ಬಹುನಿರೀಕ್ಷಿತ ಬಹುಭಾಷಾ ಸಿನಿಮಾ ‘ತಲೈವಿ’ ಏಪ್ರಿಲ್ 23ಕ್ಕೆ ತೆರೆಕಾಣಲಿದೆ. ತಮಿಳುನಾಡಿನ ಜನಪ್ರಿಯ ನಟಿ, ರಾಜಕಾರಣಿ ಜಯಲಲಿತಾ ಬಯೋಪಿಕ್ ಇದು. ಕಂಗನಾ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದು, ಅರವಿಂದ ಸ್ವಾಮಿ, ಪ್ರಕಾಶ್ ರೈ, ಜಿಶ್ಶು ಸೇನ್‌ಗುಪ್ತಾ, ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅರವಿಂದ ಸ್ವಾಮಿ ಅವರು ನಟ-ರಾಜಕಾರಣಿ ಎಂ.ಜಿ.ರಾಮಚಂದ್ರನ್ ಪಾತ್ರದಲ್ಲಿದ್ದರೆ ಪ್ರಕಾಶ್ ರೈ, ತಮಿಳುನಾಡಿನ ಜನಪ್ರಿಯ ರಾಜಕಾರಣಿ ಕರುಣಾನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕಂಗನಾ ತಮ್ಮ ಟ್ವಿಟರ್ ಖಾತೆಯಲ್ಲಿ ‘ತಲೈವಿ’ ಮೋಷನ್ ಪೋಸ್ಟರ್ ಶೇರ್ ಮಾಡಿ, ಏಪ್ರಿಲ್ 23ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಮೋಷನ್ ಪೋಸ್ಟರ್‌ನಲ್ಲಿ ಜಯಲಲಿತಾ ಅವರ ಸಿನಿಮಾ ಮತ್ತು ರಾಜಕೀಯ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಪ್ರಸ್ತಾಪವಿದೆ. ಹಿನ್ನೆಲೆಯಲ್ಲಿ, “ಆಕೆ ಭಾರತೀಯ ಸಿನಿಮಾದಲ್ಲಿ ಹೆಜ್ಜೆ ಗುರುತು ಮೂಡಿಸಿದರು. ರಾಜಕೀಯ ಪ್ರವೇಶಿಸಿ ತಮಿಳುನಾಡಿನ ರಾಜಕೀಯದ ಹಾದಿಯನ್ನೇ ಬದಲಿಸಿದರು. ತಮ್ಮದೇ ಒಂದು ಅಸ್ತಿತ್ವ ಸೃಷ್ಟಿಸಿದ ಅವರು ಲಕ್ಷಾಂತರ ಜನರ ಬದುಕು ಹಸನುಮಾಡಿ ಇತಿಹಾಸ ಸೃಷ್ಟಿಸಿದರು” ಎನ್ನುವ ವಾಯ್ಸ್‌ಓವರ್ ಇದೆ.
ವಿಷ್ಣುವರ್ಧನ್ ಮತ್ತು ಶೈಲೇಶ್ ಸಿಂಗ್ ನಿರ್ಮಿಸಿರುವ ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದಾರೆ. ‘ಬಾಹುಬಲಿ’, ‘ಮಣಿಕರ್ಣಿಕಾ’ ಸಿನಿಮಾಗಳ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆ ರಚಿಸಿದ್ದಾರೆ ಎನ್ನುವುದು ಹೈಲೈಟ್. “ಜಯಲಲಿತಾ ಅವರ ಸಿನಿಮಾ, ರಾಜಕೀಯ, ಸಾಧನೆಯ ಬಗ್ಗೆ ಬೆಳಕು ಚೆಲ್ಲುವುದು ನಮ್ಮ ಉದ್ದೇಶ. ದಿಟ್ಟ, ಸ್ವಾಭಿಮಾನಿ ಸ್ತ್ರೀ ಆದ ಅವರ ಬದುಕು ಇತರರಿಗೂ ಪ್ರೇರಣೆದಾಯಕ. ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬಾರದಂತೆ ಸಿನಿಮೀಯ ಘಟನೆಗಳೊಂದಿಗೆ ಸಿನಿಮಾ ಮಾಡಿದ್ದೇವೆ” ಎನ್ನುತ್ತಾರೆ ನಿರ್ದೇಶಕ ವಿಜಯ್.