ಅಲಿಯಾ ಭಟ್ ವಿಶಿಷ್ಠ ಪಾತ್ರದಲ್ಲಿ ನಟಿಸಿರುವ ‘ಗಂಗೂಬಾಯಿ ಕಾಥಿಯಾವಾಡಿ’ ಟೀಸರ್ ಬಿಡುಗಡೆಯಾಗಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರವಿದು. ಇಂದು ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿರುವ ಟೀಸರ್‌ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಲೇಖಕ ಹುಸೇನ್ ಝೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಕೃತಿಯಲ್ಲಿನ ಒಂದು ಭಾಗ ಈ ಚಿತ್ರಕ್ಕೆ ಸ್ಫೂರ್ತಿ.
ಟೀಸರ್‌ನಲ್ಲಿ ಅಲಿಯಾ ಭಟ್ ಇಲ್ಲಿಯವರೆಗೆ ಅವರ ಎಲ್ಲಾ ಪಾತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿ ಕಾಣಿಸುತ್ತಾರೆ. ಶೀರ್ಷಿಕೆ ಪಾತ್ರದಲ್ಲಿನ ಅವರು ದಿಟ್ಟೆ, ಗಟ್ಟಿಗಿತ್ತಿಯಂತೆ ತೋರುತ್ತಾರೆ. ಗುಜರಾತ್‌ನ ಕಾಥಿಯಾವಾಡಿಯಿಂದ ಮುಂಬಯಿಗೆ ವಲಸೆ ಬಂದವರು ಗಂಗೂಬಾಯಿ. ಕಾಮಾಟಿಪುರದಲ್ಲಿ ವೇಶ್ಯಾವಾಟಿಕೆ ದಂಧೆಯ ಮುಖ್ಯಸ್ಥೆಯಾಗಿ ಗುರುತಿಸಿಕೊಳ್ಳುವ ಗಂಗೂಬಾಯಿಗೆ ಭೂಗತ ಜಗತ್ತಿನ ನಂಟೂ ಇರುತ್ತದೆ. ಅನಾಥ ಮಕ್ಕಳು, ನಿರ್ಗತಿಕರಿಗೆ ವಸತಿ, ಊಟ ಕಲ್ಪಿಸುವ ಮತ್ತೊಂದು ಮುಖವೂ ಆಕೆಯ ಪಾತ್ರಕ್ಕಿದೆ.
ಈ ಅಪರೂಪದ ಪಾತ್ರಕ್ಕಾಗಿ ಅಲಿಯಾ ತಮ್ಮ ಬಾಡಿಲಾಂಗ್ವೇಜ್, ಡೈಲಾಗ್ ಡೆಲಿವರಿಯಲ್ಲಿ ಸಾಕಷ್ಟು ಮಾರ್ಪಾಟು ಮಾಡಿಕೊಂಡಿವುದು ಟೀಸರ್‌ನಿಂದ ಕಂಡುಬರುತ್ತದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹತ್ತನೇ ಚಿತ್ರವಿದು. ಬನ್ಸಾಲಿಗೆ ಹುಟ್ಟುಹಬ್ಬ ಕೋರಿರುವ ಬಾಲಿವುಡ್ ತಾರೆಯರು ಅಲಿಯಾ ಪಾತ್ರವನ್ನು ಮನದುಂಬಿ ಹೊಗಳಿದ್ದಾರೆ. ‘ಗಂಗೂಬಾಯಿ ಕಾಥಿಯಾವಾಡಿ’ 2021ರ ಜುಲೈ 30ರಂದು ತೆರೆಕಾಣಲಿದೆ.