Categories
ಸಿನಿ ಸುದ್ದಿ

ತನ್ನ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಿಸಲು ಸಜ್ಜಾದ ಹೊಂಬಾಳೆ ಫಿಲಂಸ್

‌ಕೊರೊನಾ ಎರಡನೇ ಅಲೆ ಈಗ ಆತಂಕ ಮೂಡಿಸಿದೆ. ಈಗಾಗಲೇ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಲಸಿಕೆಯೂ ಬಂದಿದೆ. ಒಂದಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರೂ, ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಒಂದಷ್ಟು ಮಂದಿ ಸ್ವತಃ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಕೆಲ ಸಂಸ್ಥೆಗಳು ಕೂಡ ತಮ್ಮ ತಮ್ಮ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸುವ ಕೆಲಸಕ್ಕೆ ಮುಂದಾಗಿವೆ. ಅದೇ ನಿಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿರುವ ಹೊಂಬಾಳೆ ಫಿಲಂಸ್‌ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದಾಗಿ ಕುಟುಂಬದವರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸಲು ಸಜ್ಜಾಗಿದ್ದಾರೆ.
ತಮ್ಮ ಕಂಪೆನಿಯಲ್ಲಿ ದುಡಿಮೆ ಮಾಡುತ್ತಿರುವ ಉದ್ಯೋಗಿಗಳ ಆರೋಗ್ಯ ಮುಖ್ಯ ಎಂದು ಹೇಳಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ಉಚಿತ ಕೊರೊನಾ ಲಸಿಕೆ ಹಾಕಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರೀಗ ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ಹಾಕಿಸಲು ತಯಾರಿ ನಡೆಸಿದ್ದಾರೆ.

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ವಿಜಯ್‌ ಕಿರಗಂದೂರು, “ಕೊರೊನಾ ಮುಕ್ತ ಆಗಲು ಲಸಿಕೆ ಬಹಳ ಮುಖ್ಯ. ನೀವೆಲ್ಲರೂ ಸಹ ಲಸಿಕೆ ಹಾಕಿಸಿಕೊಳ್ಳಿ ಮತ್ತು ಆರೋಗ್ಯವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್‌ ಮೂಲಕ ಈ ಕಾರ್ಯಕ್ಕೆ ಮುಂದಾಗಿರುವ ವಿಜಯ್‌ ಕಿರಗಂದೂರು ಅವರ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಗುತ್ತಿದೆ. ಸದ್ಯ ಈ ಹೊಂಬಾಳೆ ಫಿಲಂಸ್‌ ಸಂಸ್ಥೆ ಎರಡು ಬಿಗ್‌ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಬಿಡುಗಡೆಗೆ ಎದುರು ನೋಡುತ್ತಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಹಾಗೂ “ಕೆಜಿಎಫ್-2” ಚಿತ್ರ ಬಿಡುಗಡೆ ದಿನ ಘೋಷಿಸಿವೆ. ತೆಲುಗಿನ ನಟ ಪ್ರಭಾಸ್ ಅವರ “ಸಲಾರ್” ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ.

Categories
ಸಿನಿ ಸುದ್ದಿ

ಹೊಸಬರಿಗೆ ಸಾಥ್‌ ನೀಡೋದ್ರಲ್ಲಿ ತಪ್ಪೇನಿದೆ ಅಂತ ? ಇದು ನಟ ಪ್ರೇಮ್‌ ಪ್ರಶ್ನೆ

ಹೊಸಬ್ರು ಯಾರೇ ಬರ್ಲಿ, ಅವ್ರೀಗೆ‌ ಸಂಪೋರ್ಟ್‌ ಮಾಡ್ಬೇಕು ಅನ್ನೋದು ನನ್‌ ಸೂತ್ರ. ಆದ್ರೆ ಇದು ಕೆಲವರಿಗೆ ಹಿಡಿಸಲ್ಲ. ಅವ್ರೀಗೆ ಒಂಥರ ಬೇಸರ. ಯಾಕೆ ನೀನು ಎಲ್ರಿಗೂ ಸಪೋರ್ಟ್‌ ಮಾಡ್ತೀಯಾ ಅಂತ ಕೇಳ್ತಾರೆ. ಅವ್ರ ಮಾತಲ್ಲಿ ಒಂಥರ ವ್ಯಂಗ್ಯ ಇರುತ್ತೆ. ಆದ್ರೆ ಅದಕ್ಕೆ ನಾನು ಎಂದಿಗೂ ತಲೆ ಕಡಿಸಿಕೊಂಡಿಲ್ಲ. ನಾನೇನ್‌ ಅನ್ಕೊಳ್ತೇನೋ ಅದ್ನ ಮಾಡೋಣ ಅನ್ನೋದು ನನ್‌ ಥಿಯೇರಿ…

ನಟ ನೆನಪಿರಲಿ ಪ್ರೇಮ್‌, ಈ ಮಾತುಗಳನ್ನು ತುಂಬಾ ನಿಷ್ಟುರವಾಗಿಯೇ ಹೇಳಿದರು. ತಮ್ಮ ಮನಸ್ಸಿನಲ್ಲಿ ಏನೀತೊ ಅದನ್ನು ಹಿಂದು- ಮುಂದು ನೋಡದಯೇ ಹೊರ ಹಾಕಿದರು. ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ “ಅಕ್ಷಿʼ ಚಿತ್ರ ತಂಡ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಪ್ರೇಮ್‌ ಭಾಗವಹಿಸಿದ್ದರು. ಅದಕ್ಕೆ ಕಾರಣ ನಿರ್ಮಾಪಕ ಕಲಾ ದೇಗುಲ ಶ್ರೀನಿವಾಸ್.‌ ಪ್ರೇಮ್‌ ಹಾಗೂ ಶ್ರೀನಿವಾಸ್‌ ಇಬ್ಬರು ಹಲವು ವರ್ಷಗಳ ಸ್ನೇಹಿತರು. ಹಾಗಾಗಿಯೇ ʼಅಕ್ಷಿʼ ಗೆ ರಾಷ್ಟ್ರ ಪ್ರಶಸ್ತಿ ಬಂದ ವಿಚಾರ ಗೋತ್ತಾಗುತ್ತಿದ್ದಂತೆಯೇ ಆ ಚಿತ್ರ ತಂಡವನ್ನು ತಮ್ಮ ಮನೆಗೆ ಅಹ್ವಾನಿಸಿ, ಅಭಿನಂದನೆ ಹೇಳಿದ್ದರಂತೆ ಪ್ರೇಮ್. ಆದರೂ ಅವತ್ತು ಮಾಧ್ಯಮದ ಮುಂದೆ ಚಿತ್ರ ತಂಡವನ್ನು ಅಭಿನಂದಿಸಿ ಮಾತನಾ‌ ಡಿದರು.

” ಎಲ್ಲರೂ ಒಂದು ಸಮಯದಲ್ಲಿ ಇಲ್ಲಿಗೆ ಹೊಸಬರೇ. ನಾನೂ ಕೂಡ ಒಂದ್‌ ಟೈಮ್‌ ನಲ್ಲಿ ಇಲ್ಲಿಗೆ ಹೊಸಬನೇ ಅಗಿದ್ದೆ. ಆಗ ಸಾಕಷ್ಟು ಜನ ಇಲ್ಲಿ ನನ್ನನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ್ದರ ಫಲವಾಗಿ ನಾನಿಲ್ಲಿ ನಟನಾಗಿ ಗುರುತಿಸಿಕೊಳ್ಳುವಂತಾಯಿತು. ಈಗ ಬರುವ ಹೊಸಬರು ಕೂಡ ಅಷ್ಟೆಯೇ. ಅವರಿಗೂ ಒಂದು ಬೆಂಬಲ, ಪ್ರೋತ್ಸಾಹ ಸಿಕ್ಕರೆ, ಅವರು ಕೂಡ ತಾವಂದು ಕೊಂಡಿದ್ದನ್ನು ಸಾಧಿಸಲು ಸಾಧ್ಯ. ಶ್ರೀನಿವಾಸ್‌, ಬೆಂಬಲ ಕೊಟ್ಟು ಸಿನಿಮಾ ಮಾಡದಿದ್ದರೆ ಮನೋಜ್‌ ಕುಮಾರ್‌ ಎಂಬ ಯುವಕ ಇವತ್ತು ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿ ಇಷ್ಟು ಸುದ್ದಿಯಲ್ಲಿ ಇರುತ್ತಿರಲಿಲ್ಲ. ಇವತ್ತು ಇವರನ್ನು ಇನ್ನಷ್ಟು ಪ್ರೋತ್ಸಾಹಿಸಿ, ಬೆಂಬಲಿಸಿದರೆ ಮುಂದೆ ಮತ್ತಷ್ಟು ಪ್ರಶಸ್ತಿ ಸಿನಿಮಾಗಳನ್ನು ಮಾಡಬಹುದುʼ ಅಂತ ಪ್ರೇಮ್‌ ಹೇಳಿದರು.

ʼ ಹೊಸಬರು ಯಾರೇ ಬರಲಿ ಅವರಿಗೆ ನಮ್ಮಿಂದಾದ ಬೆಂಬಲ, ಪ್ರೋತ್ಸಾಹ ನೀಡಬೇಕೆನ್ನುವುದು ನನ್ನ ಥಿಯೇರಿ. ಆದ್ರೆ ಇದು ಕೆಲವರಿಗೆ ಹಿಡಿಸಲ್ಲ. ಯಾಕೆ ಎಲ್ಲರಿಗೂ ನೀವು ಬೆಂಬಲ ನೀಡಿತ್ತೀರಿ ಅಂತ ಕೆಲವರು ಕೇಳುತ್ತಾರೆ. ಆದ್ರೂ ನಾನು ಅವರ ಮಾತಿಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಇದು ಚಿತ್ರ ರಂಗಕ್ಕೆ ಬಂದ ಹೊಸಬರಿಗೆ ನನ್ನಿಂದಾದ ಸಹಾಯ ಅಂತ ಹೊಸಬರ ಚಿತ್ರಗಳ ಟೀಸರ್‌, ಟ್ರೇಲರ್‌ ಲಾಂಚ್‌ ಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತೇನೆ. ಮುಂದೆಯೂ ಮಾಡುತ್ತೇನೆʼ ಎಂದರು ಪ್ರೇಮ್.‌ ಇನ್ನು ನಟ ಪ್ರೇಮ್‌ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಇಫ್ಟಾ ಬೀದಿ ನಾಟಕ ತಂಡದಿಂದ ಸಿನಿಮಾ ರಂಗಕ್ಕೆ ಬಣದವರು. ಈಗಲೂ ಒಂದಷ್ಟು ಬದ್ಧತೆ ಉಳಿಸಿಕೊಂಡೇ ಬಣ್ಣ ಹಚ್ಚುತ್ತಿದ್ದಾರೆ. ಸ್ಟಾರ್‌ ಅಂತ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲರನ್ನು ಒಳಗೊಳ್ಳುವ ಅವರ ಸ್ನೇಹಪರ ನಿಲುವೇ ವಿಶೇಷ.

Categories
ಸಿನಿ ಸುದ್ದಿ

ʼಅಕ್ಷಿʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬರಲು ವರನಟ ಡಾ. ರಾಜ್‌ ಕುಮಾರ್‌ ಅವರೇ ಕಾರಣವಂತೆ !!

ರಾಷ್ಟ್ರ ಪ್ರಶಸ್ತಿಗೆ ಕಾರಣ ನಾವಲ್ಲ, ನಮ್‌ ಪ್ರಕಾರ ಅದಕ್ಕೆ ಪರೋಕ್ಷವಾಗಿ ಕಾರಣವಾದವರು ವರನಟ ಡಾ. ರಾಜ್‌ ಕುಮಾರ್‌….

  • ಪ್ರಾದೇಶಿಕ ವಿಭಾಗದಲ್ಲಿ ಕನ್ನಡದಿಂದ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ʼಅಕ್ಷಿʼ ಚಿತ್ರದ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಹಾಗೂ ನಿರ್ದೇಶಕ ಮನೋಜ್‌ ಕುಮಾರ್‌ ಇಬ್ಬರು ಹೀಗೆ ಹೇಳಿ ಅಚ್ಚರಿ ಮೂಡಿಸಿದರು.
    ನಿಜಕ್ಕೂ ಒಂದು ಕ್ಷಣ ಅಲ್ಲಿ ಅಚ್ಚರಿಯೇ ಆಗಿದ್ದು. ಯಾಕಂದ್ರೆ ರಾಜ್‌ ಕುಮಾರ್‌ ಅವರು ಈ ಪ್ರಶಸ್ತಿಗೆ ಹೇಗೆ ಕಾರಣ ಆದ್ರೂ ಅಂತ. ಆ ಮೇಲೆ ಇಬ್ಬರು ವಿವರಣೆ ಕೊಟ್ಟರು. ಇದು ಆಗಿದ್ದು ಚಿತ್ರ ತಂಡ ಬಧುವಾರವಷ್ಟೇ ನಡೆಸಿದ ಪ್ರಶಸ್ತಿ ಸಂಭ್ರಮದ ಸುದ್ದಿಗೋಷ್ಟಿಯಲ್ಲಿ.

ನಿರ್ಮಾಪಕ ಕಮ್‌ ನಿರೂಪಕ ಕಲಾದೇಗುಲ ಶ್ರೀನಿವಾಸ್‌ ಸೇರಿದಂತೆ “ಅಕ್ಷಿʼ ಚಿತ್ರ ತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಅದರಲ್ಲೂ ಶ್ರೀನಿವಾಸ್‌ ಅತೀವ ಸಂಭ್ರಮದಲ್ಲಿದ್ದಾರೆ. ರಾಷ್ಟ್ರ ಪ್ರಶಸ್ತಿಗೆ ಭಾಜನವಾದ ʼಅಕ್ಷಿʼ ಚಿತ್ರವು ಅವರ ನಿರ್ಮಾಣದ ಮೊಟ್ಟ ಮೊದಲ ಚಿತ್ರ. ಅದಕ್ಕೀಗ ೬೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆಯ ಪ್ರಾದೇಶಿಕ ವಿಭಾಗದಲ್ಲಿ ಕನ್ನಡದಿಂದ “ಅಕ್ಷಿʼ ಅತ್ಯುತ್ತಮ ಪ್ರಶಸ್ತಿಗೆ ಪಾತ್ರವಾಗಿದೆ. ಅವರಂತೆಯೇ ಇಡೀ ತಂಡ ಕೂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಅ ಖುಷಿ ಹಂಚಿಕೊಳ್ಳುವುದಕ್ಕಾಗಿಯೇ ಚಿತ್ರ ತಂಡ ಬಧುವಾರ ಮಾಧ್ಯಮದ ಮುಂದೆ ಬಂದಿತ್ತು.

ನಿರೂಪಕ ಕಮ್‌ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಮೊದಲು ಮಾತು ಶುರು ಮಾಡಿದರು. ಆರಂಭದಲ್ಲಿ ನಮಗೆ ಒಂದು ಸದಭಿರುಚಿಯ ಚಿತ್ರ ಮಾಡ್ಬೇಕು ಅನ್ನೊದಷ್ಟೇ ಇತ್ತು. ಅದಕ್ಕೊಂದು ಒಳ್ಳೆಯ ಕಥೆ ಕೂಡ ಬೇಕು ಅಂತ ಯೋಚಿಸುತ್ತಿದ್ದಾಗ ಗೆಳೆಯರು ಆದ ನಿರ್ದೇಶಕ ಮನೋಜ್‌ ಕುಮಾರ್‌ ತಾವೇ ಬರೆದಿದ್ದ ಒಂದು ಕಥೆ ತಂದ್ರು. ಈ ಕಥೆ ಸಿನಿಮಾ ಮಾಡಿದ್ರೆ ಹೇಗೆ ಅಂತ ಹೇಳಿದ್ರು. ನನ್ನ ನಿರ್ಮಾಣದ ಮೊದಲ ಸಾಹಸಕ್ಕೆ ಇದೇ ಕಥೆ ಸೂಕ್ತ ಎನಿಸಿತು. ಆಗ ಶುರುವಾಗಿದ್ದು ʼಅಕ್ಷಿʼ ಚಿತ್ರ. ಇವತ್ತು ಅದೇ ಕಥೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದಕ್ಕೆ ನಿಜಕ್ಕೂ ಕಾರಣರು ನಾವಲ್ಲ. ಆ ಕಥೆ. ಆ ಕಥೆಯ ಪ್ರೇರಕರು ವರನಟ ಡಾ. ರಾಜ್‌ ಕುಮಾರ್.‌ ಅವರೇ ಈ ಪ್ರಶಸ್ತಿಗೆ ಕಾರಣ ಅಂದ್ರು ʼ ನಿರ್ಮಾಪಕ ಶ್ರೀನಿವಾಸ್.

‌ಅದು ಸರಿ, ರಾಜ್‌ಕುಮಾರ್‌ ಇಲ್ಲಿ ಹೇಗೆ ಪ್ರಶಸ್ತಿಗೆ ಕಾರಣರಾದ್ರು ? ಸುದ್ದಿಗೋಷ್ಟಿಯಲ್ಲಿ ಅದಕ್ಕೆ ಕಾರಣ ಕೊಟ್ಟರು ನಿರ್ದೇಶಕ ಮನೋಜ್‌ ಕುಮಾರ್.”‌ ಈ ಕಥೆ ಹುಟ್ಟಿದ್ದಕ್ಕೆ ಕಾರಣವೇ ರಾಜ್‌ ಕುಮಾರ್‌ ಅವರು. ನಂದು ಊರು ಹಾಸನ ಜಿಲ್ಲೆ ಬೇಲೂರು. ವರನಟ ರಾಜ್‌ ಕುಮಾರ್‌ ಅವರು ನಿಧನರಾದ ದಿನಗಳಲ್ಲಿ ನಾನಾಗ ಊರಲ್ಲಿದ್ದೆ. ಅವರು ಇನ್ನಿಲ್ಲ ಅಂತ ಜನ್ರು ದುಃಖ ಪಡುತ್ತಿದ್ದ ಹೊತ್ತಲೇ ಅವರು, ಕಣ್ಣನ್ನು ದಾನ ಮಾಡಿದ್ರಂತೆ ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ರು. ಆ ಸಂಬಂಧ ಸಾಕಷ್ಟು ಸುದ್ದಿಗಳು ಬಂದಿದ್ದವು. ಅದು ನಂಗೆ ಒಂಥರ ಕಾಡ ತೊಡಗಿತು. ನೇತ್ರ ದಾನ ಅನ್ನೋದು ಹೇಗೆ ಇನ್ನೊಬ್ಬರ ಬದುಕಲ್ಲಿ ಬೆಳಕು ನೀಡುತ್ತದೆ ಅಂತ ಕುತೂಹಲ ಮೂಡಿಸಿತು. ಅದನ್ನೇ ಇಟ್ಟುಕೊಂಡು ನಾನು ಈ ಕಥೆ ಬರೆದೆ. ಮುಂದೆ ಶ್ರೀನಿವಾಸ್‌ ಅವರು ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಹೊರಟಾಗ ಅವರಿಗೆ ಈ ಕಥೆ ಹೇಳಿದೆ. ಅವರಿಗೂ ಇಷ್ಟ ಆಯ್ತುʼ ಅಂತ ಪ್ರಶಸ್ತಿಗೆ ಅಣ್ಣಾವ್ರು ಕಾರಣವಾಗಿದ್ದರ ಹಿಂದಿನ ಸಂಗತಿ ರಿವೀಲ್‌ ಮಾಡಿದರು ಮನೋಜ್.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಕಿರಿತೆರೆಯ ಜನಪ್ರಿಯ ನಟಿ ಇಳಾ ವಿಟ್ಲಾ, ಬಾಲ ನಟರಾದ ಮಿಥುನ್‌, ನಾಗರಾಜ್‌ , ಕಸ್ತೂರಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಗೋವಿಂದೇಗೌಡ, ಇಳಾ ವಿಟ್ಲಾ ತಮ್ಮ ಪಾತ್ರಗಳ ಜತೆಗೆ ಚಿತ್ರೀಕರಣ ಅನುಭವ ಹಂಚಿಕೊಂಡರು. ಹಾಗೆಯೇ ರಾಷ್ಟ್ರ ಪ್ರಶಸ್ತಿ ಬಂದಿದ್ದು ತುಂಬಾನೆ ಖುಷಿ ಕೊಟ್ಟಿದೆ.ಹಾಗೆಯೇ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಅಂತಂದ್ರು. ಚಿತ್ರಕ್ಕೆ ಮುಕಲ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ್‌ ಜತೆಗೆ ರವಿ ಹಾಗೂ ರಮೇಶ್‌ ಬಂಡವಾಳ ಹಾಕಿದ್ದಾರೆ. ಅವರಿಗೂ ಈಗ ರಾಷ್ಟ್ರ ಪ್ರಶಸ್ತಿ ಬಂದಿರೋದು ಹೊಸ ಉತ್ಸಾಹ ತಂದಿದೆ. ಚಿತ್ರವನ್ನು ಇಷ್ಟರಲ್ಲಿಯೇ ಚಿತ್ರಮಂದಿರಕ್ಕೆ ತರಲು ಚಿತ್ರ ತಂಡ ಮುಂದಾಗಿದೆ. ಶ್ರೀನಿವಾಸ್‌ ಜತೆಗಿನ ಸ್ನೇಹದ ಕಾರಣಕ್ಕೆ ನಟ ನೆನಪಿರಲಿ ಪ್ರೇಮ್‌ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದು , ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

Categories
ಸಿನಿ ಸುದ್ದಿ

ಶಿವಣ್ಣ ಸಾಮಾಜಿಕ ಸಂದೇಶ- ಎಲ್ಲರೂ ಮಾಸ್ಕ್‌ ಧರಿಸುವಂತೆ ಮನವಿ

ಕೊರೊನಾ ಹಾವಳಿ ಕಡಿಮೆ ಆಯ್ತು ಅನ್ನುವ ಹೊತ್ತಲ್ಲೆ ಪುನಃ ಎರಡನೇ ಅಲೆ ಶುರುವಾಗಿದೆ. ಎಲ್ಲೆಡೆ ಮತ್ತೆ ಆತಂಕ ಮನೆ ಮಾಡಿದೆ. ಈಗಷ್ಟೇ ಎಲ್ಲಾ ಕ್ಷೇತ್ರಗಳು ತನ್ನ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುತ್ತಿವೆ. ಕನ್ನಡ ಚಿತ್ರರಂಗ ಕೂಡ ಮೆಲ್ಲನೆ ಮೇಲೇಳುತ್ತಿದೆ. ಇದರ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಶುರುವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಇದೆ. ಇತ್ತೀಚೆಗಷ್ಟೇ, ಚಿತ್ರಮಂದಿರಗಳತ್ತ ಪ್ರೇಕ್ಷಕರು ಮುಖ ಮಾಡುತ್ತಿದ್ದಾರೆ.

ಸ್ಟಾರ್‌ ಚಿತ್ರಗಳೂ ಸಹ ಬಿಡುಗಡೆ ಕಂಡು, ಹೊಸ ದಿಕ್ಕಿನತ್ತ ಸಾಗುತ್ತಿವೆ. ಕೊರೊನಾ ಎರಡನೇ ಅಲೆ ಸುದ್ದಿ ಜೋರಾಗುತ್ತಿದ್ದಂತೆಯೇ, ಅತ್ತ, ಚಿತ್ರಮಂದಿರಗಳಲ್ಲಿ ಅರ್ಧ ಭರ್ತಿ ಬಗ್ಗೆಯೂ ಪ್ರಸ್ತಾಪವಾಗಿತ್ತು. ಚಿತ್ರರಂಗ ಒಗ್ಗಟ್ಟಾಗಿ ಪೂರ್ಣ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಗೆ ಸರ್ಕಾರ ಕೂಡ ಸ್ಪಂದಿಸಿದೆ. ಆದರೆ, ಜನರು ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಂಡು, ಅಂತರ ಕಾಪಾಡಿಕೊಂಡರೆ, ಯಾವದೇ ಭಯ ಇರೋದಿಲ್ಲ. ಈ ಕುರಿತು ಸರ್ಕಾರ ಮನವರಿಕೆ ಮಾಡುತ್ತಿದೆ. ಸ್ಟಾರ್‌ ನಟರುಗಳು ಕೂಡ ತಮ್ಮ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ, ಸ್ಯಾಂಡಲ್‌ವುಡ್‌ ಸ್ಟಾರ್‌ ಶಿವರಾಜಕುಮಾರ್‌ ಕೂಡ ವಿಡಿಯೊ ಮೂಲಕ ಸಾಮಾಜಿಕ ಸಂದೇಶ ರವಾನಿಸಿದ್ದಾರೆ.

ಎಲ್ಲರೂ ಮಾಸ್ಕ್‌ ಧರಿಸುವಂತೆ ಮನವಿ ಮಾಡಿದ್ದಾರೆ.
ವಿಡಿಯೊವೊಂದರಲ್ಲಿ ಅವರು ಹೇಳಿಕೊಂಡಿರುವುದಿಷ್ಟು., “ಎಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕೊರೊನಾ ಎರಡನೇ ಅಲೆ ಸ್ಟಾರ್ಟ್‌ ಆಗ್ತಾ ಇರೋದು. ದಯವಿಟ್ಟು ಕೈ ಮುಗಿದು ಕೇಳಿಕೊಳ್ತಾ ಇದ್ದೇನೆ. ಪ್ರತಿಯೊಬ್ಬರೂ ಮಾಸ್ಕ್‌ ಹಾಕಿ, ಈ ಕೊರೊನಾ ಓಡಿಸಿ, ಮತ್ತೆ ಲಾಕ್‌ಡೌನ್‌ಗೆ ಒಳಗಾಗೋದು ಬೇಡ. ನಾನೇಕೆ ಮಾಸ್ಕ್‌ ಹಾಕೊಂಡ್ ಮಾತಾಡ್ತಿಲ್ಲ ಅಂದರೆ, ನಾನು ಹೇಳಿದ್ದು ನಿಮಗೆಲ್ಲರಿಗೂ ಕೇಳಬೇಕು. ನೀವೆಲ್ಲರೂ ಅದನ್ನು ಫಾಲೋ ಮಾಡ್ತೀರಿ ಅಂತ ನಂಬಿದ್ದೇನೆ. ದಯವಿಟ್ಟು, ಮರಿಬೇಡಿ ಮಾಸ್ಕ್‌ ಹಾಕ್ಕೊಳ್ಳಿ, ಸ್ಯಾನಿಟೈಸ್‌ ಮಾಡ್ಕೊಳ್ಳಿ, ಸೋಶಿಯಲ್‌ ಡಿಸ್ಟೆನ್ಸಗ್‌ ಇಟ್ಕೊಳ್ಳಿ ನಮಸ್ಕಾರ ಥ್ಯಾಂಕ್ಯು…” ಎಂದಿದ್ದಾರೆ. ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ಅತ್ತ, ಸಿನಿಮಾ ಮಂದಿ ಕೂಡ ಖುಷಿಯಲ್ಲಿದ್ದಾರೆ. ಈ ನಡುವೆ ಪ್ರೇಕ್ಷಕರು ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಂಡು ಅಂತರ ಕಾಪಾಡಿಕೊಂಡರೆ ಕೊರೊನಾ ಹಾವಳಿ ತಡೆಯಬಹುದು. ಈ ನಿಟ್ಟಿನಲ್ಲಿ ಫ್ಯಾನ್ಸ್‌ ತಮ್ಮ ಸ್ಟಾರ್‌ ನಟರ ಮನವಿಗೆ ಸ್ಪಂದಿಸಬೇಕಿದೆ.

Categories
ಸಿನಿ ಸುದ್ದಿ

ಶ್ರೀನಗರ ಕಿಟ್ಟಿ ಮತ್ತೆ ಬಂದ್ರು – ರಕ್ತ ಸಿಕ್ತ ಕಥೆ ಹೇಳಲಿದೆ ಗೌಳಿ ! ಫಸ್ಟ್‌ ಲುಕ್‌ಗೆ ಭರ್ಜರಿ ರೆಸ್ಪಾನ್ಸ್

ಕನ್ನಡದಲ್ಲಿ ಒಂದಷ್ಟು ನಾಯಕ ನಟರು, ತೆರೆ ಮೇಲೆ ಭರ್ಜರಿಯಾಗಿ ಮಿಂಚಿ ಕಾಲ ಕ್ರಮೇಣ ಸದ್ದಿಲ್ಲದೆ ಇದ್ದವರು ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸಾಲಿಗೆ ಶ್ರೀನಗರ ಕಿಟ್ಟಿ ಕೂಡ ಸೇರಿದ್ದಾರೆ. ಹಾಗಂತ, ಶ್ರೀನಗರ ಕಿಟ್ಟಿ ಅವರಿಗೆ ಅವಕಾಶಗಳೇ ಇಲ್ಲವೆಂದಲ್ಲ, ಸಿಕ್ಕ ಅಲ್ಲೊಂದು, ಇಲ್ಲೊಂದು ಸಿನಿಮಾಗಳನ್ನು ಮಾಡುತ್ತಲೇ, ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಶತದಿನದ ಚಿತ್ರಗಳನ್ನು ಕೊಡುವ ಮೂಲಕ ಇಂದಿಗೂ ಸುದ್ದಿಯಲ್ಲಿರುವ ಶ್ರೀನಗರ ಕಿಟ್ಟಿ, ಒಳ್ಳೆಯ ಕಥೆ, ಪಾತ್ರವನ್ನು ಎದುರು ನೋಡುತ್ತಿದ್ದರು. ಆದರೂ, ಅತಿಥಿ ಪಾತ್ರಗಳ ಮೂಲಕ ಸಿನಿಮಾಗಳಲ್ಲಿ ನಟಿಸಿರುವುದೂ ಉಂಟು. ಈಗ ಮತ್ತೊಂದು ಭರ್ಜರಿ ಸಿನಿಮಾ ಮೂಲಕ ಎಂಟ್ರಿಯಾಗುವುದರ ಜೊತೆಗೆ ತಮ್ಮ ಎರಡನೇ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ.

ಹೌದು, ಶ್ರೀನಗರ ಕಿಟ್ಟಿ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಗೌಳಿ” ಎಂದು ನಾಮಕರಣ ಮಾಡಲಾಗಿದೆ. ಇಂದು ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ. ಶ್ರೀನಗರ ಕಿಟ್ಟಿ ಅವರನ್ನು ಈ ಹಿಂದೆ ನೋಡಿದವರೆಲ್ಲರೂ, ಹೊಸ ಗೆಟಪ್‌ನಲ್ಲಿ ಕಾಣುತ್ತಿದ್ದಾರೆ ಅಂದುಕೊಳ್ಳುತ್ತಿದ್ದರು. ಆ ಹೊಸ ಗೆಟಪ್‌ಗೆ ಕಾರಣ ಏನೆಂಬುದು ಈಗ ರಿವೀಲ್‌ ಆಗಿದೆ. ಅವರೂ ಉದ್ದನೆಯ ದಾಡಿ ಬಿಟ್ಟು, ಕೂದಲು ಬಿಟ್ಟಿದ್ದು, ಹೊಸ ಕಥೆಯ ಚಿತ್ರಕ್ಕಾಗಿ ಅನ್ನುವುದನ್ನು ಈಗ ಸ್ಪಷ್ಟಪಡಿಸಿದ್ದಾರೆ. “ಗೌಳಿ” ಸಿನಿಮಾದ ಅವರ ಲುಕ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಸಿನಿಮಾ ಅನಿಸದೇ ಇರದು. ಅದರಲ್ಲೂ ಶ್ರೀನಗರ ಕಿಟ್ಟಿ ಅವರನ್ನು ಆ ಲುಕ್‌ನಲ್ಲಿ ನೋಡಿದವರಿಗೆ ಫುಲ್‌ ರಾ… ಕ್ಯಾರೆಕ್ಟರ್‌ ಎನಿಸುತ್ತೆ. ರಕ್ತಸಿಕ್ತವಾದ ಮೊಗದಲ್ಲಿ,‌ ಖರಾಬ್‌ ಲುಕ್ ಕೊಟ್ಟು, ಹೆಗಲ ಮೇಲೊಂದು ಕೊಡಲಿ ಇಟ್ಟುಕೊಂಡಿರುವ ಶ್ರೀನಗರ ಕಿಟ್ಟಿ, ರಕ್ತಮಯ ದೇಹದೊಂದಿಗೆ ಲುಕ್‌ ಕೊಟ್ಟಿದ್ದಾರೆ. ಅಲ್ಲಿಗೆ ಇದೊಂದು ಹೊಸ ಕಥೆ ಹೇಳಲಿರುವ ಚಿತ್ರ ಎಂಬುದು ಗೊತ್ತಾಗುತ್ತದೆ.

ಇನ್ನು, ಅವರ ಈ ಗೆಟಪ್‌ ನೋಡಿದವರಿಗೆ ಹಿಂದೆ ಎಸ್.ನಾರಾಯಣ್‌ ಅವರ “ಅಪ್ಪಯ್ಯ” ಸಿನಿಮಾ ನೆನಪಾಗದೇ ಇರದು. ಅದೂ ಕೂಡ ಒಂದೊಳ್ಳೆಯ ಬಯಲು ಸೀಮೆಯ ಸಿನಿಮಾ ಆಗಿತ್ತು. ಪಕ್ಕಾ “ರಾ” ಫೀಲ್‌ ಕೊಡುವ ಸಿನಿಮಾ ಆಗಿ ಒಂದಷ್ಟು ಜನರಲ್ಲಿ ಭಾವುಕತೆ ಹೆಚ್ಚಿಸಿತ್ತು. ಬಹಳ ದಿನಗಳ ನಂತರ ಶ್ರೀನಗರ ಕಿಟ್ಟಿ ಅವರೀಗ “ಗೌಳಿ” ಮೂಲಕ ಎಂಟ್ರಿಕೊಡುತ್ತಿರುವುದು ವಿಶೇಷತೆಗಳಲ್ಲೊಂದು. ಇಷ್ಟು ದಿನಗಳ ಕಾಲ ಕಾದು, ವಿಭಿನ್ನ ಕಥಾಹಂದರ ಇರುವ ಸಿನಿಮಾ ಮಾಡುತ್ತಿರುವ ಖುಷಿ ಅವರಿಗೂ ಇದೆ.ಇನ್ನು, ಈ “ಗೌಳಿ” ಚಿತ್ರಕ್ಕೆ ಸೂರ ನಿರ್ದೇಶಕರು. ಇವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಮೂಲತಃ ಫೋಟ್ರೋಗ್ರಫಿ ಮಾಡಿಕೊಂಡಿದ್ದ ಇವರು, ನಿರ್ದೇಶನ ವಿಭಾಗಕ್ಕೆ ಜಿಗಿದು, ಅಲ್ಲೊಂದಷ್ಟು ಕೆಲಸ ಕಲಿತು ಆ ಅನುಭವ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡೇ ಫೀಲ್ಡ್‌ಗಿಳಿದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಬಗ್ಗೆ ಹೇಳುವ ನಿರ್ದೇಶಕ ಸೂರಿ, “ಇದೊಂದು ಪಕ್ಕಾ ಮಾಸ್‌ ಸಿನಿಮಾ. ಒಂದು ನೈಜ ಘಟನೆಯ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಕಥೆ, ಚಿತ್ರಕಥೆ ನನ್ನದೇ. “ಗೌಳಿ” ಸಿನಿಮಾಗೆ ಶ್ರೀನಗರ ಕಿಟ್ಟಿ ಅವರೇ ಸೂಕ್ತ ಎನಿಸಿ, ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವರಿಗೆ ಈ ಚಿತ್ರ ಹೊಸ ಅನುಭವ ಕಟ್ಟಿಕೊಡುವುದು ಗ್ಯಾರಂಟಿ.

ಈ ಚಿತ್ರಕ್ಕೆ ರಘು ಸಿಂಗಂ ಅವರು ನಿರ್ಮಾಪಕರು. ಅವರಿಗೂ ಇದು ಮೊದಲ ನಿರ್ಮಾಣದ ಚಿತ್ರವಿದು. ಇನ್ನು, ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಅವರ ಸಂಗೀತವಿದೆ. ಛಾಯಾಗ್ರಹಣದ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಸದ್ಯ ಭುವನ್‌ ಗೌಡ ಅವರ ಅಸಿಸ್ಟೆಂಟ್‌ ಪ್ರಜ್ವಲ್‌ಗೌಡ ಅವರ ಬಳಿ ಮಾತುಕತೆ ನಡೆಯುತ್ತಿದೆ. ಉಳಿದಂತೆ ನಾಯಕಿ, ಕಲಾವಿದರ ಆಯ್ಕೆ ಆಗಬೇಕಿದೆ. ಸಿನಿಮಾದಲ್ಲಿ ಶರತ್‌ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವೇ ಇರಲಿದೆ. ಸದ್ಯ ಸ್ಕ್ರಿಪ್ಟ್‌ ಅಂತಿಮಗೊಂಡಿದ್ದು, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಹೊರಡಲಿದ್ದೇವೆ. ಬಹುತೇಕ ಯಾಣ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು ೪೦ ದಿನಗಳ ಕಾಲ ಚಿತ್ರೀಕರಣ ಸಾಗಲಿದೆ” ಎಂದು ವಿವರಿಸುವ ನಿರ್ದೇಶಕ ಸೂರ, ಇದು ಇಂಥದ್ದೇ ಜಾನರ್‌ಗೆ ಸೇರುವ ಸಿನಿಮಾ ಅಲ್ಲ, ಇಲ್ಲಿ ಎಲ್ಲವೂ ಇದೆ. ಪ್ರೀತಿ, ದ್ವೇಷ, ಅಸೂಯೆ, ಭಾವನೆ, ಭಾವುಕತೆ ಹೀಗೆ ಎಲ್ಲಾ ರೀತಿಯ ಅಂಶಗಳು ಒಳಗೊಂಡಿವೆ ಎಂಬುದು ನಿರ್ದೇಶಕರ ಮಾತು.
ಅದೇನೆ ಇರಲಿ, ಶ್ರೀನಗರ ಕಿಟ್ಟಿ, ಎಲ್ಲೋ ಮರೆಯಾಗಿಬಿಟ್ಟರು ಎನ್ನುವ ಹೊತ್ತಿಗೆ “ಗೌಳಿ” ಮೂಲಕ ಕಾಣಿಸಿಕೊಂಡು ಅಚ್ಚರಿ ನೀಡುತ್ತಿದ್ದಾರೆ. ಅವರ ಫಸ್ಟ್‌ ಲುಕ್‌ ನೋಡಿದವರಿಗೆ ಸಿನಿಮಾ ನೋಡಲೇಬೇಕೆನಿಸುವುದಂತೂ ನಿಜ. ಈ ಮೂಲಕವಾದರೂ ಶ್ರೀನಗರ ಕಿಟ್ಟಿ, ಕನ್ನಡದಲ್ಲಿ ಪುನಃ ಗಟ್ಟಿ ನೆಲೆ ಕಾಣುವಂತಾಗಲಿ ಎಂಬದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ತುಪ್ಪದ ಬೆಡಗಿ ರಾಗಿಣಿ ಏಕಾಏಕಿ ಪೊಲೀಸ್‌ ವೇಷ ಹಾಕಿದ್ದೇಕೆ ?

ಗ್ಲಾಮರಸ್‌ ನಟಿ ರಾಗಿಣಿ ಮತ್ತೆ ಪೊಲೀಸ್‌ ಅಧಿಕಾರಿ ಆಗಿದ್ದಾರೆ. ರಾಗಿಣಿ ಐಪಿಎಸ್‌ ನಂತರ ಈಗವರು ಸರಣಿ ಕೊಲೆಗಳನ್ನು ಬೇಧಿಸುವ ಒಬ್ಬ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಅವರೀಗ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಜಾನಿ ವಾಕರ್. ಯುವ ನಿರ್ದೇಶಕ ವೇದಿಕ್‌ ವೀರಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಕ್ರೈಮ್, ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರಿನಲ್ಲಿ ನೆರವೇರಿತು.

ರಂಜನ್‌ಹಾಸನ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಒಬ್ಬ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ನಟಿ ರಾಗಿಣಿ ಅವರೀಗ ಹಲವಾರು ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನಿವಾಕರ್ ಎನ್ನುವ ಈ ಸಿನಿಮಾದಲ್ಲಿ ನಟಿ ರಾಗಿಣಿ ಸರಣಿ ಕೊಲೆಗಳ ರಹಸ್ಯ ಬೇಧಿಸುವ ಒಬ್ಬ ಖಡಕ್ ಪೊಲೀಸ್ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊಲೆ ಯಾರು, ಏಕೆ ,ಮಾಡ್ತಾರೆ, ಜಾನಿ ವಾಕರ್ ಯಾರು ಎಂಬ ವಿಷಯ ದ ಮೇಲೆ ಕಥೆ ಸಾಗುತ್ತದೆ.

ರಾಗಿಣಿಗೆ ಪೊಲೀಸ್ ಗೆಟಪ್ ಎನ್ನುವುದು ಹೊಸದೇನೂ ಅಲ್ಲ, ಈ ಹಿಂದೆ ರಾಗಿಣಿ ಐಪಿಎಸ್ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಪೊಲೀಸ್ ಪಾತ್ರವನ್ನು ಅವರು ನಿರ್ವಹಿಸಿದ್ದರು. ಆದರೆ ಈಸಲ ರಾಗಿಣಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವುದು ಮಾತ್ರ ವಿಶೇಷ. ತೆರೆಯಮೇಲೆ ಅವರೀಗ ಖಡಕ್ ಪೊಲೀಸ್ ಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ. ನಿರ್ದೇಶಕ ವೇದಿಕ್ ವೀರ ಮಾತನಾಡುತ್ತ ಈ ಚಿತ್ರ ನನ್ನ 5 ವರ್ಷಗಳ ಕನಸು. ಯೂನಿವರ್ಸಲ ಕಂಟೆಂಟ್ ಇದಾಗಿದ್ದು, ರಂಜನ್‌ಗೆ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು. ಜಾನಿವಾಕರ್ ಎನ್ನುವುದು ಚಿತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರು. ಇಡೀ ಸಿನಿಮಾ ಆ ಪಾತ್ರದ ಮೇಲೇ ಹೋಗುತ್ತದೆ. ಕ್ರೈಮ್ ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಥರದ ಅಂಶಗಳು ಈ ಚಿತ್ರದಲ್ಲಿರುತ್ತವೆ ಎಂದು ಹೇಳಿದರು. ನಿರ್ಮಾಪಕ ರಂಜನ್‌ಹಾಸನ್ ಮಾತನಾಡಿ ಈಗಾಗಲೇ2 ಸಿನಿಮಾ ಮಾಡಿದ್ದೇನೆ. ನಾನು ಮತ್ತು ವೇದಿಕ್ ಒಳ್ಳೇ ಸ್ನೇಹಿತರು ಎಂದು ಹೇಳಿದರು.
ನಾಯಕಿ ರಾಗಿಣಿ ಮಾತನಾಡುತ್ತ ಬುದ್ಧಿವಂತ ಮತ್ತು ಪ್ರಾಮಾಣಿಯ ತನಿಖಾಧಿಕಾರಿಯ ಪಾತ್ರ ನನ್ನದು. ಇಲ್ಲಿ ಕಂಟೆಂಟೇ ಹೀರೋ, ಗಟ್ಟಿಯಾದ ಕಥೆ ಇದೆ. ಇಡೀ ಸಿನಿಮಾದಲ್ಲಿ ನಾನೊಬ್ಬಳೇ ಮಹಿಳಾ ಪಾತ್ರಧಾರಿ. ಅಲ್ಲದೆ ಈ ಚಿತ್ರದ ಪಾತ್ರಗಳ ಹೆಸರುಗಳೇ ವಿಶೇಷವಾಗಿದೆ. ನಾಯಕ ಅಭಯ್ ನನಗೆ ಬಹಳ ವರ್ಷಗಳ ಸ್ನೇಹಿತ. ಈ ಚಿತ್ರ ಎಲ್ಲರಿಗೂ ಒಳ್ಳೇ ಹೆಸರು ತಂದುಕೊಡುತ್ತದೆ. ಸಿನಿಮಾದ ಕತೆ ನನ್ನ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಪಾತ್ರದಲ್ಲಿ ನಟಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕ ವಿನು ಮನಸು ಮಾತನಾಡಿ ಚಿತ್ರ ದಲ್ಲಿ 5 ಹಾಡುಗಳಿವೆ. ಹಿನ್ನೆಲೆ ಸಂಗೀತದಲ್ಲಿ ಹೊಸಥರ ಟ್ರೈ ಮಾಡಿದ್ದೇವೆ ಎಂದು ಹೇಳಿದರು.

Categories
ಸಿನಿ ಸುದ್ದಿ

ಇವ್ರು ಅಪ್ಪು ಮೋಹನ್‌ ಕರೆ ತಂದ ಏರಿಯಾ ಹುಡುಗರು, ಚಂದನವನಕ್ಕೆ ಬಂದ ಹೊಸಬರು !

ಚಂದನವನದಲ್ಲಿ ಏರಿಯಾ ಹುಡುಗರ ಕಥೆಗಳು ಹೊಸದೇನಲ್ಲ. ಈಗಾಗಲೇ ನಮ್‌ ಏರಿಯಾದಲ್ಲೊಂದು ದಿನ ಅಂತ ತೆರೆ ಮೇಲೆ ಬಂದು ಹೋದವರದ್ದು ಇಲ್ಲಿ ದೊಡ್ಡ ಪಟ್ಟಿ ಇದೆ. ಆದರೂ ಈಗ ಮತ್ತೊಂದು ಏರಿಯಾ ಹುಡುಗರ ಕಥೆ ಬರುತ್ತಿದೆ. ಈ ಕಥೆ ಹೇಳುತ್ತಿರುವವರು ಚಿತ್ರ ಸಾಹಿತಿ ಅಪ್ಪು ಮೋಹನ್.‌ ಅಂದ ಹಾಗೆ ಅಪ್ಪು ಮೋಹನ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರದ ಸಮಾಚಾರ ಇದು. ಆ ಚಿತ್ರದ ಹೆಸರು “ಏರಿಯಾ ಹುಡುಗರುʼ.

ನಾನೊಂಥರಾ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ಡಾ. ತಾರಖ್‌ ಈ ಚಿತ್ರದ ನಾಯಕ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಗಾಂಧಿಬಜಾರ್‌ನ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರವ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ನಟ ಧೃವ ಸರ್ಜಾ, ಮುಹೂರ್ತ ಸಮಾರಂಭಕ್ಕೆ ಆಗಮಿಸಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಏರಿಯಾ ಹುಡುಗರ ಕಥೆ. ಆ ಏರಿಯಾದಲ್ಲಿನ ನಾಲ್ಕು ಜನ ಸ್ನೇಹಿತರ ಜೀವನದಲ್ಲಿ ನಡೆಯುವ ಹಲವಾರು ರೋಚಕ ತಿರುವುಗಳ ಮೇಲೆ ಈ ಕಥೆ ಸಾಗಲಿದೆಯಂತೆ. ಚಿತ್ರರಂಗಕ್ಕೆ ಅಪ್ಪು ಮೋಹನ್‌ ಹೊಸಬರೇನಲ್ಲ. ಈಗಾಗಲೇ ಅನೇಕ ಹಿಟ್‌ ಹಾಡುಗಳನ್ನು ಕೊಟ್ಟವರು. ಇಷ್ಟಾಗಿಯೂ ಇಲ್ಲಿ ತನಕ ತೆರೆ ಮರೆಯಲ್ಲೆ ಇದ್ದವರು. ಫಸ್ಟ್‌ ಟೈಮ್‌ ತೆರೆಯ ಮುನ್ನೆಲೆಗೆ ಬಂದಿದ್ದಾರೆ. ಚಿತ್ರಕ್ಕೆ ನಾಗೇಶ್ ಉಚ್ಚಂಗಿ ಛಾಯಾಗ್ರಹಣ ಇದೆ. ಹಾಗೆಯೇ ಅವರೇ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರಂತೆ. ಹಾಗೆಯೇ ಪರಶಿವು ಧಂಗೂರು ಕೂಡ ಈ ಚಿತ್ರದ ಸಹಾಯಕ ನಿರ್ದೇಶಕರು. ಇನ್ನು ಸುಮಂತ್ ಲವ್‌ಗುರು ಹಾಗೂ ನಾಗರಾಜ್‌ಗುಪ್ತ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಕಲ್ಕಿ ಅಭಿಷೇಕ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ವಿಭಿನ್ನ ಬಗೆಯ ನಾಲ್ಕು ಹಾಡುಗಳಿಗೆ ಹೊಸತರದ ಸಂಗೀತ ನೀಡುವ ತವಕದಲ್ಲಿದ್ದಾರಂತೆ. ಸಂಭಾಷಣೆ ಹಾಗೂ ಸಾಹಿತ್ಯವನ್ನು ನಿರ್ದೇಶಕ ಅಪ್ಪು ಮೋಹನ್‌ ಅವರೇ ನಿಭಾಯಿಸುತ್ತಿದ್ದಾರೆ. ಏಪ್ರಿಲ್‌ ಮೊದಲವಾರದಿಂದ ಚಿತ್ರೀಕರಣ ಶುರುವಾಗುತ್ತಿದೆ. ಬೆಂಗಳೂರು, ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.

Categories
ಸಿನಿ ಸುದ್ದಿ

ಕ್ರಾಂತಿವೀರ ಚಿತ್ರಕ್ಕೆ ರಾಜಸ್ತಾನ ಚಿತ್ರೋತ್ಸವ ಪ್ರಶಸ್ತಿ: ಕನ್ನಡದಲ್ಲಿ ಬರಲು ಸಜ್ಜಾಗಿದೆ ಭಗತ್‌ ಸಿಂಗ್‌ ಚರಿತ್ರೆಯ ಸಿನಿಮಾ

ಕನ್ನಡದ ನಿರ್ದೇಶಕ ಆದತ್‌ ಎಂ.ಪಿ. (ದತ್ತ) ನಿರ್ದೇಶನದ “ಕ್ರಾಂತಿವೀರ” ಚಿತ್ರ ಏಳನೇ ರಾಜಸ್ತಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಚಿತ್ರಕ್ಕೆ ಕೊಡ ಮಾಡುವ ಅತ್ಯುತ್ತಮ ಕಥೆ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.

ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ ನೂರಾರು ಚಿತ್ರಗಳು ಪಾಲ್ಗೊಂಡಿದ್ದವು. ಆದರ ನಡುವೆ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾದ “ಕ್ರಾಂತಿವೀರ” ಅತ್ಯುತ್ತಮ ಕಥೆಗಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

“ಕ್ರಾಂತಿವೀರ” ಚಿತ್ರಕ್ಕೆ ಚಂದ್ರಕಲಾ. ಟಿ.ರಾಠೋಡ್‌, ಮಂಜುನಾಥ್‌ ಹೆಚ್ಚ. ನಾಯಕ್‌ ಮತ್ತು ಆರ್ಜೂರಾಜ್‌ ನಿರ್ಮಾಪಕರು. ಇವರೊಂದಿಗೆ ತ್ರಿವಿಕ್ರಮ, ಪ್ರಶಾಂತ್‌ ಕಲ್ಲೂರು, ಲೇಟ್‌ ಗೌರಿರಮನಾಥ್‌ ಅವರು ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

“ಭಗತ್ ಸಿಂಗ್” ಜೀವನ ಚರಿತ್ರೆ ಕುರಿತಂತೆ ತಯಾರಾಗಿರುವ ಚಿತ್ರವಿದು. “ಕ್ರಾಂತಿವೀರ” ಸ್ವತಂತ್ರಕ್ಕಾಗಿ ಹೋರಾಡಿ ಮಹಾನ್‌ ನಾಯಕ ಭಗತ್‌ ಸಿಂಗ್‌ ಕುರಿತ ಕಥೆ ಹೊಂದಿದೆ. ಈ ಚಿತ್ರದಲ್ಲಿ ಭಗತ್‌ ಸಿಂಗ್‌ ಪಾತ್ರವನ್ನು ಅಜಿತ್‌ ಜಯರಾಜ್‌ ನಿರ್ವಹಿಸಿದ್ದಾರೆ.

ಇನ್ನು, ಬಾಲ್ಯದ ದಿನಗಳಲ್ಲಿನ ಭಗತ್ ಸಿಂಗ್ ಕಥೆಯೂ ಇರುವುದರಿಂದ ಜ್ಯೂನಿಯರ್ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್ ಟಿ ರಾಠೋಡ್ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ರಾಜಸ್ತಾನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಬಾಗಲಕೋಟೆ, ಶಿವಮೊಗ್ಗ, ಹುಬ್ಬಳ್ಳಿ, ಕೆಜಿಎಫ್ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಇತರೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಪ್ರತಾಪ್.ಎಸ್ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಆರ್.‌ಕೆ. ನೃತ್ಯ ನಿರ್ದೇಶನ‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಲಕ್ಕಿ ಸ್ಟಾರ್‌ ಬ್ರದರ್ಸ್‌ – ಇಂಡಸ್ಟ್ರಿಗೆ ಚೈತನ್ಯ ತುಂಬಿ ಗೆದ್ದು ಬೀಗಿದ ಸಹೋದರರು!

2021 ಕೂಡ ಹೇಗಿರುತ್ತೋ ಗೊತ್ತಿಲ್ಲ. ಮತ್ತೆ ಹೆಚ್ಚುತ್ತಿರುವ ಕೊರೋನಾ ಅಬ್ಬರ ನೋಡಿದರೆ ರಾಜ್ಯದಲ್ಲಿ ಯಾವಾಗ ಲಾಕ್‌ ಡೌನ್‌ ಘೋಷಣೆ ಆಗುತ್ತೋ ಎನ್ನುವ ಆತಂಕ ಮನೆ ಮಾಡಿದೆ. ಬರುವ ದಿನಗಳಲ್ಲಿ ಸಿನಿಮಾ ಚಟುವಟಿಕೆಗಳು ಹೀಗೆಯೇ ಇರುತ್ತವೆ ಅಂತ ಅಂದುಕೊಳ್ಳುವುದಕ್ಕೂ ಕಷ್ಟಕರವಾಗಿದೆ. ಸದ್ಯದ ಮಟ್ಟಿಗೆ ಸಿಕ್ಕ ಸಣ್ಣದೊಂದು ಗ್ಯಾಪ್‌ ನಲ್ಲಿ ದೊಡ್ಡ ದೊಂದು ಗೆಲುವಿನ ಮೂಲಕ ಭರ್ಜರಿ ನಗು ಬೀರಿದ ನಿರ್ದೇಶಕರಂದ್ರೆ ನಂದ್‌ ಕಿಶೋರ್‌ ಹಾಗೂ ತರುಣ್‌ ಸುದೀರ್‌ ಬದ್ರರ್ಸ್.‌ ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಅವರೇ “ಸ್ಟಾರ್‌” ಬ್ರದರ್ಸ್.

‌ಲಾಕ್‌ ಡೌನ್‌ ತೆರೆವಾದ ನಂತರ ಕನ್ನಡದಲ್ಲಿ ಬಂದ ಮೊದಲ ಸ್ಟಾರ್‌ ಸಿನಿಮಾ ಅಂದ್ರೆ ” ಪೊಗರುʼ. ಕೊರೋನಾ ಆತಂಕದ ನಡುವೆಯೂ ಈ ಚಿತ್ರ ತೆರೆಗೆ ಬಂತು. ಅಷ್ಟೋತ್ತಿಗಾಗಲೇ “ಆಕ್ಟ್‌ 1978 ” ಸೇರಿದಂತೆ ಸಾಕಷ್ಟು ಸಿನಿಮಾಗಳು ಬಂದು ಹೋಗಿದ್ದವು. ಆ ಪೈಕಿ “ಆಕ್ಟ್‌ 1978” ಒಂದಷ್ಟು ಸದ್ದು ಮಾಡಿತ್ತಾದರೂ, ಜನ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರದತ್ತ ಮುಖ ಮಾಡಿರಲಿಲ್ಲ. ಅಷ್ಟೋ ಇಷ್ಟೋ ಜನ ಮಾತ್ರ ಚಿತ್ರ ಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ “ಆಕ್ಟ್‌ 1978” ಒಂದಷ್ಟು ಜನಾಕರ್ಷಣೆ ಪಡೆದು ಗೆಲುವಿನ ನಗೆ ಬೀರಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಲಾಕ್‌ ಡೌನ್‌ ನಂತರ ಸ್ಟಾರ್‌ ಸಿನಿಮಾ ಅಂತ ಮೊದಲು ರಿಲೀಸ್‌ ಆಗಿದ್ದು ಪೊಗರು. ʼಪೊಗರುʼ ನಂದ್‌ ಕಿಶೋರ್ ನಿರ್ದೇಶನದ ಚಿತ್ರ. ಧ್ರುವ ಸರ್ಜಾ ಈ ಚಿತ್ರದ ಹೀರೋ. ಹಾಗೆಯೇ ರಶ್ಮಿಕಾ ಮಂದಣ್ಣ ನಾಯಕಿ.

ಚಂದನವನದಲ್ಲಿ ಈ ಮೂವರು ಸಾಕಷ್ಟು ಸುದ್ದಿಯಲ್ಲಿದ್ದವರೇ. “ಪೊಗರುʼ ಮಾಡುವ ಮುನ್ನ ನಿರ್ದೇಶಕ ನಂದ್‌ ಕಿಶೋರ್‌ “ಅಧ್ಯಕ್ಷ”, “ವಿಕ್ಟರಿ”, “ರನ್ನ” ಸೇರಿದಂತೆ ನಾಲ್ಕೈದು ಹಿಟ್‌ ಸಿನಿಮಾ ಕೊಟ್ಟಿದ್ದರು. ಅದರ ದೊಡ್ಡ ಸಕ್ಸಸ್‌ ಅವರ ಬೆನ್ನಿಗಿತ್ತು. ಆ ಮೂಲಕವೇ ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಕಾಂಬಿನೇಷನ್‌ ಮೂಲಕ ಬಿಗ್‌ ಬಜೆಟ್‌ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಈ ಸಲ ಅದ್ದೂರಿ ಸಿನಿಮಾ ನಿರ್ದೇಶನ ಮಾಡಬೇಕೆಂದು ಹೊರಟಿದ್ದ ನಿರ್ದೇಶಕ ನಂದ್‌ ಕಿಶೋರ್‌ ಅವರಿಗೆ ನಿರ್ಮಾಪಕ ಗಂಗಾಧರ್‌ ಕೂಡ ಪ್ರೀತಿಯಿಂದಲೇ ಸಾಥ್‌ ಕೊಟ್ಟರು. ಹೆಚ್ಚು ಕಡಿಮೆ ಮೂರು ವರ್ಷದಲ್ಲಿ ಎಲ್ಲಾ ರೀತಿಯಲ್ಲೂ ಅದ್ದೂರಿತನ ತುಂಬಿಕೊಂಡಿದ್ದ “ಪೊಗರು” 2021ರ ಮೊದಲ ಸ್ಟಾರ್‌ ಸಿನಿಮಾವಾಗಿ ತೆರೆಗೆ ಬಂತು.

ಅನೇಕ ಕಾರಣಕ್ಕೆ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ತೆರೆಗೆ ಬಂದಾಗ ಆ ನಿರೀಕ್ಷೆಯೂ ಹುಸಿಯಾಗಲಿಲ್ಲ. ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡಿತು. ಎಲ್ಲ ಕಡೆ ಭರ್ಜರಿ ಒಪನಿಂಗ್‌ ಪಡೆಯಿತು. ನಿರ್ಮಾಪಕ ಗಂಗಾಧರ್‌ ಗೆಲುವಿನ ನಗೆ ಬೀರಿದರು. ಹಾಗೆಯೇ ನಿರ್ದೇಶಕ ನಂದ್‌ ಕಿಶೋರ್‌, ಮತ್ತೊಂದು ಸಕ್ಸಸ್‌ ಸಿನಿಮಾ ಕೊಟ್ಟ ಖುಷಿಯಲ್ಲಿ ಹೊಸ ಅವಕಾಶಗಳತ್ತ ಮುಖ ಮಾಡಿದರು. ಒಂದಷ್ಟು ವಿವಾದದಲ್ಲಿ ಮುಜುಗರ ಅನುಭವಿಸಿದರು ಎನ್ನುವುದನ್ನು ಬಿಟ್ಟರೆ, “ಪೊಗರು” ಚಿತ್ರ ನಿರ್ದೇಶಕ ನಂದ್‌ ಕಿಶೋರ್‌ಗೆ ಸ್ಟಾರ್‌ ಪಟ್ಟ ಕೊಟಿದ್ದೇನು ಸುಳ್ಳಲ್ಲ.

“ಪೊಗರು” ಮೂಲಕ ನಂದ ಕಿಶೋರ್‌ ಸಕ್ಸಸ್‌ ಕಂಡ ಹಾಗೆಯೇ ಅವರ ಸಹೋದರ ತರುಣ್‌ ಸುಧೀರ್‌ ಅವರೂ ಕೂಡ ಸಕ್ಸಸ್‌ ಸಿನಿಮಾ ಮೂಲಕವೇ ಎಂಟ್ರಿಯಾದವರು. ಅವರ ಚೊಚ್ಚಲ ನಿರ್ದೇಶನದ “ಚೌಕ” ಭರ್ಜರಿ ಯಶಸ್ಸು ಕೊಟ್ಟಿತು. ಅದಾದ ಬಳಿಕ ಅವರು ಆಯ್ಕೆ ಮಾಡಿಕೊಂಡಿದ್ದು, ದರ್ಶನ್‌ ಅವರನ್ನು. ಅವರಿಗಾಗಿ ಅವರು “ರಾಬರ್ಟ್‌” ರೆಡಿಮಾಡಿದರು. 2021ರ ಆರಂಭಿಕ ದಿನಗಳಲ್ಲಿ ಸಂಕಷ್ಟದ ಕಾಲದಲ್ಲೂ ಭರ್ಜರಿ ಸಕ್ಸಸ್‌ ಕಂಡ ನಿರ್ದೇಶಕ ಎನಿಸಿಕೊಂಡಿದ್ದು ಸುಳ್ಳಲ್ಲ.. ಅದಕ್ಕೆ ಕಾರಣವಾಗಿದ್ದು “ರಾಬರ್ಟ್‌” ಚಿತ್ರ. ಹಾಗೆ ನೋಡಿದರೆ “ಪೊಗರು” ಬಂದಾಗ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರಿಗೆ ಒಂದಷ್ಟು ಕೊರೋನಾ ಭಯ ಇದ್ದೇ ಇತ್ತು. ಆದರೆ, ಯಾವಾಗ “ರಾಬರ್ಟ್‌” ಅಬ್ಬರ ಜೋರಾಯಿತೋ, ಅದನ್ನು ಭೀಕರವಾಗಿ ಹೊರದಬ್ಬಿತು. ಬದಲಿಗೆ ರಾಜ್ಯದ ಚಿತ್ರ ಮಂದಿರಗಳಲ್ಲಿ ರಾಬರ್ಟ್‌ ಜಾತ್ರೆ ಶುರುವಾಯಿತು.

ಕೊರೋನಾ ಕೊರೋನಾ ಅಂತಿದ್ದೆವರೆಲ್ಲ, ಆ ಜಾತ್ರೆ ನೋಡಿ ಎಲ್ಲಿದೆ ಕೊರೋನಾ ಅಂತ ನಕ್ಕರು. ಆ ಮಟ್ಟಿಗೆ “ರಾಬರ್ಟ್‌” ಗೆಲುವು ಕಂಡಿದೆ. ದರ್ಶನ್‌ ಬಾಕ್ಸಾಫೀಸ್‌ ಸುಲ್ತಾನ್‌ ಅನ್ನೋದು ಮತ್ತೊಮ್ಮೆ ಸಾಬೀತು ಆಯಿತು. ಗಾಂಧಿ ನಗರದ ಗಲ್ಲಾ ಪೆಟ್ಟಿಗೆ ಚಿಂದಿ ಉಡಾಯಿಸಿತು. ಅದೀಗ ನೂರು ಕೋಟಿ ಕ್ಲಬ್‌ಗೆ ಸೇರುವ ಹಂತದಲ್ಲಿದೆ. ಅಲ್ಲಿಗೆ ತರುಣ್‌ ಸುಧೀರ್‌ ಸ್ಯಾಂಡಲ್‌ವುಡ್‌ನ ಸಕ್ಸಸ್‌ ಫುಲ್‌ ನಿರ್ದೇಶಕ ಮಾತ್ರವಲ್ಲ, 2021ರ ಸ್ಟಾರ್‌ ಡೈರೆಕ್ಟರ್‌ ಕೂಡ ಹೌದು. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲೀಗ ಲಕ್ಕಿ ಡೈರೆಕ್ಟರ್‌ ಅಂದ್ರೆ ನಂದ ಕಿಶೋರ್‌ ಹಾಗೂ ತರುಣ್‌ ಸುಧೀರ್‌ ಸಹೋದರರು. ಅವರ ಸಕ್ಸಸ್‌ ಯಾತ್ರೆ ಹೀಗೆ ಸಾಗಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಇದು ಕನ್ನಡ ಹೋರಾಟಗಾರನ ಭೂಗತ ಲೋಕದ ಕಥೆ – ನೋಡಿ ಹೊರ ಬಂತು ʼಯಾರ ಮಗʼ ಟೀಸರ್‌

ಆ ಕೋಟೆಗೆ ರಾಜನೂ ನಾನೇ, ಕಾವಲು ಗಾರನೂ ನಾನೇ.. ಹೀಗಂತ ಬೆಳ್ಳಿತೆರೆಗೆ ಬರಲು ರೆಡಿಯಾಗಿದೆ ʼ ಯಾರ ಮಗ ʼ ಹೆಸರಿನ ಚಿತ್ರ. ಇದು ಭೂಗತ ಲೋಕದ ಕಥೆ. ಹಾಗೆಯೇ ತಾಯಿ ಸೆಂಟಿಮೆಂಟ್‌ ಮೇಲೂ ನಿರ್ಮಣವಾದ ಚಿತ್ರ. ರಘು ಪಡುಕೋಟೆ ಇದರ ನಾಯಕ ನಟ ಕಮ್‌ ನಿರ್ದೇಶಕ. ಇವರು ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಪುತ್ರ. ಬಸವರಾಜ್‌ ಅವರು ತಮ್ಮ ಪುತ್ರನನ್ನು ಬೆಳ್ಳಿ ತೆರೆಗೆ ಹೀರೋ ಆಗಿ ಪರಿಚಯಿಸಲು ಯಾರ ಮಗ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ ಬೆಳ್ಳಿ ತೆರೆಗೆ ಹೊರಟಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಟೀಸರ್‌ ಹೊರ ಬಂದಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರಮಂದಿರದಲ್ಲಿ ಟೀಸರ್‌ ಲಾಂಚ್‌ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್, ಡಿ.ಎಸ್. ಮ್ಯಾಕ್ಸ್‌ ನ ದಯಾನಂದ್, ಮಾರುತಿರಾವ್ ಮೋರೆ, ವೀರಶೈವ ಯುವ ವೇದಿಕೆಯ ಪ್ರಶಾಂತ್ ಕಲ್ಲೂರ್‌, ಕೆ.ಜಿ.ಹನುಮಂತಯ್ಯ ಆ ದಿನ ಚಿತ್ರದ ಟೀಸರ್‌ ಲಾಂಚ್‌ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು. ಟೀಸರ್‌ ಲಾಂಚ್‌ ಮಾತನಾಡಿದ ಗಣ್ಯರು, ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು. ಚಿತ್ರ ತಂಡದ ಪರವಾಗಿ ಮೊದಲು ಮಾತನಾಡಿದ ನಿರ್ಮಾಪಕ,ʼ ನಾನು ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ, ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೆ, ಈಗ ನನ್ನ ಮಗನಿಗಿರುವ ಸಿನಿಮಾ ಆಸಕ್ತಿ ಕಂಡು ಈಚಿತ್ರ ನಿರ್ಮಾಣ ಮಾಡಿದ್ದೇನೆ. ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲಿದೆ ಅಂತ ಹೇಳಿಕೊಂಡರು.

ಚಿತ್ರಕ್ಕೆ ಸುರಪುರ ತಾಲ್ಲೂಕಿನ ಪಡುಕೋಟೆ, ಬೆಂಗಳೂರಿನ ಶಿವಾಜಿನಗರ, ವೈಟ್‌ಫೀಲ್ಡ್ ಸುತ್ತಮುತ್ತ ಶೇ. 60 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಸಿಕ್ಕಿದೆಯಂತೆ. ಪ್ಲಾನ್ ಪ್ರಕಾರ ಆದರೆ ಇದೇ ಜೂನ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ.” ಈಗಿನ ಕಾಲದ ಹುಡುಗರು ಹೇಗೆಲ್ಲಾ ಹಾಳಾಗ್ತಿದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ, ತಾಯಿ ಸೆಂಟಿಮೆಂಟ್, ಲವ್, ಡ್ರಗ್ ಮಾಫಿಯಾ ಕೂಡ ಚಿತ್ರದಲ್ಲಿದೆ. ಒಬ್ಬ ಮಗನಾದವನು ತನ್ನ ತಾಯಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದು ಅಂತ ನನ್ನ ಪಾತ್ರದ ಮೂಲಕ ನಿರೂಪಿಸಲಾಗುತ್ತಿದೆ. ತಾಯಿ ಕೂಡ ತನ್ನ ಮಗನ ಮೇಲೆ ಎಷ್ಟು ಕಾಳಜಿ ವಹಿಸುತ್ತಾಳೆ ಎಂಬ ಕಂಟೆಂಟ್ ಚಿತ್ರದಲ್ಲಿದೆʼ ಎನ್ನುವುದು ನಿರ್ದೇಶಕ ಕಮ್‌ ನಾಯಕ ನಟ ರಘು ಪಡುಕೋಟೆ ಮಾತು. ಚಿತ್ರದಲ್ಲಿ 5 ಹಾಡುಗಳಿದ್ದು, ಅವಗಳಿಗೆ ಪ್ರವೀಣ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸುಕೃತ ಅಭಿನಯಿಸುತ್ತಿದ್ದು, ಕಾಕ್ರೋಚ್‌ಸುಧೀ, ಬಲ ರಾಜವಾಡಿ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ.

error: Content is protected !!