Categories
ಸಿನಿ ಸುದ್ದಿ

ಆಸ್ಪತ್ರೆಗೆ ದಾಖಲಾದ ಸಂಜನಾ! ಲೈವ್‌ ಬಂದು ಬದುಕು ಬೇಸರವಾಗಿದೆ ಜೀವನ ಬೇಡ ಅಂದಿದ್ದರು

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲುವಾಸ ಅನುಭವಿಸಿದ್ದ ನಟಿ   ಸಂಜನಾ ಗಲ್ರಾನಿ,  ಕೆಲವು ತಿಂಗಳ ಕಾಲ ಜೈಲಲ್ಲಿದ್ದರು. ಕೊನೆಗೂ ಅವರು ಹೊರಬಂದಿದ್ದೂ ಆಯ್ತು. ಯಾರ ಮಾತಿಗೂ  ಸಿಗದ ಸಂಜನಾ ಕೆಲ ಕಾಲ  ಮನೆಯಲ್ಲಿದ್ದುಕೊಂಡೇ ರಿಲ್ಯಾಕ್ಸ್ ಆಗಿದ್ದರು. ಪೈಂಟಿಂಗ್ ಮಾಡಿಕೊಳ್ಳುತ್ತಾ, ಖುಷಿ ಖುಷಿಯಾಗಿ ಮನೆಯವರ ಜೊತೆ ಕಾಲ ಕಳೆಯುತ್ತಿದ್ದರು. ಈಗ ಸಂಜನಾ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್‌   ಬಂದು, ಬದುಕಿನ ಬಗೆಗೆ ಬೇಸರ ಆಗಿದೆ, ಜೀವನನೇ ಬೇಡ ಎಂಬಂತೆ  ಹೇಳಿಕೊಂಡಿದ್ದರು. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ನನ್ನ ಆರೋಗ್ಯದಲ್ಲಿ ವಿಪರೀತ ಏರುಪೇರಾಗಿದೆ ಎಂದಿದ್ದರು.

ಕೆಲ ಹೊತ್ತಿನ ಬಳಿಕ ಅವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ  ಎಂಬ ಸುದ್ದಿ ಬಂದಿದೆ. ಸದ್ಯಕ್ಕೆ ಸಂಜನಾ ಗಲ್ರಾನಿ  ಆಸ್ಪತ್ರೆಗೆ ಸೇರಿದ್ದು ಯಾಕೆ ಎಂಬ ಮಾಹಿತಿ ತಿಳಿದಿಲ್ಲ. ಆಸ್ಪತ್ರೆಯಿಂದಲೇ ಲೈವ್ ನಲ್ಲಿ ಮಾತನಾಡಿರುವ ಇವರು,  ನನ್ನ ಆರೋಗ್ಯ ಈಗ ಸುಧಾರಿಸಿದೆ ಎಂದು ಹೇಳಿಕೊಂಡಿದ್ದಾರೆ. ಅದೇನೆ ಇರಲಿ, ಸಂಜನಾ ಜೈಲಿನಿಂದ ಹೊರಬಂದ ಬಳಿಕ ಮಾತನಾಡಿದ್ದು, ಆಸ್ಪತ್ರೆಗೆ ಸೇರಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

Categories
ಸಿನಿ ಸುದ್ದಿ

ಶುರುವಾಯ್ತು ರಶ್ಮಿಕಾ ಹಿಂದಿ ಸಿನಿಮಾ! ಮಿಷನ್ ಮಜ್ನೂ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ. ಇನ್ನೂ ಒಂದು ಮೆಟ್ಟಿಲು ಹತ್ತಿರುವ ಅವರೀಗ ಬಾಲಿವುಡ್ ಹಿರೋಯಿನ್‌! ಶಂತನು ಬಾಗ್ಚಿ ನಿರ್ದೇಶನದ ಅವರ ಹಿಂದಿ ಸಿನಿಮಾ ‘ಮಿಷನ್ ಮಜ್ನೂ’ ಇಂದು ಚಿತ್ರೀಕರಣ ಆರಂಭಿಸಿದೆ. ‘ಕಪೂರ್ ಅಂಡ್ ಸನ್ಸ್‌’, ‘ಏಕ್ ವಿಲನ್‌’ ಸಿನಿಮಾಗಳ ಖ್ಯಾತಿಯ ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರದ ಹೀರೋ.

ಇಂದು ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ನಾಯಕ – ನಾಯಕಿ ಸಿದ್ಧಾರ್ಥ್ ಮತ್ತು ರಶ್ಮಿಕಾ ಸ್ಕ್ರಿಪ್ಟ್‌ ಪೇಪರ್‌ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಎಪತ್ತರ ದಶಕದ ಹಿನ್ನೆಲೆಯ ಕತೆ ಚಿತ್ರದಲ್ಲಿರುತ್ತದೆ. ನೈಜ ಘಟನೆಯನ್ನು ಆಧರಿಸಿ ಹೆಣೆದಿರುವ ಕತೆಯಲ್ಲಿ ಸಿದ್ಧಾರ್ಥ್‌ ರಾ  ಏಜೆಂಟ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗೂಢಚರ್ಯೆಗೆ ಸಂಬಂಧಿಸಿದಂತಹ ಪ್ರಮುಖ ಅಂಶವೊಂದು ಹೇಗೆ ಎರಡು ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಸುತ್ತ ಕಥಾಹಂದರ ಹೆಣೆಯಲಾಗಿದೆ.

ಪರ್ವೀಜ್ ಶೇಖ್‌, ಅಸೀಮ್ ಅರೋರಾ, ಸುಮಿತ್ ಬತೇಜಾ ಚಿತ್ರಕಥೆ ಹೆಣೆದಿದ್ದಾರೆ. “ವಿಶೇಷ ತಂಡದೊಂದಿಗೆ ಅಪರೂಪದ ಕತೆಯ ಸಿನಿಮಾ ಶುರುವಾಗಿದೆ” ಎಂದು ನಟ ಸಿದ್ಧಾರ್ಥ್ ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಗೋವಾ ಕನ್ನಡಿಗನ ಸಲಗ ಪ್ರೀತಿ- ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡ ದುನಿಯಾ ವಿಜಯ್ ಅಭಿಮಾನಿ

ಭಾವುಕರಾದ ವಿಜಯ್‌ ಅಭಿಮಾನಿ ಜೊತೆ ವಿಡಿಯೋ ಕಾಲ್‌ ಮಾತುಕತೆ

ಅದೇನೋ ಗೊತ್ತಿಲ್ಲ. ಸಿನಿಮಾ ಸ್ಟಾರ್ಸ್‌ ಅಂದರೆ, ಅದೊಂದು ರೀತಿ ಎಲ್ಲಿಲ್ಲದ ಅಭಿಮಾನ. ಅಭಿಮಾನಿಗಳು ತಮ್ಮ ತಮ್ಮ ಹೀರೋಗಳನ್ನು ಆರಾಧಿಸುವ ಪರಿ ಬಗ್ಗೆ ಹೇಳುವುದು ಕಷ್ಟವೇ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ, “ದುನಿಯಾ” ವಿಜಯ್‌ ಅಭಿಮಾನಿಯೊಬ್ಬನ ಪ್ರೀತಿಯ ಬಗ್ಗೆ. ಉತ್ತರ ಕರ್ನಾಟಕ ಮೂಲದ ಹನುಮಂತ ಎಂಬ ಹುಡುಗ, ಗೋವಾದಲ್ಲಿರುವ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಅವನಿಗೆ “ದುನಿಯಾ” ವಿಜಯ್‌ ಅಂದರೆ, ತುಂಬು ಪ್ರೀತಿ. ಅಪ್ಪಟ ಅಭಿಮಾನಿಯೂ ಹೌದು. ವಿಜಯ್‌ ಅವರಂತೆಯೇ ಹನುಮಂತ ಕೂಡ ತನ್ನ ತಂದೆ-ತಾಯಿಯನ್ನು ಅಷ್ಟೇ ಪ್ರೀತಿಯಿಂದ ಆರಾಧಿಸುತ್ತಾನೆ. ತಮ್ಮ ಪ್ರೀತಿಯ ಹೀರೋ “ದುನಿಯಾ” ವಿಜಯ್‌ ಅವರ ಚೊಚ್ಚಲ ನಿರ್ದೇಶನದ “ಸಲಗ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿ,”ಸಲಗ” ಟೈಟಲ್‌ ಅನ್ನು ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

ಈ ಅಭಿಮಾನಿಯ ವಿಷಯ ತಿಳಿಯುತ್ತಿದ್ದಂತೆಯೇ “ದುನಿಯಾ” ವಿಜಯ್‌ ಗೋವಾದಲ್ಲಿರುವ ಅಭಿಮಾನಿ ಹನುಮಂತುಗೆ ವಿಡಿಯೋ ಕಾಲ್‌ ಮಾಡಿ, ಪ್ರೀತಿಯಿಂದ ಮಾತಾಡಿದ್ದಾರೆ. ವಿಜಯ್‌ ವಿಡಿಯೋ ಕಾಲ್‌ ಮಾಡುತ್ತಿದ್ದಂತೆಯೇ, ಆ ಅಭಿಮಾನಿ ಹನುಮಂತು, ಖುಷಿಗೊಂಡಿದ್ದಾರೆ. ಆನಂದಭಾಷ್ಪ ಸುರಿಸಿದ್ದಾರೆ. ಈ ವೇಳೆ ವಿಜಯ್‌ ಕೂಡ ಭಾವುಕರಾಗಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತೆ ಎಂದು ಹನುಮಂತನಿಗೆ ಶುಭಕೋರಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್‌ ಆಗುತ್ತಿದೆ.

 

Categories
ಸಿನಿ ಸುದ್ದಿ

ಸಿನಿಲಹರಿ ನೂರನೇ ದಿನಕ್ಕೆ ಕೇಕ್‌ ಕತ್ತರಿಸಿ ಶುಭ ಹಾರೈಸಿದ ನಟ ಸಂಚಾರಿ ವಿಜಯ್‌

ವೀರಕಪುತ್ರ ಶ್ರೀನಿವಾಸ್‌ , ಮಂಸೋರೆ, ಹರೀಶ್‌ ಎಂ.ಡಿ ಹಳ್ಳಿ, ನಟಿಯರಾದ ಜಯಶ್ರೀ, ಅನುಷಾ ರೋಡ್ರಿಗಸ್‌ ಸೇರಿ ಹಲವರು ಸಾಥ್

ಸಿನಿ ಲಹರಿ ಶುರುವಾಗಿ ನೂರು ದಿನ ಪೂರೈಸಿತು. ಎಷ್ಟು ಬೇಗ ಆದವು ದಿನಗಳು ಅಂತೆನಿಸುತ್ತಿದೆ. ಹಾಗಂತ, ಇದೇನು ದೊಡ್ಡ ಸಾಧನೆ ಅಲ್ಲ. ಅದರೂ, ನಮ್ಮ ಮಟ್ಟಿಗೆ ಇದು ಒಂದೊಳ್ಳೆಯ ಹೆಜ್ಜೆ. ಕಾರಣ, ಮುಂದಿನ ಯೋಜನೆ, ಯೋಚನೆಗೆ ಇದು ಮಹತ್ತರದ ಕ್ಷಣ. ಅದೇ ಕಾರಣಕ್ಕೆ ʼಸಿನಿಲಹರಿʼ ಹಿತೈಷಿಗಳೇ ಸಿನಿಲಹರಿ ಸ್ಟುಡಿಯೋ ದಲ್ಲಿ ಸಿಂಪಲ್‌ ಆಗಿ ಆಯೋಜಿಸಿದ್ದ ಸಣ್ಣದೊಂದು ಸೆಲೆಬ್ರೇಷನ್‌ ದೊಡ್ಡದಾಗಿಯೇ ನಡೆದಿದ್ದು ವಿಶೇಷ. ಇದೊಂದು ಪೂರ್ವಯೋಜಿತ ಕಾರ್ಯಕ್ರವಲ್ಲ. ಅವಸರದ ಕಾರ್ಯಕ್ರಮ. ಆದರೂ ಸಿನಿ ಲಹರಿ ಮೆಲಿನ ಪ್ರೀತಿಗೆ, ಕಾಳಜಿಗೆ ಸಿನಿಮಾ ರಂಗದ ದೊಡ್ಡ ತಂಡವೇ ಬಂದಿದ್ದು ನಮ್ಮ ಹೆಮ್ಮೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ನಮ್ಮ ಆಹ್ವಾನ ಗೌರವಿಸಿ ಬಂದಿದ್ದರು. ಅವರೇ ಕೇಕ್‌ ಕತ್ತರಿಸಿ, ಸಿನಿ ಲಹರಿಗೆ ಶುಭ ಹಾರೈಸಿದರು.

ಡಾ. ವಿಷ್ಣು ವರ್ಧನ್‌ ಅಭಿಮಾನಿಗಳ ಸಂಘದ ವೀರಕಪುತ್ರ ಶ್ರೀನಿವಾಸ್‌ , ನಟ ನಿಹಾಲ್‌,ನಿರ್ದೇಶಕರಾದ ಮಂಸೋರೆ, ಹರೀಶ್‌ ಎಂ.ಡಿ. ಹಳ್ಳಿ, ಹೃಷಿಕೇಶ್‌, ಕಿರಣ್‌, ರಾಜು ಪಾವಗಡ, ನಟಿಯರಾದ ಅನುಷಾ ರೋಡ್ರಿಗಸ್‌, ಅಂಜಲಿ ರಾಮಚಂದ್ರ, ಜಯಶ್ರೀ, “ಮಗಳು ಜಾನಕಿʼ ಧಾರಾವಾಹಿಯ ಖ್ಯಾತಿಯ ಸುಪ್ರಿಯಾ ರಾವ್‌, ನಿರಂಜನ್‌ ಕುಮಾರ್‌ ದಾವಣಗೆರೆ, ಯುವ ಪ್ರತಿಭೆ ವೈಶಾಖ್‌, ಸವಿನ್‌ ತೀರ್ಥಹಳ್ಳಿ, ಮತ್ತಿತರರು ಹಾಜರಿದ್ದು ಸಿನಿ ಲಹರಿಗೆ ಶುಭ ಹಾರೈಸಿದರು. ಸಿನಿ ಲಹರಿ ಸಿಇಓ ಕೃಷ ಪಿ. ಕೂಡ ಹಾಜರಿದ್ದು, ಮುಂದಿನ ಯೋಜನೆಯ ಬಗ್ಗೆ ವಿವರಿಸಿದರು. ಅದರ ಒಂದು ಫೋಟೋ ಝಲಕ್‌ ಇಲ್ಲಿದೆ.

Categories
ಸಿನಿ ಸುದ್ದಿ

ರಿಷಭ್‌ ಶೆಟ್ಟಿ ಹೀರೋ ಆಗಿ ಎಂಟ್ರಿ- ಅಶೋಕವನ ಎಸ್ಟೇಟ್‌ನಲ್ಲಿ ರಕ್ತಚರಿತ್ರೆ!

ಮಾರ್ಚ್ 5ಕ್ಕೆ ಹೀರೋ ಸಿನಿಮಾ ಬಿಡುಗಡೆ

ಕನ್ನಡದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಷಭ್‌ ಶೆಟ್ಟಿ ಅವರ ನಿರ್ಮಾಣದ “ಹೀರೋ” ಕೂಡ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ 5 ರಂದು “ಹೀರೋ”ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ವಿಷಯವನ್ನು ಸ್ವತಃ ರಿಷಭ್‌ ಶೆಟ್ಟಿ ಅವರೇ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲಂ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿದೆ. ಎಂ. ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಭ್‌ ಶೆಟ್ಟಿ ಇಲ್ಲಿ ಹೀರೋ ಆಗಿದ್ದರೆ, ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಸೇರಿದಂತೆ ಹಲವರು ಇದ್ದಾರೆ.


ಈ “ಹೀರೋ” ಬಗ್ಗೆ ಹೇಳುವುದಾದರೆ, ಅಶೋಕ ವನ ಎಸ್ಟೇಟ್‌ ನಲ್ಲಿ ನಡೆಯುವ ಒಂದು ಕಥೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇದು. ವಿಶೇಷವೆಂದರೆ, ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಎಲ್ಲರೂ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರೆ, ರಿಷಭ್‌ ಶೆಟ್ಟಿ, ಆ ವೇಳೆ ಚಂದದ ಕಥೆ ಮಾಡಿಕೊಂಡು, ಸ್ಕ್ರಿಪ್ಟ್‌ ಬರೆದು, ಚಿತ್ರೀಕರಣಕ್ಕೆ ಅಣಿಯಾದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಿಷಭ್‌ ಶೆಟ್ಟಿ ಬ್ಯಾನರ್‌ನಲ್ಲಿ ಇದೇ ಮೊದಲ ಸಲ ರಕ್ತಗತವಾದ ಅಂಶಗಳಿರುವ ಸಿನಿಮಾ ಎಂಬುದು. ಹೌದು, ಇಲ್ಲಿ ಗನ್‌ಗಳ ಸದ್ದಿದೆ, ರಕ್ತದ ಕಲೆಗಳೂ ಕಾಣಿಸಿಕೊಳ್ಳುತ್ತವೆ. ಬಹುತೇಕ ಒಂದು ಕಾಡು, ಅಶೋಕವನ ಎಂಬ ಎಸ್ಟೇಟ್‌ ಸುತ್ತಲೇ ಸುತ್ತುವ ಕಥೆ ಇದಾಗಿದೆ. ರಿಷಭ್‌ ಆಗಾಗ ಪ್ರಯತ್ನಕ್ಕೆ ಇಳಿಯುತ್ತಲೇ ಇರುತ್ತಾರೆ. ಅಂಥದ್ದೊಂದು ಪ್ರಯತ್ನ “ಹೀರೋ” ಮೂಲಕ ಆಗಿದೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, ಇಲ್ಲಿ “ಹೀರೋ” ಯಾರು? ಈ ಪ್ರಶ್ನೆಗೆ ಮಾರ್ಚ್‌ 5ರವರೆಗೆ ಕಾಯಲೇಬೇಕು.

Categories
ಸಿನಿ ಸುದ್ದಿ

ಕ್ರಿಸ್ಮಿ ಮೆಹಂದಿ ಸಂಭ್ರಮ

ಮದ್ವೆ ಸಡಗರದಲ್ಲಿ ಲವ್‌ ಮಾಕ್ಟೇಲ್‌ ಜೋಡಿ

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸುದ್ದಿ. ಹೌದು, ಲಾಕ್‌ಡೌನ್ ಶುರುವಾದಾಗಿನಿಂದ ದೊಡ್ಡ ಮಟ್ಟದ ಮನರಂಜನೆ ಸೇರಿದಂತೆ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಅದರಲ್ಲೂ ಸಿನಿಮಾ ರಂಗದಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಈಗ “ಲವ್‌ ಮಾಕ್ಟೇಲ್‌” ಜೋಡಿಯ ಮದ್ವೆ ಸುದ್ದಿ ಜೋರು ಸದ್ದು ಮಾಡುತ್ತಿದೆ.

ಹೌದು, ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದುವೆ ಮೂಡ್‌ನಲ್ಲಿದ್ದಾರೆ. ಮಿಲನಾ ನಾಗರಾಜ್‌ ಹಾಗೂ ಕೃಷ್ಣ ಇಬ್ಬರೂ ಪ್ರೀತಿಸಿ ಮದ್ವೆಯಾಗುತ್ತಿದ್ದಾರೆ ಅನ್ನೋದು ವಿಶೇಷ. ಕನ್ನಡ ಸಿನಿಮಾರಂಗದಲ್ಲಿ ಹಾಗೊಮ್ಮೆ ಹಿಂದಿರುಗಿ ನೋಡಿದರೆ, ಬಹುತೇಕ ನಟ,ನಟಿಯರು ಲವ್‌ ಮಾಡಿಯೇ ಮದ್ವೆಯಾಗಿದ್ದಾರೆ. ಆ ಸಾಲಿಗೆ ಕೃಷ್ಣ ಹಾಗೂ ಮಿಲನಾ ಕೂಡ ಸೇರುತ್ತಿದ್ದಾರೆ.

ಇವರಿಬ್ಬರ ಪ್ರೀತಿಯ ಬಗ್ಗೆ ಸುದ್ದಿ ಇತ್ತಾದರೂ, ಎಲ್ಲೂ ಅವರು ಓಪನ್‌ ಆಗಿ ಹೇಳಿಕೊಂಡಿರಲಿಲ್ಲ. ಯಾವಾಗ “ಲವ್‌ ಮಾಕ್ಟೇಲ್‌” ಚಿತ್ರ ಗೆಲುವು ಕೊಟ್ಟಿತೋ, ಆ ಸಕ್ಸಸ್‌ನ ಸಂಭ್ರಮದಲ್ಲೇ ತಮ್ಮ ಪ್ರೀತಿ ವಿಷಯವನ್ನು ಹಂಚಿಕೊಂಡಿದ್ದಲ್ಲದೆ, ಮದ್ವೆ ಆಗುತ್ತಿರುವ ವಿಷಯವನ್ನೂ ಹೇಳಿಕೊಂಡಿದ್ದರು. ಅದರಂತೆ ಅವರು, ಚಿತ್ರರಂಗದ ಬಹುತೇಕರಿಗೆ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.


ಇನ್ನು, ಮದ್ವೆ ಫೆ.೧೪ರ ಪ್ರೇಮಿಗಳ ದಿನದಂದು ನಡೆಯಲಿದೆ. ಅಂದೇ ಸಂಜೆ ಅರತಕ್ಷತೆಯೂ ಇದೆ. ಸದ್ಯಕ್ಕೆ ಈ ಜೋಡಿ ಹಾಸನದ ಹೊರವಲಯದಲ್ಲಿರುವ ನಂದಗೋಕುಲ ಹಾಲ್‌ನಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಮಿಲನಾ ನಾಗರಾಜ್ ಕೂಡ ಮೂಲತಃ ಹಾಸನದವರೆ ಆಗಿದ್ದು, ತನ್ನೂರಿನಲ್ಲಿಯೇ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಪ್ರೀತಿಸುತ್ತಲೇ ಜೊತೆಗೊಂದು ಸಕ್ಸಸ್‌ಫುಲ್‌ ಸಿನಿಮಾ ಕೊಟ್ಟ ಈ ಜೋಡಿ, ಬದುಕಲ್ಲೂ ಒಂದಾಗುತ್ತಿದೆ. ಸದ್ಯ ಅವರಿಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.

 

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಮಣಿರತ್ನಂ ಸಿನಿಮಾದಲ್ಲಿ ಶಾಲಿನಿ ಅಜಿತ್‌?

ಇಪ್ಪತ್ತು ವರ್ಷಗಳ ನಂತರ ಮತ್ತೆ ತೆರೆಗೆ!

ಎಂಬತ್ತರ ದಶಕದ ಜನಪ್ರಿಯ ಬಾಲನಟಿ ಶಾಲಿನಿ. ತಮಿಳು, ತೆಲುಗು ಮತ್ತು ಮಲಯಾಳಂನ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಬಾಲನಟಿಯಾಗಿ ಮಿಂಚಿದ್ದರು. 1997ರಲ್ಲಿ ಫಾಝಿಲ್ ನಿರ್ದೇಶನದ ‘ಅನಿಯಾಥು ಪಿರವು’ ಮಲಯಾಳಂ ಚಿತ್ರದೊಂದಿಗೆ ಅವರು ನಾಯಕಿಯಾದರು. ಈ ಸಿನಿಮಾ ‘ಕಾದಲುಕ್ಕು ಮರ್ಯಾದೈ’ ಶೀರ್ಷಿಕೆಯಡಿ ತಮಿಳಿಗೆ ರಿಮೇಕ್ ಆಯ್ತು. ವಿಜಯ್ ಹೀರೋ ಆಗಿ ನಟಿಸಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಹಾಗೆ ಶಾಲಿನಿ ನಾಯಕಿಯಾಗಿಯೂ ಗೆಲುವು ಕಂಡರು. ಸುಮಾರು ಹತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಶಾಲಿನಿ ‘ಅಮರ್‌ ಕಲಂ’ ತಮಿಳು ಸಿನಿಮಾ ಸಂದರ್ಭದಲ್ಲಿ ನಟ ಅಜಿತ್‌ರ ಪ್ರೇಮದ ಬಲೆಗೆ ಸಿಲುಕಿದರು. 2000ನೇ ಇಸವಿಯಲ್ಲಿ ಅಜಿತ್‌ರನ್ನು ವರಿಸಿದ ಅವರು ಮುಂದೆ ಸಿನಿಮಾದಿಂದ ದೂರವೇ ಉಳಿದರು. ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಅನೌಷ್ಕಾ ಮತ್ತು ಆದ್ಯಂತ್‌. 2001ರಲ್ಲಿ ತೆರೆಕಂಡ ಪ್ರಶಾಂತ್ ಜೊತೆಗಿನ ‘ಪಿರ್ಯಾತ ವರಂ ವೇಂಡಂ’ ಅವರು ನಾಯಕಿಯಾಗಿ ಕಾಣಿಸಿಕೊಂಡ ಕೊನೆಯ ಸಿನಿಮಾ.


ಇದೀಗ ಇಪ್ಪತ್ತು ವರ್ಷಗಳ ನಂತರ ಅವರು ತೆರೆಗೆ ಮರಳುವ ಸೂಚನೆ ಸಿಕ್ಕಿದೆ. ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್‌’ ತಮಿಳು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಣಿರತ್ನಂ ನಿರ್ದೇಶನದ ಸೂಪರ್‌ಹಿಟ್‌ ‘ಅಲೈಪಾಯುತೆ’ ಚಿತ್ರದಲ್ಲಿ ಮಾಧವನ್‌ ಜೊತೆ ನಟಿಸಿದ್ದರು ಶಾಲಿನಿ. ಇದೀಗ ಮಣಿರತ್ನಂ ಅವರದೇ ಚಿತ್ರದೊಂದಿಗೆ ತೆರೆಗೆ ಮರಳಲಿದ್ದಾರೆ. ನಟ ಅಜಿತ್‌ ಕೂಡ ಈ ಬಗ್ಗೆ ಖುಷಿಯಾಗಿದ್ದು, ಅಧಿಕೃತ ಘೋಷಣೆ ಹೊರ ಬೀಳಬೇಕಿದೆ.

Categories
ಸಿನಿ ಸುದ್ದಿ

ಅಂಧನೊಬ್ಬನ ಭಾವುಕ ಪಯಣದಲ್ಲಿ ಮೌಲ್ಯ ಸಂದೇಶ

ಫೆ.13ಕ್ಕೆ ಕಣ್ತೆರೆದು ನೋಡು ಚಿತ್ರದ ಟೀಸರ್ ರಿಲೀಸ್

ಶಿವಪ್ಪ ಕುಡ್ಲೂರು

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ನೃತ್ಯ ನಿರ್ದೇಶಕರು ಒಂದೊಳ್ಳೆಯ ಕಥೆ ಮೂಲಕ ನಿರ್ದೇಶನ ಮಾಡಿದ್ದಾರೆ. ಈಗ ಆ ಸಾಲಿಗೆ
ನೃತ್ಯ ನಿರ್ದೇಶಕ ಎಂ.ಆರ್.ಕಪಿಲ್ ಕೂಡ ಸೇರಿದ್ದಾರೆ. ಕಪಿಲ್ ಈ ಹಿಂದೆಯೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಕಪಿಲ್ , ನಿರ್ದೇಶಕ

ಇದೀಗ “ಕಣ್ತೆರೆದು ನೋಡು”ವಂತಹ ಕೆಲಸ ಮಾಡಿದ್ದಾರೆ. ಹೌದು, ನಿರ್ದೇಶಕ ಕಪಿಲ್ ಈಗ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ನಿರ್ದೇಶನದ “ಕಣ್ತೆರೆದು ನೋಡು” ಚಿತ್ರ ಶೂಟಿಂಗ್ ಮುಗಿದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಾಗಿದ್ದಾರೆ.

ಕಳೆದ ನವೆಂಬರ್ 14ರಂದು “ಕಣ್ತೆರೆದು ನೋಡು” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಈಗ ಟೀಸರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಫೆಬ್ರವರಿ13ರ ಶನಿವಾರ ಬೆಳಗ್ಗೆ 10.31ಕ್ಕೆ ಚಿತ್ರದ ಟೀಸರ್ ಅನಾವರಣಗೊಳ್ಳಲಿದೆ.
ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರದೇ ಕಥೆ, ಚಿತ್ರಕಥೆ ಹೊಂದಿರುವ ಈ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ.

ಅಂದಹಾಗೆ, ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ಶಿವಪ್ಪ ಕುಡ್ಲೂರು ಈ ಚಿತ್ರದ ಕಥಾ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.

ಚಿತದ ಪ್ರಮುಖ ಕಲಾವಿದ ಶಿವಪ್ಪ ಕುಡ್ಲೂರು,ಅವರಿಗೆ ಬಾಲ್ಯದಿಂದಲೇ ನಟನೆ ಆಸಕ್ತಿ ಇದ್ದುದರಿಂದ ಒಳ್ಳೆಯ ಸಿನಿಮಾ ಮೂಲಕ ಕಾಣಿಸಿಕೊಳ್ಳಬೇಕೆಂಬ ಆಸೆಗೆ “ಕಣ್ತೆರೆದು ನೋಡು” ಚಿತ್ರ ಸಿಕ್ಕಿದೆ. ಅವರಿಲ್ಲಿ ಅಂಧನೊಬ್ಬನ ಪಾತ್ರದಲ್ಲಿ ಗಮನಸೆಳೆಯುತ್ತಿದ್ದಾರೆ.

ಚಿತ್ರದಲ್ಲಿ ಇವರೊಂದಿಗೆ ಉಮೇಶ್, ಶಿವಕುಮಾರ್ ಜೀವರಾಜ್, ಡಾ.ದೊಡ್ಡರಂಗೇಗೌಡ, ವಿ.ಮನೋಹರ್,ಕೆ.ಎಂ.ಇಂದ್ರ,ಮೈಸೂರು ರಮಾನಾಥ್, ರೇಖಾದಾಸ್, ಶಂಕರ್ ಭಟ್ ಇತರರು ನಟಿಸಿದ್ದಾರೆ.

ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೆಣೆದ ಅಂಧನೊಬ್ಬನ‌ ಕಥೆಗೆ ಬಂಡವಾಳ ಹಾಕಿದ್ದಾರೆ.

ಸಿ.ನಾರಾಯಣ್ ಕ್ಯಾಮರಾ ಹಿಡಿದಿದ್ದಾರೆ. ಆರ್.ಡಿ.ರವಿ ಸಂಕಲನ ಮಾಡಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ ಹರೀಶ್  ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್, ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.

Categories
ಸಿನಿ ಸುದ್ದಿ

ಸಿಎಂ ಲಾಂಚ್‌ ಮಾಡಿದ್ರು “ತನುಜಾ” ಚಿತ್ರದ ಫಸ್ಟ್ ಲುಕ್ , ಕಥೆಯ ಒಂದೆಳೆ ಕೇಳಿ ಅವರೇ ಫುಲ್‌ ಖುಷ್‌ !

‌  ಸಚಿವ ಸುಧಾಕರ್‌ ಕೂಡ ಬಣ್ಣ ಹಚ್ಚುವ ಸಾಧ್ಯತೆ

ಅಂತರ್ಜಲ ಚಿತ್ರದ ಮೂಲಕ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದ ಸೃಜಲಶೀಲ ಯುವ ನಿರ್ದೇಶಕ ಹರೀಶ್‌ ಕುಮಾರ್‌ ಎಂ.ಡಿ ಹಳ್ಳಿ ಒಂದಷ್ಟು ಗ್ಯಾಪ್‌ ನಂತರ ಮತ್ತೊಂದು ಸಿನಿಮಾದೊಂದಿಗೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.  ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನವೊಂದರಿಂದ ಪ್ರಭಾವಿತರಾಗಿ  ಹೊಸದೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ʼತನುಜಾʼ.

Beyond visions cinemas ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ  ಈ  ಚಿತ್ರದ ಫಸ್ಟ್ ಲುಕ್ ಅನ್ನು ಮುಖ್ಯಮಂತ್ರಿ ಬಿ.ಎಸ್‌ . ಯಡಿಯೂರಪ್ಪ  ಲಾಂಚ್‌ ಮಾಡಿದರು.   ಫಸ್ಟ್‌ ಲುಕ್‌ ಲಾಂಚ್‌ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರಾದ ಸುಧಾಕರ್ ಹಾಗೂ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ವಿಶೇಷ ಅಂದ್ರೆ ಈ ಚಿತ್ರದ ಒಂದು ಪಾತ್ರದಲ್ಲಿ  ಆರೋಗ್ಯ ಸಚಿವ ಸುಧಾಕರ್‌ ಕೂಡ ಬಣ್ಣ ಹಚ್ಚುವ ಸಾಧ್ಯತೆ ಇದೆಯಂತೆ.

ಇದೊಂದು ಡಿಫೆರೆಂಟ್ ಜಾನರ್‌ ಸಿನಿಮಾ.ನೈಜ ಘಟನೆ ಆಧರಿತ ಕಥೆ.  ಕೊರೋನಾ ಸಂಕಷ್ಟದ ಕಾಲದಲ್ಲಿ ನೀಟ್‌ ಪರೀಕ್ಷೆ ಬರೆಯಲು ಹೆಣಗಾಟ ನಡೆಸಿ, ಕೊನೆಗೂ ಸಿನಿಮೀಯ ರೀತಿಯಲ್ಲಿ ಅದರಲ್ಲಿ ಸಕ್ಸಸ್‌ ಆದ ಒಬ್ಬ ವಿದ್ಯಾರ್ಥಿನೀಯ ಕಥೆ ಇದು.  ಕೊನೆಗೂ ಆಕೆ ಹೇಗೆ ಪರೀಕ್ಷೆ ಬರೆದಳು, ಅದರಿಂದ ಮುಂದೆ ಆಕೆ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದಳು ಎನ್ನುವುದೇ ತನುಜಾ ಚಿತ್ರದ ಕಥಾ ಹಂದರ.

” ಇದು ನಿಜ ಘಟನೆಯೇ.  ಎಲ್ಲರಿಗೂ ಗೊತ್ತಿರುವುದೇ. ಆದರೆ ಇಡೀ ಘಟನೆ ಒಂದು ಥ್ರಿಲ್ಲರ್‌ ಮೂವೀ  ರೀತಿಯಲ್ಲಿದೆ. ಸಿನಿಮಾ ಮಾಡುವ ನಿಟ್ಟಿನಲ್ಲಿ ಸಾಕಷ್ಟು ವರ್ಕ ಮಾಡಿಕೊಂಡಿದ್ದೇನೆ. ಮೇಲಾಗಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ್‌ ಭಟ್‌ ಅವರ ಮೂಲಕ ಇಂತಹದೊಂದು ಕತೆ ಸಿನಿಮಾ ಮಾಡೋದಿಕ್ಕೆ ನನಗೆ ಸಿಕ್ಕಿದ್ದು ಅದೃಷ್ಟವೇ ಹೌದು. ಎಷ್ಟು ಸಾಧ್ಯವೋ ಅಷ್ಟು ಪ್ರಮಾಣಿಕವಾಗಿ ಸಿನಿಮಾವನ್ನು ತೆರೆಗೆ ತರಬೇಕೆನ್ನುವ ಆಸೆ ಇದೆ ʼಎನ್ನುತ್ತಾರೆ  ನಿರ್ದೇಶಕ ಹರೀಶ್‌ ಕುಮಾರ್.

ಇದು  ಒರ್ವ ವಿದ್ಯಾರ್ಥಿನಿ ಮೇಲೆಯೇ ಕೇಂದ್ರಿಕೃತವಾದ ಸಿನಿಮಾ.  ಕಥಾ ನಾಯಕಿ ತನುಜಾ. ಆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ  ಯುವ ನಟಿ ಸಪ್ತ ಪಾವೂರು. ʼಸರ್ಕಾರಿ ಹಿ.ಪ್ರಾಥಮಿಕ ಶಾಲೆʼ ಚಿತ್ರದಲ್ಲಿ  ಸಪ್ತ‌ ಪಾವೂರು  ಅಭಿನಯಿಸಿದ್ದರು. ಚಿತ್ರದ ಪಾತ್ರಕ್ಕೆ ಸರಿ ಸರಿಯಾದ ಅಯ್ಕೆ ಅಂತ ಚಿತ್ರದ ಹೇಳುತ್ತಿದೆ.  ತಾರಾಬಳಗದ ಆಯ್ಕೆ ನಡೆಯುತ್ತಿದೆ.ಚಿತ್ರದ ಚಿತ್ರೀಕರಣ ಮಾರ್ಚ್ ಎರಡನೇ‌ವಾರದಲ್ಲಿ ಆರಂಭವಾಗಲಿದೆ. ಬೆಂಗಳೂರು – ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.

2016_17 ಸಾಲಿನ ರಾಜ್ಯಪ್ರಶಸ್ತಿಗೆ ಭಾಜನವಾಗಿದ್ದ “ಅಂತರ್ಜಲ” ಚಿತ್ರದ ನಂತರ   ಎಂ ಡಿ ಹಳ್ಳಿ ಅವರಿಗೆ ಇದು ಎರಡನೇ ಚಿತ್ರ.
ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣವಿರುವ “ತನುಜಾ” ಚಿತ್ರಕ್ಕೆ ಆರ್ ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದಾರೆ.  Beyond visions cinemas ಲಾಂಛನದಲ್ಲಿ  ಹರೀಶ್‌ ಕುಮಾರ್‌ , ರಘು ನಂದನ್‌ ಸೇರಿದಂತೆ ಒಂದಷ್ಟು ಗೆಳೆಯರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಡ್‌ ಮ್ಯಾನರ್ಸ್‌ಗೆ ಇಬ್ಬರು ಬೆಡಗಿಯರು

ರಚಿತಾರಾಮ್‌ ಪ್ರಿಯಾಂಕ ಎಂಟ್ರಿ

ಅಭಿಷೇಕ್‌ ಅಂಬರೀಶ್ ಅಭಿನಯದ “ದುನಿಯಾ” ಸೂರಿ ನಿರ್ದೇಶನದ ”ಬ್ಯಾಡ್‌ ಮ್ಯಾನರ್ಸ್‌” ಚಿತ್ರದ ಚಿತ್ರೀಕರಣ ಈಗಾಗಲೇ ಜೋರಾಗಿ ನಡೆಯುತ್ತಿದೆ. ಈ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಇಲ್ಲಿ ಒಬ್ಬರಲ್ಲ, ಇಬ್ಬರು ನಾಯಕಿಯರು “ಬ್ಯಾಡ್‌ ಮ್ಯಾನರ್ಸ್‌”ಗೆ ಜೋಡಿಯಾಗಿದ್ದಾರೆ.

ಹೌದು, ರಚಿತಾರಾಮ್‌ ಮತ್ತು ಪ್ರಿಯಾಂಕ ಅವರು ಈ ಚಿತ್ರಕ್ಕೆ ನಾಯಕಿಯರಾಗಿದ್ದಾರೆ. ಪ್ರಿಯಾಂಕ ತಮಿಳು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ ಎಂಬುದು ವಿಶೇಷ. ಈಗಾಗಲೇ ಸಂಕ್ರಾಂತಿ ದಿನದಂದು ಚಿತ್ರಕ್ಕೆ ಜೋರು ಮುಹೂರ್ತ ನೆರವೇರಿತ್ತು.

ಬಹು ನಿರೀಕ್ಷಿತ “ದುನಿಯಾ” ಸೂರಿ ನಿರ್ದೇಶನದ ಔಟ್ ಅಂಟ್ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ “ಬ್ಯಾಡ್ ಮ್ಯಾನರ್ಸ್”ಗೆ ಈಗ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. ಮಗನ ಎರಡನೇ ಚಿತ್ರಕ್ಕೆ ಸುಮಲತಾ ಅವರು ಕ್ಲಾಪ್‌ ಮಾಡಿ ಶುಭಹಾರೈಸಿದ್ದರು. ದರ್ಶನ್‌ ಕೂಡ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು. ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿದ್ದ ರಗಡ್‌ ಸೆಟ್ಟಲ್ಲಿ ಚಿತ್ರಕ್ಕೆ ಚಾಲನೆ ದೊರೆತಿತ್ತು.

error: Content is protected !!