ಚಂದನವನದಲ್ಲಿ ಏರಿಯಾ ಹುಡುಗರ ಕಥೆಗಳು ಹೊಸದೇನಲ್ಲ. ಈಗಾಗಲೇ ನಮ್ ಏರಿಯಾದಲ್ಲೊಂದು ದಿನ ಅಂತ ತೆರೆ ಮೇಲೆ ಬಂದು ಹೋದವರದ್ದು ಇಲ್ಲಿ ದೊಡ್ಡ ಪಟ್ಟಿ ಇದೆ. ಆದರೂ ಈಗ ಮತ್ತೊಂದು ಏರಿಯಾ ಹುಡುಗರ ಕಥೆ ಬರುತ್ತಿದೆ. ಈ ಕಥೆ ಹೇಳುತ್ತಿರುವವರು ಚಿತ್ರ ಸಾಹಿತಿ ಅಪ್ಪು ಮೋಹನ್. ಅಂದ ಹಾಗೆ ಅಪ್ಪು ಮೋಹನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಸಮಾಚಾರ ಇದು. ಆ ಚಿತ್ರದ ಹೆಸರು “ಏರಿಯಾ ಹುಡುಗರುʼ.
ನಾನೊಂಥರಾ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ಡಾ. ತಾರಖ್ ಈ ಚಿತ್ರದ ನಾಯಕ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಗಾಂಧಿಬಜಾರ್‌ನ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರವ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ನಟ ಧೃವ ಸರ್ಜಾ, ಮುಹೂರ್ತ ಸಮಾರಂಭಕ್ಕೆ ಆಗಮಿಸಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಏರಿಯಾ ಹುಡುಗರ ಕಥೆ. ಆ ಏರಿಯಾದಲ್ಲಿನ ನಾಲ್ಕು ಜನ ಸ್ನೇಹಿತರ ಜೀವನದಲ್ಲಿ ನಡೆಯುವ ಹಲವಾರು ರೋಚಕ ತಿರುವುಗಳ ಮೇಲೆ ಈ ಕಥೆ ಸಾಗಲಿದೆಯಂತೆ. ಚಿತ್ರರಂಗಕ್ಕೆ ಅಪ್ಪು ಮೋಹನ್ ಹೊಸಬರೇನಲ್ಲ. ಈಗಾಗಲೇ ಅನೇಕ ಹಿಟ್ ಹಾಡುಗಳನ್ನು ಕೊಟ್ಟವರು. ಇಷ್ಟಾಗಿಯೂ ಇಲ್ಲಿ ತನಕ ತೆರೆ ಮರೆಯಲ್ಲೆ ಇದ್ದವರು. ಫಸ್ಟ್ ಟೈಮ್ ತೆರೆಯ ಮುನ್ನೆಲೆಗೆ ಬಂದಿದ್ದಾರೆ. ಚಿತ್ರಕ್ಕೆ ನಾಗೇಶ್ ಉಚ್ಚಂಗಿ ಛಾಯಾಗ್ರಹಣ ಇದೆ. ಹಾಗೆಯೇ ಅವರೇ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರಂತೆ. ಹಾಗೆಯೇ ಪರಶಿವು ಧಂಗೂರು ಕೂಡ ಈ ಚಿತ್ರದ ಸಹಾಯಕ ನಿರ್ದೇಶಕರು. ಇನ್ನು ಸುಮಂತ್ ಲವ್‌ಗುರು ಹಾಗೂ ನಾಗರಾಜ್‌ಗುಪ್ತ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಕಲ್ಕಿ ಅಭಿಷೇಕ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ವಿಭಿನ್ನ ಬಗೆಯ ನಾಲ್ಕು ಹಾಡುಗಳಿಗೆ ಹೊಸತರದ ಸಂಗೀತ ನೀಡುವ ತವಕದಲ್ಲಿದ್ದಾರಂತೆ. ಸಂಭಾಷಣೆ ಹಾಗೂ ಸಾಹಿತ್ಯವನ್ನು ನಿರ್ದೇಶಕ ಅಪ್ಪು ಮೋಹನ್ ಅವರೇ ನಿಭಾಯಿಸುತ್ತಿದ್ದಾರೆ. ಏಪ್ರಿಲ್ ಮೊದಲವಾರದಿಂದ ಚಿತ್ರೀಕರಣ ಶುರುವಾಗುತ್ತಿದೆ. ಬೆಂಗಳೂರು, ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.