ಕನ್ನಡ ಕಿರುತೆರೆಯಲ್ಲಿ ರಮ್ಯಕೃಷ್ಣ ‘ನಾಗಭೈರವಿ’ ಫ್ಯಾಂಟಸಿ ಸರಣಿಯಲ್ಲಿ ಶಿವಗಾಮಿ!

 ರಮ್ಯಕೃಷ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. ತೊಂಬತ್ತರ ದಶಕದಲ್ಲಿ ನಾಯಕಿಯಾಗಿ ಮಿಂಚಿದ ಅವರು ಇದೀಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರ ಅವರಿಗೆ ದೊಡ್ಡ ಮನ್ನಣೆ ತಂದುಕೊಟ್ಟಿತ್ತು. ಸಿನಿಮಾ ಜೊತೆಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ನಟಿ ಇದೀಗ ಕನ್ನಡ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ‘ನಾಗಭೈರವಿ’ ತೆಲುಗು ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಧಾರಾವಾಹಿಯ ಕನ್ನಡ ಅವತರಣಿಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.

ಕಳೆದ ವರ್ಷಾಂತ್ಯದಲ್ಲಿ ತೆಲುಗಿನಲ್ಲಿ ಪ್ರಸಾರವಾದ ‘ನಾಗಭೈರವಿ’ ಇದೀಗ ಕನ್ನಡಕ್ಕೆ ಬರುತ್ತಿದೆ. ವರನಾಂಜನೇಯುಲು ನಿರ್ದೇಶನದ ಈ ಸರಣಿ ತೆಲುಗು ನಾಡಿನಲ್ಲಿ ಜನಪ್ರಿಯವಾಗಿದೆ. ಇದೀಗ ಮಾರ್ಚ್‌ 1ರಿಂದ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇದು ಫ್ಯಾಂಟಸಿ, ಸಸ್ಪೆನ್ಸ್‌ ಸರಣಿ. ಅದ್ಧೂರಿ ಮೇಕಿಂಗ್‌, ಆಕರ್ಷಕ ವಿಶ್ಯುಯಲ್‌ ಎಫೆಕ್ಟ್‌ ಇಲ್ಲಿನ ಹೈಲೈಟ್‌. ದೇಶದಲ್ಲಿ ನಾಗದೇವತೆ ಕುರಿತ ನಂಬಿಕೆ ಸುತ್ತಮುತ್ತ ಕತೆ ಹೆಣೆಯಲಾಗಿದೆ. ಪ್ರಾಚೀನ ಆರೋಗ್ಯ ಗ್ರಂಥ ಚರಕ ಸಂಹಿತಾ ಕುರಿತೂ ಇಲ್ಲಿ ಪ್ರಸ್ತಾಪವಾಗಲಿದೆ.

ನಟಿ ರಮ್ಯಾ ಕೃಷ್ಣ ಅವರು ಕನ್ನಡಿಗರಿಗೆ ಚಿರಪರಿಚಿತ ನಟಿ. ಎಂಬತ್ತರ ದಶಕದ ಕೊನೆಯಲ್ಲಿ ತೆರೆಕಂಡ ‘ಕೃಷ್ಣರುಕ್ಮಿಣಿ’ ಚಿತ್ರದೊಂದಿಗೆ ಕನ್ನಡ ಬೆಳ್ಳಿತೆರೆ ಪ್ರವೇಶಿಸಿದ ಅವರು ಗಡಿಬಿಡಿ ಗಂಡ, ಮಾಂಗಲ್ಯಂ ತಂತು ನಾನೇನಾ, ಸ್ನೇಹ, ಏಕಾಂಗಿ, ಬಾ ಬಾರೋ ರಸಿಕ, ರಕ್ತಕಣ್ಣೀರು, ರಾಜಾ ನರಸಿಂಹ, ಮಾಣಿಕ್ಯ, ಅಂಜನೀಪುತ್ರ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಶಿವಗಾಮಿ’ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ.

Related Posts

error: Content is protected !!