ತನ್ನ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಿಸಲು ಸಜ್ಜಾದ ಹೊಂಬಾಳೆ ಫಿಲಂಸ್

‌ಕೊರೊನಾ ಎರಡನೇ ಅಲೆ ಈಗ ಆತಂಕ ಮೂಡಿಸಿದೆ. ಈಗಾಗಲೇ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಲಸಿಕೆಯೂ ಬಂದಿದೆ. ಒಂದಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರೂ, ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಒಂದಷ್ಟು ಮಂದಿ ಸ್ವತಃ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಕೆಲ ಸಂಸ್ಥೆಗಳು ಕೂಡ ತಮ್ಮ ತಮ್ಮ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸುವ ಕೆಲಸಕ್ಕೆ ಮುಂದಾಗಿವೆ. ಅದೇ ನಿಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿರುವ ಹೊಂಬಾಳೆ ಫಿಲಂಸ್‌ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದಾಗಿ ಕುಟುಂಬದವರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸಲು ಸಜ್ಜಾಗಿದ್ದಾರೆ.
ತಮ್ಮ ಕಂಪೆನಿಯಲ್ಲಿ ದುಡಿಮೆ ಮಾಡುತ್ತಿರುವ ಉದ್ಯೋಗಿಗಳ ಆರೋಗ್ಯ ಮುಖ್ಯ ಎಂದು ಹೇಳಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ಉಚಿತ ಕೊರೊನಾ ಲಸಿಕೆ ಹಾಕಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರೀಗ ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ಹಾಕಿಸಲು ತಯಾರಿ ನಡೆಸಿದ್ದಾರೆ.

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ವಿಜಯ್‌ ಕಿರಗಂದೂರು, “ಕೊರೊನಾ ಮುಕ್ತ ಆಗಲು ಲಸಿಕೆ ಬಹಳ ಮುಖ್ಯ. ನೀವೆಲ್ಲರೂ ಸಹ ಲಸಿಕೆ ಹಾಕಿಸಿಕೊಳ್ಳಿ ಮತ್ತು ಆರೋಗ್ಯವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್‌ ಮೂಲಕ ಈ ಕಾರ್ಯಕ್ಕೆ ಮುಂದಾಗಿರುವ ವಿಜಯ್‌ ಕಿರಗಂದೂರು ಅವರ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಗುತ್ತಿದೆ. ಸದ್ಯ ಈ ಹೊಂಬಾಳೆ ಫಿಲಂಸ್‌ ಸಂಸ್ಥೆ ಎರಡು ಬಿಗ್‌ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಬಿಡುಗಡೆಗೆ ಎದುರು ನೋಡುತ್ತಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಹಾಗೂ “ಕೆಜಿಎಫ್-2” ಚಿತ್ರ ಬಿಡುಗಡೆ ದಿನ ಘೋಷಿಸಿವೆ. ತೆಲುಗಿನ ನಟ ಪ್ರಭಾಸ್ ಅವರ “ಸಲಾರ್” ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ.

Related Posts

error: Content is protected !!