ಸಿಡಿದೆದ್ದ ಚಿತ್ರರಂಗಕ್ಕೆ ಸುಧಾಕರ್‌ ರಿಯಾಕ್ಷನ್‌, ಮನರಂಜನೆಗಿಂತ ಜನರ ಆರೋಗ್ಯ ಮುಖ್ಯವಂತೆ!

ಹಾಗಾದ್ರೆ, ಸಂತೆ, ಮಾಲ್‌ಗಳಲ್ಲಿ ಸೇರುವ ಜನರ ಆರೋಗ್ಯ ಮುಖ್ಯವಲ್ಲವೇ?


ಚಿತ್ರಮಂದಿರಗಳಲ್ಲಿ ನೂರರಷ್ಟು ಭರ್ತಿಗೆ ಅವಕಾಶ ನೀಡದ ರಾಜ್ಯ ಸರ್ಕಾರದ ವಿರುದ್ಧ ಚಿತ್ರರಂಗ ಸಿಡಿದೆದ್ದ ಬೆನ್ನಲೇ ಆರೋಗ್ಯ ಸಚಿವ ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ. ʼ ಮನರಂಜನೆಗಿಂತ ಜನರ ಆರೋಗ್ಯ ಮುಖ್ಯʼ ಅಂತ ಹೇಳಿದ್ದಾರೆ. ಆದರೆ, ಪ್ರಶ್ನೆ ಇರುವುದು ಜನರ ಆರೋಗ್ಯ ಮುಖ್ಯ ಎನ್ನುವ ಅವರ ಹೇಳಿಕೆಗೆ ಅಲ್ಲ, ಸಚಿವರಿಗೆ ಅದೇ ಕಾಳಜಿ ಸಂತೆ, ಮಾಲ್‌ ಗಳಲ್ಲಿ ನೂಕುನುಗ್ಗಲಿನಲ್ಲಿ ಸೇರುವ ಜನರ ಬಗ್ಗೆ ಯಾಕಿಲ್ಲ ಅಂತ. ” ಜನರ ಆರೋಗ್ಯದ ದೃಷ್ಟಿಯಿಂದ ಚಿತ್ರಮಂದಿರಗಳಲ್ಲಿ ಈಗ ನೂರರಷ್ಟು ಭರ್ತಿಗೆ ಅವಕಾಶ ನೀಡುತ್ತಿಲ್ಲ ಎನ್ನುವುದೇ ಸರ್ಕಾರದ ನಿರ್ಧಾರ ಆಗಿದ್ದರೆ, ಸಂತೆ, ಮಾಲ್‌ ಹಾಗೂ ಜಾತ್ರೆಗಳಲ್ಲಿ ನೂಕುನುಗ್ಗಲಿನಲ್ಲಿ ಸೇರುವ ಜನರ ಆರೋಗ್ಯ ಸರ್ಕಾರಕ್ಕೆ ಮುಖ್ಯವಲ್ಲವೇ ಎನ್ನುವುದು.

ಇಷ್ಟಕ್ಕೂ ರಾಜ್ಯ ಸರ್ಕಾರವೇನು ತನ್ನದೇ ನಿರ್ಧಾರದ ಮೂಲಕ ಅವಕಾಶ ನೀಡಬೇಕಾದ ಸನ್ನಿವೇಶವೇನಿಲ್ಲ, ಈಗಾಗಲೇ ಚಿತ್ರ ಮಂದಿರಗಳಲ್ಲಿನ ನೂರರಷ್ಟು ಭರ್ತಿಗೆ ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಈ ಪ್ರಕಾರ ರಾಜ್ಯ ಸರ್ಕಾರ ಕೂಡ ಅವಕಾಶ ನೀಡಬೇಕಿತ್ತಾದರೂ, ಈಗ ಜನರ ಆರೋಗ್ಯ ಮುಖ್ಯ ಅಂತ ಕಾರಣ ನೀಡುತ್ತಿದೆ. ಹಾಗಂತ ಆರೋಗ್ಯ ಸಚಿವ ಸುಧಾಕರ್‌ ಹೇಳಿಕೆ ನೀಡಿದ್ದಾರೆ. ಇದನ್ನು ಚಿತ್ರರಂಗ ಹೇಗೆ ಸ್ವೀಕರಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಮಧ್ಯೆ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ವಲಯದಲ್ಲಿ ದೊಡ್ಡ ಆಕ್ರೋಶ ವ್ಯಕ್ತವಾಗಿದೆ. ಸೋಷಲ್‌ ಮೀಡಿಯಾದಲ್ಲಿ ಸಿನಿಮಾ ಪ್ರೇಕ್ಷಕರು ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.

Related Posts

error: Content is protected !!