ʼಭೂಮಿಗೀತʼ ಖ್ಯಾತಿಯ ಕೇಸರಿ ಹರವೂ ಮತ್ತೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ… !

ಕನ್ನಡಕ್ಕೆ ʼಭೂಮಿ ಗೀತʼ ದಂತಹ ಸದಭಿರುಚಿಯ ಚಿತ್ರ ಕೊಟ್ಟ ಸೃಜನಾಶೀಲ ನಿರ್ದೇಶಕ ಕೇಸರಿ ಹರವೂ ಮತ್ತೆ ನಿರ್ದೇಶನದತ್ತ ಮನಸು ಮಾಡಿದ್ದಾರೆ. ಒಂದು ಸುದೀರ್ಘ ಗ್ಯಾಪ್‌ ಬಳಿಕ ಈಗವರು ದೇಶದ ರೈತರು ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳು ಹಾಗೂ ಕೃಷಿ ಕಾಯ್ದೆಗಳ ಪರಿಣಾಮಗಳನ್ನು ತೆರೆ ಮೇಲೆ ತರಲು ಹೊರಟಿದ್ದಾರೆ. ಅದಕ್ಕಂತಲೇ ಈಗವರು ಸುಮಾರು ಹತ್ತಿಪ್ಪತ್ತು ದಿನಗಳ ಕಾಲ ದೆಹಲಿಗೆ ತೆರಳಿ ಅಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಪಾಲ್ಗೊಂಡು ಬಂದಿದ್ದಾರೆ.

ಸದ್ಯಕ್ಕೀಗ ರೈತರ ಪ್ರತಿಭಟನೆಯ ಕೇಂದ್ರಗಳಾಗಿರುವ ತಿಕ್ರಿ, ಸಿಂಘು, ಗಾಜಿಪುರ ಗಳಲ್ಲಿನ ರೈತ ಪ್ರತಿಭಟನೆಗಳಲ್ಲಿ ನೇರವಾಗಿ ಪಾಲ್ಗೊಂಡು, ಅಲ್ಲಿನ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡು ಬಂದಿದ್ದಾರೆ. ದಿನ ದಿನಗಳಲ್ಲಿ ಪಂಜಾಬ್‌, ಹರಿಯಾಣ ಹಾಗೂ ಬಿಹಾರ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಹಾಗಂತ ಅವರೇನು ರೈತರ ಸಮಸ್ಯೆಗಳ ಕುರಿತು “ಭೂಮಿ ಗೀತʼ ದಂತಹ ಮತ್ತೊಂದು ಸಿನಿಮಾ ಮಾಡಲು ಹೊರಟ್ರಾ ? ಇಲ್ಲಿ ಹೀಗೊಂದು ಕುತೂಹಲ ಶುರುವಾಗುವುದು ಅಷ್ಟೇ ಸಹಜ.

ಆದರೆ, ಅದು ಖಂಡಿತಾ ಹಾಗಲ್ಲ. ಅವರು ಸಿನಿಮಾ ಮಾಡುತ್ತಿಲ್ಲ. ಸದ್ಯಕ್ಕೆ ಅವರು ಅಂತಹ ಆಲೋಚನೆಯಲ್ಲೂ ಇಲ್ಲ. ಹಾಗಾದ್ರೆ ಏನು ಇದು ? ” ಇದೊಂದು ಡಾಕ್ಯುಮೆಂಟರಿ. ಎರಡು ಗಂಟೆಯಲ್ಲಿ ತರಲು ಹೊರಟಿರುವ ಈ ಡಾಕ್ಯುಮೆಂಟರಿಯನ್ನು ಈ ಮೊದಲು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ತರೋಣ ಅಂದುಕೊಂಡಿದ್ದೆ. ಈಗ ಕನ್ನಡದಲ್ಲೂ ತರುವ ಆಲೋಚನೆ ಇದೆ. ಉಳಿದ ಯಾವುದೇ ಭಾಷೆಯಲ್ಲೂ ತಂದರೂ ಇದು ಅನುಕೂಲವೇ. ಯಾಕಂದ್ರೆ ನಾನಿಲ್ಲಿ ಹೇಳಹೊರಟಿದ್ದು ದೇಶದ ರೈತರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಕುರಿತು.

ದೇಶದ ರೈತರ ಮುಂದೆ ಈಗ ಅನೇಕ ಸಮಸ್ಯೆಗಳಿವೆ. ಬೆಳೆ ಬೆಳೆಯುವುದಕ್ಕೆ ಇವತ್ತು ದೊಡ್ಡ ಸವಾಲು ಇದೆ. ಇನ್ನು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೂಡ ಬೇಕು. ಅದು ಕೂಡ ಈಗ ಗೊಂದಲದಲ್ಲಿದೆ. ಭಾರತದ ಕೃಷಿ ವ್ಯವಸ್ಥೆ ಈಗ ಇಂತಹ ಅನೇಕ ಬಿಕ್ಕಟ್ಟುಗಳಲ್ಲಿದೆ. ಅವೆಲ್ಲವನ್ನು ತೆರೆ ಮೇಲೆ ತರುವ ಆಲೋಚನೆ ಇದೆʼ ಎನ್ನುತ್ತಾರೆ ನಿರ್ದೇಶಕ ಕೇಸರಿ ಹರವೂ.ಕನ್ನಡ ಚಿತ್ರರಂಗದ ಮಟ್ಟಿಗೆ ಕೇಸರಿ ಹರವೂ ಅಂದ್ರೆ ತಕ್ಷಣ ನೆನಪಾಗೋದು ʼಭೂಮಿ ಗೀತʼ ಚಿತ್ರ. ಅದು ಅವರ ಚೊಚ್ಚಲ ಚಿತ್ರ.

ʼಭೂಮಿಗೀತʼ ಎನ್ನುವ ಹೆಸರಿಗೆ ತಕ್ಕಂತೆ ಈ ಚಿತ್ರ ಈ ನಾಡಿನ ರೈತರ ಬದುಕನ್ನ ತೆರೆ ಮೇಲೆ ಅನಾವರಣಗೊಳಿಸಿತ್ತು. 1998  ರಲ್ಲಿ ಈ ಚಿತ್ರವು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಫಿಲ್ಮ್‌ ಫೇರ್‌ ಪ್ರಶಸ್ತಿಗೂ ಪಾತ್ರವಾಗಿ, ದೊಡ್ಡ ಸುದ್ದಿ ಆಗಿದ್ದು ಇತಿಹಾಸ. ಕೇಸರಿ ಹರವೂ ತಮ್ಮ ಚೊಚ್ಚಲ ಚಿತ್ರದಲ್ಲೇ ಒಬ್ಬ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದ್ದು ಹಳೇ ಸುದ್ದಿ. ಮುಂದೆ ಅದೇನಾಯಿತೋ ಗೊತ್ತಿಲ್ಲ. ನಿರ್ದೇಶಕ ಕೇಸರಿ ಹರವೂ ನಿರ್ದೇಶನದಿಂದಲೇ ದೂರ ಉಳಿದಿದ್ದರು. ಸಿನಿಮಾ ಬದಲಿಗೆ ರೈತ ಹೋರಾಟ, ಪರಿಸರ ಹೋರಾಟ ಅಂತ ತಮ್ಮನ್ನು ತಾವು ತೊಡಗಿಸಿಕೊಂಡರು.ಇಷ್ಟಾಗಿಯೂ ಸಿನಿಮಾ ನಿರ್ದೇಶನಕ್ಕೆ ಮನಸು ಮಾಡಿದರು. 2016ರಲ್ಲಿ ಪರಿಸರ ಜಾಗೃತಿ ಮೇಲೆಯೇ ʼಒಳ್ಳೆಯವನುʼ ಎನ್ನುವ ಸಿನಿಮಾವೊಂದನ್ನು ನಿರ್ದೇಶಿಸಿದ್ದರು. ಅಲ್ಲಿಂದೀಗ ರೈತರ ಸಮಸ್ಯೆ ಕುರಿತು ಡಾಕ್ಯುಮೆಂಟರಿ ಮಾಡುತ್ತಿರುವುದು ವಿಶೇಷ.

ಕನ್ನಡದ ಬಹುತೇಕ ನಿರ್ದೇಶಕರೀಗ ವ್ಯಾಪಾರ ವಹಿವಾಟಿನ ಕಡೆಗೆ ಗಮನ ಕೊಟ್ಟಿದ್ದಾರೆ. ರಿಮೇಕೋ, ಸ್ವಮೇಕೋ ಹಣ ಮಾಡುವುದಕ್ಕೆ ಸರಕು ಬೇಕು ಎನ್ನುವುದೇ ಅವರ ಸೂತ್ರ. ಆದರೆ, ಕೇಸರಿ ಹರವೂ ಅವರ ಚಿಂತನೆಯೇ ಬೇರೆ. ರೈತ ಹೋರಾಟ, ಪರಿಸರ ಹೋರಾಟದ ಪ್ರಭಾವದಲ್ಲಿರುವ ಅವರಿಗೆ ಸಿನಿಮಾ ಅನ್ನೋದು ಹಣಕ್ಕಿಂತ ಜನರ ಜಾಗೃತಿಯ ಪ್ರಬಲ ಮಾಧ್ಯಮ ಅನ್ನೋದು ಅವರ ನಂಬಿಕೆ. ಈಗವರು ಕೃಷಿ ಸಮಸ್ಯೆ, ರೈತ ಹೋರಾಟ ಕುರಿತು ಡಾಕ್ಯುಮೆಂಟರಿ ಮಾಡುತ್ತಿರುವುದು ಕೂಡ ಅದೇ ಹಿನ್ನೆಲೆಯಲ್ಲಿ ಅನ್ನೋದು ಅಷ್ಟೇ ಸತ್ಯ. ಅಂದ ಹಾಗೆ, ಈ ಡಾಕ್ಯುಮೆಂಟರಿಯನ್ನು ನಿರ್ದೇಶಕ ಕೇಸರಿ ಹರವೂ ಕ್ರೌಂಡ್‌ ಫಂಡಿಂಗ್‌ ಮೂಲಕ ನಿರ್ಮಾಣ ಮಾಡುತ್ತಿದ್ದು,  ಇದರಲ್ಲಿ ಪಾಲ್ಗೊಳ್ಳಲು ಇಚ್ಚಿಸುವರು [email protected] ಮೂಲಕ ಸಂಪರ್ಕಿಸಬಹುದು. ಇಲ್ಲವೇ UPI id, kesari.haravoo@oksbi ಗೆ ನೇರವಾಗಿ ಕಾಂಟ್ರಿಬ್ಯೂಟ್‌ ಮಾಡಬಹುದು.

Related Posts

error: Content is protected !!