ಲಕ್ಕಿ ಸ್ಟಾರ್‌ ಬ್ರದರ್ಸ್‌ – ಇಂಡಸ್ಟ್ರಿಗೆ ಚೈತನ್ಯ ತುಂಬಿ ಗೆದ್ದು ಬೀಗಿದ ಸಹೋದರರು!

2021 ಕೂಡ ಹೇಗಿರುತ್ತೋ ಗೊತ್ತಿಲ್ಲ. ಮತ್ತೆ ಹೆಚ್ಚುತ್ತಿರುವ ಕೊರೋನಾ ಅಬ್ಬರ ನೋಡಿದರೆ ರಾಜ್ಯದಲ್ಲಿ ಯಾವಾಗ ಲಾಕ್‌ ಡೌನ್‌ ಘೋಷಣೆ ಆಗುತ್ತೋ ಎನ್ನುವ ಆತಂಕ ಮನೆ ಮಾಡಿದೆ. ಬರುವ ದಿನಗಳಲ್ಲಿ ಸಿನಿಮಾ ಚಟುವಟಿಕೆಗಳು ಹೀಗೆಯೇ ಇರುತ್ತವೆ ಅಂತ ಅಂದುಕೊಳ್ಳುವುದಕ್ಕೂ ಕಷ್ಟಕರವಾಗಿದೆ. ಸದ್ಯದ ಮಟ್ಟಿಗೆ ಸಿಕ್ಕ ಸಣ್ಣದೊಂದು ಗ್ಯಾಪ್‌ ನಲ್ಲಿ ದೊಡ್ಡ ದೊಂದು ಗೆಲುವಿನ ಮೂಲಕ ಭರ್ಜರಿ ನಗು ಬೀರಿದ ನಿರ್ದೇಶಕರಂದ್ರೆ ನಂದ್‌ ಕಿಶೋರ್‌ ಹಾಗೂ ತರುಣ್‌ ಸುದೀರ್‌ ಬದ್ರರ್ಸ್.‌ ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಅವರೇ “ಸ್ಟಾರ್‌” ಬ್ರದರ್ಸ್.

‌ಲಾಕ್‌ ಡೌನ್‌ ತೆರೆವಾದ ನಂತರ ಕನ್ನಡದಲ್ಲಿ ಬಂದ ಮೊದಲ ಸ್ಟಾರ್‌ ಸಿನಿಮಾ ಅಂದ್ರೆ ” ಪೊಗರುʼ. ಕೊರೋನಾ ಆತಂಕದ ನಡುವೆಯೂ ಈ ಚಿತ್ರ ತೆರೆಗೆ ಬಂತು. ಅಷ್ಟೋತ್ತಿಗಾಗಲೇ “ಆಕ್ಟ್‌ 1978 ” ಸೇರಿದಂತೆ ಸಾಕಷ್ಟು ಸಿನಿಮಾಗಳು ಬಂದು ಹೋಗಿದ್ದವು. ಆ ಪೈಕಿ “ಆಕ್ಟ್‌ 1978” ಒಂದಷ್ಟು ಸದ್ದು ಮಾಡಿತ್ತಾದರೂ, ಜನ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರದತ್ತ ಮುಖ ಮಾಡಿರಲಿಲ್ಲ. ಅಷ್ಟೋ ಇಷ್ಟೋ ಜನ ಮಾತ್ರ ಚಿತ್ರ ಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ “ಆಕ್ಟ್‌ 1978” ಒಂದಷ್ಟು ಜನಾಕರ್ಷಣೆ ಪಡೆದು ಗೆಲುವಿನ ನಗೆ ಬೀರಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಲಾಕ್‌ ಡೌನ್‌ ನಂತರ ಸ್ಟಾರ್‌ ಸಿನಿಮಾ ಅಂತ ಮೊದಲು ರಿಲೀಸ್‌ ಆಗಿದ್ದು ಪೊಗರು. ʼಪೊಗರುʼ ನಂದ್‌ ಕಿಶೋರ್ ನಿರ್ದೇಶನದ ಚಿತ್ರ. ಧ್ರುವ ಸರ್ಜಾ ಈ ಚಿತ್ರದ ಹೀರೋ. ಹಾಗೆಯೇ ರಶ್ಮಿಕಾ ಮಂದಣ್ಣ ನಾಯಕಿ.

ಚಂದನವನದಲ್ಲಿ ಈ ಮೂವರು ಸಾಕಷ್ಟು ಸುದ್ದಿಯಲ್ಲಿದ್ದವರೇ. “ಪೊಗರುʼ ಮಾಡುವ ಮುನ್ನ ನಿರ್ದೇಶಕ ನಂದ್‌ ಕಿಶೋರ್‌ “ಅಧ್ಯಕ್ಷ”, “ವಿಕ್ಟರಿ”, “ರನ್ನ” ಸೇರಿದಂತೆ ನಾಲ್ಕೈದು ಹಿಟ್‌ ಸಿನಿಮಾ ಕೊಟ್ಟಿದ್ದರು. ಅದರ ದೊಡ್ಡ ಸಕ್ಸಸ್‌ ಅವರ ಬೆನ್ನಿಗಿತ್ತು. ಆ ಮೂಲಕವೇ ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಕಾಂಬಿನೇಷನ್‌ ಮೂಲಕ ಬಿಗ್‌ ಬಜೆಟ್‌ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಈ ಸಲ ಅದ್ದೂರಿ ಸಿನಿಮಾ ನಿರ್ದೇಶನ ಮಾಡಬೇಕೆಂದು ಹೊರಟಿದ್ದ ನಿರ್ದೇಶಕ ನಂದ್‌ ಕಿಶೋರ್‌ ಅವರಿಗೆ ನಿರ್ಮಾಪಕ ಗಂಗಾಧರ್‌ ಕೂಡ ಪ್ರೀತಿಯಿಂದಲೇ ಸಾಥ್‌ ಕೊಟ್ಟರು. ಹೆಚ್ಚು ಕಡಿಮೆ ಮೂರು ವರ್ಷದಲ್ಲಿ ಎಲ್ಲಾ ರೀತಿಯಲ್ಲೂ ಅದ್ದೂರಿತನ ತುಂಬಿಕೊಂಡಿದ್ದ “ಪೊಗರು” 2021ರ ಮೊದಲ ಸ್ಟಾರ್‌ ಸಿನಿಮಾವಾಗಿ ತೆರೆಗೆ ಬಂತು.

ಅನೇಕ ಕಾರಣಕ್ಕೆ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ತೆರೆಗೆ ಬಂದಾಗ ಆ ನಿರೀಕ್ಷೆಯೂ ಹುಸಿಯಾಗಲಿಲ್ಲ. ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡಿತು. ಎಲ್ಲ ಕಡೆ ಭರ್ಜರಿ ಒಪನಿಂಗ್‌ ಪಡೆಯಿತು. ನಿರ್ಮಾಪಕ ಗಂಗಾಧರ್‌ ಗೆಲುವಿನ ನಗೆ ಬೀರಿದರು. ಹಾಗೆಯೇ ನಿರ್ದೇಶಕ ನಂದ್‌ ಕಿಶೋರ್‌, ಮತ್ತೊಂದು ಸಕ್ಸಸ್‌ ಸಿನಿಮಾ ಕೊಟ್ಟ ಖುಷಿಯಲ್ಲಿ ಹೊಸ ಅವಕಾಶಗಳತ್ತ ಮುಖ ಮಾಡಿದರು. ಒಂದಷ್ಟು ವಿವಾದದಲ್ಲಿ ಮುಜುಗರ ಅನುಭವಿಸಿದರು ಎನ್ನುವುದನ್ನು ಬಿಟ್ಟರೆ, “ಪೊಗರು” ಚಿತ್ರ ನಿರ್ದೇಶಕ ನಂದ್‌ ಕಿಶೋರ್‌ಗೆ ಸ್ಟಾರ್‌ ಪಟ್ಟ ಕೊಟಿದ್ದೇನು ಸುಳ್ಳಲ್ಲ.

“ಪೊಗರು” ಮೂಲಕ ನಂದ ಕಿಶೋರ್‌ ಸಕ್ಸಸ್‌ ಕಂಡ ಹಾಗೆಯೇ ಅವರ ಸಹೋದರ ತರುಣ್‌ ಸುಧೀರ್‌ ಅವರೂ ಕೂಡ ಸಕ್ಸಸ್‌ ಸಿನಿಮಾ ಮೂಲಕವೇ ಎಂಟ್ರಿಯಾದವರು. ಅವರ ಚೊಚ್ಚಲ ನಿರ್ದೇಶನದ “ಚೌಕ” ಭರ್ಜರಿ ಯಶಸ್ಸು ಕೊಟ್ಟಿತು. ಅದಾದ ಬಳಿಕ ಅವರು ಆಯ್ಕೆ ಮಾಡಿಕೊಂಡಿದ್ದು, ದರ್ಶನ್‌ ಅವರನ್ನು. ಅವರಿಗಾಗಿ ಅವರು “ರಾಬರ್ಟ್‌” ರೆಡಿಮಾಡಿದರು. 2021ರ ಆರಂಭಿಕ ದಿನಗಳಲ್ಲಿ ಸಂಕಷ್ಟದ ಕಾಲದಲ್ಲೂ ಭರ್ಜರಿ ಸಕ್ಸಸ್‌ ಕಂಡ ನಿರ್ದೇಶಕ ಎನಿಸಿಕೊಂಡಿದ್ದು ಸುಳ್ಳಲ್ಲ.. ಅದಕ್ಕೆ ಕಾರಣವಾಗಿದ್ದು “ರಾಬರ್ಟ್‌” ಚಿತ್ರ. ಹಾಗೆ ನೋಡಿದರೆ “ಪೊಗರು” ಬಂದಾಗ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರಿಗೆ ಒಂದಷ್ಟು ಕೊರೋನಾ ಭಯ ಇದ್ದೇ ಇತ್ತು. ಆದರೆ, ಯಾವಾಗ “ರಾಬರ್ಟ್‌” ಅಬ್ಬರ ಜೋರಾಯಿತೋ, ಅದನ್ನು ಭೀಕರವಾಗಿ ಹೊರದಬ್ಬಿತು. ಬದಲಿಗೆ ರಾಜ್ಯದ ಚಿತ್ರ ಮಂದಿರಗಳಲ್ಲಿ ರಾಬರ್ಟ್‌ ಜಾತ್ರೆ ಶುರುವಾಯಿತು.

ಕೊರೋನಾ ಕೊರೋನಾ ಅಂತಿದ್ದೆವರೆಲ್ಲ, ಆ ಜಾತ್ರೆ ನೋಡಿ ಎಲ್ಲಿದೆ ಕೊರೋನಾ ಅಂತ ನಕ್ಕರು. ಆ ಮಟ್ಟಿಗೆ “ರಾಬರ್ಟ್‌” ಗೆಲುವು ಕಂಡಿದೆ. ದರ್ಶನ್‌ ಬಾಕ್ಸಾಫೀಸ್‌ ಸುಲ್ತಾನ್‌ ಅನ್ನೋದು ಮತ್ತೊಮ್ಮೆ ಸಾಬೀತು ಆಯಿತು. ಗಾಂಧಿ ನಗರದ ಗಲ್ಲಾ ಪೆಟ್ಟಿಗೆ ಚಿಂದಿ ಉಡಾಯಿಸಿತು. ಅದೀಗ ನೂರು ಕೋಟಿ ಕ್ಲಬ್‌ಗೆ ಸೇರುವ ಹಂತದಲ್ಲಿದೆ. ಅಲ್ಲಿಗೆ ತರುಣ್‌ ಸುಧೀರ್‌ ಸ್ಯಾಂಡಲ್‌ವುಡ್‌ನ ಸಕ್ಸಸ್‌ ಫುಲ್‌ ನಿರ್ದೇಶಕ ಮಾತ್ರವಲ್ಲ, 2021ರ ಸ್ಟಾರ್‌ ಡೈರೆಕ್ಟರ್‌ ಕೂಡ ಹೌದು. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲೀಗ ಲಕ್ಕಿ ಡೈರೆಕ್ಟರ್‌ ಅಂದ್ರೆ ನಂದ ಕಿಶೋರ್‌ ಹಾಗೂ ತರುಣ್‌ ಸುಧೀರ್‌ ಸಹೋದರರು. ಅವರ ಸಕ್ಸಸ್‌ ಯಾತ್ರೆ ಹೀಗೆ ಸಾಗಲಿ ಅನ್ನೋದು “ಸಿನಿಲಹರಿ” ಆಶಯ.

Related Posts

error: Content is protected !!