ರಿಹಾನಾ ನಂತರ ತಾಪಸಿ ಕೊಟ್ಟರು ಟ್ವೀಟ್‌ ಏಟು !

ತಾಪ್ಸಿ ಪನ್ನು ಟ್ವಿಟ್‌ ಗೆ ಕಂಗನಾ ಕಂಗಾಲು, ಬಾಲಿವುಡ್‌ನಲ್ಲಿ ಶುರುವಾಗುತ್ತಾ ಸ್ಟಾರ್‌ ವಾರ್‌ ?

ಬಾಲಿವುಡ್‌ ನಟಿ ತಾಪ್ಸಿ ಪನ್ನು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕಂಗನಾ ವಿವಾದಾತ್ಮಕ ಹೇಳಿಕೆಯಲ್ಲೂ ಪನ್ನು ಸಾಕಷ್ಟು ಸುದ್ದಿಲ್ಲಿದ್ದರು. ಈಗ ಜಾತಿಕವಾಗಿ ಸುದ್ದಿಯಾದ ಭಾರತೀಯ ರೈತರ ಪ್ರತಿಭಟನೆಯ ವಿಚಾರದಲ್ಲಿ ತಾಪ್ಸಿ ಪನ್ನು ಹೆಸರು ಚಾಲ್ತಿಗೆ ಬಂದಿದೆ. ಮತ್ತೆ ಕಂಗನಾ ಹಾಗೂ ತಾಪ್ಸಿ ನಡುವೆ ಸಮರ ಸುರುವಾಗುವ ಸಾಧ್ಯತೆಗಳು ಕಾಣುತ್ತಿವೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ತಾಪಸಿ ಪನ್ನು ಮಾಡಿರುವ ಟ್ವೀಟ್‌ ಬಾಲಿವುಡ್ ಘಟಾನಿಘಟಿಗಳ ಕೆನ್ನೆಗೆ ಭಾರಿಸಿದಂತಿದೆ. ಅವರ ಟ್ವೀಟ್‌ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಪಾಪ್‌ಸ್ಟಾರ್ ರಿಹಾನಾರ ಟ್ವೀಟ್‌ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಸರಿಯಷ್ಟೆ. ಆಕೆಯ ಟ್ವೀಟ್‌ ಹಿಂದೆ ಆಂತಾರಾಷ್ಟ್ರೀಯ ತಾರೆಯರ ಮತ್ತಷ್ಟು ಟ್ವೀಟ್‌ಗಳು ದಾಖಲಾದವು. ಅಲ್ಲಿಯವರೆಗೆ ಸುಮ್ಮನಿದ್ದ ಬಾಲಿವುಡ್‌ ತಾರೆಯರು ಅದೊಂದು ಟ್ವೀಟ್‌ ನಂತರ ನಿದ್ದೆಯಿಂದ ಎದ್ದಂತೆ ಪ್ರತಿಕ್ರಿಯಿಸಿದ್ದರು. ಗಾಯಕಿ ರಿಹಾನಾ ಟ್ರ್ಯಾಕ್ಟರ್‌ ಪ್ರತಿಭಟನೆಯ ಫೋಟೋ ಹಾಕಿ, “ನಾವೇಕೆ ಈ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಟ್ವೀಟ್ ನಂತರ ಬಾಲಿವುಡ್‌ ತಾರೆಯರ ಸರಣಿ ಟ್ವೀಟ್‌ಗಳು ಕಾಣಿಸಿಕೊಳ್ಳತೊಡಗಿವೆ.

ಬಾಲಿವುಡ್‌ ಸ್ಟಾರ್‌ಗಳಾದ ಅಕ್ಷಯ್‌ ಕುಮಾರ್‌, ಅಜಯ್ ದೇವಗನ್‌, ಸುನೀಲ್ ಶೆಟ್ಟಿ, ಚಿತ್ರನಿರ್ದೇಶಕ ಕರಣ್ ಜೋಹರ್‌, ಗಾಯಕಿ ಲತಾ ಮಂಗೇಶ್ಕರ್‌ ಸೇರಿದಂತೆ ಹತ್ತಾರು ಬಾಲಿವುಡ್ ಸೆಲೆಬ್ರಿಟಿಗಳು ‘#IndiaTogether, #IndiaAgainstPropaganda’ ಆಶ್ ಟ್ಯಾಗ್‌ನಡಿ ಟ್ವೀಟ್ ಮಾಡತೊಡಗಿದ್ದಾರೆ. “ಸುಳ್ಳು ಸುದ್ದಿ, ಮಾಹಿತಿಗೆ ಬಲಿಯಾಗದೆ ನಾವೆಲ್ಲರೂ ಭಾರತೀಯರಾಗಿ ಒಗ್ಗಟ್ಟಾಗಿ ನಿಲ್ಲೋಣ. ನಮ್ಮಲ್ಲೇ ಗೊಂದಲ ಬೇಡ” ಎನ್ನುವ ಅರ್ಥದಲ್ಲಿದ್ದವು ಈ ಎಲ್ಲಾ ಟ್ವೀಟ್‌ಗಳು. ಅಚ್ಚರಿಯೆಂದರೆ ಬಾಲಿವುಡ್‌ ಹಾಗೂ ಕ್ರೀಡಾರಂಗದ ತಾರೆಯರ ಕೆಲವು ಟ್ವೀಟ್‌ಗಳು ಒಂದೇ ರೀತಿಯ ಒಕ್ಕಣಿ ಹೊಂದಿದ್ದವು! ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೂ ಟೀಕೆ ವ್ಯಕ್ತವಾಗುತ್ತಿದೆ.

ಈ ಮಧ್ಯೆ ನಟಿ ತಾಪಸಿ ಪನ್ನು ಟ್ವೀಟಿಸಿದ ಬಾಲಿವುಡ್ ತಾರೆಯರಿಗೆ ಬಿಸಿಮುಟ್ಟಿಸುವಂತಹ ಒಂದು ಟ್ವೀಟ್ ಮಾಡಿದ್ದಾರೆ. “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರ ಪ್ರೊಪಗಾಂಡಾ ಪಾಠ ಮಾಡಲು ಬರಬೇಡಿ” ಎನ್ನುವ ತಾಪ್ಸಿ ಟ್ವೀಟ್‌ ಬಾಲಿವುಡ್‌ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದೆ. ನಟಿಯ ದಿಟ್ಟತನಕ್ಕೆ ಮೆಚ್ಚುಗೆ ಜೊತೆ ಈರ್ಷ್ಯೆಯೂ ವ್ಯಕ್ತವಾಗುತ್ತಿದೆ.

ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದಡ್ಲಾನಿ ಕೂಡ ರೈತರ ಪರ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ‘#FarmersProtest, #TheWorldIsWatching’ ಆಶ್ ಟ್ಯಾಗ್‌ನಡಿ ಅವರು “ಹೋಲೋಕಾಸ್ಟ್‌ ಹತ್ಯಾಕಾಂಡವನ್ನು ಹಿಟ್ಲರ್ ಆಂತರಿಕ ವಿಷಯ ಎಂದು ಸಮರ್ಥಿಸಿಕೊಂಡರೆ?” ಎನ್ನುವ ಒಕ್ಕಣಿಯ ಪ್ರಶ್ನೆ ಎಸದಿದ್ದರು. ಇದೀಗ ತಾಪ್ಸಿ ಟ್ವೀಟ್‌ನಿಂದ ಕುಪಿತರಾಗಿರುವ ನಟಿ ಕಂಗನಾ ರನಾವತ್‌, ಅವರನ್ನು ಬಿ ಗ್ರೇಡ್ ನಟಿ ಎಂದು ಕರೆದು ಟ್ವೀಟ್ ಮಾಡಿ ದೇಶದ ಐಕ್ಯತೆ ಕುರಿತಂತೆ ಚರ್ಚಿಸತೊಡಗಿದ್ದಾರೆ. ಇದಕ್ಕೆ ತಾಪ್ಸಿ ಕಡೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ಸದ್ಯ ಟ್ವೀಟ್ ಸಮರ ಜಾರಿಯಲ್ಲಿದ್ದು, ಇದು ಹೇಗೆ ತಾರ್ಕಿಕ ಅಂತ್ಯ ಕಾಣುತ್ತದೆ ಎನ್ನುವುದನ್ನು ನೋಡಬೇಕಿದೆ.

Related Posts

error: Content is protected !!