ಸ್ಯಾಂಡಲ್‌ವುಡ್‌ಗೆ ಮಣಿದ ಸರ್ಕಾರ -ಶೇ.100 ಸೀಟು ಭರ್ತಿಗೆ ಸಿಕ್ತು ಷರತ್ತುಬದ್ಧ ಅವಕಾಶ

ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರವೇ ವಿಲನ್‌ ಆಯ್ತಾ?
– ಇಂಥದ್ದೊಂದು ಪ್ರಶ್ನೆ ಎಲ್ಲರಿಗೂ ಕಾಡಿದ್ದು ನಿಜ. ಅದಕ್ಕೆ ಕಾರಣ, ಕೇಂದ್ರ ಸರ್ಕಾರದ ಅದೇಶವನ್ನು ಮಾರ್ಪಡಿಸಿದ್ದು. ಹೌದು, ಕೇಂದ್ರ ಸರ್ಕಾರ ಚಿತ್ರಮಂದಿರಗಳ ಆಸನಗಳಿಗೆ ನೂರರಷ್ಟು ಅನುಮತಿ ಕೊಟ್ಟರೂ, ರಾಜ್ಯ ಸರ್ಕಾರ ಮಾತ್ರ ಶೇ.50ರಷ್ಟು ಅನುಮತಿ ನೀಡಿದೆ. ಇದಕ್ಕೆ ಚಿತ್ರೋದ್ಯಮ ಸಂಪೂರ್ಣ ವಿರೋಧ ವ್ಯಕ್ತಪಡಿಸಿತ್ತು. ಇಡೀ ಚಿತ್ರರಂಗದ ಸ್ಟಾರ್‌ ನಟರು ತಮ್ಮ ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿ, ಆಕ್ರೋಶಪಟ್ಟಿದ್ದರು. ಈ ಬೆಳವಣಿಗೆ ಕಾಣುತ್ತಿದ್ದಂತೆಯೇ, ಎಚ್ಚೆತ್ತ ರಾಜ್ಯ ಸರ್ಕಾರ ಚಿತ್ರೋದ್ಯಮದ ಜೊತೆ ಸಭೆ ನಡೆಸಿ, ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದೆ.

ನಟ ಶಿವರಾಜಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ಸಚಿವ ಸುಧಾಕರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ, ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸಲು ಈಗಾಗಲೇ ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ಅದೇಶವನ್ನೇ ಮಾರ್ಪಡಿಸಿ, ಶೇ.50ರಷ್ಟು ಆಸನಗಳಿಗೆ ಮಾತ್ರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಸ್ಟಾರ್‌ ನಟರು ಟ್ವೀಟ್‌ ಮೂಲಕ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಸಂಜೆಯ ವೇಳೆಗೆ ಎಲ್ಲೆಡೆಯಿಂದಲೂ ವಿರೋಧ ಹೆಚ್ಚಾಗುತ್ತಿದ್ದಂತೆಯೇ, ಶಿವರಾಜಕುಮಾರ್‌ ಅವರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಅಕಾಡೆಮಿ ಸಮಿತಿ ಸದಸ್ಯರು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ, ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸುವಂತೆ ಹೇಳಲಾಗಿದೆ.


ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್‌, “ಚಿತ್ರರಂಗದ ಹಿರಿಯ ನಟ ಶಿವರಾಜಕುಮಾರ್‌, ಸಾ.ರಾ.ಗೋವಿಂದು, ಚೇಂಬರ್‌ ಅಧ್ಯಕ್ಷ ಜೈರಾಜ್‌, ತಾರಾ, ಅಕಾಡೆಮಿ ಮೂಲಕ ಸುನೀಲ್‌ ಪುರಾಣಿಕ್ ಜೊತೆ ಚರ್ಚಿಸಿದ್ದೇನೆ. ಸಿಎಂ ಸಲಹೆ ಮೇರೆಗೆ ನಡೆಸಿದ ಸಭೆಯಲ್ಲಿ ನಾವು ಒಂದಷ್ಟು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂದೆ ಮಾರ್ಗಸೂಚಿಯಲ್ಲಿ ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಶೇ.100ರಷ್ಟು ತುಂಬಿಸುವ ಅವಕಾಶವಿದೆ. ಆದರೆ, ಆಯಾ ರಾಜ್ಯಗಳು ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಿ ಎಂದಿದ್ದರು. ಹಾಗಾಗಿ ನಾವು ಶೇ.50ರಷ್ಟು ಅನುಮತಿ ನೀಡಿದ್ದೆವು. ಆದರೆ, ಸ್ಯಾಂಡಲ್‌ವುಡ್‌ ಮನವಿ ಮಾಡಿದೆ. ಕಾರ್ಮಿಕರು, ಒಕ್ಕೂಟ, ನಟರು, ತಾಂತ್ರಿಕ ವರ್ಗದವರು ಸಮಸ್ಯೆಯಲ್ಲಿದ್ದಾರೆ.

ಸರ್ಕಾರ ನಮ್ಮ ಜೊತೆ ಇರಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸೂಚನೆಯಂತೆ ನಾವು ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚನೆಯಂತೆ, ನಾಲ್ಕು ವಾರಗಳವರೆಗೆ ಶೇ.100ರಷ್ಟು ಆಸನಗಳು ಭರ್ತಿಗೆ ಅನುಮತಿ ನೀಡಲಾಗಿದೆ. ಆದರೆ ಕಠಿಣ ಮಾರ್ಗಸೂಚನೆಗಳನ್ನು ಆದೇಶದಲ್ಲಿ ಹೊರಡಿಸಲಿದ್ದಾರೆ. ಜನರು ಇದನ್ನು ಅಳವಡಿಸಬೇಕು. ಜರೂರಾಗಿ ಸ್ವೀಕರಿಸಬೇಕು. ಚಿತ್ರಮಂದಿರಗಳ ಮಾಲೀಕರು ಕೂಡ ನಿಯಂತ್ರಣ ಮಾಡಲು ಸರ್ಕಾರದ ಜೊತೆ ಕೈ ಜೋಡಿಸಬೇಕು. ಮಂದಿರಗಳ ಕಾರಣದಿಂದ ನಾಲ್ಕು ವಾರಗಳಲ್ಲಿ ಸೋಂಕು ತಗುಲಿದರೆ, ಪುನಃ ನಮ್ಮ ನಿರ್ಧಾರ ಬದಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದೇವೆ ಎಂದು ವಿವರಿಸಿದ್ದಾರೆ.
ಅಧಿಕಾರಿಗಳು ಮಾರ್ಗಸೂಚಿ ಕುರಿತಂತೆ ನನಗೆ ಹಾಗೂ ಸಿಎಂ ಅವರಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಗೊಂದಲ ಆಗಿದೆ. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದ್ದರಿಂದಲೇ ಸರ್ಕಾರ ಇಂದು ಮಣಿದು, ಶೇ.100ರಷ್ಟು ಅವಕಾಶ ಮಾಡಿಕೊಡುವ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದೆ. ಶಿವರಾಜಕುಮಾರ್‌ ನೇತೃತ್ವದ ನಿಯೋಗದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇತರರು ಇದ್ದರು.  ಇದಕ್ಕೂ ಮುನ್ನ ಮಾತನಾಡಿದ್ದ ಶಿವರಾಜಕುಮಾರ್‌, “ಚಿತ್ರರಂಗಕ್ಕೆ ದ್ರೋಹ ಮಾಡಲಾಗುತ್ತಿದೆಯೋ ಏನೋ ಅನಿಸುತ್ತಿದೆ. ಸಾಮಾಜಿಕ ಅಂತರ ಎಲ್ಲಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ಹೇಳಿದರೆ ಹೇಳ್ತೀವಿ ನಮ್ಮ ಸಮಸ್ಯೆ ಸರಿ ಮಾಡುತ್ತಾರೆ ಎಂಬ ಭರವಸೆ” ಇದೆ ಎಂದು ಹೇಳಿದ್ದರು.

Related Posts

error: Content is protected !!