ಕ್ರಾಂತಿವೀರ ಚಿತ್ರಕ್ಕೆ ರಾಜಸ್ತಾನ ಚಿತ್ರೋತ್ಸವ ಪ್ರಶಸ್ತಿ: ಕನ್ನಡದಲ್ಲಿ ಬರಲು ಸಜ್ಜಾಗಿದೆ ಭಗತ್‌ ಸಿಂಗ್‌ ಚರಿತ್ರೆಯ ಸಿನಿಮಾ

ಕನ್ನಡದ ನಿರ್ದೇಶಕ ಆದತ್‌ ಎಂ.ಪಿ. (ದತ್ತ) ನಿರ್ದೇಶನದ “ಕ್ರಾಂತಿವೀರ” ಚಿತ್ರ ಏಳನೇ ರಾಜಸ್ತಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಚಿತ್ರಕ್ಕೆ ಕೊಡ ಮಾಡುವ ಅತ್ಯುತ್ತಮ ಕಥೆ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.

ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ ನೂರಾರು ಚಿತ್ರಗಳು ಪಾಲ್ಗೊಂಡಿದ್ದವು. ಆದರ ನಡುವೆ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾದ “ಕ್ರಾಂತಿವೀರ” ಅತ್ಯುತ್ತಮ ಕಥೆಗಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

“ಕ್ರಾಂತಿವೀರ” ಚಿತ್ರಕ್ಕೆ ಚಂದ್ರಕಲಾ. ಟಿ.ರಾಠೋಡ್‌, ಮಂಜುನಾಥ್‌ ಹೆಚ್ಚ. ನಾಯಕ್‌ ಮತ್ತು ಆರ್ಜೂರಾಜ್‌ ನಿರ್ಮಾಪಕರು. ಇವರೊಂದಿಗೆ ತ್ರಿವಿಕ್ರಮ, ಪ್ರಶಾಂತ್‌ ಕಲ್ಲೂರು, ಲೇಟ್‌ ಗೌರಿರಮನಾಥ್‌ ಅವರು ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

“ಭಗತ್ ಸಿಂಗ್” ಜೀವನ ಚರಿತ್ರೆ ಕುರಿತಂತೆ ತಯಾರಾಗಿರುವ ಚಿತ್ರವಿದು. “ಕ್ರಾಂತಿವೀರ” ಸ್ವತಂತ್ರಕ್ಕಾಗಿ ಹೋರಾಡಿ ಮಹಾನ್‌ ನಾಯಕ ಭಗತ್‌ ಸಿಂಗ್‌ ಕುರಿತ ಕಥೆ ಹೊಂದಿದೆ. ಈ ಚಿತ್ರದಲ್ಲಿ ಭಗತ್‌ ಸಿಂಗ್‌ ಪಾತ್ರವನ್ನು ಅಜಿತ್‌ ಜಯರಾಜ್‌ ನಿರ್ವಹಿಸಿದ್ದಾರೆ.

ಇನ್ನು, ಬಾಲ್ಯದ ದಿನಗಳಲ್ಲಿನ ಭಗತ್ ಸಿಂಗ್ ಕಥೆಯೂ ಇರುವುದರಿಂದ ಜ್ಯೂನಿಯರ್ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್ ಟಿ ರಾಠೋಡ್ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ರಾಜಸ್ತಾನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಬಾಗಲಕೋಟೆ, ಶಿವಮೊಗ್ಗ, ಹುಬ್ಬಳ್ಳಿ, ಕೆಜಿಎಫ್ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಇತರೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಪ್ರತಾಪ್.ಎಸ್ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಆರ್.‌ಕೆ. ನೃತ್ಯ ನಿರ್ದೇಶನ‌ ಮಾಡಿದ್ದಾರೆ.

Related Posts

error: Content is protected !!