ಸರ್ಕಾರಕ್ಕೆ ಟಾಂಗ್‌ ಕೊಟ್ಟ ಧ್ರುವ ಸರ್ಜಾ

ಬೇರೆಡೆ ಇಲ್ಲದ ಕಾನೂನು ಇಲ್ಲೇಕೆ?

ಎಲ್ಲೆಡೆ ಕೊರೊನಾ ಹಾವಳಿ ಕಮ್ಮಿಯಾಗಿದೆ. ಬಹುತೇಕ ಕ್ಷೇತ್ರಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿವೆ. ಆದರೆ, ಕನ್ನಡ ಚಿತ್ರರಂಗಕ್ಕೆ ಮಾತ್ರ ಇನ್ನೂ ಸರಿಯಾದ ಅನುಮತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟಿದ್ದರೂ, ರಾಜ್ಯ ಸರ್ಕಾರ ಮಾತ್ರ, ಅನುಮತಿ ನೀಡದೆ, ಇನ್ನೂ ಶೇ.೫೦ರಷ್ಟು ಅನುಮತಿಯಲ್ಲೇ ಚಿತ್ರಮಂದಿರಗಳು ಪ್ರದರ್ಶನ ಕೊಡಬೇಕು ಎಂದು ಹೇಳಿದೆ. ಸರ್ಕಾರದ ಈ ನಡೆಯನ್ನು ಇಡೀ ಚಿತ್ರೋದ್ಯಮವೇ ಪ್ರಶ್ನಿಸಿದೆ. ಟ್ವಿಟ್ಟರ್‌ನಲ್ಲಿ ಧ್ರುವ ಸರ್ಜಾ ಕೂಡ ಸ್ಟೇಟಸ್‌ ಹಾಕಿಕೊಳ್ಳುವ ಮೂಲಕ ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದ ನಟ ಧ್ರುವಸರ್ಜಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬೇಸರ ಹೊರಹಾಕಿದ್ದು, ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ.


ಈ ವಿಚಾರದ ಕುರಿತು, ಟ್ವೀಟರ್ ನಲ್ಲಿ ‌ಪೋಸ್ಟ್ ಮಾಡಿರುವ ಇವರು ತನ್ನ ಧೋರಣೆಯನ್ನು ಸಲೀಸಾಗಿ ತೆರೆದಿಟ್ಟಿದ್ದಾರೆ. “ಬಸ್​ನಲ್ಲಿ ಫುಲ್ ರಶ್..! ಮಾರ್ಕೆಟ್​ನಲ್ಲಿ ಗಿಜಿ ಗಿಜಿ ಅಂತ ಜನರು ತುಂಬಿಕೊಂಡಿರುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ..” ಹೀಗೆ ಬರೆದ ಒಂದು ಪೋಸ್ಟ್‌ ಹಾಕಿರುವ ಧ್ರುವ ಸರ್ಜಾ ಅವರಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ಸಿನಿಮಾರಂಗದ ಅನೇಕ ನಟ,ನಟಿಯರು ಕೂಡ ಟ್ವೀಟ್‌ಗೆ ಬೆಂಬಲ ಸೂಚಿಸಿದ್ದಾರೆ. “ಬೇರೆ ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ಸೇರಲು ಅವಕಾಶ ನೀಡಲಾಗಿದೆ ಆದರೆ, ‌ನಮ್ಮ ರಾಜ್ಯದಲ್ಲಿ ಯಾಕೆ ಹೀಗೆ ಎಂದು ಹೇಳಿರುವ ಧ್ರುವ ಸರ್ಜಾ ಅವರ ಮಾತಿಗೆ ಅನೇಕರು ಸಾಥ್‌ ಕೊಟ್ಟಿದ್ದಾರೆ.
ಅಂದಹಾಗೆ, ಫೆ‌.18ರಂದು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೊಗರು” ರಿಲೀಸ್ ಆಗಲಿದೆ. ಸರ್ಕಾರದ ಈ ರೀತಿಯ ಮಾರ್ಗಸೂಚಿಯಿಂದ ಸಿನಿಮಾರಂಗದ ಮಂದಿ ಬೇಸರ ಹೊರಹಾಕಿದ್ದಾರೆ. ಧ್ರುವ ಅವರ ಈ ಟ್ವೀಟ್‌ಗೆ ಅಭಿಮಾನಿಗಳೂ ಕೂಡ ಒಂದು ರೀತಿಯ ಅಭಿಯಾನ ಶುರುಮಾಡಿದ್ದಾರೆ. ಸದ್ಯಕ್ಕೆ ಧ್ರುವ ಸರ್ಜಾ ಅವರ ಈ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ.

Related Posts

error: Content is protected !!