ಶಾರುಖ್‌ ಜೋಡಿಯಾಗಿ ತಾಪ್ಸಿ! ಇದು ‘ಮುನ್ನಾಭಾಯ್‌’ ಖ್ಯಾತಿಯ ಹಿರಾನಿ ಸಿನಿಮಾ!!


2018ರಲ್ಲಿ ‘ಜೀರೋ’ ಚಿತ್ರದ ನಂತರ ಶಾರುಖ್‌ ಖಾನ್‌ ಅವರ ಸಿನಿಮಾ ಬಿಡುಗಡೆಯಾಗಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯ್ತು. ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೊಸ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಶಾರುಖ್‌ರ ‘ಪಠಾಣ್‌’ ಸಿನಿಮಾ ಚಿತ್ರೀಕರಣದಲ್ಲಿದೆ. ಈ ಮಧ್ಯೆ ‘ಮುನ್ನಾಭಾಯ್ ಎಂಬಿಬಿಎಸ್‌’ ಸಿನಿಮಾ ಖ್ಯಾತಿಯ ರಾಜಕುಮಾರ್ ಹಿರಾನಿ ಅವರು ಶಾರುಖ್‌ಗೆ ಚಿತ್ರಕಥೆ ಹೆಣೆಯುತ್ತಿದ್ದಾರೆ. ಈ ಚಿತ್ರದಲ್ಲಿ ಖಾನ್‌ಗೆ ನಾಯಕಿಯಾಗಿ ತಾಪ್ಸಿ ನಟಿಸುವುದು ಖಾತ್ರಿಯಾಗಿದೆ.

ಹಿರಾನಿ ನಿರ್ದೇಶನದ ಈ ಚಿತ್ರ ಶಾರುಖ್‌ ಖಾನ್‌ ಜೊತೆ ತಾಪ್ಸಿಗೆ ಮೊದಲ ಪ್ರಯೋಗ. ಆದರೆ ಈ ಹಿಂದೆ ಖಾನ್ ನಿರ್ಮಾಣದ ‘ಬದ್ಲಾ’ ಚಿತ್ರದಲ್ಲಿ ತಾಪ್ಸಿ ನಟಿಸಿದ್ದರು. ಅಮಿತಾಭ್ ಬಚ್ಚನ್‌ ಮುಖ್ಯಭೂಮಿಕೆಯಲ್ಲಿದ್ದ ಈ ಕ್ರೈಂ-ಥ್ರಿಲ್ಲರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ತಾಪ್ಸಿ ಅವರು ಶಾರುಖ್‌ಗೆ ಜೋಡಿಯಾಗುವ ಅವಕಾಶ ಪಡೆದಿದ್ದಾರೆ. ಹಿರಾನಿ ಹೊಸ ಸಿನಿಮಾ ಒಂದು ಸೋಷಿಯಲ್‌ – ಡ್ರಾಮಾ ಎನ್ನಲಾಗಿದೆ. ಪಂಜಾಬ್‌ನಿಂದ ಕೆನಡಾಗೆ ವಲಸೆ ಹೋಗುವ ವ್ಯಕ್ತಿಯಾಗಿ ಶಾರುಖ್‌ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಶಾರುಖ್‌ ನಟನೆಯ ‘ಪಠಾಣ್‌’ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಚಿತ್ರದಲ್ಲಿನ ಶಾರುಖ್ ಗೆಟ್‌ಅಪ್ ಹೊರಬಿದ್ದಿದ್ದು, ಅಭಿಮಾನಿಗಳು ಅವರ ಹೇರ್‌ಸ್ಟೈಲ್ ಕಾಪಿ ಮಾಡತೊಡಗಿದ್ದಾರೆ. ಮತ್ತೊಂದೆಡೆ ನಟಿ ತಾಪ್ಸಿ ಮೊನ್ನೆ ‘ಲೂಪ್‌ ಲಪೇಟಾ’ ಸಿನಿಮಾ ಪೂರ್ಣಗೊಳಿಸಿದ್ದು, ಸದ್ಯ ‘ದೊ ಬಾರಾ’ ಚಿತ್ರೀಕರಣದಲ್ಲಿದ್ದಾರೆ. ಇದಾದ ನಂತರ ‘ರಶ್ಮಿ ರಾಕೆಟ್‌’ನಲ್ಲಿ ನಟಿಸಲಿದ್ದು, ಅದು ಪೂರ್ಣಗೊಂಡ ನಂತರ ಶಾರುಖ್‌ ಸಿನಿಮಾಗೆ ಬರುತ್ತಾರೆ. ವಿಶಿಷ್ಠ ಸಿನಿಮಾಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ತಾಪ್ಸಿ, ಶಾರುಖ್ ಜೋಡಿಯಾಗಿ ಹೇಗೆ ಕಾಣಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Related Posts

error: Content is protected !!