪಾಲ್ಲಾಗಿ ಒಂದ್‌ ಲವ್‌ ಸ್ಟೋರಿʼ, ʼಭಜರಂಗಿʼ ಹಾಗೂ ʼನನ್‌ ಲೈಪ್‌ ಅಲ್ಲಿʼ ಎನ್ನುವ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ನಿಮಗೂ ಗೊತ್ತು. ಅಷ್ಟೇ ಯಾಕೆ, ಈಗ ಶರಣ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಅವತಾರ ಪುರುಷʼ ಹಾಗೂ ʼಗರುಡʼ ಚಿತ್ರಗಳಲ್ಲೂ ಅವರದ್ದು ಗೆಸ್ಟ್‌ ಅಫೀರಿಯನ್ಸ್ ಇದೆ. ಇಷ್ಟಾಗಿಯೂ ಈಗವರು ಹೀರೋಗಿರಿ ಕ್ರಾಸ್‌ ಮಾಡಿ ಬಣ್ಣ ಹಚ್ಚುತ್ತಿರುವುದು ವಿಲನ್‌ ಪಾತ್ರಕ್ಕೆ. ಅದರಲ್ಲೂ ರಿಯಲ್‌ ಸ್ಟಾರ್‌ ಉಪೇಂದ್ರ ಎದುರು. ಹಾಗೆಯೇ ಅವರು ವಿಲನ್‌ ಆಗಿರುವುದು ಫಸ್ಟ್‌ ಟೈಮ್.‌

ಯಾವುದು ಆ ಚಿತ್ರ?

ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ಚಿತ್ರಗಳ ಪೈಕಿ ಈಗ ಹೆಚ್ಚು ಸುದ್ದಿಯಲ್ಲಿರುವ ಚಿತ್ರಗಳಂದ್ರೆ ʼಕಬ್ಜʼ ಹಾಗೂʼ ಬುದ್ಧಿವಂತ 2ʼ. ಇವೆರೆಡು ಚಿತ್ರಗಳ ಪೈಕಿ ʼಬುದ್ಧಿವಂತ 2′ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದ ಚಿತ್ರ. ʼಬುದ್ಧಿವಂತʼ ಉಪೇಂದ್ರ ಅವರ ಸಿನಿ ಜರ್ನಿಯ ಸ್ಪೆಷಲ್ ಚಿತ್ರ. ಕನ್ನಡದ ಬ್ಲಾಕ್‌ ಬಸ್ಟರ್‌ ಚಿತ್ರವೂ ಹೌದು. ಕತೆ, ಚಿತ್ರಕತೆ ಎನ್ನುವುದಕ್ಕಿಂತ ಅವರ ವಿಶಿಷ್ಟ ಮ್ಯಾನರಿಸಂ ಹಾಗೂ ಕಿಕ್‌ ನೀಡುವ ಡೈಲಾಗ್‌ ಮೂಲಕವೇ ಸಖತ್‌ ಹಿಟ್‌ ಆಗಿದ್ದು ಇತಿಹಾಸ. ಅದರ ‘ ಪಾರ್ಟ್‌ 2’ ಈಗ ʼಬುದ್ಧಿವಂತ 2ʼ ಹೆಸರಲ್ಲಿ ಬರುತ್ತಿರುವುದು ಹಳೇ ಸುದ್ದಿ.

ಕಿಟ್ಟಿ ಕರೆತಂದರು ಜಯರಾಂ..

ಕ್ರೆಸ್ಟಲ್‌ ಪಾರ್ಕ್‌ ಪ್ರೊಡಕ್ಷನ್ ಮೂಲಕ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿರುವ ಚಿತ್ರ ಇದು. ಇದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿರುವವರು ಕ್ರಿಯೇಟಿವ್ ಯಂಗ್ ಡೈರೆಕ್ಟರ್ ಜಯರಾಂ ಭದ್ರಾವತಿ.ಇವರಿಗಿದು ಎರಡನೇ ಚಿತ್ರ. ಅದಕ್ಕೂ ಮೊದಲು ʼಚೆರಿʼ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಆರ್.‌ ಚಂದ್ರು ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಉಪೇಂದ್ರ ಅಭಿನಯದ ‘ಬ್ರಹ್ಮ’ ಚಿತ್ರಕ್ಕೂ ಜಯರಾಂ ಸಹಾಯಕ ನಿರ್ದೇಶಕರಾಗಿದ್ದರು. ಅದೇ ನಂಟಿನ ಮೂಲಕ ‘ಬುದ್ಧಿವಂತ 2’ ನಲ್ಲಿ ಉಪ್ಪಿಗೆ ಜೋಡಿಯಾಗಿರುವ ಜಯರಾಂ ಈಗ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಕನ್ನಡದ ಮತ್ತೊಬ್ಬ ಸ್ಟಾರ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರೇ ಶ್ರೀನಗರ ಕಿಟ್ಟಿ.ಅವರಿಲ್ಲಿ ವಿಲನ್!

ವಿಲನ್ ಅನ್ನೋದು ನಿಜ,ಆದರೆ…?

ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿಅವರದ್ದು ವಿಲನ್‌ ಪಾತ್ರ.
ಸದ್ಯಕ್ಕೆ‌ಇದಿಷ್ಟೇ ಗೊತ್ತಾಗಿರುವ ವಿಚಾರ. ಉಳಿದಂತೆ ಆ ಪಾತ್ರದ ವಿವರ ಇನ್ನು ಬಹಿರಂಗವಾಗಿಲ್ಲ. ಆದರೆ ಫಸ್ಟ್ ಲುಕ್ ಹೊರ ಬಿದಿದ್ದೆ. ಸಖತ್ ಗಡ್ಡ ದಾರಿಯಾಗಿರುವ ಕಿಟ್ಟಿ, ದೊಡ್ಡ ಗ್ಯಾಂಗ್ ಸ್ಟರ್ ಅಂತೆ.ಈ ಬಗ್ಗೆ ನಿರ್ದೇಶಕ ಜಯರಾಂ ಹೇಳುವುದಿಷ್ಟು ; ಅವರದ್ದು ಇಲ್ಲಿ ಒಂದು ವಿಲನ್ ಲುಕ್. ಅವರ ಕರಿಯರ್ ನಲ್ಲೇ ಒಂದು ಪ್ರಮುಖ ಪಾತ್ರ. ಸದ್ಯಕ್ಕೆ ಆ ಪಾತ್ರದ ಡಿಟೈಲ್ಸ್ ಬೇಡ. ಮುಂದೆ ಅವರೇ ಎಲ್ಲವನ್ನು ರಿವೀಲ್ ಮಾಡಲಿದ್ದಾರೆ. ಆದರೆ ಇಲ್ಲಿ ಉಪ್ಪೇಂದ್ರ ಹಾಗೂ ಶ್ರೀನಗರ ಕಿಟ್ಟಿ ಅವರ ಜುಗಲ್ ಬಂಧಿಯೇ ಅದ್ಬುತವಾಗಿದೆ. ಇಬ್ಬರ ಫ್ಯಾನ್ಸ್ ಗೂ ಹಬ್ಬವೇ’

ಇನ್ನೇರಡು ದಿನಗಳ ಶೂಟ್ ಬಾಕಿ…

‘ಬುದ್ಧಿವಂತ 2’ ಶುರುವಾಗಿದ್ದೇ 2020 ಕ್ಕೂ ಮೊದಲು. ಅಲ್ಲಿಂದ‌ 2020 ಮಾರ್ಚ್ ಹೊತ್ತಿಗೆ ಒಂದಷ್ಟು ಚಿತ್ರೀಕರಣ ಕೂಡ ಪೂರೈಸಿತ್ತು. ಶಿವಮೊಗ್ಗ ಜೈಲಿನಲ್ಲಿ ಅದ್ಭುತವಾದ ಸನ್ನಿವೇಶಗಳಿಗೆ ಶೂಟಿಂಗ್ ಮುಗಿಸಿಕೊಂಡು ಬಂದಿತ್ತು ಚಿತ್ರ ತಂ‌ಡ. ಅಲ್ಲಿಂದ ಕೊರೋನಾ ಬಂತು, ಚಿತ್ರೀಕರಣವನ್ನು ಸ್ಥಗಿತಗೊಂಡಿತ್ತು.‌ಮತ್ತೆ ಚಿತ್ರೀಕರಣ ಶುರು ಮಾಡಿ, ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇದರಲ್ಲಿ ಶ್ರೀನಗರ ಕಿಟ್ಟಿ ಕೂಡ ಬಹುತೇಕ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಇನ್ನೇರೆಡು ದಿನ ಮಾತ್ರ ಶೂಟಿಂಗ್ ಬಾಕಿ ಇದೆಯಂತೆ. ಇಷ್ಟರಲ್ಲಿಯೇ ಅದು ಕೂಡ ಕಂಪ್ಲೀಟ್ ಆಗಲಿದೆಯಂತೆ. ಅಲ್ಲಿಂದ ಎಲ್ಲವೂ ಅಂದುಕೊಂಡಂತದರೆ, ಶೀಘ್ರವೇ ಚಿತ್ರ ತೆರೆಗೆ ಬರಲಿದೆಯಂತೆ.

Categories
ಸಿನಿ ಸುದ್ದಿ

ರಿಹಾನಾ ನಂತರ ತಾಪಸಿ ಕೊಟ್ಟರು ಟ್ವೀಟ್‌ ಏಟು !

ತಾಪ್ಸಿ ಪನ್ನು ಟ್ವಿಟ್‌ ಗೆ ಕಂಗನಾ ಕಂಗಾಲು, ಬಾಲಿವುಡ್‌ನಲ್ಲಿ ಶುರುವಾಗುತ್ತಾ ಸ್ಟಾರ್‌ ವಾರ್‌ ?

ಬಾಲಿವುಡ್‌ ನಟಿ ತಾಪ್ಸಿ ಪನ್ನು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕಂಗನಾ ವಿವಾದಾತ್ಮಕ ಹೇಳಿಕೆಯಲ್ಲೂ ಪನ್ನು ಸಾಕಷ್ಟು ಸುದ್ದಿಲ್ಲಿದ್ದರು. ಈಗ ಜಾತಿಕವಾಗಿ ಸುದ್ದಿಯಾದ ಭಾರತೀಯ ರೈತರ ಪ್ರತಿಭಟನೆಯ ವಿಚಾರದಲ್ಲಿ ತಾಪ್ಸಿ ಪನ್ನು ಹೆಸರು ಚಾಲ್ತಿಗೆ ಬಂದಿದೆ. ಮತ್ತೆ ಕಂಗನಾ ಹಾಗೂ ತಾಪ್ಸಿ ನಡುವೆ ಸಮರ ಸುರುವಾಗುವ ಸಾಧ್ಯತೆಗಳು ಕಾಣುತ್ತಿವೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ತಾಪಸಿ ಪನ್ನು ಮಾಡಿರುವ ಟ್ವೀಟ್‌ ಬಾಲಿವುಡ್ ಘಟಾನಿಘಟಿಗಳ ಕೆನ್ನೆಗೆ ಭಾರಿಸಿದಂತಿದೆ. ಅವರ ಟ್ವೀಟ್‌ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಪಾಪ್‌ಸ್ಟಾರ್ ರಿಹಾನಾರ ಟ್ವೀಟ್‌ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಸರಿಯಷ್ಟೆ. ಆಕೆಯ ಟ್ವೀಟ್‌ ಹಿಂದೆ ಆಂತಾರಾಷ್ಟ್ರೀಯ ತಾರೆಯರ ಮತ್ತಷ್ಟು ಟ್ವೀಟ್‌ಗಳು ದಾಖಲಾದವು. ಅಲ್ಲಿಯವರೆಗೆ ಸುಮ್ಮನಿದ್ದ ಬಾಲಿವುಡ್‌ ತಾರೆಯರು ಅದೊಂದು ಟ್ವೀಟ್‌ ನಂತರ ನಿದ್ದೆಯಿಂದ ಎದ್ದಂತೆ ಪ್ರತಿಕ್ರಿಯಿಸಿದ್ದರು. ಗಾಯಕಿ ರಿಹಾನಾ ಟ್ರ್ಯಾಕ್ಟರ್‌ ಪ್ರತಿಭಟನೆಯ ಫೋಟೋ ಹಾಕಿ, “ನಾವೇಕೆ ಈ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಟ್ವೀಟ್ ನಂತರ ಬಾಲಿವುಡ್‌ ತಾರೆಯರ ಸರಣಿ ಟ್ವೀಟ್‌ಗಳು ಕಾಣಿಸಿಕೊಳ್ಳತೊಡಗಿವೆ.

ಬಾಲಿವುಡ್‌ ಸ್ಟಾರ್‌ಗಳಾದ ಅಕ್ಷಯ್‌ ಕುಮಾರ್‌, ಅಜಯ್ ದೇವಗನ್‌, ಸುನೀಲ್ ಶೆಟ್ಟಿ, ಚಿತ್ರನಿರ್ದೇಶಕ ಕರಣ್ ಜೋಹರ್‌, ಗಾಯಕಿ ಲತಾ ಮಂಗೇಶ್ಕರ್‌ ಸೇರಿದಂತೆ ಹತ್ತಾರು ಬಾಲಿವುಡ್ ಸೆಲೆಬ್ರಿಟಿಗಳು ‘#IndiaTogether, #IndiaAgainstPropaganda’ ಆಶ್ ಟ್ಯಾಗ್‌ನಡಿ ಟ್ವೀಟ್ ಮಾಡತೊಡಗಿದ್ದಾರೆ. “ಸುಳ್ಳು ಸುದ್ದಿ, ಮಾಹಿತಿಗೆ ಬಲಿಯಾಗದೆ ನಾವೆಲ್ಲರೂ ಭಾರತೀಯರಾಗಿ ಒಗ್ಗಟ್ಟಾಗಿ ನಿಲ್ಲೋಣ. ನಮ್ಮಲ್ಲೇ ಗೊಂದಲ ಬೇಡ” ಎನ್ನುವ ಅರ್ಥದಲ್ಲಿದ್ದವು ಈ ಎಲ್ಲಾ ಟ್ವೀಟ್‌ಗಳು. ಅಚ್ಚರಿಯೆಂದರೆ ಬಾಲಿವುಡ್‌ ಹಾಗೂ ಕ್ರೀಡಾರಂಗದ ತಾರೆಯರ ಕೆಲವು ಟ್ವೀಟ್‌ಗಳು ಒಂದೇ ರೀತಿಯ ಒಕ್ಕಣಿ ಹೊಂದಿದ್ದವು! ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೂ ಟೀಕೆ ವ್ಯಕ್ತವಾಗುತ್ತಿದೆ.

ಈ ಮಧ್ಯೆ ನಟಿ ತಾಪಸಿ ಪನ್ನು ಟ್ವೀಟಿಸಿದ ಬಾಲಿವುಡ್ ತಾರೆಯರಿಗೆ ಬಿಸಿಮುಟ್ಟಿಸುವಂತಹ ಒಂದು ಟ್ವೀಟ್ ಮಾಡಿದ್ದಾರೆ. “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರ ಪ್ರೊಪಗಾಂಡಾ ಪಾಠ ಮಾಡಲು ಬರಬೇಡಿ” ಎನ್ನುವ ತಾಪ್ಸಿ ಟ್ವೀಟ್‌ ಬಾಲಿವುಡ್‌ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದೆ. ನಟಿಯ ದಿಟ್ಟತನಕ್ಕೆ ಮೆಚ್ಚುಗೆ ಜೊತೆ ಈರ್ಷ್ಯೆಯೂ ವ್ಯಕ್ತವಾಗುತ್ತಿದೆ.

ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದಡ್ಲಾನಿ ಕೂಡ ರೈತರ ಪರ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ‘#FarmersProtest, #TheWorldIsWatching’ ಆಶ್ ಟ್ಯಾಗ್‌ನಡಿ ಅವರು “ಹೋಲೋಕಾಸ್ಟ್‌ ಹತ್ಯಾಕಾಂಡವನ್ನು ಹಿಟ್ಲರ್ ಆಂತರಿಕ ವಿಷಯ ಎಂದು ಸಮರ್ಥಿಸಿಕೊಂಡರೆ?” ಎನ್ನುವ ಒಕ್ಕಣಿಯ ಪ್ರಶ್ನೆ ಎಸದಿದ್ದರು. ಇದೀಗ ತಾಪ್ಸಿ ಟ್ವೀಟ್‌ನಿಂದ ಕುಪಿತರಾಗಿರುವ ನಟಿ ಕಂಗನಾ ರನಾವತ್‌, ಅವರನ್ನು ಬಿ ಗ್ರೇಡ್ ನಟಿ ಎಂದು ಕರೆದು ಟ್ವೀಟ್ ಮಾಡಿ ದೇಶದ ಐಕ್ಯತೆ ಕುರಿತಂತೆ ಚರ್ಚಿಸತೊಡಗಿದ್ದಾರೆ. ಇದಕ್ಕೆ ತಾಪ್ಸಿ ಕಡೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ಸದ್ಯ ಟ್ವೀಟ್ ಸಮರ ಜಾರಿಯಲ್ಲಿದ್ದು, ಇದು ಹೇಗೆ ತಾರ್ಕಿಕ ಅಂತ್ಯ ಕಾಣುತ್ತದೆ ಎನ್ನುವುದನ್ನು ನೋಡಬೇಕಿದೆ.

Categories
ಸಿನಿ ಸುದ್ದಿ

ಆ ದಿನಗಳತ್ತ ಮರಳಿದ ಕನ್ನಡ ಚಿತ್ರರಂಗ… ದೊಡ್ಡ ಮಂದಹಾಸ ಬೀರಿದ ಸಿನಿಮಾ ಪ್ರೇಮಿ

ಈ ವಾರ ತೆರೆಗೆ ಮೂರು ಮತ್ತೊಂದು

ಅಂತೂ ಇಂತೂ ಆ ದಿನಗಳು ಮರುಕಳಿಸುತ್ತಿವೆ. ಹೌದು, ಇದು ಪುಟಿದೇಳುತ್ತಿರುವ ಸ್ಯಾಂಡಲ್‌ವುಡ್‌ ವಿಷಯ. ಇಲ್ಲೀಗ ಹೇಳಹೊರಟಿರೋದು ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಬಗ್ಗೆ. ಕೊರೊನಾ ಹಾವಳಿಗೆ ತತ್ತರಿಸಿದ್ದ ಕನ್ನಡ ಸಿನಿಮಾ ರಂಗ ಮತ್ತು ಸಿನಿ ಮಂದಿ ಮೊಗದಲ್ಲೀಗ ಮಂದಹಾಸ ಬೀರಿದೆ. ಇದಕ್ಕೆ ಕಾರಣ, ಸಾಲು ಸಾಲು ಸಿನಿಮಾಗಳ ಬಿಡುಗಡೆ. ಕಳೆದ ವರ್ಷ ವಾರಕ್ಕೆ ಎಂಟು, ಹತ್ತು ಸಿನಿಮಾಗಳ ಬಿಡುಗಡೆಯನ್ನು ಕಂಡಿದ್ದ ಚಿತ್ರರಂಗಕ್ಕೆ ಕೊರೊನೊ ದೊಡ್ಡ ಹೊಡೆತ ಕೊಟ್ಟಿತ್ತು.

ಅಲ್ಲಿಂದ ಸತತ ಹತ್ತು ತಿಂಗಳ ಕಾಲ ಚಿತ್ರರಂಗ ಚೈತನ್ಯ ಕಳೆದುಕೊಂಡಿದ್ದು ನಿಜ. ಈಗ ಎಲ್ಲಾ ಸಮಸ್ಯೆಯಿಂದಲೂ ಹೊರಬಂದಿದೆ. ಕೇಂದ್ರ ಸರ್ಕಾರ ಕೂಡ ಶೇ.೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಸ್ಟಾರ್‌ ಸಿನಿಮಾಗಳೂ ಈಗ ಬಿಡುಗಡೆ ತಯಾರಿ ಮಾಡಿಕೊಂಡಿವೆ. ಎಂದಿನಂತೆ ಚಿತ್ರರಂಗ ಶೈನ್‌ ಆಗುತ್ತಿದೆ. ಈ ವಾರ (ಫೆ.೫) ರಾಜ್ಯಾದ್ಯಂತ ನಾಲು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಕನ್ನಡ ಚಿತ್ರರಂಗ ಪುನಃ ಆ ದಿನಗಳತ್ತ ಮರಳಿರುವುದು ಸಹಜವಾಗಿಯೇ ಕನ್ನಡ ಚಿತ್ರರಂಗದ ಜನರಿಗೆ ಖುಷಿಕೊಟ್ಟಿದೆ.

ಕೊರೊನಾ ಹಾವಳಿ ಕೊಂಚ ಕಮ್ಮಿಯಾಗುತ್ತಿದ್ದಂತೆಯೇ, ಮೆಲ್ಲನೆ ಒಂದೊಂದೇ ಚಿತ್ರಗಳು ಚಿತ್ರಮಂದಿರ ಕಡೆ ವಾಲಿದವು. ಈಗ ಬಿಡುಗಡೆಯ ಸಂಖ್ಯೆಯಲ್ಲೂ ಚೇತರಿಕೆ ಕಂಡಿದೆ. ಈ ವಾರ ನಾಲ್ಕು ಹೊಸ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಆ ನಾಲ್ಕು ಚಿತ್ರಗಳ ಪೈಕಿ ನಟ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೋ” ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ವಿನೋದ್‌ ಪ್ರಭಾಕರ್‌ ಅವರು ಈ ವರ್ಷ ತಮ್ಮ ಖಾತೆ ಆರಂಭಿಸುತ್ತಿದ್ದಾರೆ.

ಈ ಚಿತ್ರವನ್ನು ರವಿಗೌಡ ನಿರ್ದೇಶಿಸಿದ್ದಾರೆ. ಶೋಭಿತಾ ರಾಣಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಚ್ಚು ಅವರ ಸಂಗೀತವಿದೆ. ಮನೋಹರ್ ಜೋಶಿ ಛಾಯಾಗ್ರಹಣವಿದೆ. ಛೋಟಾ ಕೆ ಪ್ರಸಾದ್ ಸಂಕಲನ ಹಾಗೂ ವಿನೋದ್ ಅವರ ಸಾಹಸವಿದೆ. ಚಕ್ರವರ್ತಿ ಸಿ.ಹೆಚ್‌ ಈ ಚಿತ್ರದ ನಿರ್ಮಾಪಕರು. ಶರತ್ ಲೋಹಿತಾಶ್ವ, ಶ್ರೀಗಿರಿ, ಗಿರಿಶಾಮ್, ಸತ್ಯದೇವ್, ಸಿರಿ ಇತರರು ನಟಿಸಿದ್ದಾರೆ.

ಇನ್ನು, ಇವರೊಂದಿಗೆ ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಚಿತ್ರ ಕೂಡ ತೆರೆಗೆ ಬರುತ್ತಿದೆ. “ಬಿಗ್ ಬಾಸ್” ಖ್ಯಾತಿಯ ಚಂದನ್ ಆಚಾರ್ ಅವರ  ‘ಮಂಗಳವಾರ ರಜಾದಿನ’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಇದೊಂದು ಕ್ಷೌರಿಕನ ಸುತ್ತ ಹೆಣೆದ ಕಥೆಯಾಗಿದ್ದು, ಒಂದೊಳ್ಳೆಯ ಮನರಂಜನೆಗೆ ಇಲ್ಲಿ ಕಮ್ಮಿ ಇಲ್ಲ ಎಂಬುದು ತಂಡದ ಮಾತು. ಚಂದನ್ ಆಚಾರ್ ಅವರೊಂದಿಗೆ ಲಾಸ್ಯ ನಾಗರಾಜ್, ಜಹಾಂಗೀರ್, ಹರಿಣಿ ಮತ್ತು ರಜನಿಕಾಂತ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹೊಸಬರು ನಟಿಸಿರುವ ಮಾಂಜ್ರಾ ಎಂಬ ಸಿನಿಮಾನೂ ಈ ವಾರ ತೆರೆಗೆ ಬರುತ್ತಿದೆ.

Categories
ಸಿನಿ ಸುದ್ದಿ

ಹೇಳಿಕೆ ಕೊಟ್ಟು , ವಿಲನ್‌ ಆದ್ರೂ ಹೆಲ್ತ್‌ ಮಿನಿಸ್ಟರ್

ಸಿಎಂ ಮಾತಿಗೆ ಮಾರುತ್ತರ ನೀಡದೆ ಮುಖಭಂಗ ಅನುಭವಿಸಿದರು ಸಚಿವ ಡಾ. ಸುಧಾಕರ್‌ !

ಚಿತ್ರಮಂದಿರಗಳಲ್ಲಿನ ಶೇಕಡಾ ನೂರರಷ್ಟು ಸೀಟು ಭರ್ತಿ ವಿಷಯದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಬುಧವಾರ ನಿಜಕ್ಕೂ ಮುಖಭಂಗ ಅನುಭವಿಸಿದರು. ನೂರರಷ್ಟು ಭರ್ತಿಗೆ ಅವಕಾಶ ನೀಡುವಂತೆ ಸ್ಯಾಂಡಲ್ವುಡ್‌ ಬುಧವಾರ ಮುಂಜಾನೆಯಿಂದಲೇ ಆರಂಭಿಸಿದ್ದ ಸೋಷಲ್‌ ಮೀಡಿಯಾ ಆಭಿಯಾನಕ್ಕೆ ಮಧ್ಯಾಹ್ನ ಸುಧಾಕರ್‌ ವಿಧಾನ ಸೌಧದಲ್ಲೇ ಪ್ರತಿಕ್ರಿಯೆ ನೀಡಿದ್ದರು. ಅವರ ಹೇಳಿಕೆಯೇ ವಿಚಿತ್ರವಾಗಿತ್ತು. ಸಿಎಂ ಜೊತೆ ಮಾತುಕತೆ ನಡೆಸಿ, ಆ ಹೇಳಿಕೆ ನೀಡಿದ್ದರೂ ಅಥವಾ ತಾವೇ ಸ್ವ ಇಚ್ಚೆಯಿಂದ ಈ ಹೇಳಿಕೆ ನೀಡಿದ್ದರೂ ಗೊತ್ತಿಲ್ಲ. ʼಮನರಂಜನೆಗಿಂತ ತಮಗೆ ಜನರ ಆರೋಗ್ಯ ಮುಖ್ಯʼಎನ್ನುವ ಮಾತುಗಳನ್ನು ತೀರಾ ವ್ಯಂಗ್ಯದ ಧ್ವನಿಯಲ್ಲೇ ನೀಡಿದ್ದರು. ಆದರೆ ಆ ಹೇಳಿಕೆ ಗೆ ಸ್ಯಾಂಡಲ್‌ ವುಡ್‌ ಜತೆಗೆ ಅಧಿವೇಶನದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್‌ ವಿಲನ್‌ ಸ್ಥಾನದಲ್ಲಿ ನಿಂತರು.


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿಯೇ ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡರು. ಮತ್ತೊಂದೆಡೆ ಚಿತ್ರರಂಗ ಸಿಟ್ಟಾಗಿ ಕುಳಿತಿತು. ಈ ಬೆಳವಣಿಗೆಗಳ ಬೆನ್ನಲೇ ಸಿಎಂ ಯುಡಿಯೂರಪ್ಪ ಎಚ್ಚೆತ್ತುಕೊಂಡರು. ಉರಿಯುವ ಬೆಂಕಿಗೆ ಸಿಲುಕಬಹುದೆನ್ನುವ ಸೂಚನೆ ಸಿಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್‌ ಗೆ ಕ್ಲಾಸ್‌ ತೆಗೆದುಕೊಂಡರು. ತಕ್ಷಣವೇ ಚಿತ್ರರಂಗದ ಗಣ್ಯರ ಜತೆ ಸಭೆ ನಡೆಸಿ, ಷರತ್ತು ಬದ್ಧ ಅವಕಾಶ ನೀಡಲು ಕ್ರಮ ಕೈಗೊಳ್ಳಿ ಅಂತ ಕಿವಿ ಹಿಂಡಿದರು.

ಇದಾಗುತ್ತಿದ್ದಂತೆ ತೀವ್ರ ಮುಖಭಂಗ ಅನುಭವಿಸಿದ ಸುಧಾಕರ್‌, ತಕ್ಷಣವೇ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಿತ್ರರಂಗದವರ ಜತೆಗೆ ಸಭೆ ನಡೆಸಿದರು. ಚಿತ್ರೋದ್ಯಮದ ಪರಿಸ್ಥಿತಿ ಅವಲೋಕಿಸಿ, ಅವಕಾಶ ಕೊಡುವುದಾಗಿ ಹೇಳಿದರು. ಒಟ್ಟಾರೆ ಪೂರ್ವಾಲೋಚನೆ ಇಲ್ಲದೆ ಸುಧಾಕರ್‌ , ಒಂದು ಹೇಳಿಕೆ ಕೊಟ್ಟು ಆಮೇಲೆ ಮುಖಭಂಗ ಅನುಭವಿಸಬೇಕಾಗಿ ಬಂತು.

Categories
ಸಿನಿ ಸುದ್ದಿ

ಸ್ಯಾಂಡಲ್‌ವುಡ್‌ಗೆ ಮಣಿದ ಸರ್ಕಾರ -ಶೇ.100 ಸೀಟು ಭರ್ತಿಗೆ ಸಿಕ್ತು ಷರತ್ತುಬದ್ಧ ಅವಕಾಶ

ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರವೇ ವಿಲನ್‌ ಆಯ್ತಾ?
– ಇಂಥದ್ದೊಂದು ಪ್ರಶ್ನೆ ಎಲ್ಲರಿಗೂ ಕಾಡಿದ್ದು ನಿಜ. ಅದಕ್ಕೆ ಕಾರಣ, ಕೇಂದ್ರ ಸರ್ಕಾರದ ಅದೇಶವನ್ನು ಮಾರ್ಪಡಿಸಿದ್ದು. ಹೌದು, ಕೇಂದ್ರ ಸರ್ಕಾರ ಚಿತ್ರಮಂದಿರಗಳ ಆಸನಗಳಿಗೆ ನೂರರಷ್ಟು ಅನುಮತಿ ಕೊಟ್ಟರೂ, ರಾಜ್ಯ ಸರ್ಕಾರ ಮಾತ್ರ ಶೇ.50ರಷ್ಟು ಅನುಮತಿ ನೀಡಿದೆ. ಇದಕ್ಕೆ ಚಿತ್ರೋದ್ಯಮ ಸಂಪೂರ್ಣ ವಿರೋಧ ವ್ಯಕ್ತಪಡಿಸಿತ್ತು. ಇಡೀ ಚಿತ್ರರಂಗದ ಸ್ಟಾರ್‌ ನಟರು ತಮ್ಮ ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿ, ಆಕ್ರೋಶಪಟ್ಟಿದ್ದರು. ಈ ಬೆಳವಣಿಗೆ ಕಾಣುತ್ತಿದ್ದಂತೆಯೇ, ಎಚ್ಚೆತ್ತ ರಾಜ್ಯ ಸರ್ಕಾರ ಚಿತ್ರೋದ್ಯಮದ ಜೊತೆ ಸಭೆ ನಡೆಸಿ, ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದೆ.

ನಟ ಶಿವರಾಜಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ಸಚಿವ ಸುಧಾಕರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ, ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸಲು ಈಗಾಗಲೇ ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ಅದೇಶವನ್ನೇ ಮಾರ್ಪಡಿಸಿ, ಶೇ.50ರಷ್ಟು ಆಸನಗಳಿಗೆ ಮಾತ್ರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಸ್ಟಾರ್‌ ನಟರು ಟ್ವೀಟ್‌ ಮೂಲಕ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಸಂಜೆಯ ವೇಳೆಗೆ ಎಲ್ಲೆಡೆಯಿಂದಲೂ ವಿರೋಧ ಹೆಚ್ಚಾಗುತ್ತಿದ್ದಂತೆಯೇ, ಶಿವರಾಜಕುಮಾರ್‌ ಅವರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಅಕಾಡೆಮಿ ಸಮಿತಿ ಸದಸ್ಯರು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ, ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸುವಂತೆ ಹೇಳಲಾಗಿದೆ.


ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್‌, “ಚಿತ್ರರಂಗದ ಹಿರಿಯ ನಟ ಶಿವರಾಜಕುಮಾರ್‌, ಸಾ.ರಾ.ಗೋವಿಂದು, ಚೇಂಬರ್‌ ಅಧ್ಯಕ್ಷ ಜೈರಾಜ್‌, ತಾರಾ, ಅಕಾಡೆಮಿ ಮೂಲಕ ಸುನೀಲ್‌ ಪುರಾಣಿಕ್ ಜೊತೆ ಚರ್ಚಿಸಿದ್ದೇನೆ. ಸಿಎಂ ಸಲಹೆ ಮೇರೆಗೆ ನಡೆಸಿದ ಸಭೆಯಲ್ಲಿ ನಾವು ಒಂದಷ್ಟು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂದೆ ಮಾರ್ಗಸೂಚಿಯಲ್ಲಿ ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಶೇ.100ರಷ್ಟು ತುಂಬಿಸುವ ಅವಕಾಶವಿದೆ. ಆದರೆ, ಆಯಾ ರಾಜ್ಯಗಳು ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಿ ಎಂದಿದ್ದರು. ಹಾಗಾಗಿ ನಾವು ಶೇ.50ರಷ್ಟು ಅನುಮತಿ ನೀಡಿದ್ದೆವು. ಆದರೆ, ಸ್ಯಾಂಡಲ್‌ವುಡ್‌ ಮನವಿ ಮಾಡಿದೆ. ಕಾರ್ಮಿಕರು, ಒಕ್ಕೂಟ, ನಟರು, ತಾಂತ್ರಿಕ ವರ್ಗದವರು ಸಮಸ್ಯೆಯಲ್ಲಿದ್ದಾರೆ.

ಸರ್ಕಾರ ನಮ್ಮ ಜೊತೆ ಇರಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸೂಚನೆಯಂತೆ ನಾವು ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚನೆಯಂತೆ, ನಾಲ್ಕು ವಾರಗಳವರೆಗೆ ಶೇ.100ರಷ್ಟು ಆಸನಗಳು ಭರ್ತಿಗೆ ಅನುಮತಿ ನೀಡಲಾಗಿದೆ. ಆದರೆ ಕಠಿಣ ಮಾರ್ಗಸೂಚನೆಗಳನ್ನು ಆದೇಶದಲ್ಲಿ ಹೊರಡಿಸಲಿದ್ದಾರೆ. ಜನರು ಇದನ್ನು ಅಳವಡಿಸಬೇಕು. ಜರೂರಾಗಿ ಸ್ವೀಕರಿಸಬೇಕು. ಚಿತ್ರಮಂದಿರಗಳ ಮಾಲೀಕರು ಕೂಡ ನಿಯಂತ್ರಣ ಮಾಡಲು ಸರ್ಕಾರದ ಜೊತೆ ಕೈ ಜೋಡಿಸಬೇಕು. ಮಂದಿರಗಳ ಕಾರಣದಿಂದ ನಾಲ್ಕು ವಾರಗಳಲ್ಲಿ ಸೋಂಕು ತಗುಲಿದರೆ, ಪುನಃ ನಮ್ಮ ನಿರ್ಧಾರ ಬದಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದೇವೆ ಎಂದು ವಿವರಿಸಿದ್ದಾರೆ.
ಅಧಿಕಾರಿಗಳು ಮಾರ್ಗಸೂಚಿ ಕುರಿತಂತೆ ನನಗೆ ಹಾಗೂ ಸಿಎಂ ಅವರಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಗೊಂದಲ ಆಗಿದೆ. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದ್ದರಿಂದಲೇ ಸರ್ಕಾರ ಇಂದು ಮಣಿದು, ಶೇ.100ರಷ್ಟು ಅವಕಾಶ ಮಾಡಿಕೊಡುವ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದೆ. ಶಿವರಾಜಕುಮಾರ್‌ ನೇತೃತ್ವದ ನಿಯೋಗದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇತರರು ಇದ್ದರು.  ಇದಕ್ಕೂ ಮುನ್ನ ಮಾತನಾಡಿದ್ದ ಶಿವರಾಜಕುಮಾರ್‌, “ಚಿತ್ರರಂಗಕ್ಕೆ ದ್ರೋಹ ಮಾಡಲಾಗುತ್ತಿದೆಯೋ ಏನೋ ಅನಿಸುತ್ತಿದೆ. ಸಾಮಾಜಿಕ ಅಂತರ ಎಲ್ಲಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ಹೇಳಿದರೆ ಹೇಳ್ತೀವಿ ನಮ್ಮ ಸಮಸ್ಯೆ ಸರಿ ಮಾಡುತ್ತಾರೆ ಎಂಬ ಭರವಸೆ” ಇದೆ ಎಂದು ಹೇಳಿದ್ದರು.

Categories
ಸಿನಿ ಸುದ್ದಿ

ಟಾಲಿವುಡ್‌ನಲ್ಲಿ ನಟ ದರ್ಶನ್‌ ಗೆ ಸಿಕ್ಕಿತು ರೆಡ್‌ ಕಾರ್ಪೆಟ್‌ ಸ್ವಾಗತ !

ರಾಬರ್ಟ್‌ ತೆಲುಗು ಫಸ್ಟ್‌ ಲುಕ್‌ ಟೀಸರ್‌ ಗೆ  ಸಖತ್‌ ರೆಸ್ಪಾನ್ಸ್‌ 

 

ನಿರೀಕ್ಷೆಯಂತೆ ಟಾಲಿವುಡ್‌ನಲ್ಲಿ ನಟ ದರ್ಶನ್‌ ಅಬ್ಬರ ಶುರುವಾಗಿದೆ. ಬಹುನಿರೀಕ್ಷಿತ ʼರಾಬರ್ಟ್‌ʼ ಚಿತ್ರದ ತೆಲುಗು ಫಸ್ಟ್‌ ಲುಕ್‌ ಟೀಸರ್‌ ಲಾಂಚ್‌ ಆಗಿದೆ. ಆಕ್ಷನ್‌, ಲುಕ್‌, ಮೇಕಿಂಗ್‌ ಸೇರಿದಂತೆ ಯಾವುದೇ ಭಾಷೆಯ ಅದ್ದೂರಿ ವೆಚ್ಚದ ಸಿನಿಮಾಕ್ಕೇನು ಕಮ್ಮಿ ಇಲ್ಲದಂತೆ ʼರಾಬರ್ಟ್‌ʼ ಟೀಸರ್‌ ಹೊರ ಬಂದಿದೆ. ಇದೇ ಮೊದಲ ಬಾರಿಗೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ದರ್ಶನ್‌ಗೆ ಅಲ್ಲಿ ಭರ್ಜರಿ ವೆಲ್ ಕಮ್‌ ಸಿಕ್ಕಿದೆ. ತೆಲುಗು ಟೀಸರ್‌ ಲಾಂಚ್‌ ಆಗಿ, ಕೆಲವೇ ಗಂಟೆಗಳು ಕಳೆಯುವ ಹೊತ್ತಿಗೆ ಸೋಷಲ್‌ ಮೀಡಿಯಾದಲ್ಲಿ ಅದು ವೈರಲ್‌ ಆಯಿತು. ಟೀಸರ್‌ ಲಾಂಚ್‌ ಆಗಿ ಕೇವಲ 18 ನಿಮಿಷಗಳ ಅವದಿಯಲ್ಲಿ 36 ಸಾವಿರ ವೀಕ್ಷಣೆ ಪಡೆದಿತ್ತು.

ಆದಾದ 1 ಗಂಟೆ ಗೊತ್ತಿಗೆ 3 ಲಕ್ಷ ದಷ್ಟಿತ್ತು. ಅದಕ್ಕೆ ಕಾರಣ ಟೀಸರ್‌ ನಲ್ಲಿ ದರ್ಶನ್‌ ಅಬ್ಬರಿಸಿದ ರೀತಿ. ಆನಂದ್‌ ಆಡಿಯೋದ ಅಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಹೊರ ಬಂದ ಟೀಸರ್‌ ಧೂಳೆಬ್ಬಿಸುತ್ತಿದೆ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಮಾಡೆಲ್‌ ಆಶಾಭಟ್‌ ನಾಯಕಿ ಯಾಗಿ ಕಾಣಸಿಕೊಂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಕನ್ನಡದ ಹಾಡುಗಳು ಈಗಾಗಲೇ ಹಿಟ್​ ಆಗಿವೆ. ಮಾರ್ಚ್‌ 11 ಕ್ಕೆ ಈ ಚಿತ್ರ ದೇಶಾದ್ಯಂತ ಗ್ರಾಂಡ್‌ ಆಗಿ ತೆರೆಗೆ ಬರುತ್ತಿದೆ. ತೆಲುಗಿನಲ್ಲಿ ಡಬ್‌ ಆಗಿ ತೆರೆ ಕಾಣುತ್ತಿದೆ. ಸದ್ಯ ದರ್ಶನ್‌ ಹವಾ ಜೋರಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

Categories
ಸಿನಿ ಸುದ್ದಿ

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ?

ರಾಜ್ಯ ಸರ್ಕಾರದ ವಿರುದ್ಧ ಶ್ರೀಮುರಳಿ ಆಕ್ರೋಶ

ಕೇಂದ್ರ ಸರ್ಕಾರ ಚಿತ್ರಮಂದಿರಗಳಿಗೆ ನೂರರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಮಾತ್ರ ಶೇ.೫೦ರಷ್ಟು ಅನುಮತಿ ಮುಂದುವರೆಸಿದೆ. ಇದು ಸಹಜವಾಗಿಯೇ ಚಿತ್ರರಂಗದವರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಶಿವರಾಜಕುಮಾರ್‌ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್‌ ನಟರುಗಳು ತಮ್ಮ ಟ್ವೀಟ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗೊಂದು ಟ್ವೀಟ್‌ ಅಭಿಯಾನ ಕೂಡ ಶುರುವಾಗಿದೆ. ಅದರ ಬೆನ್ನಲ್ಲೇ,  ನಟ ಶ್ರೀಮುರಳಿ ಅವರು ಕೂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ಮದಗಜ” ಚಿತ್ರದ ಚಿತ್ರೀಕರಣದಲ್ಲಿರುವ ಶ್ರೀಮುರಳಿ ಅವರು, ಚಿತ್ರೀಕರಣ ಸ್ಥಳದಿಂದಲೇ ವಿಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ನೂರರಷ್ಟು ಭರ್ತಿ ಆಸನಗಳಿಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಅವರು ಮಾಡಿರುವ ವಿಡಿಯೋದಲ್ಲಿ “ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ. ಯಾವ ನ್ಯಾಯ ಹೇಳಿ. ಎಲ್ಲರಿಗೂ ನೂರು ಪರ್ಸೆಂಟ್‌ ಕೊಟ್ಟುಬಿಟ್ಟು, ನಮ್ಮ ಇಂಡಸ್ಟ್ರಿಗೆ ಮಾತ್ರ ಶೇ.೫೦ ಕೊಟ್ಟಿದ್ದೀರಿ.

ಇದರಿಂದ ಬಹಳ ಬೇಸರವಿದೆ. ಬಹಳಷ್ಟು ಸಂಸಾರ ಇಂಡಸ್ಟ್ರಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ದಯವಿಟ್ಟು, ಸರ್ಕಾರಕ್ಕೆ ಕೇಳಿಕೊಳ್ಳುತ್ತಿರುವುದೇನೆಂದರೆ ನಿಮ್ಮ ನಿರ್ಧಾರವನ್ನು ಬದಲಿಸಿ, ನೂರು ಆಸನಗಳ ಭರ್ತಿಗೆ ಅವಕಾಶ ಮಾಡಿಕೊಟ್ಟು ನಮ್‌ ಲೈಫ್‌ ಅನ್ನೂ ನಾರ್ಮಲ್‌ ಮಾಡಿಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು, ದಯವಿಟ್ಟು ನಮ್ಮ ಈ ಆಸೆಯನ್ನು ನೆರವೇರಿಸಿಕೊಡಿ ಎಂದು ಇಂಡಸ್ಟ್ರಿ ಪರ ಕೇಳಿಕೊಳ್ಳುತ್ತಿದ್ದೇನೆ.

Categories
ಸಿನಿ ಸುದ್ದಿ

ಸರ್ಕಾರಕ್ಕೆ ಟಾಂಗ್‌ ಕೊಟ್ಟ ಧ್ರುವ ಸರ್ಜಾ

ಬೇರೆಡೆ ಇಲ್ಲದ ಕಾನೂನು ಇಲ್ಲೇಕೆ?

ಎಲ್ಲೆಡೆ ಕೊರೊನಾ ಹಾವಳಿ ಕಮ್ಮಿಯಾಗಿದೆ. ಬಹುತೇಕ ಕ್ಷೇತ್ರಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿವೆ. ಆದರೆ, ಕನ್ನಡ ಚಿತ್ರರಂಗಕ್ಕೆ ಮಾತ್ರ ಇನ್ನೂ ಸರಿಯಾದ ಅನುಮತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟಿದ್ದರೂ, ರಾಜ್ಯ ಸರ್ಕಾರ ಮಾತ್ರ, ಅನುಮತಿ ನೀಡದೆ, ಇನ್ನೂ ಶೇ.೫೦ರಷ್ಟು ಅನುಮತಿಯಲ್ಲೇ ಚಿತ್ರಮಂದಿರಗಳು ಪ್ರದರ್ಶನ ಕೊಡಬೇಕು ಎಂದು ಹೇಳಿದೆ. ಸರ್ಕಾರದ ಈ ನಡೆಯನ್ನು ಇಡೀ ಚಿತ್ರೋದ್ಯಮವೇ ಪ್ರಶ್ನಿಸಿದೆ. ಟ್ವಿಟ್ಟರ್‌ನಲ್ಲಿ ಧ್ರುವ ಸರ್ಜಾ ಕೂಡ ಸ್ಟೇಟಸ್‌ ಹಾಕಿಕೊಳ್ಳುವ ಮೂಲಕ ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದ ನಟ ಧ್ರುವಸರ್ಜಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬೇಸರ ಹೊರಹಾಕಿದ್ದು, ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ.


ಈ ವಿಚಾರದ ಕುರಿತು, ಟ್ವೀಟರ್ ನಲ್ಲಿ ‌ಪೋಸ್ಟ್ ಮಾಡಿರುವ ಇವರು ತನ್ನ ಧೋರಣೆಯನ್ನು ಸಲೀಸಾಗಿ ತೆರೆದಿಟ್ಟಿದ್ದಾರೆ. “ಬಸ್​ನಲ್ಲಿ ಫುಲ್ ರಶ್..! ಮಾರ್ಕೆಟ್​ನಲ್ಲಿ ಗಿಜಿ ಗಿಜಿ ಅಂತ ಜನರು ತುಂಬಿಕೊಂಡಿರುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ..” ಹೀಗೆ ಬರೆದ ಒಂದು ಪೋಸ್ಟ್‌ ಹಾಕಿರುವ ಧ್ರುವ ಸರ್ಜಾ ಅವರಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ಸಿನಿಮಾರಂಗದ ಅನೇಕ ನಟ,ನಟಿಯರು ಕೂಡ ಟ್ವೀಟ್‌ಗೆ ಬೆಂಬಲ ಸೂಚಿಸಿದ್ದಾರೆ. “ಬೇರೆ ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ಸೇರಲು ಅವಕಾಶ ನೀಡಲಾಗಿದೆ ಆದರೆ, ‌ನಮ್ಮ ರಾಜ್ಯದಲ್ಲಿ ಯಾಕೆ ಹೀಗೆ ಎಂದು ಹೇಳಿರುವ ಧ್ರುವ ಸರ್ಜಾ ಅವರ ಮಾತಿಗೆ ಅನೇಕರು ಸಾಥ್‌ ಕೊಟ್ಟಿದ್ದಾರೆ.
ಅಂದಹಾಗೆ, ಫೆ‌.18ರಂದು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೊಗರು” ರಿಲೀಸ್ ಆಗಲಿದೆ. ಸರ್ಕಾರದ ಈ ರೀತಿಯ ಮಾರ್ಗಸೂಚಿಯಿಂದ ಸಿನಿಮಾರಂಗದ ಮಂದಿ ಬೇಸರ ಹೊರಹಾಕಿದ್ದಾರೆ. ಧ್ರುವ ಅವರ ಈ ಟ್ವೀಟ್‌ಗೆ ಅಭಿಮಾನಿಗಳೂ ಕೂಡ ಒಂದು ರೀತಿಯ ಅಭಿಯಾನ ಶುರುಮಾಡಿದ್ದಾರೆ. ಸದ್ಯಕ್ಕೆ ಧ್ರುವ ಸರ್ಜಾ ಅವರ ಈ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ.

Categories
ಸಿನಿ ಸುದ್ದಿ

ಸಿಡಿದೆದ್ದ ಚಿತ್ರರಂಗಕ್ಕೆ ಸುಧಾಕರ್‌ ರಿಯಾಕ್ಷನ್‌, ಮನರಂಜನೆಗಿಂತ ಜನರ ಆರೋಗ್ಯ ಮುಖ್ಯವಂತೆ!

ಹಾಗಾದ್ರೆ, ಸಂತೆ, ಮಾಲ್‌ಗಳಲ್ಲಿ ಸೇರುವ ಜನರ ಆರೋಗ್ಯ ಮುಖ್ಯವಲ್ಲವೇ?


ಚಿತ್ರಮಂದಿರಗಳಲ್ಲಿ ನೂರರಷ್ಟು ಭರ್ತಿಗೆ ಅವಕಾಶ ನೀಡದ ರಾಜ್ಯ ಸರ್ಕಾರದ ವಿರುದ್ಧ ಚಿತ್ರರಂಗ ಸಿಡಿದೆದ್ದ ಬೆನ್ನಲೇ ಆರೋಗ್ಯ ಸಚಿವ ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ. ʼ ಮನರಂಜನೆಗಿಂತ ಜನರ ಆರೋಗ್ಯ ಮುಖ್ಯʼ ಅಂತ ಹೇಳಿದ್ದಾರೆ. ಆದರೆ, ಪ್ರಶ್ನೆ ಇರುವುದು ಜನರ ಆರೋಗ್ಯ ಮುಖ್ಯ ಎನ್ನುವ ಅವರ ಹೇಳಿಕೆಗೆ ಅಲ್ಲ, ಸಚಿವರಿಗೆ ಅದೇ ಕಾಳಜಿ ಸಂತೆ, ಮಾಲ್‌ ಗಳಲ್ಲಿ ನೂಕುನುಗ್ಗಲಿನಲ್ಲಿ ಸೇರುವ ಜನರ ಬಗ್ಗೆ ಯಾಕಿಲ್ಲ ಅಂತ. ” ಜನರ ಆರೋಗ್ಯದ ದೃಷ್ಟಿಯಿಂದ ಚಿತ್ರಮಂದಿರಗಳಲ್ಲಿ ಈಗ ನೂರರಷ್ಟು ಭರ್ತಿಗೆ ಅವಕಾಶ ನೀಡುತ್ತಿಲ್ಲ ಎನ್ನುವುದೇ ಸರ್ಕಾರದ ನಿರ್ಧಾರ ಆಗಿದ್ದರೆ, ಸಂತೆ, ಮಾಲ್‌ ಹಾಗೂ ಜಾತ್ರೆಗಳಲ್ಲಿ ನೂಕುನುಗ್ಗಲಿನಲ್ಲಿ ಸೇರುವ ಜನರ ಆರೋಗ್ಯ ಸರ್ಕಾರಕ್ಕೆ ಮುಖ್ಯವಲ್ಲವೇ ಎನ್ನುವುದು.

ಇಷ್ಟಕ್ಕೂ ರಾಜ್ಯ ಸರ್ಕಾರವೇನು ತನ್ನದೇ ನಿರ್ಧಾರದ ಮೂಲಕ ಅವಕಾಶ ನೀಡಬೇಕಾದ ಸನ್ನಿವೇಶವೇನಿಲ್ಲ, ಈಗಾಗಲೇ ಚಿತ್ರ ಮಂದಿರಗಳಲ್ಲಿನ ನೂರರಷ್ಟು ಭರ್ತಿಗೆ ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಈ ಪ್ರಕಾರ ರಾಜ್ಯ ಸರ್ಕಾರ ಕೂಡ ಅವಕಾಶ ನೀಡಬೇಕಿತ್ತಾದರೂ, ಈಗ ಜನರ ಆರೋಗ್ಯ ಮುಖ್ಯ ಅಂತ ಕಾರಣ ನೀಡುತ್ತಿದೆ. ಹಾಗಂತ ಆರೋಗ್ಯ ಸಚಿವ ಸುಧಾಕರ್‌ ಹೇಳಿಕೆ ನೀಡಿದ್ದಾರೆ. ಇದನ್ನು ಚಿತ್ರರಂಗ ಹೇಗೆ ಸ್ವೀಕರಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಮಧ್ಯೆ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ವಲಯದಲ್ಲಿ ದೊಡ್ಡ ಆಕ್ರೋಶ ವ್ಯಕ್ತವಾಗಿದೆ. ಸೋಷಲ್‌ ಮೀಡಿಯಾದಲ್ಲಿ ಸಿನಿಮಾ ಪ್ರೇಕ್ಷಕರು ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.

error: Content is protected !!