Categories
ಸಿನಿ ಸುದ್ದಿ

ಸ್ಯಾಂಡಲ್‌ವುಡ್‌ಗೆ ಮಣಿದ ಸರ್ಕಾರ -ಶೇ.100 ಸೀಟು ಭರ್ತಿಗೆ ಸಿಕ್ತು ಷರತ್ತುಬದ್ಧ ಅವಕಾಶ

ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರವೇ ವಿಲನ್‌ ಆಯ್ತಾ?
– ಇಂಥದ್ದೊಂದು ಪ್ರಶ್ನೆ ಎಲ್ಲರಿಗೂ ಕಾಡಿದ್ದು ನಿಜ. ಅದಕ್ಕೆ ಕಾರಣ, ಕೇಂದ್ರ ಸರ್ಕಾರದ ಅದೇಶವನ್ನು ಮಾರ್ಪಡಿಸಿದ್ದು. ಹೌದು, ಕೇಂದ್ರ ಸರ್ಕಾರ ಚಿತ್ರಮಂದಿರಗಳ ಆಸನಗಳಿಗೆ ನೂರರಷ್ಟು ಅನುಮತಿ ಕೊಟ್ಟರೂ, ರಾಜ್ಯ ಸರ್ಕಾರ ಮಾತ್ರ ಶೇ.50ರಷ್ಟು ಅನುಮತಿ ನೀಡಿದೆ. ಇದಕ್ಕೆ ಚಿತ್ರೋದ್ಯಮ ಸಂಪೂರ್ಣ ವಿರೋಧ ವ್ಯಕ್ತಪಡಿಸಿತ್ತು. ಇಡೀ ಚಿತ್ರರಂಗದ ಸ್ಟಾರ್‌ ನಟರು ತಮ್ಮ ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿ, ಆಕ್ರೋಶಪಟ್ಟಿದ್ದರು. ಈ ಬೆಳವಣಿಗೆ ಕಾಣುತ್ತಿದ್ದಂತೆಯೇ, ಎಚ್ಚೆತ್ತ ರಾಜ್ಯ ಸರ್ಕಾರ ಚಿತ್ರೋದ್ಯಮದ ಜೊತೆ ಸಭೆ ನಡೆಸಿ, ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದೆ.

ನಟ ಶಿವರಾಜಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ಸಚಿವ ಸುಧಾಕರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ, ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸಲು ಈಗಾಗಲೇ ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ಅದೇಶವನ್ನೇ ಮಾರ್ಪಡಿಸಿ, ಶೇ.50ರಷ್ಟು ಆಸನಗಳಿಗೆ ಮಾತ್ರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಸ್ಟಾರ್‌ ನಟರು ಟ್ವೀಟ್‌ ಮೂಲಕ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಸಂಜೆಯ ವೇಳೆಗೆ ಎಲ್ಲೆಡೆಯಿಂದಲೂ ವಿರೋಧ ಹೆಚ್ಚಾಗುತ್ತಿದ್ದಂತೆಯೇ, ಶಿವರಾಜಕುಮಾರ್‌ ಅವರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಅಕಾಡೆಮಿ ಸಮಿತಿ ಸದಸ್ಯರು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ, ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸುವಂತೆ ಹೇಳಲಾಗಿದೆ.


ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್‌, “ಚಿತ್ರರಂಗದ ಹಿರಿಯ ನಟ ಶಿವರಾಜಕುಮಾರ್‌, ಸಾ.ರಾ.ಗೋವಿಂದು, ಚೇಂಬರ್‌ ಅಧ್ಯಕ್ಷ ಜೈರಾಜ್‌, ತಾರಾ, ಅಕಾಡೆಮಿ ಮೂಲಕ ಸುನೀಲ್‌ ಪುರಾಣಿಕ್ ಜೊತೆ ಚರ್ಚಿಸಿದ್ದೇನೆ. ಸಿಎಂ ಸಲಹೆ ಮೇರೆಗೆ ನಡೆಸಿದ ಸಭೆಯಲ್ಲಿ ನಾವು ಒಂದಷ್ಟು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂದೆ ಮಾರ್ಗಸೂಚಿಯಲ್ಲಿ ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಶೇ.100ರಷ್ಟು ತುಂಬಿಸುವ ಅವಕಾಶವಿದೆ. ಆದರೆ, ಆಯಾ ರಾಜ್ಯಗಳು ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಿ ಎಂದಿದ್ದರು. ಹಾಗಾಗಿ ನಾವು ಶೇ.50ರಷ್ಟು ಅನುಮತಿ ನೀಡಿದ್ದೆವು. ಆದರೆ, ಸ್ಯಾಂಡಲ್‌ವುಡ್‌ ಮನವಿ ಮಾಡಿದೆ. ಕಾರ್ಮಿಕರು, ಒಕ್ಕೂಟ, ನಟರು, ತಾಂತ್ರಿಕ ವರ್ಗದವರು ಸಮಸ್ಯೆಯಲ್ಲಿದ್ದಾರೆ.

ಸರ್ಕಾರ ನಮ್ಮ ಜೊತೆ ಇರಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸೂಚನೆಯಂತೆ ನಾವು ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚನೆಯಂತೆ, ನಾಲ್ಕು ವಾರಗಳವರೆಗೆ ಶೇ.100ರಷ್ಟು ಆಸನಗಳು ಭರ್ತಿಗೆ ಅನುಮತಿ ನೀಡಲಾಗಿದೆ. ಆದರೆ ಕಠಿಣ ಮಾರ್ಗಸೂಚನೆಗಳನ್ನು ಆದೇಶದಲ್ಲಿ ಹೊರಡಿಸಲಿದ್ದಾರೆ. ಜನರು ಇದನ್ನು ಅಳವಡಿಸಬೇಕು. ಜರೂರಾಗಿ ಸ್ವೀಕರಿಸಬೇಕು. ಚಿತ್ರಮಂದಿರಗಳ ಮಾಲೀಕರು ಕೂಡ ನಿಯಂತ್ರಣ ಮಾಡಲು ಸರ್ಕಾರದ ಜೊತೆ ಕೈ ಜೋಡಿಸಬೇಕು. ಮಂದಿರಗಳ ಕಾರಣದಿಂದ ನಾಲ್ಕು ವಾರಗಳಲ್ಲಿ ಸೋಂಕು ತಗುಲಿದರೆ, ಪುನಃ ನಮ್ಮ ನಿರ್ಧಾರ ಬದಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದೇವೆ ಎಂದು ವಿವರಿಸಿದ್ದಾರೆ.
ಅಧಿಕಾರಿಗಳು ಮಾರ್ಗಸೂಚಿ ಕುರಿತಂತೆ ನನಗೆ ಹಾಗೂ ಸಿಎಂ ಅವರಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಗೊಂದಲ ಆಗಿದೆ. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದ್ದರಿಂದಲೇ ಸರ್ಕಾರ ಇಂದು ಮಣಿದು, ಶೇ.100ರಷ್ಟು ಅವಕಾಶ ಮಾಡಿಕೊಡುವ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದೆ. ಶಿವರಾಜಕುಮಾರ್‌ ನೇತೃತ್ವದ ನಿಯೋಗದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇತರರು ಇದ್ದರು.  ಇದಕ್ಕೂ ಮುನ್ನ ಮಾತನಾಡಿದ್ದ ಶಿವರಾಜಕುಮಾರ್‌, “ಚಿತ್ರರಂಗಕ್ಕೆ ದ್ರೋಹ ಮಾಡಲಾಗುತ್ತಿದೆಯೋ ಏನೋ ಅನಿಸುತ್ತಿದೆ. ಸಾಮಾಜಿಕ ಅಂತರ ಎಲ್ಲಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ಹೇಳಿದರೆ ಹೇಳ್ತೀವಿ ನಮ್ಮ ಸಮಸ್ಯೆ ಸರಿ ಮಾಡುತ್ತಾರೆ ಎಂಬ ಭರವಸೆ” ಇದೆ ಎಂದು ಹೇಳಿದ್ದರು.

Categories
ಸಿನಿ ಸುದ್ದಿ

ಟಾಲಿವುಡ್‌ನಲ್ಲಿ ನಟ ದರ್ಶನ್‌ ಗೆ ಸಿಕ್ಕಿತು ರೆಡ್‌ ಕಾರ್ಪೆಟ್‌ ಸ್ವಾಗತ !

ರಾಬರ್ಟ್‌ ತೆಲುಗು ಫಸ್ಟ್‌ ಲುಕ್‌ ಟೀಸರ್‌ ಗೆ  ಸಖತ್‌ ರೆಸ್ಪಾನ್ಸ್‌ 

 

ನಿರೀಕ್ಷೆಯಂತೆ ಟಾಲಿವುಡ್‌ನಲ್ಲಿ ನಟ ದರ್ಶನ್‌ ಅಬ್ಬರ ಶುರುವಾಗಿದೆ. ಬಹುನಿರೀಕ್ಷಿತ ʼರಾಬರ್ಟ್‌ʼ ಚಿತ್ರದ ತೆಲುಗು ಫಸ್ಟ್‌ ಲುಕ್‌ ಟೀಸರ್‌ ಲಾಂಚ್‌ ಆಗಿದೆ. ಆಕ್ಷನ್‌, ಲುಕ್‌, ಮೇಕಿಂಗ್‌ ಸೇರಿದಂತೆ ಯಾವುದೇ ಭಾಷೆಯ ಅದ್ದೂರಿ ವೆಚ್ಚದ ಸಿನಿಮಾಕ್ಕೇನು ಕಮ್ಮಿ ಇಲ್ಲದಂತೆ ʼರಾಬರ್ಟ್‌ʼ ಟೀಸರ್‌ ಹೊರ ಬಂದಿದೆ. ಇದೇ ಮೊದಲ ಬಾರಿಗೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ದರ್ಶನ್‌ಗೆ ಅಲ್ಲಿ ಭರ್ಜರಿ ವೆಲ್ ಕಮ್‌ ಸಿಕ್ಕಿದೆ. ತೆಲುಗು ಟೀಸರ್‌ ಲಾಂಚ್‌ ಆಗಿ, ಕೆಲವೇ ಗಂಟೆಗಳು ಕಳೆಯುವ ಹೊತ್ತಿಗೆ ಸೋಷಲ್‌ ಮೀಡಿಯಾದಲ್ಲಿ ಅದು ವೈರಲ್‌ ಆಯಿತು. ಟೀಸರ್‌ ಲಾಂಚ್‌ ಆಗಿ ಕೇವಲ 18 ನಿಮಿಷಗಳ ಅವದಿಯಲ್ಲಿ 36 ಸಾವಿರ ವೀಕ್ಷಣೆ ಪಡೆದಿತ್ತು.

ಆದಾದ 1 ಗಂಟೆ ಗೊತ್ತಿಗೆ 3 ಲಕ್ಷ ದಷ್ಟಿತ್ತು. ಅದಕ್ಕೆ ಕಾರಣ ಟೀಸರ್‌ ನಲ್ಲಿ ದರ್ಶನ್‌ ಅಬ್ಬರಿಸಿದ ರೀತಿ. ಆನಂದ್‌ ಆಡಿಯೋದ ಅಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಹೊರ ಬಂದ ಟೀಸರ್‌ ಧೂಳೆಬ್ಬಿಸುತ್ತಿದೆ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಮಾಡೆಲ್‌ ಆಶಾಭಟ್‌ ನಾಯಕಿ ಯಾಗಿ ಕಾಣಸಿಕೊಂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಕನ್ನಡದ ಹಾಡುಗಳು ಈಗಾಗಲೇ ಹಿಟ್​ ಆಗಿವೆ. ಮಾರ್ಚ್‌ 11 ಕ್ಕೆ ಈ ಚಿತ್ರ ದೇಶಾದ್ಯಂತ ಗ್ರಾಂಡ್‌ ಆಗಿ ತೆರೆಗೆ ಬರುತ್ತಿದೆ. ತೆಲುಗಿನಲ್ಲಿ ಡಬ್‌ ಆಗಿ ತೆರೆ ಕಾಣುತ್ತಿದೆ. ಸದ್ಯ ದರ್ಶನ್‌ ಹವಾ ಜೋರಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

Categories
ಸಿನಿ ಸುದ್ದಿ

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ?

ರಾಜ್ಯ ಸರ್ಕಾರದ ವಿರುದ್ಧ ಶ್ರೀಮುರಳಿ ಆಕ್ರೋಶ

ಕೇಂದ್ರ ಸರ್ಕಾರ ಚಿತ್ರಮಂದಿರಗಳಿಗೆ ನೂರರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಮಾತ್ರ ಶೇ.೫೦ರಷ್ಟು ಅನುಮತಿ ಮುಂದುವರೆಸಿದೆ. ಇದು ಸಹಜವಾಗಿಯೇ ಚಿತ್ರರಂಗದವರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಶಿವರಾಜಕುಮಾರ್‌ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್‌ ನಟರುಗಳು ತಮ್ಮ ಟ್ವೀಟ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗೊಂದು ಟ್ವೀಟ್‌ ಅಭಿಯಾನ ಕೂಡ ಶುರುವಾಗಿದೆ. ಅದರ ಬೆನ್ನಲ್ಲೇ,  ನಟ ಶ್ರೀಮುರಳಿ ಅವರು ಕೂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ಮದಗಜ” ಚಿತ್ರದ ಚಿತ್ರೀಕರಣದಲ್ಲಿರುವ ಶ್ರೀಮುರಳಿ ಅವರು, ಚಿತ್ರೀಕರಣ ಸ್ಥಳದಿಂದಲೇ ವಿಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ನೂರರಷ್ಟು ಭರ್ತಿ ಆಸನಗಳಿಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಅವರು ಮಾಡಿರುವ ವಿಡಿಯೋದಲ್ಲಿ “ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ. ಯಾವ ನ್ಯಾಯ ಹೇಳಿ. ಎಲ್ಲರಿಗೂ ನೂರು ಪರ್ಸೆಂಟ್‌ ಕೊಟ್ಟುಬಿಟ್ಟು, ನಮ್ಮ ಇಂಡಸ್ಟ್ರಿಗೆ ಮಾತ್ರ ಶೇ.೫೦ ಕೊಟ್ಟಿದ್ದೀರಿ.

ಇದರಿಂದ ಬಹಳ ಬೇಸರವಿದೆ. ಬಹಳಷ್ಟು ಸಂಸಾರ ಇಂಡಸ್ಟ್ರಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ದಯವಿಟ್ಟು, ಸರ್ಕಾರಕ್ಕೆ ಕೇಳಿಕೊಳ್ಳುತ್ತಿರುವುದೇನೆಂದರೆ ನಿಮ್ಮ ನಿರ್ಧಾರವನ್ನು ಬದಲಿಸಿ, ನೂರು ಆಸನಗಳ ಭರ್ತಿಗೆ ಅವಕಾಶ ಮಾಡಿಕೊಟ್ಟು ನಮ್‌ ಲೈಫ್‌ ಅನ್ನೂ ನಾರ್ಮಲ್‌ ಮಾಡಿಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು, ದಯವಿಟ್ಟು ನಮ್ಮ ಈ ಆಸೆಯನ್ನು ನೆರವೇರಿಸಿಕೊಡಿ ಎಂದು ಇಂಡಸ್ಟ್ರಿ ಪರ ಕೇಳಿಕೊಳ್ಳುತ್ತಿದ್ದೇನೆ.

Categories
ಸಿನಿ ಸುದ್ದಿ

ಸರ್ಕಾರಕ್ಕೆ ಟಾಂಗ್‌ ಕೊಟ್ಟ ಧ್ರುವ ಸರ್ಜಾ

ಬೇರೆಡೆ ಇಲ್ಲದ ಕಾನೂನು ಇಲ್ಲೇಕೆ?

ಎಲ್ಲೆಡೆ ಕೊರೊನಾ ಹಾವಳಿ ಕಮ್ಮಿಯಾಗಿದೆ. ಬಹುತೇಕ ಕ್ಷೇತ್ರಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿವೆ. ಆದರೆ, ಕನ್ನಡ ಚಿತ್ರರಂಗಕ್ಕೆ ಮಾತ್ರ ಇನ್ನೂ ಸರಿಯಾದ ಅನುಮತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟಿದ್ದರೂ, ರಾಜ್ಯ ಸರ್ಕಾರ ಮಾತ್ರ, ಅನುಮತಿ ನೀಡದೆ, ಇನ್ನೂ ಶೇ.೫೦ರಷ್ಟು ಅನುಮತಿಯಲ್ಲೇ ಚಿತ್ರಮಂದಿರಗಳು ಪ್ರದರ್ಶನ ಕೊಡಬೇಕು ಎಂದು ಹೇಳಿದೆ. ಸರ್ಕಾರದ ಈ ನಡೆಯನ್ನು ಇಡೀ ಚಿತ್ರೋದ್ಯಮವೇ ಪ್ರಶ್ನಿಸಿದೆ. ಟ್ವಿಟ್ಟರ್‌ನಲ್ಲಿ ಧ್ರುವ ಸರ್ಜಾ ಕೂಡ ಸ್ಟೇಟಸ್‌ ಹಾಕಿಕೊಳ್ಳುವ ಮೂಲಕ ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದ ನಟ ಧ್ರುವಸರ್ಜಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬೇಸರ ಹೊರಹಾಕಿದ್ದು, ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ.


ಈ ವಿಚಾರದ ಕುರಿತು, ಟ್ವೀಟರ್ ನಲ್ಲಿ ‌ಪೋಸ್ಟ್ ಮಾಡಿರುವ ಇವರು ತನ್ನ ಧೋರಣೆಯನ್ನು ಸಲೀಸಾಗಿ ತೆರೆದಿಟ್ಟಿದ್ದಾರೆ. “ಬಸ್​ನಲ್ಲಿ ಫುಲ್ ರಶ್..! ಮಾರ್ಕೆಟ್​ನಲ್ಲಿ ಗಿಜಿ ಗಿಜಿ ಅಂತ ಜನರು ತುಂಬಿಕೊಂಡಿರುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ..” ಹೀಗೆ ಬರೆದ ಒಂದು ಪೋಸ್ಟ್‌ ಹಾಕಿರುವ ಧ್ರುವ ಸರ್ಜಾ ಅವರಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ಸಿನಿಮಾರಂಗದ ಅನೇಕ ನಟ,ನಟಿಯರು ಕೂಡ ಟ್ವೀಟ್‌ಗೆ ಬೆಂಬಲ ಸೂಚಿಸಿದ್ದಾರೆ. “ಬೇರೆ ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ಸೇರಲು ಅವಕಾಶ ನೀಡಲಾಗಿದೆ ಆದರೆ, ‌ನಮ್ಮ ರಾಜ್ಯದಲ್ಲಿ ಯಾಕೆ ಹೀಗೆ ಎಂದು ಹೇಳಿರುವ ಧ್ರುವ ಸರ್ಜಾ ಅವರ ಮಾತಿಗೆ ಅನೇಕರು ಸಾಥ್‌ ಕೊಟ್ಟಿದ್ದಾರೆ.
ಅಂದಹಾಗೆ, ಫೆ‌.18ರಂದು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೊಗರು” ರಿಲೀಸ್ ಆಗಲಿದೆ. ಸರ್ಕಾರದ ಈ ರೀತಿಯ ಮಾರ್ಗಸೂಚಿಯಿಂದ ಸಿನಿಮಾರಂಗದ ಮಂದಿ ಬೇಸರ ಹೊರಹಾಕಿದ್ದಾರೆ. ಧ್ರುವ ಅವರ ಈ ಟ್ವೀಟ್‌ಗೆ ಅಭಿಮಾನಿಗಳೂ ಕೂಡ ಒಂದು ರೀತಿಯ ಅಭಿಯಾನ ಶುರುಮಾಡಿದ್ದಾರೆ. ಸದ್ಯಕ್ಕೆ ಧ್ರುವ ಸರ್ಜಾ ಅವರ ಈ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ.

Categories
ಸಿನಿ ಸುದ್ದಿ

ಸಿಡಿದೆದ್ದ ಚಿತ್ರರಂಗಕ್ಕೆ ಸುಧಾಕರ್‌ ರಿಯಾಕ್ಷನ್‌, ಮನರಂಜನೆಗಿಂತ ಜನರ ಆರೋಗ್ಯ ಮುಖ್ಯವಂತೆ!

ಹಾಗಾದ್ರೆ, ಸಂತೆ, ಮಾಲ್‌ಗಳಲ್ಲಿ ಸೇರುವ ಜನರ ಆರೋಗ್ಯ ಮುಖ್ಯವಲ್ಲವೇ?


ಚಿತ್ರಮಂದಿರಗಳಲ್ಲಿ ನೂರರಷ್ಟು ಭರ್ತಿಗೆ ಅವಕಾಶ ನೀಡದ ರಾಜ್ಯ ಸರ್ಕಾರದ ವಿರುದ್ಧ ಚಿತ್ರರಂಗ ಸಿಡಿದೆದ್ದ ಬೆನ್ನಲೇ ಆರೋಗ್ಯ ಸಚಿವ ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ. ʼ ಮನರಂಜನೆಗಿಂತ ಜನರ ಆರೋಗ್ಯ ಮುಖ್ಯʼ ಅಂತ ಹೇಳಿದ್ದಾರೆ. ಆದರೆ, ಪ್ರಶ್ನೆ ಇರುವುದು ಜನರ ಆರೋಗ್ಯ ಮುಖ್ಯ ಎನ್ನುವ ಅವರ ಹೇಳಿಕೆಗೆ ಅಲ್ಲ, ಸಚಿವರಿಗೆ ಅದೇ ಕಾಳಜಿ ಸಂತೆ, ಮಾಲ್‌ ಗಳಲ್ಲಿ ನೂಕುನುಗ್ಗಲಿನಲ್ಲಿ ಸೇರುವ ಜನರ ಬಗ್ಗೆ ಯಾಕಿಲ್ಲ ಅಂತ. ” ಜನರ ಆರೋಗ್ಯದ ದೃಷ್ಟಿಯಿಂದ ಚಿತ್ರಮಂದಿರಗಳಲ್ಲಿ ಈಗ ನೂರರಷ್ಟು ಭರ್ತಿಗೆ ಅವಕಾಶ ನೀಡುತ್ತಿಲ್ಲ ಎನ್ನುವುದೇ ಸರ್ಕಾರದ ನಿರ್ಧಾರ ಆಗಿದ್ದರೆ, ಸಂತೆ, ಮಾಲ್‌ ಹಾಗೂ ಜಾತ್ರೆಗಳಲ್ಲಿ ನೂಕುನುಗ್ಗಲಿನಲ್ಲಿ ಸೇರುವ ಜನರ ಆರೋಗ್ಯ ಸರ್ಕಾರಕ್ಕೆ ಮುಖ್ಯವಲ್ಲವೇ ಎನ್ನುವುದು.

ಇಷ್ಟಕ್ಕೂ ರಾಜ್ಯ ಸರ್ಕಾರವೇನು ತನ್ನದೇ ನಿರ್ಧಾರದ ಮೂಲಕ ಅವಕಾಶ ನೀಡಬೇಕಾದ ಸನ್ನಿವೇಶವೇನಿಲ್ಲ, ಈಗಾಗಲೇ ಚಿತ್ರ ಮಂದಿರಗಳಲ್ಲಿನ ನೂರರಷ್ಟು ಭರ್ತಿಗೆ ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಈ ಪ್ರಕಾರ ರಾಜ್ಯ ಸರ್ಕಾರ ಕೂಡ ಅವಕಾಶ ನೀಡಬೇಕಿತ್ತಾದರೂ, ಈಗ ಜನರ ಆರೋಗ್ಯ ಮುಖ್ಯ ಅಂತ ಕಾರಣ ನೀಡುತ್ತಿದೆ. ಹಾಗಂತ ಆರೋಗ್ಯ ಸಚಿವ ಸುಧಾಕರ್‌ ಹೇಳಿಕೆ ನೀಡಿದ್ದಾರೆ. ಇದನ್ನು ಚಿತ್ರರಂಗ ಹೇಗೆ ಸ್ವೀಕರಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಮಧ್ಯೆ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ವಲಯದಲ್ಲಿ ದೊಡ್ಡ ಆಕ್ರೋಶ ವ್ಯಕ್ತವಾಗಿದೆ. ಸೋಷಲ್‌ ಮೀಡಿಯಾದಲ್ಲಿ ಸಿನಿಮಾ ಪ್ರೇಕ್ಷಕರು ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.

Categories
ಸಿನಿ ಸುದ್ದಿ

ನಮಗೂ ನೂರರಷ್ಟು ಭರ್ತಿಗೆ ಅವಕಾಶ ಸಿಗಲಿ

ಸರ್ಕಾರಕ್ಕೆ ಚಿತ್ರರಂಗದ ಟ್ವೀಟ್‌ ಅಭಿಯಾನ

ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ… ಬಸ್‌ನಲ್ಲೂ ಫುಲ್‌ ರಶ್…‌. ಚಿತ್ರಮಂದಿರಕ್ಕೆ ಮಾತ್ರ ಏಕೆ ೫೦% ನಿರ್ಬಂಧ…?
– ಇದು ಕನ್ನಡ ಚಿತ್ರರಂಗ ಶುರು ಮಾಡಿರುವ ಅಭಿಯಾನ. ಹೌದು, ಕೇಂದ್ರ ಸರ್ಕಾರ ಈಗಾಗಲೇ ಫೆಬ್ರವರಿಯಿಂದ ಚಿತ್ರಮಂದಿರಗಳ ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಮಾತ್ರ ಅನುಮತಿ ನೀಡದೆ, ಶೇ.೫೦ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ಕೊಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬೇಸತ್ತಿರುವ ಕನ್ನಡ ಚಿತ್ರೋದ್ಯಮ ಈಗ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅದಕ್ಕೆಂದೇ ಕನ್ನಡ ಚಿತ್ರರಂಗದ ಸ್ಟಾರ್‌ ನಟರು, ನಿರ್ಮಾಪಕರು, ನಿರ್ದೇಶಕರು ಈಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ನಮಗೂ ಶೇ.೧೦೦ರಷ್ಟು ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಸ್ಟಾರ್‌ ನಟರೆಲ್ಲರೂ ತಮ್ಮ ಟ್ವೀಟ್‌ ಮೂಲಕ ಹೀಗೊಂದು ಅಭಿಯಾನವನ್ನೂ ಶುರುಮಾಡಿದ್ದಾರೆ.


ಶಿವರಾಜಕುಮಾರ್‌ ತಮ್ಮ ಟ್ವೀಟ್‌ ಮೂಲಕ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆ ವಿಡಿಯೋದಲ್ಲಿ ” ಎಲ್ಲರಿಗೂ ೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟಿರಬೇಕಾದರೆ, ನಮಗೆ ಮಾತ್ರ ಶೇ.೫೦ ಯಾಕೆ? ನಮಗೂ ೧೦೦% ಭರ್ತಿ ಬೇಕೇ ಬೇಕು. ಇಂಡಸ್ಟ್ರಿಗೋಸ್ಕರ ನಾವೆಲ್ಲಾ ಜೊತೆಗಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು. ಜೈ ಹಿಂದ್‌ ಜೈ ಕರ್ನಾಟಕ ಮಾತೆ” ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇನ್ನು, ನಟ ಧನಂಜಯ್‌ ಕೂಡ ಟ್ವೀಟ್‌ ಮಾಡಿದ್ದು, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು, ಥಿಯೇಟರ್‌ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ? ಎಂದು ಬರೆದುಕೊಳ್ಳುವ ಮೂಲಕ ಸರ್ಕಾರ ಕೂಡಲೇ ಶೇ>೧೦೦ಭರ್ತಿಗೆ ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ. ನಿರ್ದೇಶಕ ಸುನಿ ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ” ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು.. ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು.. ಮಾರ್ಕೆಟ್ ನಲ್ಲಿ ಮಾಮುಲಿ ವ್ಯಾಪಾರ, ರಾಜಕೀಯ ರ಼್ಯಾಲಿಗೆ ಜನಸಾಗರ.
ಪಬ್ ಹೋಟೆಲ್ ನಲ್ಲಿ ಎಲ್ಲರ ವಿಹಾರ, ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?” ಎಂದು ಬರೆದಿದ್ದಾರೆ. ಉಳಿದಂತೆ ಪುನೀತ್‌ರಾಜಕುಮಾರ್‌, ಪ್ರಶಾಂತ್‌ ನೀಲ್, ಧ್ರುವಸರ್ಜಾ, ದುನಿಯಾ ವಿಜಯ್‌, ಶಶಾಂಕ್‌, ಪವನ್‌ ಒಡೆಯರ್ ಸೇರಿದಂತೆ ಹಲವರು ಟ್ವೀಟ್‌ ಅಭಿಯಾನ ಶುರುಮಾಡಿದ್ದಾರೆ.

Categories
ಸಿನಿ ಸುದ್ದಿ

ಆರ್.ಚಂದ್ರುಗೆ ಉಪೇಂದ್ರ ಫೇಮ್‌ ಕಮ್ಮಿ ಎನಿಸಿತಾ?

ಸುದೀಪ್‌ ಎಂಟ್ರಿಯ ರಹಸ್ಯವೇನು?

ಕನ್ನಡ ಚಿತ್ರರಂಗ ಈಗ ಮತ್ತಷ್ಟು ರಂಗೇರಿದೆ. ಈಗಂತೂ ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳದ್ದೇ ಅಬ್ಬರ! ಹೌದು, ಕನ್ನಡದಲ್ಲಿ ಬರುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾಗಳ ಪೈಕಿ “ಕಬ್ಜ” ಚಿತ್ರವೂ ಸೇರಿದೆ. ನಿರ್ದೇಶಕ ಆರ್.ಚಂದ್ರು ಅದ್ಧೂರಿ ವೆಚ್ಚದಲ್ಲೇ ತಮ್ಮ ಕನಸಿನ “ಕಬ್ಜ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉದ್ಯಮಿ ಹಾಗೂ ಹಾಲಿ ಮಿನಿಸ್ಟರ್‌ ಎಂಟಿಬಿ ನಾಗರಾಜ್‌ ಅವರು ಈ ಚಿತ್ರಕ್ಕೆ ಸಾಥ್‌ ನೀಡಿರುವುದು, ಇನ್ನೂ ಒಂದು ಹಂತಕ್ಕೆ ಹೋಗಲು ಕಾರಣ. ಹೀಗಾಗಿ “ಕಬ್ಜ” ದೊಡ್ಡ ಮಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಹಜವಾಗಿಯೇ ಕನ್ನಡದ “ಕಬ್ಜ” ಮೇಲೆ ಹೆಮ್ಮೆಯೂ ಇದೆ. ಉಪೇಂದ್ರ ಅಭಿಮಾನಿಗಳಿಗೂ ಇದು ಖುಷಿಯ ವಿಷಯವೇ. ಅದೆಲ್ಲಾ ಸರಿ, ಆದರೆ, ನಿರ್ದೇಶಕ ಆರ್.ಚಂದ್ರು ಮಾತ್ರ ತಮ್ಮ “ಕಬ್ಜ” ಚಿತ್ರದ ಕೆಲವು ವಿಚಾರಗಳಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ಅವರ ಫ್ಯಾನ್ಸ್‌ಗೆ, ಉಪೇಂದ್ರ ಫ್ಯಾನ್ಸ್‌ಗೂ ಗೊಂದಲ ಮತ್ತು ಅನುಮಾನಕ್ಕೆ ಕಾರಣವಾಗಿವೆ.

ಆರ್.ಚಂದ್ರು, ನಿರ್ದೇಶಕ

ಇಷ್ಟಕ್ಕೂ ಆ ಅನುಮಾನ, ಗೊಂದಲಕ್ಕೆ ಕಾರಣದ ಬಗ್ಗೆ ಹೇಳುವುದಾದರೆ, ಉಪೇಂದ್ರ ಅವರು ಸ್ಟಾರ್‌ ನಟ. ಇದರಲ್ಲಿ ಎರಡು ಮಾತಿಲ್ಲ. ಅವರಿಗೇ ಆದ ಒಂದು ಛಾಪು ಇದೆ. ತೆಲುಗಿನಲ್ಲು ದೊಡ್ಡ ಹೆಸರು ಇರುವ ನಟ. ಇಂದಿಗೂ ತೆಲುಗಿನಲ್ಲಿ ಉಪೇಂದ್ರ ಅಂದಾಕ್ಷಣ, ಒಂದು ಹೊಸ ಕ್ರೇಜ್‌ ಶುರುವಾಗುತ್ತೆ. ಈ ನಿಟ್ಟಿನಲ್ಲಿ ಅವರೀಗ “ಕಬ್ಜ” ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ತೆಲುಗಿಗೆ ಮೊದಲು ಎಂಟ್ರಿಕೊಟ್ಟವವರು ಉಪೇಂದ್ರ . ಈ ಹಿಂದೆಯೇ ಅವರನ್ನು ಸೌತ್‌ ಸ್ಟಾರ್‌ ಅಂತ ಕರೆಯಲಾಗಿದೆ. ತೆಲುಗು ಫ್ಯಾನ್ಸ್‌ಗೆ ಉಪೇಂದ್ರ ಅವರ “ಎ” ಸಿನಿಮಾ ಅಂದರೆ, ಇವತ್ತಿಗೂ ಕ್ರೇಜ್‌ ಇದೆ. ಅಂತಹ ನೇಮು, ಫೇಮು ಇರುವ ನಟರನ್ನು ಇಟ್ಟುಕೊಂಡು ಪ್ಯಾನ್‌ ಇಂಡಿಯಾ ಚಿತ್ರ ಮಾಡಲು ಹೊರಟಿರುವ ಆರ್.ಚಂದ್ರು, ತಮ್ಮ ಚಿತ್ರಕ್ಕೆ ಸುದೀಪ್‌ ಅವರನ್ನೂ ಕರೆತಂದಿದ್ದಾರೆ.

“ಕಬ್ಜ”ದ ಮಾರ್ಕೆಟ್‌ ಇದರಿಂದ ಇನ್ನೂ ಹೆಚ್ಚಾಗಿದ್ದು ಸುಳ್ಳಲ್ಲ. ಆದರೆ, ಉಪೇಂದ್ರ ಅವರ ಫೇಮ್‌ ಕಮ್ಮಿ ಇದೆಯಾ? ಎಂಬ ಪ್ರಶ್ನೆ ಕೂಡ ಎದುರಾಗುತ್ತೆ. ಉಪೇಂದ್ರ ಒಬ್ಬರನ್ನಿಟ್ಟುಕೊಂಡು ಚಿತ್ರ ಮಾಡಿದರೆ, “ಕಬ್ಜ” ಮಾರ್ಕೆಟ್‌ಗೆ ಪೆಟ್ಟು ಬೀಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡರಾ ಎಂಬ ಪ್ರಶ್ನೆಯೂ ಈಗ ಗಾಂಧಿನಗರದಲ್ಲಿ ಓಡಾಡುತ್ತಿದೆ. ಆರಂಭದಲ್ಲೆಲ್ಲೂ ಇನ್ನೊಬ್ಬ ಸ್ಟಾರ್‌ ನಟರು ಇಲ್ಲಿರುತ್ತಾರೆ ಎಂದು ಸುಳಿವು ಕೊಡದ ಆರ್.ಚಂದ್ರು, ಸುದೀಪ್‌ಗಾಗಿಯೇ ಹೊಸ ಪಾತ್ರ ಸೃಷ್ಠಿ ಮಾಡಿಬಿಟ್ಟರಾ ಎಂಬ ಮತ್ತೊಂದು ಪ್ರಶ್ನೆಯೂ ಗಿರಕಿಹೊಡೆಯುತ್ತಿದೆ. ಯಾಕೆಂದರೆ, ಇದ್ದಕ್ಕಿದ್ದಂತೆಯೇ ಸುದೀಪ್‌ ಎಂಟ್ರಿಯಾಗಿದ್ದೇ ಈ ಪ್ರಶ್ನೆಗಳಿಗೆ ಕಾರಣ.


ಇನ್ನು, ಸುದೀಪ್‌ ಬಂದರೆ, “ಕಬ್ಜ” ಇನ್ನಷ್ಟು ಚೆನ್ನಾಗಿರುತ್ತೆ ಅಂತ ಅನಿಸಿದ್ದರಿಂದಲೇ ಆರ್.ಚಂದ್ರು ಈ ನಿರ್ಧಾರ ಮಾಡಿದ್ದಾರೆ. ಅದು ತಪ್ಪಲ್ಲ. ಆದರೆ, ಉಪೇಂದ್ರ ಅವರ ಬಹುಭಾಗದ ಚಿತ್ರೀಕರಣ ಮುಗಿಸಿದ ನಂತರ, ಈಗ ಸುದೀಪ್‌ ಅವರನ್ನು ಈ ಹಂತದಲ್ಲಿ ಕರೆತಂದಿದ್ದರ ಹಿಂದೆ ಒಂದಷ್ಟು ಮಾತುಗಳು ಕೇಳಿಬರುತ್ತಿವೆ. ಉಪೇಂದ್ರ ಅವರೊಬ್ಬರೇ ಇದ್ದರೆ, “ಕಬ್ಜ” ಮಾರ್ಕೆಟ್‌ ಕಡಿಮೆಯಾಗಬಹುದು ಅಥವಾ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಇನ್ನೊಬ್ಬ ಸ್ಟಾರ್‌ ಬೇಕು ಎಂಬ ಕಾರಣಕ್ಕೆ ಸ್ವತಃ ಚಂದ್ರು ಹೀಗೊಂದು ನಿರ್ಧಾರ ಮಾಡಿ, ಸುದೀಪ್‌ ಅವರಿಗೊಂದು ಪಾತ್ರವನ್ನು ಕ್ರಿಯೇಟ್‌ ಮಾಡಿ ಕರೆತಂದಿದ್ದಾರಾ ಅನ್ನೋದು ಕೂಡ ಪ್ರಶ್ನೆಯಾಗಿಯೇ ಉಳಿದಿದೆ. ಮೂಲಗಳ ಪ್ರಕಾರ ಸುದೀಪ್‌ ಅವರ ಪಾತ್ರದ ಮೂಲಕವೇ “ಕಬ್ಜ” ಚಿತ್ರದ ಕಥೆ ಓಪನ್‌ ಆಗಲಿದೆಯಂತೆ. ಹೆಚ್ಚು ಕಡಿಮೆ ಅದು ಒಂದೆರೆಡು ದಿನಗಳ ಚಿತ್ರೀಕರಣದ ಅವಧಿ ಎನ್ನಲಾಗುತ್ತಿದೆ. ಆರಂಭದಲ್ಲಿ ಕತೆ ನಿರೂಪಣೆ ಮಾಡುವ ಪಾತ್ರವದು ಎಂಬುದು ಸುದ್ದಿ.


ಅದೇನೆ ಇದ್ದರೂ, ಆರ್.ಚಂದ್ರು ಅವರನ್ನು ಮೊದಲಿನಿಂದಲೂ ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ, ಮೊದಲ ನಿರ್ದೇಶನದಿಂದ ಹಿಡಿದು, ಇಲ್ಲಿಯವರೆಗೆ ಮಾಡಿಕೊಂಡು ಬಂದ ಎಲ್ಲಾ ಚಿತ್ರಗಳ ಹಿಂದೆಯೂ ಒಂದೊಂದು ಕಥೆ ಇದೆ, ಅಲ್ಲಿ ಶ್ರಮವಿದೆ, ಜಯವಿದೆ. ಈಗಲು ಸಹ “ಕಬ್ಜ”ದಲ್ಲಿ ಅಂಥದ್ದೊಂದು ಕಥೆ ಇದೆ ಎಂಬ ಕಾರಣಕ್ಕೆ ಉಪೇಂದ್ರ ಅವರ ಜೊತೆ ಸುದೀಪ್‌ ಅವರನ್ನೂ ಕರೆತಂದು, ತಮ್ಮ ಎಂದಿನ ಫೇಮ್‌ ಕಾಪಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಚಂದ್ರು.

ಪ್ಯಾನ್‌ ಇಂಡಿಯಾ ಎಂಬ ಪ್ಯಾಷನ್‌ ಟಾಕ್
ಕನ್ನಡದಲ್ಲಿ “ಕೆಜಿಎಫ್‌” ಬಳಿಕ ಪ್ಯಾನ್‌ ಇಂಡಿಯಾ ಚಿತ್ರಗಳ ಹವಾ ಕೊಂಚ ಜಾಸ್ತಿಯೇ ಆಯ್ತು. ಈಗಂತೂ ಯಾವುದೇ ಸ್ಟಾರ್‌ ಸಿನಿಮಾ ಮಾಡಿದರೂ, ಅದು ಪ್ಯಾನ್‌ ಇಂಡಿಯಾ ಚಿತ್ರವಾಗುತ್ತಿದೆ. ಎಲ್ಲರೂ ನಮ್ಮದೂ ಪ್ಯಾನ್‌ ಇಂಡಿಯಾ ಚಿತ್ರ ಅಂತಾನೇ ಹೇಳಿಕೊಳ್ಳುತ್ತಿದ್ದಾರೆ. “ಕಬ್ಜʼ ಕೂಡ ಪ್ಯಾನ್‌ ಇಂಡಿಯಾ ಚಿತ್ರವೇ. ಯಾವುದೇ ಒಂದು ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ತಯಾರಾದರೆ, ಅದು ಪ್ಯಾನ್‌ ಇಂಡಿಯಾ ಸಿನಿಮಾನೇ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಒಂದು ರೀತಿ ಹೇಳಿಕೊಳ್ಳೋರಿಗೆ “ಪ್ಯಾನ್‌ ಇಂಡಿಯಾ ಸಿನಿಮಾ” ಅನ್ನುವುದು ಪ್ಯಾಷನ್‌ ಆಗಿಬಿಟ್ಟಿದೆ.‌

“ಕಬ್ಜ” ಕೂಡ ಪ್ಯಾನ್‌ ಇಂಡಿಯಾ ಸಿನಿಮಾನೇ. ಇದಕ್ಕೂ ಮೊದಲೇ ಉಪೇಂದ್ರ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಪ್ಯಾನ್‌ ಇಂಡಿಯಾ ಸಿನಿಮಾ ಹೀರೋ ಆಗಿದ್ದವರು. ಅದೇನೆ ಇರಲಿ, ನಿರ್ದೇಶಕ ಆರ್.ಚಂದ್ರು ಈಗ “ಕಬ್ಜʼ ಜಪ ಮಾಡುತ್ತಿದ್ದಾರೆ. ಅದರಲ್ಲೂ “ಕೆಜಿಎಫ್‌” ಲೆವೆಲ್‌ನಲ್ಲೇ ಈ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ, ತಮ್ಮ ಚಿತ್ರ ಸುದ್ದಿಯಾಗಬೇಕು ಎಂಬ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕನ್ನಡದಲ್ಲಿ “ಕೆಜಿಎಫ್‌” ಆಗದೇ ಹೋಗಿದ್ದರೆ, ಬೇರೆ ಚಿತ್ರಗಳ ಹೆಸರು ಹೇಳುವ ಮೂಲಕ ತಮ್ಮ ಸಿನಿಮಾ ಆ ಸಿನಿಮಾ ರೇಂಜ್‌ನಲ್ಲಿ ಮಾಡುವ ಬಗ್ಗೆಯೇ ಒಂದಷ್ಟು ಹೇಳಿಕೊಳ್ಳುತ್ತಿದ್ದರೇನೋ? ಒಂದು ಖುಷಿಯ ವಿಷಯವೆಂದರೆ, ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಹೀಗಾಗಿ, ಎಲ್ಲರೂ ತಮ್ಮ ಸಿನಿಮಾಗಳನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯಬೇಕು ಎಂಬ ಹಠದಲ್ಲೇ ಕೆಲಸ ಮಾಡುತ್ತಿದ್ದಾರೆ. ಚಂದ್ರು ಕೂಡ “ಕಬ್ಜ” ಚಿತ್ರವನ್ನು ದೊಡ್ಡ ಮಟ್ಟದಲ್ಲೇ ತಯಾರಿಸಿ, ಜೋರು ಸದ್ದಿನೊಂದಿಗೆ ಬರುವ ಯೋಚನೆಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದು, “ಕಬ್ಜ” ಹೊರಬಂದಾಗಷ್ಟೇ, ಅದರೊಳಗಿನ ವಿಶೇಷತೆಗಳು ನೋಡುಗರಿಗೆ ಗೊತ್ತಾಗುತ್ತವೆ. ಅಲ್ಲಿಯವರೆಗೆ ಕಾಯಲೇಬೇಕು.

Categories
ಸಿನಿ ಸುದ್ದಿ

ಐದು ಭಾಷೆಗಳಲ್ಲಿ ಮಾನಾಡು, ಕನ್ನಡ ಟೀಸರ್ ಲಾಂಚ್ ಮಾಡಲಿದ್ದಾರೆ ಕಿಚ್ಚ ಸುದೀಪ್


ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ನಟನೆಯ ’ಮಾನಾಡು’ ಚಿತ್ರವು ಐದು ಭಾಷೆಗಳಲ್ಲಿ ‌ನಿರ್ಮಾಣವಾಗುತ್ತಿದ್ದು, ಈಗ ಅಷ್ಟು ಭಾಷೆಗಳಲ್ಲೂ ಟೀಸರ್ ಲಾಂಚ್ ಆಗುತ್ತಿದ್ದು, ಅದರ ಕನ್ನಡ ವರ್ಷನ್ ಟೀಸರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ.‌ಹಾಗೆಯೇ ಉಳಿದ ನಾಲ್ಕು ಭಾಷೆಗಳಲ್ಲು ಅಲ್ಲಿನ ಜನಪ್ರಿಯ ಸ್ಟಾರ್ ಗಳೇ ಲಾಂಚ್ ಮಾಡುವವರು.

ಕಾಲಿವುಡ್ ಮಟ್ಟಿಗೆ ಮಾನಾಡು ಬಹು ನಿರೀಕ್ಷಿತ ಚಿತ್ರ. ಆಕ್ಷನ್, ಸೆಂಟಿ ಮೆಂಟ್ ಹಾಗೂ ಲವ್ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಚಿತ್ರ.ನಿರ್ದೇಶನದ ಜವಬ್ದಾರಿಯನ್ನು ವೆಂಕಟ್‌ಪ್ರಭು ವಹಿಸಿಕೊಂಡರೆ, ಸುರೇಶ್‌ಕಮತ್‌ಚಿ ಬಂಡವಾಳ ಹೂಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಸದ್ಯದಲ್ಲೆ ಲಭ್ಯವಾಗಲಿದೆ.ಕನ್ನಡ ಭಾಷೆಯ ಟೀಸರನ್ನು ‌ಫೆ.‌3 ರಂದು ಕಿಚ್ಚ ಸುದೀಪ್ (ಬುದುವಾರ) ಸರಿಯಾಗಿ ಮಧ್ಯಾಹ್ನ 2.34ಕ್ಕೆ ರಿವೀಲ್ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಸೆಟ್ಟೇರಿತು ‘ಟಕಿಲಾ’, ಕಿಕ್ಕೋ ಕಿಕ್ಕು ಕನ್ನಡ ಸಿನಿಮಾ

ನಶೆ ಸಿನಿಮಾ ನೋಡಿದವರಿಗೋ, ಸಿನಿಮಾ ಮಾಡಿದವರಿಗೋ…?

ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಹಾಗೂ ಪ್ರವೀಣ್‌ ನಾಯಕ್‌ ಜೋಡಿಯ “ಟಕಿಲಾ ʼಸೆಟ್ಟೇರಿದೆ. ಅವತ್ತು ಬೆಂಗಳೂರಿನ ಸ್ಟಾರ್ ಹೊಟೇಲ್ ಶೆರಾಟನ್ ಗ್ರಾಂಡ್ ನಾಲ್ಕನೇ ಮಹಡಿಯಲ್ಲಿ ಕನ್ನಡ ಟಕೀಲಾಗೆ ಮುಹೂರ್ತ. ನಿರ್ದೇಶಕರಾದ ನಾಗಚಂದ್ರ ಹಾಗೂ ಪ್ರವೀಣ್‌ ನಾಯಕ್‌ ಇಬ್ಬರೂ ಸಿಕ್ಕಾಪಟ್ಟೆ ಜನ ಬಳಕೆ ಮನುಷ್ಯರು. ಅದು ಅವತ್ತು ಅಲ್ಲಿ ಕಾಣುತ್ತಿತ್ತು. ಈ ಜೋಡಿಯ ಹೊಸ ಸಾಹಸಕ್ಕೆ ಶುಭ ಕೋರಲು ಗೆಳೆಯರು, ಹಿತೈಷಿಗಳು ಭರ್ಜರಿ ಸಂಖ್ಯೆಯಲ್ಲೇ ಸೇರಿದ್ದರು. ಅ ಮಧ್ಯೆಯೇ “ಟಕಿಲಾʼ ಸಿನಿಮಾಕ್ಕೆ ಚಾಲನೆ ಸಿಕ್ಕಿತು.


ಅಂದ ಹಾಗೆ, ನಿರ್ದೇಶಕ ನಾಗಚಂದ್ರ ನಿರ್ಮಾಣದ ಚೊಚ್ಚಲ ಚಿತ್ರ ಇದು. ನಿರ್ದೇಶನದಾಚೆ ಈಗ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಾಗೆಯೇ ಅವರ ಸ್ನೇಹಿತರೇ ಅದ ಪ್ರವೀಣ್‌ ನಾಯಕ್‌ ಎಂದಿನಂತೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಮೂಲತಃ ಛಾಯಾಚಿತ್ರ ಪತ್ರಕರ್ತರಾದ ಪ್ರವೀಣ್‌ ನಾಯಕ್‌, ‘ಜೆಡ್’ ‘ಮೀಸೆ ಚಿಗುರಿದಾಗ’, ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳ ನಿರ್ದೇಶನದ ಒಂದಷ್ಟು ಗ್ಯಾಪ್‌ ನಂತರ ಟಕಿಲಾ ಮೂಲಕ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಧರ್ಮ ಕೀರ್ತೀರಾಜ್‌ ಹಾಗೂ ನಿಖಿಲಾ ಸ್ವಾಮಿ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅವರೊಂದಿಗೆ ನಾಗೇಂದ್ರ ಅರಸ್‌, ಸುಮನ್, ಅಂಕಿತ ಬಾಲ, ಕೋಟೆ ಪ್ರಭಾಕರ್ ಮತ್ತಿತರರು ತಾರಾಗಣದಲ್ಲಿದ್ದಾರೆ.


ಆ ದಿನ ಮುಹೂರ್ತ ನಂತರ ಮಾತಿಗೆ ಕುಳಿತ ಚಿತ್ರತಂಡ ಚಿತ್ರದ ವಿಶೇಷತೆ ಹೇಳಿಕೊಂಡಿತು. ಇದು ನಶೆ ಕುರಿತ ಚಿತ್ರ. ನಶೆ ಅಂದ್ರೆ ಬರೀ ಡ್ರಗ್ಸ್‌ ಮಾತ್ರವಲ್ಲ, ಪ್ರೀತಿ ಕೂಡ ಒಂದು ನಶೆ. ಅತಿಯಾದ ‘ಅಡಿಕ್ಷನ್‌ ’ ಸಹ ದೊಡ್ಡ ನಶೆ. ಅ ರೀತಿಯ ಎಳೆಗಳು ಚಿತ್ರದಲ್ಲಿ ಎಂದರು. ಚಿತ್ರದಲ್ಲಿ ಕೆಲವು ಕಡೆ ಮಾನಶಾಸ್ತ್ರದ ಛಾಯೆ ಸಹ ಚಿತ್ರದಲ್ಲಿ ಕಂಡು ಬರುವುದು ನಿರ್ದೇಶಕ ಪ್ರವೀಣ್ ನಾಯಕ್ ಅವರು ಜೀವನದಲ್ಲಿ ಕಂಡಿರುವುದನ್ನೇ ಹೇಳಲು ಹೊರಟಿದ್ದಾರಂತೆ.

ಚಿತ್ರಕ್ಕೆ . 30 ದಿವಸಗಳ ಕಾಲ ಬೆಂಗಳೂರು, ಸಕಲೆಶಪುರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ನಾಯಕ ಧರ್ಮ ಕೀರ್ತಿರಾಜ್. ಅನುಭವಿಗಳ ಜೊತೆ ಕೆಲಸ ಮಾಡುವುದು ಖುಷಿಯ ವಿಚಾರ. ಇದೊಂದು ಕ್ರೈಂ ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಸಹ ಒಳಗೊಂಡಿದೆ. 12 ವರ್ಷಗಳ ಬಳಿಕ ಸ್ನೇಹಿತ ನಾಗೇಂದ್ರ ಅರಸ್ ಜೊತೆ (ನವಗ್ರಹ ನಂತರ) ಜೊತೆ ಸಿನಿಮಾದಲ್ಲಿ ಮಾಡುತ್ತಿರುವುದು ಮತ್ತೊಂದು ಖುಷಿ ತಂದಿದೆ ಎನ್ನುವ ಮಾತು ಧರ್ಮ ಕೀರ್ತಿರಾಜ್‌ ಅವರದ್ದು.

ಶೀರ್ಷಿಕೆಯಲ್ಲಿ ಒಂದು ಕಿಕ್ ಎಂದು ಹೇಳುವ ನಾಯಕಿ ನಿಖಿತಾ ಸ್ವಾಮಿ, ಇಲ್ಲಿ ಅಭಿನಯಕ್ಕೆ ಬಹಳ ಅವಕಾಶವಿದೆ. ಒಳ್ಳೆಯ ಸಸ್ಪೆನ್ಸ್ ಸಹ ಒಳಗೊಂಡಿದೆ ಎಂದು ಹೇಳಿಕೊಂಡರು. ಶ್ರೀ ಸಿದ್ದಿವಿನಾಯಕ ಫಿಲ್ಮ್ಸ್ ಅಡಿಯಲ್ಲಿ ತಾಯರಾಗುತ್ತಿರುವ ಈ ಸಿನಿಮಾಕ್ಕೆ ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣವಿದೆ, ಟಾಪ್ ಸ್ಟಾರ್ ರೇಣು ಅವರು ನಾಲ್ಕನೇ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಸುಂದರಣ್ಣನಿಗೆ ಎಪ್ಪತ್ತು ತುಂಬಿತು!

ನಟ ಸುಂದರ್ ರಾಜ್ ಅವರಿಗೆ ಇಂದು ಎಪ್ಪತ್ತು ತುಂಬಿತು. ಹವ್ಯಾಸಿ ರಂಗಭೂಮಿಯಿಂದ ನಟನೆ ಆರಂಭಿಸಿದ ಸುಂದರಣ್ಣ ಬೆಳ್ಳಿತೆರೆಗೆಪರಿಚಯವಾಗಿದ್ದು ‘ಕಾಡು’ ಚಿತ್ರದೊಂದಿಗೆ. ಅವರು ಸಿನಿಮಾಗೆ ಪರಿಚಯವಾಗಿ ಬರೋಬ್ಬರಿ ನಲವತ್ನಾಲ್ಕು ವರ್ಷ!

– ಶಶಿಧರ
ಭಾರತೀಯ ರಂಗಭೂಮಿ ಕಂಡ ಶ್ರೇ‍ಷ್ಠ ರಂಗಕರ್ಮಿ ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿದ ನಟ ಸುಂದರ್‌ರಾಜ್‌. ಹವ್ಯಾಸಿ ರಂಗಭೂಮಿಯಲ್ಲಿನಟಿಸುತ್ತಿದ್ದ ಅವರು ‘ಕಾಡು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಮುಂದೆ ಸಾಲು, ಸಾಲು ಚಿತ್ರಗಳ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದ ಸುಂದರ್‌ ಹತ್ತಾರು ವಿಶಿಷ್ಠ ಪಾತ್ರಗಳೊಂದಿಗೆ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ.ಚೋಮನದುಡಿ, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಅನ್ವೇಷಣೆ, ತಪ್ಪಿದ ತಾಳ, ಸಂಕ್ರಾಂತಿ, ಚಂದನದ ಗೊಂಬೆ, ಪ್ರಾಯ ಪ್ರಾಯ ಪ್ರಾಯ.. ಹೀಗೆ ಹಲವು ಸಿನಿಮಾಗಳಲ್ಲಿ ಸುಂದರ್ ರಾಜ್ ಪಾತ್ರಗಳು ನೆನಪಾಗುತ್ತವೆ.

‘ಲಿಫ್ಟ್‌ಮ್ಯಾನ್‌’ ಅವರ ಇನ್ನೂರನೇ ಸಿನಿಮಾ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಬಹುದಿನಗಳ ನಂತರ ಮೊನ್ನೆ ‘ಸಿರಿ’ ಚಿತ್ರದ ಪಾತ್ರವೊಂದರಲ್ಲಿ ನಟಿಸಿರುವ ಸುಂದರ್‌ರಾಜ್‌ ಮುಂದಿನ ವಾರ ‘ಜೋಕುಮಾರಸ್ವಾಮಿ’ ನಾಟಕದಲ್ಲಿ ಪಾತ್ರ ಮಾಡಲಿದ್ದಾರೆ.
“ಹೀಗೆ ನಟಿಸುತ್ತಲೇ ಇರಬೇಕು. ಮೊದಲು ಎರಡು-ಮೂರು ದಿನಗಳ ಕಾಲ್‌ಶೀಟ್‌ ಪಾತ್ರಗಳಿಗೆ ಕೇಳುತ್ತಿದ್ದರು. ಈಗ ನನ್ನ ವಯಸ್ಸಿಗೆ ಹೊಂದುವಂತಹ ಚಿತ್ರವಿಡೀ ದುಡಿಸಿಕೊಳ್ಳುವ ಪಾತ್ರಗಳು ಬರುತ್ತಿವೆ. ಇದು ಖುಷಿಯ ಸಂಗತಿ” ಎನ್ನುವ ಅವರಿಗೆ ಕಳೆದ ವರ್ಷ ದುಃಖ ತಂದಿತು. ಅಳಿಯ ಚಿರಂಜೀವಿ ಸರ್ಜಾ ಅವರನ್ನುಕಳೆದುಕೊಂಡರು. “ಇದೇ ಬದುಕು. ಕಷ್ಟಗಳು ನಮ್ಮನ್ನು ದೃಢಗೊಳಿಸುತ್ತವೆ” ಎಂದು ಅನುಭಾವಿಯಾಗುತ್ತಾರವರು.

ಸಿನಿಮಾ – ಬದುಕಿನಲ್ಲಿ ಸುಂದರ್ ರಾಜ್‌ ವಿಶಿಷ್ಟ ಅನುಭವಗಳಿಗೆ ಸಾಕ್ಷಿಯಾಗಿದ್ದಾರೆ. ತಮ್ಮ ವೃತ್ತಿ ಬದುಕಿನ ಪ್ರಮುಖ ಪಾತ್ರಗಳಲ್ಲೊಂದಾದ‘ಅನ್ವೇಷಣೆ’ ಪಾತ್ರವನ್ನು ಅವರು ನೆನಪು ಮಾಡಿಕೊಳ್ಳುತ್ತಾರೆ. ಪಾತ್ರ ನಿರ್ವಹಣೆಯಲ್ಲಿನ ನಟನ ಸಂಕಷ್ಟಗಳನ್ನು ಹೇಳುತ್ತಲೇ, ಪಾತ್ರದ ಯಶಸ್ಸು ಹೇಗೆ ನಟನಿಗೆ ಗೌರವ ತಂದುಕೊಡುತ್ತದೆ ಎನ್ನುವುದನ್ನು ಈ ಘಟನೆ ಹೇಳುತ್ತದೆ. ಇದನ್ನು ಅವರ ಮಾತುಗಳಲ್ಲೇ ಕೇಳಿದರೆ ಚೆನ್ನ. ಸುಂದರ್ ರಾಜ್ ಹೇಳುತ್ತಾರೆ –

“ಟಿ.ಎಸ್.ನಾಗಾಭರಣ ನಿರ್ದೇಶನದ `ಅನ್ವೇಷಣೆ’ (1983) ಚಿತ್ರದ ಶೂಟಿಂಗ್‍ನ ಅಚಾತುರ್ಯ ಕಣ್ಣಿಗೆ ಕಟ್ಟಿದಂತಿದೆ.
ಬೆಂಗಳೂರು ಗಾಂಧಿ ಬಜಾರ್‍ನ ರಸ್ತೆಯ ವಠಾರವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅನಂತನಾಗ್, ಹಿಂದಿ ತಾರೆ ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾರ್ಡ್‍ರಂಥ ಮೇರು ಕಲಾವಿದರು ಅಭಿನಯಿಸುತ್ತಿದ್ದ ಚಿತ್ರವಿದು. ಚಿತ್ರದಲ್ಲಿ ನನಗೆ ನಿರುದ್ಯೋಗಿ ಉಡಾಫೆ ಯುವಕನ ಪಾತ್ರ. ಯಾರೂ ಇಲ್ಲದ ಹೊತ್ತಿನಲ್ಲಿ ಮನೆಗಳಿಗೆ ನುಗ್ಗಿ ಐಷಾರಾಮಿ ಬದುಕು ಅನುಭವಿಸುವಂತೆ ಈ ಪಾತ್ರವನ್ನು ಚಿತ್ರಿಸಲಾಗಿತ್ತು.

ಹಾಗೆ ಒಂದು ದಿನ ನಾನು ಅನಂತ್ -ಸ್ಮಿತಾ ಅವರ ವಠಾರದ ಮನೆಗೆ ನುಗ್ಗಿರುತ್ತೇನೆ. ಮತ್ತೊಂದೆಡೆ ಗಿರೀಶ್ ಕಾರ್ನಾಡ್
ಅವರದ್ದು ಚಿತ್ರದಲ್ಲಿ ಪೋಷಕ ಪಾತ್ರ. ನಾನು ಅವರ ಪುತ್ರಿಯನ್ನು ಚುಡಾಯಿಸುತ್ತಿರುತ್ತೇನೆ. ನಾನು ವಠಾರದಲ್ಲಿರುವ ವಿಚಾರ ತಿಳಿಸುತ್ತಿದ್ದಂತೆ, ಕಾರ್ನಾಡ್ ಅಲ್ಲಿಗೆ ಬರುತ್ತಾರೆ. ಮಗಳ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯುತ್ತದೆ. ಕಾರ್ನಾಡ್ ಲೋಹದ ವಿಗ್ರಹವೊಂದರಿಂದ ನನ್ನ ತಲೆಗೆ ಒಡೆದಾಗ ನಾನು ಅಸುನೀಗುತ್ತೇನೆ! ಅಲ್ಲಿಂದ ಮುಂದೆ ನಾನು ಹೆಣ. ಈ ಶವವನ್ನು ವಠಾರದಿಂದ ಹೇಗೆ ಹೊರತೆಗೆಯುತ್ತಾರೆ ಎನ್ನುವುದೇ ಕಥಾಹಂದರ.

ಹೆಣವಾದ ನನ್ನನ್ನು ಹೊರಗಡೆ ಸಾಗಿಸುವ ಜವಾಬ್ದಾರಿ ಅನಂತ್, ಸ್ಮಿತಾ ಮತ್ತು ಕಾರ್ನಾರ್ಡ್‍ರ ಹೆಗಲೇರುತ್ತದೆ. ಮೂವರೂ ಗೋಣಿಚೀಲದಲ್ಲಿ ನನ್ನನ್ನು (ಹೆಣ) ಹಾಕಿ ಕಟ್ಟುತ್ತಾರೆ. ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ಚೀಲದೊಳಗಿನ ನಾನು ಉಸಿರು ಬಿಗಿಹಿಡಿಯಬೇಕು. ನಿರ್ದೇಶಕರು ಆ್ಯಕ್ಷನ್ ಹೇಳಿದ ಏಳೆಂಟು ಸೆಕೆಂಡ್‍ಗಳಲ್ಲೇ ನನಗೆ ಮೈಯೆಲ್ಲಾ ಚುಚ್ಚಿದ ಅನುಭವ! ಕೂಗಿದರೆ ದೊಡ್ಡ ಕಲಾವಿದರ ಎದುರು ಅವಮಾನವಾಗುತ್ತದೆ ಎನ್ನುವ ಅಳುಕು. ಅಂತೂ ಉಸಿರು ಬಿಗಿಹಿಡಿದು ಎರಡು ನಿಮಿಷಗಳ ಶಾಟ್ ಮುಗಿಸಿದೆ.

ನಿರ್ದೇಶಕ ನಾಗಾಭರಣರು ಕಟ್ ಹೇಳುತ್ತಿದ್ದಂತೆ ಯಾರೋ ಚೀಲ ಬಿಚ್ಚಿದರು. ಎದ್ದೆನೋ, ಬಿದ್ದೆನೋ ಎಂದು ಹೊರಗೆ ಕಾಲಿಟ್ಟರೆ
ನನ್ನ ಮೈತುಂಬಾ ಕೆಂಪು ಇರುವೆಗಳು! ಯಾರೋ ಪುಣ್ಯಾತ್ಮರು ಸಕ್ಕರೆ ಹಾಕಿದ್ದ ಗೋಣಿಚೀಲ ತಂದುಬಿಟ್ಟಿದ್ದರು!
ಕೊನೆಗೆ ರೂಂಗೆ ಓಡಿ ಹೋಗಿ ಬಟ್ಟೆ ಬಿಚ್ಚಿ ಸುಧಾರಿಸಿಕೊಳ್ಳುವ ಹೊತ್ತಿಗೆ ಸಾಕುಬೇಕಾಯಿತು. ನನಗೀಗಲೂ ನೆನಪಿದೆ,
ಈ ಪಾತ್ರಾಭಿಯನಕ್ಕೆ ನನಗೊಂದು ಅದ್ಭುತ ಮೆಚ್ಚುಗೆ ವ್ಯಕ್ತವಾಗಿತ್ತು – ಹೆಣದ ಪಾತ್ರದಲ್ಲಿ ಜೀವಂತ ಅಭಿನಯ!”

error: Content is protected !!